ಕವಿಗಳಲ್ಲಿ ಬಸವಣ್ಣನವರ ಕಾಲ ಮತ್ತು ಸ್ಥಳಕ್ಕೆ ಹತ್ತಿರವಾಗಿದ್ದವನು ಹರಿಹರ. ಅವನ ಬಸವರಾಜದೇವರ ರಗಳೆಯಲ್ಲಿ ಪವಾಡಗಳಿಗಿಂತ ಚರಿತ್ರೆಯ ಅಂಶಗಳು ಅಧಿಕವಾಗಿವೆ.
ಅವನ ಪ್ರಕಾರ ಬಸವಣ್ಣನವರು ಹುಟ್ಟಿದಾಗ ಸಮಾಜ ‘ಪದಾರ್ಥ’ಮಯವಾಗಿತ್ತು. ಅದನ್ನು ‘ಪ್ರಸಾದ’ಮಯಗೊಳಿಸುವುದು ಬಸವಣ್ಣನವರ ಹುಟ್ಟಿನ ಉದ್ದೇಶ.
ಪದಾರ್ಥವೆಂದರೆ ಸ್ಥಗಿತ ಅಥವಾ ಸ್ಥಾವರ. ಪ್ರಸಾದವೆಂದರೆ ಚಲನಶೀಲ ಅಥವಾ ಜಂಗಮ. ಈ ಬದಲಾವಣೆ ತರಲು ಬಸವಣ್ಣ ಎರಡು ಮಹಾ ಸಂಘರ್ಷಗಳಿಗೆ ಇಳಿಯಬೇಕಾಯಿತು:
ಜಾತಿ ಶ್ರೇಷ್ಠತೆ ಸಾರುವ ವರ್ಣಭೇದವನ್ನು ಕೊನೆಗೊಳಿಸಿ ಅಂತ್ಯಜರಿಗೆ ಸಮಾಜದಲ್ಲಿ ಸಮಾನ ಸ್ಥಾನ ಸ್ಥಾಪಿಸಲು ಬಿಜ್ಜಳ ಮತ್ತು ವೈದಿಕರೊಡನೆ ನಡೆಸಿದ ಮೊದಲನೇ ಹೋರಾಟ.
ಪ್ರಜೆಗಳ ಶೋಷಣೆಯನ್ನು ನಿಲ್ಲಿಸಿ ರಾಜ್ಯದ ಸಂಪತ್ತಿನ ಮೇಲೆ ಅವರ ಅಧಿಕಾರವನ್ನು ಸ್ಥಾಪಿಸಲು ಬಿಜ್ಜಳನ ವಿರುದ್ಧ ನಡೆಸಿದ ಇನ್ನೊಂದು ಹೋರಾಟ.
ಬಸವರಾಜದೇವರ ರಗಳೆಯಲ್ಲಿ ಬರುವ ಸಂಬೋಳಿ ನಾಗಿದೇವನ ಪ್ರಸಂಗ, ಕೇತಕಿ ಪ್ರಸಂಗ, ಉಳ್ಳಿ ಪ್ರಸಂಗ ಮುಂತಾದ ಅನೇಕ ಘಟನೆಗಳಲ್ಲಿ ಈ ಎರಡು ಉದ್ದೇಶಗಳು ಎದ್ದು ಕಾಣುತ್ತವೆ.
(‘ಬಸವಣ್ಣನವರ ಜನನದ ಉದ್ದೇಶ’ ಲೇಖನದಿಂದ ಆಯ್ದ ಮತ್ತು ಸಂಕ್ಷಿಪ್ತಗೊಳಿಸಿರುವ ಭಾಗ – ಮಾರ್ಗ 1)