ಭಕ್ತಿ ಭಂಡಾರಿ ಬಸವಣ್ಣನವರು: ಒಂದು ಚಿಂತನೆ

ದೇವಲೋಕದವರಿಗೂ ಬಸವಣ್ಣನೆ ದೇವರು.
ಮರ್ತ್ಯಲೋಕದವರಿಗೂ ಬಸವಣ್ಣನೆ ದೇವರು.
ನಾಗಲೋಕದವರಿಗೂ ಬಸವಣ್ಣನೆ ದೇವರು.
ಮೇರುಗಿರಿ ಮಂದರಗಿರಿ ಮೊದಲಾದವೆಲ್ಲಕ್ಕೂ
ಬಸವಣ್ಣನೆ ದೇವರು.
ಚೆನ್ನಮಲ್ಲಿಕಾರ್ಜುನಯ್ಯಾ,ನಿಮಗೂ ಎನಗೂ
ನಿಮ್ಮ ಶರಣರಿಗೂ ಬಸವಣ್ಣನೆ ದೇವರು.

               - ಅಕ್ಕ ಮಹಾದೇವಿ 

ಬಸವ ಪೀಠವು ಎದ್ದು ಒಸೆದು ನಾಣ್ಯವ ಹುಟ್ಟಿ
ಬಸವನ ಮುದ್ರೆ ಮೆರೆದಾವು | ಧರೆಯೊಳಗ
ವಶವಾಗದಿಹುದೆ ಸರ್ವಜ್ಞ ||
ಬಸವ ಗುರುವಿನ ಹೆಸರು ಬಲ್ಲವರಾರಿಲ್ಲ
ಹುಸಿಮಾತನಾಡಿ ಕೆಡದಿರಿ | ಮೂಲೋಕಕ್ಕೆ
ಬಸವಣ್ಣನೆ ಕರ್ತ ಸರ್ವಜ್ಞ ||
– ಸರ್ವಜ್ಞ

        ಈ ಮೇಲಿನ ವಚನಗಳು ಬಸವಣ್ಣನವರ ಮಹತ್ವವನ್ನು ಎತ್ತಿ ಹಿಡಿದು ಅವರು ಮಾಡಿದ ಧಾರ್ಮಿಕ ಕ್ರಾಂತಿ ಕಾರ್ಯ ಎಂತಹದ್ದು ಎಂಬುದನ್ನು ಹೇಳುತ್ತವೆ. ಧಾರ್ಮಿಕ, ರಾಜಕೀಯ, ಸಾಮಾಜಿಕ, ಆರ್ಥಿಕ , ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ಕ್ಷೇತ್ರಗಳಲ್ಲಿ ಸುಧಾರಣೆ ತರುವುದರ ಮೂಲಕ ನವ ಮನ್ವಂತರಕ್ಕೆ ನಾಂದಿ ಹಾಡಿದ ಮಹಾ ಮಾನವತಾವಾದಿ ವಿಚಾರವಾದಿ,  ಆಧ್ಯಾತ್ಮಿಕತೆಯನ್ನು ಎಲ್ಲರೂ ಸಾಧಿಸುವಂತದ್ದು ಎಂಬುದನ್ನು ತೋರಿಸಿಕೊಟ್ಟಂತಹ ವಿಶ್ವ ಗುರು ಬಸವಣ್ಣನವರ ಹೆಸರು ಅಜರಾಮರವಾಗಿದೆ.

ಬಸವಣ್ಣನವರ ಜೀವನ ಮತ್ತು ವಚನ ಸಾಹಿತ್ಯ ಕ್ರಾಂತಿ
೧೨ನೇ ಶತಮಾನದಲ್ಲಿ ಪರಮಾತ್ಮನ ಕರುಣೆಯ ಕಂದರಾಗಿ ದಂಪತಿಗಳಾದ ಮಾದರಸ,ಮಾದಲಾಂಬಿಕೆಯರ ಮುದ್ದಿನ ಮಗನಾಗಿ ೧೧೩೪ರಲ್ಲಿ ಬಸವನಬಾಗೇವಾಡಿಯಲ್ಲಿ(ಇಂಗಳೇಶ್ವರ)ದಲ್ಲಿ ಜನಿಸಿದ್ದರು.ಪ್ರಸ್ತುತ ೧೪00ಕ್ಕೂ ಅಧಿಕ ಬಸವಣ್ಣನವರ ವಚನಗಳು ಹಾಗೂ ಒಟ್ಟು ೨೦,೦೦೦ಕ್ಕೂ ಅಧಿಕ ಶರಣರ ವಚನಗಳು ಲಭ್ಯವಿವೆ.ಭಾರತದ ಭಕ್ತಿ ಪರಂಪರೆಯ ಶ್ರೀಮುಕುಟವಿದ್ದಂತೆ ಬಸವಣ್ಣನವರು. ಸಮ ಸಮಾಜದ ನಿರ್ಮಾಣದ ಕನಸಿನೊಂದಿಗೆ ಸ್ಥಾಪಿಸಿದ್ದು ಲಿಂಗಾಯತ ಧರ್ಮ.ಅಲ್ಲಿರುವ ಜಾತೀಯತೆ,ಅಸ್ಪೃಶ್ಯತೆ,ಅಸಮಾನತೆ,ಮೌಡ್ಯ ಹೀಗೆ ಇನ್ನೂ ಅನೇಕ ತಾರತಮ್ಯಗಳ ವಿರುದ್ಧ ಅಪ್ಪ ಬಸವಣ್ಣನವರು ಬಾಲ್ಯದಲ್ಲಿಯೇ ಅವುಗಳೆಲ್ಲವನ್ನು ಧಿಕ್ಕರಿಸಿ, ಕೂಡಲಸಂಗಮದಲ್ಲಿದ್ದ ತಮ್ಮ ಅಕ್ಕ ನಾಗಲಾಂಬಿಕೆ ಮತ್ತು ಮಾವನವರಾದ ಶಿವಸ್ವಾಮಿ ಇವರ ಬಳಿ ಇದ್ದು ವಿದ್ಯಾಭ್ಯಾಸವನ್ನು ಕೂಡಲಸಂಗಮದಲ್ಲಿಯೇ ಮುಗಿಸಿದ ಧರ್ಮಗುರು ಇವರೇ.ಅವನತಿಯ ಅಂಚಿನಲ್ಲಿದ್ದ ನಾಥ ಪರಂಪರೆಗೆ ತಮ್ಮದೇ ಆದ ತತ್ವ ಸಿದ್ಧಾಂತಗಳ ಮೂಲಕ ಕಾಯಕ,ದಾಸೋಹ,ಸಮಾನತೆ ಇವುಗಳನ್ನೇ ಪ್ರಧಾನವಾಗಿಟ್ಟುಕೊಂಡು ಉಳಿದ ಎಲ್ಲಾ ವಲಸೆ ಧರ್ಮಗಳನ್ನು ಧಿಕ್ಕರಿಸಿ ಅಪ್ಪಟ ಕನ್ನಡಿಗರ ಕನ್ನಡದ ಧರ್ಮವಾಗಿ ಲಿಂಗಾಯತ ಧರ್ಮವನ್ನು ಸ್ಥಾಪಿಸಿದ ವಿಮಲ ಮುತ್ಸದ್ದಿ ಇವರೇ.ದೇಗುಲಗಳಿಗೆ ನಿಶಿದ್ಧವಾಗಿದ್ದ ಸಮಾಜಕ್ಕೆ ಆಧ್ಯಾತ್ಮದ ಸಾಧನಕ್ಕಾಗಿ ಇಷ್ಟಲಿಂಗದ ಕುರುಹನ್ನು ಈ ಜಗಕ್ಕೆ ನೀಡಿದ ಜಗಜ್ಯೋತಿ ಇವರೇ.
770 ಅಮರಗಣಂಗಳು,ಲಕ್ಷದ ಮೇಲೆ ೯೬ ಸಾವಿರ ಶರಣರನ್ನು ಒಳಗೊಂಡ ಜಗತ್ತಿನ ಮೊದಲ ಸಂಸತ್ತು ಎಂದು ಪ್ರಖ್ಯಾತಿಯನ್ನು ಪಡೆದಿರುವ ಅನುಭವ ಮಂಟಪದ ಸ್ಥಾಪನೆಯ ಹಿರಿಮೆಯು ಅಪ್ಪ ಬಸವ ತಂದೆಗೆ ಸಲ್ಲುತ್ತದೆ.ನಟವರ ಜನಾಂಗದಿಂದ ಬಂದ ಅಲ್ಲಮಪ್ರಭುಗಳನ್ನು ಅನುಭವ ಮಂಟಪದ ಶೂನ್ಯ ಸಂಪಾದನಾ ಪೀಠದ ಅಧ್ಯಕ್ಷರನ್ನಾಗಿ ಮಾಡಿದ್ದು,ಇವರ ಸಮಾನತೆ ತತ್ವಕ್ಕೆ ಹಿಡಿದ ಕೈ ಗನ್ನಡಿಯಾಗಿದೆ.ಒಬ್ಬ ಸಾಮಾನ್ಯ ವ್ಯಕ್ತಿ ಸಹ ಬಿಜ್ಜಳ ಮಹಾರಾಜನ ಆಸ್ಥಾನದಲ್ಲಿ ಪ್ರಧಾನ ಮಂತ್ರಿಯಾಗಿದ್ದರು ಸಹ ಬಸವಣ್ಣನವರ ನಡೆಯನ್ನು ಪ್ರಶ್ನಿಸುವಂತಹ ಸ್ವಾತಂತ್ರ್ಯ ಹೊಂದಿದ್ದ ಪ್ರಜಾಪ್ರಭುತ್ವ ಮಾದರಿಯು ಅಂದು ಅನುಭವ ಮಂಟಪದಲ್ಲಿತ್ತು.ಕುಳಿತು ತಿಂದರೆ ಕುಡಿಕೆ ಹೊನ್ನು ಸಾಲದು ಎಂಬಂತೆ ಸಮಾಜದಲ್ಲಿ ಎಲ್ಲರೂ ದುಡಿದು ತಿನ್ನುವುದೇ ಶ್ರೇಷ್ಠ,ದುಡಿಯದೇ ತಿನ್ನುವುದು ಕನಿಷ್ಠ, ‘ಕಾಯಕವೇ ಕೈಲಾಸ’ ಎಂದು ಕಾಯಕ ತತ್ವವನ್ನು ಸಾರಿದ ಮಹಾ ಮಾನವತಾವಾದಿ ಇವರೇ.’ಸೋಹಂ ಎಂದೆನಿಸದೆ ದಾಸೋಹಂ ಎಂದೆನಿಸಯ್ಯ’ ಎಂದು,ದಾನಕ್ಕಿಂತಲೂ ದಾಸೋಹ ಶ್ರೇಷ್ಠವೆಂದು ಕಾಯಕದಿಂದ ಬಂದ ಸಂಪತ್ತಿನಲ್ಲಿ ಸಮಾಜಕ್ಕೂ ಒಂದು ಪಾಲು ಎಂದು ದಾಸೋಹ ತತ್ವವನ್ನು ನೀಡಿದ ಭಕ್ತಿ ಭಂಡಾರಿ ಇವರೇ.

ಧಾರ್ಮಿಕ ಸಮಾನತೆಯ ಸಂತ ಬಸವಣ್ಣ
ಸ್ತ್ರೀ-ಪುರುಷ,ಮೇಲು-ಕೀಳು,ಅಸ್ಪೃಶ್ಯತೆ, ಜಾತೀಯತೆ ಇನ್ನೂ ಅನೇಕ ತರಹದ ಅಸಮಾನತೆಗಳ ವಿರುದ್ಧ ವಚನಗಳ ಮೂಲಕ ಹೋರಾಡಿ,ಲಿಂಗಾಯತ ಧರ್ಮದಲ್ಲಿ ಸ್ತ್ರೀಯರಿಗೂ ಪೂಜಾ ವಿಧಿ ವಿಧಾನಗಳಲ್ಲಿ ಅವಕಾಶ,ವಿಧವಾ ವಿವಾಹ,ಸ್ತ್ರೀಯರಿಗೂ ಧರ್ಮ ಗುರುಗಳು ಆಗುವ ಅವಕಾಶ ಇನ್ನೂ ಅನೇಕ ರೀತಿಯ ಸಮಾನತೆಗಳನ್ನು ಸಮಾಜದಲ್ಲಿ ಸಮಾನತೆ ತತ್ವದ ಅಡಿಯಲ್ಲಿ ನೀಡಿದ ವಿಶ್ವಗುರು ಇವರೇ.ಅನುಭವ ಮಂಟಪದಲ್ಲಿ ಕುರುಬ ಗೊಲ್ಲಾಳೇಶ,ಮಾದಾರ ಚೆನ್ನಯ್ಯ,ಡೋಹರ ಕಕ್ಕಯ್ಯ,ಒಕ್ಕಲಿಗ ಮುದ್ದಣ್ಣ,ಕಾಶ್ಮೀರದಿಂದ ಬಂದ ಮೋಳಿಗೆ ಮಾರಯ್ಯ, ಅಪಘಾನಿಸ್ತಾನದಿಂದ ಬಂದ ಮರುಳ ಶಂಕರರಂತಹ ಅನೇಕರು ಸೇರಿ ಎಲ್ಲಾ ಸಮುದಾಯದ ಶರಣರಿದ್ದರು.ಅವರೆಲ್ಲರು ‘ಲಿಂಗಾಯತ’ ಧರ್ಮದ ಅಡಿಯಲ್ಲಿ ಒಟ್ಟಾಗಿದ್ದರು.ಕಾಯಕ ತತ್ವವನ್ನು ಸಾರಿದ ಕಾಯಕಯೋಗಿ.ಲಿಂಗಾಯತ ಧರ್ಮದ ಮೂಲ ತತ್ವ ಸಿದ್ಧಾಂತಗಳಾಗಿ ಅಷ್ಟಾವರಣ, ಪಂಚಾಚಾರ,ಷಟಸ್ಥಲ ಜಗದ ಉದ್ಧಾರಕ್ಕಾಗಿ ಶರಣರು ಆಚರಿಸಿ ಸೂಚಿಸಿದ ಸೂತ್ರಗಳಿವು. ಅಷ್ಟಾವರಣದಲ್ಲಿನ ಅಷ್ಟ ಸೂತ್ರಗಳು ೧)ಗುರು ೨)ಲಿಂಗ ೩)ಜಂಗಮ ೪)ವಿಭೂತಿ ೫)ರುದ್ರಾಕ್ಷಿ ೬)ಮಂತ್ರ ೭)ಪಾದೋದಕ ೮)ಪ್ರಸಾದ . ಪಂಚಾಚಾರದಲ್ಲಿನ ಪಂಚ ಸೂತ್ರಗಳು. ೧)ಲಿಂಗಾಚಾರ ೨)ಸದಾಚಾರ ೩)ಶಿವಾಚಾರ ೪)ಗಣಾಚಾರ ೫)ಭೃತ್ಯಾಚಾರ. ಷಟಸ್ಥಲದಲ್ಲಿನ ಷಟ ಸೂತ್ರಗಳು೧)ಭಕ್ತ ೨)ಮಹೇಶ ೩)ಪ್ರಾಣ ಲಿಂಗಿ ೪)ಪ್ರಸಾದ ೫)ಶರಣ ೬)ಐಕ್ಯ ಈ ಮೇಲಿನ ಎಲ್ಲವು ನಿಜ ಲಿಂಗಾಯತರ ಆಚರಣೆಗಳು.

ಸಾಮಾಜಿಕ ಸುಧಾರಣೆಯ ಹರಿಕಾರ ಬಸವಣ್ಣ
ವೇಶ್ಯೆಯರಿಗೂ ಸಾಮಾಜಿಕ ಸ್ಥಾನಮಾನ ನೀಡಿ ಗೌರವಿಸಿದ ಹಿರಿಮೆ ಸ್ತ್ರೀ ಕುಲೋದ್ಧಾರಕ ಬಸವ ತಂದೆ ಮತ್ತು ಅನುಭವ ಮಂಟಪಕ್ಕೆ ಸಲ್ಲುತ್ತದೆ.ಭಕ್ತರಲ್ಲಿ ಪರಮಾತ್ಮನನ್ನು ಬಸವಣ್ಣ ಕಂಡರೆ,ಅಪ್ಪ ಬಸವಣ್ಣನವರಲ್ಲಿ ಪರಮಾತ್ಮನನ್ನು ಭಕ್ತರು ಕಂಡ ಕಾಲವದು.ಇದು ಧನವುಳ್ಳವರ ಧರ್ಮವಲ್ಲ ಗಣವುಳ್ಳವರ ಧರ್ಮ.ಲಿಂಗಾಯತ ಧರ್ಮವು ಸನಾತನವಾದಿಗಳ ಚೌಕಟ್ಟಿನ ಧರ್ಮವಲ್ಲ.ಇದು ಚೌಕಟ್ಟಿಲ್ಲದ ಬಯಲು ಧರ್ಮ.ಶೂನ್ಯ ಎಂಬುದು ಬಯಲೇ ಆಗಿದೆ.ಎಲ್ಲರೂ ನಮ್ಮವರು,ಯಾರೂ ಹೊರಗಿನವರಲ್ಲ ಎಂಬುದು ಲಿಂಗಾಯತ ಧರ್ಮವಾದ ಬಸವ ಧರ್ಮದ ಘೋಷಣೆಯಾಗಿದೆ.ಆತ್ಮ ಗೌರವಕ್ಕಾಗಿ ಪರಸ್ಪರ ಶರಣು ಶರಣಾರ್ಥಿ ಎನ್ನುವ ವಿಶೇಷ ಪದಗಳ ಬಳಕೆಯನ್ನು ತಂದ ಹುಟ್ಟು ದಲಿತೋದ್ಧಾರಕ ಇವರೇ.ಸಂಸ್ಕೃತ ಭಾಷೆಯು ತಾಂಡವವಾಡುತ್ತಿದ್ದ ಕಾಲದಲ್ಲಿ ಕನ್ನಡವನ್ನು ದೇವ ಭಾಷೆಯನ್ನಾಗಿಸಿದ ಮಹಾ ಪುರುಷ ಇವರೇ.ಕಾಯಕದಲ್ಲಿ ದೇವರನ್ನು ಕಾಣುವ ಏಕೈಕ ಧರ್ಮ ನಮ್ಮ ಲಿಂಗಾಯತ ಧರ್ಮ. ಇವರ ಸಮಕಾಲಿನ ಅನೇಕ ಶರಣರು ಇವರನ್ನು ಹೊಗಳಿದ್ದಾರೆ.
ವ್ಯಕ್ತಿ ಮತ್ತು ವ್ಯಕ್ತಿತ್ವ ಶುದ್ಧೀಕರಣ ಮಾಡುವುದರೊಂದಿಗೆ ಮಾತ್ರ ಸಮಾಜದ ಶುದ್ಧೀಕರಣ ಸಾಧ್ಯ ಎಂಬುದನ್ನು ಬಹಳ ಅರ್ಥಪೂರ್ಣವಾಗಿ ತಮ್ಮ ವಚನದಲ್ಲಿ ಹೇಳಿದ್ದಾರೆ. ಅಂತರಂಗ ಮತ್ತು ಬಹಿರಂಗ ಶುದ್ಧಿ ಆದಾಗ ಮಾತ್ರ ವ್ಯಕ್ತಿ ಪರಿಪೂರ್ಣನಾಗಬಹದು ಎನ್ನುವುದನ್ನು ಈ ರೀತಿಯಾಗಿ ಹೇಳಿದ್ದಾರೆ.
” ಕಳಬೇಡ,ಕೊಲಬೇಡ,ಹುಸಿಯ ನುಡಿಯಲು ಬೇಡ,
ಮುನಿಯಬೇಡ,ಅನ್ಯರಿಗೆ ಅಸಹ್ಯಪಡಬೇಡ,
ತನ್ನ ಬಣ್ಣಿಸಬೇಡ,ಇದಿರ ಹಳಿಯಲು ಬೇಡ.
ಇದೇ ಅಂತರಂಗಶುದ್ಧಿ,ಇದೇ ಬಹಿರಂಗಶುದ್ಧಿ.
ಇದೇ ನಮ್ಮ ಕೂಡಲಸಂಗಮದೇವರನೊಲಿಸುವ ಪರಿ.”
ಈ ಒಂದು ವಚನವನ್ನು ನಾವುಗಳು ಪಾಲಿಸಿದರೆ ಸಾಕು ನಾವುಗಳು ಮಾನವಾತೀತರಾಗಿ ಬಿಡುತ್ತೇವೆ. ಇಂತಹ ವಚನಗಳೇ ಇಂದಿನ ಆಧುನಿಕ ಸಮಾಜದಲ್ಲಿ ಪ್ರಜಾಪ್ರಭುತ್ವದ ಭದ್ರಬುನಾದಿಯಾಗಿ,ಕಾನೂನುಗಳಾಗಿ, ಮಾನವರ ಬದುಕಿಗೆ ದಾರಿಯಾಗಿ, ಪ್ರಶ್ನೆಗಳಿಗೆ ಉತ್ತರವಾಗಿ,ಮಾನವರ ಆತ್ಮೋದ್ಧಾರಕ್ಕೆ ಬೇಕಾದದ್ದೆಲ್ಲ ಶರಣರ ವಚನ ಸಾಹಿತ್ಯದಲ್ಲಿವೆ.
ಕಲ್ಯಾಣ ಕ್ರಾಂತಿ ಮತ್ತು ಬಸವಣ್ಣ
ಹರಳಯ್ಯನವರ ಮಗ ಶೀಲವಂತ ಮತ್ತು ಮಧುವರಸರ ಮಗಳು ಲಾವಣ್ಯಳ ಕೂಡ ಲಿಂಗಾಯತರಾದ ಕಾರಣ ಅವರ ಮದುವೆ ಸಹಜವಾಗಿಯೇ ಆಗಬೇಕಿತ್ತು. ಆದರೆ ಬಿಜ್ಜಳನ ಆಸ್ಥಾನದಲ್ಲಿದ್ದ ಪಟ್ಟಭದ್ರ ಹಿತಾಸಕ್ತಿಗಳು ಆ ಮದುವೆ ಧರ್ಮಬಾಹಿರ ಎಂದು ಹುಯಿಲೆಬ್ಬಿಸಿದರು.ಮನುಧರ್ಮದ ಪ್ರಕಾರ ಆ ಮದುವೆ ಧರ್ಮಬಾಹಿರ ಆಗಿತ್ತು. ಆದರೆ ಲಿಂಗಾಯತ ಧರ್ಮದ ಪ್ರಕಾರ ಧರ್ಮ ಸಮ್ಮತವಾಗಿತ್ತು.ಮನುವಾದಿಗಳಿಗೆ ಅದು ಬ್ರಾಹ್ಮಣ ಕನ್ಯಾ ಮತ್ತು ಸಮಗಾರ ವರನ ಮಧ್ಯೆ ನಡೆದ ಮದುವೆ ಯಾಗಿತ್ತು. ಶರಣ ಸಂಕುಲದ ಪ್ರಕಾರ ಅದು ಲಿಂಗಾಯತರ ಶರಣ ಸಂಸ್ಕೃತಿಯ ಪ್ರತೀಕವಾದ ಮದುವೆಯಾಗಿತ್ತು. ಈ ಒಂದು ಮದುವೆಯ ಕಾರಣವನ್ನು ಇಟ್ಟುಕೊಂಡೆ ಕಲ್ಯಾಣದಲ್ಲಿ ಅಲ್ಲೋಲ ಕಲ್ಲೋಲವಾಯಿತು.ತಮ್ಮ ನಿಜ ಸಂಪತ್ತಾಗಿದ್ದ ವಚನಕಟ್ಟುಗಳ ರಕ್ಷಣೆಗಾಗಿ ಎಲ್ಲವನ್ನೂ ಬಿಟ್ಟು ಕಲ್ಯಾಣವನ್ನು ತೊರೆದ ಶರಣರು.ಅಳಿವಿನಂಚಿನಲ್ಲಿದ್ದ ಶರಣ ಸಾಹಿತ್ಯವನ್ನು ಬಸವಣ್ಣನವರ ಸೋದರಳಿಯ ಚನ್ನಬಸವಣ್ಣನವರ ಮುಂದಾಳತ್ವದಲ್ಲಿ ಕಾದರವಳ್ಳಿಯಲ್ಲಿ ಕಾದಾಡಿ ಉಳವಿಯಲ್ಲಿ ರಕ್ಷಿಸಿ ಧರ್ಮ ಪ್ರಚಾರ ಮಾಡಲಾಯಿತು.ನಡೆ,ನುಡಿ ಸಿದ್ಧಾಂತದಿಂದ ಕೂಡಿದ ತತ್ತ್ವಕ್ಕಾಗಿ ಸಹಸ್ರಾರು ಶರಣ,ಶರಣೆಯರು ಹುತಾತ್ಮರಾಗಲು ಕಾರಣವಾದ ‘ಕಲ್ಯಾಣ ಕ್ರಾಂತಿ’ ಎಂಬ ಇಂಥ ಘನಘೋರ ಘಟನೆ ಮಾನವ ಚರಿತ್ರೆಯಲ್ಲಿ ಇನ್ನೊಂದಿಲ್ಲ.

ಲಿಂಗಾಯತ ಧರ್ಮ ಮತ್ತು ಸಾಂಸ್ಕೃತಿಕ ನಾಯಕ ಬಸವಣ್ಣ

      ಈ ರೀತಿಯಾಗಿ ೧೨ನೇ ಶತಮಾನದಲ್ಲಿ ಸ್ಥಾಪನೆಯಾದ ನಮ್ಮ ಲಿಂಗಾಯತ ಧರ್ಮವನ್ನು ನಾವಿಂದು ೨೧ನೇ ಶತಮಾನದಲ್ಲಿ ಸ್ವತಂತ್ರ ಧರ್ಮದ ಮಾನ್ಯತೆಗಾಗಿ ಪಟ್ಟಭದ್ರ ಹಿತಾಸಕ್ತಿಗಳ ವಿರೋಧದ ನಡುವೆಯೂ ರಾಜ್ಯ&ಕೇಂದ್ರ ಸರ್ಕಾರಗಳನ್ನು ನಾವಿಂದು ಧರ್ಮ ಮಾನ್ಯತೆ ನೀಡುವಂತೆ ಗೋಗರೆಯುತ್ತಿರುವುದು ಅತ್ಯಂತ ಕೇದಕರ ಸಂಗತಿ.೧೨ನೇ ಶತಮಾನದಲ್ಲಿ ಸ್ಥಾಪನೆಯಾದ ನಮ್ಮ ಲಿಂಗಾಯತ ಧರ್ಮವನ್ನು ಇಂದಿನವರೆಗೂ ಸಾಕಷ್ಟು ಸಂತರು,ಮಹಾಂತರು,ಶಿವಯೋಗಿಗಳು ಸ್ವಾಮೀಜಿಗಳು,ವಿರಕ್ತ ಮಠಗಳು, ಮಹಾಪುರುಷರು,ಸಂಘ,ಸಂಸ್ಥೆಗಳು,ಬಸವ ಪರ ಸಂಘಟನೆಗಳು.ಶರಣ ಪರಂಪರೆ,ತತ್ವ ಸಿದ್ಧಾಂತಗಳನ್ನು ಉಳಿಸಿ ಬೆಳೆಸಿಕೊಂಡು ಬಂದಿರುವುದು ಅತ್ಯಂತ ಅರ್ಥಪೂರ್ಣವಾದ ಕಾರ್ಯ. ಪ್ರಸ್ತುತ ಈಗಿನ ಸರ್ಕಾರವು ಬಸವ ತತ್ವದ ಆಶಯಗಳಿಗೆ ಪೂರಕವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯವಾಗಿದೆ. ಕರ್ನಾಟಕ ಸರ್ಕಾರವು ಕೆಲವು ದಿನಗಳ ಹಿಂದೆ ವಿಶ್ವಗುರು ಬಸವಣ್ಣನವರನ್ನು 'ಕರ್ನಾಟಕದ ಸಾಂಸ್ಕೃತಿಕ ನಾಯಕ' ಎಂದು ಘೋಷಿಸಿರುವುದರ ಹೆಮ್ಮೆಯ ವಿಷಯವಾಗಿದೆ. ಜೊತೆಗೆ ವಿಶ್ವಗುರು ಬಸವಣ್ಣನವರು 'ಕರ್ನಾಟಕದ ಸಾಂಸ್ಕೃತಿಕ ನಾಯಕ' ಎಂದು ಬರೆದಿರುವ ಬಸವೇಶ್ವರರ ಭಾವಚಿತ್ರವನ್ನು ಸರ್ಕಾರಿ ಮತ್ತು ಅರೆ ಸರ್ಕಾರಿಯ ಎಲ್ಲ ಕಚೇರಿಗಳಲ್ಲಿ ಅಳವಡಿಸುವಂತೆ ಸೂಚಿಸಿದೆ.ಇಂತಹ ಸಾಕಷ್ಟು ಬೆಳವಣಿಗೆಗಳು ಪ್ರಸ್ತುತ ದಿನಗಳಲ್ಲಿ ನಡೆಯುತ್ತಿರುವುದನ್ನು ನೋಡಿದರೆ ಅಪ್ಪ ಬಸವಣ್ಣನವರು ಕಂಡ 'ಕಲ್ಯಾಣ ರಾಜ್ಯ' ನಿರ್ಮಾಣದ ಕನಸು ನನಸಾಗುವ ದಿನಗಳು ಹತ್ತಿರದಲ್ಲಿವೆ ಎಂದು ಭಾಸವಾಗುತ್ತಿದೆ.

ಭಾರತ ದೇಶ ಜೈ ಬಸವೇಶ ,ವಿಶ್ವಕ್ಕೆ ಶಾಂತಿಯಾಗಲಿ ನಮ್ಮೆಲ್ಲರಿಗೂ ಒಳಿತಾಗಲಿ,
ಶರಣು ಶರಣಾರ್ಥಿಗಳು.

ಲೇಖಕರು:
ಶರಣ ಆನಂದ ಯಲ್ಲಪ್ಪ ಕೊಂಡಗುರಿ
ಪ್ರಧಾನ ಕಾರ್ಯದರ್ಶಿ ಜಾಗತಿಕ ಲಿಂಗಾಯತ ಮಹಾಸಭಾ ತಾಲ್ಲೂಕು ಘಟಕ ಬೆಳಗಾವಿ.
ಕೆರೆ ಓಣಿ,ಹಿರೇಬಾಗೇವಾಡಿ.
ತಾ/ಜಿ:-ಬೆಳಗಾವಿ,591109.

Share This Article
Leave a comment

Leave a Reply

Your email address will not be published. Required fields are marked *

ಪ್ರಧಾನ ಕಾರ್ಯದರ್ಶಿ ಜಾಗತಿಕ ಲಿಂಗಾಯತ ಮಹಾಸಭಾ ತಾಲ್ಲೂಕು ಘಟಕ ಬೆಳಗಾವಿ.