ಗದಗ
ಬ್ರಿಟೀಷರ ಆಳ್ವಿಕೆಯ ಭಾರತ ಲಕ್ಷಾಂತರ ಸ್ವತಂತ್ರ ಹೋರಾಟಗಾರರ ತ್ಯಾಗ, ಬಲಿದಾನಗಳ ಮೂಲಕ ಸ್ವಾತಂತ್ರ್ಯವನ್ನೇನೋ ಗಳಿಸಿತು. ಆದರೆ ಸ್ವತಂತ್ರ ದೇಶವೆಂದು ಹರ್ಷಪಡುವ ಸ್ಥಿತಿಯಲ್ಲಿ ಅಂದು ದೇಶವಿರಲಿಲ್ಲ. ಕಾರಣ ಕ್ಯಾನ್ಸರ್ ಹುಣ್ಣಿನಂತೆ ವ್ಯಾಪಿಸಿದ್ದ ಜಾತೀಯತೆ, ಹಲವು ವರ್ಗದ ಜನರನ್ನು ನಾಯಿ, ನರಿಗಳಿಗಿಂತ ಕೀಳಾಗಿ ಕಾಣುವ ಅಸ್ಪ್ರೃಶ್ಯತೆ, ಮೇಲುಜಾತಿ, ಕೆಳ ಜಾತಿ ಎಂಬ ಭೇದಭಾವಗಳು, ಜೊತೆಗೆ ಈ ದೇಶವನ್ನು ಕಾಡುತ್ತಿದ್ದ ಇನ್ನೀತರ ಜ್ವಲಂತ ಸಮಸ್ಯೆಗಳಿಗೆ ಸಮರ್ಥವಾದ ನೀತಿ ನಿರೂಪಣೆಯ ಸಂವಿಧಾನವನ್ನು ರೂಪಿಸಬೇಕಾಗಿತ್ತು.
ಆಗ ಈ ದೇಶದ ಸಂವಿಧಾನ ರೂಪಿಸಲು ಸಮರ್ಥವಾಗಿ ಕಂಡ ವ್ಯಕ್ತಿಯೇ ಬಾಬಾಸಾಹೇಬ ಅಂಬೇಡ್ಕರ್ ಅವರಾಗಿದ್ದರು. ಪರಿಣಾಮ ಅವರಿಗೆ ಸಂವಿಧಾನ ರೂಪಿಸುವ ಸಮಿತಿಯ ನೇತೃತ್ವ ನೀಡಲಾಯಿತು ಎಂದು ನವಲಗುಂದ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ತರಬೇತಿ ಅಧಿಕಾರಿ ಆರ್. ಎಲ್. ಕಳ್ಳಿಮನಿಯವರು ಹೇಳಿದರು.
ಅವರು ಬಸವದಳದ ೧೬೨೩ನೇ ನೇ ಶರಣ ಸಂಗಮ ಕಾರ್ಯಕ್ರಮದಲ್ಲಿ `ನಮ್ಮ ಸಂವಿಧಾನ ಮತ್ತು ಅಂಬೇಡ್ಕರವರ ೬೮ನೇ ಸ್ಮರಣೆ’ ಕುರಿತು ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ನಿಮ್ನ ವರ್ಗದಿಂದ ಬಂದ ಬಾಬಾಸಾಹೇಬರು ತಮಗೆ ಸಿಕ್ಕ ಅವಕಾಶವನ್ನು ತುಂಬ ಸಮರ್ಥವಾಗಿ ಈ ದೇಶದ ಸರ್ವ ಸಮಸ್ಯೆಗಳಿಗೆ ತಾರಕವೆನ್ನುವಂತೆ ಸಂವಿಧಾನ ರೂಪಿಸಿದರೆಂದರು.
ಅವರು ರೂಪಿಸಿದ ಸಂವಿಧಾನದಿಂದಲೇ ಈ ದೇಶದ ಬಹುತೇಕ ಅನಿಷ್ಠಗಳು ನಿವಾರಣೆಯಾಗಿವೆ. ಸರ್ವರಿಗೂ ಸಮಾನತೆಯ ಹಕ್ಕು ಸಿಕ್ಕಿದೆ. ಸಾವಿರಾರು ವರ್ಷಗಳಿಂದ ತುಳಿತಕ್ಕೆ ಒಳಗಾಗಿದ್ದ ಬಹುಜನರು ಸಮಾನತೆಯ ಸಂವಿಧಾನದ ಉಪಯೋಗ ಪಡೆದು ಈ ದೇಶದ ನಿರ್ಮಾಣ ಕಾರ್ಯದಲ್ಲಿ ತೊಡಗುವಂತಾಗಿದ್ದಾರೆ ಎಂದು ಉದಾಹರಣೆಗಳ ಮೂಲಕ ಅಂಬೇಡ್ಕರ ಅವರ ಕಾರ್ಯಗಳನ್ನು ತಿಳಿಸಿದರು.

ಮೃತ್ಯುಂಜಯ ಆರ್. ಜಿನಗಾರವರು ಶರಣೆ ಬೊಂತಾದೇವಿ ಹಾಗೂ ಕಾಳವ್ವೆಯವರ ವಚನಗಳನ್ನು ಅರ್ಥಗರ್ಭೀವಾಗಿ ಚಿಂತನೆ ನಡೆಸಿದರು. ಮುಖ್ಯ ಅತಿಥಿಗಳಾಗಿ ಶಿವಾನಂದ ನಗರದ ಸಾಮಾಜಿಕ ಚಿಂತಕಿ ಶರಣೆ ಪದ್ಮಾವತಿ ಕೆ. ಹಂಜಗಿಯವರು ಸಾಂದರ್ಭಿಕವಾಗಿ ಮಾತನಾಡಿದರು.
ಪ್ರಾರಂಭದಲ್ಲಿ ವಚನ ಪ್ರಾರ್ಥನೆಯನ್ನು ರೇಣಕ್ಕ ಕರೇಗೌಡ್ರ ನಡೆಸಿದರು. ಸ್ವಾಗತವನ್ನು ಎಸ್. ಎ. ಮುಗದ ಗೈದರು. ಸಮಾರಂಭದ ಅಧ್ಯಕ್ಷತೆಯನ್ನು ವಿ. ಕೆ. ಕರೇಗೌಡ್ರ ಅವರು ವಹಿಸಿ ಮಾತನಾಡಿದರು. ಕಾರ್ಯಕ್ರಮ ನಿರೂಪಣೆಯನ್ನು ಪ್ರಕಾಶ ಅಸುಂಡಿ ನಡೆಸಿಕೊಟ್ಟರು. ಶರಣು ಸಮರ್ಪಣೆಯನ್ನು ಕಳಕಪ್ಪ ವ್ಯಾಪಾರಿಯವರು ಗೈದರು. ಬಸವದಳದ ಶರಣ, ಶರಣೆಯರು ಭಾಗವಹಿಸಿದ್ದರು.