ರಾಯಚೂರು:
ನಗರದ ಬಸವ ಕೇಂದ್ರವು ಬಸವಾದಿ ಶರಣರ ಸಮಾನತೆ ತತ್ವದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಹಾಗಾಗಿ ಬಸವ ಕೇಂದ್ರಕ್ಕೆ ಸದಾ ನನ್ನ ಸಹಾಯ, ಸಹಕಾರ ಇರುತ್ತದೆ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸಚಿವರಾದ ಎನ್. ಎಸ್. ಬೋಸರಾಜು ಹೇಳಿದರು.
ಬಸವ ಕೇಂದ್ರದ ಮರುಳ ಶಂಕರದೇವರು ಪ್ರಸಾದ ನಿಲಯವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಲೋಕಸಭಾ ಸದಸ್ಯರಾದ ಜಿ. ಕುಮಾರನಾಯಕ ಅವರು, ಗುರು ಬಸವಣ್ಣನವರ ಆದರ್ಶಗಳನ್ನು ಸ್ಮರಿಸುತ್ತಾ, ಬಸವಣ್ಣನವರು ಕೊಟ್ಟ ಶರಣ ಸಂಸ್ಕೃತಿಯೊಂದಿಗೆ ಭಾರತ ಮುಂದೆ ಸಾಗಬೇಕು. ಅವರ ಆದರ್ಶಗಳು ಎಂದೆಂದಿಗೂ ಪ್ರಸ್ತುತ. ಅವನ್ನು ನಾವು ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಮಾತ್ರ ಸದೃಢ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯವೆಂದರು.
ಶಾಸಕರಾದ ಡಾ. ಶಿವರಾಜ ಪಾಟೀಲ ಅವರು, ಬಸವ ಕೇಂದ್ರದ ಕಾರ್ಯ, ಚಟುವಟಿಕೆಗಳನ್ನು ಶ್ಲಾಘಿಸಿದರು. ಕೇಂದ್ರದಲ್ಲಿ ಶರಣರ ಕಾರ್ಯಕ್ರಮಗಳು ಯಾವತ್ತು ಅತ್ಯಂತ ಅಚ್ಚುಕಟ್ಟಾಗಿ ನೆರವೇರುತ್ತವೆ.

ಬಸವಣ್ಣನವರ ಹಾಗೂ ಶರಣರ ವಚನಗಳಲ್ಲಿ ಮಗ್ನರಾಗಿ ಜೀವ ತುಂಬುವ ಕಾರ್ಯಕ್ರಮಗಳನ್ನು ಅಕ್ಕನ ಬಳಗದವರು ನಡೆಸಿಕೊಂಡು ಹೋಗುತ್ತಿರುವುದು ಸಂತೋಷವೆಂದರು.
ಇದೇ ಸಂದರ್ಭದಲ್ಲಿ ಬಸವೇಶ್ವರ ಕಾಲನಿಯಲ್ಲಿರುವ ಬಸವ ಉದ್ಯಾನವನನ್ನು ಅಭಿವೃದ್ಧಿ ಮಾಡಿ ಕೊಡುವ ಭರವಸೆಯನ್ನು ನೀಡಿದರು.
ಅಧ್ಯಕ್ಷತೆ ವಹಿಸಿದ್ದ ರಾಚನಗೌಡ ಕೋಳೂರ ಅವರು ಬಸವ ಕೇಂದ್ರಕ್ಕೆ ತನು ಮನ ಧನದಿಂದ ಸಹಾಯ ಸಹಕಾರ ನೀಡಿದ ಎಲ್ಲರನ್ನು ಸ್ಮರಿಸಿದರು.

ಗೌರವಾಧ್ಯಕ್ಷರಾದ ನಾಗನಗೌಡರು ಹಾಗೂ ಚಂದ್ರಕಲಾ ಪಾಟೀಲ ಅವರು ಬಸವ ಕೇಂದ್ರವು ನಡೆದು ಬಂದ ದಾರಿ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಸಾನಿಧ್ಯವನ್ನು ವಹಿಸಿದ್ದ ಇಳಕಲ್ಲನ ಪೂಜ್ಯ ಗುರುಮಹಾಂತಪ್ಪಗಳು, ಬಸವಣ್ಣನವರ ವಿಚಾರಗಳು ಎಷ್ಟು ಉದಾತ್ತವಾಗಿವೆ ಎಂಬುದನ್ನು ತಿಳಿಸುತ್ತ, ಗುರು ಬಸವಣ್ಣನವರ ಮಾನವೀಯತೆ ಅತ್ಯಂತ ದೊಡ್ಡದು ಎಂದು ಆಶೀರ್ವಚನ ನೀಡಿದರು.
ವೇದಿಕೆ ಮೇಲೆ ಅತಿಥಿಗಳಾಗಿ ಚನ್ನಬಸವ, ಗಿರಿಜಾ ಶಂಕರ, ಚುಕ್ಕಿ ಸೂಗಪ್ಪ ಸಾಹುಕಾರ, ಜಯಂತರಾವ್ ಪತಂಗೆ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಎಲ್ಲಾ ಬಸವಪರ ಸಂಘಟನೆಗಳು, ಬಸವ ಭಕ್ತರು ಭಾಗಿಯಾಗಿದ್ದರು.

ಡಾ. ಪ್ರಿಯಾಂಕಾ ಗದ್ವಾಲ ಅವರಿಂದ ಸುಂದರ ವಚನನೃತ್ಯ ನಡೆಯಿತು. ವಚನ ಪ್ರಾರ್ಥನೆಯನ್ನು ಪಾರ್ವತಿ ಪಾಟೀಲ, ಅಶ್ವಿನಿ ಮಾಟೂರ ಹಾಗೂ ರಾಘವೇಂದ್ರ ಆಶಾಪುರ ತಂಡದವರು ನಡೆಸಿಕೊಟ್ಟರು.
ಸುಮಂಗಲ ಹಿರೇಮಠ ಸ್ವಾಗತಿಸಿದರು, ಜಯಶ್ರೀ ಮಹಾಜನಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು, ಅನಿತಾ ಪಾಟೀಲ ಶರಣು ಸಮರ್ಪಿಸಿದರು. ಬೆಳಿಗ್ಗೆ ಪ್ರಸಾದ ನಿಲಯವು ಬಸವತತ್ವದಂತೆ ಗುರುಪ್ರವೇಶಗೊಂಡಿತು.
