ಶಿವ ಸಂಚಾರ: ಜನಪ್ರಿಯ ‘ಬಂಗಾರದ ಮನುಷ್ಯ’ ಸಿನಿಮಾ ಈಗ ರಂಗದ ಮೇಲೆ

ಹೊಸದುರ್ಗ

ಜನಪ್ರಿಯ ಚಲನಚಿತ್ರದ ನೆರಳು ಇದರ ಮೇಲೆ ಇದೆಯಾದ್ದರಿಂದ ಹಲವು ಘಟ್ಟಗಳಲ್ಲಿ ನಾಟಕ ಪೇಲವ ಎನಿಸುತ್ತದೆ.

“ಕೋಟಿ ವಿದ್ಯೆಗಳಲಿ ಮೇಟಿ ವಿದ್ಯೆಯೇ ಮೇಲು” ಎಂಬ ಗಾದೆ ಮಾತಿಗೆ ಅನುಗುಣವಾಗಿ ಪೇಟೆಯಲ್ಲಿ ಅಕ್ಷರ ಕಲಿತವನೊಬ್ಬ ಹಳ್ಳಿಗೆ ಬಂದು ಉತ್ತು ಬಿತ್ತು ಕೃಷಿಕನಾಗಿ, ಯಶಸ್ಸು ಪಡೆದ ಕಥೆಯೇ ಟಿ.ಕೆ. ರಾಮರಾವ ಅವರ ಕಾದಂಬರಿ “ಬಂಗಾರದ ಮನುಷ್ಯ” ದ ಹೂರಣ. ಸಿದ್ದಲಿಂಗಯ್ಯನವರ ಸಮರ್ಥ ನಿರ್ದೇಶನದಲ್ಲಿ ಚಲನಚಿತ್ರವಾಗಿ 70ರ ದಶಕದಲ್ಲಿ ಅತ್ಯಂತ ಯಶಸ್ವಿಯಾದ ಈ ಕಾದಂಬರಿ ಸತತ ಎರಡು ವರ್ಷಗಳ ಕಾಲ ಪ್ರದರ್ಶನ ಕಂಡು ದಾಖಲೆ ನಿರ್ಮಿಸಿತ್ತು.

80ರ ದಶಕದಲ್ಲಿ ಮತ್ತೆ ಬಿಡುಗಡೆಯಾದಾಗಲೂ ಪ್ರದರ್ಶನದಲ್ಲಿ ದಾಖಲೆ ನಿರ್ಮಿಸಿತ್ತು. ಡಾ.ರಾಜಕುಮಾರ್ ಕಥೆಯ ನಾಯಕ ರಾಜೀವನಾಗಿ ಅಭಿನಯಿಸಿದ್ದು ಅವರ ವೃತ್ತಿ ಜೀವನದ ಮೈಲುಗಲ್ಲಾಗಿತ್ತು ಹಾಗೂ ಇದು ಅಂದಿನ ಹಲವಾರು ಯುವಕರಿಗೆ ಕೃಷಿಯನ್ನು ವೃತ್ತಿಯನ್ನಾಗಿ ತೆಗೆದುಕೊಳ್ಳುವಂತೆ ಸ್ಪೂರ್ತಿಯನ್ನು ಸಹ ನೀಡಿತ್ತು.

ಡಾ. ರಾಜ್ ರಂತಹ ಮೇರು ನಟ ನಟಿಸಿ ಅತ್ಯಂತ ಜನಪ್ರಿಯ ಚಲನಚಿತ್ರವಾಗಿ ಪ್ರಸಿದ್ಧವಾದ ಕಥೆಯನ್ನು ರಂಗ ರೂಪಾಂತರ ಮಾಡುವುದು ದೊಡ್ಡ ಸವಾಲಿನ ಕೆಲಸವೇ ಸರಿ. ಈ ಬಾರಿಯ ಸಾಣೇಹಳ್ಳಿಯ “ಶಿವ ಸಂಚಾರ” ದಲ್ಲಿ ಈ ಸವಾಲಿನ ಪ್ರಯೋಗವನ್ನು ಮಾಡಿರುವುದು ವಿಶೇಷ. ಇದರ ಕಥಾವಸ್ತು ಸಹ ಗ್ರಾಮಗಳ ಅಭಿವೃದ್ಧಿ ನಮ್ಮ ದೇಶದ ಬೆನ್ನೆಲುಬಾದ ಕೃಷಿಯ ಮೂಲಕ ಸಾಧ್ಯ ಎಂಬುದಾಗಿದೆ. ಅಲ್ಲದೇ ಈ ಬಾರಿಯ ರಾಷ್ಟ್ರೀಯ ನಾಟಕೋತ್ಸವ ಮಹಾತ್ಮ ಗಾಂಧೀಜಿಯವರ ಸರ್ವೋದಯ ಸಿದ್ಧಾಂತದ ಮೇಲೆ ರೂಪಿತವಾಗಿರುವು ರಿಂದ, ಈ ಕಥಾಹಂದರದ ನಾಟಕಕ್ಕೆ ಒತ್ತು ಕೊಟ್ಟಿರಬಹುದು.

ಕೃಷಿಯ ಬಣ್ಣ ಹಸಿರು. ಹೀಗಾಗಿ ಈ ನಾಟಕದಲ್ಲಿ ಬೆಳಕಿನ ವಿನ್ಯಾಸದಲ್ಲೂ ಕೂಡ ಹಸಿರಿಗೆ ಒತ್ತು ಕೊಟ್ಟಿರುವುದು ವಿಶೇಷ. ಕಥಾನಾಯಕ ರಾಜೀವ ಪದವೀಧರನಾಗಿ ತನ್ನ ಅಕ್ಕ ಇರುವ ಊರಿಗೆ ಮರಳುತ್ತಾನೆ, ಆದರೆ ಅಲ್ಲಿ ತನ್ನನ್ನು ಓದಿಸಿದ ಭಾವ, ಮನೆಯವರನ್ನು ಅನಾಥರನ್ನಾಗಿಸಿ ಸಾವಿಗೀಡಾದ ಸನ್ನಿವೇಶವನ್ನು ಕಂಡು, ತಾನೇ ಆ ಮನೆಯ ಆಧಾರವಾಗಿ ನಿಲ್ಲುತ್ತಾನೆ. ಕಷ್ಟಪಟ್ಟು ಕೃಷಿ ಮಾಡುತ್ತಾನೆ. “ಕೈ ಕೆಸರಾದರೆ ಬಾಯಿ ಮೊಸರು” ಎಂಬ ಗಾದೆ ಮಾತಿನಂತೆ, ತನ್ನ ಪರಿಶ್ರಮದ ಫಲವಾಗಿ ಹಳ್ಳಿಯ ಮನೆಯನ್ನು ಶ್ರೀಮಂತಗೊಳಿಸುತ್ತಾನೆ, ಅಕ್ಕನ ಮಕ್ಕಳನ್ನು ಓದಿಸಿ ಅವರ ಭವಿಷ್ಯ ರೂಪಿಸುತ್ತಾನೆ.

ಪಕ್ಕದ ಮನೆಯ ಲಕ್ಷ್ಮಿಯನ್ನು ಪ್ರೇಮಿಸಿ ಮದುವೆಯಾಗುತ್ತಾನೆ. ಆದರೆ ಅವನ ಬದುಕಿನಲ್ಲಿ ಬರುವ ಇನ್ನೊಬ್ಬಳು ರಹಸ್ಯದ ಹೆಣ್ಣು ಶರಾವತಿ, ಕಥೆಗೆ ತಿರುವು ಕೊಡುತ್ತಾಳೆ. ಅವಳು ರಾಜೀವನ ಪತ್ನಿ ಎಂದು ತಪ್ಪಾಗಿ ತಿಳಿಯುವ ಅಕ್ಕನ ಮಗ, ರಾಜೀವನ ಮೇಲೆ ಆರೋಪ ಹೊರಿಸುತ್ತಾನೆ. ಇದು ಸುಳ್ಳು ಎಂದು ಸಾಬೀತಾಗಿ ರಾಜೀವ “ಬಂಗಾರದ ಮನುಷ್ಯ”ನಾಗುತ್ತಾನೆ. ಮನನೊಂದು ತಾನು ಬಂಗಾರ ಮಾಡಿದ ಮನೆ, ಹಳ್ಳಿಗಳನ್ನು ಬಿಟ್ಟು ತೆರಳುತ್ತಾನೆ..

ಈ ರಂಗ ಪ್ರಯೋಗವನ್ನು ಕಾದಂಬರಿ ಆಧಾರಿತವಾಗಿ ಮಾಡಲಾಗಿದೆಯಾದರೂ, ಜನಪ್ರಿಯ ಚಲನಚಿತ್ರದ ನೆರಳು ಇದರ ಮೇಲೆ ಇದೆಯಾದ್ದರಿಂದ ಹಲವು ಘಟ್ಟಗಳಲ್ಲಿ ನಾಟಕ ಪೇಲವ ಎನಿಸುತ್ತದೆ. ಹಲವು ಚಲನಚಿತ್ರದ ಸುಪ್ರಸಿದ್ಧ ಹಾಡುಗಳನ್ನು ಇದರಲ್ಲಿ ಬಳಸಿಕೊಂಡಿರುವುದರಿಂದ ಸಹಜವಾಗಿಯೇ ಪ್ರೇಕ್ಷಕ, ನಾಟಕದ ತುಲನೆಯನ್ನು ಚಲನಚಿತ್ರದ ಹಿನ್ನೆಲೆಯಲ್ಲಿ ಮಾಡಲಾರಂಭಿಸುತ್ತಾನೆ. ಈ ನೆಲೆಯಲ್ಲಿ ನಿರ್ದೇಶನದಲ್ಲಿ ಸಡಿಲತೆ ಹಾಗೂ ಪಾತ್ರಧಾರಿಗಳ ಅಭಿನಯದಲ್ಲಿ ಪಕ್ವತೆಯ ಕೊರತೆ ಎದ್ದು ಕಾಣುತ್ತದೆ. ಪ್ರೇಕ್ಷಕನಿಗೆ ಇನ್ನೂ ಏನೋ ಬೇಕಿತ್ತು ಎನ್ನಿಸುವಂಥಾ ಅನುಭವ ಮೂಡಿಸುತ್ತದೆ. ರಾಚೂಟಪ್ಪನ ಪಾತ್ರಧಾರಿಯ ಅಭಿನಯ ಮಾತ್ರ ಮನಸ್ಸಿನಲ್ಲಿ ನಿಲ್ಲುತ್ತದೆ. ಇದಕ್ಕೆ ಕಾರಣ ಮೂಲ ಸಿನಿಮಾದ ಪಾತ್ರದ ನೆರಳಿಲ್ಲದಂತೆ ಅವರು ನಟಿಸಿರುವುದರಿಂದ.

ಉಳಿದ ಪಾತ್ರಗಳಲ್ಲಿ ತನ್ಮಯತೆಯ ಕೊರತೆ ಎದ್ದು ಕಾಣುತ್ತದೆ. ಸಾಮಾಜಿಕ ಪ್ರಹಸನವೊಂದು ಪ್ರೇಕ್ಷಕರನ್ನು ಸೆಳೆದಿಡುವುದು ನವರಸಗಳಲ್ಲಿ ಪ್ರಮುಖವಾದ ಹಾಸ್ಯರಸದಿಂದ. ಆದರೆ ಈ ನಾಟಕದಲ್ಲಿ ಎಲ್ಲೂ ಕಂಡು ಬರದಿರುವುದು ಈ ನಾಟಕದ ಕೊರತೆಗಳಲ್ಲಿ ಒಂದು.

ಇಂದಿನ ಅತಿಯಾದ ನಗರೀಕರಣದ ಸನ್ನಿವೇಶದ ಹಿನ್ನೆಲೆಯಲ್ಲಿ ಕೃಷಿ ಎಂಬ ನಮ್ಮ ದೇಶದ ಅತ್ಯಂತ ಮೂಲ ಕಸುಬನ್ನು ಯುವ ಜನತೆ ಮರೆಯುತ್ತಿರುವ ಹೊತ್ತಿನಲ್ಲಿ “ಒಕ್ಕಲಿಗ ಒಕ್ಕದಿರೆ ಜಗವೆಲ್ಲ ಬಿಕ್ಕುವುದು” ಎಂಬ ಸಂದೇಶ ಸಾರುವ ಬಂಗಾರದ ಮನುಷ್ಯನ ಕಥೆಯನ್ನು ನಾಟಕದ ಮೂಲಕ ಶಿವ ಸಂಚಾರ ನಾಡಿನಾದ್ಯಂತ ಸಾರ ಹೊರಟಿರುವುದು ಸ್ತುತ್ಯಾರ್ಹ. ಇದು ಈ ನಾಟಕದ ಮೊದಲ ಪ್ರಯೋಗವಾಗಿದ್ದರಿಂದ, ಮುಂದಿನ ಪ್ರಯೋಗಗಳಲ್ಲಿ ನಾಟಕ ಇನ್ನಷ್ಟು ಬಿಗುವನ್ನು ಓಟವನ್ನು ಪಡೆದುಕೊಂಡು ಪ್ರೇಕ್ಷಕರಿಗೆ ಹತ್ತಿರವಾಗಲಿ ಎನ್ನುವುದು ರಂಗಾಸಕ್ತರ ಆಶಯ.

Share This Article
Leave a comment

Leave a Reply

Your email address will not be published. Required fields are marked *