ಕೂಡಲಸಂಗಮ
ಬಸವ ಸಂಸ್ಕೃತಿ ಅಭಿಯಾನದ ಯಶಸ್ಸಿಗಾಗಿ ದುಡಿದ, ಎಲ್ಲಾ ಜಿಲ್ಲೆಗಳ ಬಸವಪರ ಸಂಘಟನೆಗಳ ಕಾರ್ಯಕರ್ತರಿಗೆ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದಿಂದ ನವೆಂಬರ್ 11ರಂದು ಮುಂಜಾನೆ 10.30ಕ್ಕೆ ಸಂಗಮೇಶ್ವರ ಕಲ್ಯಾಣ ಮಂಟಪದಲ್ಲಿ ಸತ್ಕಾರ ಸಮಾರಂಭ ಆಯೋಜಿಸಲಾಗಿದೆ.
ಜಿಲ್ಲೆಗಳ ಸಂಘಟನೆಗಳಿಂದ ದುಡಿದವರ ಪಟ್ಟಿಯನ್ನು ಕಳುಹಿಸಿಕೊಡಲು ಮಠಾಧೀಶರ ಒಕ್ಕೂಟ ಈಗಾಗಲೇ ಸಂಘಟನೆಗಳನ್ನು ಸಂಪರ್ಕಿಸಿದೆ.
ಮಠಾಧಿಪತಿಗಳ ಒಕ್ಕೂಟದ ಅಭಿನಂದನಾ ಸಮಾರಂಭದ ನಂತರ ಜಾಗತಿಕ ಲಿಂಗಾಯತ ಮಹಾಸಭಾ ನೇತೃತ್ವದಲ್ಲಿ ಪದಾಧಿಕಾರಿಗಳ ಸಮಾಲೋಚನಾ ಸಭೆ ನಡೆಯಲಿದೆ.
ಬಸವ ಸಂಸ್ಕೃತಿ ಅಭಿಯಾನ ಒಂದು ಐತಿಹಾಸಿಕ ಘಟನೆಯಾಗಿ ಮಾರ್ಪಟ್ಟಿದೆ. ನಮ್ಮ ವಿರೋಧಿಗಳಿಗೆ ಅದು ನುಂಗಲಾಗದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ವಿರೋಧಿಗಳು ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಾ, ಸುಳ್ಳುಸುದ್ದಿಗಳನ್ನು ಹಬ್ಬಿಸುವುದರಲ್ಲೀಗ ನಿರತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ನಮ್ಮ ಮುಂದಿನ ಹೆಜ್ಜೆಗಳು ಏನಿರಬೇಕು, ಹೇಗೆ ಸಾಗಬೇಕು ಎಂಬುದರ ನೀತಿ ನಿರ್ಧಾರಗಳನ್ನು ಒಕ್ಕೂಟ ಮತ್ತು ಬಸವಪರ ಸಂಘಟನೆಗಳು ಸೇರಿ ಸಭೆಯಲ್ಲಿ ನಿರ್ಧರಿಸಲಿವೆ, ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಡಾ. ಶಿವಾನಂದ ಜಾಮದಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಭೆಯಲ್ಲಿ ಮುಂದಿನ ಒಂದು ವರ್ಷದ ಕಾರ್ಯಕ್ರಮಗಳ ಹಾಗೂ ಅಭಿಯಾನದಿಂದ ಕಲಿತ ಪಾಠಗಳ ಬಗ್ಗೆಯೂ ಚರ್ಚೆಯಾಗಲಿದೆ ಎಂದು ತಿಳಿದು ಬಂದಿದೆ.
