ಬಸವ ಸಂವಿಧಾನ ತತ್ವಗಳು ಸರಳ, ನೇರ, ನಿಷ್ಠುರ: ಸಾಣೇಹಳ್ಳಿ ಶ್ರೀ

ಗಣೇಶ ಅಮೀನಗಡ
ಗಣೇಶ ಅಮೀನಗಡ

ಹೊಸದುರ್ಗ:

ಬಸವ ಸಂವಿಧಾನದ ತತ್ವಗಳು ಸರಳ, ನೇರ ಮತ್ತು ನಿಷ್ಠುರವಾಗಿವೆ ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ತಿಳಿಸಿದರು.

ರಾಷ್ಟ್ರೀಯ ನಾಟಕೋತ್ಸವ ಅಂಗವಾಗಿ ತಾಲ್ಲೂಕಿನ ಸಾಣೇಹಳ್ಳಿಯ ಶ್ರೀಮಠದ ಬಸವ ಮಹಾಮನೆಯಲ್ಲಿ ಗುರುವಾರ ಆಯೋಜಿಸಿದ್ದ  ಮಾಸಿಕ ಇಷ್ಟಲಿಂಗ ದೀಕ್ಷಾ ಸಂಸ್ಕಾರ ಕಾರ್ಯಕ್ರಮದಲ್ಲಿ ಭಕ್ತರಿಗೆ ದೀಕ್ಷೆ ನೀಡಿ ಮಾತನಾಡಿದರು.

ಬಸವ ಸಂವಿಧಾನದ ತತ್ವಗಳು ಸಕಲ ಜೀವಾತ್ಮರಿಗೆ ಲೇಸನ್ನು ಬಯಸುತ್ತವೆ, ಮೌಢ್ಯಗಳನ್ನು ನಿರಾಕರಿಸುತ್ತವೆ. ಅವರದು ತಾರ್ಕಿಕ ಗುಣ. ವೈಜ್ಞಾನಿಕ ಹಾಗೂ ವೈಚಾರಿಕ ಹಿನ್ನೆಲೆಯ ವಚನಗಳ ಒಳಗೆ ಕಲ್ಪನೆಯಿಲ್ಲ ಎಂದು ವಿವರಿಸಿದರು. ಇಷ್ಟಲಿಂಗ ದೀಕ್ಷೆಯನ್ನು ಶಿವದೀಕ್ಷೆ ಎನ್ನಬಹುದು. ಎಲ್ಲ ಶರಣರ ವಚನಗಳ ಹಿನ್ನೆಲೆಯಲ್ಲಿ ಶಿವದೀಕ್ಷೆಯೇ ಸೂಕ್ತವಾದುದು ಎಂದರು.

ಪೂರ್ವಜನ್ಮವೆಂದರೆ ಹೆತ್ತವರ ಸಂಬಂಧ. ಪುನರ್ಜನ್ಮ ಎಂದರೆ ಶಿವದೀಕ್ಷೆ ಪಡೆಯುವುದು. ಇಲ್ಲಿ ಜಾತಿ, ವರ್ಗ, ಮತ, ಲಿಂಗ, ಪಂಗಡವಿಲ್ಲ. ಶಿವದೀಕ್ಷೆಯನ್ನು ಎಲ್ಲ ವರ್ಗದ, ಎಲ್ಲ ಜಾತಿಯ ಜನರು ಪಡೆಯಬಹುದು. ಇದರಿಂದ ಸಂಸ್ಕಾರ ಹೊಂದಲು ಸಾಧ್ಯ.

ಹೇಗೆಂದರೆ ಬಾಗಿದ ತಲೆ, ಮುಗಿವ ಕೈ ಎಂಬ ವಚನದ ಹಾಗೆ ಅಂದರೆ ಬೀಗಲಾರದೆ ಬಾಗಬೇಕು. ವಿವೇಕ ಕಳೆದುಕೊಳ್ಳದೆ, ವಿನಯ ಬಿಡದೆ ಆದರ್ಶ ದಾರಿಯಲ್ಲಿ ನಡೆಯಬೇಕು ಎನ್ನುವುದು ಶಿವದೀಕ್ಷೆಯ ಸೂತ್ರ ಎಂದು ವಿವರಿಸಿದರು.

ಚಿಂತನ ಕಾರ್ಯಕ್ರಮ; ಮಹಾದೇವರಾಗಲು ಬೇಕು ಏಕಾಗ್ರತೆ ಓದಿನಲ್ಲಿ, ನಡವಳಿಕೆಯಲ್ಲಿ, ಬದುಕಿನ ವಿಧಾನದಲ್ಲಿ ಏಕಾಗ್ರತೆ ಇದ್ದರೆ ಮಹಾದೇವನಾಗಲು ಸಾಧ್ಯ  ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಸಲಹೆ ನೀಡಿದರು.

ಶ್ರೀಮಠ ಆಯೋಜಿಸಿರುವ ರಾಷ್ಟ್ರೀಯ ನಾಟಕೋತ್ಸವ ಅಂಗವಾಗಿ ಗುರುವಾರ ಸಾಣೇಹಳ್ಳಿಯಲ್ಲಿ ನಡೆದ ಚಿಂತನ ಕಾರ್ಯಕ್ರಮದ ಸಾನ್ನಿಧ್ಯ‌ ವಹಿಸಿ ಮಾತನಾಡಿದರು. ಗುಡಿಗೆ ಹೋದರೆ ಕಾಲದ ಅಪವ್ಯಯವಾಗುತ್ತದೆ. ಇದಕ್ಕಾಗಿ ನಿತ್ಯ ಒಂದೆರಡಾದರೂ ವಚನಗಳನ್ನು ಓದಿ, ಇಷ್ಟಲಿಂಗ ಪೂಜಿಸಿದರೆ ಏಕಾಗ್ರತೆ ಸಾಧಿಸಲು ಸಾಧ್ಯ ಎಂದು ಹೇಳಿದರು.

ಬದುಕಿನಲ್ಲಿ ಏನಾದರೂ ಸಾಧಿಸಲು ಸಮಾಧಾನ ಇರಬೇಕು‌‌. ಇದಕ್ಕೆ ಪ್ರೇರಕಶಕ್ತಿ ಮನಸ್ಸು. ಇದು ಚಂಚಲವಾದರೆ ಸಾಧನೆ ಶೂನ್ಯವಾಗುತ್ತದೆ ಎಂದರು. ಮನಸ್ಸು ನೊಣದ ಹಾಗೆ‌. ಯಾವುದರ ಮೇಲೂ ಕೂಡುತ್ತದೆ. ಆದರೆ ಜೇನುನೊಣ ಹೂವಿನ ಮೇಲೆ ಮಾತ್ರ ಕೂಡುತ್ತದೆ. ನಮ್ಮ ಮನಸ್ಸನ್ನು ಸದಾ ಒಳ್ಳೆಯ ಚಿಂತನೆಗಳ ಮೇಲೆ ಇರಬೇಕು ಎಂದು ಕಿವಿಮಾತು ಹೇಳಿದರು.

ಬಸವಣ್ಣನವರು ಎನ್ನ ಮನ ಮರ್ಕಟ ಎಂದರು. ಇನ್ನೊಂದು ವಚನದಲ್ಲಿ ಎನ್ನ ಚಿತ್ತವು ಅತ್ತಿಯ ಹಣ್ಣು ನೋಡಯ್ಯ ಎಂದರು. ಹೊರಗೆ ಸುಂದರವಾಗಿರುವ ಅತ್ತಿಯ ಹಣ್ಣು ಬಿಡಿಸಿದಾಗ ಹುಳುಗಳಿರುತ್ತವೆ. ಇಂಥ ಮನಸ್ಸನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಬೇಕು. ಶಾಂತಿ, ಸಮಾಧಾನದಿಂದ ಇದ್ದರೆ ಸಾಧಿಸಲು ಸಾಧ್ಯ ಎಂದರು.

ಇದಕ್ಕೂ ಮೊದಲು ಸಾಹಿತಿ ಹೊಸೂರು ಪುಟ್ಟರಾಜ ‘ಏಕಾಗ್ರತೆ’ ಕುರಿತು ಮಾತನಾಡಿ, ಗುರಿ ತಲುಪಲು, ಸಾಧಕರಾಗಲು, ವಿಶೇಷ ವ್ಯಕ್ತಿತ್ವ ರೂಪಿಸಿಕೊಳ್ಳಲು ಏಕಾಗ್ರತೆ ಬೇಕು ಎಂದರು. ಮೊಬೈಲ್ ಫೋನ್, ಟಿವಿಗಳು ಎಲ್ಲರ ಅದರಲ್ಲೂ ವಿದ್ಯಾರ್ಥಿಗಳ ಚಂಚಲತೆ ಹೆಚ್ಚಿಸುತ್ತವೆ. ಇದಕ್ಕಾಗಿ ಯೋಗ, ಪ್ರಾಣಯಾಮ, ಭಜನೆ, ಧ್ಯಾನ, ಪ್ರಾರ್ಥನೆ ಅಗತ್ಯ ಎಂದರು. ಕಲಾ ಶಿಕ್ಷಕಿ ಜ್ಯೋತಿ ಹಾಗೂ ಎಚ್.ಎಸ್. ನಾಗರಾಜ್  ವಚನಗಳನ್ನು ಹಾಡಿದರು. ಶರಣ ಶರಣೆಯರು ಉಪಸ್ಥಿತರಿದ್ದರು

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/H81yNL3dGRcHb7EBxL5oq

Share This Article
Leave a comment

Leave a Reply

Your email address will not be published. Required fields are marked *