ವೈದಿಕರಿಗಿಂತ ಬಿನ್ನವಾಗಿದ್ದ ಅಲ್ಲಮರ ಐಕ್ಯದ ಕಲ್ಪನೆ: ಪ್ರೊ. ಸಿದ್ಧಲಿಂಗಪ್ಪ ಬರಗುಂಡಿ

ಗುಳೇದಗುಡ್ಡ

ಪ್ರತಿ ಶನಿವಾರದ ಸಾಪ್ತಾಹಿಕ ಮನೆಯಲ್ಲಿ ಮಹಾಮನೆ ಕಾರ್ಯಕ್ರಮ ಶರಣ ಶೇಖರಪ್ಪ ತಿಪ್ಪಣ್ಣ ಅಂಗಡಿ ಅವರ ಮನೆಯಲ್ಲಿ ಶನಿವಾರ ಜರುಗಿತು.

ಕಾಯದ ಕಳವಳಕ್ಕಂಜಿ
ಪ್ರಾಣ ಹೋದಲ್ಲಿ, ಭವ ಹಿಂಗದು
ಪ್ರಕೃತಿ ಬಿಡದು. ವಾಯಕ್ಕಾದಡೆ
ಸತ್ತು ದೇವರ ಕೂಡಿಹೆನೆಂಬರು.
ಈ ವಾಯದ ಮಾತಿಂಗೆ ಆನು ಬೆರಗಾದೆನು.
ಕಾಯವಿದ್ದಲ್ಲಿ ಸಾಯದ ಸಾವ ಬಲ್ಲಡೆ
ಬೇರಿಲ್ಲ, ಗುಹೇಶ್ವರ ತಾನೆ!

ಪ್ರಾರಂಭದಲ್ಲಿ ಶರಣೆಯರಾದ ಜಯಶ್ರೀ ಬರಗುಂಡಿ ಮತ್ತು ಶ್ರೀದೇವಿ ಶೇಖಾರವರಿಂದ ಸಾಮೂಹಿಕ ಪ್ರಾರ್ಥನೆಯಾಯಿತು. ವ್ಯೋಮ ಮೂರುತಿ ಅಲ್ಲಮ ಪ್ರಭುಗಳ ಕಿರುಪರಿಚಯವನ್ನು ಮಾಡುತ್ತ ಪ್ರೊ. ಸುರೇಶ ತಿ. ರಾಜನಾಳ ಅವರು ವಚನವನ್ನು ನಿರ್ವಚನಗೈಯುತ್ತ, ಶರೀರ, ಪ್ರಾಣ ಮತ್ತು ಜೀವಾತ್ಮಗಳ ಸಂಬಂಧವನ್ನು ಸರಿಯಾಗಿ ಅರ್ಥೈಸಿಕೊಂಡರೆ ಆತನ ಭಾವ ಹಿಂಗಿ, ಜನನ-ಮರಣಗಳ ಸೂತಕವನ್ನು ಕಳೆದುಕೊಂಡು ಶರಣನಾಗುತ್ತಾನೆ. ಕೇವಲ ಡಾಂಭಿಕನಾಗಿ ತನಗೆ ತಾನೇ ವಂಚಿಸಿಕೊಳ್ಳುವದು ಸಲ್ಲದು. ಮಾನವ ಮಹಾದೇವನಾಗಬೇಕೆಂಬುದೇ ಶರಣರ ನೀತಿಯಾಗಿತ್ತು ಎಂದು ಪ್ರತಿಪಾದಿಸಿದರು.

ಇದೇ ವಚನವನ್ನು ಪ್ರೊ, ಗಾಯತ್ರಿ ಕಲ್ಯಾಣಿ ಶರಣೆಯರು ಮುಂದುವರೆಸುತ್ತ ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಇತರರನ್ನು ಮೋಸಪಡಿಸುತ್ತ, ತಾನು ಮೋಸಕ್ಕೆ ಒಳಗಾಗುತ್ತ ಕೇವಲ ತನ್ನ, ತನ್ನ ಕುಟುಂಬದ ದೇಹ ಪೋಷಿಸುವುದರಲ್ಲಿಯೇ ಕಾಲಕಳೆಯುತ್ತ ಸಾಗದೆ ಕಾಯ-ಜೀವಗಳ ಮರ್ಮವರಿತು ಬದುಕಬೇಕು. ಹುಟ್ಟು ಮತ್ತು ಸಾವುಗಳು ಪ್ರಕೃತಿ ಧರ್ಮ. ಅವು ಸಹಜ ಕೂಡಾ. ಇದನ್ನು ಮೀರಿ ನಿಂತು ಶರಣನಾಗಬೇಕು. ತಾನೇ ಗುಹೇಶ್ವರನಾಗಬೇಕು ಎಂದು ಪ್ರತಿಪಾದಿಸಿದರು.

ಶರಣ ಮಹಾಂತೇಶ ಸಿಂದಗಿಯವರು ಶ್ರೀ ಅಲ್ಲಮ ಪ್ರಭುದೇವರ ವ್ಯಕ್ತಿತ್ವವನ್ನು ಪರಿಚಯಿಸುತ್ತ ಶ್ರೀ ಬಸವಾದಿ ಶರಣರ ಬಹು ಮುಖ್ಯ ಕೊಡುಗೆಯಾದ ಇಷ್ಟಲಿಂಗೋಪಾಸನೆ, ಅದರ ಮಹತ್ವವನ್ನು ವಿವರಿಸುತ್ತ, ಶರೀರ ಮತ್ತು ಮನಸ್ಸಿನ ಕಲ್ಮಶವನ್ನು ತೊಳೆದು ಶುದ್ಧಾಂತಕರಣರಾಗಿ ಕಾಯಕದ ಮೂಲಕ ದಾಸೋಹಗೈದು, ಶಿವಯೋಗದಲ್ಲಿ ಬೆರೆದು ನಿತ್ಯ ಸುಖಿಯಾಗಿ ಭವವನ್ನು ದಾಟಬಹುದು ಎಂಬುದನ್ನು ಇಂದಿನ ವಚನದಲ್ಲಿ ಕಾಣಬಹುದು ಎಂದು ವಿವರಿಸಿದರು.

ಸಮಾರೋಪವನ್ನು ಮಾಡುತ್ತ ಶರಣ ಪ್ರೊ. ಸಿದ್ಧಲಿಂಗಪ್ಪ ಬರಗುಂಡಿಯವರು ವಿವರವಾಗಿ ನಿರ್ವಚಿಸುತ್ತ, ಮನುಷ್ಯನ ಮುಖ್ಯ ಬಯಕೆಯೆಂದರೆ ಹುಟ್ಟು-ಮರಣಗಳೆಂಬ ಭವವನ್ನು ದಾಟಿ, ಜನನ-ಮರಣಗಳಿಲ್ಲದ ಮಹಾಲಿಂಗದಲ್ಲಿ ಐಕ್ಯನಾಗುವುದು.

ಆದರೆ ಈ ಮಾರ್ಗ ವೈದಿಕರಿಂದ ಸಂರ್ಪೂಣ ಭಿನ್ನವಾಗಿದೆ. ಅಲ್ಲಮಪ್ರಭುಗಳೇ ಹೇಳಿದಂತೆ ಈ ಶರೀರ ಮತ್ತು ಅದು ಹೊಂದಿರುವ ವಿಷಯಾದಿಗಳು ಅಶಾಶ್ವತವಾಗಿದ್ದರೂ ಒಂದಿಲ್ಲ ಒಂದು ಬಾರಿ ನಾಶವಾಗುವದಿದ್ದರೂ ದೇಹ ಭಾವ ತಾಳಿದ ಮನುಷ್ಯ, ಅದನ್ನು ಶಾಶ್ವತವೆಂದೇ ತಿಳಿದಿದ್ದಾನೆ. ಶರೀರದ ಸಹಜವಾದ ವ್ಯಥೆ, ಚಿಂತೆ ಭ್ರಾಂತಿಗಳಿಗೆ ಒಳಗಾಗಿ ತನ್ನ ಮೂಲ ಸ್ವರೂಪವನ್ನೇ ಮರೆತಿದ್ದಾನೆ.

ಹೀಗೆ ಭವವನ್ನು ನೀಗಿಕೊಳ್ಳಬೇಕು ಎಂಬ ಹಂಬಲದಿಂದ ಹೊರಟು ಸಂಸಾರದ ಕ್ಷಣಿಕ ಸುಖಕ್ಕೆ ಪಕ್ಕಾಗಿ ಮತ್ತೆ ಜನನ-ಮರಣಗಳ ಚಕ್ರಕ್ಕೆ ಸಿಲುಕುತ್ತಾನೆ. ಇದೇ ರೀತಿ ನಡೆದುಕೊಂಡರೆ ಪ್ರಕೃತಿ ಸಹಜವಾದ ಸ್ಥಿತಿಗೆ ಆತ ಒಳಗಾಗುತ್ತಾನೆ, ಸಾಯುತ್ತಾನೆ (ಐಕ್ಯನಾಗುವುದಿಲ್ಲ) ಎಂಬುದನ್ನು ಅಲ್ಲಮರು ಸ್ಪಷ್ಟವಾಗಿ ನಿರೂಪಿಸುತ್ತಾರೆ.

ಸತ್ತ ಪ್ರತಿಯೊಂದು ಜೀವಿಯೂ ದೇವರನ್ನು ಸೇರಿತು, ಐಕ್ಯ ಹೊಂದಿತು ಎಂಬ ಸಾಮಾನ್ಯ ರೂಢಿಯ ಮಾತನ್ನು ಒಪ್ಪಲಾಗದು. ಇದಕ್ಕೆ ಅಲ್ಲಮರು ಬೆರಗಾಗಿದ್ದಾರೆ. ಅಂಗನಾದವನು ತನ್ನ ಅಂಗಗುಣಗಳನ್ನು ಕಳೆದುಕೊಳ್ಳದೆ ದೇಹ-ಇಂದ್ರಿಯ ವಿಷಯ ಭಾವವನ್ನು ಕಳೆದುಕೊಳ್ಳದೆ, ತನು-ಮನ-ಭಾವಗಳ ಭ್ರಾಂತಿಯನ್ನು ಬಿಡದೇ ಲಿಂಗಗುಣಗಳನ್ನು ಹೊಂದದೆ ಆತನಿಗೆ ಐಕ್ಯ ಸ್ಥಿತಿ ಹೇಗೆ ಸಾಧ್ಯ ಎಂದು ಪ್ರಶ್ನಿಸುತ್ತಾರೆ. ವ್ಯಕ್ತಿ ತಾನು ಬದುಕಿರುವಾಗಲೇ ಜೀವನ್ಮುಕ್ತ ಸ್ಥಿತಿ ಅನುಭವಿಸಬೇಕೇ ಹೊರತು ಸತ್ತ ಮೇಲಲ್ಲ ಎಂಬುದನ್ನು ವ್ಯೋಮಕಾಯರು ಸ್ಪಷ್ಟವಾಗಿ ತಿಳಿಸುತ್ತಾರೆ. ನಶ್ವರವಾದ ದೇಹಭಾವ ಅಳಿದು ಶಾಶ್ವತವಾದ ಲಿಂಗ ಭಾವವನ್ನು ಶರೀರವಿದ್ದಾಗಲೇ ಗಳಿಸಿಕೊಳ್ಳಬೇಕು. ಆಗ ಆತನೇ ಗುಹೇಶ್ವರನಾಗಲಿಕ್ಕೆ ಸಾಧ್ಯವೆಂದು ಅಲ್ಲಮಪ್ರಭುಗಳ ವಚನಾರ್ಥವಾಗಿದೆ ಎಂದು ಹೇಳಿದರು.

ನಂತರ ಜರುಗಿದ ಪ್ರಶ್ನೋತ್ತರದಲ್ಲಿ ಕಾರ್ಯಕ್ರಮದ ನಿರ್ವಾಹಕ ಮುರುಘೇಶ ಶೇಖಾ ಅವರು ‘ಕಾಯವಿದ್ದಲ್ಲಿ ಸಾಯದ ಸಾವ ಬಲ್ಲಡೆ’ ಎಂಬುದನ್ನು ಶರೀರದಲ್ಲಿ ಇರುವ ಚೈತನ್ಯದ ಇರುವಿಕೆಯನ್ನು ಸರಿಯಾಗಿ ಅರ್ಥೈಸಿಕೊಂಡರೆ ಆತನೇ ಗುಹೇಶ್ವರನೆಂಬ ಲಿಂಗವಾಗುತ್ತಾನೆ ಎಂಬುದನ್ನು ಶರೀರ ಚೈತನ್ಯಗಳ ಸಂಬಂಧವನ್ನು ವಿವರಿಸಿದರು.

ಕೊನೆಯಲ್ಲಿ ಸಾಮೂಹಿಕ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು. ಮಹಾಮನೆ ಕಾರ್ಯಕ್ರಮದಲ್ಲಿ ಬಸವ ಕೇಂದ್ರದ ಬಂಧುಗಳಾದ ರೇವಣಸಿದ್ದಯ್ಯ ಮಠ, ಬಸಲಿಂಗಯ್ಯ ಕಂಬಾಳಿಮಠ, ದಾನಪ್ಪ ಬಂಡಿ, ರಾಚಣ್ಣ ಕೆರೂರ, ಶಿವಪುತ್ರಪ್ಪ ಬೀಳಗಿ, ಬಸವರಾಜ ಇಲಾಳಶೆಟ್ಟಿ, ಪಾಂಡಪ್ಪ ಕಳಸಾ, ಶರಣೆ ನೇತ್ರಾ ರಕ್ಕಸಗಿ ಮತ್ತು ಮಹಾಮನೆಯ ಒಡೆಯರಾದ ಶೇಖರಪ್ಪ ತಿ. ಅಂಗಡಿಯವರ ಕುಟುಂಬ ಸದಸ್ಯರು ಮತ್ತು ನೆರೆಹೊರೆಯವರು, ಬಂಧುಬಳಗದವರು ಹಾಗೂ ಪಟ್ಟಣದ ಹೊರವಲಯದ ಬಸವ ಕೇಂದ್ರದ ಸದಸ್ಯರು google meet ಮೂಲಕ ಭಾಗವಹಿಸಿ ಕಾರ್ಯಕ್ರಮವನ್ನು ಯಶ್ವಿಸಿಗೊಳಿಸಿದರು.

ಮಹಾಮನೆಯ ಕಾರ್ಯಕ್ರಮಕ್ಕೆ ಅವಕಾಶ ಮಾಡಿದ ಶೇಖರಪ್ಪ ತಿ. ಅಂಗಡಿ ದಂಪತಿಗಳ ಶರಣು ಸಮರ್ಪಣೆಗಳೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

Share This Article
Leave a comment

Leave a Reply

Your email address will not be published. Required fields are marked *