ಬೀದರ:
ಜೀವನ ಬಹು ಅಮೂಲ್ಯವಾದದ್ದು, ದೇವರು ಕೊಟ್ಟ ಅಮೂಲ್ಯ ಸಂಪತ್ತು ಯಾವುದೆಂದರೆ ನಮ್ಮ ಶರೀರ. ಹಾಳು ಮಾಡಿಕೊಳ್ಳದೆ ಶರೀರವನ್ನು ಉಳಿಸಿಕೊಳ್ಳಬೇಕು. ಸಮಯ ಕಳೆದು ಹೋದರೆ ತಿರುಗಿ ಬರುವುದಿಲ್ಲ. ಕಳೆದು ಹೋದ ಮೇಲೆ ಕೊರಗಿ ಫಲವಿಲ್ಲ, ಸುಮ್ಮನೆ ದಿನ ಕಳೆಯುವುದು ಯೋಗ್ಯವಲ್ಲ ಎಂದು ಲಿಂಗಾಯತ ಮಹಾಮಠದ ಪೂಜ್ಯ ಪ್ರಭುದೇವ ಮಹಾಸ್ವಾಮೀಜಿ ತಿಳಿಸಿದರು.
ಮುಸ್ತಾಪುರ ಗ್ರಾಮದಲ್ಲಿ ಬಸವ ಬಳಗದ ವತಿಯಿಂದ 770 ಪ್ರವಚನಗಳ ಅಭಿಯಾನ ಹಾಗೂ ವಚನ ವಿಜಯೋತ್ಸವ ಕಾರ್ಯಕ್ರಮದ ನಿಮಿತ್ಯ ಹಮ್ಮಿಕೊಂಡಿರುವ ಐದು ದಿನಗಳ ವಚನ ಜೀವನ ಪ್ರವಚನದ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.
ಸುಮ್ಮನೆ ದಿನ ಕಳೆದು ಹೋಗುವುದು ಅರ್ಥವಿಲ್ಲದ ಬದುಕಾಗುತ್ತದೆ. ಸಾಯುವುದಂತು ಖಚಿತ ಅದು ಮಾಯಲಾರದ ಮದ್ದಿಲ್ಲದ ರೋಗ. ಅದಕ್ಕಾಗಿ ಸಾಯುವುದಕ್ಕಿಂತ ಪೂರ್ವದಲ್ಲಿ ಸಾಧಿಸಿ ಹೋಗಬೇಕು.
ಪ್ರತಿದಿನ ಅಪಘಾತಗಳಲ್ಲಿ, ದುಷ್ಟಟಗಳಲ್ಲಿ, ಬಿದ್ದು ಎಷ್ಟೋ ಜನ ಸಾಯುತ್ತಾರೆ. ನಮ್ಮ ಯೋಧರು ಗಡಿಯಲ್ಲಿ ಹೋರಾಡಿ ಗುಂಡಿಗೆ ಎದೆಯೊಡ್ಡಿ ವೀರ ಮರಣ ಹೊಂದುತ್ತಾರೆ. ಇಬ್ಬರದು ಸಾವೇ, ಆದರೆ ಒಂದು ಉದ್ದೇಶಕ್ಕಾಗಿ ವೀರಮರಣ ಹೊಂದಿದವರು ಶಾಶ್ವತ ಅಮರರಾಗುತ್ತಾರೆ.
ಕಮಲಪುಷ್ಪ ಕೆಸರಿನಲ್ಲಿ ಅರಳುವುದು ಕೆಸರಿಲ್ಲದೆ ಕಮಲಕ್ಕೆ ಜೀವನವಿಲ್ಲ. ಆದರೂ ಕಮಲ ಕೆಸರನ್ನು ಅಂಟಿಸಿಕೊಳ್ಳುವುದಿಲ್ಲ.
ಹಾಗೆಯೇ ಶರಣರು ಹೆಣ್ಣು ಹೊನ್ನು ಮಣ್ಣಿನ ಮಧ್ಯದಲ್ಲಿದ್ದರೂ ಅದನ್ನು ಅಂಟಿಸಿಕೊಳ್ಳದೆ ಕಮಲದಂತೆ ಬದುಕಿದವರು ಎಂದು ತಿಳಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಭರತ ಪತಂಗೆಯವರು, 770 ಪ್ರವಚನಗಳ ಅಭಿಯಾನ ಹಮ್ಮಿಕೊಂಡು ಹಳ್ಳಿ ಹಳ್ಳಿಗಳಲ್ಲಿ ಪ್ರವಚನಗಳು ಮಾಡುತ್ತಾ, ವಚನ ಸಾಹಿತ್ಯ ತಲೆಮೇಲೆ ಹೊತ್ತು ವಚನ ವಿಜಯೋತ್ಸವ ಮಾಡುತ್ತಾ, ವ್ಯಸನ ಮುಕ್ತ ಸಮಾಜ ನಿರ್ಮಾಣ ಮಾಡಲು ಪಣತೊಟ್ಟು ಹಗಲಿರುಳು ದುಡಿಯುವ ಪೂಜ್ಯರ ಕಾರ್ಯ ಬಹುದೊಡ್ಡದು. ಸಮಾಜಕ್ಕೆ ಇಂತಹ ಪೂಜ್ಯರ ಅವಶ್ಯಕತೆ ಬಹಳ ಇದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ದಯಾನಂದ ಪಾಟೀಲ, ರೇವಣಪ್ಪ ಪಾಟೀಲ, ಪ್ರಕಾಶ ಪಾಟೀಲ, ಮಾರುತಿ ಪಾಟೀಲ, ಲಹು ಜಮಾದಾರ, ಬಾಲಾಜಿ ಪಾಟೀಲ, ಲಿಂಗಾಯತ ಸೇವಾದಳದ ಅಧ್ಯಕ್ಷರಾದ ಸುಪ್ರೀತ ಪತಂಗೆ, ಗ್ರಾಮದ ಹಿರಿಯರು, ಮಕ್ಕಳು ಮುಂತಾದವರು ಭಾಗವಹಿಸಿದ್ದರು. ಪ್ರಜ್ವಲ ರಾಜೋಳೆ ನಿರೂಪಣೆ ಮಾಡಿದರು.
