[ನಿನ್ನೆ ಬರೆದ ‘ಬೆಳಗಾವಿ ಜಿಲ್ಲೆಯಲ್ಲಿ ಚನ್ನಬಸವಣ್ಣನವರ ಹೆಜ್ಜೆ ಗುರುತುಗಳು’ ಎಂಬ ಬರಹಕ್ಕೆ ಬಹಳ ಜನ ವಿದ್ವಾಂಸರು ಫೋನ್ ಮಾಡಿ ಕೆಲವು ಅಂಶಗಳತ್ತ ನನ್ನ ಗಮನ ಸೆಳೆದರು. ಹಿರಿಯ ವಿದ್ವಾಂಸರಾದ ಡಾ. ಎ.ಬಿ. ಘಾಟಗೆ ಅವರು ರಾಯಬಾಗದಲ್ಲಿಯೂ ಒಂದು ಬಂಕನಾಥನ ದೇವಸ್ಥಾನವಿದೆ ಎಂಬುದರತ್ತ ನನ್ನ ಗಮನ ಸೆಳೆದರು. ಖಿದ್ರಾಪುರದ ಕೋಪನಾಥ, ಬಾಗಿಯ (ರಾಯಬಾಗ) ಬಂಕನಾಥ, ಸಂಕೇಶ್ವರದ ಸಂಕನಾಥ (ಶಂಕರಲಿಂಗ) ಹೀಗೆ ಈ ಮೂರು ದೇವಸ್ಥಾನಗಳ ಬಗ್ಗೆ ಅರವತ್ತು ವರ್ಷಗಳ ಹಿಂದೆ ಜನ ಹೇಳುತ್ತಿದ್ದರು. ಬಂಕನಾಥ ಎಂಬ ವಚನಕಾರನಾಗಿರುವುದು ವಿಶೇಷ. ಲಿಂಗಾಯತ ಧರ್ಮಕ್ಕೂ ನಾಥ ಸಂಪ್ರದಾಯಕ್ಕೂ ನಿಕಟವಾದ ಸಂಬಂಧವಿರುವುದನ್ನು ಇವು ತಿಳಿಸುತ್ತಿರಬಹುದು ಎಂಬ ಸಂಗತಿಯನ್ನು ತಿಳಿಸಿದರು.
ಹಿರಿಯ ವಿದ್ವಾಂಸರಾದ ಡಾ. ಸಿ.ಕೆ.ನಾವಲಗಿ ಅವರು ಚಿಕ್ಕನಂದಿಹಳ್ಳಿಯಲ್ಲಿರುವುದು ಚನ್ನಬಸವಣ್ಣನವರ ದೇವಸ್ಥಾನವೇ, ಬಸರಕೂಡದಲ್ಲಿರುವುದು ಕೂಗು ಬಸವನ ದೇವಸ್ಥಾನವಲ್ಲ ಎಂದು ತಿಳಿಸಿದರು. ಶ್ರೀ ಮೃತ್ಯುಂಜಯ ಸ್ವಾಮಿಗಳು ಗಂದಿಗವಾಡ ಅವರು ಇನ್ನೂ ಕೆಲವು ಊರುಗಳಲ್ಲಿ ಶರಣರ ಹೆಜ್ಜೆಗುರುತುಗಳನ್ನು ಇಂದಿಗೂ ಜನರು ಗುರುತಿಸುತ್ತಾರೆ ಎಂದರು. ನಂದಗಡ ಸಮೀಪದ ಗುಡ್ಡದಲ್ಲಿ ಮಾಚಿಗಡ ಇದೆ. ಇಲ್ಲಿ ಮಡಿವಾಳ ಮಾಚಿದೇವರು ಬಂದು ಹೋಗಿದ್ದಾರೆಂಬ ಪ್ರತೀತಿ ಇದೆ ಎಂದು ತಿಳಿಸಿದರು. ಮುರಕಿಬಾವಿಯಲ್ಲಿರುವುದು ಬಸವಣ್ಣನವರ ಧರ್ಮಪತ್ನಿ ನೀಲಮ್ಮನವರ ದೇವಸ್ಥಾನವಲ್ಲ; ೧೮ನೇ ಶತಮಾನದಲ್ಲಿ ಆಗಿ ಹೋದ ಶರಣ ಸಾಧ್ವಿಶಿರೋಮಣಿಯ ಗುಡಿ ಅದು.
ಏಕೆಂದರೆ ಕಲ್ಯಾಣ ಕ್ರಾಂತಿ ಸಂದರ್ಭದಲ್ಲಿ ಬಸವಣ್ಣನವರೇ ಕರೆದಾಗ ಬರಲಾರದ ನೀಲಮ್ಮತಾಯಿ ಇಲ್ಲಿಗೆ ಹೇಗೆ ಬರಲು ಸಾಧ್ಯ? ಎಂಬ ತಾರ್ಕಿಕ ಪ್ರಶ್ನೆ ಮೂಡುತ್ತದೆ. ಹಾಗೆಯೇ ಇಟಗಿಯಲ್ಲಿರುವ ಕಲ್ಯಾಣಮ್ಮನ ದೇವಸ್ಥಾನವು ಸಂದೇಹಕ್ಕೆ ಎಡೆ ಮಾಡಿಕೊಡುತ್ತದೆ. ಬಿಜ್ಜಳನ ಸೈನಿಕರ ಆನೆಯ ತುಳಿತಕ್ಕೆ ಸಿಕ್ಕು ಲಿಂಗೈಕ್ಯರಾದ ಕಲ್ಯಾಣಮ್ಮ ಇಲ್ಲಿಗೆ ಹೇಗೆ ಬಂದಳು? ಎಂಬ ಪ್ರಶ್ನೆ ಕಾಡುತ್ತದೆ. ಅಥವಾ ಕಲ್ಯಾಣಮ್ಮ ಎನ್ನುವ ಇನ್ನೊಬ್ಬ ಶರಣೆ ಇದ್ದಿರಬಹುದೇ? ಎಂಬುದು ಒಂದು ಸಂದೇಹ. ಹಿರಿಯ ವಿದ್ವಾಂಸರಾದ ರಂಜಾನ್ ದರ್ಗಾ ಅವರು ಬಸವಣ್ಣನವರು ಕಲ್ಯಾಣದಿಂದ ಮೊದಲೇ ಪಲಾಯನ ಮಾಡಲಿಲ್ಲ, ಅವರನ್ನು ಗಡಿಪಾರು ಮಾಡಿದ್ದರು ಎಂಬುದರತ್ತ ನನ್ನ ಗಮನ ಸೆಳೆದಿದ್ದಾರೆ. ಶ್ರೀ ಆರ್. ಎಸ್. ಚಾಪಗಾವಿ ಅವರು ಫೋನ್ ಮಾಡಿ, ಬಸವನ ಕುಡಚಿಯಲ್ಲಿ ಚನ್ನಬಸವಣ್ಣನವರು ಬಂದ ದಾಖಲೆಗಳಿವೆ ಎಂದು ತಿಳಿಸಿದರು. ಬಿಜ್ಜಳನ ಸೈನಿಕರು ಚನ್ನಬಸವಣ್ಣನವರನ್ನು ಹುಡುಕುವ ಸಂದರ್ಭದಲ್ಲಿ ಅವರನ್ನು ಕುಡಚಿಯ ಮಹಡಿಯೊಂದರಲ್ಲಿ ಜನರೆಲ್ಲ ಕೂಡಿ ರಕ್ಷಿಸಿದರು ಎಂದು ಜನರ ಅಭಿಪ್ರಾಯ ಇರುವುದಾಗಿ ತಿಳಿಸಿದರು. ಈ ಎಲ್ಲ ಹಿರಿಯರು ನನ್ನ ಜ್ಞಾನದ ಕ್ಷಿತಿಜವನ್ನು ವಿಸ್ತರಿಸಿದ್ದಾರೆ. ಅವರಿಗೆ ಅನಂತ ಶರಣುಗಳು]
ಮಂಡೆ ಮಾಸಿದಡೆ ಮಹಾಮಜ್ಜನವ ಮಾಡುವುದು;
ವಸ್ತ್ರ ಮಾಸಿದಡೆ ಮಡಿವಾಳರಿಗಿಕ್ಕುವುದು;
ಮನದ ಮೈಲಿಗೆಯ ತೊಳೆಯಬೇಕಾದಡೆ
ಕೂಡಲಚೆನ್ನಸಂಗಯ್ಯನ ಶರಣರ
ಅನುಭಾವವ ಮಾಡುವುದು.
ಇದೊಂದು ಚನ್ನಬಸವಣ್ಣನವರ ಲೋಕಪ್ರಸಿದ್ಧ ವಚನ. ಈ ವಚನಕ್ಕೆ ನೂರಾರು ಜನ ವ್ಯಾಖ್ಯಾನ ಬರೆದಿದ್ದಾರೆ. ಇಷ್ಟಾಗಿಯೂ ಈ ವಚನಕ್ಕೆ ವ್ಯಾಖ್ಯಾನದ ಅವಶ್ಯಕತೆಯೇ ಇಲ್ಲ. ಸಾಮಾನ್ಯ ತಿಳುವಳಿಕೆಯಿದ್ದವರಿಗೂ ಈ ವಚನದ ಭಾವ ಅರ್ಥವಾಗುತ್ತದೆ. ಹೀಗೆ ಅನುಭಾವದ ನೆಲೆ ಕಲೆಗಳನ್ನು ಕುರಿತು ಚನ್ನಬಸವಣ್ಣನವರು ತಿಳಿಸುವ ಮೂಲಕ ಭಕ್ತ ಗಣವೆಲ್ಲ ಅನುಭಾವಮಾರ್ಗದಲ್ಲಿ ಮುನ್ನಡೆದು ಲಿಂಗಾಂಗ ಸಾಮರಸ್ಯ ಸುಖವನ್ನು ಅನುಭವಿಸುವಂತಾಗಲಿ ಎಂದು ತಮ್ಮ ವಚನಗಳಲ್ಲಿ ಪ್ರತಿಪಾದಿಸಿದ್ದಾರೆ.
ಕ್ರಿ.ಪೂ.ಎರಡನೆ ಶತಮಾನದಲ್ಲಿದ್ದ ಈಶ್ವರ ಕೃಷ್ಣ ಎಂಬ ದಾರ್ಶನಿಕನು “ಸಾಂಖ್ಯಕಾರಿಕೆ” ಎಂಬ ಅಮೂಲ್ಯ ಕೃತಿಯನ್ನು ರಚಿಸಿದ್ದಾನೆ. ಆ ಕೃತಿಯಲ್ಲಿ ಆತ ಮನುಷ್ಯನಿಗೆ ದುಃಖ ಏಕೆ ಬರುತ್ತದೆ, ದುಃಖದಲ್ಲಿ ಮನುಷ್ಯ ತನ್ನನ್ನು ತಾನು ಮರೆತು ತತ್ವಶಾಸ್ತ್ರೀಯವಾಗಿ ಆಲೋಚನೆ ಮಾಡಲು ಅಂತರ್ಮುಖನಾಗುತ್ತಾನೆ ಎಂದು ಹೇಳುತ್ತಾನೆ. ಭಾರತೀಯ ಎಲ್ಲ ದರ್ಶನಗಳು ಇತನ ಮಾತನ್ನು ಒಪ್ಪಿಕೊಂಡಿವೆ. ದುಃಖವಿಲ್ಲದ ಯಾವ ಪ್ರಾಣಿಯೂ ಈ ಸಚರಾಚರದಲ್ಲಿ ಇಲ್ಲ. ದುಃಖಕ್ಕೆ ಅನೇಕ ಕಾರಣಗಳಿದ್ದರೂ ಆಶೆಯೇ ಮುಖ್ಯ ಕಾರಣವೆಂದು ಬುದ್ಧ ಮೊದಲಾದ ದಾರ್ಶನಿಕರು ಹೇಳಿದ್ದಾರೆ. ಈ ದುಃಖಗಳನ್ನು ಆಧಿಭೌತಿಕ, ಆಧಿದೈವಿಕ ಮತ್ತು ಆಧ್ಯಾತ್ಮಿಕ ತಾಪಗಳೆಂದು ಭಾರತೀಯರು ಪರಿಭಾವಿಸಿದ್ದಾರೆ.
ದುಃಖ ಬಂದಾಗ ಅವುಗಳನ್ನು ನಿವಾರಿಸಿಕೊಳ್ಳಲು ಉಪದೇಶ ಮಾಡುವವನೇ ನಿಜವಾದ ಅನುಭಾವಿಯಾಗಿದ್ದಾನೆ. ಅನುಭಾವಿಯಾದವನು ದುಃಖದ ಮೂಲವನ್ನು ಕಂಡು, ಬುಡಸಮೇತ ಆಮೂಲಾಗ್ರವಾಗಿ ನಾಶಮಾಡಲು ಪ್ರಯತ್ನಿಸುತ್ತಾನೆ. ಭಾರತೀಯ ದರ್ಶನಕ್ಕೆ ದುಃಖವೇ ಮೂಲವೆಂದು ಪಾಶ್ಚಿಮಾತ್ಯರು ಟೀಕಿಸುತ್ತಾರೆ. ದುಃಖದ ಪರಿಣಾಮವನ್ನು ಮಾತ್ರ ಭಾರತೀಯ ಆಲೋಚಿಸುತ್ತಾರೆ ಎಂದು ಅವರು ಭಾವಿಸಿದ್ದಾರೆ. ಆದರೆ ಚನ್ನಬಸವಣ್ಣನವರಂತಹ ಅಪರೂಪದ ಅನುಭಾವಿಗಳು ಈ ದುಃಖದಿಂದ ಬಿಡುಗಡೆಯಾಗುವ ಮಾರ್ಗವನ್ನು ತಮ್ಮ ಅನುಭಾವದ ವಚನಗಳಲ್ಲಿ ತೋರಿಸಿಕೊಟ್ಟಿದ್ದಾರೆ ಎಂಬುದನ್ನು ಮರೆಯಲಾಗದು.
ಅನುಭಾವ ಮತ್ತು ಅನುಭಾವಿ ಎಂದರೆ ಶಿವಯೋಗ ಮತ್ತು ಶಿವಯೋಗಿ. ಈ ಎರಡು ವ್ಯಕ್ತಿ-ಶಕ್ತಿಗಳ ವಾಙ್ಮನೋತೀತ ವರ್ಣನೆಯನ್ನು ಹೀಗೆ ವಿವರಿಸುತ್ತಾರೆ- ‘ಅನುಭಾವ ಮತ್ತು ಅನುಭಾವಿ ಎಂದರೆ ಭವಗಿರಿಗೆ ವಜ್ರಸಮ, ಶಿವಸುಖವಿದು, ಅಜ್ಞಾನತಿಮಿರಾರ್ಕ, ಮಹಮೋಕ್ಷಮಣಿಯು, ಜೀವಪರಮರ ಕೂಟ, ತ್ರೈಮಲಕೆ ದೂರ, ಭಕ್ತಜನ ಕಲ್ಪದ್ರುಮ, ಜ್ಞಾನದರ್ಪಣ, ಅಷ್ಟಯೋಗಕೆ ಮಿಗಿಲು, ದುಷ್ಟನಿಗ್ರಹ, ಸೃಷ್ಟಿಪ್ರತಿಪಾಲಕ, ಕರುಣಸಮುದ್ರ ಇಂಥ ಅನುಭಾವ ಮತ್ತು ಅನುಭಾವಿಯನ್ನು ಹರಿಬ್ರಹ್ಮರರಿಯರು, ವೇದಾಢ್ಯರಿಗರಿದು, ಮೋಕ್ಷಗುಡಿಕಳಶವು, ಮಾಯಾಂಗನೆಗೆ ಮದ್ದುವಿದು. ಮುನಿಗಳಿಗಸಾಧ್ಯವು, ಫಲಪದಕೆ ಮಿಗಿಲು, ಕುಲಛಲಕೆ ದೂರ, ಮೂಲಮಂತ್ರಾತ್ಮಕವು, ತ್ರೈಲಿಂಗರೂಪ, ಏಕಮೇವಾದ್ವಿತೀಯ, ಕರ್ಮಸಂಹರಣ ಇಂಥ ಅನುಭಾವಿಗಳು ಆಡಿದ ಲೀಲೆಯೆ ಶಿವಲೀಲೆ, ನುಡಿಯೆ ಆಗಮವು, ಸ್ಥಲವೆ ಸುಕ್ಷೇತ್ರವು’.
ಅನುಭಾವ ಮತ್ತು ಅನುಭಾವಿಯ ನಡೆ-ನುಡಿಗಳನ್ನು ಕುರಿತು ನಿರಾಲಂಬ ವಚನ ಎಂಬ ಸುದೀರ್ಘ ವಾಚ್ಯದಲ್ಲಿ ಹೀಗೆ ವಿವರಿಸಲಾಗಿದೆ-
ಲೌಕಿಕಾಚಾರಗಳನ್ನು ಮೀರಿ ಸ್ವತಂತ್ರಶೀಲನಾಗಿ ಆದರಿಸುವ ಪರಮ ಯೋಗೀಶ್ವರನು ಮರ್ತ್ಯಲೋಕದೊಳಗೆ ವರ್ತಿಸುವ ಅನುಭಾವಿಯಾಗಿದ್ದಾನೆ. ಗುರು ಕೊಟ್ಟ ಇಷ್ಟಲಿಂಗವ ಪೂಜಿಸಿ ಜಪತಪಗಳ ಮಾಡಿ ಭಕ್ತಿ ಜ್ಞಾನ ವೈರಾಗ್ಯದಿಂದ ತೀರ್ಥಪ್ರಸಾದಗಳೆಂಬ ವ್ಯವಹಾರವ ಕೊಟ್ಟು ಕೊಂಡು ಲಿಂಗಪೂಜಾಫಲ ಕೈಸಾರಿ ಮಹಾಜ್ಞಾನವೆಂಬ ಸವೆಯದ ದ್ರವ್ಯವ ಗಳಿಸಿಕೊಳ್ಳಬೇಕು. ನಂತರ ಗುರುಭಕ್ತಿಯ ಮಾಡಿ ತನ್ನೊಳಗೆ ಗುರುವಡಗಿಸಿಕೊಂಡು ತಾನೇ ಪರಶಿವನಾಗಿ ಸಕಲ ಅನುಭಾವದ ಜಿಜ್ಞಾಸುಗಳಿಗೆ ಭೋಗ-ಮೋಕ್ಷಪ್ರದ ದಾರಿ ತೋರಿಸುವನಾಗುತ್ತಾನೆ. ಹಿಂದಣ ಜನ್ಮದಲ್ಲಿ ಕಷ್ಟಪಟ್ಟು ಲಕ್ಷಾಂತರ ದ್ರವ್ಯ ಸಕಲಭೋಗಗಳನ್ನು ಗಳಿಸಿಕೊಂಡು ಕುಳಿತುಣುತಲಿ ಮುಂದೆ ಮತ್ತೆ ಗುರುಲಿಂಗ ಜಂಗಮಕ್ಕೆ ಸತ್ಕರಿಸಿ ಪುಣ್ಯಗಳೆಂಬ ಬೀಜವ ಹಿಡಿದುಕೊಳ್ಳುತ್ತ ಸುಖದಲ್ಲಿರುವ ಪುಣ್ಯಾತ್ಮನು ಚಳಿ ಮಳೆ ಬಿಸಿಲು ಕಲ್ಲು ಮುಳ್ಳಿನಲ್ಲಿ ಮತ್ತೆ ಕಷ್ಟಪಡಲು ಸಾಧ್ಯವಿಲ್ಲ. ಯಾಕೆಂದರೆ ಇದು ಲಿಂಗ, ಇದು ಅಂಗವೆಂಬ ಭೇದವಿಲ್ಲ. ತಾನೇ ಲಿಂಗವಾದ ಕಾರಣ ತಮ್ಮಂತೆ ಲೋಕದವರು ಕ್ರಿಯೆಯಿಂದ ಅರುವಿಗೆ ತರಲಾಗದು. ತಮಗೆ ದೋಷವು. ಆತನಿಗೆ ಹಿರಿದೂ ಒಂದೇ ಕಿರಿದೂ ಒಂದೇ; ಹೆಣ್ಣೂ ಒಂದೇ ಗಂಡೂ ಒಂದೇ; ತಿಪ್ಪೆ ಉಪ್ಪರಿಗೆ ಸಮಾನ.
ಲೋಕದವರ ಭಕ್ತಿಗೋಸ್ಕರ ಸಕಲ ಭೋಗವ ಕೈಕೊಳ್ಳುವನು ನಿಜವಾದ ಅನುಭಾವಿ. ಇಂಥ ಅನುಭಾವಿಯ ಅನುಭಾವದ ನಡೆಯೇ ಕ್ಷೇತ್ರ, ಪಾವನ; ನುಡಿಯೇ ಆಗಮ, ಆತನ ದರ್ಶನದಿಂದ ಸಕಲ ಪಾಪವಿಮೋಚನವು. ಆತನೇ ಲೋಕಪಾವನ ಮೂರ್ತಿಯು. ಆತನು ಲೋಕೋಪಕಾರವಾಗಿ ಬಂದನಲ್ಲದೆ ಮತ್ತೊಂದಕ್ಕೆ ಬಂದವನಲ್ಲ. ಆತನ ಮಹಿಮೆ ಕಂಡವರಿಗೆ ತಿಳಿಯದು. ಅನುಭಾವಿಯಾದವನಿಗೆ ಬಡವರು ಒಂದೆ, ಬಲ್ಲಿದವರು ಒಂದೆ; ನಮಸ್ಕಾರ ಮಾಡಿದವರು ಒಂದೆ, ತಿರಸ್ಕಾರ ಮಾಡಿದವರು ಒಂದೆ. ಭಕ್ತಿಯ ಮಾಡಿದವರು ಒಂದೆ, ಮಾಡದವರು ಒಂದೆ. ಹೆಚ್ಚುಕಡಮೆಯನರಿಯನು. ಲೋಕದವರು ತಮ್ಮ ಗುಣವನಲ್ಲಿ ಬೆರಸಲು ಸಾಧ್ಯವಿಲ್ಲ. ಅನುಭಾವ ಎಂಬುದು ಶಿಶು ಕಂಡ ಕನಸಿನಂತೆ, ಮೂಕ ಸಕ್ಕರೆಯನ್ನು ತಿಂದಂತೆ ವರ್ಣಿಸಲು ಸಾಧ್ಯವಿಲ್ಲ. ಅನುಭಾವದ ನೆಲೆಯನ್ನು ವೇದಗಳರಿಯವು, ಪುರಾಣೀಕರರಿಯರು, ಶಾಸ್ತ್ರಗಳರಿಯರು; ಹೀಗೆ ಅಗಮ್ಯ, ಆಗೋಚರವಾಗಿದೆ ಅನುಭಾವ.
ಅನುಭಾವದ ಅಂತಿಮ ಅಭೀಪ್ಸೆ ಮೋಕ್ಷವನ್ನು ಸಂಪಾದಿಸುವುದು. ಲಿಂಗಾಯತರು “ಮೋಕ್ಷ” ಎಂಬ ಪದಕ್ಕೆ ಪರ್ಯಾಯವಾಗಿ “ಲಿಂಗಾಂಗ ಸಾಮರಸ್ಯ” “ಅಂಗ-ಲಿಂಗ-ಸಂಗ”, “ಬಯಲಾಗುವುದು”, “ಅದ್ವೈತ-ಸ್ಥಿತಿ”, “ಲಿಂಗೈಕ್ಯ”, “ಮುಕ್ತಿ”, “ಶಿವಸಾಯುಜ್ಯ”, “ಕೈವಲ್ಯ”, “ನಿರ್ವಾಣ” ಮುಂತಾದ ಪದಗಳನ್ನು ಬಳಸುತ್ತಾರೆ. ಭಾರತೀಯ ಪರಂಪರೆಯಲ್ಲಿ ಚತುರ್ವಿಧ ಪುರುಷಾರ್ಥಗಳನ್ನು ಹೇಳುತ್ತಾರೆ. ಚತುರ್ವಿಧ ಪುರುಷಾರ್ಥಗಳಲ್ಲಿ ಕೊನೆಯದು ಮೋಕ್ಷ. ವೈದಿಕ ಮೂಲದ ಮೋಕ್ಷ ಪರಿಕಲ್ಪನೆಗೂ ಲಿಂಗಾಯತರ ಮೋಕ್ಷ ಕಲ್ಪನೆಗೂ ತುಂಬ ವ್ಯತ್ಯಾಸವಿದೆ. ಹಾಗೆಯೇ ಬೌದ್ಧರು ಬಳಿಸುವ ನಿರ್ವಾಣ ಪದಕ್ಕೂ, ಶರಣರು ಬಳಸುವ ನಿರ್ವಾಣ ಪದಕ್ಕೂ ತುಂಬ ವ್ಯತ್ಯಾಸವಿದೆ. ಸಾಲೋಕ್ಯ, ಸಾಮೀಪ್ಯ, ಸಾರೂಪ್ಯ, ಸಾಯುಜ್ಯ ಎಂಬ ನಾಲ್ಕು ಪರಿಕಲ್ಪನೆಗಳ ಮೂಲಕ ಮುಕ್ತಿಯ ಹಂತವನ್ನು ವೈದಿಕ ಸಿದ್ಧಾಂತಗಳು ಪ್ರತಿಪಾದಿಸುತ್ತಾರೆ. ಆದರೆ ಲಿಂಗಾಯತರ ಮೋಕ್ಷವೂ ‘ಲಿಂಗಾದ್ವೈತ’ ಪರಿಕಲ್ಪನೆಯಾಗಿದೆ. ಶಿವನಲ್ಲಿ ಬೆರೆತು ಒಂದಾಗುವುದೇ ಆಗಿದೆ. ಹಾಲಿನಲ್ಲಿ ಸಕ್ಕರೆ ಬೆರೆತಂತೆ, ಪರಮಾತ್ಮನಲ್ಲಿ ಒಂದಾಗುವುದೇ ಈ ಸಿದ್ಧಾಂತದ ಮೂಲ ಗುರಿಯಾಗಿದೆ. ಚನ್ನಬಸವಣ್ಣನವರಾದಿಯಾಗಿ ಎಲ್ಲ ಶರಣರ ಅನುಭಾವದ ಈ ವಿನೂತನ ಕೊಡುಗೆಯಿಂದಾಗಿ ಲಿಂಗಾಯತ ಧರ್ಮವು ತನ್ನ ವೈಶಿಷ್ಟ್ಯವನ್ನು ಕಾಯ್ದುಕೊಂಡಿದೆ.
ಚನ್ನಬಸವಣ್ಣನವರು ಲಿಂಗಾಯತ ಸಿದ್ಧಾಂತವನ್ನು ಭದ್ರವಾದ ನೆಲೆಯಲ್ಲಿ ಕಟ್ಟುವ ಕಾಲಕ್ಕೆ, ವೇದಾಂತಿಗಳು ಕೇವಲ ಜ್ಞಾನಕ್ಕೆ ಮಹತ್ವ ಕೊಟ್ಟು, ಕ್ರಿಯೆಯನ್ನು ಮರೆತಿದ್ದರು. ಜ್ಞಾನವೊಂದಿದ್ದರೆ ಸಾಕು, ಉಳಿದೆಲ್ಲ ಅವಶ್ಯಕತೆ ಇಲ್ಲ ಎನ್ನುವ ಮನೋಧರ್ಮ ವೇದಾಂತಿಗಳದಾಗಿತ್ತು. ಅದನ್ನು ಚನ್ನಬಸವಣ್ಣನವರು ನಿರಾಕರಿಸಿ ಜ್ಞಾನ ಮತ್ತು ಕ್ರಿಯೆಗಳ ಸಮುಚ್ಚಯವಿದ್ದಾಗಲೇ ನಿಜವಾದ ಸಾಧನೆ ಸಾಧ್ಯ ಎಂಬುದನ್ನು ಮನದಟ್ಟು ಮಾಡಿಕೊಟ್ಟರು.
ಕ್ರಿಯೆಯೆ ಜ್ಞಾನ, ಆ ಜ್ಞಾನವೆ ಕ್ರಿಯೆ.
ಜ್ಞಾನವೆಂದಡೆ ತಿಳಿಯುವುದು,
ಕ್ರಿಯೆಯೆಂದಡೆ ತಿಳಿದಂತೆ ಮಾಡುವುದು
ಪರಸ್ತ್ರೀಯ ಭೋಗಿಸಬಾರದೆಂಬುದೆ ಜ್ಞಾನ;
ಅದರಂತೆ ಆಚರಿಸುವುದೆ ಕ್ರಿಯೆ.
ಅಂತು ಆಚರಿಸದಿದ್ದಡೆ ಅದೆ ಅಜ್ಞಾನ ನೋಡಾ,
ಕೂಡಲಚೆನ್ನಸಂಗಮದೇವಾ.
ಈ ವಚನಕ್ಕೆ ಬೇರೆ ವ್ಯಾಖ್ಯಾನದ ಅಗತ್ಯವೇ ಇಲ್ಲ. ಅಷ್ಟು ಸರಳವಾಗಿ ಜ್ಞಾನ ಕ್ರಿಯೆಗಳ ಸಮನ್ವಯ ಸಾಧನೆಯನ್ನು ಕುರಿತು ಚನ್ನಬಸವಣ್ಣನವರು ಇಲ್ಲಿ ವಿವರಿಸಿದ್ದಾರೆ. ಜ್ಞಾನ ಎಂದರೆ ತಿಳಿವುದು, ಅದರಂತೆ ಆಚರಿಸುವುದು ಕ್ರಿಯೆ. ಎಷ್ಟು ಸರಳವಾದ ವಿವರಣೆ.
ವೇದಾಂತಿಯೊಬ್ಬ ಜ್ಞಾನವೊಂದಿದ್ದರೆ ಸಾಕು ಎಂದು ಪ್ರವಚನ ಮಾಡುತ್ತಿದ್ದ. ಆಗ ಅನುಭಾವಿಗಳೊಬ್ಬರು ಹಾಗಾದರೆ ಕರ್ಪೂರವನ್ನು ನಿನ್ನ ತಲೆಯ ಮೇಲಿಟ್ಟು ಕಡ್ಡಿ ಕೊರೆಯುತ್ತೇವೆ. ಆಗ ಕರ್ಪೂರ ಉರಿಯುತ್ತದೆ. ನೀನು ಯಾವುದೇ ಕ್ರಿಯೆ ಮಾಡದೆ, ಕೇವಲ ಜ್ಞಾನ ಮಾತ್ರದಿಂದ ಅದನ್ನು ಆರಿಸು ಎಂದು ಹೇಳುತ್ತಾರೆ. ತಲೆಯ ಮೇಲೆ ಕರ್ಪೂರ ಇಟ್ಟು ಅಗ್ನಿ ಹಚ್ಚಿದರೆ, ಅದು ತಲೆಯನ್ನು ಸುಡುತ್ತದೆ. ಆಗ ಸಹಜವಾಗಿಯೇ ವ್ಯಕ್ತಿ ತನ್ನ ಕೈಯಿಂದ ಅದನ್ನು ಆರಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ಅದೇ ಕ್ರಿಯೆ. ಇಷ್ಟು ಸರಳವಾಗಿ ಧರ್ಮದ ವಿಚಾರಗಳನ್ನು ಚನ್ನಬಸವಣ್ಣನವರು ತಮ್ಮ ವಚನಗಳಲ್ಲಿ ಅಭಿವ್ಯಕ್ತಿಸಿದ್ದಾರೆ.
ಕ್ರಿಯೆ ಜಡವೆಂಬರು,
ಜ್ಞಾನ ಅಜಡವೆಂಬರು ಅದೆಂತಯ್ಯಾ?
ನೀತಿಯ ಹೇಳಿದುದು ಜಡವೆ?
ಕಷ್ಟವಿಲ್ಲದೆ ಬಂದಂತೆ ಬೊಗಳಿ
ಭೋಗಿಸಿ ಭವಕ್ಕೆ ಹೋಗುವುದು ಅಜಡವೆ?
ಕ್ರಿಯಾ-ಜ್ಞಾನವೆಂಬ ಉಭಯ ಶಬ್ದಾರ್ಥವನರಿಯದೆ
ಕಂಡ ಕಂಡ ಹಾಗೆ ಬೊಗಳುವ
ಹೊಲೆಮಾದಿಗರನು ಏನೆಂಬೆ
ಕೂಡಲಚೆನ್ನಸಂಗಮದೇವಾ.
ಇನ್ನು ಕೆಲವು ವೇದಾಂತಿಗಳು ಕ್ರಿಯೆ ಅದು ಜಡವಾಗಿದೆ, ಜ್ಞಾನ ಮಾತ್ರ ಅಜಡವೆಂದು ಹೇಳುತ್ತಿದ್ದರು. ಅದಕ್ಕಾಗಿ ಚನ್ನಬಸವಣ್ಣನವರು ಈ ಎರಡು ಶಬ್ದಗಳ ನಿಜವಾದ ಅರ್ಥವನ್ನು ತಿಳಿಯದೆ ಕಂಡ ಕಂಡ ಹಾಗೆ ಹೇಳಬೇಡಿ ಎಂದು ತುಂಬ ನಿಷ್ಠುರವಾಗಿ ಹೇಳಿರುವುದು ಗಮನೀಯವಾಗಿದೆ.
ಕ್ರಿಯೆಯಿಲ್ಲದ ಭಕ್ತ ಮನುಜ,
ಕ್ರಿಯೆಯಿಲ್ಲದ ಮಹೇಶ ರಾಕ್ಷಸ,
ಕ್ರಿಯೆಯಿಲ್ಲದ ಪ್ರಸಾದಿ ಯವನ,
ಕ್ರಿಯೆಯಿಲ್ಲದ ಪ್ರಾಣಲಿಂಗಿ ಭವಿ,
ಕ್ರಿಯೆಯಿಲ್ಲದ ಶರಣ ಅಜ್ಞಾನಿ,
ಕ್ರಿಯೆಯಿಲ್ಲದ ಲಿಂಗೈಕ್ಯ ಜನನಕ್ಕೊಳಗು ನೋಡಾ,
ಕೂಡಲಚೆನ್ನಸಂಗಮದೇವಾ.
ಯಾವುದೇ ಮನುಷ್ಯ ಚಲನಶೀಲವಾಗಿರಲು ಆತ ಒಂದಿಲ್ಲೊಂದು ಕ್ರಿಯೆ ಮಾಡುತ್ತಲೇ ಇರಬೇಕು. ಧಾರ್ಮಿಕ ಆಚರಣೆಗಳಲ್ಲಿ ತಲ್ಲೀನನಾಗಿ ಕ್ರಿಯೆಗಳಿಂದ ವಿಮುಖನಾದರೆ ಆತ ಭಕ್ತ ಮಹೇಶ ಪ್ರಸಾದಿ ಪ್ರಾಣಲಿಂಗಿ, ಶರಣ ಐಕ್ಯ ಎಂಬ ಅಧ್ಯಾತ್ಮ ಸಾಧನೆಯ ಉತ್ತುಂಗಕ್ಕೇರಿದ್ದರೂ ಆತ ಕ್ರಿಯಾಹೀನನಾಗಿದ್ದರೆ, ಆತನ ಅವಸ್ಥೆ ಏನಾಗುತ್ತದೆ ಎಂಬುದನ್ನು ಚನ್ನಬಸವಣ್ಣನವರು ಸೂಚ್ಯವಾಗಿ ಮೇಲಿನ ವಚನದಲ್ಲಿ ನಿರೂಪಿಸಿದ್ದಾರೆ.
ಶರಣರಾದವರ ನಿಲುವುಗಳೇನು ಎಂಬುದನ್ನು ಆ ಕಾಲದ ಎಲ್ಲ ಧಾರ್ಮಿಕ ಪ್ರಮುಖರ ಆಚರಣೆಗಳನ್ನು ಗಮನಿಸಿ, ಹೀಗೆ ಹೇಳುತ್ತಾರೆ-
ವೇದಾಂತಿಗಳಂತೆ ಜ್ಞಾನಬದ್ಧರಲ್ಲ,
ಮುನಿಗಳಂತೆ ಕ್ರಿಯಾಬದ್ಧರಲ್ಲ,
ಸಾಧಕರಂತೆ ಕಾರ್ಯಬದ್ಧರಲ್ಲ.
ಜ್ಞಾನಕ್ರಿಯಾಕಾರ್ಯಗಳಲ್ಲಿ
ಕೂಡಲಚೆನ್ನಸಂಗನ ಶರಣರು
ನಿರತರು ಕಾಣಾ ಸಿದ್ಧರಾಮಯ್ಯಾ.
ಶರಣರು ವೇದಾಂತಿಗಳಂತೆ ಕೇವಲ ಜ್ಞಾನವೆಂದು ಹಲುಬಿದರವಲ್ಲ, ಮುನಿಗಳಂತೆ ಕ್ರಿಯೆಯಿಲ್ಲದೆ ಮುಲುಗಿದವರಲ್ಲ. ಜ್ಞಾನ ಮತ್ತು ಕ್ರಿಯೆ ಎರಡರಲ್ಲೂ ನಿರತರಾದ ಶರಣರು ಎಂಬುದನ್ನು ತಿಳಿಸುತ್ತಾರೆ.
ಬಟ್ಟಬಯಲೆಲ್ಲ ಗಟ್ಟಿಗೊಂಡಡೆ,
ಸ್ವರ್ಗ ಮರ್ತ್ಯ ಪಾತಾಳಕ್ಕೆ ಠಾವೆಲ್ಲಿಯದೊ?
ಮೇಘನಿರ್ಮಳಜಲವೆಲ್ಲ ಮುತ್ತಾದಡೆ
ಸಪ್ತಸಾಗರಂಗಳಿಗೆ ಉದಕವೆಲ್ಲಿಯದೊ?
ಕಷ್ಟಜೀವಿ ಮನುಜರೆಲ್ಲ ನೆಟ್ಟನೆ ಶಿವಜ್ಞಾನಿಗಳಾದಡೆ
ಮುಂದೆ ಭವದ ಬಳ್ಳಿಗೆ ಬೆಳೆಯಲಿನ್ನೆಲ್ಲಿಯದೊ?
`ಗುರುಭಕ್ತಿಂ ಪರಿತ್ಯಜ್ಯ ಸದ್ಯೋsಪಿ ನರಕಂ ವ್ರಜೇತ್’
ಇಂತೆಂದುದಾಗಿ, ಕೂಡಲಚೆನ್ನಸಂಗಯ್ಯಾ
ಲಕ್ಷಕ್ಕೊಬ್ಬ ಭಕ್ತ, ಕೋಟಿಗೊಬ್ಬ ಶರಣ.
ಚನ್ನಬಸವಣ್ಣನವರ ದೃಷ್ಟಿಯಲ್ಲಿ ಭಕ್ತನಾಗುವುದು ಸುಲಭ, ಶರಣನಾಗುವುದು ಕಷ್ಟ. ಅದಕ್ಕಾಗಿ ಲಕ್ಷ ಜನರಲ್ಲಿ ಭಕ್ತರು ಬಹಳಷ್ಟು ಸಿಗುತ್ತಾರೆ, ಆದರೆ ಕೋಟಿ ಜನರಲ್ಲಿ ಒಬ್ಬರು ಶರಣರಾಗುತ್ತಾರೆ. ಈ ಲೋಕದಲ್ಲಿ ಎಲ್ಲರೂ ನೆಟ್ಟನೆ ಶಿವಜ್ಞಾನಿ ಗಳಾಗಿ, ಸಂಸಾರ ತ್ಯಾಗ ಮಾಡಿದರೆ ಭವದ ಬಳ್ಳಿ ಮುಂದುವರೆಯುವುದು ಸಾಧ್ಯವಿಲ್ಲ ಎಂಬುದನ್ನು ವಿವರಿಸಿದ್ದಾರೆ.
ಶರಣರು ನಿಜವಾದ ಅನುಭಾವಿಗಳು. ಅನುಭಾವ ಮಾರ್ಗದಲ್ಲಿ ಸದಾಕಾಲ ಮುನ್ನಡೆಯುವರು. ಅನುಭಾವ ಪ್ರಮಾಣವೇ ಲಿಂಗಾಯತ ಧರ್ಮದ ಮೂಲ ಸ್ರೋತ. ಇದನ್ನು ಚನ್ನಬಸವಣ್ಣನವರು ಹೀಗೆ ಪ್ರತಿಪಾದಿಸುತ್ತಾರೆ-
ತರುಮರಾದಿಗಳಲ್ಲಿಗೆ ಹೋಗಿ
ಅನಂತಕಾಲ ತಪಸ್ಸಿಹುದರಿಂದ
ಒಂದು ದಿನ ಗುರುಚರಣಸೇವೆ ಸಾಲದೆ?
ಅನಂತಕಾಲ ಗುರುಚರಣಸೇವೆಯ ಮಾಡುವುದರಿಂದ
ಒಂದು ದಿನ ಲಿಂಗಪೂಜೆ ಸಾಲದೆ?
ಅನಂತಕಾಲ ಲಿಂಗಪೂಜೆಯ ಮಾಡುವುದರಿಂದ
ಒಂದುದಿನ ಜಂಗಮ ತೃಪ್ತಿ ಸಾಲದೆ?
ಅನಂತಕಾಲ ಜಂಗಮತೃಪ್ತಿಯ ಮಾಡುವುದರಿಂದ
ಒಂದು ನಿಮಿಷ ನಿಮ್ಮ ಶರಣರ ಅನುಭಾವ ಸಾಲದೆ?
ಕೂಡಲಚೆನ್ನಸಂಗಮದೇವಾ.
ಕಾಡಿಗೆ ಹೋಗಿ ಗುಡ್ಡ ಬೆಟ್ಟಗಳ ನಡುವಿನ ಗಿಡಗಳ ಮಧ್ಯದಲ್ಲಿ ಕುಳಿತು ಹಲವಾರು ವರ್ಷ ತಪಸ್ಸು ಮಾಡುವುದರ ಬದಲು, ಒಂದು ದಿನದ ಗುರುವಿನ ಪಾದದ ಸೇವೆ ಮಾಡಿದರೆ ಸಾಲದೇ? ಎಂದು ಪ್ರಶ್ನಿಸುತ್ತಾರೆ. ಹೀಗೆ ಹಲವಾರು ವರ್ಷಗಳ ಕಾಲ ಗುರುಸೇವೆ ಮಾಡುವುದರ ಬದಲು ಒಂದು ದಿನ ಲಿಂಗಪೂಜೆ ಮಾಡಿದರೆ ಉತ್ತಮ, ಅದಕ್ಕಿಂತಲೂ ಉತ್ತಮವಾದುದು ಒಂದು ದಿನದ ಜಂಗಮ ತೃಪ್ತಿ ಎನ್ನುತ್ತಾರೆ. ಈ ಜಂಗಮತೃಪ್ತಿಗಿಂತಲೂ ಮಿಗಿಲಾದುದು ಶರಣರ ಜೊತೆ ಕೇವಲ ಒಂದು ನಿಮಿಷದ ಅನುಭಾವ ಮಾಡುವುದು ಅತ್ಯಂತ ಶ್ರೇಷ್ಠ ಎಂದು ಅನುಭಾವದ ಪರಮ ಗಂತವ್ಯವನ್ನು ಅಭಿವ್ಯಕ್ತಿಸುತ್ತಾರೆ.
ಅನುಭಾವ ಅನುಭಾವವೆಂದೆಂಬರು
ಅನುಭಾವವೆಂಬುದು
ನೆಲದ ಮರೆಯ ನಿಧಾನ ಕಾಣಿರೋ,
ಅನುಭಾವವೆಂಬುದು
ಅಂತರಂಗದ ಶುದ್ಧಿ ಕಾಣಿರೋ.
ಅನುಭಾವವೆಂಬುದು ರಚ್ಚೆಯ ಮಾತೆ?
ಅನುಭಾವವೆಂಬುದು ಸಂತೆಯ ಸುದ್ದಿಯೆ?
ಅನುಭಾವವೆಂಬುದೇನು ಬೀದಿಯ ಪಸರವೆ?
ಏನೆಂಬೆ ಹೇಳಾ ಮಹಾಘನವ!
ಆನೆಯ ಮಾನದೊಳಗಿಕ್ಕಿದರಡಗೂದೆ
ದರ್ಪಣದೊಳಗಡಗೂದಲ್ಲದೆ?
ಕಂಡ ಕಂಡಲ್ಲಿ ಗೋಷ್ಠಿ,
ನಿಂದ ನಿಂದಲ್ಲಿ ಅನುಭಾವ,
ಬಂದ ಬಂದಲ್ಲಿ ಪ್ರಸಂಗವ ಮಾಡುವ
ನಿರ್ಬುದ್ಧಿ ನೀಚರ ಮೆಚ್ಚ
ಕೂಡಲಚೆನ್ನಸಂಗಮದೇವ.
ಅನುಭಾವ ಎಂಬುದರ ಸ್ಪಷ್ಟವಾದ ಸ್ವರೂಪವನ್ನು ಚನ್ನಬಸವಣ್ಣನವರು ಈ ವಚನದಲ್ಲಿ ಪ್ರತಿಪಾದಿಸಿದ್ದಾರೆ. ಅನುಭಾವ ಎನ್ನುವುದು ನೆಲದ ಮರೆಯಲ್ಲಿ ಅಡಗಿದ ಸಂಪತ್ತಿನAತೆ ಅಗೋಚರವಾದುದು, ಅಂತರಂಗದ ಶುದ್ಧಿಯಾಗಿದೆ. ಅನುಭಾವ ಎನ್ನುವುದು ಸಂತೆಯ ಸುದ್ದಿಯಲ್ಲ, ರಚ್ಚೆಯ ಮಾತಲ್ಲ, ಅದೊಂದು ಮಹಾಘನ. ಆನೆಯ ಸ್ವರೂಪವನ್ನು ಕನ್ನಡಿಯಲ್ಲಿ ಹಿಡಿಯಬಹುದಲ್ಲದೆ, ನಿಜವಾಗಿಯೂ ಹಿಡಿಯಲು ಸಾಧ್ಯವೇ? ಹಾಗೆಯೇ ಕಂಡ ಕಂಡಲ್ಲಿ, ನಿಂತ ನಿಂತಲ್ಲಿ ಅನುಭಾವ ಶಿವಾನುಭವ ಎಂದು ಹೇಳುವವರ ಸ್ಥಿತಿಯನ್ನು ಕುರಿತು ಚನ್ನಬಸವಣ್ಣನವರು ತುಂಬ ನಿಷ್ಠುರವಾಗಿ ಇಲ್ಲಿ ಹೇಳಿದ್ದಾರೆ.
ವೃಕ್ಷಾಶ್ರಮದಲ್ಲಿದ್ದು ಭಿಕ್ಷಾಪರಿಣಾಮಿಯಾಗಿದ್ದರೇನು?
ಸುತ್ತಳಿದು ಬತ್ತಲೆಯಿದ್ದರೇನು?
ಕಾಲರಹಿತನಾದರೇನು? ಕರ್ಮರಹಿತನಾದರೇನು?
ಕೂಡಲಚೆನ್ನಸಂಗನ ಅನುಭಾವವನರಿಯದವರು
ಏಸು ಕಾಲವಿದ್ದರೇನು? ವ್ಯರ್ಥಕಾಣಿರೋ.
ಲಿಂಗತತ್ವದ ಅನುಭಾವವನ್ನು ಅರಿಯದ ವ್ಯಕ್ತಿ ಗಿಡದಿಂದ ಆವೃತ್ತವಾದ ಆಶ್ರಮದಲ್ಲಿದ್ದರೇನು, ಭಿಕ್ಷಾಟನೆ ಮಾಡುತ್ತಿದ್ದರೇನು? ದಿಗಂಬರನಾಗಿದ್ದರೇನು? ಕಾಲ ಮತ್ತು ಕರ್ಮರಹಿತನಾಗಿದ್ದರೇನು? ಆತ ಎಷ್ಟು ವರ್ಷ ಬದುಕಿದ್ದರೂ ನಿರರ್ಥಕವೆನ್ನುತ್ತಾರೆ.
ಅರಿವಿನ ತೃಪ್ತಿಗೆ ಅನುಭಾವವಾಶ್ರಯ.
ಲಿಂಗದ ಅನುಭಾವದಿಂದ ನಿಮ್ಮ ಕಂಡೆ.
ನಿಮ್ಮ ಕಂಡೆನ್ನ ಮರೆದೆ,
ಕೂಡಲಚೆನ್ನಸಂಗಮದೇವಾ.
ಬಸವಾದಿ ಶರಣರು ಅರಿವು ಎಂಬ ಶಬ್ದವನ್ನು ಅನೇಕ ಅರ್ಥಗಳಲ್ಲಿ ಬಳಸಿದ್ದಾರೆ. ಅವುಗಳಲ್ಲಿ ಕೆಲವು ಅರ್ಥಗಳು ಪರಸ್ಪರ ವಿರುದ್ಧವಾಗಿವೆ. ಉದಾಹರಣೆಗೆ, ಅರಿವನ್ನು ‘ಅರಿತವನು ಮುಕ್ತ’, ‘ಅರಿದಡೆ ಶರಣ, ಮರೆದರೆ ಮಾನವ’ ಎಂಬ ಹೇಳಿಕೆಯನ್ನು ನೋಡಿದರೆ, ಅರಿವನ್ನು ಅರಿಯಲು ಸಾಧ್ಯ ಎಂಬ ಅರ್ಥವುಂಟಾಗುತ್ತದೆ. ಆದರೆ ಕೆಲವು ವೇಳೆ ಅರಿವನ್ನು ಅರಿಯಲಾಗದು ಎಂಬ ಮಾತೂ ವಚನಗಳಲ್ಲಿ ಬರುತ್ತದೆ. ಮತ್ತೆ ಕೆಲವು ವೇಳೆ ‘ಅರಿವೇ ಗುರು’ ಎಂಬ ಮಾತು ಬಂದಂತೆ ಗುರುವೇ ಶಿಷ್ಯ, ಲಿಂಗವೇ ಗುರು, ಲಿಂಗವೇ ಶಿಷ್ಯ ಎಂಬ ಮಾತೂ, ಅರಸುವ ವಸ್ತು, ಅರಸುವ ಭಕ್ತ ಎರಡೂ ಒಂದೆ ಎಂಬ ಮಾತೂ ಬರುತ್ತದೆ. ಮತ್ತೆ ಕೆಲವು ವೇಳೆ, ಅರಿವನೂ ಮರೆವನೂ ಮೀರಿ ಮೇಲೇರಿದವನೇ ಲಿಂಗೈಕ್ಯ ಎಂಬ ಮಾತು ಬರುತ್ತದೆ. ಮತ್ತೆ ಕೆಲವು ವೇಳೆ, ಅರಿವನ್ನು ಅತಿಗಳೆದವನಿಗೆ ಮೋಕ್ಷ ಸಾಧ್ಯ ಎಂಬ ಮಾತು ಬರುತ್ತದೆ. ಹೀಗೆ ಇಷ್ಟೊಂದು ಅರ್ಥವೈವಿಧ್ಯವನ್ನುಳ್ಳ ಅರಿವು ಅಥವಾ ಜ್ಞಾನ ಎಂಬ ಪದದ ಅರ್ಥವನ್ನು ನಿರ್ಧರಿಸುವುದು ಆವಶ್ಯಕ. ಇಲ್ಲದಿದ್ದರೆ ಆ ಪದವುಳ್ಳ ವಚನವಾಗಲಿ, ಅದನ್ನು ಬಳಸಿದ ಶರಣರ ವಿಚಾರಗಳಾಗಲಿ ಅರ್ಥವಾಗುವುದಿಲ್ಲ. ಅದರಲ್ಲೂ ಮೋಕ್ಷ ಪಡೆಯಲು ಭಕ್ತಿಯ ಜೊತೆಗೆ ಅರಿವೂ ಬೇಕು. ಇಂತಹ ಅರಿವಿನ ತೃಪ್ತಿಗೆ ಅನುಭಾವ ಆಶ್ರಯವಾಗಿದೆ ಎಂಬುದನ್ನು ಚನ್ನಬಸವಣ್ಣನವರು ತುಂಬ ಅರ್ಥಪೂರ್ಣವಾಗಿ ವಿವರಿಸಿದ್ದಾರೆ.
ಅರಿವು ಮತ್ತು ಅನುಭಾವಗಳ ಪರಸ್ಪರ ಸಾಮರಸ್ಯದ ಸಂಬಂಧವನ್ನು ಕುರಿತು ಹೀಗೆ ಹೇಳುತ್ತಾರೆ-
ಆಚಾರ ಗುರುಸ್ಥಲ,
ಅನುಭಾವ ಲಿಂಗಸ್ಥಲ,
ಅವಧಾನ ಅರ್ಪಿತಸ್ಥಲ,
ಪರಿಣಾಮ ಪ್ರಸಾದಿಸ್ಥಲ,
ಸಮಾಧಾನ ಶರಣಸ್ಥಲ,
ಅರಿವು ನಿಃಪತಿಯಾಗಿ ತೆರಹಿಲ್ಲದ
ನಿಜದಲ್ಲಿ ಲಿಂಗೈಕ್ಯವು,
ಕೂಡಲಚೆನ್ನಸಂಗಮದೇವಾ.
ಇದು ಲಿಂಗಸಕೀಲದ ವೈಶಿಷ್ಟ್ಯ. ಆಚಾರ, ಅನುಭಾವ, ಅವಧಾನ, ಪರಿಣಾಮ, ಸಮಾಧಾನ ಇವೆಲ್ಲ ಅರಿವಿನ ಆಶ್ರಯದಿಂದಲೇ ಮೂಡಿ ನಿಜಲಿಂಗೈಕ್ಯದ ಸ್ಥಿತಿಯನ್ನು ನಿರ್ಮಾಣ ಮಾಡುತ್ತದೆ ಎಂದು ತಿಳಿಸಿದ್ದಾರೆ.
ವಚನರಚನೆಯ ಅನುಭಾವವ ಬಲ್ಲೆವೆಂದೆಂಬರು
ವಚನವಾವುದು ರಚನೆಯಾವುದು?
ಅನುಭಾವವಾವುದು ಹೇಳಿರಣ್ಣಾ?
ವಚನ: ಆತ್ಮತುಷ್ಟಿಯನರಿವುದು.
ರಚನೆ: ಸ್ಥಾವರ ಲಿಂಗ ಜಂಗಮ ತ್ರಿವಿಧದಲ್ಲಿ ಕಾಣಬಲ್ಲರೆ.
ಅನುಭಾವ: ಕಾಮದಿಚ್ಛೆಗೆ ಹರಿದು
ಮದಮಚ್ಚರವಿಲ್ಲದಿರಬೇಕು,
ಆಸೆಯಾಮಿಷ ಹರುಷದಿಚ್ಛೆಗೆ
ಹರಿದು [ಯಾ]ಚಕನಾಗದಿರಬೇಕು,
ಕಾಮ ಕ್ರೋಧ ಲೋಭ ಮೋಹ
ಮದ ಮಚ್ಚರ ಆಶೆಯಾಮಿಷ
ರೋಷಾದಿಗಳಂ ಹರಿದೊದೆದು,
ಏಕೋಗ್ರಾಹಿಯಾಗಿ ನಿಂದಲ್ಲೇ ಅನುಬಾವಿ.
ನಾಲ್ಕು ವೇದಶಾಸ್ತ್ರಂಗಳ ಬಲ್ಲೆವೆಂದು
ನುಡಿವಾತನನುಭಾವಿಯೆ? ಅಲ್ಲ,
ಅವು ಬ್ರಹ್ಮನೆಂಜಲು,
ಇವ ಬಲ್ಲೆವೆಂದು ನುಡಿವಾತನನುಭಾವಿಯೆ? ಅಲ್ಲ,
ಆತನು ಇದಿರ ನಂಬಿಸಿ ಉಂಬ ಭುಂಜಕನಯ್ಯಾ
ಕೂಡಲಚೆನ್ನಸಂಗಮದೇವಾ.
ಚನ್ನಬಸವಣ್ಣನವರ ದೃಷ್ಟಿಯಲ್ಲಿ ಅನುಭಾವದಿಂದ ತೃಪ್ತಿ ಪಡೆದ ನಿಜ ಶರಣರು ಮಾತ್ರ ವಚನಗಳನ್ನು ರಚಿಸಲು ಅರ್ಹರು ಎಂಬುದನ್ನು ತಿಳಿಸುತ್ತಾರೆ. ಇಂದು ಆಧುನಿಕ ವಚನಗಳನ್ನು ರಚಿಸುವರು ಈ ವಚನವನ್ನು ಪಚನ ಮಾಡಿಕೊಂಡು ಬರೆಯಬೇಕು. ಆಗ ಮಾತ್ರ ನಿಜವಾದ ವಚನ ರಚನೆ ಸಾಧ್ಯವಾಗುತ್ತದೆ. ನಾಲ್ಕು ವೇದಗಳನ್ನು ಬಲ್ಲೆ ಎಂಬುವನು ಅನುಭಾವಿಯಲ್ಲ, ಯಾವೆಲ್ಲ ದುರ್ಗುಣಗಳನ್ನು ತ್ಯಜಿಸಿದರೆ ಅನುಭಾವಿಯಾಗಲು ಸಾಧ್ಯ ಎಂಬುದನ್ನು ಚನ್ನಬಸವಣ್ಣನವರು ಇಲ್ಲಿ ತುಂಬ ಮಾರ್ಮಿಕವಾಗಿ ಬೋಧಿಸಿದ್ದಾರೆ.
ಓದಿದರೇನು? ಕೇಳಿದರೆನು?
ಆಸೆ ಅಳಿಯದು ರೋಷ ಬಿಡದು,
ಮಜ್ಜನಕ್ಕೆ ನೀಡಿ ಫಲವೇನು?
ವಚನಾರಂಭದ ನುಡಿಯ ಕಲಿತವರೆಲ್ಲ
ಅನುಭಾವಿಗಳಪ್ಪರೆ?
ಅಷ್ಟಾಷಷ್ಟಿ ತೀರ್ಥಂಗಳ ಮೆಟ್ಟಿದವರೆಲ್ಲ
ತೀರ್ಥವಾಸಿಗಳಪ್ಪರೆ?
ಅಷ್ಟವಿಧಾರ್ಚನೆ ಷೋಡಶೋಪಚಾರಂಗಳ
ಮಾಡಿದವರೆಲ್ಲ ಕಾಣಬಹುದೆ ನಿರಾಕಾರ?
ಕಾಣಬಹುದೆ ಮಹಾಘನವು?
ಕಂಡು ಭ್ರಮೆಗೊಂಡು ಹೋದರೆಲ್ಲರು.
ಕೂಡಲಚೆನ್ನಸಂಗನ ಅನುಭಾವವ
ಲಿಂಗೈಕ್ಯನೇ ಬಲ್ಲ.
ಮೇಲಿನ ವಚನದ ಭಾವವನ್ನು ಇನ್ನಷ್ಟು ವಿಸ್ತಾರಗೊಳಿಸಿದ್ದಾರೆ. ಆಸೆ ಬಿಡದ, ರೋಷ ಬಿಡದ, ಮಜ್ಜನ ಮಾಡಿ ಶುದ್ಧನಾದೆ ಎನ್ನುವ ಡಾಂಭಿಕರು ಓದಿದರೇನು? ಕೇಳಿದರೇನು? ಅವರೆಲ್ಲ ಅನುಭಾವಿಗಳಾಗಬಲ್ಲರೆ ಎಂದು ಕೇಳುತ್ತಾರೆ.
ಬಸವಣ್ಣ ಮಾಡುವ ಮಾಟವನಾರು ಬಲ್ಲರಯ್ಯಾ?
ಲಿಂಗವಿಲ್ಲದೆ ಮಾಡಿದನಯ್ಯಾ ಬಸವಣ್ಣನು;
ಜಂಗಮವಿಲ್ಲದೆ ನೀಡಿದನಯ್ಯಾ ಬಸವಣ್ಣನು;
ಪ್ರಸಾದವಿಲ್ಲದೆ ರುಚಿಸಿದನಯ್ಯಾ ಬಸವಣ್ಣನು.
ಈ ಮಹಕ್ಕೆ ಬಂದು ಅನುಭಾವವ ಮಾಡಿ
ಆಡಿದನಯ್ಯಾ ಬಸವಣ್ಣನು.
ಲಕ್ಷದ ಮೇಲೆ ತೊಂಬತ್ತಾರು ಸಾವಿರ
ಜಂಗಮದ ಸಂಗ
ಇಂದಿನಲಿ ಅಗಲಿತ್ತು ಕಾಣಾ,
ಕೂಡಲಚೆನ್ನಸಂಗಮದೇವಾ
ನಿಮ್ಮ ಶರಣ ಬಸವಣ್ಣಂಗೆ.
ಶರಣ ಸಂಕುಲದಲ್ಲಿ ನಿಜವಾದ ಅನುಭಾವಿಯಾಗಿ ಬದುಕಿದವರು ಬಸವಣ್ಣನವರು ಎಂಬುದನ್ನು ಈ ವಚನದಲ್ಲಿ ದಾಖಲಿಸಿದ್ದಾರೆ. ಬಸವಣ್ಣನವರು ಪೂರ್ವದಲ್ಲಿ ಗುರು-ಲಿಂಗ-ಜಂಗಮ ಪ್ರಸಾದ ಇವುಗಳ ಅಸ್ತಿತ್ವವೇ ಇರಲಿಲ್ಲ. ಈ ಎಲ್ಲವನ್ನು ಮೊಟ್ಟಮೊದಲು ತಂದುಕೊಟ್ಟವರು ಬಸವಣ್ಣನವರು. ಲಕ್ಷದ ಮೇಲೆ ತೊಂಬತ್ತಾರು ಸಾವಿರ ಜಂಗಮ ಸಂಕುಲವನ್ನು ಸೃಷ್ಟಿಸಿದ ಕೀರ್ತಿ ಬಸವಣ್ಣನವರದು. ಇಷ್ಟೊಂದು ಸಂಖ್ಯೆಯ ಜಂಗಮ ಗಣ ಹಿಂದೆ ಇತ್ತು ಎಂಬುದಕ್ಕೇ ಯಾವುದೇ ಇತಿಹಾಸವಿಲ್ಲ. ಹೀಗಾಗಿ ಬಸವಣ್ಣನವರೇ ಲಿಂಗಾಯತ ಧರ್ಮದ ಮೂಲತತ್ವಗಳ ನಿರ್ಮಾಪಕರು, ಅವರು ಅನುಭಾವಿಯಾಗಿರುವುದರಿಂದಲೇ ಇದೆಲ್ಲ ಸಾದ್ಯವಾಗಿದೆ ಎಂಬುದು ಚನ್ನಬಸವಣ್ಣನವರ ಅಭಿಪ್ರಾಯ.
‘ಭಕ್ತಿಗೆ ಅನುಭಾವವೆ ಬೀಜ, ಭಕ್ತಿಗೆ ಅನುಭಾವವೆ ಆಚಾರ, ಅನುಭಾವವಿಲ್ಲದವನ ಭಕ್ತಿ ಎಳತಟಗೊಳಿಸಿತ್ತು. ಅನುಭಾವವ ಮಾಡುವಲ್ಲಿ ವಿನಯದಿಂದ ಕೇಳದಿದ್ದಡೆ ಕೂಡಲಚೆನ್ನಸಂಗಮದೇವರು ಅಘೋರನರಕದಲ್ಲಿಕ್ಕುವ.’ ಎನ್ನುವ ಮತ್ತೊಂದು ವಚನದಲ್ಲಿ ಅನುಭಾವದ ಬೀಜ ಭಕ್ತಿಪಥದಲ್ಲಿ ಅಡಗಿದೆ ಎಂಬುದನ್ನು ಸಾರಿದ್ದಾರೆ. ಹೀಗೆ ಚನ್ನಬಸವಣ್ಣನವರು ಶರಣ ಸಂಕುಲದಲ್ಲಿ ನಿಜವಾದ ಅನುಭಾವ ಮಾರ್ಗವನ್ನು ತೋರಿಸಿಕೊಟ್ಟರು.