ಸಾಣೇಹಳ್ಳಿ
ವಿಶ್ವದಲ್ಲಿ ಹೆಣ್ಣು, ಮಣ್ಣು, ಹೊನ್ನಿಗಾಗಿ ಹೋರಾಟ ಮಾಡುತ್ತಿರುವವರನ್ನು ಕಾಣುತ್ತಿದ್ದೇವೆ. ಅವೇ ನಮ್ಮ ಸಂಪತ್ತೆಂದು ಭ್ರಮೆಯಲ್ಲಿ ಬದುಕುತ್ತಿದ್ದೇವೆ. ಆದರೆ ನಿಜವಾದ ಸಂಪತ್ತು ಜ್ಞಾನರತ್ನ. ಜ್ಞಾನರತ್ನವನ್ನು ಸಂಪತ್ತೆಂದು ಭಾವಿಸಿಕೊಂಡು ಜ್ಞಾನನಿಧಿಗಳಾದರೆ ಏನು ಬೇಕಾದರೂ ಸಂಪತ್ತು ಗಳಿಸಬಹುದು ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಹೇಳಿದರು.
ಅವರು ಇಲ್ಲಿನ ಗುರುಬಸವ ಮಹಾಮನೆಯಲ್ಲಿ ಏರ್ಪಡಿಸಿದ್ದ ಬೆಂಗಳೂರಿನ ಆರ್.ವಿ. ತಾಂತ್ರಿಕ ಶಿಕ್ಷಣ ಮಹಾವಿದ್ಯಾಲಯದ ವತಿಯಿಂದ ಮೂರು ದಿನಗಳ ಕಾಲ ನಡೆಯುವ ಎನ್ಎಸ್ಎಸ್ ಶಿಬಿರದ ಉದ್ಘಾಟನಾ ಸಮಾರಂಭದ ದಿವ್ಯ ಸಾನ್ನಿಧ್ಯವಹಿಸಿ ಮಾತನಾಡಿದರು.
ಇವತ್ತು ಪಡೆಯುವ ಶಿಕ್ಷಣ ಎಲ್ಲದನ್ನೂ ಕೊಡುವಂಥದಲ್ಲ. ನಮ್ಮ ಜ್ಞಾನ ನಮ್ಮನ್ನು ಬುದ್ಧಿವಂತರನ್ನಾಗಿ ಮಾಡುತ್ತದೆಯೇ ಹೊರತಾಗಿ ವಿವೇಕಸ್ಥರನ್ನಾಗಿ ಮಾಡುತ್ತಿಲ್ಲ. ಬುದ್ದಿ ನರಿ ಬುದ್ಧಿಯಾಗದೇ ಸುಬುದ್ಧಿಯಾಗಬೇಕು. ವಿವೇಕ ಯಾವಾಗಲೂ ಸನ್ಮಾರ್ಗದಲ್ಲಿ ಕರೆದುಕೊಂಡು ಹೋಗುವಂಥದ್ದು. ವಿವೇಕ ಎಂದೂ ನಮ್ಮನ್ನು ದಾರಿ ತಪ್ಪಿಸುವುದಿಲ್ಲ. ಅಂತಹ ವಿವೇಕ ನಮ್ಮ ಮನೆಯಿಂದ, ಮಠದಿಂದ, ಶಾಲೆಯಿಂದ, ಸಮಾಜದಿಂದ ಪ್ರಾರಂಭವಾಗಬೇಕು. ಆದರೆ ಇವತ್ತು ಅಂತಹ ವಿವೇಕ ಯಾವುದೇ ಕ್ಷೇತ್ರದಲ್ಲಿ ಸಿಗದೇ ಇರುವುದು ದುರಂತದ ಸಂಗತಿ.
ನಮ್ಮ ವಿದ್ಯೆ ಕೇವಲ ಉದ್ಯೋಗ ಪಡೆದು ಸಂಪಾದನೆಗೆ ಮಾತ್ರ ಸೀಮಿತವಾಗಿದೆ. ಆದರೆ ನಿಜವಾದ ವಿದ್ಯೆ ನಮ್ಮಲ್ಲಿರುವ ಅಹಂಕಾರವನ್ನು ಅಳಿಸಿ ಅಜ್ಞಾನವನ್ನು ತೊಡೆದು ಮಾನವೀಯ ಮೌಲ್ಯಗಳನ್ನು ತುಂಬುವಂಥದ್ದು. ಮಾನವೀಯ ಮೌಲ್ಯಗಳನ್ನು ತುಂಬದೇ ಇರುವ ಶಿಕ್ಷಣ ಶಿಕ್ಷಣವೇ ಅಲ್ಲ.
ಶಿಕ್ಷಣಕ್ಕೆ ಬೇಕಾಗಿರುವಂಥದ್ದು ಚಾರಿತ್ರ್ಯ, ಸನ್ನಡತೆ, ಸದ್ಗುಣ. ಇವುಗಳಿಲ್ಲದ ಶಿಕ್ಷಣ ಅರ್ಥಹೀನ. ಬುದ್ಧಿ ವಿಕಾಸ ಆದ ಹಾಗೆ ಅನೇಕ ರೀತಿಯ ಕಾಮನೆಗಳಿಗೆ ಬಲಿಯಾಗಿ ದಾರಿತಪ್ಪುತ್ತಿದ್ದಾರೆ. ನಮ್ಮ ವಿದ್ಯಾರ್ಥಿಗಳು ಗುರುವನ್ನು ಮೀರಿಸುವ ರೀತಿಯಲ್ಲಿ ತಮ್ಮ ನೈತಿಕ, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಸ್ಥಿತಿಗತಿಗಳನ್ನು ಕಾಪಾಡಿಕೊಳ್ಳುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು. ಆಗ ಮಾತ್ರ ಸಮಾಜದಲ್ಲಿ ತಲೆಎತ್ತಿ ಬಾಳಲಿಕ್ಕೆ ಸಾಧ್ಯ.
ಇತ್ತೀಚಿನ ದಿನಮಾನಗಳಲ್ಲಿ ಕಾಲೇಜು ಅಂದರೆ ಭಯ ಪಡುವ ವಾತಾವರಣ ನಿರ್ಮಾಣ ಆಗಿದೆ. ರ‍್ಯಾಗಿಂಗ್ ಸಂಸ್ಕೃತಿ ಕೆಲವು ಕಾಲೇಜುಗಳಲ್ಲಿ ಏನೆಲ್ಲಾ ಅವಾಂತರಗಳನ್ನು ಸೃಷ್ಟಿ ಮಾಡಿದೆ. ರ‍್ಯಾಗಿಂಗ್ ಸಂಸ್ಕೃತಿ ನಮ್ಮದಲ್ಲ. ಇನ್ನೊಬ್ಬರನ್ನು ಗೌರವಿಸುವ ಸಂಸ್ಕೃತಿ ನಮ್ಮದಾಗಬೇಕು.
ವಿದ್ಯಾರ್ಥಿಗಳು ಕೀಳರಿಮೆಯಿಂದ ಹೊರಬಂದು ತಮ್ಮ ತಮ್ಮ ಪ್ರತಿಭೆಗಳನ್ನು ಅನಾವರಣ ಮಾಡಬೇಕು. ಎಲ್ಲರೂ ಆತ್ಮಬಲವನ್ನು ಬೆಳೆಸಿಕೊಂಡರೆ ಅಸಾಧ್ಯವೂ ಸಾಧ್ಯವಾಗುವುದು. ಕೇವಲ ಒಬ್ಬ ವ್ಯಕ್ತಿಯನ್ನು ಬೌದ್ಧಿಕವಾಗಿ ಅಳತೆ ಮಾಡದೇ ಎಲ್ಲ ಕ್ಷೇತ್ರಗಳಲ್ಲಿ ತಮ್ಮ ತಮ್ಮ ಪ್ರತಿಭೆಯನ್ನು ಅಭಿವ್ಯಕ್ತಗೊಳಿಸಬೇಕು.
ಮನುಷ್ಯ ಎಂದೂ ಅಹಂಕಾರದ ಮೊಟ್ಟೆಗಳಾಗಬಾರದು. ವಿನಯ ಮತ್ತು ವಿವೇಕ ಇದ್ದರೆ ಅಹಂಕಾರ ಜರ‍್ರೆಂದು ಜಾರುವುದು. ನಾನು ಎನ್ನುವ ಅಹಂಕಾರ ಎಲ್ಲ ಕಾರಣಗಳಿಂದ ಅಪಾಯಕಾರಿ. ಅಹಂಕಾರ ನಿರಶನ ಮಾಡಿಕೊಂಡಾಗ ವ್ಯಕ್ತಿತ್ವ ವಿಕಾಸವಾಗುವುದು. ಇವತ್ತೀಚಿನ ದಿನಗಳಲ್ಲಿ ಮೌಲ್ಯಗಳ ಅಧಃಪತನ ಎಲ್ಲ ಕ್ಷೇತ್ರಗಳಲ್ಲೂ ಆವರಿಸಿದೆ. ಎಲ್ಲ ಮೌಲ್ಯಗಳಿಗೆ ಅಪವಾದ ಎನ್ನುವಂತೆ ಎಲ್ಲ ಮೌಲ್ಯಗಳನ್ನ ಎತ್ತಿಹಿಡಿಯುತ್ತೇನೆ ಎನ್ನುವ ಸಂಕಲ್ಪ ಮಾಡಿಕೊಳ್ಳಬೇಕು.
ಎನ್ಎಸ್ಎಸ್ ಶಿಬಿರದ ಮೂಲ ಉದ್ದೇಶ ಯಾರಿಗೋ ಹೋಗಿ ಪಾಠ ಕಲಿಸೋದಲ್ಲ. ಆ ಪರಿಸರದಲ್ಲಿ ಹೋಗಿ ಪಾಠ ಕಲಿಯುವಂಥದ್ದು ಬಹಳಷ್ಟಿದೆ ಎನ್ನುವ ವಿದ್ಯಾರ್ಥಿ ಭಾವ ಬರಬೇಕು. ಯಾರೂ ಉಪದೇಶದ ಧೀರರಾಗದೇ ಕಾಯಕ ಶ್ರದ್ಧೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಸ್ವಾಮೀಜಿ ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿ ಕ್ಷೇತ್ರ ಶಿಕ್ಷಣಾಧಿಕಾರಿ ಸೈಯದ್ ಮೋಸಿನ್ ಮಾತನಾಡಿ, ಮಠದಲ್ಲಿ ವಿದ್ಯಾಭ್ಯಾಸ ಮಾಡುವುದರಿಂದ ಸಂಸ್ಕಾರ ದೊರೆಯುವುದು. ನಾನೂ ಸಿರಿಗೆರೆ ಮಠದಲ್ಲಿ ವಿದ್ಯಾಭ್ಯಾಸ ಮಾಡಿದ್ದರಿಂದಲೇ ನನಗೆ ಸಂಸ್ಕಾರ ಬಂದಿರುವುದು. ಓದಿಗಿಂತ ಸಂಸ್ಕಾರ ಮುಖ್ಯ. ಸಂಸ್ಕಾರ ಇದ್ದರೆ ನಿಮ್ಮನ್ನು ಎಲ್ಲಿಗೆ ಬೇಕಾದರೂ ಕರೆದುಕೊಂಡು ಹೋಗುವುದು.
ಸಾಣೇಹಳ್ಳಿಯನ್ನು ಯಾವುದೇ ದೃಷ್ಟಿಯಲ್ಲಿ ವಿಶ್ಲೇಷಣೆ ಮಾಡಿದರೂ ಸರ್ವಧರ್ಮ ಸಮನ್ವಯ ಹೊಂದಿದ ಮಠ. ಭಾವೈಕ್ಯತೆಯನ್ನು ಇವತ್ತಿನವರೆಗೂ ಸಾರುತ್ತಾ ಬಂದಿದೆ. ಇಂತಹ ತಾಲ್ಲೂಕಿನಲ್ಲಿ ನಾವಿರುವುದೇ ಪುಣ್ಯವಂತರು ಎಂದರು. ವೇದಿಕೆಯ ಮೇಲೆ ಎನ್‌ಎಸ್‌ಎಸ್ ಶಿಬಿರದ ಅಧಿಕಾರಿ ಡಾ. ಹರೀಶಕುಮಾರ, ಶಿಕ್ಷಕರ ತರಬೇತಿ ಸಂಸ್ಥೆಯ ಉಪನ್ಯಾಸಕ ಶಶಿಧರ ಬಿ.ಆರ್, ಅಶೋಕ ಬಿ. ಈ, ರಾಜಪ್ಪ, ಮುಖೋಪಾಧ್ಯಾಯರಾದ ಬಸವರಾಜ, ಶಿವಕುಮಾರ ಹಾಗೂ 50 ಜನ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.