ಬಸವಣ್ಣನವರ ಫೋಟೋ ನಮ್ಮ ಮನೆಯ ಹೆಬ್ಬಾಗಿಲಿನಿಂದ ಇಳಿಸಿದ ಆ ದಿನ

ಎಚ್ ಶಿವಕುಮಾರ್
ಎಚ್ ಶಿವಕುಮಾರ್

ಪಂಚಪೀಠದ ಸ್ವಾಮಿಗಳು ಹೋದ ನಂತರ ಬಸವಣ್ಣನವರ ಫೋಟೋ ಎಂದಿನಂತೆ ನಮ್ಮ ಮನೆಯ ಹೆಬ್ಬಾಗಿಲಿನ ಶಿರವನ್ನು ಅಲಂಕರಿಸಿತು.

ಬೆಂಗಳೂರು

ಈಗ್ಗೆ ಐವತ್ತು ವರ್ಷಗಳ ಹಿಂದೆ ನಡೆದ ಘಟನೆ. ನಮ್ಮದು ಮಲೆನಾಡಿನ ಚಿಕ್ಕ ಊರು. ಅತ್ತ ಹಳ್ಳಿಯೂ ಅಲ್ಲದ ಇತ್ತ ಪಟ್ಟಣವೂ ಅಲ್ಲದ ಸ್ಥಳ.

ನಮ್ಮದು ಲಿಂಗಾಯತ ಕುಟುಂಬ. ನಮ್ಮಪ್ಪ ಸಣ್ಣ ವ್ಯಾಪಾರಸ್ತ. ಆತನದು ಸಂತ ಜೀವನ ಶೈಲಿ. ತ್ರಿಕಾಲ ಪೂಜೆ. ಪೂಜೆಯ ನಂತರವೇ ಪ್ರಸಾದ. ಸಾಧು ಸಂತರಲ್ಲಿ ಅಪಾರ ಗೌರವ. ಬಸವಣ್ಣನ ಆರಾಧಕ. ನನ್ನ ಬಾಲ ಭಾಷೆಯಲ್ಲಿ ನನಗೆ ಬಸವಣ್ಣನ ವಚನಗಳನ್ನು ಕಲಿಸಿದ ಮೊದಲ ಗುರು.

ನಮ್ಮೂರಿನ ಸುತ್ತ ಐದಾರು ಶೈವ ಮಠಗಳು. ಆ ಮಠದ ಸ್ವಾಮಿಗಳಿಗೆ ನಮ್ಮ ಮನೆಯಲ್ಲಿ ಸದಾ ಸ್ವಾಗತ. ಹಾಗಾಗಿ ಸ್ವಾಮಿಗಳು ಆಗಮಿಸುವುದು ನಿರ್ಗಮಿಸುವುದು ನಮ್ಮ ಮನೆಯ ಮಟ್ಟಿಗೆ ವಿಶೇಷವೇನೂ ಆಗಿರಲಿಲ್ಲ. ನನ್ನ ಅವ್ವ ಅನಕ್ಷರಸ್ತಳು. ಆಕೆಯ ವ್ಯಕ್ತಿತ್ವ ಪಿ ಲಂಕೇಶರ ಪ್ರಸಿದ್ದ ಕವನ “ಅವ್ವ”ದಲ್ಲಿ ಬರುವ ಲಂಕೇಶರ ಅವ್ವನ ವ್ಯಕ್ತಿ ಚಿತ್ರಣವನ್ನೇ ಬಹುವಾಗಿ ಹೋಲುತ್ತಿತ್ತು. ನಮ್ಮ ಅವ್ವ ಗೊಣಗುತ್ತಲೇ ಆಗಮಿಸಿದ ಸ್ವಾಮಿಗಳ ಪೂಜೆಗೆ ಸೇವೆ ಸಲ್ಲಿಸುತ್ತ ಪ್ರಸಾದಕ್ಕೆ ಅಣಿ ಮಾಡುತ್ತಿದ್ದಳು.

ನಮ್ಮ ಮನೆಗೆ ಸ್ವಾಮಿಗಳು ಬರುತ್ತಾರೆ ಎಂದರೆ ಚಿಕ್ಕ ಹುಡುಗರಾದ ನಮಗೆ ಖುಷಿ. ಏಕೆಂದರೆ ಅವತ್ತು ಏನಾದರೂ ಸಿಹಿ ಊಟ ಸಿಗುತ್ತದೆ ಅಂತ.

ಹೀಗಿರಲು ಒಂದು ದಿನ ಎಲ್ಲಾ ಮಲೆನಾಡ ಮನೆಗಳಲ್ಲಿ ಇರುವಂತ ಮರದ ಹೆಬ್ಬಾಗಿಲಿನ ನಮ್ಮ ಮನೆಯ ಪ್ರವೇಶ ದ್ವಾರದ ಮೇಲೆ ಹಾಕಿದ್ದ ಬಸವಣ್ಣನ ಫೋಟೋವನ್ನು ನಮ್ಮ ಅಪ್ಪ ತೆಗೆದುಹಾಕಿದರು. ಬಸವಣ್ಣ ಕುದುರೆ ಹತ್ತಿ ಕಲ್ಯಾಣದಿಂದ ನಿರ್ಗಮಿಸಿ ಕೂಡಲಸಂಗಮಕ್ಕೆ ಅಂತಿಮ ಪಯಣ ಕೈಗೊಳ್ಳುವ ಚಿತ್ರಪಟವದು. ಆ ಫೋಟೋ ನಮ್ಮನೆಯಲ್ಲಿ ನಾನು ಹುಟ್ಟಿದಾಗಿಂದಲೂ ಬಾಗಿಲ ಮೇಲೆ ಇತ್ತು.

ಬಸವಣ್ಣನ ಫೋಟೋ ತೆಗೆದಿದ್ದರ ಬಗ್ಗೆ ಮನೆಯಲ್ಲಿ ಚರ್ಚೆಗಳಾದವು. ಆಗ ನಮ್ಮಪ್ಪ ಸಮಜಾಯಿಷಿ ನೀಡಿದರು. ಈಗ ಒಬ್ಬರು ಸ್ವಾಮಿಗಳು ನಮ್ಮ ಮನೆಗೆ ಆಗಮಿಸುತ್ತಿದ್ದಾರೆ. ಅವರು ಪಂಚಪೀಠ ಸಂಪ್ರದಾಯದವರು. ಅವರು ಬಸವಣ್ಣನನ್ನು ಒಪ್ಪುವುದಿಲ್ಲ. ಮತ್ತು ಬಸವಣ್ಣನ ಫೋಟೋ ಇರುವ ಬಾಗಿಲಿನ ಕೆಳಗೆ ಪ್ರವೇಶ ಮಾಡುವುದಿಲ್ಲ. ಆದ್ದರಿಂದ ಬಸವಣ್ಣನ ಫೋಟೋ ತೆಗೆದಿದ್ದೇನೆ ಅಂದರು. ಮನೆಯವರೆಲ್ಲರೂ ಸುಮ್ಮನಾದರು.

ಪಂಚಪೀಠದ ಸ್ವಾಮಿಗಳು ಆಗಮಿಸಿ ನಿರ್ಗಮಿಸಿದರು. ಅವರ ನಿರ್ಗಮನದ ನಂತರ ಎಂದಿನಂತೆ ಬಸವಣ್ಣನ ಫೋಟೋ ನಮ್ಮ ಮನೆಯ ಹೆಬ್ಬಾಗಿಲಿನ ಶಿರವನ್ನು ಅಲಂಕರಿಸಿತು.

ನನ್ನ ಚಿಕ್ಕ ವಯಸ್ಸಿನಲ್ಲಿ ನಡೆದ ಈ ಘಟನೆ ಮನಸ್ಸಿನಲ್ಲಿ ಅಚ್ಚಾಗಿ ನೆನಪಿನಲ್ಲಿ ಉಳಿದಿದೆ. ಬಸವಣ್ಣನ ಅಥವಾ ಬೇರೆ ಯಾವುದೊ ಫೋಟೋ ಕೆಳಗೆ ತಲೆ ಬಾಗಬಾರದು ಎಂದು ಹಠ ಸಾಧಿಸುವುದು ಅದೆಂತಾ ಶ್ರೇಷ್ಠತೆಯ ಕ್ಷುದ್ರ ವ್ಯಸನ! ಅದೆಂತಾ ಸಂತ ಚಿಂತನೆ?

ಎನಗೆ ನಾನೇ ಹಗೆ ನೋಡಯ್ಯಾ,
ಎನಗೆ ನಾನೇ ಕೆಳೆ ನೋಡಯ್ಯಾ.
ನಿಮ್ಮ ಸದ್ಭಕ್ತರೊಡನೆ ವಿರೋಧ ಮಾಡಿದಡೆ ಎನ್ನ ಕೊಲುವುದಾಗಿ,
ನಿಮ್ಮ ಪುರಾತನರಿಗಂಜಿ ಬೆಸಗೊಂಡಡೆ
ಎನ್ನ ಕಾಯ್ವುದಾಗಿ.
ಅನ್ಯ ಹಗೆಯೆಲ್ಲಿ? ಕೆಳೆಯೆಲ್ಲಿ?
ಬಾಗಿದ ತಲೆಯ ಮುಗಿದ ಕೈಯಾಗಿರಿಸು ಕೂಡಲಸಂಗಮದೇವಾ.
ಅಂದವನ ಮೇಲೆ ಹಗೆ ಸಾಧಿಸುವುದೇ?

ಹಾಗೆ ಹಗೆ ಸಾಧಿಸಿದವರ ಸಂಗ ಒತ್ತಟ್ಟಿಗಿರಲಿ. ಅವರು ಅವರೆಸಗಿದ ಅಪರಾಧಕ್ಕೆ ಕ್ಷಮೆಗೆ ಮಾತ್ರ ಅರ್ಹರು. ಶರಣರ ಸಂಗ ಸಹವಾಸಕ್ಕೆ ಸತ್ಪಾತ್ರಕ್ಕೆ ಸಲ್ಲರು.

ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನ ಸ್ವಾಭಿಮಾನದ ಜಯಂತಿ ಸರ್ವ ಸ್ವತಂತ್ರವಾಗಿ ಜರುಗಲಿ. ಮಹಾ ಮಾನವತಾವಾದಿ ಬಸವಣ್ಣನ ಸಂದೇಶಗಳು ವಿಶ್ವದೆಲ್ಲೆಡೆ ಪಸರಿಸಲಿ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/CMDnqQbFJjwCptS1HUXnEd

Share This Article
1 Comment
  • ಈಗ ಎಲ್ಲಾ ಬದಲಾಗಿದ್ದಾರೆ. ಪಂಚಪೀಠದವರು ಬಸವಣ್ಣನವರ ವಚನಗಳನ್ನು ಪ್ರವಚನಗಳಲ್ಲಿ ಉದಾಹರಿಸಿ ಹೇಳುತ್ತಾರೆ. ಆಗ ಜಾತಿಪದ್ದತಿ ಹೆಚ್ಚಿತ್ತು. ಬಸವಣ್ಣ ಬ್ರಾಹ್ಮಣರು ಅನ್ನುವ ಮತ್ತು ಅಂತರಜಾತಿ ವಿವಾಹ ಮಾಡಿಸಿದರು ಎಂಬ ಭಾವನೆ ಇದ್ದಿರಬಹುದು. ಈಗ ಯಾರೂ ಜಾತಿಯ ಬಗ್ಗೆ ಚಿಂತಿಸುವುದಿಲ್ಲ.

Leave a Reply

Your email address will not be published. Required fields are marked *

ಲೇಖಕರು ಬೆಂಗಳೂರಿನಲ್ಲಿರುವ ಹಿರಿಯ ಲೆಕ್ಕ ಪರಿಶೋಧಕರು