ಪಂಚಾಚಾರ್ಯರ ಕೃತಕ ಪರಂಪರೆಯನ್ನು ಸೃಷ್ಟಿಸಿದ ವೀರಶೈವರ ಪ್ರಯತ್ನಗಳಲ್ಲಿ ಅನೇಕ ಗೊಂದಲಗಳಿವೆ. ಅವರ ಹೆಸರು, ಊರು, ಕಾಲ, ಚರಿತ್ರೆ ಯಾವುದರಲ್ಲೂ ಒಮ್ಮತವಿಲ್ಲ.
ಪಂಡಿತಾರಾಧ್ಯರು, ರೇವಣ ಸಿದ್ದರು ಬದುಕಿದ್ದು ೧೨ನೇ ಶತಮಾನದಲ್ಲಿ. ಆದರೆ ಮರುಳಸಿದ್ದರ ಮತ್ತು ಏಕೋರಾಮರ ಕಾಲ-ಚರಿತ್ರೆ ಅಸ್ಪ್ರಷ್ಠವಾಗಿದೆ. ವಿಶ್ವರಾಧ್ಯರ ಕಲ್ಪನೆ ಇನ್ನೂ ಗೊಂದಲಮಯ.
೧೨ನೇ ಶತಮಾನದ ಪ್ರಸಾದಿ ಭೋಗಣ್ಣನ ಎರಡು ವಚನಗಳು ಇವರ ಪ್ರಾಚೀನತೆಗೆ ಸಾಕ್ಷಿ ಎಂಬ ವಾದವಿದೆ. ಆದರೆ ಅವುಗಳಲ್ಲಿ ಮರುಳ ಸಿದ್ದ, ರೇವಣ ಸಿದ್ದರ ಹೆಸರುಗಳೇ ಇಲ್ಲ.
ಈ ಪರಂಪರೆಯ ಮುಂಚೂಣಿಯಲ್ಲಿ ಇದ್ದವರು ಆರಾಧ್ಯರು. ಆದರೆ ಚತುರಾಚಾರ್ಯ ಪುರಾಣದಲ್ಲಿ (ಕ್ರಿ ಶ 1498) ಅವರ ಗುರು ಪಂಡಿತಾರಾಧ್ಯರ ಬದಲು ಶಿವಲಂಕ ಮಂಚಣ್ಣರ ಹೆಸರಿದೆ.
ಪಂಚಾಚಾರ್ಯರು ಸ್ಥಾವರಲಿಂಗಗಳಿಂದ ಉದ್ಬವಿಸಿದರು ಎನ್ನುವುದು ಈ ಪರಂಪರೆಯ ಮುಖ್ಯ ನಂಬಿಕೆ. ಆದರೆ ಬೇರೆ ಬೇರೆ ಕೃತಿಗಳಲ್ಲಿ ಆಚಾರ್ಯರು ಬೇರೆ ಬೇರೆ ಲಿಂಗಗಳಿಂದ ಉದ್ಬವಿಸುತ್ತಾರೆ.
ಆಚಾರ್ಯರು ದೀಕ್ಷಾವಿಧಿಯಲ್ಲಿ ಬಳಸುವ ೫ ಕಳಸಗಳ ಪ್ರತಿನಿಧಿಗಳು. ಆದರೆ ಹರಿಹರ, ಪದ್ಮರಸ, ಲಕ್ಕಣ್ಣ ದಂಡೇಶ ಮುಂತಾದವರ ಕೃತಿಗಳಲ್ಲಿ ಈ ಕಳಸಗಳ ಹೆಸರು, ಕಾರ್ಯಾರ್ಥ, ಸಂಖ್ಯೆ ಕೂಡ ಬದಲಾಗುತ್ತವೆ.
(‘ಚತುರಾಚಾರ್ಯ ಪರಿಕಲ್ಪನೆಯ ಮೂಲ: ಸಾಧ್ಯತೆಗಳು’ ಲೇಖನದಿಂದ ಆಯ್ದ ಮತ್ತು ಸಂಕ್ಷಿಪ್ತಗೊಳಿಸಿರುವ ಭಾಗ – ಮಾರ್ಗ ೪)