ಬಸವ ಸಂಘಟನೆಗಳ ರಾಜಕೀಯ ಶಕ್ತಿಯ ಕೊರತೆ ಸಮಸ್ಯೆಯಾಗಿದೆ
ಬೆಳಗಾವಿ
ಲಿಂಗಾಯತ ಮತಗಳನ್ನು ಬಳಸಿಕೊಂಡು ಗೆಲ್ಲುವ ಲಿಂಗಾಯತ ರಾಜಕಾರಣಿಗಳು ಲಿಂಗಾಯತರ ವಿರುದ್ಧವೇ ಕೆಲಸ ಮಾಡುತ್ತಾರೆ.
ನಾಡಿನುದ್ದಕ್ಕೂ ಸಕ್ರಿಯವಾಗಿರುವ ಬಸವ ಸಂಘಟನೆಗಳು ರಾಜಕೀಯ ಪ್ರಜ್ಞೆ, ಪ್ರಭಾವ ಬೆಳಸಿಕೊಂಡರೆ ಮಾತ್ರ ಲಿಂಗಾಯತ ವಿರೋಧಿ ರಾಜಕಾರಣಕ್ಕೆ ಕಡಿವಾಣ ಹಾಕಲು ಸಾಧ್ಯ.
ಈ ವಿಷಯದ ಬಗ್ಗೆ ಬಸವ ಸಂಘಟನೆಗಳಲ್ಲಿ ಜಾಗೃತಿ ಮೂಡಿಸಲು ಬಸವ ಶಕ್ತಿ ಶಿಬಿರ, ಸಮಾವೇಶಗಳನ್ನು ನಡೆಸಬೇಕೆಂಬ ಸಲಹೆ ಅನೇಕ ಬಸವ ಕಾರ್ಯಕರ್ತರಿಂದ ಬಂದಿದೆ.
ಇಂದು ಬೆಳಗಾವಿ ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಪ್ರೇಮಕ್ಕ ಅಂಗಡಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
1) ಬಸವ ಸಂಘಟನೆಗಳು ರಾಜಕೀಯ ಪ್ರಭಾವ ಬೆಳೆಸಿಕೊಳ್ಳಬೇಕೇ? ಯಾಕೆ?
ಬಸವ ಸಂಘಟನೆಗಳು ರಾಜಕೀಯ ಪ್ರಭಾವ ಬೆಳೆಸಿಕೊಳ್ಳುವ ಅವಶ್ಯಕತೆ ಇದೆ. ಬಸವ ಅನುಯಾಯಿಗಳ ರಾಜಕೀಯ ಶಕ್ತಿಯ ಕೊರತೆಯಿಂದ ಬಸವತತ್ವ ವಿಶ್ವಶಕ್ತಿಯಾಗಿ ಬೆಳೆಯಲು ಸಾಧ್ಯವಾಗುತ್ತಿಲ್ಲ.
ವಿಶ್ವ ಭೂಪಟಲದಲ್ಲಿ ಬಸವ ಅನುಯಾಯಿಗಳು ಎಲ್ಲ ರಂಗದಲ್ಲಿ ಬೆಳೆಯಲು ರಾಜಕೀಯ ಶಕ್ತಿ ಅವಶ್ಯವಾಗಿದೆ.
2) ಇದಕ್ಕೆ ತರಬೇತಿಯ ಅಗತ್ಯವಿದೆಯೇ?
ಹೌದು ಅಗತ್ಯವಿದೆ. ಮೊದಲು ಇವನಾರವ ಎನ್ನದೆ ಎಲ್ಲರನ್ನೂ ಅಪ್ಪಿಕೊಂಡು ಸಮಾಜವನ್ನು ಮುನ್ನಡೆಸುವ ಬಸವತತ್ವ ಸಿದ್ಧಾಂತದ ಮೇಲೆ ನಾಯಕತ್ವದ ಗುಣವನ್ನು ರೂಪಿಸುವ ತರಬೇತಿಯ ಅವಶ್ಯಕತೆ ಇದೆ.
ಜೊತೆಗೆ ಸರ್ವಾಂಗೀಣ ವ್ಯಕ್ತಿತ್ವ ವಿಕಾಸಗೊಳಿಸುವ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಿಂದ ಮಾರ್ಗದರ್ಶನ ಅವಶ್ಯವಿದೆ.
ವಿಶ್ವವ್ಯಾಪಿ ಚದುರಿ ಹೋಗಿರುವ ಬಸವ ಅಭಿಮಾನಿಗಳನ್ನು ಆಧುನಿಕ ಮಾಧ್ಯಮಗಳನ್ನು ಬಳಸಿಕೊಂಡು ತುರ್ತಾಗಿ ಸಂಘಟಿಸಿ ತರಬೇತಿ ನೀಡಬೇಕಿದೆ.
3) ಬಸವಶಕ್ತಿ ಸಮಾವೇಶದ ರೂಪುರೇಷೆಯ ಬಗ್ಗೆ ನಿಮ್ಮ ಸಲಹೆ.
ಬಸವಶಕ್ತಿ ಸಮಾವೇಶ ತಾತ್ವಿಕ ನೆಲೆಗಟ್ಟಿನ ಮೇಲೆ ಅರ್ಥಪೂರ್ಣವಾಗಿ ನಡೆಯಲು ಯುವಕ, ಯುವತಿಯರಿಗೆ ಪ್ರಾಧ್ಯಾನತೆ ಕೊಡಬೇಕು. ಯಶಸ್ವಿಗೆ ಸಮಾಜದ ಏಳು ಬೀಳು, ನೆಲೆ ಕಲೆಗಳನ್ನು ಅರಿತು ಸಂಘಟಿತರಾಗಬೇಕು.
ಅವಗಡ, ಅವಹೇಳನಗಳು ಸಂಭವಿಸಿದಾಗ ಪ್ರತಿಭಟಿಸುವ, ಪ್ರತಿಕ್ರಿಯಿಸುವ, ಪುಟಿದೇಳುವ ಗಣಾಚಾರ ದಳದ ಅವಶ್ಯಕತೆ ಇದೆ. ಒಬ್ಬರ ಜೊತೆ ಒಬ್ಬರು ಸಹಕರಿಸುವ ರಾಜಕೀಯ ಶಕ್ತಿ ವೃದ್ಧಿಸಿಕೊಳ್ಳಬೇಕಾಗಿದೆ. ಈ ಮುಖಾಂತರ ಬಸವಶಕ್ತಿ ಮಹಾ ಶಕ್ತಿಯಾಗಿ ಹೊರಹೊಮ್ಮಬಹುದು.
4) ನಿಮ್ಮ ಸಂಘಟನೆಯಿಂದ ಎಷ್ಟು ಜನ ಭಾಗವಹಿಸುವಿರಿ?
ಜಾತಿ, ಮತ, ಪಂಥ, ವರ್ಗ, ವರ್ಣ, ಲಿಂಗ ಭೇದವಿಲ್ಲದೆ ಸ್ವಾಭಿಮಾನಿ ಬಸವಾಭಿಮಾನಿಗಳೆಲ್ಲರೂ ಅಸಂಖ್ಯಾತ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ. ಯಾವುದೇ ಸಂಶಯವಿಲ್ಲ. ಈಗಾಗಲೇ ಇದು ಬಸವ ಸಂಸ್ಕೃತಿ ಅಭಿಯಾನದ ಮುಖಾಂತರ ಇದು ಸಾಬೀತಾಗಿದೆ. ಮುಂದೆಯೂ ಆಗುತ್ತದೆ.
5) ಸಮಾವೇಶ ಸಂಘಟಿಸಲು ನೆರವಾಗಲು ನಿಮಗೆ ಆಸಕ್ತಿಯಿದೆಯೇ?
ಖಂಡಿತವಾಗಿ 30 ವರ್ಷಗಳಿಂದ ಬಸವತತ್ವಕ್ಕಾಗಿ, ಸಂಘಟನೆಗಾಗಿ ಶ್ರಮಿಸುತ್ತಿದ್ದೇವೆ. ಮುಂದೆಯೂ ಶ್ರಮಿಸುತ್ತೇವೆ.

ಸತತ ಮೂವತ್ತು ವರ್ಷಗಳ ನಿರಂತರ ಬಸವ ಸಂಘಟನೆ ಮಾಡುತ್ತಿರುವುದಕ್ಕೆ ತುಂಬು ಹೃದಯದ ಧನ್ಯವಾದಗಳು ತಮ್ಲರಿಗೆ. ಮುಂದೆಯೂ ಹೀಗೆ ಇರಲೆಂದು ಆಶಿಸಿ, ರಾಜಕೀಯ ತರಬೇತಿ, ನೀಡಲು ನಿಜವಾದ ಪ್ರಗತಿಯತ್ತ ಸಾಗುವ ಅವಕಾಶಗಳು ಇವೆ. ವ್ಯವಸ್ಥಿತವಾಗಿ ಧುರೀಣರನ್ನು ಕ್ರೋಢೀಕರಿಸಿ ಸಶಕ್ತ ಭಾರತದ ನಾಗರಿಕರನ್ನು ಮುನ್ನಡೆಸಲು ವಿಪುಲವಾದ ಅವಕಾಶಗಳು ಇವೆ. ಬಸವ ಪ್ರಜ್ಞೆ ಮುಂದೆ ಸಾಗಬೇಕಲ್ವೆ? ದೇವರು ಎಲ್ಲರಿಗೆ ಒಳ್ಳೆಯದು ಮಾಡಲಿ. ಶರಣು ಶರಣಾರ್ಥಿ.