ಭಕ್ತ ಶಾಂತನಾಗಿರಬೇಕು,
ತನ್ನ ಕುರಿತು ಬಂದ ಠಾವಿನಲ್ಲಿ ಸತ್ಯನಾಗಿರಬೇಕು,
ಭೂತಹಿತವಹ ವಚನವ ನುಡಿಯಬೇಕು,
ಗುರುಲಿಂಗ ಜಂಗಮದಲ್ಲಿ ನಿಂದೆಯಿಲ್ಲದಿರಬೇಕು
ಸಕಲ ಪ್ರಾಣಿಗಳ ತನ್ನಂತೆ ಭಾವಿಸೂದು ಮಾಡಬೇಕು,
ತನುಮನಧನವ ಗುರುಲಿಂಗ ಜಂಗಮಕ್ಕೆ ಸವೆಸಲೇಬೇಕು,
ಅಪಾತ್ರದಾನವ ಮಾಡಲಾಗದು,
ಸಕಲೇಂದ್ರಿಯಗಳ ತನ್ನ ವಶವ ಮಾಡಬೇಕು,
ಇದೇ ಮೊದಲಲ್ಲಿ ದೇಹ ಶೌಚ ನೋಡಾ.
ಲಿಂಗವ ಪೂಜಿಸಿ ಪ್ರಸಾದವ ಪಡೆವಡೆ
ಎನಗಿದೇ ಸಾಧನ ಕೂಡಲಚೆನ್ನಸಂಗಮದೇವಾ.
ಷಟ್ ಸ್ಥಲ ಸಿದ್ಧಾಂತದಲ್ಲಿ ಮೊದಲು ಬರುವುದೇ ಭಕ್ತಸ್ಥಲ. ಈ ಭಕ್ತಸ್ಥಲದ ಸೂತ್ರರೂಪದ ವ್ಯಾಖ್ಯಾನವನ್ನು ಚನ್ನಬಸವಣ್ಣನವರು ಮೇಲಿನ ವಚನದಲ್ಲಿ ತುಂಬ ಅರ್ಥಪೂರ್ಣವಾಗಿ ಕಟ್ಟಿಕೊಟ್ಟಿದ್ದಾರೆ. ಭಕ್ತನಾದವನ ಮನದಲ್ಲಿ ಅಶಾಂತಿ ಇರಬಾರದು. ತನ್ನ ಕುರಿತು ಏನೇ ಅಪವಾದಗಳು ಬಂದರೂ ಸತ್ಯದ ನಿಲುವನ್ನು ಬಿಡಬಾರದು. ಯಾವಾಗಲೂ ಲೋಕಕ್ಕೆ ಒಳಿತಾಗುವ ನುಡಿಗಳನ್ನೇ ಹೇಳಬೇಕು. ಗುರು ಲಿಂಗ ಜಂಗಮ ಈ ತ್ರಿವಿಧದಲ್ಲಿ ಭಕ್ತಿ ಶ್ರದ್ಧೆ ಇಡಬೇಕಲ್ಲದೆ, ನಿಂದೆಯನ್ನು ಮಾಡಬಾರದು. ಈ ಲೋಕದಲ್ಲಿ ಹುಟ್ಟಿದ ಪ್ರತಿಯೊಂದು ಪ್ರಾಣಿಗಳನ್ನು ತನ್ನಂತೆ ಭಾವಿಸಿ ನಡೆಯಬೇಕು. ತನ್ನಲ್ಲಿರುವ ತನು ಮನ ಧನಗಳನ್ನು ಗುರು ಲಿಂಗ ಜಂಗಮಕ್ಕೆ ಅರ್ಪಿಸಲೇಬೇಕು. ತಾನು ಗಳಿಸಿದ ಸಂಪತ್ತನ್ನು ಅಪಾತ್ರರಿಗೆ ದಾನ ಮಾಡಬಾರದು. ಎಲ್ಲಕ್ಕೂ ಮಿಗಿಲಾಗಿ ತನ್ನ ಎಲ್ಲ ಇಂದ್ರಿಯಗಳನ್ನು ತನ್ನ ವಶದಲ್ಲಿಯೇ ಇಟ್ಟುಕೊಂಡಿರಬೇಕು. ಒಂದೇ ಇಂದ್ರಿಯ ಹಾದಿ ತಪ್ಪಿದರೂ ಭಕ್ತನಾದವನ ಬದುಕು ಮೂರಾಬಟ್ಟೆಯಾಗುವುದು. ಆದ್ದರಿಂದ ಸಕಲ ಇಂದ್ರಿಯಗಳನ್ನು ತನ್ನ ಹದ್ದುಬಸ್ತಿನಲ್ಲಿಡಬೇಕೆಂದು ಹೇಳುತ್ತಾರೆ. ಇಷ್ಟೆಲ್ಲ ಆದ ನಂತರ ತನ್ನ ಶರೀರವನ್ನು ನಿತ್ಯ ನಿತ್ಯ ಸ್ನಾನಾದಿ ಮೂಲಕ ಸ್ವಚ್ಛ ಮಾಡುತ್ತಿರಬೇಕು. ಅದಾದ ತರುವಾಯ ಲಿಂಗವನ್ನು ಪೂಜಿಸಿ, ಪ್ರಸಾದ ಪಡೆದು ಕೊಳ್ಳುವುದೇ ತಮ್ಮ ಭಕ್ತ ಬದುಕಿನ ದೊಡ್ಡ ಸಾಧನೆ ಎಂದು ಚನ್ನಬಸವಣ್ಣನವರು ಇಲ್ಲಿ ವಿವರಿಸಿದ್ದಾರೆ.
ಭಕ್ತನಾದ ಬಳಿಕ ಭವಿಗಳ ಸಂಗವನ್ನು ಬಿಡಬೇಕು. ಮುಖ್ಯವಾಗಿ ಅನ್ಯದೈವದ ಭಜನೆಯನ್ನು ಮಾಡಬಾರದು. ನಾನಾ ಜನ್ಮಾಂತರಗಳಲ್ಲಿ ಮಾನವರಾಗಿ ಹುಟ್ಟಿ ಜಪದಿಂದ ತಪದಿಂದ ಧ್ಯಾನದಿಂದ ಸಮಾಧಿಯಿಂದ ದೇವರನ್ನು ಅರಿಯುತ್ತೇವೆ ಎಂದು ಬಳಲುವರ ಸಂಖ್ಯೆ ಹೆಚ್ಚಾಗಿದೆ. ಈ ಕ್ರಮಗಳಿಂದ ಲಿಂಗವನ್ನು ಎಂದೂ ಅರಿಯಬಾರದು, ಇದರಿಂದ ಯಾರೂ ಭಕ್ತರಾಗಲಾರದು ಎಂದು ಚನ್ನಬಸವಣ್ಣನವರು ತಮ್ಮ ಮತ್ತೊಂದು ವಚನದಲ್ಲಿ ಹೇಳುತ್ತಾರೆ.
ಪರುಷದ ಪರ್ವತದಲ್ಲಿ ಕಬ್ಬುನಂಗಳುಂಟೆ ಅಯ್ಯಾ?
ಅಷ್ಟವಿಧಾರ್ಚನೆ ಷೋಡಶೋಪಚಾರ ಸನ್ನಿಹಿತಂಗೆ
ಅವಗುಣಂಗಳುಂಟೆ ಅಯ್ಯಾ?
ಭಕ್ತಕಾಯ ಮಮಕಾಯ
ಕೂಡಲಚೆನ್ನಸಂಗಮದೇವ ನಿಮ್ಮ ಶರಣ.
ಭಕ್ತನಾದವನು ಮುಂದೆ ಶರಣನಾಗುತ್ತಾನೆ. ಪ್ರತಿನಿತ್ಯ ಇಷ್ಟಲಿಂಗವನ್ನು ಅಷ್ಟವಿಧಾರ್ಚನೆ (ಎಂಟು ವಿಧದ ಅರ್ಚನೆ), ಷೋಡಶೋಪಚಾರ (ಹದಿನಾರು ಬಗೆಯ ಉಪಚಾರ)ಗಳಿಂದ ಪೂಜಿಸುವವರಿಗೆ ಅವಗುಣವೆಂಬುದು ಇಲ್ಲ. ಪರುಷ ಮಣಿ ಕೇವಲ ಮುಟ್ಟಿದರೆ ಸಾಕು ಕಬ್ಬುನ ಬಂಗಾರವಾಗುವುದು. ಹೀಗೆ ಇಡೀ ಪರ್ವತದ ತುಂಬೆಲ್ಲ ಪರುಷ ಮಣಿಗಳೇ ತುಂಬಿರುವಾಗ ಅಲ್ಲಿ ಕಬ್ಬಿನದ ತುಂಡಾದರು ಸಿಗಲು ಸಾಧ್ಯವೆ. ಹಾಗೆಯೇ ತನ್ನ ದೇಹವನ್ನೆಲ್ಲ ಲಿಂಗಮಯ ಮಾಡಿಕೊಂಡಿರುವ ಭಕ್ತನಿಗೆ ಅವಗುಣವಿಲ್ಲ. ಆತ ಮುಂದೆ ನಿಜವಾಗಿಯೂ ಶರಣಸ್ಥಲಕ್ಕೆ ಸಲ್ಲುತ್ತಾನೆ ಎನ್ನುತ್ತಾರೆ ಚನ್ನಬಸವಣ್ಣನವರು.
ಭವಿತನಕ್ಕೆ ಹೇಸಿ ಭಕ್ತನಾದ ಬಳಿಕ
ಭವಿಯೊಡನೆ ಸಂಗವು ಭಂಗವೆಂದರಿಯರು.
ಭವಿಯೊಡನೆ ಸಂಗವ ಮಾಡುವರು
ಕೂಡಲಚೆನ್ನಸಂಗಯ್ಯಾ
ಅವರತ್ತಲೂ ಅಲ್ಲ-ಇತ್ತಲೂ ಅಲ್ಲ ಉಭಯ ಭ್ರಷ್ಟ.
ಕೆಲವರು ಇಷ್ಟಲಿಂಗವನ್ನು ಧರಿಸಿದ ನಂತರವೂ ಲಿಂಗಯೋಗದ ಸಾಧನೆ ಮಾಡದೆ ಉಭಯ ಭ್ರಷ್ಟರಾಗುವ ಪರಿಯನ್ನು ಮೇಲಿನ ವಚನದಲ್ಲಿ ವಿವರಿಸಿದ್ದಾರೆ. ಭವಿತನದ ಸಹವಾಸವೇ ಬೇಡವೆಂದು ಭಕ್ತನಾದ ಬಳಿಗೂ ಭವಿಗಳೊಡನೆ ಸಂಗವ ಮಾಡಿದರೆ ಅಂತವರು ಎಡಬಿಡಂಗಿಗಳು ಎನ್ನುತ್ತಾರೆ ಚನ್ನಬಸವಣ್ಣನವರು. ಅವರು ಅತ್ತಲೂ ಇಲ್ಲ, ಇತ್ತಲೂ ಇಲ್ಲ. ಅವರು ಉಭಯ ಭ್ರಷ್ಟರು ಎಂದು ಅವರ ನಿಲುವನ್ನು ಸ್ಪಷ್ಟವಾಗಿ ಖಂಡಿಸುತ್ತಾರೆ.
ಮಡಿಲಲ್ಲಿ ಸುತ್ತಿದ ಹಾವಿನಂತೆ ಮಡಿಲಲ್ಲಿ ಕಟ್ಟಿದಡೇನು?
ಕೊರಳಲ್ಲಿ ಸುತ್ತಿದ ಹಾವಿನಂತೆ ಕೊರಳಲ್ಲಿ ಕಟ್ಟಿದಡೇನು?
ಕಳವು ಹಾದರ ಭವಿಯ ಸಂಗ ಅನ್ಯದೈವವ ಬಿಡದನ್ನಕ್ಕ
ಲಿಂಗಭಕ್ತನೆನಿಸಲು ಬಾರದಯ್ಯ.
ಅನಾಚಾರ ಸಹಿತ ನರಕಿ, ಆಚಾರಸಹಿತ ಭಕ್ತ.
ಕೂಡಲಚೆನ್ನಸಂಗಯ್ಯನೊಲ್ಲ ಭೂಮಿಭಾರಕರ.
ಭಕ್ತನಂತೆ ನಟಿಸುವ ನಕಲಿ ವ್ಯಕ್ತಿಗಳ ಗುಣಾವಗುಣಗಳನ್ನು ಕುರಿತು ಚನ್ನಬಸವಣ್ಣನವರು ಇಲ್ಲಿ ತುಂಬ ವ್ಯಂಗ್ಯವಾಗಿ ಬರೆಯುತ್ತಾರೆ. ಇಷ್ಟಲಿಂಗವನ್ನು ಹಾವಿನಂತೆ ಕೊರಳಲ್ಲಿ ಕಟ್ಟಿದರೇನು? ಮಡಿಲಲ್ಲಿ ಕಟ್ಟಿದರೇನು? ಕಳವು ಮಾಡುವುದು, ಹಾದರ ಮಾಡುವುದು, ಭವಿಯ ಸಂಗ ಮಾಡುವುದು, ಅನ್ಯದೈವದ ಭಜನೆ ಮಾಡುವುದು ಇವೆಲ್ಲ ಲಿಂಗಭಕ್ತನ ನಿಜವಾದ ಲಕ್ಷಣಗಳಲ್ಲ ಎನ್ನುತ್ತಾರೆ. ಇಂತವರನ್ನು ಅನಾಚಾರ ಸಹಿತ ನರಕಿಗಳು; ಆಚಾರಸಹಿತ ಭಕ್ತರಾಗಿರುತ್ತಾರೆ. ಇಂತಹ ಭೂಮಿಗೆ ಭಾರವಾದ ಭಕ್ತರನ್ನು ದೇವರನ್ನು ಒಪ್ಪಲಾರನು ಎಂದು ಹೇಳುತ್ತಾರೆ.
ಭಕ್ತನಾದವನಿಗೆ ಯಾವುದೇ ಉಪಾಧಿಗಳಿರಬಾರದು ಎಂಬುದು ಚನ್ನಬಸವಣ್ಣನವರ ಅಭಿಪ್ರಾಯ. ತನುವಿಲ್ಲದ ಭಕ್ತ, ಮನವಿಲ್ಲದ ಭಕ್ತ, ಧನವಿಲ್ಲದ ಭಕ್ತ, ಪಂಚೇಂದ್ರಿಯ ಸುಖವಿಲ್ಲದ ಭಕ್ತ, ಕಾಲವಿಲ್ಲದ ಭಕ್ತ, ಕರ್ಮವಿಲ್ಲದ ಭಕ್ತ, ಕಲ್ಪಿತವೆಂಬುದನರಿಯದ ಭಕ್ತ, ಅಶನವನರಿಯದ ಭಕ್ತ, ವ್ಯಸನವನರಿಯದ ಭಕ್ತ, ಹುಸಿ ನುಸುಳು ಅರಿಷಡ್ವರ್ಗಂಗಳನರಿಯದ ಭಕ್ತ, ಲಿಂಗಕ್ಕೆ ಆಧಾರ ಭಕ್ತ, ಜಂಗಮಕ್ಕೆ ಆಧಾರ ಭಕ್ತ, ಪ್ರಸಾದಕ್ಕೆ ಆಧಾರ ಭಕ್ತ, ಇಂತಹ ಭಕ್ತರನ್ನು ಕೂಡಲಚೆನ್ನಸಂಗಯ್ಯನಲ್ಲಿ ನನ್ನ ತಂದೆ ತಾಯಿಗಳು ಎಂದು ಗೌರವಿಸುತ್ತೇನೆ ಎನ್ನುತ್ತಾರೆ.
ನಿಮ್ಮ ಭಕ್ತಂಗೆ ಮಲತ್ರಯವಿಲ್ಲ;
ಅದೇನು ಕಾರಣವೆಂದಡೆ;
ತನುವ ಸದಾಚಾರಕ್ಕರ್ಪಿಸಿ,
ಮನವ ಮಹಾಲಿಂಗಭಾವದಲಿರಿಸಿ,
ಧನವ ನಿಮ್ಮ ಶರಣರ
ದಾಸೋಹಕ್ಕೆ ಸವೆಯಬಲ್ಲವನಾಗಿ.
ಇಂತೀ ತ್ರಿವಿಧವ ತ್ರಿವಿಧಕ್ಕೆ ಕೊಟ್ಟ ಬಳಿಕ
ಆ ಭಕ್ತನ ತನು ನಿರ್ಮಲ, ಆ ಭಕ್ತನ ಮನ ನಿಶ್ಚಿಂತ,
ಆ ಭಕ್ತನ ಧನ ನಿರ್ವಾಣ,
ಇಂತಪ್ಪ ಭಕ್ತ ಪ್ರಸಾದಕಾಯನಯ್ಯಾ,
ಕೂಡಲಚೆನ್ನಸಂಗಮದೇವಾ.
ನಿಜವಾದ ಭಕ್ತನಾದವನಿಗೆ ಆಣವ, ಮಾಯಾ, ಕಾರ್ಮಿಕ ಮಲಗಳ ಬಾಧೆಯಿಲ್ಲ. ಯಾಕೆಂದರೆ ಆತ ತನ್ನ ದೇಹವನ್ನು ಸದಾಚಾರಕ್ಕೆ ಅರ್ಪಿಸಿಕೊಂಡಿರುತ್ತಾನೆ. ಮನಸ್ಸನ್ನು ಮಹಾಲಿಂಗದ ಭಾವದಲ್ಲಿರಿಸಿರುತ್ತಾನೆ. ತಾನು ಗಳಿಸಿದ ಸಂಪತ್ತು ಧನ ಕನಕಾದಿಗಳನ್ನು ಶರಣರ ದಾಸೋಹಕ್ಕೆ ಸಲ್ಲಿಸಬಲ್ಲವನಾಗಿರುತ್ತಾನೆ. ಹೀಗೆ ಗುರು ಲಿಂಗ ಜಂಗಮಕ್ಕೆ ತನ್ನದೆಲ್ಲವನ್ನು ಸಮರ್ಪಿಸುವ ಭಕ್ತನ ಶರೀರ ನಿರ್ಮಲವಾಗುತ್ತದೆ. ಆ ಭಕ್ತನ ಮನಸ್ಸು ನಿಶ್ಚಿಂತ ನಿರಾಳವಾಗುತ್ತದೆ. ಅಷ್ಟೇ ಅಲ್ಲ ಆ ಭಕ್ತನ ಧನ ನಿರ್ವಾಣ ಹೊಂದುತ್ತದೆ. ಇಂತಹ ಭಕ್ತರ ಕಾಯ(ದೇಹ) ಅದು ಪ್ರಸಾದಕಾಯವಾಗಿ ಪರಿಣಮಿಸುತ್ತದೆ ಎನ್ನುತ್ತಾರೆ ಚನ್ನಬಸವಣ್ಣನವರು.
ಹೀಗೆ ತನು-ಮನ-ಧನಗಳನ್ನು ಗುರು ಲಿಂಗ ಜಂಗಮಕ್ಕೆ ಅರ್ಪಿಸುವುದೇ ನಿಜವಾದ ಭಕ್ತನ ಲಕ್ಷಣವಾಗಿದ್ದರೂ ಅದನ್ನು ಅರ್ಪಿಸುವ ವಿಧಾನದಲ್ಲಿ ಸತ್ಯಶುದ್ಧನಾಗಿರಬೇಕೆಂದು ಮತ್ತೊಂದು ವಚನದಲ್ಲಿ ಚನ್ನಬಸವಣ್ಣನವರು ಹೀಗೆ ವಿವರಿಸುತ್ತಾರೆ:
ತನು ಮನ ಬಳಲದೆ ಉದ್ದಂಡವೃತ್ತಿಯಲ್ಲಿ ಧನವ ಗಳಿಸಿ ತಂದು,
ಗುರುಲಿಂಗಜಂಗಮಕ್ಕೆ ವೆಚ್ಚಿಸಿ, ದಾಸೋಹವ ಮಾಡಿ,
ಭಕ್ತರಾದೆವೆಂಬವರನೆನಗೆ ತೋರದಿರಯ್ಯಾ.
ಅದೇಕೆಂದರೆ: ಅವ ಪರಧನ ಚೋರಕ; ಅವ ಪಾಪಿ,
ಅವಗೆ ವಿಚಾರಿಸದೆ ಉಪದೇಶವ ಕೊಟ್ಟ
ಗುರುವಿಂಗೆ ರೌರವ ನರಕ.
ಅವನ ಕಾಯಕವ ವಿಚಾರಿಸದೆ ಅವರ ಮನೆಯಲ್ಲಿ ಹೊಕ್ಕು
ಲಿಂಗಾರ್ಚನೆಯ ಮಾಡುವ ಜಂಗಮಕ್ಕೆ ಏಳನೆಯ ಪಾತಕ.
ಇಂತಹರ ಬದುಕು, ಹುಲಿ ಕಪಿಲೆಯ ತಿಂದು
ಮಿಕ್ಕುದ ನರಿ ಬಂದು ತಿಂಬಂತೆ ಕಾಣಾ.
ಕೂಡಲಚೆನ್ನಸಂಗಮದೇವಾ.
ತನ್ನ ಶರೀರವನ್ನು ದಂಡಿಸದೆ, ಮನಸ್ಸನ್ನು ಕ್ರಿಯಾಮಥನ ಮಾಡದೆ, ಯಾರಿಗೋ ಮೋಸ ಮಾಡಿ ಗಳಿಸಿದ ಸಂಪತ್ತನ್ನು ತಂದು ಗುರು ಲಿಂಗ ಜಂಗಮಕ್ಕೆ ದಾಸೋಹ ರೂಪದಲ್ಲಿ ಕೊಡುವ ಭಕ್ತರ ಮುಖವನ್ನು ನನಗೆ ತೋರಿಸಬೇಡಿ ಎನ್ನುತ್ತಾರೆ ಚನ್ನಬಸವಣ್ಣನವರು. ಅಂತಹ ಭಕ್ತನನ್ನು ಕಠೋರವಾದ ಶಬ್ದಗಳಿಂದ ಟೀಕಿಸುತ್ತಾರೆ. ಅಂತಹ ಭಕ್ತ ಪರಧನ ಚೋರ, ಪಾಪಿಯಾಗುತ್ತಾನೆ. ಇಂತಹ ಪಾಪಿ ಚೋರ ಶಿಷ್ಯನಿಗೆ ಅನುಗ್ರಹ ನೀಡಿ, ಲಿಂಗದೀಕ್ಷೆ ಕೊಟ್ಟ ಗುರುವಿಗೂ ರೌರವ ನರಕ ಪ್ರಾಪ್ತಿಯಾಗುವುದು ಎನ್ನುತ್ತಾರೆ. ಅಂತಹ ದುಷ್ಟ ಭಕ್ತನ ಪೂರ್ವಾಪರವನ್ನು ವಿಚಾರಿಸದೆ, ಆತನ ಮನೆಗೆ ಹೋಗಿ ಲಿಂಗಾರ್ಚನೆ ಮಾಡಿಕೊಳ್ಳುವ ಜಂಗಮರಿಗೆ ಏಳನೆಯ ಪಾತಕ (ಸಪ್ತಪಾತಕಗಳಲ್ಲಿ ಒಂದು) ತಟ್ಟುವುದು. ಇಂತಹವರ ಬದುಕು ಹೇಗಾಗುವುದು ಎಂದರೆ, ಹುಲಿ ಬಂದು ಆಕಳನ್ನು ತಿಂದು, ಉಳಿದುದನ್ನು ನರಿ ಬಂದು ತಿಂದಂತೆ ಆಗುವುದು. ಅದಕ್ಕಾಗಿ ಭಕ್ತನಾದವನ ಪೂರ್ವಾಪರವನ್ನು ವಿಚಾರಿಸಿ, ದೀಕ್ಷೆ ನೀಡಬೇಕಾದುದು ಗುರುವಿನ ಕರ್ತವ್ಯವಾಗಿದೆ ಎಂದು ಚನ್ನಬಸವಣ್ಣನವರು ಹೇಳುತ್ತಾರೆ.
ಚನ್ನಬಸವಣ್ಣನವರು ಮತ್ತೊಂದು ಮಹತ್ವದ ವಿಷಯದತ್ತ ನಮ್ಮ ಗಮನ ಸೆಳೆಯುತ್ತಾರೆ- ಭಕ್ತನಾದವನಿಗೆ ಹುಟ್ಟಿದ ಮಗನಿಗೂ ಲಿಂಗಧಾರಣೆ ಅವಶ್ಯಕತೆ ಇದೆ ಎನ್ನುತ್ತಾರೆ. ಅಪ್ಪ ಭಕ್ತನಾಗಿದ್ದಾನೆ, ಆದರೆ ಮಗ ಭಕ್ತನೆನಿಸಿಕೊಳ್ಳಬೇಕಾದರೆ ಆತನೂ ಲಿಂಗಧಾರಣೆ ಮಾಡಿಕೊಳ್ಳಲೇ ಬೇಕು ಎನ್ನುತ್ತಾರೆ. ಇಂದು ಎಷ್ಟೋ ಜನರು ತಾವು ಮನೆಯಲ್ಲಿ ಲಿಂಗಪೂಜೆ ಮಾಡಿಕೊಂಡರೂ ಮಕ್ಕಳು ಪ್ರಬುದ್ಧರಾಗಿದ್ದಾರೆ ಹೀಗಾಗಿ ಅವರ ಇಚ್ಛೆಯಂತೆ ಬದುಕುತ್ತಿದ್ದಾರೆ ಎಂದು ಹೇಳುತ್ತಾರೆ. ಅದನ್ನೇ ಚನ್ನಬಸವಣ್ಣನವರು ‘ಹುಟ್ಟಿದ ಮಕ್ಕಳು ಪ್ರಬುದ್ಧರಾದರಲ್ಲದೆ ಲಿಂಗಸಾಹಿತ್ಯವ ಮಾಡಲಾರದೆಂಬ ಯುಕ್ತಿಶೂನ್ಯರ ನುಡಿಯ ಕೇಳಲಾಗದು… ಅಂತವರನ್ನು ವ್ರತಗೇಡಿಗಳೆಂಬೆ’ ಎಂದು ಖಂಡಿಸುತ್ತಾರೆ.
ಲಿಂಗಯೋಗದಲ್ಲಿ ಮನಮಗ್ನವಾದ ಭಕ್ತನ ಭಕ್ತಿಯ ಚಮತ್ಕೃತಿಯನ್ನು ಕುರಿತು ಚನ್ನಬಸವಣ್ಣನವರು ತುಂಬ ಅರ್ಥಪೂರ್ಣವಾದ ವಚನವೊಂದನ್ನು ಹೇಳುತ್ತಾರೆ.
ಹಸಿವು ತೃಷೆ ನಿದ್ರೆ ರೋಗಾದಿ ಬಾಧೆಗಳು
ತನಗಾಗುತ್ತಿಹವೆಂಬ ಜೀವಭಾವವ ಮರೆದು,
ಅವು ಲಿಂಗದ ಸದಿಚ್ಛೆಯಿಂದ ಅಂಗಕ್ಕುಂಟಾಗಿಹವೆಂಬ
ಶಿವಭಾವವು ಸದಾಸನ್ನಿಹಿತವಾಗಿದ್ದಡೆ
ಶರಣನ ಹಸಿವು ತೃಷೆ ಮುಂತಾದ ಸರ್ವಭಂಗವು
ಲಿಂಗದಲ್ಲಿ ಲೀನವಾಗಿ, ಹುಟ್ಟುಗೆಟ್ಟು, ಸಾವಿನಸಂತಾಪವಿಲ್ಲದೆ
ನಾನು ನನ್ನದೆಂಬಹಂಕಾರ ಮಮಕಾರಗಳು ಮರೆಮಾಚಿ
ಸಂಚಿತ ಆಗಾಮಿ ಪ್ರಾರಬ್ಧವೆಂಬ ಕರ್ಮತ್ರಯ ಮುಂತಾದ
ಪಾಶಗಳು ನಾಶವಾಗಿ, ನಿತ್ಯಮುಕ್ತಿಯಾಗುತ್ತಿಹುದಯ್ಯಾ.
ಕೂಡಲಚೆನ್ನಸಂಗಮದೇವಾ,
ಇದು ನಿಮ್ಮ ಭಕ್ತಿದೇವತೆಯ ಚಮತ್ಕೃತಿಯೆಂದರಿದೆನು.
ನಿಜಭಕ್ತನಾದವನಿಗೆ ಹಸಿವು ತೃಷೆ ನಿದ್ರೆ ರೋಗಾದಿಗಳ ಬಾಧೆಗಳು ಕಾಡಲಾರವು. ಸಿದ್ಧಗಂಗೆಯ ಶಿವಕುಮಾರ ಸ್ವಾಮಿಗಳು, ನಾಗನೂರು ರುದ್ರಾಕ್ಷಿಮಠದ ಶಿವಬಸವ ಮಹಾಸ್ವಾಮಿಗಳು, ಮುರುಗೋಡ ಮಹಾಂತ ಶಿವಯೋಗಿಗಳು ಶತಾಯುಷಿಗಳಾಗಿದ್ದರು. ಅವರು ಕೇವಲ ಮೂರು ಗಂಟೆ ಮಾತ್ರ ನಿದ್ರೆ ಮಾಡುತ್ತಿದ್ದರು. ರಾತ್ರಿ ಎರಡು-ಮೂರು ಗಂಟೆಗೆ ಏಳುತ್ತಿದ್ದರು. ಲಿಂಗಯೋಗದಲ್ಲಿ ಮಗ್ನರಾಗುತ್ತಿದ್ದರು. ಅಂತೆಯೇ ಅವರು ಶಿವಯೋಗದ ಪರಮ ಸ್ಥಿತಿಯನ್ನು ತಲುಪಿದರು. ಅಂತಹ ಸ್ಥಿತಿ ಸಾಧ್ಯವಾಗಬೇಕಾದರೆ, ಸಾಧನಾಪಥದಲ್ಲಿ ಸಾಗಬೇಕು. ಭಕ್ತಸ್ಥಲದಲ್ಲಿ ದೇವನಿಗಾಗಿ ಸದಾ ಹಂಬಲಿಸುತ್ತಿರಬೇಕು. ಲಿಂಗಯೋಗದಲ್ಲಿ ಲೀನವಾದ ಭಕ್ತನಿಗೆ ಮತ್ತೆ ಹುಟ್ಟು ಸಾವುಗಳ ಭವಚಕ್ರದ ಬಾಧೆಯಿಲ್ಲ. ಸಾವಿನ ಸಂತಾಪವಿಲ್ಲ. ಆತನಲ್ಲಿರುವ ನಾನು ನನ್ನದೆಂಬ ಅಹಂಕಾರ ಮಮಕಾರಗಳು ಮರೆಯಾಗಿಬಿಡುತ್ತವೆ. ಸಂಚಿತ ಆಗಾಮಿ ಪ್ರಾರಬ್ಧ ಎನ್ನುವ ಕರ್ಮತ್ರಯಗಳು ನಾಶವಾಗುತ್ತವೆ. ಅಂತೆಯೆ ಆ ಭಕ್ತ ನಿಜವಾಗಿಯೂ ನಿತ್ಯಮುಕ್ತನಾಗುತ್ತಾನೆ ಇದು ದೇವರ ಭಕ್ತಿಶಕ್ತಿಯ ಚಮತ್ಕಾರವೆಂದು ಚನ್ನಬಸವಣ್ಣನವರು ಇಲ್ಲಿ ವಿವರಿಸುತ್ತಾರೆ.
ಅನ್ನವನಿಕ್ಕಿದರೆ ಪುಣ್ಯವಹುದು, ವಸ್ತ್ರವ ಕೊಟ್ಟರೆ ಧರ್ಮವಹುದು,
ಹಣವ ಕೊಟ್ಟರೆ ಶ್ರೀಯಹುದು.
ತ್ರಿಕರಣ ಶುದ್ಧವಾಗಿ ನೆನದರೆ ಮುಕ್ತಿಯಹುದು,
ಕೂಡಲಚೆನ್ನಸಂಗಯ್ಯನಲ್ಲಿ ವಾಯುವಶದಿಂದ ತರುಗಳಲ್ಲಾಡುವವು,
ಭರತವಶದಿಂದ ಮೃದಂಗಾದಿಯಾದ ಪಟಹ ನುಡಿವವು,
ಕೂಡಲಚೆನ್ನಸಂಗಯ್ಯಾ, ಲಿಂಗವಶದಿಂದ ಶರಣ ಮಾತಾಡುವ.
ಕಾಯಾ ವಾಚಾ ಮನಸಾ ನೆನೆದರೆ ಮುಕ್ತಿ ದೊರಕುವುದೆಂದು ಲಿಂಗವಶದಿಂದ ಶರಣರ ಅನುಗ್ರಹ ಲಭಿಸುವುದಾಗಿ ಅನೇಕ ಲೌಕಿಕ ಉದಾಹರಣೆಗಳಿಂದ ಮನಸ್ಸು ಒಪ್ಪುವಂತೆ ಹೇಳಿದ್ದಾರೆ.
ದೇವರು ಎಲ್ಲರಲ್ಲಿ ಅವ್ಯಕ್ತವಾಗಿ ಹುದುಗಿದ್ದಾನೆ ಎನ್ನುವ ಭಾವ ಈ ವಚನದಲ್ಲಿದೆ.
ಫಲದೊಳಗಣ ಮಧುರಗೋಪ್ಯದಂತಿದ್ದಿತ್ತು,
ಚಂದ್ರಕಾಂತದ ಉದಕದ ತೆರನಂತಿದ್ದಿತ್ತು,
ಮಯೂರನ ತತ್ತಿಯ ಚಿತ್ರದಂತಿದ್ದಿತ್ತು,
ಶಿಶುಕಂಡ ಕನಸಿನ ಪರಿಯಂತಿದ್ದಿತ್ತು,
ಕೂಡಲಚೆನ್ನಸಂಗಯ್ಯಾ (ನಿಮ್ಮ ನಿಲವು)
ಸದ್ಗುರುಚಿತ್ತದ ಪದದಂತಿದ್ದಿತ್ತು.
ಹಣ್ಣು-ರುಚಿ, ಚಂದ್ರಕಾಂತ ಶಿಲೆ-ಜಲ, ನವಿಲಿನ ತತ್ತಿ-ರಸ, ಶಿಶು-ಕನಸು ಬೇರ್ಪಡದಂತೆ ಅಗೋಚರವಾಗಿ ಇರುವ ಹಾಗೆ ಮಾನವನಲ್ಲಿ ದೈವೀಶಕ್ತಿ ಗುಪ್ತವಾಗಿದೆ. ಇಂಥ ಗುಪ್ತವಾಗಿರುವ ಚಿದ್ವಸ್ತು (ದೈವೀಶಕ್ತಿ) ಪ್ರಕಟವಾಗುವ ವಿಧಾನವು ಕೆಳಗಿನ ವಚನದಲ್ಲಿ ತಿಳಿಯುವುದು.
ಘಟದೊಳಗಿದ್ದ ಪದಾರ್ಥವು,
ಆ ಘಟದ ಹೊರಗೆ ಉರಿಯ ಹತ್ತಿಸಿದಲ್ಲದೆ ಪರಿಪಕ್ವವಾಗದು.
ಹಾಗೆ_ಅಂತರಂಗದಲಿರ್ದ ಚಿದ್ವಸ್ತು ಸಂಸ್ಕಾರ ಬಲದಿಂದ
ಹೊರಹೊರಟಲ್ಲದೆ,
ಅಂತರಂಗದಲಿರ್ದ ಭವರೋಗ ಮಾಣದು.
ಇದು ಕಾರಣ, ಕೂಡಲಚೆನ್ನಸಂಗಮದೇವಾ.
ಅರ್ಚನ, ಅರ್ಪಣ ಅನುಭಾವಾದಿಗಳಿಂದ ನೀವು ಪ್ರಕಟಗೊಳ್ಳುವಿರಾಗಿ
ಪಾತ್ರೆಯಲ್ಲಿಟ್ಟ ಆಹಾರಧಾನ್ಯ ಹೊರಗೆ ಉರಿ ಹಚ್ಚಿದಾಗ ಬೆಂದು ಆಹಾರವಾಗುವ ತೆರದಲ್ಲಿ ಬೆಂದು ಚಿದ್ವಸ್ತು (ದೈವೀಶಕ್ತಿ) ತಾನೆ ಹೊರಹೊಮ್ಮದೆ ಪೂಜೆ, ಧ್ಯಾನ ಅನುಭಾವಗಳಿಂದ ಮಾತ್ರ ಪ್ರಕಟವಾಗುವುದು.
ಲಿಂಗಾಯತ ಧರ್ಮದ ಮೂಲ ಕೇಂದ್ರ ಶಕ್ತಿಯಾಗಿ ಇಷ್ಟಲಿಂಗದ ಪರಿಕಲ್ಪನೆ ಮಾಡಲಾಗಿದೆ. ಅಂಗಕ್ಕೂ ಲಿಂಗಕ್ಕೂ ಅವಿನಾಭಾವ ಸಂಬಂಧವಿದೆ.
ಪರಬೊಮ್ಮವೆ ಶರಣನ ಶಿರದರಮನೆಯಿಂದ ಕರದರಮನೆಗೆ
ಗುರುಕೃಪೆಯಿಂದ ಲಿಂಗಮೂರ್ತಿಯಾಗಿ ಬಿಜಯಂಗೈದಿರ್ಪುದು ಕಂಡಾ !
ಅದು ಕಾರಣ ಶರಣಂಗೆಯೂ ಲಿಂಗಕ್ಕೆಯೂ
ಭೇದಾಭೇದ ಸಂಬಂಧವಿರ್ಪುದು ಕಂಡಾ !
ಈ ಗೊತ್ತನರಿಯದೆ ಯುಕ್ತಿಗೆಟ್ಟ ಮನುಜರು,
ಲಿಂಗವು ಕೈಲಾಸದ ಶಿವನ ಕುರುಹಾದುದರಿಂದ ಪೂಜ್ಯವೆಂಬರು;
ಶರಣನು ಮನುಜನಾದುದರಿಂದ ಅವನು ಪೂಜಕನೆಂಬರು.
ಇಂತೀ ಕೇವಲ ಭೇದಸಂಬಂಧವ ಕಲ್ಪಿಸುವ ಭವಭಾರಿಗಳು
ಶಿವಾದ್ವೈತಕ್ಕೆ ದೂರವಾಗಿಪ್ಪರು ಕಂಡಾ !
ಅರೆಯರುವಿನ ನರಜೀವಿಗಳು ಶರಣರ ಸಾಮರಸ್ಯಕ್ಕೆ ಹೊರಗಾಗಿರ್ಪರು
ಕಂಡಾ, ಕೂಡಲಚೆನ್ನಸಂಗಮದೇವಾ !
ಲಿಂಗಾಯತರ ಕಲ್ಪನೆಯ ಲಿಂಗ, ಕೈಲಾಸದ ಶಿವನ ಕುರುಹಾದ ಸ್ಥಾವರಲಿಂಗವಲ್ಲ. ಆದರೆ ಗುರು ದೀಕ್ಷೆಯಿಂದ ನಮ್ಮಲ್ಲಿರುವ ದೇವಚೈತನ್ಯವನ್ನು ಲಿಂಗದಲ್ಲಿ ಸ್ಥಾಪಿಸಿ ಇಷ್ಟಲಿಂಗವನ್ನಾಗಿ ನಮಗೆ ಕರುಣಿಸುತ್ತಾನೆ. ಸ್ಥಾವರಲಿಂಗ ಪೂಜೆ ದ್ವೈತಭಾವ, ಇಷ್ಟಲಿಂಗದ ಪೂಜೆಯಿಂದ ಅಂಗ ಲಿಂಗ ಸಮರಸ ಭಾವವುಂಟಾಗುವುದು. ಗುರು ಕೊಟ್ಟ ಇಷ್ಟಲಿಂಗವನ್ನು ಸದಾ ಯಾಕೆ ಧರಿಸಬೇಕು ಎಂಬುದನ್ನು ಸೋದಾಹರಣವಾಗಿ ಚೆನ್ನಬಸವಣ್ಣನವರು ಚಿತ್ರಿಸಿದ್ದಾರೆ.
ಒಮ್ಮೆ ನೆಲದಲ್ಲಿ ಬಿತ್ತಿದ ಬಿತ್ತುವ ಕಿತ್ತಿ ಕಿತ್ತಿ ಮತ್ತೆ ಬಿತ್ತುತ್ತ ಹೋದಡೆ,
ಆ ಬಿತ್ತು ಮೊಳೆತು ಕಳೆಯೇರಿ ಬೆಳೆದು
ಬೆಳಸನೀವ ಪರಿಯಿನ್ನೆಂತೊ, ಮರುಳು ಮಾನವಾ ?
ಗುರುವಿತ್ತ ಲಿಂಗವ ತೊರೆ ತೊರೆದು ಮರಳಿ ಮರಳಿ ಧರಿಸಿದಡೆ
ಆ ಇಷ್ಟಲಿಂಗವು ಅನಿಷ್ಟವ ಕಳೆದು ಇಷ್ಟಾರ್ಥವನೀವ ಪರಿಯಿನ್ನೆಂತೊ ?
ಇದು ಕಾರಣ- ಕೂಡಲಚೆನ್ನಸಂಗಯ್ಯನಲ್ಲಿ ಮುಕ್ತಿಯನರಸುವಡೆ
ಅಂಗನಲ್ಲಿ ಹೆರೆಹಿಂಗದೆ ಲಿಂಗವ ಧರಿಸಬೇಕು
ನಾವು ಬಿತ್ತಿದ ಬೆಳೆ, ಬೆಳೆದಿದೆಯೋ, ಇಲ್ಲವೋ ಎಂದು ದಿನಾಲು ಕಿತ್ತು ಕಿತ್ತು ನೋಡಿದರೆ ಬೆಳೆದು ಫಲ ಕೊಡದು, ಹಾಗೆ ಗುರು ಕರುಣಿಸಿದ ಇಷ್ಟಲಿಂಗವನ್ನು ಪೂಜಾ ಕಾಲಕ್ಕೆ ಧರಿಸಿ ಮತ್ತೆ ಮತ್ತೆ ತೆಗೆದಿಟ್ಟರೆ ಮುಕ್ತಿ ದೊರೆಯದು. ಇಷ್ಟಲಿಂಗ ಪೂಜೆಯೆಂದರೆ, ನೆನಹು ನಿರೀಕ್ಷಣೆ ಪೂಜೆಗಳನ್ನು ಒಳಗೊಂಡಿರುತ್ತೆ.
ಕತ್ತಲೆಮನೆಯಲ್ಲಿರ್ದ ಮನುಜನು,
ಜ್ಯೋತಿಯನೆನಿತು ಹೊತ್ತು ನೆನೆದಡೆಯೂ ಬೆಳಕಾಗಬಲ್ಲುದೆ
ಬೆಂಕಿಯ ಹೊತ್ತಿಸದನ್ನಕ್ಕ ?
ಮರದುದಿಯ ಫಲವು ನೋಟಮಾತ್ರಕ್ಕುದುರುವುದೆ
ಹತ್ತಿ ಹರಿಯದನ್ನಕ್ಕ ?
ಹುಟ್ಟುಗುರುಡನು ಕಷ್ಟಪಟ್ಟು, ಎಷ್ಟುಹೊತ್ತು ನಡೆದಡೆಯೂ
ಇಚ್ಛಿತ ಪಟ್ಟಣವ ಮುಟ್ಟುವನೆ ಕಣ್ಣುಳ್ಳವನ ಕೈವಿಡಿಯದನ್ನಕ್ಕ ?
ಹಾಂಗೆ, ಸಮ್ಯಕ್ಜ್ಞಾನಾತ್ಮಕವಾದ
ಲಿಂಗಾರ್ಚನ, ಲಿಂಗನಿರೀಕ್ಷಣ, ಲಿಂಗಧ್ಯಾನಗಳಿಲ್ಲದೆ,
ಆ ನೆನಹು, ನಿರೀಕ್ಷಣೆ, ಪೂಜೆ ಇವುಗಳೊಂದೊಂದೆ
ಮುಕ್ತಿಯನೀವವೆಂಬ ಯುಕ್ತಿಗೆಟ್ಟ ಮಂದಮತಿಗಳ ಮೆಚ್ಚುವನೆ
ಕೂಡಲಚೆನ್ನಸಂಗಮದೇವನು ?
ಇಷ್ಟಲಿಂಗದ ಅನುಸಂಧಾನದ ಸುಲಭ ಮಾರ್ಗವನ್ನು ಸ್ಪಷ್ಟವಾಗಿ ಚೆನ್ನಬಸವಣ್ಣನವರು ಹೀಗೆ ತಿಳಿಸುತ್ತಾರೆ.
ಲಿಂಗದ ಕಲೆ ಅಂತರಂಗಕ್ಕೆ ವೇದಿಸುವ ಹಲವು ಸಾಧನಗಳಲ್ಲಿ
ಒಂದು ಸಾಧನವನಿಲ್ಲಿ ಹೇಳಿಹೆನು ಕೇಳಿರಯ್ಯಾ.
ಕರದಿಷ್ಟಲಿಂಗದಿ ತೆರೆದಿಟ್ಟ ದೃಷ್ಟಿ ಎವೆ ಹರಿಚದಂತಿರ್ದಡೆ
ಆ ಲಿಂಗವು ಕಂಗಳಲ್ಲಿ ವ್ಯಾಪಿಸುತಿಪ್ಪುದು.
ಆ ಮಂಗಲಮಯವಾದ ಕಂಗಳಲ್ಲಿ ಮನವಿರಿಸಿ,
ಲಿಂಗನಿರೀಕ್ಷಣೆಯಿಂದ ನೆನೆಯಲು,
ಆ ಲಿಂಗಮೂರ್ತಿ ಮನವನಿಂಬುಗೊಂಡು
ಪಾçಣಲಿಂಗವಾಗಿ ಪರಿಣಮಿಸುತಿಪ್ಪುದು.
ಬಳಿಕ ಮನೋಮಯಲಿಂಗವನು ಭೇದವಿಲ್ಲದ ಸುವಿಚಾರದಿಂದ ಪರಿಭಾವಿಸಲು,
ಆ ಲಿಂಗಮೂರ್ತಿ ಭಾವದಲ್ಲಿ ಸಮರಸಗೊಂಡು
ಭಾವಲಿಂಗವಾಗಿ ಕಂಗೊಳಿಸುತಿಪ್ಪುದು.
ಆ ಭಾವಲಿಂಗವನು ಎಡೆವಿಡದೆ ಭಾವಿಸುತ್ತ,
ನೆನಹು ನಿರೀಕ್ಷಣೆಯಿಂದ ತಪ್ಪದಾಚರಿಸಲು,
ಶರಣನು ನಿತ್ಯತೃಪ್ತನಾಗಿ ವಿರಾಜಿಸುತಿಪ್ಪನು.
ಇದೇ ನಮ್ಮ ಕೂಡಲಚೆನ್ನಸಂಗಯ್ಯನೊಡನೆ
ಕೂಡುವ ಪರಮೋಪಾಯವು.
ಇಷ್ಟಲಿಂಗ, ಪ್ರಾಣಲಿಂಗ, ಭಾವಲಿಂಗಗಳ ಪೂಜೆ ಕ್ರಮವಾಗಿ ಸಾಗಿದರೆ ಭಕ್ತನು ದೇವನೊಡನೆ ಸಮರಸ ಹೊಂದುವನು ಎಂದು ಚನ್ನಬಸವಣ್ಣನವರು ಸರಳಾತಿ ಸರಳ ವಚನಗಳ ಮೂಲಕ ನಮಗೆ ತಿಳಿಸುವ ಪ್ರಯತ್ನ ಮಾಡಿದ್ದಾರೆ.