ಬಸವಣ್ಣನವರ ಕಾಲದ ಬಗ್ಗೆ ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯವಿದೆ. ಆದರೆ ಎರಡು ಶಾಸನಗಳ ಆಧಾರದಿಂದ ಅವರ ಬದುಕಿನ ಕೊನೆಯ ವರ್ಷವನ್ನು ನಿರ್ಧರಿಸಬಹುದು.
ಆಂಧ್ರದ ಆರಾಧ್ಯರ ಗುರು ಪಂಡಿತಾರಾಧ್ಯ ಬಸವಣ್ಣನವರ ಅನುಯಾಯಿಯಾಗಿದ್ದರು. ಬಸವಣ್ಣನವರು ಲಿಂಗೈಕ್ಯರಾದ ಕೆಲವೇ ದಿನಗಳಲ್ಲಿ ಅವರು ಕೂಡ ನಿಧನ ಹೊಂದಿದರು.
1185 ಇಸವಿಯ ತೆಲುಗಿನ ಶಾಸನವೊಂದರಲ್ಲಿ ಪಂಡಿತಾರಾಧ್ಯರಿಗೆ ದಾನ ಪ್ರಾಪ್ತವಾದ ಉಲ್ಲೇಖವಿದೆ. ಅಂದರೆ ಅಲ್ಲಿಯವೆರೆಗೆ ಅವರು (ಬಹುಷಃ ಬಸವಣ್ಣ ಕೂಡ) ಬದುಕಿದ್ದರು ಎನ್ನಬಹುದು.
ಬಿಜ್ಜಳನನ್ನು ಕೊಂದ ಶರಣ ಮೊಲ್ಲೆ ಬೊಮ್ಮಯ್ಯರ ಬಗ್ಗೆ 1154 ಮತ್ತು 1186ರ ಎರಡು ಶಾಸನಗಳಿವೆ. ಬೊಮ್ಮಯ್ಯರಿಗೆ ಪ್ರಾಪ್ತವಾದ ಎರಡು ದಾನಗಳನ್ನು ಇವು ದಾಖಲಿಸುತ್ತವೆ.
ಇದರಿಂದ 1186ರವರೆಗೆ ಮೊಲ್ಲೆ ಬೊಮ್ಮಯ್ಯರು ಬದುಕಿದ್ದರೆಂದು ಹೇಳಬಹುದು. ಬಸವಣ್ಣ, ಬಿಜ್ಜಳ, ಮೊಲ್ಲೆ ಬೊಮ್ಮಯ್ಯರ ಅಂತ್ಯ ಕೆಲವೇ ದಿನಗಳ ಅಂತರದಲ್ಲಿ ಸಂಭವಿಸಿತು.
ಒಟ್ಟಾರೆ, ಬಸವಣ್ಣನವರು ಕನಿಷ್ಠ 1186ರ ತನಕ ಬದುಕ್ಕಿದ್ದರೆಂದು ಈ ಆಧಾರಗಳಿಂದ ಪರಿಗಣಿಸಬಹುದು.
ಕಲ್ಯಾಣ ಕ್ರಾಂತಿಯ ನಂತರ ಶರಣರನ್ನು ಉಳವಿಯವರೆಗೆ ಬೆನ್ನೆಟ್ಟಿದ ಬಿಜ್ಜಳನ ತಂಗಿಯ ಮಗ ವೀರ ಬಿಜ್ಜಳನ ಬಗ್ಗೆ ಸಿಗುವ ಕೊನೆಯ ಶಾಸನವು ಕೂಡ 1186ರಲ್ಲಿ ನಿರ್ಮಿತವಾದುದ್ದು.
(‘ಶಾಸನಗಳಿಂದ ಬಸವಣ್ಣನ ಬಗ್ಗೆ ಇನ್ನಷ್ಟು ವಿಷಯಗಳು’ ಲೇಖನದಿಂದ ಆಯ್ದ ಮತ್ತು ಸಂಕ್ಷಿಪ್ತಗೊಳಿಸಿರುವ ಭಾಗ – ಮಾರ್ಗ ೪)