ಹಿಂದುಗಳು ಭಯದಿಂದ, ಭಕ್ತಿಯಿಂದ ಪೂಜಿಸುವ ದೇವರು ನಾಗರ ಹಾವು. ನಾಗರ ಪಂಚಮಿಯ ದಿನ ಭಕ್ತಾದಿಗಳೆಲ್ಲ ಹುತ್ತ ಹುಡುಕಿಕೊಂಡು ಹೋಗಿ ಹಾಲು ಸುರಿಯುವುದನ್ನು ನಾವೆಲ್ಲ ನೋಡಿಕೊಂಡೇ ಬೆಳೆದಿದ್ದೇವೆ.
ಆದರೆ ಕಳೆದ ಕೆಲವು ವರ್ಷಗಳಿಂದ ಈ ರೀತಿ ಹಾಲನ್ನು ಪೋಲು ಮಾಡುವುದಕ್ಕೆ ವಿರೋಧ ಬೆಳೆಯುತ್ತಿದ್ದು, ಹಲವಾರು ಕಡೆ ನಾಗರ ಪಂಚಮಿಯ ಬದಲು ಬಸವ ಪಂಚಮಿಯ ಆಚರಣೆ ನಡೆಯುತ್ತಿದೆ.
ಬಸವ ಪಂಚಮಿಯನ್ನು ರೂಢಿಗೆ ತರಲು ಶ್ರಮಿಸುತ್ತಿರುವ ಮಾನವ ಬಂದುತ್ವ ವೇದಿಕೆಯ ರಾಜ್ಯ ಸಂಚಾಲಕ ಎ ಬಿ ರಾಮಚಂದ್ರಪ್ಪ ಬಸವ ಮೀಡಿಯಾದ ಕೆಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.
1)ಮಾನವ ಬಂದುತ್ವ ವೇದಿಕೆ ಬಸವ ಪಂಚಮಿಯನ್ನು ಆಚರಿಸಲು ಶುರುಮಾಡಿದ್ದು ಏಕೆ? ಉದ್ದೇಶವೇನು?
ಕಳೆದ ಐದಾರು ವರ್ಷಗಳಿಂದ ನಾಗರ ಪಂಚಮಿಯ ಬದಲು ಬಸವ ಪಂಚಮಿಯನ್ನು ಆಚರಿಸಲು ಜನರನ್ನು ಪ್ರೇರೇಪಿಸುತ್ತಿದ್ದೇವೆ.
ನಮ್ಮ ಹಬ್ಬಗಳು ಸಾಮಾನ್ಯವಾಗಿ ಒಂದು ವೈಚಾರಿಕ ಹಿನ್ನಲೆಯಿಂದ ಹುಟ್ಟಿಕೊಂಡಿರುತ್ತವೆ. ನಂತರ ವೈದಿಕರು ಬಂದು ಅವುಗಳಲ್ಲಿ ಮೌಢ್ಯ ತುಂಬಿರುತ್ತಾರೆ. ವಾಸ್ತವವಾಗಿ ಹಾವುಗಳು ಹಾಲು ಕುಡಿಯುವುದಿಲ್ಲ, ಕಲ್ಲಿನ ಹಾವಿನ ಮೇಲೆ ಸುರಿಯುವ ಹಾಲನ್ನು ಬಡ ಮಕ್ಕಳಿಗೆ ಕೊಡಬಹುದು.
ಈ ಮೌಢ್ಯ ಬೆಳೆಸುವಲ್ಲಿ ವೈದಿಕ ಶೋಷಣೆಗೆ ಪೂರಕವಾದ ಒಂದು ಸಾಂಸ್ಕೃತಿಕ ರಾಜಕಾರಣವೂ ಇದೆ. ಅದನ್ನು ವಿರೋಧಿಸಿ ಪರ್ಯಾಯವಾಗಿ ಬಸವ ಜಯಂತಿಯನ್ನು ಆಚರಿಸುತ್ತಿದ್ದೇವೆ.
2) ನಾಗರ ಪಂಚಮಿಯ ಹಿಂದಿರುವ ಸಾಂಸ್ಕೃತಿಕ ರಾಜಕಾರಣದ ಬಗ್ಗೆ ಸ್ವಲ್ಪ ಹೇಳ್ತೀರಾ?
ಹಾಲು, ಮೊಸರು, ಎಳನೀರು, ತುಪ್ಪ ಇವೆಲ್ಲ ಪೌಷ್ಟಿಕ ಆಹಾರಗಳು. ಅವುಗಳನ್ನು ಪೂಜೆಯ ನೆಪದಲ್ಲಿ ಹಾಳು ಮಾಡಿ ಶೂದ್ರ ವರ್ಗಕ್ಕೆ ಸಿಗದ ಹಾಗೆ ನೋಡಿಕೊಳ್ಳುತ್ತಾರೆ. ಶೂದ್ರ ವರ್ಗ ಬಲಿಷ್ಠವಾಗದ ಹಾಗೆ ನೋಡಿಕೊಳ್ಳುವ ಅನೇಕ ಮಾರ್ಗಗಳಲ್ಲಿ ಇದೂ ಒಂದು.
3) ನಾಗರ ಪಂಚಮಿಗೆ ಪರ್ಯಾಯವಾಗಿ ಬಸವ ಪಂಚಮಿ . ಇದಕ್ಕೆ ಬಸವಣ್ಣನವರನ್ನೇ ಆಯ್ಕೆಮಾಡಿಕೊಂಡಿದ್ದು ಏಕೆ?
ನಾಗರ ಪಂಚಮಿಗೆ ಪರ್ಯಾಯವಾಗಿ ಬಸವ ಜಯಂತಿ ಅಂದರೆ ಮೌಢ್ಯಕ್ಕೆ ಪ್ರತಿಯಾಗಿ ವೈಚಾರಿಕತೆ. ಕರ್ನಾಟಕದಲ್ಲಿ ವೈಚಾರಿಕತೆಯನ್ನು ಬೆಳೆಸಲು ಶ್ರಮಿಸಿದ್ದವರಲ್ಲಿ ಬಸವಣ್ಣನವರಿಗಿಂತ ದೊಡ್ಡ ವ್ಯಕ್ತಿ ಯಾರಿದ್ದಾರೆ?
ಇದೇ ವಿಷಯದ ಮೇಲೆ ಬಸವಣ್ಣ “ಕಲ್ಲನಾಗರ ಕಂಡರೆ ಹಾಲನೆರೆ ಎಂಬರು ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ” ಎಂದು ವಚನ ಕೂಡ ಬರೆದರು.
ಚಳುವಳಿಯೆಂದರೆ ಬರಿ ವಿರೋಧವಲ್ಲ. ಒಂದು ಪರ್ಯಾಯವನ್ನೂ ಕಟ್ಟಬೇಕು. ೧೨ನೇ ಶತಮಾನದಲ್ಲಿ ಬಸವಣ್ಣ ಮಾಡಿದ್ದೂ ಇದನ್ನೇ. ವೈದಿಕತೆಯನ್ನು ವಿರೋಧಿಸಿ ಒಂದು ಪರ್ಯಾಯ ಧರ್ಮವನ್ನು ಕಟ್ಟಿದರು.
ಬಸವಣ್ಣನವರನ್ನು ಮುಂದೆ ಇಟ್ಟುಕೊಂಡು ಮೌಢ್ಯವನ್ನು ತಿರಸ್ಕರಿಸಿ, ಹಾಲು ಹಾಳಾಗುವದನ್ನು ತಪ್ಪಿಸಿ, ವೈಚಾರಿಕತೆ ಬೆಳೆಸಲು ಬಸವ ಪಂಚಮಿ ಆಚರಿಸುತ್ತೇವೆ.
ನಮ್ಮ ವಿರೋಧವಿರುವುದು ಹಾವಿನ ಪೂಜೆಗಲ್ಲ. ಆ ಪೂಜೆಯ ಹೆಸರಿನಲ್ಲಿ ನಡೆಯುವ ಮೌಢ್ಯ ಆಚರಣೆಗಳಿಗೆ.
4) ಬಸವ ಪಂಚಮಿಯನ್ನು ಆಚರಿಸುವುದು ಹೇಗೆ? ಪ್ರತಿಕ್ರಿಯೆ ಹೇಗಿದೆ?
ಶಾಲಾ ಕಾಲೇಜು, ಮಠ ಅಥವಾ ದಲಿತ ಪ್ರದೇಶಗಳಲ್ಲಿ ಜನ ಸೇರಿಸಿ ಬಸವಣ್ಣನವರ ಫೋಟೋ ಇಟ್ಟು ಅವರ ವಿಚಾರಗಳ ಮೇಲೆ ಉಪನ್ಯಾಸ ಏರ್ಪಡಿಸುತ್ತೇವೆ. ನಂತರ ಮಕ್ಕಳಿಗೆ ಹಾಲು ಕೊಡುತ್ತೇವೆ.
ಬಸವ ಪಂಚಮಿಯನ್ನು ಜನ ಒಪ್ಪಿಕೊಳ್ಳುತ್ತಿದ್ದಾರೆ. ಈ ವರ್ಷ ೧೮೦ ತಾಲೂಕಗಳ ೨೦೦೦ ಹಳ್ಳಿಗಳಲ್ಲಿ ಬಸವ ಪಂಚಮಿ ಆಚರಿಸಲಾಗುತ್ತಿದೆ. ಹಲವಾರು ಪ್ರಗತಿ ಪರ ಸಂಘಟನೆಗಳೂ ಕೈ ಜೋಡಿಸುತ್ತಿವೆ.