ಬಸವಣ್ಣ, ಲಿಂಗಾಯತ ಪರಂಪರೆಯನ್ನು ನುಂಗಿ ನೀರು ಕುಡಿಯುವ ಹುನ್ನಾರ ವಿಫಲಗೊಂಡಿದೆ.
ಬಾಗಲಕೋಟೆ
ಬಸವ ಸಂಸ್ಕೃತಿ ಅಭಿಯಾನದ ಯಶಸ್ಸಿನ ನಂತರ ಹಿಂದುತ್ವ ಸಂಘಟನೆಗಳು ಚಿಗುರುತ್ತಿರುವ ಲಿಂಗಾಯತ ಧರ್ಮವನ್ನು ಚಿವುಟಲು ಮುಂದಾಗಿವೆ.
ಲಿಂಗಾಯತ ಪೂಜ್ಯರ, ಮುಖಂಡರ, ಸಮಾಜದ ಮೇಲೆ ವ್ಯವಸ್ಥಿತ ದಾಳಿ ಶುರುವಾಗಿದೆ. ಬಸವ ಸಂಸ್ಕೃತಿ ಅಭಿಯಾನಕ್ಕೆ ವಿರುದ್ಧವಾಗಿ ತಾಲೂಕು ಮಟ್ಟದಲ್ಲಿ ‘ಬಸವಾದಿ ಶರಣರ ಹಿಂದೂ ಸಮಾವೇಶ’ ಮಾಡಲು ಆರೆಸ್ಸೆಸ್ ಜನ ಸಜ್ಜಾಗುತ್ತಿದ್ದಾರೆ.
ಈ ಬೆಳವಣಿಗೆಗಳನ್ನು ಅರ್ಥೈಸಲು ನಾಡಿನ ಪ್ರಮುಖ ಚಿಂತಕ, ಹೋರಾಟಗಾರರಿಗೆ ಬಸವ ಮೀಡಿಯಾ ಕೆಲವು ಪ್ರಶ್ನೆಗಳನ್ನು ಕೇಳಿದೆ. ಇಂದು ಪತ್ರಕರ್ತ ಸನತ್ ಕುಮಾರ ಬೆಳಗಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಗಮನಿಸಿ – ಈ ಚರ್ಚೆಯಲ್ಲಿ ಹೊಮ್ಮುವ ಅಭಿಪ್ರಾಯಗಳು ಆಯಾ ಲೇಖಕರದು. ಬಸವ ಮೀಡಿಯಾ ಅವುಗಳನ್ನು ಪ್ರಕಟಿಸಲು ಒಂದು ವೇದಿಕೆಯಷ್ಟೆ.
1) ಬಸವ ಸಂಸ್ಕೃತಿ ಅಭಿಯಾನ ಕನ್ನಡ ಸಮಾಜಕ್ಕೆ ಏನು ಸಂದೇಶ ನೀಡಿದೆ? ಅದರ ಪರಿಣಾಮವೇನು?
ಬಹುತ್ವ ಭಾರತದ ಸಮಾಜ ಸುಧಾರಕರನ್ನು ಮಾನವಪರ ಕಾಳಜಿಯ ಧಾರ್ಮಿಕ ಚಿಂತಕರು, ರಾಜರುಗಳನ್ನು ವಿಶೇಷವಾಗಿ ಶಿವಾಜಿ, ವಿವೇಕಾನಂದ, ಮೊದಲಾದವರನ್ನು ತಮ್ಮ ಮನುವಾದಿ ಹಿಂದುತ್ವದ ಕಾರ್ಯಸೂಚಿಗೆ ಬಳಸಿಕೊಂಡಂತೆ ಬಸವಣ್ಣನವರನ್ನು ಬಳಸಿಕೊಳ್ಳಲು ಹೊರಟ ಕೋಮುವಾದಿ ಶಕ್ತಿಗಳಿಗೆ ಬಸವ ಸಂಸ್ಕೃತಿ ಅಭಿಯಾನ ದಿಗಿಲುಂಟು ಮಾಡಿದೆ. ಕ್ರಾಂತಿಕಾರಿ ಬಸವಣ್ಣ ಮತ್ತು ಲಿಂಗಾಯತ ಪರಂಪರೆಯನ್ನೇ ನುಂಗಿ ನೀರು ಕುಡಿಯುವ ಹುನ್ನಾರ ಸದ್ಯಕ್ಕೆ ವಿಫಲಗೊಂಡಿದೆ.
2) ಅಭಿಯಾನ ಮತ್ತು ಅದರಲ್ಲಿ ಭಾಗವಹಿಸಿದ ಲಿಂಗಾಯತ ಪೂಜ್ಯರ, ಮುಖಂಡರ ಮೇಲೆ ಹಿಂದುತ್ವವಾದಿಗಳಿಗೆ ಇಷ್ಟೊಂದು ಕೋಪ ತಾಪ ಬಂದಿರುವುದು ಯಾಕೆ?
ತಮ್ಮ ಮಸಲತ್ತನ್ನು ವಿಫಲಗೊಳಿಸಿದ ಸಹಜವಾಗಿ ಮನುವಾದಿ ಹಿಂದುತ್ವವಾದಿಗಳಿಗೆ ಕೋಪ ಬಂದಿದೆ.
3) ಅಭಿಯಾನಕ್ಕೆ ಪ್ರತಿಯಾಗಿ ಈಗ ‘ಬಸವಾದಿ ಶರಣರ ಹಿಂದೂ ಸಮಾವೇಶ’ ಮಾಡಲು ಸಿದ್ಧವಾಗುತ್ತಿದ್ದಾರೆ. ಲಿಂಗಾಯತ ಮಠಾಧಿಪತಿಗಳ, ಮುಖಂಡರ ಮೇಲೆ ಕೆಲವು ಹಿಂದುತ್ವ ಸ್ವಾಮೀಜಿಗಳನ್ನು, ನಾಯಕರನ್ನು ಛೂ ಬಿಟ್ಟಿದ್ದಾರೆ. ಇವರ ಉದ್ದೇಶವೇನು?
ಬಸವ ಸಂಸ್ಕೃತಿ ಅಭಿಯಾನಕ್ಕೆ ಪ್ರತಿಯಾಗಿ ಸಂಘ ಪರಿವಾರ ಬಸವಾದಿ ಶರಣರ ಹೆಸರನ್ನು ದುರ್ಬಳಕೆ ಮಾಡಿಕೊಂಡು ಹಿಂದು ಸಮಾವೇಶ ಮಾಡಲು ಹೊರಟಿದೆ. ಬೆಳಗಾವಿಯಲ್ಲಿ ಈಗಾಗಲೇ ಒಂದು ಸಭೆ ನಡದಿದೆ. ಲಿಂಗಾಯತಕ್ಕೆ ಸಂಬಂಧವಿಲ್ಲದ ಕೋಮುಗಲಭೆ ಪ್ರಚೋದಕರು ವಿಶೇಷವಾಗಿ ಚಕ್ರವರ್ತಿ ಸೂಲಿಬೆಲೆ, ಮುತಾಲಿಕ, ಸಿ.ಟಿ. ರವಿ ಅವರಂತವರನ್ನು ಕರೆದು ಅವರಿಂದ ಭಾಷಣ ಮಾಡಿಸಲಾಗಿದೆ. ಕನ್ನೇರಿ ಸ್ವಾಮಿಯಂತವರನ್ನು ಲಿಂಗಾಯತ ಮಠಾಧೀಶರ ಮೇಲೆ ಛೂ ಬಿಡಲಾಗಿದೆ. ಇದಕ್ಕೆ ಕಾರಣ ತಮ್ಮ ಅಪಾಯಕಾರಿ ಅಜೆಂಡಾ ಯಶಸ್ವಿಯಾಗದಿರುವದೇ ಆಗಿದೆ.
4) ಇದು ಲಿಂಗಾಯತರ ಸಮಸ್ಯೆ ಮಾತ್ರವೇ ಅಥವಾ ಈ ಘರ್ಷಣೆ ಇಡೀ ಸಮಾಜದ ಮೇಲೆ ಪರಿಣಾಮ ಬೀರಲಿದೆಯೇ?
ಲಿಂಗಾಯತರು ಮಾತ್ರವಲ್ಲ ಇಡೀ ಕರ್ನಾಟಕದ ಸಹಬಾಳ್ವೆಯ ಸಂಸ್ಕೃತಿಯನ್ನು ನಾಶ ಮಾಡುವ ಅಪಾಯವಿದೆ. ಇದಕ್ಕೆ ಪ್ರತಿರೋಧ ತುರ್ತು ಅಗತ್ಯವಾಗಿದೆ.
5) ಈ ರೀತಿಯ ದಾಳಿ ಮುಂದುವರೆದರೆ ಸಂವಿಧಾನ ನೀಡಿರುವ ಮೂಲಭೂತ ಹಕ್ಕನ್ನು ನಾವು ಕಳೆದುಕೊಳ್ಳುತೇವೆಯೇ?
ಬಾಬಾಸಾಹೇಬರ ಸಂವಿಧಾನದ ಬಗ್ಗೆ ಈ ಮನುವ್ಯಾಧಿಗಳಿಗೆ ಅಸಮಾಧಾನ ಇದೆ. ಇವರ ಬಲ ಹೆಚ್ಚಾದರೆ ಮೂಲಭೂತ ಹಕ್ಕುಗಳ ಮೇಲೆ ದಾಳಿ ತೀವ್ರ ಗೊಳ್ಳಲಿದೆ.
ಬಾಬಾಸಾಹೇಬರ ಸಂವಿಧಾನದ ಬಗ್ಗೆ ಈ ಮನುವ್ಯಾಧಿಗಳಿಗೆ ಅಸಮಾಧಾನ ಇದೆ.
6) ಲಿಂಗಾಯತ ಪೂಜ್ಯರ, ಮುಖಂಡರ ಮೇಲೆ ಕೆಟ್ಟ ಭಾಷೆ ಬಳಸುತ್ತಿದ್ದಾರೆ (ಸೂ* ಮಗ, ಮೆಟ್ಟು, ಮುಖ ತಿ** ಇತ್ಯಾದಿ) ಹಿಂದುತ್ವವಾದಿಗಳಿಗೆ ಬೇರೆಯವರ ಮೇಲೆ ಇಂತಹ ಭಾಷೆ ಸುಲುಭವಾಗಿ ಪ್ರಯೋಗಿಸಲು ಹೇಗೆ ಸಾಧ್ಯ?
ತಮ್ಮ ಕುತಂತ್ರ ಬಯಲಿಗೆ ಬಂದೀತೆಂಬ ಹೆದರಿಕೆಯಿಂದ ಲಿಂಗಾಯತ ಗುರುಗಳು ಹಾಗೂ ಮುಖಂಡರ ಮೇಲೆ ಕೆಟ್ಟ ಭಾಷೆಯನ್ನು ಬಳಸಿ ಬಾಯಿ ಮುಚ್ಚಿಸಲು ಯತ್ನಿಸುತ್ತಿದ್ದಾರೆ.
7) ಸಾರ್ವಜನಿಕ ಸಂವಾದದಲ್ಲಿ ಎಲ್ಲರೂ ಸಭ್ಯತೆ ಕಳೆದುಕೊಳ್ಳಬೇಕೇ? ಹಿಂದುತ್ವವಾದಿಗಳ ಮೇಲೆ ಮೇಲೆ ಇದೇ ಭಾಷೆ ಬಳಸಬೇಕೇ?
ಸಂವಾದದಲ್ಲಿ ಅಸಭ್ಯ ಭಾಷೆಯನ್ನು ಬಳಸುವುದು ಬೇಡ. ಅವರು ಬಳಸಿದರೂ ಅದಕ್ಕೆ ಅಸಭ್ಯ ಭಾಷೆಯನ್ನು ಬಳಸದೇ ಉತ್ತರ ನೀಡಬೇಕು.
9) ಈ ವಿವಾದ ರಾಜಕೀಯದ ಮೇಲೆ ಪರಿಣಾಮ ಬೀರುತ್ತದೆಯೇ?
ರಾಜಕೀಯದ ಮೇಲೆ ಪರಿಣಾಮ ಬೀರಲೆಂದೇ ಈ ವಿವಾದವನ್ನು ಸೃಷ್ಟಿಸಿದ್ದಾರೆ. ಇದರಿಂದ ಬಿಜೆಪಿಗೆ ಹೆಚ್ಚು ಓಟು ಬೀಳುವಂತೆ ಮಾಡಿ ರಾಜ್ಯಾಡಳಿತವನ್ನು ವಶ ಪಡಿಸಿಕೊಳ್ಳುವದು ಮನುವಾದಿಗಳ ಉದ್ಧೇಶವಾಗಿದೆ.
