ಮಹಾಜ್ಞಾನಿ ಚನ್ನಬಸವಣ್ಣನವರು ಅನುಭವ ಮಂಟಪದಲ್ಲಿ ಲಿಂಗಾಯತ ಸಂಸ್ಕೃತಿಯ ಸಂವಿಧಾನವನ್ನು ರಚಿಸಿದರು. ಡಾ. ಅಂಬೇಡ್ಕರ್ ಅವರು ಭಾರತ ದೇಶಕ್ಕೆ ನೀತಿ ನಿಯಮಗಳ, ಹಕ್ಕು ಮತ್ತು ಕರ್ತವ್ಯಗಳ ಸಂವಿಧಾನವನ್ನು ರೂಪಿಸಿದಂತೆ, ಚನ್ನಬಸವಣ್ಣನವರು ಲಿಂಗಸಾಧಕರಿಗೆಲ್ಲ ಒಂದು ಅಮೂಲ್ಯವಾದ ಆಚಾರ ಸಂಹಿತೆಯನ್ನು ರೂಪಿಸಿದರು. ಉಳಿದ ಶರಣರ ವಚನಗಳಲ್ಲಿಯೂ ಈ ಅಂಶಗಳು ಪ್ರಸ್ತಾಪವಾಗಿದ್ದರೂ, ಚನ್ನಬಸವಣ್ಣನವರೇ ಈ ಎಲ್ಲ ವಿಚಾರಗಳನ್ನು ಮೊದಲು ಅಭಿವ್ಯಕ್ತಿಸಿದವರು ಎಂಬುದನ್ನು ಇಡೀ ಶರಣ ಸಂಕುಲವೇ ಒಪ್ಪಿಕೊಂಡಿದೆ. ಹೀಗಾಗಿ ಪ್ರತಿಯೊಬ್ಬ ಸಾಧಕನ ಜೀವನ ಪರಿಪೂರ್ಣವಾಗಬೇಕಾದರೆ, ಅಷ್ಟಾವರಣವೇ ಅಂಗವಾಗಬೇಕು, ಷಟ್ಸ್ಥಲವೇ ಆತ್ಮವಾಗಬೇಕು, ಪಂಚಾಚಾರಗಳೇ ಪ್ರಾಣವಾಗಬೇಕು. ಆಗ ಮಾತ್ರ ಭಕ್ತನಾದವನು ಐಕ್ಯಸ್ಥಲದವರೆಗಿನ ಮೆಟ್ಟಿಲುಗಳನ್ನು ಏರಲು ಸಾಧ್ಯವಾಗುವುದು.
ಚನ್ನಬಸವಣ್ಣನವರು ಸರ್ವಾಚಾರ ಸಂಪತ್ತಿನ ಒಡೆಯರು. ಹೀಗಾಗಿ ಅವರು ಪಂಚಾಚಾರ, ಸಪ್ತಾಚಾರ, ಐವತ್ತು ತರದ ಆಚಾರಗಳನ್ನು ನಿರೂಪಿಸಿ, ನಿಜವಾದ ಲಿಂಗಾಯತನ ನಡಾವಳಿಗಳು ಹೇಗಿರಬೇಕೆಂಬುದನ್ನು ತಿಳಿಸಿಕೊಟ್ಟಿದ್ದಾರೆ. ಒಂಬತ್ತು ನೂರು ವರ್ಷಗಳ ಹಿಂದೆ ಹೇಳಿದ ಈ ಆಚಾರ ಸಂಹಿತೆ, ಇಂದಿನ ದಿನಮಾನದಲ್ಲಿಯೂ ಅತ್ಯಂತ ಪ್ರಸ್ತುತವಾಗಿರುವುದನ್ನು ಗಮನಿಸಬೇಕು. ನುಡಿದಂತೆ ನಡೆಯುವುದೇ ಧರ್ಮ ಎನ್ನುವುದನ್ನು ಈ ಆಚಾರ ಸಂಹಿತೆಯಲ್ಲಿ ಚನ್ನಬಸವಣ್ಣನವರು ಅತ್ಯಂತ ಸರಳವಾಗಿ ತಿಳಿಸಿಕೊಟ್ಟಿದ್ದಾರೆ.
ಪಂಚಾಚಾರಗಳು
ಪಂಚಾಚಾರಗಳ ನಿಷ್ಪತ್ತಿಯನ್ನು ಚನ್ನಬಸವಣ್ಣನವರು ತಮ್ಮ ವಚನದಲ್ಲಿ ಹೀಗೆ ಸೂತ್ರೀಕರಿಸಿದ್ದಾರೆ:
ಲಿಂಗಾಚಾರ ಸದಾಚಾರ ಶಿವಾಚಾರ ಗಣಾಚಾರ
ಭೃತ್ಯಾಚಾರವೆಂಬ ಪಂಚಾಚಾರದ ಆಚರಣೆಯೆಂತೆಂದಡೆ:
ಲಿಂಗವಲ್ಲದೆ ಅನ್ಯವನರಿಯದಿಹುದೆ ಲಿಂಗಾಚಾರ.
ಸಜ್ಜನ ಕಾಯಕದಲ್ಲಿ ತಂದು ಗುರು-ಲಿಂಗ-ಜಂಗಮಕ್ಕೆ ನೀಡಿ
ಸತ್ಯಶುದ್ಧನಾಗಿಹುದೆ ಸದಾಚಾರ.
ಶಿವಭಕ್ತರಲ್ಲಿ ಕುಲ ಗೋತ್ರ ಜಾತಿ ವರ್ಣಾಶ್ರಮವನರಸದೆ
ಅವರೊಕ್ಕುದ ಕೊಂಬುದೆ ಶಿವಾಚಾರ.
ಶಿವಾಚಾರದ ನಿಂದೆಯ ಕೇಳದಿಹುದೆ ಗಣಾಚಾರ.
ಶಿವಶರಣರೆ ಹಿರಿಯರಾಗಿ ತಾನೆ ಕಿರಿಯನಾಗಿ
ಭಯಭಕ್ತಿಯಿಂದ ಆಚರಿಸುವುದೆ ಭೃತ್ಯಾಚಾರ.
ಇಂತೀ ಪಂಚಾಚಾರವುಳ್ಳ ಪರಮಸದ್ಭಕ್ತರ ಒಕ್ಕುದನಿಕ್ಕಿ
ಸಲಹಯ್ಯಾ ಪ್ರಭುವೆ, ಕೂಡಲಚೆನ್ನಸಂಗಮದೇವಾ.
ಈ ಪಂಚ ಆಚಾರಗಳು ವ್ಯಕ್ತಿಯ ಆತ್ಮೋನ್ನತಿಯ ಜೊತೆಗೆ, ಸಾಮಾಜಿಕ ಜೀವನ ಕ್ರಮವನ್ನು ಉದಾತ್ತೀಕರಿಸಲು ನೆರವಾಗುತ್ತವೆ. ಪ್ರತಿಯೊಬ್ಬರ ಜೀವನ ಕ್ರಮ ನಿಯಮಬದ್ಧವಾಗಿ ನಿರ್ಮಲವಾಗಿ ಸಾಗಲು ಈ ಆಚಾರಗಳು ಸಹಾಯ ಮಾಡುತ್ತವೆ. ವೈಚಾರಿಕ ತಳಹದಿಯ ಮೇಲೆ ರೂಪಿಸಿದ ಈ ಆಚಾರಗಳು ಶೀಲಸಂಪತ್ತು ಎನ್ನಿಸಿಕೊಂಡಿವೆ.
ಕೇವಲ ಆಚಾರವೆನ್ನುವುದು ವ್ಯಕ್ತಿಗೆ ಮಾತ್ರ ಸೀಮಿತವಾಗಿಲ್ಲ. ಆಚಾರವಿಲ್ಲದ ಗುರು ಭೂತ, ಆಚಾರವಿಲ್ಲದ ಲಿಂಗ ಶಿಲೆ, ಆಚಾರವಿಲ್ಲದ ಜಂಗಮ ಮನುಜ, ಆಚಾರವಿಲ್ಲದ ಪಾದೋದಕ ನೀರು, ಆಚಾರವಿಲ್ಲದ ಪ್ರಸಾದ ಎಂಜಲು, ಆಚಾರವಿಲ್ಲದ ಭಕ್ತ ದುಷ್ಕರ್ಮಿ ಎನ್ನಿಸಿಕೊಳ್ಳುತ್ತಾನೆ. ಆದ್ದರಿಂದ ಅಲ್ಲಮರು ಒಂದೆಡೆ ‘ತನುವೆಂಬ ಏರಿಗೆ, ಮನವೆಂಬ ಕಟ್ಟೆ ಕಟ್ಟಿ, ಆಚಾರವೆಂಬ ಸೋಪಾನದಿಂದ ಪರಮಾನಂದದ ಜಲವ ತುಂಬಿದ ಕೆರೆ ಕಟ್ಟಿಸಿದರೆ, ಅದು ಸ್ಥಿರವಾಗುವುದು’ ಎನ್ನುತ್ತಾರೆ. ಬಸವಣ್ಣನವರಂತೂ ‘ಆಚಾರವೇ ಸ್ವರ್ಗ; ಅನಾಚಾರವೇ ನರಕ’ ಎಂದು ಸ್ಪಷ್ಟವಾಗಿ ಆಚಾರದ ಮಹತ್ವವನ್ನು ಸಾರಿದ್ದಾರೆ. ಚನ್ನಬಸವಣ್ಣನವರು ಇಲ್ಲಿ ಐದು ಆಚಾರಗಳ ಒಟ್ಟು ನಿಲುವನ್ನು ಕೇವಲ ಒಂದು ವಚನದಲ್ಲಿ ಅತ್ಯಂತ ಸರಳವಾಗಿ ನಿರೂಪಿಸಿದ್ದಾರೆ.
‘ ಲಿಂಗವಲ್ಲದೆ ಅನ್ಯವನರಿಯದಿಹುದೆ ಲಿಂಗಾಚಾರ. ’ ಇದು ಚನ್ನಬಸವಣ್ಣನವರು ಲಿಂಗಾಚಾರಕ್ಕೆ ಹೇಳಿದ ಸೂತ್ರ. ಗುರುವಿನಿಂದ ಇಷ್ಟಲಿಂಗವನ್ನು ಧರಿಸಿದ ನಂತರ ಬೇರೆ ದೇವರ ಪೂಜೆಯ ಅವಶ್ಯಕತೆ ಭಕ್ತನಿಗೆ ಇಲ್ಲ ಎಂಬುದನ್ನು ಇಲ್ಲಿ ಹೇಳುತ್ತಾರೆ. ಇಷ್ಟಲಿಂಗವನ್ನು ಕಟ್ಟಿಕೊಂಡ ನಂತರವೂ ಗುಡಿ ಗುಂಡಾರಗಳಿಗೆ ಸುತ್ತುವುದು ಸಲ್ಲದ ಆಚಾರವೆನ್ನುತ್ತಾರೆ. ಧರ್ಮಸ್ಥಳ- ಮಂತ್ರಾಲಯಗಳಿಗೆ ಬಹಳಷ್ಟು ಜನ ಲಿಂಗಾಯತರೇ ಹೋಗುತ್ತಾರೆ. ಆ ದೇವಸ್ಥಾನಗಳ ಒಳಗೆ ಹೋಗುವ ಮೊದಲು, ತಮ್ಮ ಮೈಮೇಲಿನ ಬಟ್ಟೆಗಳನ್ನು ತೆಗೆಯಿಸುತ್ತಾರೆ. ಆಗ ಬಹಳಷ್ಟು ಜನರು ಕೊರಳಲ್ಲಿ ಲಿಂಗಧರಿಸಿದ್ದು ಗೋಚರಿಸುತ್ತದೆ, ಇದು ನಿಜವಾಗಿಯೂ ಲಿಂಗಾಯತರು ಆತ್ಮಾವಲೋಕನ ಮಾಡಿಕೊಳ್ಳುವ ಸಂದರ್ಭವೆಂದೇ ಹೇಳಬೇಕು. ಯಾವ ಶರಣರು ದೇವರಿಗೂ-ಭಕ್ತನಿಗೂ ದಲ್ಲಾಳಿ ಬೇಡವೆಂದು ಇಷ್ಟಲಿಂಗವನ್ನು ಕರುಣಿಸಿದ್ದರೋ, ಅದನ್ನು ಮರೆತು, ಮತ್ತೆ ದಲ್ಲಾಳಿಗಳ ಮೂಲಕವೇ ದೇವರ ದರ್ಶನ ಪಡೆಯುತ್ತೇವೆ ಎನ್ನುವರು ಚನ್ನಬಸವಣ್ಣನವರ ಈ ವಚನವನ್ನು ಮುಖ್ಯವಾಗಿ ಗಮನಿಸಬೇಕು. ಚನ್ನಬಸವಣ್ಣನವರು ಸೌಮ್ಯಸ್ವಭಾವದ ವ್ಯಕ್ತಿಗಳು ಅಂತೆಯೆ ಅವರು ಸೂಕ್ಷö್ಮವಾಗಿ ಲಿಂಗವನ್ನಲ್ಲದೆ ಬೇರೆ ದೈವಗಳನ್ನು ಆಶ್ರಯಿಸಬಾರದು ಎಂದು ಇಲ್ಲಿ ಹೇಳಿದ್ದಾರೆ, ಇದನ್ನೇ ಬಂಡಾಯದ ನೆಲೆಯಲ್ಲಿ ಅಂಬಿಗರ ಚೌಡಯ್ಯ ಶರಣರು ಎಡಪಾದ ರಕ್ಷೆಯಿಂದ ಲಟಲಟನೆ ಹೊಡೆಯೆಂದು ಎಂದು ಎಚ್ಚರಿಸಿದ್ದಾರೆ. ಪಂಚ ಆಚಾರಗಳಲ್ಲಿ ಲಿಂಗಾಚಾರಕ್ಕೆ ಮೊದಲ ಆದ್ಯತೆಯನ್ನು ಕೊಟ್ಟಿದ್ದಾರೆ.
‘ಝೀ’ ಕನ್ನಡ ವಾಹಿನಿಯಲ್ಲಿ ಒಮ್ಮೆ ಶಂಕರ ಬಿದರಿಯವರ ಸಂದರ್ಶನ ಕರ‍್ಯಕ್ರಮವಿತ್ತು. ಆಗ ಶಂಕರ ಬಿದರಿಯವರು ಒಂದು ಸಂಗತಿಯನ್ನು ಹೇಳಿದರು, ‘ತಾವು ಬೆಳಗಿನ ಜಾವ ಸ್ನಾನ ಮಾಡಿ, ಲಿಂಗವನ್ನು ಪೂಜಿಸಿ ಕರ್ತವ್ಯಕ್ಕೆ ಹಾಜರಾದರೆ, ನನ್ನ ಹತ್ತಿರವೇ ಬಾಂಬ್ ದಾಳಿ ನಡೆದರೂ ನಾನು ಹೆದರಲ್ಲ. ಅಂತಹ ಒಂದು ಆತ್ಮಶಕ್ತಿ ಈ ಲಿಂಗಪೂಜೆಯಿಂದ ಪ್ರಾಪ್ತವಾಗುತ್ತದೆ’ ಎಂದು ಅಭಿಮಾನದಿಂದ ಹೇಳಿದ್ದರು. ಇಂತಹ ಲಿಂಗನಿಷ್ಠೆಯನ್ನು ಪ್ರತಿಯೊಬ್ಬ ಲಿಂಗವಂತ ಸಾಧಕರು ಅಳವಡಿಸಿಕೊಳ್ಳಬೇಕೆಂಬುದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ.
‘ಸಜ್ಜನ ಕಾಯಕದಲ್ಲಿ ತಂದು ಗುರು-ಲಿಂಗ-ಜಂಗಮಕ್ಕೆ ನೀಡಿ ಸತ್ಯಶುದ್ಧ ನಾಗಿಹುದೆ ಸದಾಚಾರ .’ ಇದು ಸದಾಚಾರಕ್ಕೆ ನೀಡಿದ ಸೂತ್ರ. ಸತ್ ಆಚಾರ ಅಥವಾ ಸದಾ ಆಚಾರವೇ ಈ ಸದಾಚಾರ. ‘ಸದಾಚಾರ ಸದ್ಭಕ್ತಿ ಇಲ್ಲದವರನೊಲ್ಲನಯ್ಯ, ಅವರಾರಾಧನೆ ದಂಡ, ನಿಚ್ಚ ನಿಚ್ಚ ಪ್ರಾಯಶ್ಚಿತ್ತರನೊಲ್ಲ, ಕೂಡಲಸಂಗಮದೇವ ಭೂಭಾರಕರ’ ಎಂದು ಬಸವಣ್ಣನವರು ಒಂದೆಡೆ ಹೇಳುತ್ತಾರೆ. ಚನ್ನಬಸವಣ್ಣನವರು ಈ ಸದಾಚಾರತತ್ವದಲ್ಲಿ ‘ಉತ್ಪನ್ನ ಶೀಲ’, ‘ಆಚಾರಶೀಲ’, ‘ಉದ್ಯೋಗಶೀಲ’, ‘ಸಂಬಂಧಶೀಲ’, ‘ಉತ್ಕಲಶೀಲ’, ‘ಪ್ರಸನ್ನಶೀಲ’, ‘ಉತ್ತಮಶೀಲ’, ‘ಜ್ಞಾನಶೀಲ’ ಎಂದು ಎಂಟು ಬಗೆಯನ್ನು ಹೇಳಿದ್ದಾರೆ. ಇವುಗಳ ಪಾಲನೆಯಿಂದ ವ್ಯಕ್ತಿಯು ತನ್ನ ಉದ್ಯೋಗದಲ್ಲಿ ಎಂದಿಗೂ ಸೋಮಾರಿಯಾಗಲು ಸಾಧ್ಯವಿಲ್ಲ. ಆನಾಚಾರಿಯಾಗಲು ಸಾಧ್ಯವಿಲ್ಲ. ಸಜ್ಜನ ಕಾಯಕ ಮಾಡಿ, ಅದರಿಂದ ಬರುವ ಉತ್ಪನ್ನವನ್ನು ಗುರು-ಲಿಂಗ-ಜಂಗಮಕ್ಕೆ ನೀಡಿ ಸತ್ಯಶುದ್ಧನಾಗಿ ಬದುಕಬೇಕೆಂಬುದು ಚನ್ನಬಸವಣ್ಣನವರ ಆಶಯ. ಶರಣರು ಈ ಲೋಕಕ್ಕೆ ಕೊಟ್ಟ ಅಮೂಲ್ಯ ಕೊಡುಗೆಯಲ್ಲಿ ‘ಕಾಯಕ’ ಮತ್ತು ‘ದಾಸೋಹ’ ಎಂಬ ತತ್ವಗಳು ತುಂಬ ಮುಖ್ಯವಾಗಿವೆ. ಇಂದು ಕಾಯಕ ಮತ್ತು ದಾಸೋಹ ತತ್ವಗಳು ಕೇವಲ ವೇದಿಕೆ ಮೇಲೆ ಹೇಳುವ ಶಬ್ದಗಳಾಗಿವೆ. ಕಾಯಕಪ್ರಜ್ಞೆಯೇ ಇಂದು ಜನರಲ್ಲಿ ಕಡಿಮೆಯಾಗುತ್ತಿದೆ.
ತಂದೆ-ತಾಯಿ ಗಳಿಸಿದ ಆಸ್ತಿಯ ಮೇಲೆಯೇ ತಮ್ಮ ಬದುಕನ್ನು ಕಟ್ಟಿಕೊಳ್ಳಲು ನಮ್ಮ ಯುವಕರು ಹಾತೊರೆಯುತ್ತಿದ್ದಾರೆ. ವಿದೇಶಿ ಜನರ ಶರಣತತ್ವಾನುಕರಣೆ ಇಂದು ಮಾದರಿ ಎನಿಸುತ್ತದೆ. ಬಿಲ್ ಗೇಟ್ಸ್ ತನ್ನ ಸಮಸ್ತ ಆಸ್ತಿಯನ್ನು ಸಮಾಜಕ್ಕೆ ಕೊಡಮಾಡಿದರು. ಅದರಲ್ಲಿ ತಮ್ಮ ಮಕ್ಕಳಿಗೆ ಅವರಿಗೆ ಕೊಡಲಿಲ್ಲ ಎನ್ನುವುದು ಗಮನಿಸಬೇಕಾದ ಸಂಗತಿ. ಆತನ ಮಕ್ಕಳು ಕೂಡ ಅದಕ್ಕೆ ಆಸೆ ಪಡಲಿಲ್ಲ ಎನ್ನುವುದು ಇನ್ನೂ ಆಶ್ರ‍್ಯದ ಸಂಗತಿ. ನಿಜವಾದ ಕಾಯಕದಿಂದ ಬಂದ ಸಂಪಾದನೆಯಲ್ಲಿ ದಾಸೋಹ ಸೇವೆ ಮಾಡುವ ವ್ಯಕ್ತಿಗಳು ವಿರಳವಾಗಿದ್ದಾರೆ. ಶರಣರ ತತ್ವಗಳನ್ನು ಬಾಯಿ ಮಾತಿನಲ್ಲಿ ಹೇಳುವ ಅನೇಕರು, ನಿಜವಾದ ಆಚರಣೆಯಲ್ಲಿ ಅದನ್ನು ತರುತ್ತಿಲ್ಲ ಎನ್ನುವುದು ಅತ್ಯಂತ ಖೇದಕರ ಸಂಗತಿ. ಅಂತೆಯೆ ‘ಇಂದು ಹೇಳುವುದನ್ನೆಲ್ಲ ಹೇಳಿಯಾಗಿದೆ, ಅದರ ಆಚರಣೆ-ಅನುಷ್ಠಾನ ಮಾತ್ರ ಆಗಬೇಕಾಗಿದೆ’ ಎಂದು ಸಿದ್ಧೇಶ್ವರ ಸ್ವಾಮಿಗಳು ಹೇಳುತ್ತಿದ್ದ ಮಾತು ನಿಜವೆನಿಸುತ್ತದೆ.
‘ ಶಿವಭಕ್ತರಲ್ಲಿ ಕುಲ ಗೋತ್ರ ಜಾತಿ ವರ್ಣಾಶ್ರಮವನರಸದೆ ಅವರೊಕ್ಕುದ ಕೊಂಬುದೆ ಶಿವಾಚಾರ. ’ ಕಳೆದ ಐವತ್ತು ವರ್ಷಗಳ ಹಿಂದೆ ಲಿಂಗಾಯತ ಸಮುದಾಯವನ್ನು ಶಿವಾಚಾರದವರು ಎಂದು ಕರೆಯುತ್ತಿದ್ದರು. ಶಿವಾಚಾರ ಎಂದರೆ ಏನು ಎಂಬುದನ್ನು ಚನ್ನಬಸವಣ್ಣನವರು ತುಂಬ ಅರ್ಥಪೂರ್ಣವಾಗಿ ಇಲ್ಲಿ ಹೇಳಿದ್ದಾರೆ. ಶರಣರು ಕೊಟ್ಟ ಧರ್ಮವು ವೈದಿಕ ಧರ್ಮಕ್ಕಿಂತ ಭಿನ್ನವಾದುದು ಎಂಬುದಕ್ಕೆ ಈ ಸೂತ್ರವೇ ಪ್ರಮುಖ ಸಾಕ್ಷಿಯಾಗಿದೆ. ವೈದಿಕ ಅಥವಾ ಬ್ರಾಹ್ಮಣ ಧರ್ಮವು ವರ್ಣಾಶ್ರಮ ಪದ್ಧತಿಯನ್ನು ಅನುಸರಿಸುತ್ತದೆ. ಮನುಸ್ಮೃತಿಯಲ್ಲಿ, ಭಗವದ್ಗೀತೆಯಲ್ಲಿ ಈ ವರ್ಣಾಶ್ರಮದ ಚೌಕಟ್ಟನ್ನು ಕಟ್ಟಿಕೊಟ್ಟಿದ್ದಾರೆ. ಸ್ವತಃ ಕೃಷ್ಣನೇ ಈ ಚಾತುರ್ ವರ್ಣಗಳನ್ನು ನಾನೇ ಸೃಷ್ಟಿಸಿದ್ದೇನೆ ಎಂದು ಭಗವದ್ಗೀತೆಯಲ್ಲಿ ಹೇಳಿದ್ದಾನೆ. ವರ್ಣಾಶ್ರಮದ ವಿರುದ್ಧ ಭಾರತದಲ್ಲಿ ಅನೇಕ ಧರ್ಮಪಂಥಗಳು ಹುಟ್ಟಿಕೊಂಡವು, ನಾಥ-ಸಿದ್ಧ ಮೊದಲಾದ ಪಂಥಗಳಂತೆ ಲಿಂಗಾಯತವೂ ಈ ವರ್ಣಾಶ್ರಮ ಆಚರಣೆಯ ವಿರುದ್ಧವೇ ಅಸ್ತಿತ್ವಕ್ಕೆ ಬಂದ ಧರ್ಮವಾಗಿದೆ. ಯಾವ ಶರಣರು ಕುಲ ಜಾತಿ ಗೋತ್ರ ವರ್ಣಾಶ್ರಮದ ವಿರುದ್ಧ ಹೋರಾಡಿದ್ದರೋ, ಅವರ ಅನುಯಾಯಿಗಳೇ ಇಂದು ನೂರೊಂಟು ಜಾತಿ-ಉಪಜಾತಿಗಳನ್ನು ಸೃಷ್ಟಿಸಿಕೊಂಡು ಇಡೀ ಶರಣಸಿದ್ಧಾಂತಕ್ಕೆ ವಿರುದ್ಧವಾದ ನಡೆಯನ್ನು ಅನುಸರಿಸುತ್ತಿದ್ದಾರೆ. ಇಂದು ಬಹಳಷ್ಟು ಸಂಘ ಸಂಸ್ಥೆಗಳು ಶರಣರ ಹೆಸರಿನಲ್ಲಿ ಹುಟ್ಟಿಕೊಂಡಿವೆ. ಅವುಗಳಲ್ಲಿ ಒಂದೇ ಜಾತಿಯ ವ್ಯಕ್ತಿಗಳು ಪದಾಧಿಕಾರಿಗಳಾಗಿರುತ್ತಾರೆ. ಅದರಲ್ಲಿ ಅನ್ಯ ಜಾತಿಯ ವ್ಯಕ್ತಿಯನ್ನು ಸಮೀಪಕ್ಕೆ ಕೂಡ ಕರೆಯುವುದಿಲ್ಲ. ಲಿಂಗಧಾರಿಗಳು ಸಮಾನರು. ಇದು ಸಮಾನತೆ ಸಾರುವ ಧರ್ಮವೆಂದು ನಾವು ಎಷ್ಟೇ ಹೆಮ್ಮೆ ಅಭಿಮಾನದಿಂದ ಬರೆದುಕೊಂಡರೂ, ಅದು ಆಚರಣೆಯಲ್ಲಿ ಇಲ್ಲ ಎನ್ನುವುದನ್ನು ವಿಷಾದದಿಂದಲೇ ಹೇಳಬೇಕು. ಇಂದು ಪ್ರತಿಯೊಂದರಲ್ಲಿಯೂ ಜಾತಿ ಮುಖ್ಯವಾಗುತ್ತಿದೆ. ಜಾತಿಯ ಮಾನದಂಡದಿಂದಲೇ ವ್ಯಕ್ತಿಯ ಅಳತೆಗೋಲು ಸಿದ್ಧವಾಗುತ್ತಿದೆ.
ಲಿಂಗ ಕಟ್ಟಿಕೊಂಡರೆ ಸಮಾನತೆ ಸಿಗುತ್ತದೆ ಎನ್ನುವುದು ಶರಣಧರ್ಮ. ಆದರೆ ಅನ್ಯಧರ್ಮೀಯರು ಲಿಂಗಕಟ್ಟಿಕೊಳ್ಳಲು ಮುಂದಾದಾಗ ಲಿಂಗಾಯತರೇ ಉಗ್ರವಾಗಿ ಪ್ರತಿಭಟಿಸಿದ್ದರು ಎಂಬುದು ನಿಜಕ್ಕೂ ದುರಂತದ ಸಂಗತಿ. ಸಜ್ಜಲಗುಡ್ಡ ಶರಣಮ್ಮನವರು ಹಾಲುಮತ ಸಮಾಜದವರು ಎನ್ನುವ ಕಾರಣಕ್ಕೆ ಅವರು ಲಿಂಗ ದೀಕ್ಷೆ ಪಡೆದುಕೊಳ್ಳಲು ಹರಸಾಹಸ ಮಾಡಬೇಕಾಯಿತು. ಮೂರು ವರ್ಷಗಳ ಕಾಲ ಅವರು ಲಿಂಗವನ್ನು ಗುಪ್ತವಾಗಿ ಇಟ್ಟುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಕಡಕೋಳ ಮಡಿವಾಳಪ್ಪನವರು ಲಿಂಗದೀಕ್ಷೆ ಪಡೆಯಲು ಬಯಸಿದಾಗ ಲಿಂಗಾಯತ ಸಮುದಾಯ ಒಡ್ಡಿದ ಪ್ರತಿರೋಧ ನಿಜಕ್ಕೂ ಆತಂಕಕಾರಿ. ಶರಣಬಸವೇಶ್ವರರಿಗೆ ಬಹಿಷ್ಕಾರದ ಬಿಸಿ ಮುಟ್ಟಿಸಿದರು. ಕೊಲ್ಲಾಪುರದ ಶಾಹು ಮಹಾರಾಜರು ಇಷ್ಟಲಿಂಗ ಧರಿಸಲು ಮುಂದಾಗಿದ್ದರು. ಆದರೆ ಸಮಾಜ ಅದಕ್ಕೆ ಆಗ ಆಸ್ಪದ ನೀಡಲಿಲ್ಲ. ಹರ್ಡೇಕರ ಮಂಜಪ್ಪನವರು ಇಷ್ಟಲಿಂಗ ದೀಕ್ಷೆ ಪಡೆಯಲು ಮಾಡಿದ ಹೋರಾಟ ಅಷ್ಟಿಷ್ಟಲ್ಲ. ಆ ಕಾಲದಲ್ಲಿ ಗುರುಪೀಠದ ಸ್ವಾಮಿಗಳೇ ಲಿಂಗದೀಕ್ಷೆ ನೀಡಬೇಕೆಂಬ ನಿಯಮವಿತ್ತು. ಆದರೆ ಅಥಣಿ ಶಿವಯೋಗಿಗಳು ಹರ್ಡೇಕರ ಮಂಜಪ್ಪನವರಿಗೆ ಲಿಂಗದೀಕ್ಷೆ ನೀಡುವ ಪ್ರಸಂಗ ಬಂದಿತು. ಹೀಗೆ ಕುಲ ಗೋತ್ರ ಜಾತಿ ನೋಡದೇ ಲಿಂಗಧಾರಿಗಳನ್ನು ಒಂದು ಎಂಬ ಭಾವದಿಂದ ನೋಡಬೇಕೆಂದು ಚನ್ನಬಸವಣ್ಣನವರು ಈ ಶಿವಾಚಾರ ತತ್ವದ ಮೂಲಕ ಪ್ರತಿಪಾದಿಸಿದ್ದರೂ, ಇಂದಿಗೂ ಈ ಜಾತಿಯ ಅನಿಷ್ಟ ಕರಾಳ ಮುಖಗಳು ವಿಸ್ತಾರವಾಗುತ್ತಲೇ ಹೋಗುತ್ತಿವೆ.
‘ ಶಿವಾಚಾರದ ನಿಂದೆಯ ಕೇಳದಿಹುದೆ ಗಣಾಚಾರ .’ ಚನ್ನಬಸವಣ್ಣನವರು ಪ್ರತಿಪಾದಿಸಿದ ನಾಲ್ಕನೆಯ ಸೂತ್ರವಿದು. ನಮ್ಮ ಗ್ರಾಮೀಣ ಪ್ರದೇಶದಲ್ಲಿ ‘ಗಂಡ ಬಿಟ್ಟರೂ ಗಣಾಚಾರಿ ಬಿಡ’ ಎಂಬ ಗಾದೆ ಮಾತೊಂದಿದೆ. ಇದಕ್ಕೆ ಕೆಲವರು ಅಪಾರ್ಥ ಕಲ್ಪಿಸಿದ್ದಾರೆ. ವಾಸ್ತವವಾಗಿ ಇದರ ಅರ್ಥ ನಿಜವಾಗಿಯೂ ಬೇರೆಯಾಗಿದೆ. ಒಬ್ಬ ಹೆಣ್ಣುಮಗಳು ಬೇರೆ ಭವಿಯೊಡನೆ ಸಂಪರ್ಕ ಬೆಳೆಸಿ, ಅದನ್ನು ಅರಿತು ಅವಳ ಗಂಡನು ಅವಳನ್ನು ಬಿಡಬಯಸಿದರೂ ಬಿಟ್ಟರೂ ಗಣಾಚಾರಿ ಅವಳನ್ನು ಸಮಾಜದಿಂದ ಸಿಡಿದು ಹೊರಕ್ಕೆ ಹೋಗದಂತೆ ತಡೆದು ಅವಳಿಗೆ ತಕ್ಕ ವ್ಯವಸ್ಥೆ ಮಾಡಿ ಸಮಾಜದಲ್ಲಿಯೇ ಉಳಿಯುವಂತೆ ಮಾಡುತ್ತಾನೆ. ಈ ವಾಸ್ತವಾರ್ಥದಲ್ಲಿ ಈ ಗಾದೆ ಮೈದಾಳಿದೆ. ಸಮಾಜದಲ್ಲಿ ಈ ಆಚಾರಕ್ಕೆ ಮೀಸಲಾದವರ ಒಂದು ಗುಂಪು ಹಿಂದಿನ ಕಾಲದಲ್ಲಿತ್ತು. ಅವರ ಕರ್ತವ್ಯವೆಂದರೆ ಸಮಾಜದಿಂದ ಸಿದು ಹೊರಕ್ಕೆ ಯಾರೂ ಹೋಗದಂತೆ ಎಚ್ಚರಿಕೆ ವಹಿಸುವುದಾಗಿತ್ತು. ಇದನ್ನು ಇಂದಿನ ಮತಾಂತರಕ್ಕೆ ಹೋಲಿಸಬಹುದು. ಕಳೆದ ನೂರು ವರ್ಷಗಳ ಅವಧಿಯಲ್ಲಿ ಲಿಂಗಾಯತರು ತಮ್ಮ ಧರ್ಮಾಚರಣೆಗಳನ್ನು ಬಿಟ್ಟು ಯಾವ ಯಾವ ಪಂಥಕ್ಕೆ ಶರಣು ಹೋಗುತ್ತಿದ್ದರು ಎಂಬುದನ್ನು ಗಮನಿಸಿದಾಗ ಆಶ್ರ‍್ಯವೆನಿಸುತ್ತದೆ. ಲಿಂಗಾಯತರು ತಮ್ಮ ನಿಜ ಆಚರಣೆಗಳನ್ನು ಬಿಟ್ಟು ಕೆಲವರು ವಾರಕರಿಪಂಥವನ್ನು ಅನುಕರಿಸಿ, ಪಂಢರಪುರಕ್ಕೆ ಹೋಗಿ, ಬುಕ್ಕಾ ಹಚ್ಚಿಕೊಳ್ಳತೊಡಗಿದರು. ಇಂಚಗೇರಿ ಸಂಪ್ರದಾಯ, ದತ್ತವಾಡ ಸಂಪ್ರದಾಯ, ಆರೂಢ ಸಂಪ್ರದಾಯ ಮೊದಲಾದ ಅವಧೂತ ಸಂಪ್ರದಾಯಗಳ ಆಚರಣೆಗೆ ಜೋತು ಬಿದ್ದರು. ಕೆಲವರಂತೂ ಅರವಿಂದರ ಭಕ್ತರಾಗಿ ಪ್ರತಿವರ್ಷ ಪಾಂಡಿಚೇರಿಗೆ ಹೋಗತೊಡಗಿದರು. ಇತ್ತೀಚೆಗೆ ನಮ್ಮ ಯುವಕರು ಅಯ್ಯಪ್ಪಸ್ವಾಮಿ ಭಕ್ತರಾಗುತ್ತಿದ್ದಾರೆ. ಕೆಲವರು ಹೆಣ್ಣುಮಕ್ಕಳು ಬ್ರಹ್ಮಕುಮಾರಿ ಆಗುತ್ತಿದ್ದಾರೆ. ಮೌಂಟ್ ಅಬುದಲ್ಲಿ ಇರುವ ಬ್ರಹ್ಮಕುಮಾರಿಯರಲ್ಲಿ ಲಿಂಗಾಯತರ ಸಂಖ್ಯೆಯೇ ಹೆಚ್ಚಿದೆ. ಈಗ ಒಂದೆರಡು ವರ್ಷದಲ್ಲಿ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಸಮೀಪದ ಆದಮಾಪುರದಲ್ಲಿರುವ ಬಾಳುಮಾಮನ ಗುಡಿಗೆ ಲಿಂಗಾಯತರೇ ಹೆಚ್ಚು ಜನರು ಹೋಗುತ್ತಿದ್ದಾರೆ. ಹೀಗೆ ತಮ್ಮತನವನ್ನು ಮರೆತು, ಬೇರೆ ದೈವಕ್ಕೆ ಹೀಗೆ ಮೊರೆ ಹೋಗುವ ಜನರಲ್ಲಿ ಲಿಂಗಾಯತರೇ ಮುಂದು. ಇತರ ಧರ್ಮೀಯರಲ್ಲಿ ಇರುವ ಸ್ವಧರ್ಮನಿಷ್ಠೆ ನಮ್ಮ ಜನರಲ್ಲಿ ಕಾಣುವುದು ದುರ್ಲಭವಾಗಿದೆ. ಗಣಾಚಾರ ನಿಷ್ಠೆ ಪರಿಪಾಲಿಸಬೇಕಾದವರು ಅನ್ಯದೈವಗಳಿಗೆ ಹೆಚ್ಚು ವಾಲುತ್ತಿದ್ದಾರೆ. ನಿಜವಾದ ಗಣಾಚಾರಿಯೂ ತನ್ನ ಧರ್ಮ-ದೈವದ ಬಗ್ಗೆ ನಿಂದೆಯ ಮಾಡುವ ಜನರನ್ನು ಪ್ರತಿಭಟಿಸುವುದು, ಅದು ಆಗದಿದ್ದರೆ ಅಲ್ಲಿಂದ ಹೊರಟು ಹೋಗಬೇಕೆಂದು ಚನ್ನಬಸವಣ್ಣನವರು ಈ ಸೂತ್ರದಲ್ಲಿ ಹೇಳಿದ್ದಾರೆ. ಇಂದು ಗಣಾಚಾರ ಎಂದರೆ ಹೊಡೆದಾಟ ಬಡಿದಾಟ ಎಂಬುವ ಪರಿಕಲ್ಪನೆಯೂ ಬೆಳೆಯುತ್ತದೆ. ಸಾತ್ವಿಕವಾದ ಪ್ರತಿಭಟನೆಯನ್ನು ಈ ಗಣಾಚಾರ ತತ್ವ ನಮಗೆ ತಿಳಿಸುತ್ತದೆ.
‘ ಶಿವಶರಣರೆ ಹಿರಿಯರಾಗಿ ತಾನೆ ಕಿರಿಯನಾಗಿ ಭಯಭಕ್ತಿಯಿಂದ ಆಚರಿಸುವುದೆ ಭೃತ್ಯಾಚಾರ .’ ಇದು ಪಂಚಾಚಾರದ ಕೊನೆಯ ಸೂತ್ರ. ಈ ಭೃತ್ಯಾಚಾರ ತತ್ವಕ್ಕೆ ಬಸವಣ್ಣನವರ ನೂರಾರು ವಚನಗಳು ನಿದರ್ಶನವಾಗಿವೆ. ‘ಎನಗಿಂತ ಕಿರಿಯರಿಲ್ಲ; ಶಿವಭಕ್ತಿಗಿಂತ ಹಿರಿಯರಿಲ್ಲ’ ಎಂಬ ಉದಾತ್ತ ವಿನಯದ ಭಾವ ಬಸವಣ್ಣನವರದು. ಈ ಭೃತ್ಯಾಚಾರದ ತತ್ವವನ್ನು ಚನ್ನಬಸವಣ್ಣನವರು ಪ್ರಾಯೋಗಿಕವಾಗಿ ಜಾರಿಯಲ್ಲಿ ತಂದವರು. ಬಸವಣ್ಣನವರಿಗೆ ಆಗಾಗ ಅಹಂಕಾರ ತಲೆದೋರಿದಾಗ, ಭೃತ್ಯಾಚಾರದ ನಿಜತತ್ವವನ್ನು ತಿಳಿಸಿಕೊಟ್ಟವರು ಚನ್ನಬಸವಣ್ಣನವರು. ಅಲ್ಲಮ-ಸಿದ್ಧರಾಮರು ಕಲ್ಯಾಣದ ಮಹಾಮನೆಯ ಅಂಗಳಕ್ಕೆ ಬಂದು ನಿಂತಾಗ, ಬಸವಣ್ಣನವರು ಲಿಂಗಪೂಜೆ ಮಾಡಿಕೊಳ್ಳುತ್ತಿದ್ದರು. ಹಡಪದ ಅಪ್ಪಣ್ಣನವರು ವಿನಯದಿಂದ ಕರೆಯಲು ಬಂದಾಗ, ಅಲ್ಲಮರು ಸಿಟ್ಟಿಗೆದ್ದಾಗ, ಚನ್ನಬಸವಣ್ಣನವರೇ ಬಸವಣ್ಣನವರಿಗೆ ತಿಳಿ ಹೇಳಿ, ಅಲ್ಲಮರನ್ನು ವಿನಯದಿಂದ ಸ್ವಾಗತಿಸಿ ಎಂದು ಹೇಳುತ್ತಾರೆ. ಮಹಾಮನೆಯ ದಾಸೋಹದ ಸಮಸ್ತ ಆಹಾರವನ್ನೆಲ್ಲ ಅಲ್ಲಮರೊಬ್ಬರೇ ಆರೋಗಣೆ ಮಾಡಿದಾಗಲೂ ಚನ್ನಬಸವಣ್ಣನವರು ಬಸವಣ್ಣನವರಿಗೆ ವಿನಯದಿಂದ ಅಲ್ಲಮರಲ್ಲಿ ವಿನಂತಿಸಿಕೊಳ್ಳಲು ಹೇಳುತ್ತಾರೆ. ಹೀಗೆ ಹಿರಿತನದಲ್ಲಿ ಮಾವನಾದರೂ ಬಸವಣ್ಣನವರಿಗೆ ಈ ವಿನಯವಂತಿಕೆಯ ಮೌಲ್ಯಗಳನ್ನು ತಿಳಿಸಿ ಹೇಳುವ ಪ್ರಯತ್ನವನ್ನು ಚನ್ನಬಸವಣ್ಣನವರು ಮಾಡಿದರು ಎಂಬುದನ್ನು ನಾವು ಶೂನ್ಯಸಂಪಾದನೆಯ ಅನೇಕ ಪ್ರಸಂಗಗಳಲ್ಲಿ ಕಾಣುತ್ತೇವೆ. ಯಾರು ಬಾಗಿ ನಡೆಯುವುರೋ ಅವರು ಬದುಕಿನಲ್ಲಿ ಎತ್ತರದ ಸ್ಥಾನಕ್ಕೆ ಹೋಗುತ್ತಾರೆ ಎಂಬ ತತ್ವದ ಸಾಕಾರರೂಪವೇ ಈ ಭೃತ್ಯಾಚಾರವಾಗಿದೆ.
ಹೀಗೆ ಇಂತೀ ಪಂಚಾಚಾರವುಳ್ಳ ಪರಮಸದ್ಭಕ್ತರ ಒಕ್ಕುದನಿಕ್ಕಿ ಸಲಹಯ್ಯಾ ಪ್ರಭುವೆ, ಕೂಡಲಚೆನ್ನಸಂಗಮದೇವಾ ಎಂದು ಚನ್ನಬಸವಣ್ಣನವರು ಆಶಿಸುತ್ತಾರೆ. ಹೀಗೆ ಪಂಚಾಚಾರಗಳು ವ್ಯಕ್ತಿಯ ಆತ್ಮೋನ್ನತಿಯ ಜೊತೆಗೆ ಸಮಾಜ ಸಂಘಟನೆಯ ಮೂಲಸೂತ್ರಗಳಾಗಿಯೂ ರೂಪಿತಗೊಂಡಿವೆ.