ಸವರ್ಣಿಯರಿಂದ ದೂರ ಕುಳಿತು ವಿದ್ಯೆ ಕಲಿತ ಬೆಲ್ದಾಳ ಸಿದ್ದರಾಮ ಶರಣರು

ಒಬ್ಬ ದಲಿತ ಯುವಕ ಉನ್ನತ ಸಾಧನೆ ಮಾಡಿ ಪ್ರಸಿದ್ಧ ‘ನಿಜ ಶರಣ’ರಾಗಿದ್ದು ಬಸವ ಪರಂಪರೆಯ ಕುಗ್ಗದ ಪ್ರಭಾವಕ್ಕೆ ಸಾಕ್ಷಿ

ಬೀದರ್

10 ವರ್ಷದ ನಂತರ ಅಖಿಲ ಭಾರತ ಶರಣ‌ ಸಾಹಿತ್ಯ ಸಮ್ಮೇಳನ ಬೆಲ್ದಾಳ ಸಿದ್ದರಾಮ ಶರಣರ ಅಧ್ಯಕ್ಷತೆಯಲ್ಲಿ ಚಿತ್ರದುರ್ಗದಲ್ಲಿ ನಡೆಯುತ್ತಿದೆ.

21ನೇ ಶತಮಾನದ ‘ನಿಜ ಶರಣರು’ ಎಂದು ಖ್ಯಾತಿ ಪಡೆದ ಬೆಲ್ದಾಳ ಸಿದ್ದರಾಮ ಶರಣರಲ್ಲಿ 12ನೇ ಶತಮಾನದ ಶರಣರ ಸಂಪೂರ್ಣ ಜ್ಞಾನ ಕಾಣಬಹುದು. ಇವರ ಬಗ್ಗೆ ಎಷ್ಟು ಬರೆದರೂ ಕೂಡ ಕಡಿಮೆ ಅನ್ನಿಸಬಹುದು.

ಅಸ್ಪ್ರೃಶ್ಯತೆಯ ನೋವು

1948ರಲ್ಲಿ ಬೀದರ ಜಿಲ್ಲೆಯ ಔರಾದ ತಾಲ್ಲೂಕಿನ ತೆಲಂಗಾಣ ಗಡಿ ಭಾಗದ ಕುಗ್ರಾಮ ಬೆಲ್ದಾಳದಲ್ಲಿ ಶಿವಭಕ್ತರಾದ ದಲಿತ ಕುಟುಂಬದ ಶ್ರೀ ಲಾಲಪ್ಪ ಮತ್ತು ಶ್ರೀಮತಿ ಲಕ್ಷ್ಮಿದೇವಿ ಉದರದಲ್ಲಿ ಹುಟ್ಟಿದ್ದರು.

ಇವರು ಹುಟ್ಟಿದ್ದಾಗ ಗ್ರಾಮದಲ್ಲಿ ಶಾಲೆ ಇದ್ದಿಲ್ಲ, ಗ್ರಾಮದ ಒಬ್ಬ ಶಿಕ್ಷಿತ ಅಯ್ಯನವರು ಹುಡುಗರಿಗೆ ಅಕ್ಷರ ಜ್ಞಾನ ಕೊಡುತ್ತಿದ್ದರಂತೆ, ಇವರ ತಂದೆ ಅಯ್ಯನವರಿಗೆ ಮಗುವಿಗೆ ಅಕ್ಷರ ಜ್ಞಾನ ಕೊಡಲು ವಿನಂತಿ ಮಾಡಿದ್ದರಂತೆ.

ಅದರಂತೆ ಮಗ ವಿಠಲ ದಿನಾಲು ಅಕ್ಷರ ಜ್ಞಾನಕ್ಕೆ ಹೋದಾಗ ಇವರನ್ನು ಸವರ್ಣಿಯರಿಂದ ದೂರ ಕೂಡಿಸಿ ವಿಧ್ಯಾಭ್ಯಾಸ ಕೊಡುತ್ತಿದ್ದರಂತೆ. ಚಿಕ್ಕ ಹುಡುಗ ಇದ್ದಾಗಲೇ ಇವರಿಗೆ ಅರಿವಾಗಿದ್ದು ಅಸ್ಪ್ರೃಶ್ಯತೆ, ಜಾತಿಯತೆ ಎನ್ನುವ ಪಿಡುಗು. ಇವರು ಮೂರನೇ ತರಗತಿ ನಂತರ ಶಾಲೆ ಬಿಟ್ಟು ಬಡ ತಂದೆ ತಾಯಿ ಜೊತೆಗೆ ಕೆಲಸದಲ್ಲಿ ಕೈಜೋಡಿಸಿದರು. ತಂದೆ ಜೊತೆ ಭಜನೆ ಮಾಡುವದು ಹಾಡುವದು ಕಲಿತರು. ಆವಾಗ ಇವರ ಮೇಲೆ ಆಧ್ಯಾತ್ಮಿಕ ಪ್ರಭಾವ ಆಗಿತ್ತು. ಇವರಿಗೆ ಎಳೆ ವಯಸ್ಸಿನಲ್ಲಿ ಮದುವೆ ಮಾಡಿದ್ದರು.

ಭಾಲ್ಕಿ ಶ್ರೀಗಳ ಆಶೀರ್ವಾದ

ಜೀವನೋಪಾಯಕ್ಕೆ ಬಟ್ಟೆ ಹೊಲಿಯುವ ಕಾಯಕ ಪ್ರಾರಂಭ ಮಾಡಿದ್ದ ಇವರು ರಾಮಾಯಣ, ಮಹಾಭಾರತ, ಶಿವಪುರಾಣ ಹೀಗೆ ಭಾರತೀಯ ಸಂಸ್ಕೃತಿ ಪುರಾಣ, ಕಥೆಗಳು ಓದುತ್ತಿದ್ದರು. ಒಬ್ಬ ವೀರಶೈವ ಲಿಂಗಾಯತ ಮಠಾಧಿಪತಿ ಇವರಿಗೆ ಲಿಂಗದೀಕ್ಷೆ ಕೊಟ್ಟರು. ಹಾಗೆಯ ವಚನ ಸಾಹಿತ್ಯ ತಿಳಿದುಕೊಂಡು ಅಭಿರುಚಿ ಬೆಳೆದು ಅಧ್ಯಯನ ಪ್ರಾರಂಭ ಮಾಡಿದರು.

ಒಂದು ಸಲ ಪೂಜ್ಯ ಡಾ. ಚೆನ್ನಬಸವ ಪಟ್ಟದೇವರು ಭಾಲ್ಕಿಯವರು ಔರಾದ ಪಟ್ಟಣಕ್ಕೆ ಆಗಮಿಸುತ್ತಾರೆ ಎಂದು ಸುದ್ದಿ ತಿಳಿದು ಶರಣರು ಔರಾದ ಪಟ್ಟಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಯಾರೋ ಒಬ್ಬರು ಪಟ್ಟದೇವರಿಗೆ ಬೆಲ್ದಾಳ ಗ್ರಾಮದ ದಲಿತ ಯುವಕ ಲಿಂಗದೀಕ್ಷೆ ಪಡೆದು ಬಸವಾದಿ ಶರಣರ ಬಗ್ಗೆ ಚೆನ್ನಾಗಿ ಮಾತಾಡುತ್ತಾರೆ ಎಂದು ಹೇಳಿದರು. ಆಗ ಶ್ರೀಗಳು ವಿಠಲ ಅವರಿಗೆ ಮಾತಾಡಲು ವೇದಿಕೆ ಮೇಲೆ ಕರೆದು ಮೈಕ್ ಕೊಟ್ಟರಂತೆ.

ಸಾಕ್ಷಾತ್ ಸಿದ್ದರಾಮೇಶ್ವರ

ಅವರು ಸುಮಾರು ಅರ್ಧ ಗಂಟೆ ಬಸವಾದಿ ಶರಣರ ಬಗ್ಗೆ ಅವರ ವಚನಗಳು ಹೇಳಿ ಮಾತಾಡಿದ್ದು ನೆರೆದ ಸಭಿಕರಿಗೆ ಮತ್ತು ಪೂಜ್ಯರಿಗೆ ದಿಗ್ಭ್ರಮೆ ಆಗಿತ್ತಂತೆ. ಆವಾಗ ಪೂಜ್ಯ ಚೆನ್ನಬಸವ ಪಟ್ಟದೇವರು ವಿಠಲ ಅವರಿಗೆ ಅಪ್ಪಿಕೊಂಡು ಹೂ ಮಾಲೆ ಹಾಕಿ ಇಂದಿನಿಂದ ನೀನು ವಿಠಲ ಅಲ್ಲ ನಮ್ಮ ಸಾಕ್ಷಾತ್ ಸಿದ್ದರಾಮೇಶ್ವರ ಎಂದು ಕರೆದು ಸಿದ್ದರಾಮ ಎಂದು ಹೆಸರಿಟ್ಟರಂತೆ.

ಅಂದಿನಿಂದ ಅವರು ಸಿದ್ದರಾಮ ಶರಣರು ಬೆಲ್ದಾಳ ಎಂದು ಖ್ಯಾತಿ ಪಡೆದರು. ನಂತರ ಪೂಜ್ಯ ಚೆನ್ನಬಸವ ಪಟ್ಟದೇವರು ಭಾಲ್ಕಿ ಹಿರೇಮಠಕ್ಕೆ ಆಹ್ವಾನಿಸಿ ಸಿದ್ದರಾಮ ಶರಣರಿಗೆ ಇಷ್ಟಲಿಂಗದೀಕ್ಷೆ ಮತ್ತು ಜಂಗಮದೀಕ್ಷೆ ಕೊಟ್ಟಿದ್ದರು. ಮುಂದೆ ಎಲ್ಲಾ ಆಗಿದ್ದು ಬಸವ ಪರಂಪರೆಯ ಇತಿಹಾಸ, ಒಬ್ಬ ದಲಿತ ಯುವಕ ಉನ್ನತ ಸಾಧನೆ ಮಾಡಿ ಹೆಸರಾಂತ ಶರಣ ಆಗಿದ್ದು, ಆಧ್ಯಾತ್ಮಿಕ ಜೀವಿ ಆಗಿದ್ದು.

ನಿಲ್ಲದ ಅಧ್ಯಯನ

ನಂತರ ಕೌಠ ಗ್ರಾಮದ ಮಾಂಜರಾ ನದಿ ದಂಡೆಯಲ್ಲಿ ಆಶ್ರಮ ಸ್ಥಾಪಿಸಿ, ಅಲ್ಲಿಯ ಬಡ ಮಕ್ಕಳಿಗೆ ಶಾಲೆ ತೆರೆದು, ವಸತಿಗೃಹ, ಗ್ರಂಥಾಲಯ ಸ್ಥಾಪಿಸಿದರು. ಅವರು ಭಾರತ ದೇಶದ ಎಲ್ಲ ಗ್ರಂಥಗಳು ಶಿವಲೀಲಾಮೃತ, ಶಿವಪುರಾಣ, ರಾಮಾಯಣ, ಮಹಾಭಾರತ, ಭಾಗವದ್ಗೀತೆ, ಮನುಸ್ಮೃತಿ, ಎಲ್ಲಾ ವೇದ, ಉಪನಿಷತ್ತು, ಆಗಮಗಳು, ಪುರಾಣ, ಪೋತಿ, ಕಥೆಗಳು, ಬೌದ್ಧ ಜೈನ ಸಿಖ್ ಕ್ರಿಶ್ಚಿಯನ್ ಇಸ್ಲಾಂ ಪಾರ್ಸಿ ಧರ್ಮಗ್ರಂಥಗಳು, ಅಂಬೇಡ್ಕರ್ ಬರೆದ ಎಲ್ಲಾ ಸಂಪುಟಗಳು, ಗಾಂಧೀಜಿ ಜೀವನ ಚರಿತ್ರೆ , ನೆಹರೂ ಬರೆದ ಗ್ರಂಥಗಳು ಅಧ್ಯಯನ ಮಾಡಿದ್ದರು. ಅವರು ದೇಶ ವಿದೇಶದವರು ಬರೆದ ಸಾವಿರಾರು ಗ್ರಂಥಗಳನ್ನು ಅಧ್ಯಯನ ಮಾಡಿ ಜ್ಞಾನ ಪಡೆದರು.

ಬಸವಾದಿ ಶರಣರ ಸಂಪೂರ್ಣ ವಚನ ಸಾಹಿತ್ಯ ಅಧ್ಯಯನ ಮಾಡಿ, ಅವುಗಳ ಸಾರ ತಿಳಿದುಕೊಂಡರು. ವಚನ ಸಾಹಿತ್ಯ ಅಧ್ಯಯನ ಮಾಡಿದ್ದಲ್ಲದೆ ನಿಜ ಜೀವನದಲ್ಲಿ ಅವನು ಮೈಗೂಡಿಸಿಕೊಂಡರು.

ಬಸವಾದಿ ಶರಣರ ಯೋಗ

ಬಸವಾದಿ ಶರಣರು ಯೋಗ ಮಾಡಿದ್ದರು, ಬಸವಾದಿ ಶರಣರ ಯೋಗಗಳು ಜಗತ್ತಿನಲ್ಲಿ ಶ್ರೇಷ್ಟ ಎಂದು ಜಗತ್ತಿಗೆ ಪರಿಚಯ ಮಾಡಿಸಿದ್ದು ಬೆಲ್ದಾಳ ಸಿದ್ದರಾಮ ಶರಣರು. ಬಸವಾದಿ ಶರಣರ ಯೋಗಗಳ ಬಗ್ಗೆ ಬರೆದ ವಚನಗಳನ್ನು ಅಧ್ಯಯನ ಮಾಡಿ, ಯೋಗ ಕಲಿತುಕೊಂಡರು. ಪತಂಜಲಿ ಯೋಗಕ್ಕಿಂತ ಬಸವಾದಿ ಶರಣರ ಯೋಗಗಳು ಶ್ರೇಷ್ಟ ಎಂದು ಅರಿತು ದಿನಾಲು ಅಭ್ಯಾಸ ಮಾಡಿದ್ದರು. ಹಠಯೋಗ ರಾಜಯೋಗಕಿಂತ ಶರಣರ ಅಂಗಲಿಂಗಾಂಗ ಸಾಮರಸ್ಯ ಶಿವಯೋಗ ಅತಿ ಶ್ರೇಷ್ಠ ಎಂದು ಸ್ವತಃ ಯೋಗ ಮಾಡಿ ಅರಿತುಕೊಂಡು ಸಮಾಜಕ್ಕೆ ತಿಳಿಸಿ ಹೇಳಿದರು. ಶರಣರ ಯೋಗಗಳ ಬಗ್ಗೆ ಪುಸ್ತಕಗಳನ್ನು ಬರೆದು ಪ್ರಕಟಿಸಿದರು.

ದೃಷ್ಟಿಯೋಗ ಯಾವಾಗ ಹೇಗೆ ಮಾಡಬೇಕು ಎನ್ನುವದು ವಚನಗಳನ್ನು ಹಾಡುತ್ತಾ, ಪ್ರಾಯೋಗಿಕವಾಗಿ ತಾನೇ ಮಾಡಿ ಶರಣರಿಗೆ ತೋರಿಸಿ ಕೊಡುತ್ತಾರೆ.

ನಿಜ ಶರಣರು ವಚನಗಳಲ್ಲಿ ಬರುವ ಯೋಗಗಳ ಮುಖಾಂತರ ಘಂಟಾನಾದವನ್ನು ಕೇಳಿ ಮತ್ತೊಬ್ಬರಿಗೆ ಕೇಳಿಸುತ್ತಾರೆ. ಉಸಿರಾಟ ನಿಲ್ಲಿಸಿ ಮಾನವನಲ್ಲಿ ಇರುವ ಒಂಬತ್ತು ಬಾಗಿಲುಗಳನ್ನು ಮುಚ್ಚಿ, ಸಂಪೂರ್ಣ ವಾಯು ಇಲ್ಲದೆ ಹಲವಾರು ನಿಮಿಷ ಮಗ್ನರಾಗಿ ಕುಂಡಲಿನಿ ಯೋಗ ಮುಖಾಂತರ ಮಿದುಳಿನಲ್ಲಿ ಅಮೃತ ಧಾರೆ ಮಾರ್ಗ ತೆರೆದು ಆನಂದಿಸುವ ಯೋಗ ಕಂಡುಕೊಂಡಿದ್ದಾರೆ.

ಷಟ್ಸ್ಥಲ ಸಾಧನೆ

ಬಸವಾದಿ ಶರಣರು ಷಟ್ಸ್ಥಲ ಸಾಧನೆ ಮಾಡಲು ಯೋಗಾಭ್ಯಾಸವು ಮುಖ್ಯ ಎಂದು ಸವಿಸ್ತಾರವಾಗಿ ಪ್ರಸ್ತುತ ಪಡಿಸುತ್ತಾರೆ, ಆದರಿಂದ ಭಕ್ತಸ್ಥಲದಿಂದ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗ ಶರಣ ಮತ್ತು ಐಕ್ಯ ಸ್ಥಳಕ್ಕೆ ಹೋಗಿ ಶರಣರು ಜೀವಂತ ಇದ್ದಾಗ ಬಯಲಲ್ಲಿ ಬಯಲಾಗುತ್ತಾರೆ, ಆತ್ಮ ಪರಮಾತ್ಮ ಮಿಲನ ಆಗಿ ಐಕ್ಯ ಸ್ಥಳ ಸೇರುತ್ತಾರೆ ಎಂದು ವಚನಗಳ ಮೂಲಕ ಬಹು ಮಾರ್ಮಿಕವಾಗಿ ತಿಳಿಸಿ ಹೇಳುತ್ತಾರೆ.

ಎಣೆಯಿಲ್ಲದ ಬಸವಣ್ಣ

ಇಡೀ ವಿಶ್ವದಲ್ಲಿ ಜಾತಿ, ಲಿಂಗ, ವರ್ಣ, ವರ್ಗ ಭೇದಗಳ ವಿರುದ್ಧ ಹೋರಾಟ ಮಾಡಿದ್ದ ಏಕೈಕ ಮತ್ತು ಪ್ರಥಮ ವ್ಯಕ್ತಿ ಬಸವಣ್ಣ ಎಂದು ವಚನ ಸಾಹಿತ್ಯ ಮೂಲಕ ಪ್ರತಿಪಾದಿಸಿದ್ದಾರೆ. ಜಗತ್ತಿನಲ್ಲಿ ಬಸವಣ್ಣ ಮಾತ್ರ ಏಕದೇವೋಪಾಸನೆಯನ್ನು ಕಠೋರವಾಗಿ ಜಾರಿಗೆ ತಂದಿದ್ದಾರೆ, ಕಾಯಕ ಮುಖಾಂತರ ಕರ್ಮಸಿದ್ಧಾಂತವನ್ನು ತಿರಸ್ಕರಿಸಿದ್ದಾರೆ, ಕಾಯಕ ಮತ್ತು ದಾಸೋಹಗಳು ಈ ಜಗತ್ತಿಗೆ ಕೊಟ್ಟ ಬಹುದೊಡ್ಡ ಕೊಡುಗೆ ಎಂದು ಪ್ರಚಾರ ಮಾಡಿದ್ದಾರೆ.

ಬಸವಾದಿ ಶರಣರ ಯಾವುದೇ ವಚನ ಅರ್ಥ ಆಗದಿದ್ದರೆ ಬೆಲ್ದಾಳ ಶರಣರನ್ನು ವಿಚಾರಿಸಿದಾಗ ಕೂಡಲೇ ಅದನ್ನು ನಿರ್ವಚನ ಮಾಡಿ ತಿಳಿಸಿ ಹೇಳುತ್ತಾರೆ. ಇದೆಲ್ಲ ಒಬ್ಬ ಕಡಿಮೆ ಶಿಕ್ಷಣ ಪಡೆದ ವ್ಯಕ್ತಿಗೆ ಸಾಧ್ಯ ಆಗಿದ್ದು ಕೇವಲ ಬಸವಾದಿ ಶರಣರ ವಚನಗಳು ಮತ್ತು ಬಸವದಿಂದ ಸಾಧ್ಯವಾಗಿದೆ.

ಬಸವ ಮಹಾಮನೆ

ಬಸವಕಲ್ಯಾಣದಲ್ಲಿ ಬಸವ ಮಹಾಮನೆ ಸ್ಥಾಪನೆ ಮಾಡಿದ್ದಾರೆ ಹಾಗು ಐಕ್ಯತಾ ಸಮಾವೇಶಗಳನ್ನು ಹಮ್ಮಿಕೊಂಡು ಸಮಾಜದಲ್ಲಿ ಶಾಂತಿ ಮತ್ತು ಭಾತೃತ್ವ ನೆಲೆಗೊಳಲ್ಲೂ ಶ್ರಮ ವಹಿಸುತ್ತಿದ್ದಾರೆ. ನೀಲಾಂಬಿಕೆ ಬಸವ ಯೋಗಶ್ರಮ ಸ್ಥಾಪನೆ ಮಾಡಿ ವರ್ಷಕ್ಕೆ ಮೂರು ದಿವಸ ಯೋಗ ಶಿಬಿರ ಹಮ್ಮಿಕೊಳ್ಳುತ್ತಾರೆ. ನಾಡಿನ ಮತ್ತು ಪರರಾಜ್ಯದ ಶರಣ ಶರಣೆಯರು ಯೋಗ ಶಿಬಿರದಲ್ಲಿ ಭಾಗವಹಿಸಿ ಯೋಗ ಅಭ್ಯಾಸ ಮಾಡುತ್ತಾರೆ.

ಹೊಸ ಪುಸ್ತಕ

ನಿಜ ಶರಣರು ಹಲವಾರು ಗ್ರಂಥಗಳನ್ನು ರಚಿಸಿದ್ದಾರೆ ಅದರಲ್ಲಿ ಮುಖ್ಯವಾದವು ವಚನ ತತ್ವಸಾರ, ಕರುಳ ಕಲೆ, ಇಷ್ಟಲಿಂಗಾರ್ಚನೆ ವಿಧಾನ, ಬಸವಣ್ಣನವರಿಂದಲೇ ಇಷ್ಟಲಿಂಗ, ಷಟಸ್ಥಲ ಸಂಪತ್ತು, ಶರಣರ ಬೆಡಗಿನ ಬೆಳಕು, ಬಸವ ತತ್ವ ಪ್ರದಿಪಿಕೆ, ವಚನ ತತ್ವ ಅನುಭವ, ಶಿವಯೋಗ ಸುಖ, ಶೂನ್ಯ ಸಂಪಾದನೆ ರಹಸ್ಯ ( ನಾಲ್ಕು ಸಂಪುಟ) ಮತ್ತು ವಚನಗಳಲ್ಲಿ ಶಿವಯೋಗ ಸುಖ.

ವಚನ ಸಾಹಿತ್ಯದ ತಿರುಳನ್ನು ವಿವರಿಸಲು ಹೊಸ ಪುಸ್ತಕ ರಚನೆ ಮಾಡಿದ್ದಾರೆ. ಈ ಪುಸ್ತಕದಲ್ಲಿ ವೀರಶೈವ ಧರ್ಮ ಅಲ್ಲ ಸುಳ್ಳು, ಸಿದ್ಧಾಂತ ಶಿಖಾಮಣಿ ಗ್ರಂಥ ಪುರಾತನ ಅಲ್ಲ, ಆಗಮ ವೇದ ಉಪನಿಷತ್ತುಗಳಲ್ಲಿ ಬಸವಾದಿ ಶರಣರು ಹೇಳಿದ್ದ ಪಂಚಾಚಾರ ಷಟಸ್ಥಲ ಅಷ್ಟಾವರಣ ಯಾವ ವಿಷಯಗಳು ಇಲ್ಲ, ಪಂಚಾಚಾರ್ಯರು ಬಸವ ಯುಗಕಿಂತ ಮೊದಲಿನವರು ಅಲ್ಲ, ಬಸವಣ್ಣನವರಿಗೆ ಯಾರು ಇಷ್ಟಲಿಂಗ ದೀಕ್ಷೆ ನೀಡಿಲ್ಲ, ಬಸವಣ್ಣನವರೆ ಇಷ್ಟಲಿಂಗ ಶೋಧನೆ ಮಾಡಿದ್ದವರು, ಬಸವಣ್ಣನವರು ಲಿಂಗಾಯತ ಧರ್ಮಸ್ಥಾಪಕರು ಎಂದು ವಿವರಿಸಿದ್ದಾರೆ.

ಬಸವಾದಿ ಶರಣರು ತಿರಸ್ಕಾರ ಮಾಡಿದ್ದ ಪಾಪ ಪುಣ್ಯ, ಸ್ವರ್ಗ ನರಕ, ಚಾತುರ್ವರ್ಣ, ಕರ್ಮಸಿದ್ಧಾಂತ, ಪುನರ್ಜನ್ಮ ಎಲ್ಲವೂ ತಿಳಿಸಿ ಹೇಳಿದ್ದಾರೆ. ಈ ಪುಸ್ತಕ ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದೆ. ಲಿಂಗಾಯತ ಧರ್ಮದ ಬಗ್ಗೆ ಇರುವ ಎಲ್ಲಾ ಸಂಶಯಗಳಿಗೆ, ಅಪಪ್ರಚಾರಗಳಿಗೆ ತೆರೆ ಎಳೆಯುವ ಸಾಮರ್ಥ್ಯವಿದೆ ಈ ಪುಸ್ತಕಕ್ಕೆ.

ಅವರಿಗೆ ಗುಲ್ಬರ್ಗ ವಿಶ್ವವಿದ್ಯಾಲಯವು ಸಾಹಿತ್ಯ ಕ್ಷೇತ್ರದ ಸೇವೆಗಾಗಿ ಡಾಕ್ಟರೇಟ್ ಪದವಿ ಪ್ರದಾನ ಮಾಡಿದ್ದರೆ, ಚಿತ್ರದುರ್ಗ ಮಠದಿಂದ ಕೊಡುವ ಬಸವಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಹಲವಾರು ಸಂಘ ಸಂಸ್ಥೆಗಳು ಹಲವಾರು ಪ್ರಶಸ್ತಿ ಬಿರುದು ಕೊಟ್ಟು ಸನ್ಮಾನ ಮಾಡಿದ್ದಾರೆ. ಇವರ ಬಗ್ಗೆ ಎಂಫಿಲ್, ಪಿಎಚ್ಡಿ ಅಧ್ಯಯನಗಳೂ ನಡೆದಿವೆ.

ಚಿತ್ರದುರ್ಗದಲ್ಲಿ ಜನವರಿ 18 ಮತ್ತು 19ರಂದು ನಡೆಯುವ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಮಾಡಿದ್ದು ಅವರ ಸಾಧನೆಗೆ ತಂದ ಗೌರವ ಮತ್ತು ಇಂತಹ ವಿಷಮ, ಸಂದಿಗ್ಧ ಸ್ಥಿತಿಯಲ್ಲಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದಕ್ಕೆ ವಚನ ಸಾಹಿತ್ಯ ಪರಿಷತ್ತಿನ ಸಮ್ಮೇಳನಕ್ಕೆ ಒಂದು ಮೆರಗು ಬಂದಂತಾಗಿದೆ.

Share This Article
6 Comments
  • ಸಿದ್ದರಾಮ ಬೆಲ್ದಾಳ ಶರಣರಿಗೆ ಭಕ್ತಿಯ ಶರಣು ಶರಣರಾರ್ಥಿಗಳು

  • ಶ್ರಿ ಸಿದ್ಧರಾಮ ಬೇಲ್ದಾಳ ಶರಣರು ಬಹಳ ಸರಳ ಜೀವಿ ಹಾಗೋ ಜ್ಞಾನಿ, ಶಿವಯೋಗ ಸಾಧಕರು . ಅವರ ಜೊತೆ ಮಾತನಾಡಿದರೆ ಮನಸ್ಸಿಗೆ ಆನಂದ ಉಂಟುಮಾಡುತ್ತದೆ.ಅಂತಹ ಶರಣರಿಗೆ ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಮಾಡಿರುವುದು ಸೂಕ್ತವಾಗಿದೆ.

  • ಶರಣರ ಬದುಕು ಮತ್ತು ಅವರ ಬರಹ ಪರಿಚಯಿಸಿದ್ದಕ್ಕೆ ಬಹಳ ಸಂತೋಷವಾಯಿತು. ಅಪ್ಪಾಜಿಯವರ ಅಧ್ಯಯನ ಮತ್ತು ಸಂಶೋಧನೆ ಶ್ಲಾಘನೀಯ.
    ಶರಣು ಶರಣಾರ್ಥಿಗಳು

    • ” ಬಟ್ಟ ಬಯಲೆಲ್ಲ ಗಟ್ಟಿಗೊಂಡಡೆ,
      ಸ್ವರ್ಗ ಮರ್ತ್ಯಲೋಕಕ್ಕೆ ಠಾವಿನ್ನೆಲ್ಲಿಯದೋ?.
      ಮೇಘ ಜಲವೆಲ್ಲ ಮುತ್ತಾದಡೆ,
      ಸಪ್ತಸಾಗರಕ್ಕೆ ಉದಕವಿನ್ನೆಲ್ಲಿಯದೋ?.
      ಹೀನ ಮನುಜರೆಲ್ಲ ನೆಟ್ಟನೆ ಶಿವಜ್ಞಾನಿಗಳಾದರೆ
      ಭವದ ಬಳ್ಳಿಗೆ ಬೀಜವಿನ್ನೆಲ್ಲಿಯದೋ?.
      ಇದು ಕಾರಣ ನಮ್ಮ ಕೂಡಲಚೆನ್ನಸಂಗಯ್ಯನಲ್ಲಿ ಸಾವಿರಕ್ಕೊಬ್ಬ ಸತ್ಯ, ಲಕ್ಷಕ್ಕೊಬ್ಬ ಭಕ್ತ, ಕೋಟಿಗೊಬ್ಬ ಶರಣ.”
      ಚಿನ್ಮಯ ಜ್ಞಾನಿ ಚೆನ್ನಬಸವಣ್ಣನವರ ಈ ಮೇಲಿನ ವಚನದಂತೆ ಇಂದಿನ ದಿನಮಾನದಲ್ಲಿ ಪೂಜ್ಯ ಡಾ. ಸಿದ್ಧರಾಮ ಶರಣರು ಬೆಲ್ದಾಳ ಇವರು ಕೋಟಿಗೊಬ್ಬ ಶರಣರು ಅವರ ಪೂಜ್ಯ ಪಾದಕ್ಕೆ ಭಕ್ತಿಯ ಶರಣು ಶರಣಾರ್ಥಿಗಳು 🌹🙏🙏

  • Pujjya Dr. Sidharamsharanaru Real practical Sharanaru .as per Channabasavanna vachana Kotigobbha sharana applies to Dr sidharam sharan. In these days no bodies are equall to sidharamaharanaru.

  • ಎತ್ತೆತ್ತ ನೋಡಿದರತ್ತತ್ತ ಬಸವನೆಂಬ ಬಳ್ಳಿ…
    ಲಿಂಗಾಯತ ಅನ್ನುವದು ರಕ್ತದಿಂದ ಬರುವದಿಲ್ಲ ತತ್ವಾಚರಣೆಯಿಂದ ಬದುಕಿನಲ್ಲಿ ಕಂಡುಕೊಳ್ಳುವ ಮಾರ್ಗ, ಅರಿವು ಗುರುವಾಗಿ, ಲಿಂಗ ಜಂಗಮವಾಗಿ, ಕಾಯಕ ದಾಸೋಹವಾಗಿ ಸ್ತಿತ್ಯಂತರವಾಗಿ ಪಯಣಿಸುವದೆ ಬಸವಾದಿ ಶರಣರ ಆಶಯ, ಅಂತಹ ಬದುಕನ್ನ ಕಂಡುಕೊಂಡು ಬೆಲ್ದಾಳ ಶರಣರಿಗೆ ಸಾವಿರದ ಶರಣು.

    ಬಸವ #ಕೊಂಡಗೂಳಿಯಂವ

Leave a Reply

Your email address will not be published. Required fields are marked *

ಕರ್ನಾಟಕ ರಾಜ್ಯ ಸಂಚಾಲಕರು, ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿ