ಬೆಳಗಾವಿ
ಮನುಕುಲದ ಉದ್ಧಾರಕ್ಕಾಗಿ ಅವತರಿಸಿದ ಧರ್ಮಗುರು ಬಸವಣ್ಣನವರನ್ನು ಅವಹೇಳನ ಮಾಡಿದ ಹುಂಬ ಗೌಡನ ಪರಿಸ್ಥಿತಿ ಏನಾಗಬಹುದು? ಎಂಬ ಆಲೋಚನೆ ಮಾಡುತ್ತಿದ್ದಾಗ, ಹಿಂದಿನ ಘಟನೆಯೊಂದು ನನಗೆ ನೆನಪಾಯಿತು.
ಕಾಶಿನಾಥ ಶಾಸ್ತ್ರಿ ಎಂಬ ವ್ಯಕ್ತಿಯಿದ್ದ. ಚಿತ್ರದುರ್ಗದ ಮುರುಘಾಮಠಕ್ಕೆ ಪೀಠಾಧಿಪತಿ ಆಗಬೇಕೆಂದು ಪ್ರಯತ್ನಿಸಿದ. ಆದರೆ ಆಗಲಿಲ್ಲ. ಅಂದಿನಿಂದ ತನ್ನ ಜೀವನ ಪರ್ಯಂತ ಬಸವಣ್ಣನವರನ್ನು ಟೀಕಿಸುವುದು ಅವನ ಜಾಯಮಾನವಾಗಿತ್ತು. ಬಾಯಿ ತೆಗೆದರೆ ಬಸವ ನಿಂದೆ ಮಾಡುತ್ತಿದ್ದ ಕಾಶಿನಾಥ ಶಾಸ್ತ್ರಿ ಪಂಚಾಚಾರ್ಯ ಪ್ರಭಾ ಎಂಬ ಪತ್ರಿಕೆಯನ್ನು ಪ್ರಕಟಿಸುತ್ತಿದ್ದ. ಅದರಲ್ಲಿ ಪ್ರಕಟವಾಗುತ್ತಿದ್ದ ಬಹುತೇಕ ಬರಹಗಳು ಬಸವ ನಿಂದೆಗೆ ಮೀಸಲಾಗಿದ್ದವು.
ಹೀಗೆ ಬಸವನಿಂದೆ ಮಾಡುತ್ತಿದ್ದ ಆ ಶಾಸ್ತ್ರಿಯ ಜೀವನದ ಅಂತಿಮ ಘಟ್ಟದಲ್ಲಿ ಬಾಯಿಗೆ ಕ್ಯಾನ್ಸರ್ ರೋಗ ಅಂಟಿಕೊಂಡಿತು. ಮಾತನಾಡಲು ಬಾರದ ಪರಿಸ್ಥಿತಿ ನಿರ್ಮಾಣವಾಯಿತು. ಆಸ್ಪತ್ರೆ ಸೇರಿದ ಆ ಶಾಸ್ತ್ರಿಯನ್ನು ನೋಡಲು ಒಂದು ದಿನ ಆಕಸ್ಮಿಕವಾಗಿ ರೆ. ಉತ್ತಂಗಿ ಚನ್ನಪ್ಪನವರು ಹೋದರು.
ಬಸವಣ್ಣನವರ ಕುರಿತು, ಸಿದ್ಧರಾಮೇಶ್ವರ, ಸರ್ವಜ್ಞ, ಲಿಂಗಾಯತ ಧರ್ಮ ಕುರಿತು ಅದ್ಭುತವಾದ ಸಂಶೋಧನೆ ಮಾಡಿದ್ದ ರೆ. ಉತ್ತಂಗಿಯವರು ಕ್ರೈಸ್ತ ಧರ್ಮೀಯರಾದರೂ ಬಸವಣ್ಣನವರ ಕುರಿತು ಅವರಿಗೆ ಅಪಾರ ಭಕ್ತಿ ಗೌರವ. ರೆ. ಉತ್ತಂಗಿಯವರು ಕಾಶೀನಾಥ ಶಾಸ್ತ್ರಿಯನ್ನು ಭೇಟಿಯಾದ ಸಂದರ್ಭದಲ್ಲಿ, ಶಾಸ್ತ್ರಿ ಅವರನ್ನು ನೋಡಿ ಗಳಗಳನೆ ಕಣ್ಣೀರು ಸುರಿಸಿದ. ತನ್ನ ಜೀವನ ಪರ್ಯಂತ ಬಸವಣ್ಣನವರನ್ನು ನಿಂದಿಸಿದ ಪರಿಣಾಮವಾಗಿಯೇ ಇಂದು ನನ್ನ ಬಾಯಿಗೆ ಇಂತಹ ಮಹಾರೋಗ ಅಂಟಿಕೊಂಡಿದೆ, ನನ್ನಿಂದ ಮಹಾಪರಾಧವಾಯಿತು ಎಂದು ಹೇಳಿದ.
ಆಗ ರೆ. ಉತ್ತಂಗಿಯವರು ‘ಬಸವನೆಂದರೆ ಪಾಪ ದೆಸೆಗೆಟ್ಟು ಹೋಗುವವು’ ಎಂಬ ಸರ್ವಜ್ಞ ಕವಿ ಮಾತನ್ನು ಜ್ಞಾಪಿಸಿ, ಈಗಲೂ ಕಾಲ ಮಿಂಚಿಲ್ಲ, ಬಸವಗುರುವಿನ ಸ್ಮರಣೆ ಮಾಡಿ, ಜೀವನದ ಸಂಧ್ಯಾಕಾಲದಲ್ಲಿ, ಈ ಕೊನೆಯ ಘಟ್ಟದಲ್ಲಿ ಮನಸ್ಸಿಗೆ ನೆಮ್ಮದಿಯಾದರೂ ಸಿಕ್ಕೀತು ಎಂದು ಹೇಳಿದರು.
ಬಸವಣ್ಣನವರಂತಹ ಮಹಾಪುರುಷ ಹಿಂದೆ ಹುಟ್ಟಿಲ್ಲ, ಮುಂದೆ ಹುಟ್ಟುವುದು ಇಲ್ಲ. ಅಂತಹ ಪಾವನಮೂರ್ತಿಯನ್ನು ಕುರಿತು ಗುರುಪೀಠದ ವಿದ್ವಾನ್ ಆಚಾರ್ಯರೇ ಬಸವ ಪ್ರಣವ ಮಂತ್ರೋದ್ಧರಣೆ ಬರೆದು ಸ್ತುತಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಸಮಾಜದಲ್ಲಿ ವಿಘಟನೆ ಮಾಡಬೇಕೆಂದು ಕಾಶೀನಾಥ ಶಾಸ್ತ್ರಿ ಪ್ರಯತ್ನಿಸಿ, ಜೀವನದ ಕೊನೆಯ ಘಟ್ಟದಲ್ಲಿ ಪಶ್ಚಾತ್ತಾಪ ಪಟ್ಟ ಎಂಬ ಸಂಗತಿಯನ್ನು ಸ್ವತಃ ಉತ್ತಂಗಿ ಚೆನ್ನಪ್ಪನವರು ನನ್ನ ಗುರುಗಳಾದ ಡಾ. ಎಸ್. ಆರ್. ಗುಂಜಾಳ ಅವರ ಮುಂದೆ ಹೇಳಿದ್ದರು.
ಈ ಘಟನೆ ನೆನಪಿಸಿಕೊಂಡಾಗ, ಈ ಹುಂಬ ಗೌಡನ ಜೀವನದ ಕೊನೆಯ ಪರಿಸ್ಥಿತಿ ಏನಾಗಬಹುದು ಎಂಬ ಜಿಜ್ಞಾಸೆ ನನ್ನನ್ನು ಕಾಡಿತು?