ಬೆಂಗಳೂರು
‘ಬಸವಣ್ಣನವರು ಕಾಯಕ ಸಮಾಜ ನಿರ್ಮಾಣಕ್ಕೆ ಕರೆ ನೀಡಿದ್ದರು. ಸಿದ್ಧರಾಮೇಶ್ವರರು ದೇವಸ್ಥಾನ, ಕೆರೆ ಕಟ್ಟೆ, ಜಮೀನಿಗೆ ನೀರಾವರಿ ಸೌಕರ್ಯ ವ್ಯವಸ್ಥೆ ಮಾಡುವ ಮೂಲಕ ಬಸವಣ್ಣನವರ ಕನಸನ್ನು ನನಸು ಮಾಡಿದ್ದರು. ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಬಣ್ಣಿಸಿದರು.
ನೊಳಂಬ ಲಿಂಗಾಯತ ಸಂಘ ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಗುರು ಸಿದ್ಧರಾಮೇಶ್ವರರ 852ನೇ ಜಯಂತಿಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ, ಮಾತನಾಡಿದರು.
‘ಸಕಲ ಪ್ರಾಣಿ–ಪಕ್ಷಿಗಳ ನೀರಿನ ಬವಣೆ ನೀಗಿಸಲು ಶಿವಯೋಗಿ ಸಿದ್ಧರಾಮೇಶ್ವರ ಅವರು ಕೆರೆ, ಕಟ್ಟೆಗಳನ್ನು ನಿರ್ಮಿಸಿದ್ದರು. ಮಹಾರಾಷ್ಟ್ರದ ಸೊಲಾಪುರ ಮತ್ತು ಅವಿಭಜಿತ ವಿಜಯಪುರ ಜಿಲ್ಲೆಗಳ ಭಾಗಗಳಲ್ಲಿ ಸಿದ್ಧರಾಮೇಶ್ವರ ಅವರ ಪ್ರಭಾವ ಇಂದಿಗೂ ಗಾಢವಾಗಿದೆ’ ವಚನಕಾರರಾಗಿದ್ದ ಅವರು ಸಮಾಜಕ್ಕೆ ಈಗಲೂ ಪ್ರೇರಕ ಶಕ್ತಿ’
ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಬಿ.ಎಲ್. ಶಂಕರ್ ಅವರು ‘12ನೇ ಶತಮಾನದ ಶಿವಶರಣರು’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು.
ಸಂವಿಧಾನ ರಚನೆಯಾಗಿ ಎಪ್ಪತ್ತೈದು ವರ್ಷಗಳ ಸಂಭ್ರಮವನ್ನು ಆಚರಿಸುತ್ತಿದ್ದೇವೆ. ಸಂವಿಧಾನದಲ್ಲಿ ಬರೆದಿರುವ ಪ್ರತಿಯೊಂದು ಅಕ್ಷರ, ವಾಕ್ಯಗಳು ಯಾವುದಕ್ಕಾದರೂ ಹತ್ತಿರವಾಗಿದೆ ಅಥವಾ ಪ್ರೇರಣೆ ಪಡೆದುಕೊಂಡಿದೆ ಎಂದರೆ ಅದು ಶರಣರ ವಚನಗಳಿಗೆ ಮಾತ್ರ ಎಂದು ಚಿತ್ರಕಲಾ ಪರಿಷತ್ ಅಧ್ಯಕ್ಷ ಡಾ.ಬಿ.ಎಲ್.ಶಂಕರ್ ಅಭಿಪ್ರಾಯಪಟ್ಟಿದ್ದಾರೆ.
ಭಾರತ ಸಂವಿಧಾನ ಬ್ರಿಟಿಷ್, ಕೆನಡಾ, ಅಮೆರಿಕ, ಬ್ರಿಟನ್, ಫ್ರೆಂಚ್ ದೇಶಗಳಿಂದ ಪ್ರೇರಣೆ ಪಡೆದುಕೊಂಡಿದೆ ಎಂದು ಹೇಳಬಹುದು. ಆದರೆ, ಸಂವಿಧಾನದಲ್ಲಿ ಇರುವ ಸಂದೇಶ, ಸಾರಾಂಶದ ವಿಷಯಗಳೆಲ್ಲವನ್ನೂ ಶರಣರ ವಚನಗಳಲ್ಲಿ ನಾವು ಗಮನಿಸಬಹುದು ಎಂದು ಹೇಳಿದರು.
ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ‘ಸಿದ್ಧರಾಮೇಶ್ವರ ಅವರು ಕರ್ಮಯೋಗಿಯಾಗಿದ್ದರು. ಆದರ್ಶ ಪುರುಷರಾಗಿದ್ದ ಅವರು, ಹೆಣ್ಣಿಗೆ ಸಾಕ್ಷಾತ್ ಭಗವಂತನ ಸ್ಥಾನ ನೀಡಿದ್ದರು’ ಎಂದು ಸ್ಮರಿಸಿದರು.
ಬ್ಯಾಡಗಿ ಶಾಸಕ ಬಸವರಾಜ್ ಶಿವಣ್ಣನವರ ಭಾರತದ ಸುದೀರ್ಘವಾದ ಇತಿಹಾಸದಲ್ಲಿ 12ನೇ ಶತಮಾನ ಶೈಕ್ಷಣಿಕ, ಆರ್ಥಿಕ ಬದುಕಿಗೆ ವಿಶೇಷವಾದ ತಿರುವನ್ನು ಕೊಟ್ಟಿದೆ.
ಹೆಣ್ಣು ಮಕ್ಕಳು, ಶೂದ್ರ ಸಮುದಾಯದವರು ವಿದ್ಯಾಭ್ಯಾಸ ಮಾಡುವ ಪರಿಸ್ಥಿತಿ ಇರಲಿಲ್ಲ. ವಿದ್ಯಾಭ್ಯಾಸ, ಅಕ್ಷರ ಜ್ಞಾನ ಕೆಲವರಿಗೆ ಮಾತ್ರ ಸೀಮಿತವಾಗಿದ್ದ ಸಂದರ್ಭದಲ್ಲಿಸಾಮಾಜಿಕ ಕ್ರಾಂತಿಯನ್ನು ಮಾಡಿ, ಸಮಾನತೆಯ ಸಂದೇಶ ಕೊಟ್ಟ ಶತಮಾನವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪೂಜ್ಯ ಶಿವರಾತ್ರಿ ದೇಶಿಕೇಂದ್ರ ಸ್ವಾಮಿ, ಇಮ್ಮಡಿ ಕರಿಬಸವ ದೇಶಿಕೇಂದ್ರ ಸ್ವಾಮಿ, ಚಂದ್ರಶೇಖರ ಸ್ವಾಮಿ, ಶಾಸಕರಾದ ಕೆ. ಷಡಕ್ಷರಿ, ಎಚ್.ಡಿ.ತಮ್ಮಯ್ಯ, ಎಚ್.ಕೆ. ಸುರೇಶ್, ಮಾಜಿ ಶಾಸಕ ಅಶೋಕ್ ಖೇಣಿ, ಡಿ.ಬಿ. ಗಂಗಪ್ಪ, ನಿವೃತ್ತ ಅಧಿಕಾರಿ ಸಿದ್ದರಾಮಪ್ಪ ಭಾಗವಹಿಸಿದ್ದರು.