ಗಾಂಧಿಯವರಿಗೆ ಪ್ರೇರಣೆಯಾದ ಬಸವಣ್ಣ: ಚಿಂತಕ ಜಿ.ಎಸ್.ಜಯದೇವ

ಸಾಣೇಹಳ್ಳಿ

ಹಿಂಸೆ ಎಂದರೆ ನಮ್ಮ ಸುತ್ತಮುತ್ತಲಿರುವ ಪ್ರಾಣಿಗಳಿಗಷ್ಟೇ ಅಲ್ಲ ಗಿಡಮರಗಳಿಗೂ ನೋವು ಆಗದ ಹಾಗೆ ನಡೆದುಕೊಳ್ಳುವದು. ಇಂತಹ ಒಂದು ಸತ್ವಗುಣ ನಮ್ಮಲ್ಲಿ ಬೆಳೆಯಬೇಕಾದರೆ ಗಾಂಧೀಜಿಯವರು ಹೇಗೆ ಬದುಕಿದ್ದರು, ಏನು ಹೇಳಿದ್ದರು ಎನ್ನುವುದನ್ನು ತಿಳಿದುಕೊಳ್ಳಬೇಕು. ಶಿವಶರಣರು ಮಾಡಿದ್ದು ಗಾಂಧೀ ಮಾಡಿದ್ದು ಒಂದೇ, ಎಂದು ಚಿಂತಕ ಜಿ.ಎಸ್.ಜಯದೇವ ಬುಧವಾರ ಹೇಳಿದರು.

ಇಲ್ಲಿನ ಶ್ರೀಮಠದ ಆವರಣದಲ್ಲಿ ನಡೆದ ಮಹಾತ್ಮಗಾಂಧೀ ಹಾಗೂ ಲಾಲ್‌ಬಹದ್ದೂರ್ ಶಾಸ್ತ್ರೀಜಿಯವರ ಜಯಂತಿಯ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬೆಳಗಾವಿಗೆ ಗಾಂಧೀ ಬಂದಾಗ ಬಸವಣ್ಣನವರು ಬಗ್ಗೆ ನನಗೆ ಗೊತ್ತಿಲ್ಲ. ಬಸವಣ್ಣನವರು ಈಗ ಏನಾದರೂ ಇದ್ದಿದ್ದರೆ ಅವರ ಪೂಜೆಯನ್ನು ಮಾಡ್ತಿದ್ದೆ. ಯಾಕೆಂದರೆ ಯಾವುದನ್ನು ನಮ್ಮಿಂದ ಸಾಧಿಸಲಿಕ್ಕೆ ಆಗಲಿಲ್ವೋ ಅದನ್ನು ೮೦೦ ವರ್ಷಗಳ ಹಿಂದೆಯೇ ಬಸವಣ್ಣನವರು ಸಾಧಿಸಿದರು. ಇಂತಹ ವ್ಯಕ್ತಿ ಕರ್ನಾಟಕದಲ್ಲಿರುವುದು ನಿಮ್ಮೆಲ್ಲರ ಸೌಭಾಗ್ಯ ಎಂದು ಹೇಳಿದ್ದರು.

ಮನುಷ್ಯನಲ್ಲಿ ಹಿಂಸಾಪ್ರವೃತ್ತಿ ಒಳಗೆ ಇರುತ್ತೆ. ಆಂತರ್ಯವನ್ನು ನೋಡಿಕೊಂಡು ಶುದ್ಧಿಮಾಡಿಕೊಳ್ಳುವವರು ಭಾರತೀಯರು ಎಂದು ಗಾಂಧೀಜಿ ಹೇಳಿದರು.

ನಮ್ಮ ಶರಣ ಪರಂಪರೆ ನನ್ನೊಳಗಡೆ ಏನಿದೆ ಎಂದು ಹುಡುಕಿ ಅದನ್ನು ಶುದ್ಧೀಕರಿಸಿಕೊಂಡ ಪರಂಪರೆ. ಗಾಂಧೀಜಿಯವರು ಅನ್ಯ ಸಂಸ್ಕೃತಿಯ ಗಾಳಿ ಬೀಸಲಿ, ಆದರೆ ನನ್ನ ಬೇರು ಅಲ್ಲಾಡಿಸದೆ ಇರಲಿ ಎಂದು ಹೇಳಿ ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದರು.

ನಾವೆಲ್ಲರೂ ಅನುಕರಣೆಯ ಹಿಂದೆ ಓಡುತ್ತಿದ್ದೇವೆ. ಅನುಕರಣೆ ಮಾಡುವುದು ಅವನತಿ. ಇವತ್ತು ನಮ್ಮ ನಡುವೆ ಇರುವ ಸಮಸ್ಯೆ ನಮ್ಮಲ್ಲಿದ್ದ ಶಕ್ತಿಯನ್ನು ಕಳೆದುಕೊಂಡು ಬೇರೆ ದೇಶದ ಶಕ್ತಿಯನ್ನು ಪಡೆದುಕೊಂಡಿದ್ದೇವೆ.

ಗಾಂಧೀಜಿ ಹಳ್ಳಿಯ ಜೀವನವನ್ನು ಅಪೇಕ್ಷಿಸುತ್ತಿದ್ದರು. ಹಳ್ಳಿಯ ಉದ್ಧಾರವೇ ದೇಶದ ಉದ್ಧಾರವೆಂದು ಹೇಳುತ್ತಿದ್ದರು. ಮನುಷ್ಯ ನೈಜವಾದ ಸಂತೋಷವನ್ನು ಅನುಭವಿಸಬೇಕು. ನನ್ನ ದೇಶದಲ್ಲಿ ಎಲ್ಲ ಧರ್ಮದವರು ಸೋದರರ ತರ ಬದುಕುತ್ತಿದ್ದಾರೆ. ಅಂತಹ ದೇಶ ನಮ್ಮದು. ಕೋಮು ಸಾಮರಸ್ಯ, ಧರ್ಮ ಸಾಮರಸ್ಯದಿಂದ ಬದುಕಬೇಕು. ರಾಜಕೀಯದ ಹುನ್ನಾರದಿಂದ ಅನೇಕ ಸಂಘರ್ಷಗಳು ಉಂಟಾಗುತ್ತವೆ. ಗಂಡುಮಕ್ಕಳಿಗಷ್ಟೇ ಸ್ವಾತಂತ್ರ್ಯ ಹೆಣ್ಣುಮಕ್ಕಳಿಗೂ ಇದೆ ಎಂದು ಗಾಂಧೀಜಿಯವರು ಹೇಳಿದರು.

ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು ಮಾತನಾಡಿ; ನಮ್ಮ ನಾಡಿನಲ್ಲಿ ಬುದ್ಧ, ಬಸವ, ಗಾಂಧಿಯವರ ದೊಡ್ಡ ಪರಂಪರೆಯಿದೆ. ಅವರೆಲ್ಲರೂ ತಮಗಾಗಿ ಬದುಕಿದವರಲ್ಲ. ಲೋಕಲ್ಯಾಣಕ್ಕಾಗಿ ತಮ್ಮ ಬದುಕನ್ನು ಮುಡುಪಾಗಿಟ್ಟವರು. ಅಂತಹ ಮಹಾನ್ ಚೇತನಗಳನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುವಂಥದ್ದೇ ನಮ್ಮ ಬದುಕಿಗೆ ಒಂದು ರೀತಿಯ ಶಕ್ತಿಯನ್ನು ತಂದುಕೊಡುವಂಥದ್ದು.

ಸತ್ಯ, ಅಹಿಂಸೆ, ಸತ್ಯಾಗ್ರಹ ಇವು ಗಾಂಧಿಯವರ ಬದುಕಿನ ಪ್ರಮುಖ ತತ್ವಗಳು. ಗಾಂಧೀಜಿಯವರು ಸತ್ಯವೇ ದೇವರು ಎಂದು ಪ್ರತಿಪಾದಿಸಿದರು. ಸತ್ಯಕ್ಕಾಗಿಯೇ ಅಹಿಂಸೆಯನ್ನು ಪ್ರತಿಪಾದನೆ ಮಾಡಿದರು. ಆ ಸತ್ಯ, ಅಹಿಂಸೆಯ ಪ್ರತಿಪಾದನೆಯಿಂದಾಗಿಯೇ ಸತ್ಯಾಗ್ರಹವನ್ನು ಒಪ್ಪಿಕೊಂಡಿದ್ದು.

ಗಾಂಧೀಜಿಯವರ ಜೀವನದ ಅನುಭವ ಬಹುದೊಡ್ಡ ಪಾಠವನ್ನು ಕಲಿಸಿತು. ಪ್ರಕೃತಿಯನ್ನು ಕಣ್ಬಿಟ್ಟು ನೋಡುವ ಗುಣ ಅವರಲ್ಲಿತ್ತು. ಸಮಾಜದಲ್ಲಿ ಏನಾಗುತ್ತಿದೆ ಎನ್ನುವುದನ್ನು ಸೂಕ್ಷ್ಮಮವಾಗಿ ಗಮನಿಸುತ್ತಿದ್ದರು. ಸ್ವಚ್ಛತೆಗೆ ವಿಶೇಷವಾದ ಮಾನ್ಯತೆ ಕೊಡುತ್ತಿದ್ದರು. ನಾವು ಎಲ್ಲದಕ್ಕೂ ಬೇರೆಯವರನ್ನು ಅವಲಂಭಿಸುವಂಥ ಜನ. ಕಾಯಕಶ್ರದ್ಧೆ ಕಡಿಮೆಯಾಗುತ್ತಿದೆ. ಆದರೆ ಗಾಂಧೀ ಹೇಳಿದ್ದು ತನ್ನ ಕೆಲಸವನ್ನು ತಾನೇ ಮಾಡಬೇಕೆಂದು. ಗಾಂಧಿ ಸ್ವಚ್ಛತೆಗೆ ಮಹತ್ವ ಕೊಟ್ಟ ಹಾಗೆ ಇಲ್ಲಿನ ವಿದ್ಯಾರ್ಥಿಗಳು ಸ್ವಚ್ಛತೆಗೆ ಹೆಚ್ಚು ಮಹತ್ವ ಕೊಡಬೇಕು.

ಅನೇಕರು ಸತ್ಯದ ತಲೆಯ ಮೇಲೆ ಹೊಡೆದ ಹಾಗೆ ಸುಳ್ಳು ಹೇಳುವುದನ್ನು ರೂಢಿಸಿಕೊಂಡಿದ್ದಾರೆ. ಆದರೆ ಇವತ್ತಿನಿಂದಲೇ ಸತ್ಯದ ಪ್ರತಿಪಾದನೆಯನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಹಿಂಸೆ ನನಗೂ ಆಗದೇ ಬೇರೆಯವರಿಗೂ ಆಗಬಾರದು ಎನ್ನುವ ತತ್ವವನ್ನು ಗಾಂಧೀಜಿ ಪ್ರತಿಪಾದನೆ ಮಾಡ್ತಾರೆ. ಅಹಿಂಸೆಯನ್ನು ಬದುಕಿನಲ್ಲಿ ಅನುಷ್ಠಾನಕ್ಕೆ ತರಬೇಕು.

ಗಾಂಧಿ ಸತ್ಯಾಗ್ರಹ ಮಾಡುತ್ತಿದ್ದದ್ದು ಪ್ರತಿಭಟನೆ. ಅಲ್ಲವಾದದ್ದು, ಅನ್ಯಾಯವಾದದ್ದು ಎಲ್ಲೇ ಕಂಡರೂ ನಮಗೇನು ಸಂಬಂಧ ಇಲ್ಲ ಅಂತ ತಲೆತಗ್ಗಿಸಿಕೊಂಡು ಹೋಗುವುದಾಗಲಿ ಅಥವಾ ಅದರ ಬಗ್ಗೆ ತಾತ್ಸಾರ ಪಡುವುದಾಗಲಿ ಸಲ್ಲದು. ಅದನ್ನು ಪ್ರತಿಭಟಿಸುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು. ಗಾಂಧಿ ಜಯಂತಿ ಸಾಂಪ್ರದಾಯಿಕ ಆಚರಣೆ ಆಗದೇ ಪ್ರತಿದಿನ ನಮ್ಮ ಬದುಕಿನ ಸಿಂಹಾವಲೋಕನ ಮಾಡಿಕೊಂಡು ಆಚರಣೆ ತಂದುಕೊಳ್ಳಬೇಕು.

ನಮ್ಮ ಬದುಕಿನಲ್ಲಿರುವ ಅವಗುಣಗಳನ್ನು ಕಳೆದುಕೊಳ್ಳುತ್ತಾ ಹೋದರೆ ಗಾಂಧಿ ಜಯಂತಿಗೆ ವಿಶೇಷ ಅರ್ಥ ಬರುತ್ತದೆ. ನಾವೆಲ್ಲರೂ ತಪ್ಪನ್ನು ಮತ್ತೆ ಮತ್ತೆ ಮಾಡ್ತಾ ಇದೇ ನಮ್ಮ ಬದುಕಿನ ಬಂಡವಾಳವೆಂದು ತಿಳಿದುಕೊಂಡಿದ್ದೇವೆ. ಆದ್ದರಿಂದಲೇ ಏನೆಲ್ಲಾ ಅನಾಹುತಗಳಾಗುತ್ತಿವೆ. ಹಾಗಾಗಿ ಒಳ್ಳೆಯ ಕೆಲಸಕಾರ್ಯಗಳಿಗೆ ಗಮನಹರಿಸಬೇಕು. ಅಲ್ಲವಾದ ಕೆಲಸಕಾರ್ಯಗಳಿಂದ ದೂರವಿರಬೇಕು ಎಂದರು.

ಚಿಂತಕ ರಾಜಾರಾಂ ತೋಳ್ಪಾಡಿ ಮಾತನಾಡಿ ಅಹಿಂಸೆ ಎಂದರೆ ಪ್ರೀತಿ, ವಾತ್ಸಲ್ಯ ಎಂದು ಗಾಂಧೀ ಹೇಳಿದರು. ಬರೀ ನಮ್ಮನ್ನು ನಾವು ಪ್ರತಿಸುವುದಲ್ಲ. ಎಲ್ಲ ಚರಾಚರ ವಸ್ತುಗಳೊಂದಿಗೆ ಸಂಬಂಧವನ್ನಿಟ್ಟುಕೊಳ್ಳುವುದು. ಆಧ್ಯಾತ್ಮಿಕತೆಯಿಂದ, ನೈತಿಕತೆಯಿಂದ ನಿರಂತರವಾಗಿ ದೂರ ಸರಿತಾ ಇದ್ದೇವೆ. ಗಾಂಧೀಜಿ ಒಬ್ಬ ದಾರ್ಶನಿಕ. ಇತ್ತೀಚಿನ ದಿನಗಳಲ್ಲಿ ಅಹಿಂಸೆ ಎಂದರೆ ವಿವೇಚನೆ. ಹಿಂಸೆಗೆ ಪ್ರತಿಹಿಂಸೆ ಪ್ರತ್ಯುತ್ತರವಲ್ಲ ಎಂದರು.

ಈ ಸಂಧರ್ಭದಲ್ಲಿ ವೇದಿಕೆಯ ಮೇಲೆ ಸವೋದಯ ಚಿಂತಕರಾದ ಮಾಜಿ ಶಾಸಕ ಮಹಿಮಾ ಪಟೇಲ್, ಶ್ರೀಕುಮಾರ್, ಎಸ್.ಜಿ. ಸಿದ್ಧರಾಮಯ್ಯ, ಎಂ. ಬಸವರಾಜ, ಅಬ್ದುಲ್ ರಹಿಮಾನ್ ಪಾಷಾ, ಜೆ.ಎಸ್. ಪಾಟೀಲ, ಶಿವನಕೆರೆ ಬಸವಲಿಂಗಪ್ಪ, ಮುಖ್ಯಶಿಕ್ಷಕರು, ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಬಿ.ಎಸ್. ಶಿವಕುಮಾರ ಸ್ವಾಗತಿಸಿ ವಂದಿಸಿದರು. ವಿದ್ಯಾರ್ಥಿಗಳು ಪ್ರಾರ್ಥನೆಯನ್ನು ನಡೆಸಿಕೊಟ್ಟರು.

Share This Article
Leave a comment

Leave a Reply

Your email address will not be published. Required fields are marked *