ಸಮರೋಪಾಧಿಯಲ್ಲಿ ಬಸವತತ್ವ ಪ್ರಚಾರ ಮಾಡಿದ ತೋಂಟದ ಸಿದ್ದಲಿಂಗ ಶ್ರೀಗಳು

ಸಿದ್ದಣ್ಣ ಅಂಗಡಿ
ಸಿದ್ದಣ್ಣ ಅಂಗಡಿ

ಗದಗ

ತೋಂಟದಾರ್ಯ ಪೀಠಕ್ಕೆ ಪೀಠಾಧಿಪತಿಗಳಾದ ನಂತರ ಲಿಂ. ತೋಂಟದ ಸಿದ್ದಲಿಂಗ ಶ್ರೀಗಳು ಗೈದ ಕಾರ್ಯ ಅಗಾಧವಾದುದು. ಅಜ್ಞಾನ, ಮೂಢನಂಬಿಕೆ ಹೋಗಲಾಡಿಸುವುದು, ಶರಣ ಸಂಪ್ರದಾಯದಂತೆ ಎಲ್ಲರೂ ಸಮಾನರು, ‘ಇವನಮ್ಮವ ಇವನಮ್ಮವ’ ಎಂಬ ಬಸವೇಶ್ವರರ ವಚನದಂತೆ ಹಾಗೂ ಕಾಯಕವೇ ಕೈಲಾಸ ತತ್ವದಡಿ ಮಠವನ್ನು ಕಟ್ಟುವುದು ಪೂಜ್ಯರ ಸಂಕಲ್ಪವಾಗಿತ್ತು ಎಂದು ನಗರದ ಬಸವೇಶ್ವರ ಹೈಸ್ಕೂಲಿನ ನಿ. ಪ್ರಾ. ಹಾಗೂ ಗದಗ ತೋಂಟದಾರ್ಯ ಮಠದ ಎಂ. ಎಂ. ಕಲಬುರ್ಗಿ ಅಧ್ಯಯನ ಸಂಸ್ಥೆಯ ಕಾರ್ಯದರ್ಶಿಗಳು ಆದ ಶಿವನಗೌಡ ಗೌಡರ ಹೇಳಿದರು.

ಅವರು ಈಚೆಗೆ ನಡೆದ ಬಸವದಳದ ೧೬೧೬ನೇ ಶರಣ ಸಂಗಮ ಕಾರ್ಯಕ್ರಮದಲ್ಲಿ `ಪೂಜ್ಯ ಲಿಂ.ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳವರ ೬ನೇ ಸ್ಮರಣೆ’ ಕಾರ್ಯಕ್ರಮದಲ್ಲಿ ಉಪನ್ಯಾಸಗೈಯುತ್ತಿದ್ದರು.

ತೋಂಟದ ಸಿದ್ಧಲಿಂಗ ಶ್ರೀಗಳ ಬದುಕೇ ಅನನ್ಯವಾದುದು. ಶ್ರೀಮಠದ ಪೀಠಾಧಿಪತಿಗಳಾಗಿ, ಸುಮಾರು ನಾಲ್ಕುವರೆ ದಶಕಗಳ ಅವಧಿಯಲ್ಲಿ ಸಮರೋಪಾಧಿಯಲ್ಲಿ ಬಸವತತ್ವ ಪ್ರಚಾರದಲ್ಲಿ ಮಹಾದಂಡನಾಯಕರಂತೆ ಕೆಲಸ ಮಾಡಿದರು. ಈ ಮೂಲಕ ಜನರನ್ನು ಜಾಗೃತಿಗೊಳಿಸಿದರೆಂದರು.

ಲಿಂಗಾಯತ ಸಮಾಜದಲ್ಲಿನ ಅಜ್ಞಾನ-ಮೂಢನಂಬಿಕೆ ತೊಲಗಿಸಲು ಪ್ರಯತ್ನಿಸಿದರು. ಜೊತೆಗೆ ಶ್ರೀಮಠದಿಂದ ನೂರಾರು ಶಿಕ್ಷಣ ಸಂಸ್ಥೆಗಳು, ತಾಂತ್ರಿಕ ಕಾಲೇಜುಗಳನ್ನು ತೆರೆದು ಬಡ ಹಾಗೂ ಗ್ರಾಮೀಣ ಮಕ್ಕಳಿಗೆ ಶಿಕ್ಷಣದ ಸವಲತ್ತು ದೊರೆಯುವಂತೆ ಮಾಡಿದರು.

ಲಿಂಗಾಯತ ಸ್ವತಂತ್ರ ಧರ್ಮ ಸ್ಥಾಪನೆಯ ಹೋರಾಟದ ನೇತೃತ್ವ ವಹಿಸಿ, ಈ ಮೂಲಕ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಧರ್ಮಮಾನ್ಯತೆಗೆ ಶಿಫಾರಸ್ಸು ಕಳುಹಿಸುವಲ್ಲಿ ಯಶಸ್ವಿಯಾದರೆಂದರು.

ಘಟದಿಂದ ಮಠವೆಂದರಿತು, ಆಧುನಿಕ ಕೃಷಿ ಪದ್ದತಿಯನ್ನು ಜಾರಿಗೆ ತಂದರು. ಗ್ರಾಮೀಣ ರೈತರಿಗೆ ಅನುಕೂಲ ಮಾಡಿಕೊಟ್ಟರು. ಜೊತೆಗೆ ಲಿಂಗಾಯತ ಅಧ್ಯಯನ ಸಂಸ್ಥೆ ಸ್ಥಾಪಿಸಿ ಸುಮಾರು ೯೫೦ಕ್ಕೂ ಹೆಚ್ಚು ಮಹತ್ವಪೂರ್ಣ ಕೃತಿಗಳನ್ನು ಪ್ರಕಟಿಸಿದ ಕೀರ್ತಿ ಪೂಜ್ಯರಿಗೆ ಸಲ್ಲುತ್ತದೆಂದರು.

ಜೊತೆಗೆ ಅವರ ಕನಸಿನ ಕೂಸಾದ ಶಿವಾನುಭವ ಮೂಲಕ ಎರಡು ಸಾವಿರ ಕಾರ್ಯಕ್ರಮಗಳನ್ನು ನಡೆಸಿದರು. ಈ ಮೂಲಕ ಜನತೆಯಲ್ಲಿ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಜಾಗೃತಿಗೆ ಕಾರಣೀಕರ್ತರಾದರು.

ಕನ್ನಡ ನಾಡು ನುಡಿ ಉಳಿವಿಗಾಗಿ ಅವರು ಈ ಹಿಂದೆಯೇ ಗೋಕಾಕ ಹೋರಾಟದ ಮುಂಚೂಣಿಯಲ್ಲಿದ್ದರು. ಜೊತೆಗೆ ನಂಜುಂಡಪ್ಪ ವರದಿ, ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ, ಪೋಸ್ಕೋ ಚಳುವಳಿಯ ಮೂಲಕ ಕಪ್ಪತ್ತಗುಡ್ಡ ಉಳಿಕೆ ಹೋರಾಟ ನಡೆಸಿದ್ದು ಐತಿಹಾಸಿಕವಾಗಿದೆ.

ಮಠಾಧೀಶರೊಬ್ಬರು ಕರುನಾಡಿನ ಇತಿಹಾಸದಲ್ಲಿ ಇಷ್ಟೊಂದು ಮಹತ್ ಕಾರ್ಯಗೈದುದು ಇದೇ ಪ್ರಥಮವಾಗಿದೆ. ಈ ರೀತಿ ಇತರ ಮಠಾಧೀಶರಿಗೆ ಮಾದರಿಯಾಗಿ ಅಹರ್ನಿಶಿ ಕಾರ್ಯಗೈದ ತೋಂಟದ ಸಿದ್ಧಲಿಂಗ ಶ್ರೀಗಳ ಬದುಕು ವಿಸ್ಮಯ, ಅದ್ಭುತವಾದುದು ಎಂದು ಪ್ರಾ. ಶಿವನಗೌಡ ಗೌಡರ ಹೇಳಿದರು.

ನಂತರ ‘ಶರಣೆ ಉರಿಲಿಂಗ ಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆಯವರು ಎರಡು ವಚನಗಳ ಚಿಂತನೆಯನ್ನು ರೇಣಕ್ಕಾ ಕರಿಗೌಡರ ನಡೆಸಿಕೊಟ್ಟರು. ಇದೇ ವಚನಗಳ ಕುರಿತು ಶ್ರೀಮತಿ ಧರ್ಮರೆಡ್ಡಿಯವರು ಕೂಡಾ ಮಾತನಾಡಿದರು.

ಪ್ರಾರಂಭದಲ್ಲಿ ವಚನ ಪ್ರಾರ್ಥನೆಯನ್ನು ನೀಲಮ್ಮ ಎಂ. ಭಾವಿಯವರು ನಡೆಸಿದರು. ಸ್ವಾಗತವನ್ನು ಶರಣಪ್ಪ ಎಸ್. ಅಂಗಡಿ ನೆರವೇರಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ವಿ.ಕೆ. ಕರರೇಗೌಡ್ರ ಅವರು ವಹಿಸಿ ಮಾತಾಡಿದರು. ಶರಣು ಸಮರ್ಪಣೆಯನ್ನು ಪ್ರಕಾಶ ಅಸುಂಡಿ ಗೈದರು. ಪ್ರಸಾದ ಸೇವೆಯನ್ನು ಮೃತ್ಯುಂಜಯ ಜಿನಗಾ ವಹಿಸಿದ್ದರು.

Share This Article
Leave a comment

Leave a Reply

Your email address will not be published. Required fields are marked *