ಸಾಣೇಹಳ್ಳಿ
ಇಲ್ಲಿನ ಶ್ರೀ ಶಿವಕುಮಾರ ಬಯಲು ರಂಗಮಂದಿರದಲ್ಲಿ ಶ್ರೀ ತರಳಬಾಳು ಜಗದ್ಗುರು ೧೧೦೮ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ೩೨ನೆಯ ಶ್ರದ್ಧಾಂಜಲಿ ಸಮಾರಂಭ ಬುಧವಾರ ನಡೆಯಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶರಣ ಚಿಂತಕ ಡಾ. ಬಸವರಾಜ ಸಾದರ ಮಾತನಾಡಿ ಸೂರ್ಯ, ಚಂದ್ರರನ್ನು ಒಬ್ಬರು ವರ್ಣಿಸಲು ಹೇಗೆ ಸಾಧ್ಯವಿಲ್ಲವೋ ಹಾಗೆಯೇ ಶಿವಕುಮಾರ ಶ್ರೀಗಳನ್ನು ಒಬ್ಬರು ವರ್ಣಿಸಲು ಸಾಧ್ಯವಿಲ್ಲ. ಸಾಮಾಜಿಕ ಕ್ರಾಂತಿಯನ್ನು ಬಸವಣ್ಣ, ಅಂಬೇಡ್ಕರ್, ಗಾಂಧೀಜಿಯ ನಂತರ ಮಾಡಿದವರು ಶಿವಕುಮಾರ ಶ್ರೀಗಳವರು. ಶ್ರೀಗಳು ದೊಡ್ಡ ಪರಂಪರೆಯನ್ನು ಹುಟ್ಟುಹಾಕಿದವರು. ಅದನ್ನು ನಿರಂತರವಾಗಿ ಮುಂದುವರಿಸಿಕೊಂಡು ಹೋಗುವಂಥವರು ಪಂಡಿತಾರಾಧ್ಯ ಶ್ರೀಗಳು.
ಮಧ್ಯ ಕರ್ನಾಟಕದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿದ್ದು ಶಿವಕುಮಾರ ಶ್ರೀಗಳು. ಅವರ ಮಾತುಗಳು ಆತ್ಮಸಾಕ್ಷಿಯಿಂದ ಕೂಡಿದ್ದವು. ಬಸವ ಪರಂಪರೆ ಹೇಳಿಕೊಂಡು ಜೀವನ ಮಾಡು ಸಾಕಷ್ಟು ಮಠಗಳಿವೆ. ಇಂಥವರೂ ಬಸವತತ್ವಗಳಿಗೆ, ಸಿದ್ಧಾಂತಗಳಿಗೆ ಅಪಚಾರವೆಸಗಿದ್ದಾರೆ. ಲಿಂಗಾಯತ ಕೆಲ ಮಠಾಧಿಪತಿಗಳು ಒಳಗೊಳಗೇ ದ್ರೋಹ ಬಗೆಯುತ್ತಿರುವುದು ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಹಿನ್ನಡೆಯಾಗಿದೆ. ಸಾಣೇಹಳ್ಳಿಯ ಪೂಜ್ಯರು, ಬಾಲ್ಕಿಯ ಪೂಜ್ಯರು ಹಾಗೂ ಗದಗಿನ ಪೂಜ್ಯರು ಬಿಟ್ಟರೆ ವಚನ ದರ್ಶನ ಪುಸ್ತಕದ ಬಗ್ಗೆ ಯಾವ ಮಠಾಧಿಪತಿಗಳು ಚಕಾರೆತ್ತದೇ ಇರುವುದು ಆತ್ಮದ್ರೋಹದ ಪ್ರತೀಕ.
ಶಿವಕುಮಾರ ಶ್ರೀಗಳು ಎದುರಿಸಿದ ಅಡ್ಡಿ ಆತಂಕಗಳಿಗೆ ಲೆಕ್ಕವಿಲ್ಲ. ಆದರೆ ಅವುಗಳಿಗೆ ಹೆದರದೇ ದಿಟ್ಟತನದಿಂದ ಹೆಜ್ಜೆ ಇಟ್ಟು ಸಮಾಜವನ್ನು ಕಟ್ಟಿದರು. ಲೌಕಿಕ ಹಾಗೂ ಪಾರಮಾರ್ಥಿಕ ಬದುಕನ್ನು ಕಂಡುಕೊಂಡಿದ್ದರು. ಶ್ರೀಗಳ ಆತ್ಮನಿವೇದನೆಯ ಪುಸ್ತಕವನ್ನು ಎಲ್ಲರೂ ಓದಬೇಕು. ಆತ್ಮನಿರೀಕ್ಷಣೆ, ಆತ್ಮವೀಕ್ಷಣೆ, ಆತ್ಮಪರೀಕ್ಷಣೆಗೆ ಹೆಚ್ಚು ಒತ್ತು ಕೊಟ್ಟಿದ್ದರು. ತಮ್ಮ ಆತ್ಮ ಪರೀಕ್ಷೆಯನ್ನು ಪರೀಕ್ಷಿಸಿಕೊಂಡಿದ್ದರಿಂದ ಅವರ ವ್ಯಕ್ತಿತ್ವ ಗಟ್ಟಿಗೊಳ್ಳಲ್ಲಿಕ್ಕೆ ಸಾಧ್ಯವಾಯಿತು. ಇಂತಹ ಪ್ರೀತಿಯ ಶಿಷ್ಯರಾಗಿ ಬೆಳೆದವರು ನಮ್ಮ ಪಂಡಿತಾರಾಧ್ಯ ಶ್ರೀಗಳು. ಆದ್ದರಿಂದ ಸಾಣೇಹಳ್ಳಿ ಮಠ ಇಷ್ಟೊಂದು ಉನ್ನತ ಮಟ್ಟಕ್ಕೆ ಹೋಗಲಿಕ್ಕೆ ಸಾಧ್ಯವಾಯಿತು.
ತರಳಬಾಳು ಮಠದಲ್ಲಿ ಯಾವುದೇ ಜಾತಿ, ಮತ, ಪಂಥ ಬೇಧವಿಲ್ಲದೇ ಶೈಕ್ಷಣಿಕ ಕ್ರಾಂತಿ ಮಾಡಿದರು. ಸಿರಿಗೆರೆಯ ಪೂಜ್ಯರು ಶಾಲಾ ಕಾಲೇಜು ಪ್ರಾರಂಭಿಸದೇ ಇದ್ದರೆ ಇನ್ನೂ ಅಜ್ಞಾನ, ಮೌಢ್ಯದಿಂದ ತುಂಬಿ ತುಳುಕುತ್ತಿತ್ತು.
ಯಾವುದೇ ಅಧಿಕಾರಿ ಪೋಷಾಕಿನಲ್ಲಿರುವಾಗ ಕಾಲಿಗೆ ನಮಸ್ಕಾರ ಮಾಡಬಾರದೆಂದು ಅಧಿಕಾರಿಗಳಿಗೆ ಕಾನೂನಿನ ಬಗ್ಗೆ ಅರಿವು ಮೂಡಿಸಿದರು. ಕೆಲ ಬುದ್ಧಿವಂತ, ಜಗದ್ವಿಖ್ಯಾತ ಅಂತ ಹೇಳಿಕೊಂಡವರಿಗೆ ಸಣ್ಣತನಗಳಿರುತ್ತವೆ. ಆದರೆ ಪೂಜ್ಯರಲ್ಲಿ ಸಣ್ಣತನರಲಿಲ್ಲ. ವಿಶಾಲ ಮನಸ್ಥಿತಿ ಅವರಲ್ಲಿತ್ತು. ಎಡಬಿಂಡಂಗಿತನ ಪ್ರದರ್ಶಿಸದವರು ಇವತ್ತು ನಮ್ಮ ಕಣ್ಣು ಮುಂದೆ ಅನೇಕರಿದ್ದಾರೆ. ಆದರೆ ಸತ್ಯ ಗೊತ್ತಾದಾಗ ಅವರ ಮುಖವಾಡ ಕಳಚುವುದು. ಕಾಡಿನಲ್ಲಿದ್ದರೂ ಕಾನೂನು ಪಾಲಿಸಬೇಕೆಂದು ಕಾನೂನು ಸಚಿವರಿಗೆ ಶ್ರೀಗಳು ಪಾಠ ಮಾಡಿದ ಉದಾಹರಣೆಗಳಿವೆ.
ಶ್ರೀಗಳು ೬೦ ವರ್ಷಕ್ಕೆ ನಿವೃತ್ತಿಯಾದರು. ಸಿರಿಗೆರೆ ಮಠದ ಸಾಧನೆ ಬಹುದೊಡ್ಡದು. ಸಾಧನೆ ಮಾಡಿದ್ದನ್ನು ಕಿರೀಟವಾಗಿ ಮಾಡಿಕೊಂಡು ತಲೆಮೇಲೆ ಎತ್ತಿಕೊಂಡು ಹೋಗಬೇಕು. ಸಿರಿಗೆರೆ ಮಠಕ್ಕೆ ನ್ಯಾಯ ಕೇಳಿ ಬಂದವರಿಗೆ ನ್ಯಾಯವನ್ನು ಒದಗಿಸುತ್ತಿದ್ದರು. ಈ ಮಠದ ನ್ಯಾಯಗಳೇ ಕೋರ್ಟ್ಗಳಲ್ಲಿ ಇರಬೇಕೇ ಎನ್ನುವುದು ನನ್ನ ಪ್ರಶ್ನೆ. ಇದನ್ನು ಮಾತನಾಡೋದಕ್ಕೆ ಹೆದರಿಕೆ ಇಲ್ಲ. ನನ್ನ ಮಕ್ಕಳ ಬಗ್ಗೆ, ಮುಂದಿನ ಸಮಾಜದ ಬಗ್ಗೆ, ಮುಂದಿನ ಪೀಳಿಗೆಯ ಬಗ್ಗೆ ನನಗೆ ಕಾಳಜಿ ಇದೆ ಎಂದರು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು ಸಿರಿಗೆರೆ ಮಠದಲ್ಲಿ ಒಂದೊತ್ತಿನ ಊಟಕ್ಕೆ ಕಷ್ಟವಾಗಿತ್ತು. ಇಂತಹ ಸಂದರ್ಭದಲ್ಲಿ ಶಿವಕುಮಾರ ಶ್ರೀಗಳು ಮಠವನ್ನು, ಸಮಾಜವನ್ನು ಹೇಗೆ ಬೆಳೆಸಬೇಕೆಂದು ಚಿಂತಿಸಿದರು. ಗುರುಗಳಿಗೆ ಏನೇ ಕಷ್ಟ ನಿಷ್ಠುರಗಳು ಬಂದರೂ ಎದೆಗುಂದದೇ ದಿಟ್ಟತನದಿಂದ ಎದುರಿಸಿದರು.
ಶ್ರೀಗಳಿಗೆ ಪೀಠ ಎನ್ನುವಂಥದ್ದು ಮುಳ್ಳಿನ ಹಾಸಿಗೆಯಾಗಿತ್ತು. ಅದನ್ನು ತಮ್ಮ ಕಾರ್ಯಕ್ಷೇತ್ರಗಳ ಮೂಲಕ ಹೂವಿನ ಹಾಸಿಗೆಯನ್ನಾಗಿ ಮಾಡಿಕೊಂಡರು. ಯಾರನ್ನೂ ನಗಣ್ಯ ಎಂದು ತಿಳಿದುಕೊಂಡಿರಲಿಲ್ಲ. ದುಗ್ಗಾಣಿ ಮಠವನ್ನು ದುಡಿಯುವ ಮಠವನ್ನಾಗಿ ಮಾಡಿದರು. ಭಕ್ತರ ಶ್ರೇಯಸ್ಸೇ ನಮ್ಮ ಶ್ರೇಯಸ್ಸು ಎಂದು ತಿಳಿದುಕೊಂಡಿದ್ದರು. ಶ್ರೀಗಳಿಗೆ ಕ್ರಿಯೆ ಮತ್ತು ಪ್ರತಿಕ್ರಿಯೆ ಜೊತೆ ಜೊತೆಯಾಗಿಯೇ ಇರುತ್ತಿತ್ತು. ಅಂತಹ ಅಪರೂಪದ ವ್ಯಕ್ತಿತ್ವ ಶ್ರೀಗಳದ್ದು ಎಂದರು.
ಅತಿಥಿಗಳಾಗಿ ಆಗಮಿಸಿದ ಸುಮತಿ ಜಯಪ್ಪ ಮಾತನಾಡಿ ಶಿವಕುಮಾರ ಸ್ವಾಮೀಜಿಯವರು ಕರ್ನಾಟಕ ಕಂಡ ಅಪರೂಪದ ದಿವ್ಯ ಚೇತನ. ಅವರ ನಿಲುವು ದಿಟ್ಟವಾದುದು. ನಿಜದ ನೇರಕ್ಕೆ ನಡೆವ ಧೀರ ಗುರು. ಸಮಾಜ ಕಳಕಳಿ ಇರುವಂಥವರು. ವೈಜ್ಞಾನಿಕ ಚಿಂತಕರಾಗಿದ್ದರು. ದುಗ್ಗಾಣಿ ಮಠವನ್ನು ದುಡಿಯುವ ಮಠವನ್ನಾಗಿ ಮಾಡಿದರು. ತರಳಬಾಳು ಮಠ ಭಾರತಾದ್ಯಂತ ಗುರುತಿಸುವಂತೆ ಮಾಡಿದರು. ಆಡು ಮುಟ್ಟದ ಸೊಪ್ಪಿಲ್ಲ, ಸಿರಿಗೆರೆಯ ಶಿವಕುಮಾರ ಸ್ವಾಮಿಗಳು ಕೆಲಸ ಮಾಡಿದ ಕ್ಷೇತ್ರವಿಲ್ಲ ಎನ್ನುವ ಮಾತು ಜಗಜ್ಜಾಹಿರ. ಗ್ರಾಮೀಣ ಜನರ ಬದುಕನ್ನು ಉದ್ಧಾರ ಮಾಡಬೇಕೆಂಬ ಹಂಬಲದಿಂದ ಗ್ರಾಮೀಣ ಜನರಿಗೆ ಶಿಕ್ಷಣ ಕೊಡಬೇಕೆಂದು ನಿರ್ಧರಿಸಿದರು. ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಟ್ಟರೆ ಇಡೀ ಸಮಾಜ ಉದ್ಧಾರ ಸಾಧ್ಯ ಎಂದರಿತರು. ಹಳ್ಳಿಗಾಡಿನಲ್ಲಿ ಶಾಲಾ ಕಾಲೇಜುಗಳನ್ನು ತೆರೆದರು.
ಶೈಕ್ಷಣಿಕವಾಗಿ ಸಾಮಾಜಿಕವಾಗಿ ಆರ್ಥಿಕವಾಗಿ ಸಾಂಸ್ಕೃತಿಕವಾಗಿ ಸುಧಾರಣೆ ಮಾಡಿದರು. ಅವರೊಬ್ಬ ವ್ಯಕ್ತಿಯಲ್ಲ; ಶಕ್ತಿಯಾಗಿದ್ದರು. ಭಕ್ತರೆಂದರೆ ಪರಮಪ್ರೀತಿ. ದುಡಿಮೆಯ ಮಾರ್ಗವನ್ನು ತೋರಿಸಿ ದುಡಿಮೆ ಮಾಡುವಂತೆ ಮಾರ್ಗದರ್ಶನ ಮಾಡುತ್ತಿದ್ದರು.
ಸಮಾಜದಲ್ಲಿ ಕಂದಾಚಾರ, ಮೌಢ್ಯಗಳನ್ನು ಹೊಡೆದೋಡಿಸಿದರು. ಕಾಲ, ಕಾಯಕ, ಕಾಸಿಗೆ ಹೆಚ್ಚಿನ ಮಹತ್ವ ಕೊಟ್ಟರು. ಅವರು ನುಡಿಜಾಣರಾಗದೇ ನಡೆಧೀರರಾಗಿದ್ದರು. ನುಡಿದಂತೆ ನಡೆದವರಲ್ಲ; ನಡೆದಂತೆ ನುಡಿದರು. ಸಿಕ್ಕ ಸಮಯವನ್ನು ಸದುಪಯೋಗಪಡಿಸಿಕೊಳ್ಳಬೇಕೆಂಬ ನಿಲುವು ಶ್ರೀಗಳಲ್ಲಿತ್ತು.
ಶ್ರೀ ಶಿವಕುಮಾರ ಸ್ವಾಮೀಜಿಯವರ ಕನಸನ್ನು ನನಸನ್ನಾಗಿ ಮಾಡುತ್ತಿರುವವರು ನಮ್ಮ ಪರಮಪೂಜ್ಯ ಪಂಡಿತಾರಾಧ್ಯ ಶ್ರೀಗಳು. ಕಾಯಕಕ್ಕೂ ಹೆಚ್ಚು ಮಹತ್ವ ಕೊಟ್ಟರು. ಕಾಸಿಗೂ ಹೆಚ್ಚಿನ ಮಹತ್ವ ಕೊಡುತ್ತಿದ್ದರು. ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಸಾಹಿತ್ಯಕವಾಗಿ, ಸಾಂಸ್ಕೃತಿಕವಾಗಿ ಬಹುದೊಡ್ಡ ಕೆಲಸ ಮಾಡಿದರು. ಶರಣತತ್ವ ಜನಸಾಮಾನ್ಯರಿಗೆ ತಲುಪಬೇಕೆಂಬ ಮಹಾದಾಸೆ ಇತ್ತು. ಅನ್ನದಾಸೋಹದ ಮೂಲಕ ಜ್ಞಾನದಾಸೋಹಕ್ಕೆ ಹೆಚ್ಚು ಮಹತ್ವ ಕೊಟ್ಟಿದ್ದರು. ಸರ್ವಶರಣ ಸಮ್ಮೇಳನ, ಸಾಮೂಹಿಕ ವಿವಾಹ ಕಾರ್ಯಕ್ರಮಗಳಲ್ಲಿ ಅಕ್ಕನಬಳಗದವರಿಂದ ವಚನಗೀತೆಗಳನ್ನು ಹಾಡಿಸುತ್ತಿದ್ದರು. ಸಾವಿರಾರು ವಚನಗಳಿಗೆ ಸಂಗೀತ ಸಂಯೋಜನೆಯನ್ನು ಮಾಡಿಸಿ ವಚನಗೀತೆಗಳನ್ನು ಹಾಡಿಸಿದರು. ಶರಣರ ವಿಚಾರಗಳನ್ನು ಪ್ರಚಾರ ಮಾಡಲಿಕ್ಕೆ ನಾಟಕ ಎನ್ನುವ ಮಾಧ್ಯವನ್ನು ಆರಿಸಿಕೊಂಡು ಶರಣರ ವಿಚಾರಗಳನ್ನು ನಾಟಕದ ಮೂಲಕ ಪ್ರಸಾರ ಮಾಡುವ ಕೆಲಸವನ್ನು ಮಾಡಿದರು.
ವಿಶ್ವಬಂಧು ಮರುಳಸಿದ್ಧ, ಮರಣವೇ ಮಹಾನವಮಿ, ಶರಣಸತಿ-ಲಿಂಗಪತಿ ಎನ್ನುವ ನಾಟಕಗಳನ್ನು ರಚಿಸಿ, ನಿರ್ದೇಶಿಸಿ ಕರ್ನಾಟಕದಾದ್ಯಂತ ಪ್ರದರ್ಶನ ಮಾಡಿಸಿದರು. ಈ ಮೂರು ನಾಟಕಗಳನ್ನು ಹಿಂದಿ ಭಾಷೆಯಲ್ಲಿ ಅನುವಾದಿಸಿ ಭಾರತರಾದ್ಯಂತ ನಾಟಕಗಳನ್ನಾಡಿಸಿ ಸಾಣೇಹಳ್ಳಿ ಮಠದ ಕೀರ್ತಿಯನ್ನು ಉತ್ತುಂಗಶಿಖರಕ್ಕೇರಿಸಿದ ಕೀರ್ತಿ ಪಂಡಿತಾರಾಧ್ಯ ಶ್ರೀಗಳಿಗೆ ಸಲ್ಲಬೇಕು. ಶ್ರೀಗಳಿಗೆ ಕಲಾಭಿಮಾನ ತುಂಬಾ ಇತ್ತು. ರಂಗಭೂಮಿಯ ಮೂಲಕ ಶರಣ ವಿಚಾರಗಳನ್ನು ಬಿತ್ತುವ ಕೆಲಸ ಮಾಡಿದರು ಎಂದರು.
ಇನ್ನೋರ್ವ ಮುಖ್ಯ ಅತಿಥಿಯಾಗಿ ಆಗಮಿಸಿದ ಮಾಜಿ ಶಾಸಕ ಡಿ ಎಸ್ ಸುರೇಶ ಮಾತನಾಡಿ ಆರ್ಥಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಮೇಲಕ್ಕೆ ತಂದವರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು.
ಇವತ್ತಿನ ಪರಿಸ್ಥಿತಿಯನ್ನು ನೋಡಿದರೆ ಅವರ ಕನಸು ನನಸಾಗುತ್ತೋ ಇಲ್ಲವೋ ಎನ್ನುವ ಅನುಮಾನ. ಗ್ರಾಮೀಣ ಭಾಗದಲ್ಲಿ ನೂರಾರು ಶಾಲೆಗಳನ್ನು ತೆರೆಯುವುದರ ಮೂಲಕ ಶಿಕ್ಷಣ ಕೊಟ್ಟರು. ಹಿರಿಯ ಗುರುಗಳು ರಾಜಕೀಯವಾಗಿ ಬೆಂಬಲ ಕೊಡುತ್ತಿದ್ದರು. ಮೊದಲಿನಂತೆ ಮಠದ ವಾತಾವರಣ ಆಗಬೇಕು. ಶಿವಕುಮಾರ ಸ್ವಾಮೀಜಿಯವರ ಕನಸು ನನಸಾಗಬೇಕೆಂಬುದು ನಮ್ಮೆಲ್ಲಾ ಸಮಾಜದವರ ಆಶಯ. ಶಿವಕುಮಾರ ಸ್ವಾಮೀಜಿಯವರಂತೆ ಪಂಡಿತಾರಾಧ್ಯ ಶ್ರೀಗಳು ಸಮಾಜವನ್ನು ಕಟ್ಟುವ ಕೆಲಸವನ್ನು ಮಾಡುತ್ತಿದ್ದರು. ಮುಂದಿನ ವರ್ಷದಿಂದ ಮಧ್ಯಾಹ್ನದ ಸಮಯದಲ್ಲಿ ಶ್ರದ್ಧಾಂಜಲಿ ಸಮಾರಂಭವನ್ನು ಮಾಡಬೇಕೆಂಬುದು ನಮ್ಮೆಲ್ಲರ ಆಶಯ. ನಮ್ಮ ಆಶಯವನ್ನು ಪೂಜ್ಯರು ನೆರವೇರಿಸಬೇಕೆಂದು ತಮ್ಮಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆಂದು ಹೇಳಿದರು.
ಪಂಡಿತಾರಾಧ್ಯ ಶ್ರೀಗಳ ವಚನ ಸಂದೇಶ ಭಾಗ – ೩ ಕೃತಿ ಲೋಕರ್ಪಣೆಗೊಳಿಸಲಾಯಿತು. ಆರಂಭದಲ್ಲಿ ಶಿವಸಂಚಾರದ ಕಲಾವಿದರಾದ ದಾಕ್ಷಾಯಣಿ, ಹೆಚ್ ಎಸ್ ನಾಗರಾಜ್ ತಬಲಾಸಾಥಿ ಶರಣ ವಚನಗೀತೆಗಳನ್ನು ಹಾಡಿದರು. ಸಂಧ್ಯಾ ಪಿ ಎಲ್ ನಿರೂಪಿಸಿ, ವಂದಿಸಿದರು. ಸುಧಾ ಎಂ ಸ್ವಾಗತಿಸಿದರು. ಕೊನೆಗೆ ಶಿವಕುಮಾರ ರಂಗಪ್ರಯೋಗಶಾಲೆಯ ವಿದ್ಯಾರ್ಥಿಗಳು ಮಹಾಬೆಳಗು ನಾಟಕವನ್ನು ಪ್ರಸ್ತುತಪಡಿಸಿದರು.