ಕಲಬುರಗಿ
ಬಸವೇಶ್ವರ ದರ್ಶನ ಮಹಾ ನಾಟಕ ನಿರ್ಮಾಣದ ಹಿನ್ನೆಲೆಯಲ್ಲಿ ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಅ.26ರಂದು ಸಭಾಂಗಣದಲ್ಲಿ ಪೂಜ್ಯರ, ಪರಿಣಿತರ, ಶರಣ, ಶರಣೆಯರ ಸಭೆ ಜರುಗಿತು.
ಸುಮಾರು ಮೂರು ಗಂಟೆಗಳ ಕಾಲ ನಡೆದ ಸಮಾಲೋಚನಾ ಸಭೆಯಲ್ಲಿ ನಾಟಕದ ಬಗ್ಗೆ ಸವಿಸ್ತಾರವಾಗಿ ಚರ್ಚೆ ಮಾಡಿ, ಹಿಂದಿ, ಮರಾಠಿ, ಕನ್ನಡ ಈ ಮೂರು ಭಾಷೆಗಳಲ್ಲಿ ನಾಟಕ ಮಾಡಲು ತೀರ್ಮಾನಿಸಲಾಯಿತು.
ಬೀದರ್ ನ ಶ್ರೀಕಾಂತಸ್ವಾಮಿ ಪ್ರಾಸ್ತಾವಿಕ ಮಾತನಾಡಿ, ನಾಟಕದ ಬರಹಗಾರರು ವೈಚಾರಿಕತೆಗೆ ಮಹತ್ವ ಕೊಟ್ಟಿದ್ದಾರೆ. ಅದರಲ್ಲಿ ಬಸವಣ್ಣನವರ ಬಾಲ್ಯದಲ್ಲಿ ವೈಚಾರಿಕತೆ ಭಾವನೆ, ಮುಂದೆ ವಿಧ್ಯಾಭ್ಯಾಸ, ಮದುವೆ, ಕಲ್ಯಾಣದಲ್ಲಿ ಪ್ರಧಾನಮಂತ್ರಿ ಸ್ಥಾನ ಗ್ರಹಣ, ಮಹಾಮನೆ ಅನುಭವ ಮಂಟಪ ಸ್ಥಾಪನೆ, ಕೆಳವರ್ಗದ ಕೇರಿಗಳಲ್ಲಿ ಬಸವಣ್ಣನವರ ಪ್ರವೇಶ ಮಾಡಿಸಿ ಅನುಭವ ಮಂಟಪಕ್ಕೆ ಆಹ್ವಾನ, ವಚನ ಸಾಹಿತ್ಯ ರಚನೆ, ಅನುಭವ ಮಂಟಪದಲ್ಲಿ ಅಕ್ಕಮಹಾದೇವಿಯ ಮತ್ತು ಅಲ್ಲಮಪ್ರಭು ಸಂವಾದ, ಬಿಜ್ಜಳ ರಾಜನ ಆಸ್ಥಾನದಲ್ಲಿ ಮಂತ್ರಿಮಂಡಲ ಚರ್ಚೆ, ಹರಳಯ್ಯ ಮಧುವರಸರ ಆನೆಯ ಕಾಲಿಗೆ ಕಟ್ಟಿ ಎಳೆ ಹೊಟೆ ಶಿಕ್ಷೆ, ಶರಣರ ವಚನಗಳ ರಕ್ಷಣೆ ಮತ್ತು ವೈಧಿಕರಿಂದ ವಚನ ಸಾಹಿತ್ಯ ಸುಡುವದು. ವಿಶ್ವದಲ್ಲಿ ಪ್ರಥಮ ಬಾರಿ ಪ್ರಜಾಪ್ರಭುತ್ವ ಮಾದರಿ ಸ್ಥಾಪನೆ, ಮಾನವ ಹಕ್ಕು ಘನತೆ ಗೌರವ ಮಂಡನೆ, ಜಾತಿ ಲಿಂಗ ವರ್ಣ ವರ್ಗ ರಹಿತ ಸಮಾಜ ನಿರ್ಮಾಣ ಚರ್ಚೆ ಹೀಗೆ ಹಲವಾರು ಸನ್ನಿವೇಶಗಳು ನಾಟಕದಲ್ಲಿ ಇರುತ್ತವೆ ಎಂದು ಸಭೆಗೆ ತಿಳಿಸಿದರು.
ಬಾಲಿವುಡ್ ಖ್ಯಾತಿಯ ನಿರ್ದೇಶಕ, ಲೇಖಕ, ಗೀತರಚನೆಕಾರ ಜತಿನ್ ಪಟೇಲ್ ಅವರು ಬಸವೇಶ್ವರ ನಾಟಕ ಕುರಿತು ಮಾತಾಡುತ್ತ, ಬಸವೇಶ್ವರ ಇತಿಹಾಸ, ಸಾಮಾಜಿಕ ಹೋರಾಟ ಬಗ್ಗೆ ತಿಳಿದುಕೊಂಡು ದಿಗ್ಭ್ರಮೆಗೊಂಡಿದ್ದೆ. ತಾವು ಮಾಡಿದ್ದ ಗೌತಮ ಬುದ್ಧ ನಾಟಕ, ಅಂಬೇಡ್ಕರ್ ಬಗ್ಗೆ ಮಾಡಿದ ಕ್ರಾಂತಿ ಸೂರ್ಯ ನಾಟಕ, ಅವರ ಪತ್ನಿ ಬಗ್ಗೆ ಮಾಡಿದ್ದ ನಾಟಕಗಿಂತ ಬಸವೇಶ್ವರ ದರ್ಶನ ಹೋರಾಟ ಪರಿಪೂರ್ಣ ಕ್ರಾಂತಿ ಚಳುವಳಿ. ಇದು ವಿಶ್ವದಲ್ಲಿ ಶ್ರೇಷ್ಠ, ಇದನ್ನು ಮೂರು ಗಂಟೆಯ ನಾಟಕದಲ್ಲಿ ಹಿಡಿದಿಡಲು ಸುಲಭ ಕಾರ್ಯ ಅಲ್ಲ ಎಂದರು.
ಆದರೂ ಭಾರತ ದೇಶದಲ್ಲಿ ಪ್ರದರ್ಶಿಸಿದ್ದ ಎಲ್ಲಾ ನಾಟಕಕ್ಕಿಂತ ವಿಭಿನ್ನ ಆಗಿರುತ್ತದೆ, ನಾಟಕ ಪ್ರದರ್ಶನ ನಂತರ ದೇಶದಲ್ಲಿ ಹೊಸ ಮಾದರಿಯ ಚರ್ಚೆ ಪ್ರಾರಂಭ ಆಗಿ ಬದಲಾವಣೆ ಗಾಳಿ ಬೀಸುತ್ತದೆ. ಭಾರತ ದೇಶ ಸರ್ವಾಂಗೀಣ ಅಭಿವೃದ್ಧಿ ಆಗುತ್ತದೆ. ವಿಶ್ವದಲ್ಲಿ ಭಾರತ ದೇಶದ ಹಿರಿಮೆ ಗರಿಮೆಗಳನ್ನು ಹೆಚ್ಚು ಆಗುತ್ತದೆ, ದೇಶ ವಿಶ್ವಗುರು ಆಗುವ ಸಂಪೂರ್ಣ ಸಾಧ್ಯತೆ ಇದೆ ಎಂದು ಹೇಳಿದರು.
ಪ್ರೊ. ಆರ್.ಕೆ. ಹುಡಗಿ ಅವರು ಮಾತನಾಡಿ, ಕರ್ನಾಟಕೇತರ ರಾಜ್ಯದಲ್ಲಿ ಅಂದರೆ ಉತ್ತರ ಭಾರತದ ಹಿಂದಿ ರಾಜ್ಯಗಳಲ್ಲಿ ಇಂತಹ ವೈಚಾರಿಕ ನಾಟಕ ಮಾಡುವಾಗ ಎಚ್ಚರ ವಹಿಸಬೇಕು ಎಂದು ಹೇಳಿದರು.
ಸಾಮಾಜಿಕ ಕಾರ್ಯಕರ್ತೆ ಜನವಾದಿ ಮಹಿಳಾ ಸಂಘಟನೆಯ ನಾಯಕಿ ನೀಲಾ ಕೆ. ಮಾತನಾಡಿ, ನಾಟಕದಲ್ಲಿ ಸಂಪೂರ್ಣ ವೈಚಾರಿಕತೆ ಇರಬೇಕು, ವಾಸ್ತವ ಘಟನೆಗಳನ್ನು ಸಮಾಜಕ್ಕೆ ಹೆದರಿ ಮುಚ್ಚಿಡಬಾರದು ಎಂದು ಸಲಹೆ ಕೊಟ್ಟರು.
ಮರಾಠ ಸಮಾಜದ ಮಾಣಿಕ ಪವಾರ ಮಾತನಾಡಿ, ಛತ್ರಪತಿ ಶಿವಾಜಿ ಮಹಾರಾಜರ ನಾಟಕ ” ಜಾಣತಾ ರಾಜಾ” ಪ್ರದರ್ಶನ ಯಶಸ್ವಿ ಬಗ್ಗೆ ವಿವರಿಸಿದರು.
ಶಿವಾಜಿ ಮಹಾರಾಜರ ನಾಟಕ ಹೆಚ್ಚಾಗಿ ಒಂದೇ ಸಮಾಜಕ್ಕೆ ಅಂಟಿಕೊಂಡಿತ್ತು, ಆದರೆ ಬಸವೇಶ್ವರ ನಾಟಕ ಸರ್ವ ಸಮಾಜಕ್ಕೆ ಸಂಬಂಧಪಟ್ಟಿದ್ದರಿಂದ ಸಾವಿರಾರು ಪ್ರದರ್ಶನ ನಡೆಯುತ್ತವೆ ಎಂದು ಹೇಳಿದರು.
ಇಂದಿನ ದಿನಗಳಲ್ಲಿ ಬಸವ ತತ್ವ ಸಿದ್ದಾಂತ, ಜಾತಿ ಧರ್ಮ ಭಾಷೆ ಮೀರಿ ಪ್ರಭಾವ ಬೀರಿದೆ, ಆದ್ದರಿಂದ ನಾಟಕ ಪ್ರದರ್ಶನ ಯಾರ ವಿರೋಧ ಇಲ್ಲದೆ ಎಲ್ಲರಿಗೂ ಮೆಚ್ಚುಗೆ ಆಗಿ ಯಶಸ್ವಿ ಆಗುತ್ತದೆ ಎಂದರು.
ಶರಣ ದಿವಾಕರ ಅವರು ಮಾತನಾಡಿ, ಬಸವಾದಿ ಶರಣರ ಬಗ್ಗೆ ಸಂಪೂರ್ಣ ಭಾರತ ದೇಶದ ತುಂಬ ಹಬ್ಬಿದೆ. ಉತ್ತರ ಭಾರತದ ಹಲವಾರು ರಾಜ್ಯ ಹಮ್ಮಿಕೊಂಡಿದ್ದ ಬಸವಾದಿ ಶರಣರ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೇನೆ. ಬಿಹಾರ, ಉತ್ತರ ಪ್ರದೇಶ, ಮಧ್ಯಪ್ರದೇಶ, ಗುಜರಾತ, ಓಡಿಸ್ಸಾ ರಾಜ್ಯಗಳಲ್ಲಿ ಹಲವಾರು ಬಸವ ಪರ ಸಂಘಟನೆಗಳು ಹುಟ್ಟಿಕೊಂಡಿವೆ. ಆದ್ದರಿಂದ ಬಸವೇಶ್ವರ ದರ್ಶನ ನಾಟಕ ಅಲ್ಲಿಯೂ ಪ್ರದರ್ಶನ ಮಾಡಲು ತೊಂದರೆ ಆಗದು ಎಂದು ತಮ್ಮ ಅನುಭವ ಹಂಚಿಕೊಂಡರು.
ಇಂದು ಬಸವ ತತ್ವ ಸಿದ್ದಾಂತ ಕೇವಲ ಲಿಂಗಾಯತ ಅಲ್ಲದೆ ಭಾರತ ದೇಶದ 75% ಆಗಿರುವ ಬಹುಜನ ಸಮಾಜಕ್ಕೆ ಅತಿ ಅವಶ್ಯ ಆಗಿದೆ. ಆದ್ದರಿಂದ ಬಹುಜನ ಸಮಾಜ ಬಸವೇಶ್ವರ ದರ್ಶನ ನಾಟಕ ಜೊತೆ ಇರುತ್ತಾರೆ. ಸಂಪೂರ್ಣ ಬಹುಜನ ಸಮಾಜ ಈ ನಾಟಕ ನೋಡಲು ಉತ್ಸುಕ ಆಗಿದೆ ಎಂದು ಹೇಳಿದರು.
ರವಿ ಸಜ್ಜನ ಮಾತನಾಡಿ, ನಾಟಕದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ನಾಟಕಕ್ಕೆ ದೇಶದಲ್ಲಿ ಸಂಪೂರ್ಣ ಸಹಕಾರ ಸಿಗುತ್ತದೆ ಎಂದು ತಿಳಿಸಿದರು.
ಪೂಜ್ಯ ಡಾ. ಬಸವಲಿಂಗ ಪಟ್ಟದ್ದೇವರು ಮಾತನಾಡಿ, 35-40 ವರ್ಷಗಳ ಹಿಂದೆ ಮಹಾರಾಷ್ಟ್ರದಲ್ಲಿ ಬಸವತತ್ವ ಸಿದ್ದಾಂತ ಪ್ರಚಾರ ಮಾಡುತ್ತಿದ್ದಾಗ ಪುರೋಹಿತಶಾಹಿಗಳು ಕೊಟ್ಟ ಕಿರುಕುಳ ವಿರೋಧ, ಎದುರಿಸಿದ ಸಂಕಟದ ಬಗ್ಗೆ ತಮ್ಮ ಅನುಭವ ಹೇಳಿದರು. ಈಗ ಬಸವಾದಿ ಶರಣರ ಬಗ್ಗೆ ಜನರಲ್ಲಿ ಒಳ್ಳೆಯ ಪ್ರಭಾವ ಬೀರಿದೆ. ಎಲ್ಲ ಸಮಾಜದ ವರ್ಗದ ಜನರು ಬಸವಾದಿ ಶರಣರ ಬಗ್ಗೆ ಅಭಿಮಾನ ವ್ಯಕ್ತ ಪಡಿಸುತ್ತಿದ್ದಾರೆ, ಆದ್ದರಿಂದ ಈಗ ಬಸವೇಶ್ವರ ದರ್ಶನ ನಾಟಕ ಸಮಾಜದ ಮೇಲೆ ಒಳ್ಳೆಯ ಪ್ರಭಾವ ಬೀರಿ ಯಶಸ್ಸು ಆಗುವುದರಲ್ಲಿ ಸಂಶಯವಿಲ್ಲ.
ನಾಟಕವು ಸಂಪೂರ್ಣ ವೈಚಾರಿಕತೆಯಿಂದ ಕೂಡಿರುತ್ತದೆ. ಶ್ರೀಕಾಂತ ಸ್ವಾಮಿ ಮೇಲೆ ವಿಶ್ವಾಸ ಇದೆ ಅವರು ವೈಚಾರಿಕತೆ ಬಗ್ಗೆ ಕಾಳಜಿ ವಹಿಸುತ್ತಾರೆ. ವೈಚಾರಿಕತೆ ವಿರೋಧವಾಗಿ ಯಾವುದೇ ಶಕ್ತಿ ಬಂದರೂ ನಾವು ಎದುರಿಸಲು ಸಿದ್ಧ ಇದ್ದೇವೆ ಅಂದರು. ನಾವೆಲ್ಲರೂ ನಾಟಕಕ್ಕೆ ಸಂಪೂರ್ಣ ಸಹಕಾರ ನೀಡಬೇಕು ಎಂದು ಆಗ್ರಹಿಸಿದರು.
ಗದುಗಿನ ಡಾ. ತೋಂಟದಾರ್ಯ ಸಿದ್ದರಾಮ ಮಹಾಸ್ವಾಮಿ ಮಾತನಾಡಿ, ಬಸವಾದಿ ಶರಣರ ಬಗ್ಗೆ ನಾಟಕ ಅತಿ ಅವಶ್ಯ ಆಗಿದೆ. ನಾನು ಶಿವಾಜಿ ಮಹಾರಾಜರ ಜಾಣತಾ ರಾಜ ಮತ್ತು ಅಂಬೇಡ್ಕರ್ ಕ್ರಾಂತಿ ಸೂರ್ಯ ನಾಟಕ ನೋಡಿದ್ದೇನೆ. ಆ ನಾಟಕಗಳು ನನ್ನ ಮೇಲೆ ಪ್ರಭಾವ ಬೀರಿದ್ದವು. ನಾವು ಕೂಡ ಬಸವಣ್ಣನವರ ನಾಟಕ ಮಾಡಬೇಕು ಎನ್ನುವುದು ನನ್ನ ಮನದಲ್ಲಿ ಇತ್ತು. ಅದು ಕಾರ್ಯಗತ ಆಗಲು ಎಲ್ಲರೂ ಶ್ರಮಿಸಬೇಕು. ಯಶಸ್ವಿ ಆಗುವುದರಲ್ಲಿ ಸಂಶಯವಿಲ್ಲ. ನಮ್ಮ ಸಮಾಜ ಶ್ರೀಮಂತ ಸಮಾಜ, ನಾಟಕಕ್ಕೆ ಎಲ್ಲಾ ವರ್ಗದಿಂದ ಎಲ್ಲಾ ರೀತಿಯ ಬೆಂಬಲ ಸಿಗುತ್ತದೆ ಎಂದು ಹೇಳಿದರು.
ಈ ನಾಟಕ ಸಂಪೂರ್ಣ ಬಸವಾದಿ ಶರಣರ ವೈಚಾರಿಕತೆ ಇರುತ್ತದೆ. ಇದರ ಬಗ್ಗೆ ಯಾವುದೇ ಹಿಂಜರಿಕೆ ಇಲ್ಲ. ನಾಟಕದಲ್ಲಿ ಯಾವುದೇ ವಿವಾದ ಇಲ್ಲದ ಹಾಗೆ ನಾವು ನೋಡಿಕೊಳ್ಳುತ್ತೇವೆ ಎಂದು ಹೇಳಿದರು.
ಈ ನಾಟಕ ರಾಷ್ಟ್ರಾದ್ಯಂತ ಯಶಸ್ವಿ ಆಗಿ ಪ್ರದರ್ಶನ ಆಗುತ್ತವೆ ಎಂಬ ನಂಬಿಕೆಯಿದೆ ಎಂಬ ಆಶಯ ವ್ಯಕ್ತಪಡಿಸಿದರು.
ನೇತೃತ್ವ ವಹಿಸಿದ್ದ ಪೂಜ್ಯ ಡಾ. ಸಾರಂಗದಮಠದ ಶ್ರೀಶೈಲ ಸುಲಫಲ ಪೂಜ್ಯರು ಮಾತಾನಾಡಿ, ಇದಕ್ಕೆ ನಮ್ಮ ಸಂಪೂರ್ಣ ಸಹಕಾರ ಇರುತ್ತದೆ. ನಾವೆಲ್ಲರೂ ನಾಟಕದ ಯಶಸ್ವಿಗಾಗಿ ದುಡಿಯಬೇಕು. ನಾಟಕ ಪ್ರದರ್ಶನ ಆಗಿ ದೇಶದಲ್ಲಿ ಸಾಮಾಜಿಕ ಪರಿವರ್ತನೆ ಆಗುತ್ತದೆ ಎಂದು ಪ್ರತಿಪಾದಿಸಿದರು.
ರಾಜ್ಯದ ಲಿಂಗಾಯತ ಮಠಗಳ ಪೂಜ್ಯರು, ಬಸವ ತತ್ವ ಸಿದ್ದಾಂತ, ವಚನ ಸಾಹಿತ್ಯ ಪರಿಣಿತರ ಒಂಬತ್ತು ಜನರ ಸದಸ್ಯರು ಸಮಿತಿ ರಚಿಸಿ, ನಾಟಕದ ಸಾಹಿತ್ಯ ಪರಿಶೀಲಿಸಿ ಯಾವುದೇ ಭಿನ್ನಾಭಿಪ್ರಾಯ ಇಲ್ಲದ ಸಾಹಿತ್ಯ ರಚನೆ ಬಗ್ಗೆ ನಿಗವಹಿಸುವ ಬಗ್ಗೆ ನಿರ್ಧರಿಸಲಾಯಿತು.
ಕಾರ್ಯಕ್ರಮದಲ್ಲಿ ರವೀಂದ್ರ ಶಾಬಾದಿ, ಆರ್. ಜಿ. ಶೆಟಗಾರ, ಜಿಪಂ ಮಾಜಿ ಅಧ್ಯಕ್ಷ ದೀಪಕನಾಗ ಪಟ್ಟಣಶೆಟ್ಟಿ, ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಪ್ರಭುಲಿಂಗ ಮಹಾಗಾಂವಕರ, ಹನುಮಂತರಾವ ಕುಸನೂರ, ಶರಣ ಸಾಹಿತಿ ಡಾ. ಶಿವರಂಜನ ಸತ್ಯಂಪೇಟೆ, ಶರಣಬಸವ ಕಲ್ಲಾ, ಧನರಾಜ ತಾಂದಳೆ ಅರುಣಾ, ದೀಪಕನಾಗ ಪುಣ್ಣಸೆಟ್ಟಿ, ನಾಗೇಶ ನಿಂಬರಗಿ, ಗಿರಿಮಲ್ಲಪ್ಪ ವಳಸಂಗ ಶಹಾಬಾದ, ಮಹಾಂತೇಶ ಕಲ್ಬುರ್ಗಿ, ರೇವಣಪ್ಪ ಮೂಲಗೆ, ಹಣಮಂತರಾವ ಪಾಟೀಲ, ಶಿವಶರಣ ದೇಗಾಂವ, ರೇಣುಕಾ ಸಿಂಗೆ ಮುಂತಾದ ಮುಖಂಡರು ಭಾಗವಹಿಸಿದ್ದರು.
ಒಳ್ಳೆಯ ಮತ್ತು ಅಗತ್ಯವಾಗಿ ಆಗಲೇಬೇಕಾದ ಕೆಲಸದ ಪ್ರಾರಂಭ. ಶುಭಕೋರುತ್ತೇನೆ.