ಬಾಗಲಕೋಟೆ
ನಮ್ಮ ಸಮಾಜದ ಇಂತವರಿಗೆ ಟಿಕೆಟ್ ಕೊಡಿ, ಇಂತವರನ್ನೇ ಮಂತ್ರಿ ಮಾಡಬೇಕು ಎಂದು ಒತ್ತಡ ಹಾಕುವ ಸ್ವಾಮಿಗಳು ನಿಜವಾದ ಸ್ವಾಮಿಗಳೇ ಅಲ್ಲ. ಅವರು ಸ್ವಾಮಿ ಆಗಲು ಅರ್ಹರೇ ಅಲ್ಲ ಎಂದು ಸಾಣೆಹಳ್ಳಿ ತರಳಬಾಳು ಶಾಖಾಮಠದ ಪೂಜ್ಯ ಪಂಡಿತಾರಾಧ್ಯ ಶಿವಾಚಾರ್ಯರು ಖಡಕ್ಕಾಗಿ ಹೇಳಿದರು.
ನವನಗರದ ಕಲಾಭವನದಲ್ಲಿ ಬುಧವಾರ ಬಸವ ಸಂಸ್ಕೃತಿ ಅಭಿಯಾನದ ಅಂಗವಾಗಿ ನಡೆದ ಸಂವಾದದಲ್ಲಿ ಸಚಿನ್ ಗಡಿಬಿಡಿ ಎನ್ನುವವರು ಕೇಳಿದ, ಸ್ವಾಮೀಜಿ ಆದವರು ತಮ್ಮ ಸಮಾಜದ ಇಂತವರಿಗೆ ಟಿಕೆಟ್ ಕೊಡಬೇಕು, ಇಂತವರನ್ನೆ ಮಂತ್ರಿ ಮಾಡಬೇಕು ಎಂದು ಸರ್ಕಾರ ಮೇಲೆ ಒತ್ತಡ ಹಾಕುವುದು ಬಸವ ತತ್ವಕ್ಕೆ ವಿರೋಧವಲ್ಲವೆ ಎನ್ನುವ ಪ್ರಶ್ನೆಗೆ ಸ್ವಾಮೀಜಿ ಈ ಉತ್ತರ ನೀಡಿದರು.

ಅನರ್ಹರನ್ನು ಅರ್ಹರು ಎಂದು ಹೇಳಿ ಒತ್ತಡ ಹಾಕುವವರು ಸ್ವಾಮೀಜಿ ಆಗಲ್ಲ, ಅವರು ಸಹ ಒಬ್ಬ ರಾಜಕಾರಣಿಯಂತೆ. ಮಠಕ್ಕೆ ಸ್ವಾಮಿ ಮಾಡುವಾಗ ಅವರಲ್ಲಿ ಯಾವೆಲ್ಲ ಅರ್ಹತೆಗಳು ಇರಬೇಕು ಎಂದು ಸಮಾಜ ಗುರುತಿಸಬೇಕು. ಅನರ್ಹರರನ್ನು ಪೀಠಕ್ಕೆ ಕೂಡಿಸಿದಾಗ ಅವರಿಂದ ಮಠ ಹಾಗೂ ಸಮಾಜ ಉದ್ದಾರ ಆಗಲ್ಲ ಎಂದು ಸ್ಪಷ್ಟವಾಗಿ ಹೇಳಿದರು.
ಬಸವಣ್ಣ ಸಹ ಒಬ್ಬ ಅಪರೂಪದ ದಾರ್ಶನಿಕ ರಾಜಕಾರಣಿ. ಅವರು ಕಸಕ್ಕಿಂತ ಕಡೆಯಾಗಿ ಕಿತ್ತು ಹೊಗೆದವರು. ಅವರು ನಮಗೆಲ್ಲ ಮಾದರಿ.
ಮೂಢರನ್ನ ಸ್ವಾಮಿ ಮಾಡಿದರೆ ಅವರು ರಾಜಕಾರಣ ಮಾಡಲು ಮುಂದಾಗುತ್ತಾರೆ. ಎಲ್ಲ ಸ್ವಾಮಿಗಳು ಇದೇ ರೀತಿ ಇಲ್ಲ ಎನ್ನುವುದನ್ನು ನಾವು ಗಮನಿಸಬೇಕು. ಸ್ವಾಮಿ ಆದವರು ಭಕ್ತರಿಗೆ ಹೆದರಬೇಕು, ಭಕ್ತರು ಆ ಸ್ವಾಮಿಯನ್ನು ಕಂಡಾಗ ಹೆದರುವಂತವರು ಇರಬೇಕು ಎಂದು ಅದಕ್ಕೆ ಸರ್ಜಜ್ಞನ ವಚನವೊಂದನ್ನು ಉಲ್ಲೇಖಿಸಿ ಹೇಳಿದರು.

ಭಾರತ ಏಕತೆ ಇರುವ ದೇಶ ಎನ್ನುತ್ತಾರೆ. ಆದರೆ, ಇಲ್ಲಿ ವಿದ್ಯಾರ್ಥಿ, ಯುವಕರಲ್ಲಿ ಧರ್ಮ, ಜಾತಿಯ ವಿಷ ಬೀಜ ಬಿತ್ತುವ ರಾಜಕಾರಣಿಗಳಿಗೆ ತಮ್ಮ ಸಲಹೆ ಏನು ಎನ್ನುವ ಪ್ರಶ್ನೆಗೆ, ಬಸವ ಭೃಂಗೀಶ್ವರ ಸ್ವಾಮೀಜಿ ಉತ್ತರಿಸಿ, ಸಮಾಜದ ಎಲ್ಲ ಕಲ್ಮಷಗಳು ಹಾಗೂ ಒಳಿತಿಗೂ ನಾವೇ ಕಾರಣರು. ಕ್ಷುಲ್ಲಕ ಆಸೆ ತೋರಿಸಿ ಜಾತಿ, ಧರ್ಮ ಎಂದು ಗುಂಪುಗಾರಿಕೆ ಮಾಡುವವರ ಬಗ್ಗೆ ವಿಶೇಷವಾಗಿ ಯುವ ಜನತೆ ಎಚ್ಚರ ವಹಿಸಬೇಕು.
ಪ್ರಜ್ಞಾವಂತಿಕೆಯನ್ನು ನಾವು ಕಲಿಯಬೇಕು. ಜಾತಿ, ಧರ್ಮ, ರಾಜಕಾರಣದ ಬೆನ್ನು ಹತ್ತದೇ ದೇಶವೊಂದೇ ನಾವೆಲ್ಲವೂ ಒಂದೇ ಎನ್ನುವ ಉದಾತ್ತ ಭಾವನೆ ಬೆಳೆಸಿಕೊಳ್ಳಬೇಕು ಎಂದರು.

ಸಮಾಜದಲ್ಲಿ ಇವತ್ತಿಗೂ ವಿಧವೆಯರನ್ನು ಕೀಳಾಗಿ ಕಾಣುತ್ತಾರಲ್ಲ ಎನ್ನುವ ದಾನೇಶ್ವರಿ ಕಲಕೇರಿ ಎನ್ನುವ ವಿದ್ಯಾರ್ಥಿ ಪ್ರಶ್ನೆಗೆ, ನಿಡಸೋಶಿ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ಇಂತ ಕೀಳರಿಮೆ ತೊಲಗಿಸಲು ಬರೀ ಮಾತಿನಿಂದ ಆಗದು, ಅದು ಕೃತಿಯಿಂದ ಬರಬೇಕು. ಹಿಂದೆ ಯಲ್ಲಮ್ಮನ ಗುಡ್ಡದಲ್ಲಿ ರಂಡಿ ಹುಣ್ಣಿಮೆ ಎಂದು ಆಚರಣೆ ಮಾಡುತ್ತಿದ್ದರು. ಅದನ್ನು ತೊಲಗಿಸಲು ಬೆಳಗಾವಿ ಸಮಾಜ ಕಲ್ಯಾಣ ಇಲಾಖೆ ನಮ್ಮನ್ನು ಆಹ್ವಾನಿಸಿದಾಗ ನಾವು ಅಲ್ಲಿಗೆ ಹೋದೇವು. ಅಲ್ಲಿ ಸಾವಿರಾರು ಜನ ದೇವದಾಸಿ ಮಹಿಳೆಯರನ್ನು ಸೇರಿಸಿದ್ದರು. ಗಂಡ ಸತ್ತಾಗ ಬಳೆ ಒಡೆಯಬಾರದು ಎಂದು ನಾವು ಹೇಳಿದೇವು. ಇಂಥ ಹುಣ್ಣಿಮೆಯನ್ನು ಯಲ್ಲಮ್ಮ ದೇವಿ ಒಪ್ಪಲ್ಲ ಎಂದು ತಿಳಿಸಿದೆವು. ಬಳೆ ಒಡೆಯಬಾರದು, ಬಳೆ ಹಾಕಿಕೊಳ್ಳಬೇಕು ಎಂದು ತಿಳಿಸಿದಾಗ, ಅಲ್ಲಿ ಕೆಲವರು ಸ್ವಾಮೀಜಿಗಳೇ ನೀವೇ ಮಹಿಳೆಯರಿಗೆ ಬಳೆ ತೊಡಿಸಿದರೆ ನಾವು ತೊಟ್ಟುಕೊಳ್ಳುತ್ತೇವೆ ಎಂದು ಹೇಳಿದರು. ಅದಕ್ಕೆ ಒಪ್ಪಿ ವೇದಿಕೆಯಲ್ಲಿ ಹಲವಾರು ಮಹಿಳೆಯರಿಗೆ ಬಳೆ ಹಾಕಿದಾಗ ಉಳಿದವರೆಲ್ಲರೂ ಹಾಕಿಕೊಂಡರು.

ಈ ಕಾರ್ಯಕ್ರಮ ಕೆಡಿಸಲೆಂದು ಕೆಲವರು ಬುಟ್ಟಿಯಲ್ಲಿ ಹಾವು ತಂದು ಬಿಟ್ಟಿದ್ದ ಘಟನೆಯಲ್ಲಿ ಸ್ವಾಮೀಜಿ ಮೆಲಕು ಹಾಕಿದರು. ನಮ್ಮ ಮಠದಲ್ಲಿ ಜಟೆ ತೆಗೆಸುವ, ವಿಧವೆಯರಿಗೆ ಮದುವೆ ಮಾಡಿಸುವ ಅನೇಕ ಕಾರ್ಯಕ್ರಮ ಮಾಡಿದ್ದೇವೆ ಎಂದು ತಿಳಿಸಿದರು.
ದೇವರು, ದೆವ್ವ ಮೈಮೇಲೆ ಬರುವುದು ನಿಜವಾ ಎನ್ನುವ ಪ್ರಶ್ನೆಗೆ, ಭಾಲ್ಕಿ ಡಾ. ಬಸವಲಿಂಗ ಪಟ್ಟದ್ದೇವರು ಮಾತನಾಡಿ, ದೆವ್ವ ಭೂತ ಮೈಮೇಲೆ ಬರಲ್ಲ. ಅದು ಸಂಪೂರ್ಣ ಸುಳ್ಳು. ಕೆಲವರು ಹೊಟ್ಟೆಪಾಡಿಗಾಗಿ ಇಂತ ಕೆಲಸ ಮಾಡುತ್ತಾರೆ. ಇದೊಂದು ಮಾನಸಿಕ ಕಾಯಿಲೆ ಎಂದು ಕೆಲ ಘಟನೆಗಳನ್ನು ಉದಾಹರಣೆಯಾಗಿ ಸಭೆಯಲ್ಲಿ ಬಿಚ್ಚಿಟ್ಟರು.
ಜಾತಿ ನಿರ್ಮೂಲನೆಗೆ ಬಸವಾದಿ ಶರಣರು ಸಾಕಷ್ಟು ಕೆಲಸ ಮಾಡಿದರೂ ಇಂದಿಗೂ ಜಾತಿ ವ್ಯವಸ್ಥೆ ನಿರ್ಮೂಲನೆ ಯಾಕೆ ಆಗಿಲ್ಲ ಎನ್ನುವ ಪ್ರಶ್ನೆಗೆ, ಗದುಗಿನ ತೋಂಟದಾರ್ಯ ಮಠದ ಶ್ರೀಗಳು, ೧೨ನೇ ಶತಮಾನದಲ್ಲಿ ಜಾತಿ ವ್ಯವಸ್ಥೆ ಬಹಳವಾಗಿತ್ತು. ಆಗ ಅವರು ಕಾಯಕಗಳಿಗೆ ಪ್ರಾಶಸ್ತ್ಯ ನೀಡಿ, ಕಾಯಕದಲ್ಲಿ ಯಾವುದು ಮೇಲು, ಕೀಳಿಲ್ಲ ಎಂದು ತೋರಿಸಿಕೊಟ್ಟರು.

ಮುಂಬರುವ ದಿನಗಳಲ್ಲಿ ಅದು ಬೇರೆ ಬೇರೆ ಧರ್ಮಗಳ ಪ್ರಭಾವದಿಂದ ಕಾಯಕಗಳು ಜಾತಿಗಳಾದವು. ಈಗ ಅವು ವಿಜೃಂಭಿಸುತ್ತಿವೆ. ಮೀಸಲಾತಿಗಾಗಿ ಜಾತಿ ವಿಜೃಂಬಣೆ ಮತ್ತಷ್ಟು ಹೆಚ್ಚಾಗಿದೆ. ಶರಣರು ಆರ್ಥಿಕ ಸಮಾನತೆಗಾಗಿ ಕಾಯಕ, ದಾಸೋಹ ಪದ್ದತಿಯನ್ನು ಜಾರಿಗೆ ತಂದಿದ್ದರು ಎಂದು ಹೇಳಿದರು.
ವೀರಶೈವರ ಬಗ್ಗೆ ನಮಗೆ ವಿರೋಧ ಇಲ್ಲ. ಅದು ಒಂದು ಲಿಂಗಾಯತ ಧರ್ಮದ ಒಳಪಂಗಡ. ಅವರೂ ಲಿಂಗಾಯತರು. ಬಸವಣ್ಣ ಹಾಗೂ ವಚನ ಸಾಹಿತ್ಯ ಒಪ್ಪುವವರೆಲ್ಲರೂ ಲಿಂಗಾಯತರು. ಮುಂಬರುವ ಗಣತಿಯಲ್ಲಿ ಮಾತ್ರ ಎಲ್ಲರೂ ಲಿಂಗಾಯತರು ಎಂದು ಬರೆಯಿಸಿ, ಜಾತಿ ಕಾಲಂನಲ್ಲಿ ನಿಮ್ಮ ನಿಮ್ಮ ಉಪಪಂಗಡ ಬರೆಯಿಸಿ ಎಂದು ಗದುಗಿನ ತೋಂಟದಾರ್ಯ ಮಠದ ಡಾ.ತೋಂಟದ ಸಿದ್ದರಾಮ ಸ್ವಾಮೀಜಿ ಹೇಳಿದರು.
ಬಸವ ಸಂಸ್ಕೃತಿ ಅಭಿಯಾನದ ಹಿನ್ನೆಲೆಯಲ್ಲಿ ಬುಧವಾರ ನವನಗರದ ಕಲಾಭವನದಲ್ಲಿ ನಡೆದ ಸಂವಾದದಲ್ಲಿ ಪ್ರಶ್ನೆಯೊಂದಕ್ಕೆ ಸ್ವಾಮೀಜಿ ಈ ರೀತಿ ಸಮುದಾಯದ ಜನರಿಗೆ ಕರೆ ನೀಡಿದರು.
ಕೆಲವರು ಗಣತಿಯಲ್ಲಿ ವೀರಶೈವ, ವೀರಶೈವ ಲಿಂಗಾಯತ, ಹಿಂದು ಎಂದು ಬರೆಯಿಸಲು ಹೇಳುತ್ತಿದ್ದಾರೆ. ಆದರೆ, ಜಾಗತಿಕ ಮಟ್ಟದ ಮೌಲ್ಯ ಹೊಂದಿರುವುದು ಲಿಂಗಾಯತ. ಗಣತಿಯಲ್ಲಿ ಲಿಂಗಾಯತರಿಗೆ ಪ್ರತ್ಯೇಕ ಸ್ವತಂತ್ರ ಧರ್ಮದ ಕಾಲಂ ಬೇಕು ಎನ್ನುವುದಕ್ಕೆ ಲಿಂಗಾಯತ ಮಠಾಧೀಶರು ನಿರಂತರ ಪ್ರಯತ್ನ ಮಾಡುತ್ತಿದ್ದಾರೆ. ಪ್ರತ್ಯೇಕ ಲಿಂಗಾಯತ ಧರ್ಮ ಮಾನ್ಯತೆ ಸಿಗಲು ನಾವೆಲ್ಲರೂ ಒಂದಾಗಬೇಕಿದೆ. ಗಣತಿ ವೇಳೆ ಎಲ್ಲರೂ ನಿಮ್ಮ ನಿಮ್ಮ ಉಪ ಪಂಗಡ ಬರೆಯಿಸಿ, ಧರ್ಮದ ಕಾಲಂನಲ್ಲಿ ಲಿಂಗಾಯತ ಎಂದು ಬರೆಯಿಸುವಂತೆ ಸಲಹೆ ನೀಡಿದರು.

ಬಸವ ರಥಯಾತ್ರೆ ಸಂಭ್ರಮ
ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಹಾಗೂ ಸಮಸ್ತ ಬಸವಪರ ಸಂಘಟನೆಗಳ ಆಶ್ರಯದಲ್ಲಿ ಬಾಗಲಕೋಟೆಯಲ್ಲಿ ಬುಧವಾರ ಬಸವ ಸಂಸ್ಕೃತಿ ಅಭಿಯಾನದ ಅಂಗವಾಗಿ ಸಂಜೆ ನವನಗರದಲ್ಲಿ ಬಸವ ರಥಯಾತ್ರೆ ಸಂಭ್ರಮ ಸಡಗರದಿಂದ ನಡೆಯಿತು.
ಅನುಭವ ಮಂಟಪ, ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ ಒಳಗೊಂಡಂತೆ ಶರಣರ ಭಾವಚಿತ್ರ ಹೊತ್ತ ಬಸವ ರಥಯಾತ್ರೆ-ಸಾಮರಸ್ಯ ನಡಿಗೆಯ ಮೆರವಣಿಗೆ ವಿದ್ಯಾಗಿರಿಯ ಎಂಬಿಎ ಕಾಲೇಜ ಸರ್ಕಲ್‌ನಿಂದ ಆರಂಭವಾಗಿ ಇಂಜಿನಿಯರಿಂಗ್ ಕಾಲೇಜ ವೃತ್ತ, ಕಾಳಿದಾಸ ವೃತ್ತದ ಮೂಲಕ ಕಲಾಭವನದ ವರೆಗೂ ಅದ್ದೂರಿಯಾಗಿ ಸಾಗಿತು.

ನಾಡೋಜ ಬಾಲ್ಕಿಯ ಡಾ. ಬಸವಲಿಂಗ ಪಟ್ಟದ್ದೇವರು, ಕೂಡಲಸಂಗಮ ಬಸವ ಧರ್ಮ ಪೀಠದ ಗಂಗಾ ಮಾತಾಜಿ, ಗದುಗಿನ ತೋಟದಾರ್ಯ ಮಠದ ಡಾ. ತೋಂಟದ ಸಿದ್ದರಾಮ ಸ್ವಾಮೀಜಿ, ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ನಿಡಸೋಶಿ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ಗುಳೇದಗುಡ್ಡದ ಜಗದ್ಗುರು ಬಸವರಾಜ ಪಟ್ಟದಾರ್ಯ ಸ್ವಾಮೀಜಿ, ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ, ಭೋವಿ ಗುರುಪೀಠದ ಜಗದ್ಗುರು ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಇಳಕಲ್ಲನ ಗುರುಮಹಾಂತ ಸ್ವಾಮೀಜಿ, ಚಿತ್ರದುರ್ಗದ ಬಸವಕುಮಾರ ಸ್ವಾಮೀಜಿ, ಬಸವಗೀತಾ ಮಾತಾಜಿ ಸೇರಿದಂತೆ ಬಸವ ನಿಷ್ಠೆಯ ವಿವಿಧ ಸಮುದಾಯಗಳ ಮಠಾಧೀಶರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಬೆಳಗ್ಗೆ ಕಲಾಭವನದಲ್ಲಿ ಷಟಸ್ಥಲ ಧ್ವಜಾರೋಹರಣವನ್ನು ಮಾಜಿ ಸಚಿವ ಎಸ್.ಆರ್.ಪಾಟೀಲ ನೆರವೇರಿಸಿದರು.
ಬಸವಣ್ಣ ಹುಟ್ಟು ಸಾಂಸ್ಕೃತಿಕ ನಾಯಕ
ನವನಗರದ ಕಲಾಭವನದಲ್ಲಿ ಸಂಜೆ ನಡೆದ ಸಮಾವೇಶದಲ್ಲಿ ಹಲವಾರು ಪೂಜ್ಯರು, ಚಿಂತಕರು ಮಾತನಾಡಿದರು.
ನಮ್ಮದು ನೆಲ ಮೂಲದ ಸಂಸ್ಕೃತಿ, ಕಾಯಕ ಸಂಸ್ಕೃತಿ, ನೈಜ ಭಕ್ತಿ ಸಂಸ್ಕೃತಿ, ವಿಜ್ಞಾನ ಒಳಗೊಂಡ ವೈಜ್ಞಾನಿಕ ಸಂಸ್ಕೃತಿ. ಅದನ್ನು ಕೊಟ್ಟವರು ನಮ್ಮ ನೆಲ ಮೂಲದ ಬಸವಣ್ಣನವರು. ಧರ್ಮದಲ್ಲಿ ವಿಜ್ಞಾನವನ್ನು ತಂದರು. ಕಾಯಕದಲ್ಲಿ ಭವಿಷ್ಯದ ಅಂದಿಂಗೆ, ಇಂದಿಂಗೆ ಯೋಚನೆ ಮಾಡದ ಆಲೋಚನೆ ತಂದವರು.
ಬಸವಣ್ಣನನ್ನು ಯಾರು ಮರೆತು ಅಲಕ್ಷ್ಯ ಮಾಡುತ್ತಾರೋ ಅಲ್ಲಿಂದಲೇ ನಮ್ಮ ವಿನಾಶ ಪ್ರಾರಂಭ ಎಂದು ಬಾಗಲಕೋಟೆ ಭೋವಿ ಗುರುಪೀಠದ ಜಗದ್ಗುರು ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.
ಬಸವಣ್ಣನವರು ಎಲ್ಲ ವರ್ಗ, ರಂಗಗಳಲ್ಲಿ ವೈಜ್ಞಾನಿಕತೆ, ವೈಚಾರಿಕತೆ ತಂದಿದ್ದಕ್ಕೆ ಅವರು ೯೦೦ ವರ್ಷಗಳ ಬಳಿಕವೂ ಪ್ರಸ್ತುತರಾಗಿದ್ದಾರೆ. ನಡೆ ಕಲಿಸಿದ ಬಸವ, ನುಡಿ ಕಲಿಸಿದ ಬಸವ. ಹೇಗೆ ಬದಕಬೇಕೆಂದು ಕಲಿಸಿದ ಧರ್ಮ ಬಸವ ಧರ್ಮ.
ನಿಜವಾದ ಸಂಸ್ಕಾರ ಬಸವಣ್ಣನ ವಚನ ಹಾಗೂ ವಿಚಾರಗಳಲ್ಲಿ ಇದೆ. ಇದೇ ಕಾರಣಕ್ಕೆ ಬಸವ ಸಂಸ್ಕೃತಿ ವಿಚಾರದಲ್ಲಿ ಹಿರಿಯರು ಯಾವ ಹೆಜ್ಜೆಯಲ್ಲಿ ಮುನ್ನಡೆಯುತ್ತಾರೋ ಆ ದಾರಿಯಲ್ಲಿ ನಾವೆಲ್ಲ ಸಾಗಲು ಸಿದ್ದರಿದ್ದೇವೆ ಎಂದರು.

ಬಸವಣ್ಣ ಸಾಂಸ್ಕೃತಿಕ ನಾಯಕ ವಿಷಯದ ಮೇಲೆ ಮಾತನಾಡಿದ ಕುವೆಂಪು ವಿವಿ ಪ್ರಾಧ್ಯಾಪಕ ಡಾ.ಪ್ರಶಾಂತ ನಾಯಕ, ಬಸವಣ್ಣನನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸುವ ಮೂಲಕ ಅವರು (ಸರ್ಕಾರ) ದೊಡ್ಡವರಾಗಿದ್ದಾರೆ, ವಿನಃ ಬಸವಣ್ಣನಲ್ಲ. ಬಸವಣ್ಣ ಹುಟ್ಟುತ್ತಲೇ ಸಾಂಸ್ಕೃತಿಕ ನಾಯಕರಾಗಿದ್ದವರು ಎಂದರು.
ಸಮಸಮಾಜದ ಕನಸು, ಆಶಯಗಳನ್ನು ಈ ನೆಲದಲ್ಲಿ ಯೋಚನೆ ಮಾಡಬಹುದು ಎಂದು ಗೊತ್ತಿಲ್ಲದ ಕಾಲಕ್ಕೆ ಸಮಸಮಾಜದ ಮಾತು ಹೇಳಲು ಸಾಧ್ಯ ಇತ್ತಾ? ಅದರಲ್ಲೂ ವರ್ಣಾಶ್ರಮದ ಒಳಗಡೆಯಿಂದ ಬಂದ ಒಬ್ಬ ಮನುಷ್ಯ ಹೇಳಲು ಸಾಧ್ಯ ಇತ್ತಾ? ಅದೊಂದು ಅದ್ಭುತ. ಈ ನಾಡಿಗೆ ಅಕ್ಕ ಮತ್ತು ಅಣ್ಣ ಎನ್ನುವ ಮೌಲ್ಯಯುತವಾಗಿ ತಂದು ಕೊಟ್ಟಿದ್ದು ಬಸವಣ್ಣ ಮತ್ತು ಅಕ್ಕಮಹಾದೇವಿ ಎಂದು ಹೇಳಿದರು.
ಕರ್ನಾಟಕದಲ್ಲಿ ೧೨ನೇ ಶತಮಾನದಲ್ಲಿ ನಡೆದ ಮಾನವಪರವಾದ ಚಳುವಳಿ ಸರಿಯಾಗಿ ಅರ್ಥೈಸಿಕೊಂಡಿದ್ದರೆ ಇವತ್ತು ನಾವು ಇಡೀ ವಿಶ್ವಕ್ಕೆ ಜಾತ್ಯಾತೀತತೆಯನ್ನು ಬೋಧಿಸುವವರು ನಾವಾಗಿರುತ್ತಿದ್ದೆವು. ಎಲ್ಲ ನಿಯಮಗಳ ಆಚೆ ನೋಡಿದರೆ ನಿಮ್ಮನ್ನು ಯಾರಾದರೂ ಯಾವ ಕುಲ ಎಂದು ಕೇಳಿದರೆ ಬಸವ ಕುಲ ಎಂದು ಹೇಳಬೇಕು.
ಸರ್ವ ಜನಾಂಗ ಶಾಂತಿಯ ತೋಟದಲ್ಲಿ ಇವತ್ತು ಧರ್ಮಗಳ ಹೆಸರಿನಲ್ಲಿ ದೂರ ಮಾಡುವ ಕೆಲಸ ಆಗುತ್ತಿದೆ. ಬಸವಣ್ಣ ಯಾವ ಕಾವ್ಯವನ್ನು ಬರೆದಿಲ್ಲ. ಅವರು ತಾವು ಬದುಕಿದ್ದನ್ನು ಬರೆದಿದ್ದಾರೆ. ಅದಕ್ಕೆ ಅವರು ವಿಶ್ವ ನಾಯಕ ಎಂದು ಬಣ್ಣಿಸಿದರು.

ಬೇಲೂರ ಗುರು ಬಸವೇಶ್ವರ ಮಠದ ಡಾ.ಮಹಾಂತ ಬಸವಲಿಂಗ ಸ್ವಾಮೀಜಿ ಅವರು ವಚನಗಳಲ್ಲಿ ಮಾಯೆ ವಿಚಾರವಾಗಿ ಮಾತನಾಡಿ, ಹೆಣ್ಣು ಎಂದರೆ ಮಕ್ಕಳನ್ನು ಹೆರುವ ಯಂತ್ರ ಎಂದು ಭಾವಿಸುವ ಆ ಕಾಲದಲ್ಲಿ ಹೆಣ್ಣು ಮಕ್ಕಳಿಗೂ ಸಮಾನತೆ ತಂದು ಕೊಟ್ಟಿದ್ದು ಬಸವಣ್ಣ.
ಮಾಯೆಯನ್ನು ಮೀರುವುದೇ ಶರಣ ಸಂಸ್ಕೃತಿ. ಯಾವ ಜಗತ್ತು ಕತ್ತಲೆಯಲ್ಲಿ ಕೂರಿಸಿತ್ತೋ ಅದನ್ನು ಧಿಕ್ಕರಿಸಿ ಉತ್ತಮ ಜಗತ್ತು ಕೊಟ್ಟವರು ಬಸವಣ್ಣ ಎಂದರು.
ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಲಿಂಗಾಯತ ಚಳುವಳಿಯನ್ನು ಜೀವಂತವಾಗಿ ಇಟ್ಟುಕೊಂಡು ಹೋಗಿದ್ದರೆ ಬಸವಣ್ಣ ರಾಜ್ಯಕ್ಕೆ ಸಾಂಸ್ಕೃತಿಕ ನಾಯಕನಷ್ಟೆ ಅಲ್ಲದೇ ಭಾರತಕ್ಕೆ ಕಾಯಕ ತತ್ವ ನಾಯಕ ಆಗುತ್ತಿದ್ದರು.

ನಾವು ಜನಕಟ್ಟುವ ಕೆಲಸ ಮಾಡೋಣ. ಅಡೆತಡೆ ಬಂದಷ್ಟೂ ಗಟ್ಟಿಯಾಗುತ್ತೇವೆ. ಕಾಯಕ ಧರ್ಮಕ್ಕೆ ದೊಡ್ಡ ಇತಿಹಾಸ ಇದೆ. ಎಲ್ಲ ಕಾಯಕ ಜೀವಿಗಳ ಸಂಸ್ಕೃತಿ ಬಸವ ಸಂಸ್ಕೃತಿಯಾಗಿದೆ.
ಜಾತಿ, ಧರ್ಮದ ಕಾಲಂನಲ್ಲಿ ಏನು ಬರೆಸಬೇಕು ಎಂದು ಎಲ್ಲ ಪೂಜ್ಯರೂ ಹೇಳಿದ್ದಾರೆ. ನಮ್ಮ ಸಮಾಜದ ಹೆಸರಲ್ಲೆ ಲಿಂಗಾಯತ ಎಂದು ಬಂದಿದೆ. ಅದರ ಬಗ್ಗೆ ಸ್ಪಷ್ಟತೆ ಇದೆ. ಲಿಂಗಾಯತ ಪರಂಪರೆ ಉಳಿಸೋಣ ಎಂದರು.

ನಾಡೋಜ ಭಾಲ್ಕಿಯ ಡಾ. ಬಸವಲಿಂಗ ಪಟ್ಟದ್ದೇವರು, ಕೂಡಲಸಂಗಮ ಬಸವ ಧರ್ಮ ಪೀಠದ ಗಂಗಾ ಮಾತಾಜಿ, ಗದುಗಿನ ತೋಟದಾರ್ಯ ಮಠದ ಡಾ. ತೋಂಟದ ಸಿದ್ದರಾಮ ಸ್ವಾಮೀಜಿ, ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ನಿಡಸೋಶಿ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ಗುಳೇದಗುಡ್ಡದ ಜಗದ್ಗುರು ಬಸವರಾಜ ಪಟ್ಟದಾರ್ಯ ಸ್ವಾಮೀಜಿ, ಇಳಕಲ್ಲನ ಗುರುಮಹಾಂತ ಸ್ವಾಮೀಜಿ, ಜಾ.ಲಿಂ. ಮಹಾಸಭಾ ಅಧ್ಯಕ್ಷರಾದ ಅಶೋಕ ಬರಗುಂಡಿ, ಕಾರ್ಯದರ್ಶಿ ರವಿ ಯಡಹಳ್ಳಿ ಸೇರಿದಂತೆ ಬಸವ ನಿಷ್ಠೆಯ ವಿವಿಧ ಸಮುದಾಯ, ಸಂಘಟನೆಗಳ ಪ್ರಮುಖರು ಇದ್ದರು.