ಗುರುಪ್ರಸಾದಿಗಳಪೂರ್ವವಪೂರ್ವ,
ಲಿಂಗಪ್ರಸಾದಿಗಳಪೂರ್ವವಪೂರ್ವ.
ಜಂಗಮ ಪ್ರಸಾದಿಗಳಪೂರ್ವವಪೂರ್ವ,
ಪ್ರಸಾದಪ್ರಸಾದಿಗಳಪೂರ್ವವಪೂರ್ವ
ಗುರುಪ್ರಸಾದಿ ಗುರುಭಕ್ತಯ್ಯ,
ಲಿಂಗಪ್ರಸಾದಿ ಪ್ರಭುದೇವರು,
ಜಂಗಮಪ್ರಸಾದಿ ಬಸವಣ್ಣನು,
ಪ್ರಸಾದಪ್ರಸಾದಿ ಬಿಬ್ಬಬಾಚಯ್ಯನು.
ಇಂತೀ ಪ್ರಸಾದಿಗಳ
ಪ್ರಸಾದದಿಂದ ಬದುಕಿದೆನಯ್ಯಾ
ಕೂಡಲಚೆನ್ನಸಂಗಮದೇವಾ.
ಮುಂದಿನ ಪಯಣ ಪ್ರಸಾದಿಸ್ಥಲದತ್ತ. ಇದೊಂದು ಸುಂದರವಾದ ಸೋಪಾನ. ಸಂಸಾರದಲ್ಲಿ ವಸ್ತುಗಳನ್ನು ಸಂಗ್ರಹಿಸಬೇಕಾಗುವುದು ನಿಜ. ಅನುಭವಿಸಲೂ ಬೇಕು. ಅವುಗಳ ಮಧ್ಯೆ ಜೀವನದಲ್ಲಿ ನಾವು ಅವಶ್ಯವಾಗಿ ಮಾಡಬೇಕಾದ ಎರಡು ಕಾರ್ಯಗಳಿವೆ. ಒಂದು ವಸ್ತುಗಳನ್ನು ಸಂಗ್ರಹಿಸುವುದು ಮತ್ತು ಅವುಗಳನ್ನು ಅನುಭವಿಸುವುದು. ವಸ್ತುಗಳ ಸಂಗ್ರಹಣೆ ನಮ್ಮದೆಂದು ಭಾವಿಸಿದಾಗ ‘ನಾನು’ ಎಂಬ ಭಾವ ಪುಷ್ಟ್ಪವಾಗುತ್ತದೆ. ‘ನನ್ನದು’ ಎನ್ನುವುದು ಕೂಡ ಪುಷ್ಟವಾಗುತ್ತದೆ. ಇವೆರಡನ್ನೂ ಪುಷ್ಟ್ಪಗೊಳಿಸುವುದೇ ಸಂಸಾರ. ನನ್ನ ಸಂಗ್ರಹ ಹೆಚ್ಚಾದಂತೆ ‘ನಾನು’ ಕೂಡ ದೊಡ್ಡದಾಗುತ್ತ ಹೋಗುತ್ತದೆ ‘ನನ್ನದು’ ಎನ್ನುವುದನ್ನು ತೆಗೆದು ಹಾಕಿದಾಗ, ‘ನಾನು’ ಸಣ್ಣದಾಗುತ್ತದೆ. ಇದು ವಿಚಿತ್ರ. ನನ್ನ ಹತ್ತಿರ ಒಂದು ಕೋಟಿ ಹಣ ಇದ್ದಾಗ ನಾನು ಕೋಟ್ಯಾಧೀಶ. ‘ನಾನು’ ಎನ್ನುವುದು ಅಷ್ಟು ನನ್ನ ಕೋಟಿ ಎಂಬುದನ್ನು ತೆಗೆದು ಹಾಕಿದಾಗ ‘ನಾನು’ ಸಣ್ಣವ. ನಾನು ಅನ್ನುವುದು ಸಣ್ಣದಾಗುವುದು.
ನನ್ನದು ಎಂಬುದು ದೊಡ್ಡದಾದಾಗ ಅಂದರೆ ನನ್ನ ಆಸ್ತಿಪಾಸ್ತಿಗಳು, ವಸ್ತುಗಳು ಬೆಳೆದಾಗ ನಾನು ದೊಡ್ಡವ. ವಸ್ತುಗಳ ಸಂಗ್ರಹ ನಮ್ಮನ್ನು ದೊಡ್ಡವರನ್ನಾಗಿ, ಸಣ್ಣವರನ್ನಾಗಿ ಪರಿವರ್ತಿಸುತ್ತದೆ. ವಸ್ತುಗಳ ಕುರಿತಾದ ನಮ್ಮ ಸಂಬಂಧವೇ ನಮ್ಮ ಪ್ರಪಂಚ. ನಾನು ಮತ್ತು ನನ್ನದು ಎಂಬ ಪುಷ್ಟಗೊಂಡ ಭಾವವನ್ನು ಪವಿತ್ರಗೊಳಿಸುವುದು ‘ಪ್ರಸಾದಿಸ್ಥಲ’ ಎಂದು ಶರಣರು ಹೇಳಿದರು. ಸಂಗ್ರಹ, ಸಂಪತ್ತು ಒಂದಿಷ್ಟಿರಬೇಕು. ಮನೆಕೂಡ ಇರಬೇಕು. ನಮ್ಮ ನಿತ್ಯಜೀವನಕ್ಕೆ ವಸ್ತುಗಳು ಕೂಡ ಅವಶ್ಯಬೇಕು. ಮನಸ್ಸಿನಲ್ಲಿ ಇವೆಲ್ಲ ಭಗವಂತನ ಅನುಗ್ರಹ; ಇದು ದೇವನ ಪ್ರಸಾದ ಎಂಬ ಭಾವ ಬಂದಾಗ ‘ನಾನು’ ‘ನನ್ನದು’ ಎಂಬ ಭಾವ ಅಲ್ಲಿಲ್ಲ. ಅವರದು, ಇವರದು ಬೇಕಾದಷ್ಟಿರಲಿ; ನನ್ನದು ಇಷ್ಟೆ ಎಂಬ ಸಂತುಷ್ಟಿಯ ಭಾವ ಗಟ್ಟಿಯಾದಾಗ ಮನಸ್ಸು ಶಾಂತವಾಗಿರುವುದು. ‘ನಾನು’ ‘ನನ್ನದು’ ಎಂಬ ಭಾವ ಮಾಯವಾದಾಗ ಭಕ್ತ ಪ್ರಸಾದಿಸ್ಥಲ ತಲುಪಿದ್ದಾನೆ ಎಂಬ ಅರ್ಥ. ಅಪಾರ ಸಂಪತ್ತು ನೆಮ್ಮದಿಯನ್ನು ಹರಣ ಮಾಡುತ್ತದೆ. ಯಾವುದು ನಮ್ಮ ಮನಸ್ಸನ್ನು ಪ್ರಸನ್ನಗೊಳಿಸುತ್ತದೆಯೋ ಅದು ಪ್ರಸಾದ. ಪುಷ್ಟವಾದ ‘ನಾನು’ ಮತ್ತು ‘ನನ್ನದು’ ಎಂಬ ಎರಡು ಸಂಗತಿಗಳು ಪ್ರಸನ್ನತೆಯನ್ನು ಹಾಳುಗೆಡಹುತ್ತವೆ. ಅಪಾರ ಸಂಪತ್ತನ್ನು ಸಂಗ್ರಹಿಸಿ ಬಹಳ ದೊಡ್ಡವನೆಂದು ತೋರಿಸಿಕೊಳ್ಳುವ ಒಂದೇ ಉದ್ದೇಶದಿಂದ ಇಡೀ ಆಯುಷ್ಯವನ್ನು ಸವೆಸುವುದು ಎಷ್ಟು ಸರಿ. ಅದೇ ಪ್ರಪಂಚ. ನಿಷ್ಪçಪಂಚ ಪ್ರಸಾದಿಸ್ಥಲ ಮುಟ್ಟಬೇಕಾದರೆ, ಇವೆರಡನ್ನು ಕಡಿಮೆ ಮಾಡಿಕೊಳ್ಳಬೇಕಾದ ಅವಶ್ಯಕತೆ ಇದೆ. ಪ್ರಸಾದಿ ಭಾವದಿಂದ ಜೀವನ ಭರಿಸಲು ಅವಶ್ಯಕತೆಗೆ ತಕ್ಕಷ್ಟು ವಸ್ತುಗಳ ಸಂಗ್ರಹ ಮಾಡಿಕೊಳ್ಳಬೇಕೆಂಬ ಸರಳ ಭಾವ ಹೊಂದಬೇಕು. ಶರಣರು ಹೇಳಿದರು ‘ಇಂದಿಂಗೆಂತು ನಾಳಿಂಗೆಂತು ಚಿಂತಿಸಲೇಕೆ ತಂದಿಕ್ಕುವ ಶಿವಂಗೆ ಬಡತನವೆ?’ ಎಂಬ ವಚನದಂತೆ ಮನುಷ್ಯನಿಗೆ ಪ್ರಸಾದಿಭಾವ ಬಂದದ್ದೇ ಆದರೆ, ಇಡೀ ಜಗತ್ತು ಶಾಂತವಾಗಿರುವುದು; ಹೊಡೆದಾಟ, ಬಡಿದಾಟ ಪರದಾಟಗಳು, ಅತ್ಯಾಸೆಗಳು ಮಾಯವಾಗುವವು.
ನಾವು, ನಮ್ಮ ಅಪಾರ ಸಂಪತ್ತಿನಲ್ಲಿಯ ನಾಲ್ಕು ಕಾಸು ದಾನವಿತ್ತಾಗ ಮಹಾದಾನಿಗಳೆಂಬ ಭಾವ ನಮ್ಮಲ್ಲಿ ಕುದುರುವುದು. ನಿಜವಾದ ದಾನಿ ಯಾರು? ಕೂಡಲಸಂಗಮದೇವನೊಬ್ಬನೆ ಜಗತ್ತಿನ ಮಹಾದಾನಿ ಎಂದು ಬಸವಣ್ಣನವರು ಹೇಳಿದರು. ಭಗವಂತ ಸುಂದರವಾದ ಜಗತ್ತನ್ನು ಕೊಟ್ಟಿದ್ದಾನೆ; ದೇಹ, ಮನಸ್ಸು, ಬುದ್ಧಿಯನ್ನು, ಆಯುಷ್ಯವನ್ನು ಕೊಟ್ಟು ಚನ್ನಾಗಿ ಅನುಭವಿಸು ಎಂದು ಹರಿಸಿದ್ದಾನೆ. ಇದಕ್ಕಿಂತ ದೊಡ್ಡ ದಾನ ಯಾವುದಾದರೂ ಇದೆಯೇ ಈ ಭೂಮಿಯಲ್ಲಿ? ‘ಇಳೆ ನಿಮ್ಮ ದಾನ ಬೆಳೆ ನಿಮ್ಮ ದಾನ’ ಎಂಬಂತೆ ಇದೆಲ್ಲವೂ ಆತನ ಕರುಣೆಯಲ್ಲವೆ? ಅನುಗ್ರಹವಲ್ಲದೆ ಮತ್ತೇನು. ಇಂಥ ಪರಿಜ್ಞಾನವೂ ಕೂಡ ಇಲ್ಲದ ನಾವು, ಯಾವುದೋ ಒಂದು ನಮ್ಮದೇ, ಅಥವಾ ನಮ್ಮ ಜಾತಿ ಬಂಧುಗಳು ಕಟ್ಟಿದ ಸಂಸ್ಥೆಗೊ, ಸಂಘಕ್ಕೊ ನಾಲ್ಕು ಕಾಸು ಕೊಟ್ಟು ಮಹಾದಾನಿಗಳೆನಿಸಿಕೊಳ್ಳಬಯಸುತ್ತೇವಲ್ಲ, ಇದು ಎಷ್ಟು ವಿಚಿತ್ರ! ಈ ಭೂಮಿಗೆ ಬರುವಾಗ ನಾವೇನೂ ತರಲಿಲ್ಲ, ನಮ್ಮದೆಂಬುದು ಈ ಜಗತ್ತಿನಲ್ಲಿ ಏನೂ ಇಲ್ಲ. ಆದರೂ ದಾನ ಮಾಡುತ್ತೇವೆ. ದೊಡ್ಡ ದಾನಿಗಳೆನಿಸಿಕೊಳ್ಳಲೋಸುಗ ಎಷ್ಟು ವಿಚಿತ್ರ! ಇದೆ ಮಾಯೆ. ಪ್ರಸಾದಿಸ್ಥಲದಿಂದ ನಮ್ಮನ್ನು ವಿಚಲಿತಗೊಳಿಸುವ ಭ್ರಮೆ.
ಷಟ್ಸ್ಥಲ ಮಾರ್ಗ ಜೀವನವನ್ನು ಪರಿವರ್ತಿಸುವ ಕ್ರಿಯೆ, ಅಲ್ಲದೆ ಮನುಷ್ಯ ಸಮಾಜವನ್ನು ಗ್ರಹಿಸಿದ ದೃಷ್ಟಿಕೋನ ಬದಲಿಸುವ ಕ್ರಮ. ಸಂಗ್ರಹ ದೇವನ ಕರುಣೆ; ಇದರಲ್ಲಿ ನನ್ನದೇನೂ ಇಲ್ಲ. ನಾನು ದೇವನ ಅನುಗ್ರಹಕ್ಕೆ ಪಾತ್ರನಾದವ ಮಾತ್ರ. ನಾನು ಭಗವಂತ ಕರುಣಿಸಿದ ಪ್ರಸಾದ ಸ್ವೀಕರಿಸುವ ಪ್ರಸಾದಿ. ಇಂಥ ಪವಿತ್ರಭಾವ ಚಿಗುರಿದಾಗ ಪ್ರಸಾದಿಸ್ಥಲ ಸನ್ನಿಹಿತ.
ಉರಿಬರಲಿ ಸಿರಿ ಬರಲಿ, ಮಲ್ಲಿಗೆಯ ಮಾಲೆಯಿರಲಿ, ಸಿಡಿಲಿನ ಗೊಂಚಲವಿರಲಿ, ಅಂದಂದಿನ ಗಳಿಕೆಯನ್ನು ಭಗವಂತನಡಿಯಲ್ಲಿ ಸಮರ್ಪಿಸಿ, ದೇವ ತನಗೆ ಅನುಗ್ರಹಿಸಿದ್ದನ್ನು ಪ್ರಸಾದವೆಂದು, ಸಿಹಿಕಹಿಯೆನ್ನದೆ ಸ್ವೀಕರಿಸಿ ಪ್ರಸನ್ನಭಾವದಲ್ಲಿರುವುದು ಪ್ರಸಾದ. ಅದು ಪ್ರಸಾದಿಸ್ಥಲ.
ರೂಪಿನ ಪೂರ್ವಾಶ್ರಯವ ಕಳೆದು
ಆಯತಕ್ಕೆ ಕೊಟ್ಟು ಕೊಳಬಲ್ಲನಾಗಿ ಶುದ್ಧಪ್ರಸಾದಿ.
ರುಚಿಯ ಪೂರ್ವಾಶ್ರಯವ ಕಳೆದು
ಸ್ವಾಯತಕ್ಕೆ ಕೊಟ್ಟು ಕೊಳಬಲ್ಲನಾಗಿ ಸಿದ್ಧಪ್ರಸಾದಿ.
ಈ ಉಭಯ ಕ್ರೀಯನುಭಾವವಳಿದಾತನೆ
ಕೂಡಲಚೆನ್ನಸಂಗನಲ್ಲಿ ಪ್ರಸಿದ್ಧಪ್ರಸಾದಿ.
ಚನ್ನಬಸವಣ್ಣನವರು ಮೂರು ರೀತಿಯ ಪ್ರಸಾದಿಗಳನ್ನು ಕುರಿತು ಇಲ್ಲಿ ಪ್ರಸ್ತಾಪಿಸುತ್ತಾರೆ. ಶುದ್ಧ ಪ್ರಸಾದಿ, ಸಿದ್ಧ ಪ್ರಸಾದಿ, ಪ್ರಸಿದ್ಧ ಪ್ರಸಾದಿ. ತನ್ನ ಯೌವ್ವನ ರೂಪಿನ ಬಗೆಗಿನ ಪೂರ್ವಾಶ್ರಯವನ್ನು ಕಳೆದುಕೊಂಡು ಲಿಂಗವನ್ನು ಆಯತ ಮಾಡಿಕೊಂಡು ಅದಕ್ಕೆ ಎಲ್ಲವನ್ನು ಅರ್ಪಿಸುವನು ಶುದ್ಧಪ್ರಸಾದಿ. ತಾನು ಸೇವಿಸುವ ಪ್ರಸಾದದ ರುಚಿಯ ಮೂಲವನ್ನು ಕಳೆದು, ಅದನ್ನೂ ಲಿಂಗಕ್ಕೆ ಅರ್ಪಿಸಿ ಸೇವಿಸುವನು ಸಿದ್ಧಪ್ರಸಾದಿ. ಈ ಎರಡೂ ರೀತಿಯ ಅರ್ಪಿಸುವಿಕೆಯನ್ನು ಮೀರಿ, ತಾನೇ ಲಿಂಗವಾಗಿ, ಲಿಂಗವೇ ತಾನಾಗಿ ನಿಂತು ಸೇವಿಸುವ ಪ್ರಸಾದಿಯೇ ಪ್ರಸಿದ್ಧ ಪ್ರಸಾದಿ ಎಂದು ಇಲ್ಲಿ ಚನ್ನಬಸವಣ್ಣನವರು ಸೂತ್ರೀಕರಿಸಿದ್ದಾರೆ.
ಜಿಹ್ವೆ ಗುರು, ಕಂಗಳು ಲಿಂಗ,
ನಾಸಿಕ ಆಚಾರ, ಶ್ರೋತ್ರ ಪ್ರಸಾದ,
ಹಸ್ತ ಜಂಗಮ, ಭಾವದಲ್ಲಿ ಮಹಾಲಿಂಗ,
“ಆಚಾರಸ್ಯ ಮುಖಂ ಘ್ರಾಣಃ ಮುಖಂ ಜಿಹ್ವಾ ಗುರೋಸ್ತಥಾ
ಶಿವಲಿಂಗಮುಖಂ ನೇತ್ರಂ ಮಹಾಲಿಂಗಂ ಚ ಭಾವನೇ
ಇತಿ ಭೇದಮುಖಂ ಜ್ಞಾತ್ವಾ ಅರ್ಪಿತಂ ಚ ವಿಶೇಷತಃ”
ಎಂದುದಾಗಿ ಕೂಡಲಚೆನ್ನಸಂಗಾ
ನಿಮ್ಮ ಶರಣ ಸರ್ವಾಂಗಪ್ರಸಾದಿ.
ಪ್ರಸಾದ ಸ್ಥಲದ ಮಹತ್ವವನ್ನು ಚನ್ನಬಸವಣ್ಣನವರು ಇನ್ನಷ್ಟು ಸರಳವಾಗಿ ಇಲ್ಲಿ ವಿವರಿಸಿದ್ದಾರೆ. ಭಕ್ತನಾದವನು ತನ್ನ ಸಾಧನೆಯ ಹಂತದಿಂದ ಪ್ರಸಾದಿ ಸ್ಥಲಕ್ಕೆ ಬಂದ ನಂತರ, ಆತನ ಸರ್ವಾಂಗವೆಲ್ಲವೂ ಪ್ರಸಾದಮಯವಾಗಿರುತ್ತದೆ ಎಂದು ಹೇಳುತ್ತಾರೆ. ನಾಲಿಗೆಯೆ ಗುರುವಾಗಿ, ಕಣ್ಣುಗಳೇ ಲಿಂಗವಾಗಿ, ನಾಸಿಕವೇ ಆಚಾರವಾಗಿ ಹೀಗೆ ಭಕ್ತನ ಸರ್ವಾಂಗವೂ ಪ್ರಸಾದಮಯವಾಗಿ ರೂಪಾಂತರಗೊಳ್ಳುವ ಮಹತ್ವದ ಸಿದ್ಧಿಯ ನೆಲೆ ಪ್ರಸಾದಿಸ್ಥಲದಲ್ಲಿ ಸಂಭವಿಸುತ್ತದೆ.
ಅವಸರ, ಆರೋಗಣೆ, ಆಪ್ಯಾಯನ-
ತ್ರಿವಿಧವೂ ಲಿಂಗ ಮುಖದಲ್ಲಿ ಅರ್ಪಿತವಾಗೆ,
ಆತನ ಪ್ರಸಾದಿಯೆಂಬೆನು.
ಅವಸರ ಅನವಸರ ಆತ್ಮದಿಚ್ಛೆ
ಲಿಂಗಮುಖದಲ್ಲಿ ಅರ್ಪಿತವಿಲ್ಲಾಗಿ
ಆತನನೆಂತು ಪ್ರಸಾದಿಯೆಂಬೆನು?
ಅವಸರ ಅನವಸರವರಿದು ವೇಧಿಸಬಲ್ಲರೆ
ಆತನ ಪ್ರಸಾದಿಯೆಂಬೆನು.
ಇದು ಕಾರಣ ಕೂಡಲಚೆನ್ನಸಂಗಯ್ಯಾ
ನಿಮ್ಮ ಅವಸರವರಿದು ಅರ್ಪಿಸುವ
ಅರ್ಪಣೆ ಸದ್ಭಾವಿಗಲ್ಲದಿಲ್ಲ.
ಅವಸರ(ಅವಕಾಶ ಸಂದರ್ಭ, ಸಮಯ ಸನ್ನಿವೇಶ ಎಂದರ್ಥ), ಆರೋಗಣೆ (ಪ್ರಸಾದ), ಆಪ್ಯಾಯನ (ತೃಪ್ತಿಪಡಿಸುವ ಭಾವ) ಈ ಮೂರು ಲಿಂಗಮುಖದಿಂದ ಅರ್ಪಿತ ಮಾಡುವ ಭಕ್ತನನ್ನು ನಿಜವಾದ ಪ್ರಸಾದಿ ಎನ್ನುತ್ತಾರೆ ಚನ್ನಬಸವಣ್ಣನವರು. ಅವಸರ (ಸನ್ನಿವೇಶ ಸಂದರ್ಭ) ಅನವಸರ (ಕಾಲೋಚಿತವಲ್ಲದುದು) ಎರಡೂ ಆತ್ಮನ ಇಚ್ಛೆಗಳಾಗಿದ್ದರೂ ಲಿಂಗಮುಖದಲ್ಲಿ ಅರ್ಪಿಸದಿದ್ದರೆ ಆತ ಪ್ರಸಾದಿಯಾಗಲು ಸಾಧ್ಯವಿಲ್ಲ. ಅವಸರ ಮತ್ತು ಅನವಸರಗಳೆರಡನ್ನು ತೋರದಿದ್ದರೆ ಆತನನ್ನು ಪ್ರಸಾದಿ ಎನ್ನುವೆ ಎನ್ನುತ್ತಾರೆ. ದೇವರ ಸಮಯ ಸಂದರ್ಭ ನೋಡಿ ಅರ್ಪಿಸುವ ಅರ್ಪಣೆಯ ಭವ ಸದ್ಭಾವಿಗೆ ಮಾತ್ರ ಸಾಧ್ಯ ಎನ್ನುತ್ತಾರೆ.
ದಶವಿಧ ಉದಕ, ಏಕಾದಶ ಪ್ರಸಾದ,
ಎಲ್ಲಾ ಎಡೆಯಲ್ಲಿ ಉಂಟು.
ಮತ್ತೊಂದ ಬಲ್ಲವರ ತೋರಾ ಎನಗೆ.
ಲಿಂಗವ ನೆನೆಯದೆ, ಲಿಂಗಾರ್ಪಿತವ ಮಾಡದೆ,
ಅನರ್ಪಿತವ ಕೊಳ್ಳದ ಅಚ್ಚಪ್ರಸಾದಿಯ
ತೋರಿ ಬದುಕಿಸಯ್ಯಾ
ಕೂಡಲಚೆನ್ನಸಂಗಮದೇವಾ.
ಹತ್ತು ಬಗೆಯ ಪಾದೋದಕಗಳು, ಹನ್ನೊಂದು ಬಗೆಯ ಪ್ರಸಾದ ಎಡೆಯಲ್ಲಿ ಇದ್ದಾಗಲೂ ಮತ್ತೊಂದು ಬೇರೆ ಬಲ್ಲವರು ಯಾರಾದರೂ ಇದ್ದಾರಾ? ಎಡೆಯಲ್ಲಿ ಎಲ್ಲವನ್ನು ಹಾಕಿಕೊಂಡು, ಲಿಂಗವನ್ನು ಸ್ಮರಿಸದೆ, ಲಿಂಗಾರ್ಪಿತ ಮಾಡದೆ, ಪಾದೋದಕ ಪ್ರಸಾದ ಸ್ವೀಕರಿಸುವ ಅಚ್ಚಪ್ರಸಾದಿಯಾಗಲಾರ. ಅಂತಹ ಅಚ್ಚಪ್ರಸಾದಿಯನ್ನು ನನಗೆ ತೋರಿ ಬದುಕಿಸು ಎಂದು ಹೇಳುತ್ತಾರೆ.
ಭಕ್ತನಾದರೆ ಭಕ್ತಿಸ್ಥಲವನರಿದು ಅರಿಯದಂತಿರಬೇಕು,
ಮಹಾಹೇಶ್ವರನಾದರೆ ನಿಷ್ಠೆಯ ಕುಳವನರಿದು ಅರಿಯದಂತಿರಬೇಕು,
ಪ್ರಸಾದಿಯಾದರೆ ಪ್ರಸಾದಿಸ್ಥಲವನರಿದು ಅರಿಯದಂತಿರಬೇಕು,
ಪ್ರಾಣಲಿಂಗಿಯಾದರೆ ಸ್ಥಿತಿ-ಗತಿಯನರಿದು ಅರಿಯದಂತಿರಬೇಕು,
ಶರಣನಾದರೆ ಸತಿಪತಿಯೆಂದರಿದು ಅರಿಯದಂತಿರಬೇಕು,
ಐಕ್ಯನಾದರೆ ತಾನು ತಾನಾಗಿ ಆಗದಂತಿರಬೇಕು,
ಇಂತೀ ಷಡುಸ್ಥಲವನರಿಯದೆ ಮಾಡಿದೆನೆಂಬ
ಲಜ್ಜೆಗೆಟ್ಟ ಲಾಂಛನಧಾರಿಯನೇನೆಂಬೆ, ಕೂಡಲಚೆನ್ನಸಂಗಮದೇವಾ.
ಸಾಧಕನಾದವನು ಆರು ಬಗೆಯ ಸ್ಥಲಗಳ ಸಾಧನೆ ಮಾಡುತ್ತಲೇ, ಅವುಗಳಲ್ಲಿ ಇಲ್ಲದಂತಿರಬೇಕು. ಕೆಲವರು ಕೇವಲ ಲಾಂಛನಧಾರಿಗಳಾಗಿ, ಲಜ್ಜೆಗೆಟ್ಟವರಾಗಿ ವೇಷಡಂಭಕರಾಗಿ ತಾವು ಪ್ರಸಾದಿಗಳು, ಪ್ರಾಣಲಿಂಗಿಗಳು ಎಂದು ಹೇಳುತ್ತ ಹೋಗುವರು ನಿಜವಾದ ಷಡುಸ್ಥಲ ಸಾಧಕರಲ್ಲ ಎಂದು ವ್ಯಂಗ್ಯವಾಡುತ್ತಾರೆ ಚನ್ನಬಸವಣ್ಣನವರು.
ಪ್ರಸಾದಿಸ್ಥಲ ತ್ರಿವಿಧ: ಅರ್ಪಿತಪ್ರಸಾದಿ,
ಅವಧಾನಪ್ರಸಾದಿ, ಪರಿಣಾಮಪ್ರಸಾದಿ
ಅದಕ್ಕೆ ವಿವರ:
ಕಾಯದ ಕೈಯಲ್ಲಿ ಸಕಲಪದಾರ್ಥಂಗಳು
ಇಷ್ಟಲಿಂಗಕ್ಕೆ ಕೊಟ್ಟು ಕೊಂಬನಾಗಿ ಅರ್ಪಿತಪ್ರಸಾದಿ.
ಪಂಚೇಂದ್ರಿಯಂಗಳಲ್ಲಿ ಪಂಚಲಿಂಗಪ್ರತಿಷ್ಠೆಯ ಮಾಡಿ,
ಅಲ್ಲಲ್ಲಿ ಬಂದ ಸುಖವನಲ್ಲಲ್ಲಿ ಮನದ ಕೈಯಲ್ಲಿ
ಕೊಟ್ಟು ಕೊಂಬನಾಗಿ ಅವಧಾನಪ್ರಸಾದಿ.
ಅಂಗಾಶ್ರಯವಳಿದು ಲಿಂಗಾಶ್ರಯವುಳಿದು,
ಭಾವಭರಿತನಾಗಿಪ್ಪನಾಗಿ ಪರಿಣಾಮಪ್ರಸಾದಿ.
ಮೂರು ಬಗೆಯ ಪ್ರಸಾದಿಗಳ ಲಕ್ಷಣಗಳನ್ನು ಚನ್ನಬಸವಣ್ಣನವರು ಮೇಲಿನ ವಚನದಲ್ಲಿ ತಿಳಿಸಿದ್ದಾರೆ. ಅರ್ಪಿತ ಪ್ರಸಾದಿ, ಅವಧಾನ ಪ್ರಸಾದಿ, ಪರಿಣಾಮ ಪ್ರಸಾದಿ ಎಂದರೆ ಏನು ಎಂಬುದನ್ನು ಅತ್ಯಂತ ಸರಳವಾಗಿ ಇಲ್ಲಿ ವಿವರಿಸಿದ್ದಾರೆ.
ಆಚಾರ ಗುರುಸ್ಥಲ, ಅನುಭಾವ ಲಿಂಗಸ್ಥಲ, ಅವಧಾನ ಅರ್ಪಿತಸ್ಥಲ, ಪರಿಣಾಮ ಪ್ರಸಾದಿಸ್ಥಲ, ಸಮಾಧಾನ ಶರಣಸ್ಥಲ, ಅರಿವು ನಿಃಪತಿಯಾಗಿ ತೆರಹಿಲ್ಲದ ನಿಜದಲ್ಲಿ ಲಿಂಗೈಕ್ಯ ಎಂದು ಮತ್ತೊಂದು ವಚನದಲ್ಲಿ ಹೇಳುತ್ತಾರೆ.
ಗುರುವಚನವ, ಲಿಂಗವಚನ, ಜಂಗಮವಚನ, ಪ್ರಸಾದ ವಚನ ಈ ನಾಲ್ಕನ್ನು ತನ್ನೊಳಗಿಂಬಿಟ್ಟುಕೊಂಡವನು ನಿಜವಾದ ಸತ್ಯಪ್ರಸಾದಿ ಎನ್ನುತ್ತಾರೆ. ಆಯತ ಪ್ರಸಾದಿ, ಸ್ವಾಯತ ಪ್ರಸಾದಿ,ಸನ್ನಿಹಿತ ಪ್ರಸಾದಿ, ಸಮಯಭೋಗ ಪ್ರಸಾದಿ. ಪ್ರಸಾದವೆ ಪ್ರಾಣವಾಗಿ, ಪ್ರಸಾದವು ಪ್ರಸಾದಿಯನೆ ಅವಗ್ರಹಿಸಿಕೊಂಡಿರುವುದರಿಂದ, ಪ್ರಸಾದವೂ ಪ್ರಸಾದಿಯೂ ಏಕವಾಗಿದ್ದಾನೆ. ಅಂತಹ ಪ್ರಸಾದಿಗೆ ನಮೋ ನಮೋ ಎನ್ನುತ್ತಾರೆ.
ಅಂಗಪ್ರಸಾದಿ ಆತ್ಮದ್ರೋಹಿ, ಲಿಂಗಪ್ರಸಾದಿ ಲಿಂಗದ್ರೋಹಿ, ಜಂಗಮಪ್ರಸಾದಿ ಜಂಗಮದ್ರೋಹಿ ಎಂದುದಾಗಿ, ಭಾವದಿಂದ ಪ್ರಸಾದವ ಕೊಂಡು, ಅನುಭಾವದಿಂದತಿಗಳೆದಡೆ ಅದು ಪ್ರಸಾದವಲ್ಲ, ಮಾಂಸ, ಇದು ಕಾರಣ-ಕೂಡಲಚೆನ್ನಸಂಗಯ್ಯನಲ್ಲಿ ಪ್ರಸಾದಸಂಪತ್ತ ಬಸವಣ್ಣನೆ ಬಲ್ಲ ಎನ್ನುತ್ತಾರೆ.
ಅಚ್ಚಪ್ರಸಾದಿ ಅಚ್ಚಪ್ರಸಾದಿಗಳೆಂಬ
ಹುಚ್ಚರ ನಾನೇನೆಂಬೆನಯ್ಯಾ.
ಲಿಂಗದ ಹವಣನರಿಯದೆ ತನ್ನ ಒಡಲ ಹವಣಿಂಗೆ
ಗಡಣಿಸಿಕೊಂಬ ದುರಾತ್ಮರನೇನೆಂಬೆನಯ್ಯಾ.
ತನ್ನ ಒಡಲ ಹವಣಿಂಗೆ ಮನವು ಸಾಕೆಂದು ತೃಪ್ತಿಯಾದುದು
ಲಿಂಗಾರ್ಪಿತಕ್ಕೆ ಅದು ಸಲುವುದೆ, ಹೇಳಿರೆ?
ಆ ಲಿಂಗವು ಮುಟ್ಟದ ಅನರ್ಪಿತವನುಂಡು
ಅಚ್ಚಪ್ರಸಾದಿಗಳೆನಿಸಿಕೊಂಬವರ
ಲಿಂಗದಲ್ಲಿ ಸಜ್ಜನ ಸನ್ನಹಿತ ಶರಣರು ಮೆಚ್ಚುವರೆ?
ಬಂದ ಬಂದ ಸಕಲ ಪದಾರ್ಥಗಳೆಲ್ಲವ
ಲಿಂಗಕ್ಕೆ ಅರ್ಪಿಸಿಕೊಳ್ಳಬಲ್ಲಡೆ
ಕೂಡಲಚನ್ನಸಂಗಯ್ಯನಲ್ಲಿ ಆತನೆ ಅಚ್ಚಪ್ರಸಾದಿ.
ಅಚ್ಚಪ್ರಸಾದಿಯ ಪರಿಪೂರ್ಣ ಲಕ್ಷಣವನ್ನು ಇಲ್ಲಿ ಸರಳವಾಗಿ ನಿರೂಪಿಸಿದ್ದಾರೆ. ಪ್ರಸಾದಿ ಸ್ಥಲದ ವ್ಯಾಖ್ಯಾನವನ್ನು ಚನ್ನಬಸವಣ್ಣನವರಷ್ಟು ಸರಳವಾಗಿ ಯಾರೂ ಹೇಳಿಲ್ಲ. ಅಷ್ಟೊಂದು ಆಪ್ಯಾಯಮಾನವಾದ ರೀತಿಯಲ್ಲಿ ಬೋಧಿಸಿದ್ದಾರೆ.