ಚೆನ್ನಯ್ಯನ ಮನೆಯ ದಾಸನ ಮಗನು,
ಕಕ್ಕಯ್ಯನ ಮನೆಯ ದಾಸನ ಮಗಳು,
ಇವರಿಬ್ಬರು ಹೊಲದಲಿ ಬೆರಣಿಗೆ ಹೋಗಿ ಸಂಗವ ಮಾಡಿದರು.
ಇವರಿಬ್ಬರಿಗೆ ಹುಟ್ಟಿದ ಮಗ ನಾನು; ಕೂಡಲಸಂಗಮದೇವ ಸಾಕ್ಷಿಯಾಗಿ.
ಬಸವಣ್ಣನವರ ಈ ವಚನದ ಒಂದೆರಡು ಪದಗಳಿಗೆ ಬೆಚ್ಚಿ, ಅನೇಕರು ಗೂಡಾರ್ಥ ಹುಡುಕಿ ಇದರ ತೇಜೋವಧೆ ಮಾಡುತ್ತಾರೆ. ಸಮ ಸಮಾಜ ಕಟ್ಟುವುದು ಇದರ ನಿಜವಾದ ಉದ್ದೇಶ.
ಶರಣರ ಕಾಲದಲ್ಲಿ ಜಾತೀಯತೆ ಬೃಹತ್ತಾಗಿ ಬೆಳೆದಿತ್ತು. ಮೇಲುವರ್ಗದವರು ತಮ್ಮದು ಋಷಿಮೂಲದ ಪವಿತ್ರ ರಕ್ತವೆಂದು ತೋರಿಸಿಕೊಳ್ಳಲು ಅನೇಕ ಗೋತ್ರಗಳನ್ನು ಸೃಷ್ಟಿಸಿದ್ದರು.
ಹುಟ್ಟಿನಿಂದ ಬರುವ ಜಾತಿ ಪ್ರತಿಷ್ಠೆಯನ್ನು ಈ ವಚನ ತಿರಸ್ಕರಿಸುತ್ತದೆ. ಇಲ್ಲಿ ಕೂಡಿದವರು ಶೂದ್ರರ ದಾಸರ ಮಕ್ಕಳು ಎನ್ನುತ್ತಾ ಹುಟ್ಟಿನ ಅಹಂಭಾವವನ್ನು ನಿರ್ದಾಕ್ಷಿಣ್ಯವಾಗಿ ಕೆಳಗೆ ತುಳಿಯುತ್ತದೆ.
ಹೋಗಲಿ, ಆ ದಾಸರ ಮಕ್ಕಳು ವಿಧಿಪೂರ್ವಕವಾಗಿ ಮದುವೆಯಾದವರೂ ಅಲ್ಲ. ಬೆರಣಿ ತಟ್ಟಲು ಹೋಗಿ ಅಗೌರವವಾಗಿ ಬಯಲಲ್ಲಿ ಕೂಡಿದವರು.
‘ಅವರಿಗೆ ಹುಟ್ಟಿದ ಮಗ ನಾನು’ ಎಂದು ಘೋಷಿಸುತ್ತ ಬಸವಣ್ಣನವರು ಹುಟ್ಟಿನ ಮದವನ್ನು ಸುಡಲು ಕಿಡಿ ಹಚ್ಚುತ್ತಾರೆ.
ಈ ಸಂಗಕ್ಕೆ ಸಂಗಮದೇವನ ಸಾಕ್ಷಿ ಕರೆದು ತಮ್ಮ ಧೋರಣೆಗೆ ದೈವ ಬೆಂಬಲವಿದೆಯೆಂದು ಸಾರುತ್ತಾರೆ.
(‘ಇವರಿಬ್ಬರಿಗೆ ಹುಟ್ಟಿದ ಮಗ ನಾನು’ ಲೇಖನದಿಂದ ಆಯ್ದ ಮತ್ತು ಸಂಕ್ಷಿಪ್ತಗೊಳಿಸಿರುವ ಭಾಗ – ಮಾರ್ಗ ೩)