[ಶ್ರಾವಣಮಾಸದ ನಿಮಿತ್ತ ನಾಡಿನಾದ್ಯಂತ ಪುರಾಣ ಪ್ರವಚನ ಕಾರ್ಯಕ್ರಮಗಳು ನಿತ್ಯ ನಿರಂತರ ನಡೆಯುತ್ತವೆ. ಈ ಹಿನ್ನೆಲೆಯಲ್ಲಿ ಚನ್ನಬಸವಣ್ಣನವರ ಜೀವನ ಮತ್ತು ಸಂದೇಶ ಕುರಿತು ಶ್ರಾವಣ ಮಾಸದ ಪರ್ಯಂತ ಕೆಲವು ಚಿಂತನೆಗಳನ್ನು ಪ್ರಕಟಿಸಬೇಕೆಂಬ ಆಶಯ ನನ್ನದು. ಈ ಹಿನ್ನೆಲೆಯಲ್ಲಿ ಮೊದಲ ಚಿಂತನವಿದು. ಓದಿ ಅಭಿಪ್ರಾಯ, ಸಲಹೆ-ಸೂಚನೆ-ಮಾರ್ಗದರ್ಶನ ಮಾಡಬೇಕೆಂದು ವಿನಂತಿಸುವೆ]
ಅನುಗೊಳಿಸಿದನು ಶೂನ್ಯಸಿಂಹಾ
ಸನವಿದೆಂದದಕಿಟ್ಟು ಹೆಸರನು
ವಿನುತ ಪಶ್ಚಿಮ ಮಾರ್ಗದಲಿ ತಾ ಕಂಡದೆಲ್ಲವನು
ಕನಕ ಮರಕತ ಮುಖ್ಯಮಣಿಗಳ
ಘನತರದ ಕೇವಣದಲಹರಿಯ
ವಿನುಗಿ ಮಿಸುಗುವ ವಿಮಲಪೀಠವ ಬಸವ ನಿರ್ಮಿಸಿದ
(ಪ್ರಭುಲಿಂಗಲೀಲೆ ಗತಿ ೧, ಪದ್ಯ ೯)
ಮಹಾಕವಿ ಚಾಮರಸನು ತನ್ನ ಪ್ರಭುಲಿಂಗಲೀಲೆಯಲ್ಲಿ ಬಸವಣ್ಣನವರು ಕಲ್ಯಾಣ ಪಟ್ಟಣದಲ್ಲಿ ಶೂನ್ಯಸಿಂಹಾಸನವನ್ನು ರಚಿಸಿದ ಸಂಗತಿಯನ್ನು ಅತ್ಯಂತ ಸ್ಪಷ್ಟವಾಗಿ ದಾಖಲಿಸಿದ್ದಾನೆ. ಯಾವುದೇ ಒಂದು ಧರ್ಮದ ಅಸ್ತಿತ್ವ ಮತ್ತು ಅಸ್ಮಿತೆಗಳನ್ನು ಗುರುತಿಸಲು ಬಹುತೇಕ ಧರ್ಮ ಪ್ರವರ್ತಕರು, ಪ್ರವಾದಿಗಳು ಆ ಧರ್ಮಕ್ಕೆ ಸಾಂಸ್ಥಿಕ ಸ್ವರೂಪವನ್ನು ನೀಡುತ್ತಾರೆ. ಸಾಂಸ್ಥೀಕರಣಗೊಂಡ ಪರಿಣಾಮವೇ ಭಾರತದಲ್ಲಿ ಹುಟ್ಟಿದ ಬಹುತೇಕ ಧರ್ಮಗಳು ಮಠ-ಆಶ್ರಮ-ಬಸದಿಗಳನ್ನು ನಿರ್ಮಿಸುವ ಕಾರ್ಯ ಮಾಡಿದವು. ಈ ಹಿನ್ನೆಲೆಯಲ್ಲಿ ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ ಧರ್ಮವೂ ಭವಿತವ್ಯದಲ್ಲಿ ಉಳಿಯಬೇಕಾದರೆ, ಅದಕ್ಕೊಂದು ಪೀಠದ ಅವಶ್ಯಕತೆ ಇದೆ ಎಂಬುದನ್ನು ಬಸವಣ್ಣನವರು ಮನಗಂಡು, ಶೂನ್ಯಸಿಂಹಾಸನ ಪೀಠವನ್ನು ರಚಿಸಿದರು. ತಾವೇ ರಚಿಸಿದ ಈ ಪೀಠಕ್ಕೆ ಯೋಗ್ಯ ವ್ಯಕ್ತಿಗಾಗಿ ಶೋಧಿಸತೊಡಗಿದರು. ಆಗಲೇ ಕಲ್ಯಾಣಪಟ್ಟಣದಲ್ಲಿ ಲಕ್ಷದಾ ಮೇಲೆ ತೊಂಬತ್ತಾರು ಸಾವಿರ ಜಂಗಮರಿದ್ದರು. ಅವರಲ್ಲಿ ಯಾರಾದರೊಬ್ಬರು ಈ ಪೀಠವನ್ನು ಏರುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು.
ಒಂದು ದಿನ ಆಕಸ್ಮಿಕವಾಗಿ ಅಲ್ಲಮಪ್ರಭು ದೇವರು ಕಲ್ಯಾಣಕ್ಕೆ ಬಂದು ಆ ಶೂನ್ಯಸಿಂಹಾಸನವನ್ನು ನಿರ್ದೇಹಿಯಾದುದರಿಂದ ಸಹಜವಾಗಿ ಏರು ಬಿಡುತ್ತಾರೆ. ಇದನ್ನು ಬಸವಣ್ಣನವರು ನೋಡಿ ಬೆಚ್ಚಿ ಬೆರಗಾಗುತ್ತಾರೆ. ಸಹಜವಾಗಿಯೇ ಬಸವಣ್ಣನವರಿಗೆ ಸಿಟ್ಟು ಬರುತ್ತದೆ. ತಾವು ಪ್ರೀತಿಯಿಂದ ಸಿದ್ಧಪಡಿಸಿದ ಶೂನ್ಯಸಿಂಹಾಸನದ ಮೇಲೆ ಯಾರೋ ಗೊತ್ತಿಲ್ಲದ ವ್ಯಕ್ತಿ ತಟ್ಟನೆ ಏರಿ ಕುಳಿತುಕೊಂಡಾಗ ಚನ್ನಬಸವಣ್ಣನವರನ್ನು ಕರೆದು ಬಸವಣ್ಣನವರು ಹೇಳಿದ ವಚನ ಹೀಗಿದೆ :
ಬಡಗವಾಗಿಲ ಪೌಳಿಯ ಭರವಸದಿಂ ಪೊಕ್ಕು,
ಪಶ್ಚಿಮದ್ವಾರದ ಧವಳಾರಮಂ ಪಶ್ಚಿಮದಿ ಪೊಕ್ಕು,
ತ್ರಿವಿಧಗತಿಯ ಶೂನ್ಯಸಿಂಹಾಸನದ ಮೇಲೆ ತರಹರವಾದಡೆ
ನಂಬುವುದೆನ್ನ ಮನವು. ಕೂಡಲಸಂಗಮದೇವರು ಸಾಕ್ಷಿಯಾಗಿ.
ನೀನು ನಮ್ಮ ಕೋಪಿಸಿದಡೆ ಕೋಪಿಸು, ಚೆನ್ನಬಸವಣ್ಣಾ.
ಆದರೆ ಆರೋಗಣೆಗಾಗಿ ಬಂದಿದ್ದ ಜಂಗಮ ಸಮೂಹವೆಲ್ಲವೂ ಸಂತಾಪಗೊಂಡು ಬಸವಾಲಯದಿಂದ ಹಿಂದಿರುಗಿ ಹೋಗಿ ಬಿಡುತ್ತದೆ. ಆಗ ಮಹಾಮನೆಯಲ್ಲಿ ಆ ಜಂಗಮರಿಗೆಲ್ಲ ಸಿದ್ಧಪಡಿಸಿದ ಭಕ್ಷ್ಯಭೋಜ್ಯಗಳೆಲ್ಲವನ್ನು ಏನು ಮಾಡಬೇಕೆಂದು ಚಿಂತಿಸುತ್ತಿರುವಾಗಲೇ ಅಲ್ಲಮಪ್ರಭುದೇವರು ಆ ಎಲ್ಲ ಭಕ್ಷ್ಯಭೋಜ್ಯಗಳನ್ನು ತಾವೊಬ್ಬರೆ ಸೇವಿಸುತ್ತಾರೆ. ಮಹಾಮನೆಯ ದಾಸೋಹದಲ್ಲಿದ್ದ ಅಡುಗೆಯೆಲ್ಲ ಖಾಲಿಯಾದಾಗ ಅಲ್ಲಮರು ಇನ್ನಷ್ಟು ಬೇಕು ಎನ್ನುತ್ತಾರೆ.
ಉಳ್ಳವರು ಹಗೆಹ ತೆಗೆವನ್ನಕ್ಕರ,
ಇಲ್ಲದವರ ಹರಣ ಹೋಯಿತ್ತೆಂಬ ಗಾದೆ ಎನಗಾಯಿತ್ತು.
ಮಾತು ಬಣ್ಣಿಸಲು ಹೊತ್ತು ಹೋಯಿತ್ತಯ್ಯಾ.
ನಿನಗೆ ಅದೆ, ಹರಿನುಡಿಗೆ ಕಡೆಯಿಲ್ಲ.
ಒಬ್ಬರ ನೋಡುವಾಗ, ಅರುವತ್ತು ಮನುಷ್ಯರ
ನೋಡುವ ಹಾಂಗೆ ಆಗುತ್ತಿದೆ.
ಶೂನ್ಯಸಿಂಹಾಸನ ಬವರಿಗೊಡುತ್ತಿದೆ.
ಪ್ರಾಣ ಹೆಡೆತಲೆಯಲ್ಲಿ ಹೋಗುತ್ತಿದೆ.
ಗುಹೇಶ್ವರ ಹಸಿದನು, ಪದಾರ್ಥವ
ನೀಡಯ್ಯಾ ಸಂಗನಬಸವಣ್ಣಾ.
ಅಲ್ಲಮಪ್ರಭುದೇವರು ಶೂನ್ಯಸಿಂಹಾಸನದ ಉಲ್ಲೇಖವನ್ನು ಈ ವಚನದಲ್ಲಿ ಮಾಡುವ ಮೂಲಕ ಅದರ ಐತಿಹಾಸಿಕತೆಗೆ ದಾಖಲೆ ಒದಗಿಸಿದ್ದಾರೆ. ಈಗ ಹೊಟ್ಟೆ ಹಸಿಯುತ್ತಿದೆ, ಪದಾರ್ಥ ನೀಡು ಎಂದು ಮತ್ತೆ ಮತ್ತೆ ಪ್ರಭುದೇವರು ಕೇಳುತ್ತಾರೆ. ಆಗ ಬಸವಣ್ಣನವರು ಏನು ಮಾಡಬೇಕೆಂದು ತೋಚದೆ ನಿಂತಾಗ, ಅಲ್ಲಿಗೆ ಚನ್ನಬಸವಣ್ಣನವರು ಬಂದು ಮಾವನಿಗೆ ಬುದ್ಧಿ ಹೇಳುತ್ತಾರೆ. ‘ನಾನು ನಿತ್ಯ ಲಕ್ಷದಾ ಮೇಲೆ ತೊಂಬತ್ತಾರು ಸಾವಿರ ಜಂಗಮರಿಗೆ ಆರೋಗಣೆ ಮಾಡುತ್ತಿರುವೆ ಎಂಬ ಅಹಂಕಾರ ನಿನ್ನಲ್ಲಿ ಮೊಳೆದಿರುವುದರಿಂದ ಅಲ್ಲಮರು ನಿನ್ನನ್ನು ಪರೀಕ್ಷಿಸುತ್ತಿದ್ದಾರೆ. ನಿನ್ನ ಅಹಂಕಾರ ತ್ಯಾಗ ಮಾಡಿ, ಅವರಿಗೆ ಅರ್ಪಿಸಿಕೋ’ ಎಂದು ಚನ್ನಬಸವಣ್ಣನವರು ಹೇಳಿದಾಗ, ಬಸವಣ್ಣನವರು ಅಲ್ಲಮರ ಸನ್ನಿಧಿಗೆ ಹೋಗಿ ತಮ್ಮನ್ನೇ ಸಮರ್ಪಿಸಿಕೊಳ್ಳುತ್ತಾರೆ. ಆಗ ಅಲ್ಲಮಪ್ರಭುದೇವರು ಮಹಾತೃಪ್ತಿ ಆಯಿತ್ತೆಂದು ಸಂತೋಷದಿಂದ ಹೇಳುತ್ತಾರೆ. ಹೀಗೆ ಅಲ್ಲಮರು ಸ್ವೀಕರಿಸಿದ ಈ ಭೋಜನದ ಪರಿಣಾಮವಾಗಿ ಕಲ್ಯಾಣಪಟ್ಟಣದಲ್ಲಿದ್ದ ಎಲ್ಲ ಜಂಗಮರಿಗೂ ತೃಪ್ತಿ ಆಗುತ್ತದೆ.
ಬಸವಣ್ಣನವರು ತಾವೊಂದು ಶೂನ್ಯಸಿಂಹಾಸನ ಪೀಠವನ್ನು ರಚನೆ ಮಾಡಿದ್ದೇವೆ. ಅದರ ಅಧ್ಯಕ್ಷರು ತಾವೇ ಆಗಬೇಕೆಂದು ಮತ್ತೊಮ್ಮೆ ಅಲ್ಲಮರಲ್ಲಿ ವಿನಂತಿಸಿಕೊಳ್ಳುತ್ತಾರೆ. ಆಗ ಅಲ್ಲಮಪ್ರಭುದೇವರು ‘ಇಲ್ಲ ನಾನೀಗ ಲೋಕಸಂಚಾರಕ್ಕೆ ಹೊರಟಿರುವೆ. ನಾನು ಬರುವವರೆಗೂ ಚನ್ನಬಸವರಾಜದೇವರಿಂದ ಷಟ್ಸ್ಥಲ ಸಿದ್ಧಾಂತ, ಶಿವಾನುಭವಶಾಸ್ತ್ರವನ್ನು ಅರಿತುಕೊಂಡು ನಿತ್ಯಮುಕ್ತರಾಗಿ’ ಎಂದು ಹೇಳಿ ಹೋಗಿ ಬಿಡುತ್ತಾರೆ. ಹೀಗೆ ಹೋದ ಅಲ್ಲಮರು ಮರಳಿ ಕಲ್ಯಾಣಕ್ಕೆ ಬರುವುದು ೧೨ ವರುಷಗಳ ತರುವಾಯ. ಚೋಳದೇಶದ ಕಂಚಿ ಕಾಳಹಸ್ತಿ, ಚಿದಂಬರ, ತಿರುವಣ್ಣಾಮಲೈ, ಅರುಣಾಚಲ, ಶ್ರೀಶೈಲ ಮೊದಲಾದ ಕಡೆ ಸಂಚರಿಸಿ, ಮರಳಿ ಕಲ್ಯಾಣಕ್ಕೆ ದಯಮಾಡಿಸುತ್ತಾರೆ.
ಇಷ್ಟು ದೀರ್ಘ ವರ್ಷಗಳ ನಂತರ ಮರಳಿ ಬಂದ ಅಲ್ಲಮಪ್ರಭುದೇವರು ಶೂನ್ಯಪೀಠ ಏರುವುದನ್ನು ಆಗಲೂ ಅಲ್ಲಿದ್ದ ಜಂಗಮ ಸಮೂಹ ವಿರೋಧ ಮಾಡುತ್ತದೆ. ಹೀಗಿದ್ದೂ ಬಸವಣ್ಣನವರು ಅಲ್ಲಮರ ಮೇಲಿನ ನಿಷ್ಠೆಯಿಂದ ಅವರನ್ನೇ ಶೂನ್ಯಪೀಠದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುತ್ತಾರೆ.
ಪ್ರಭುದೇವರು ಶೂನ್ಯಪೀಠದ ಅಧ್ಯಕ್ಷರಾಗಿ ಕೆಲವು ಕಾಲ ಕಲ್ಯಾಣದಲ್ಲಿದ್ದು, ನಂತರ ಕಲ್ಯಾಣದಲ್ಲಿ ಸಂಭವಿಸಬಹುದಾದ ಆಪತ್ತುಗಳನ್ನು ಗುರುತಿಸಿ, ಶೂನ್ಯಪೀಠದ ಅಧ್ಯಕ್ಷತೆಯನ್ನು ತ್ಯಾಗ ಮಾಡಿ, ಈ ಪೀಠಕ್ಕೆ ಚನ್ನಬಸವಣ್ಣನವರು ನನ್ನ ಉತ್ತರಾಧಿಕಾರಿ ಗಳಾಗಿ ಆಯ್ಕೆ ಆಗಲಿ ಎಂದು ಹಾರೈಸಿ, ಚನ್ನಬಸವಣ್ಣನವರಿಗೆ ಸುವರ್ಣ ಶೂನ್ಯಸಿಂಹಾಸನ, ಪ್ರಣವ ಶಿಖಾಶೈಲ, ಶಿವಾನುಭವ ಪುಸ್ತಕಗಳನ್ನು ಕೊಟ್ಟು ಆಶೀವರ್ದಿಸಿ, ಶ್ರೀಶೈಲದ ಕಡೆ ಪಯಣಿಸುತ್ತಾರೆ.
ಭವಿತವ್ಯದಲ್ಲಿ ಕಲ್ಯಾಣ ಪಟ್ಟಣ ಹಾಳಾಗುವುದನ್ನು ಗುರುತಿಸಿದ ಪ್ರಭುದೇವರು ಎಲ್ಲ ಗಣಂಗಳನ್ನು ಕರೆದು ಹೀಗೆ ಹೇಳುತ್ತಾರೆ:
ಅವಧಿ ಅಳಿಯಿತ್ತು ವ್ಯವಧಾನ ಉಳಿಯಿತ್ತು.
ನಿಜವೆ ನಿಜವನೊಡಗೂಡಿತ್ತು ಕೇಳಾ ಬಸವಣ್ಣ.
ಕಲಿಯುಗದಲ್ಲಿ ಮುಂದೆ ಇರಬಾರದು
ನಿಜ ಶರಣಂಗೆ ನಡೆ ನೀನು ಕಪ್ಪಡಿಯ ಸಂಗಯ್ಯನಲ್ಲಿ ಒಡಗೂಡು.
ಉಳುಮೆಯಲ್ಲಿ ನಿಜವನೆಯ್ದು ನಡೆ ಚೆನ್ನಬಸವಣ್ಣಾ.
ಮಹವನೊಡಗೂಡು ಮಡಿವಾಳಯ್ಯ.
ಸೊಡ್ಡಳ ಬಾಚರಸರು ಮೊದಲಾದ ಪ್ರಮಥರೆಲ್ಲರು
ನಿಜವನೆಯ್ದುವುದು ನಿರ್ವಯಲ ಸಮಾಧಿಯಲ್ಲಿ.
ಬಗಿದು ಹೋಗಿ ಲಿಂಗದೊಳಗೆ ಹೊಗುವರೆಲ್ಲರೂ!
ನಡೆಯಿರಿ ಕಾಯವೆರಸಿ ಕೈಲಾಸಕ್ಕೆ ಕಾಯಸಹಿತ ಎಯ್ದುವುದು.
ನಿಮಗೆಲ್ಲರಿಗೆಯೂ ಉಪದೇಶಮಂತ್ರ ತಪ್ಪದು.
ನಮಗೆ ಕದಳಿಯಲ್ಲಿ ಹೊಕ್ಕು ನಿಜದಲ್ಲಿ ಒಡಗೂಡುವ ಪರಿಣಾಮ.
ಇದು ನಮ್ಮ ಗುಹೇಶ್ವರಲಿಂಗದ ಅಣತಿ ನಿಮಗೆಲ್ಲರಿಗೆಯೂ.
ಚನ್ನಬಸವಣ್ಣನವರು ಕಲ್ಯಾಣಪಟ್ಟಣದಲ್ಲಿ ಅಸ್ತಿತ್ವಕ್ಕೆ ಬಂದ ಶೂನ್ಯಪೀಠದ ಎರಡನೆಯ ಅಧಿಪತಿಗಳಾಗಿ ಆಯ್ಕೆಯಾಗುತ್ತಾರೆ. ಚನ್ನಬಸವಣ್ಣನವರು ಪೀಠದ ಕರ್ಣಧಾರತ್ವವನ್ನು ವಹಿಸಿಕೊಂಡ ತರುವಾಯ ನಿತ್ಯ ೧೨ ಸಾವಿರ ಷಟ್ಸ್ಥಲ ಮುಮುಕ್ಷುಗಳಿಗೆ ಶಿವಾನುಭವ ಶಾಸ್ತ್ರಬೋಧನೆಯನ್ನು ಮಾಡುತ್ತಾರೆ. ವಚನ ರಚನೆ ನಿರಂತರವಾಗಿ ನಡೆಯುತ್ತದೆ. ಹೀಗೆ ಶರಣರೆಲ್ಲ ಬರೆದ ವಚನಗಳನ್ನೆಲ್ಲ ಶಾಂತರಸ ಎಂಬ ಗ್ರಂಥಭಂಡಾರಿ ತನ್ನ ವಚನ ಭಂಡಾರಕ್ಕೆ ಸೇರಿಸುತ್ತ ಹೋಗುತ್ತಾರೆ.
ಶೂನ್ಯಪೀಠದ ಅಧಿಪತಿಯಾಗಿದ್ದ ಚನ್ನಬಸವಣ್ಣನವರಿಗೆ ಲೌಕಿಕ ಜವಾಬ್ದಾರಿ ಯೊಂದನ್ನು ವಹಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಕಲ್ಯಾಣಪಟ್ಟಣದಲ್ಲಿ ಮಹತ್ವದ ಉತ್ಪಾತವೊಂದು ಜರುಗುವುದೆಂದು ಬಸವಣ್ಣನವರು ತಮ್ಮ ದಿವ್ಯಜ್ಞಾನದಿಂದ ಅರಿತುಕೊಂಡು ಪ್ರಧಾನಮಂತ್ರಿ (ದಣ್ಣಾಯಕ) ಹುದ್ದೆಯನ್ನು ತ್ಯಾಗ ಮಾಡಿ ಕೂಡಲಸಂಗಮಕ್ಕೆ ಹೋಗುತ್ತಾರೆ. ಹೀಗೆ ಆಕಸ್ಮಿಕವಾಗಿ ತೆರವಾದ ದಣ್ಣಾಯಕ ಹುದ್ದೆಗೆ ಬಿಜ್ಜಳ ರಾಜನು ಚನ್ನಬಸವಣ್ಣನವರನ್ನೇ ಆಯ್ಕೆ ಮಾಡುತ್ತಾನೆ. ಹೀಗಾಗಿ ಶೂನ್ಯಪೀಠದ ಜವಾಬ್ದಾರಿಯ ಜೊತೆಗೆ ಈ ಪ್ರಧಾನ ಮಂತ್ರಿ ಹುದ್ದೆಯನ್ನು ನಿರ್ವಹಿಸುವ ಒಂದು ಪ್ರಸಂಗ ಎಳೆಯ ವಯಸ್ಸಿನ ಚನ್ನಬಸವಣ್ಣನವರಿಗೆ ಒದಗಿ ಬರುತ್ತದೆ. ಹೀಗಾಗಿ ಕಲ್ಯಾಣದ ಜನರೆಲ್ಲ ಚನ್ನಬಸವಣ್ಣನವರನ್ನು ಚಿಕ್ಕದಣ್ಣಾಯಕರು ಎಂದು ಗೌರವದಿಂದ ಸಂಬೋಧಿಸುತ್ತಾರೆ.
ಪ್ರಧಾನಮಂತ್ರಿ ಪಟ್ಟಕ್ಕೆ ಚನ್ನಬಸವಣ್ಣನವರೇ ಅಧಿಪತಿಗಳಾಗಿ ಕಲ್ಯಾಣ ನಗರಿಯಲ್ಲಿ ಇರುವ ಗಣ ಸಮೂಹಕ್ಕೆ ಜಗದ್ಗುರುಗಳಾದ ಅಲ್ಲಮಪ್ರಭು ಸ್ವಾಮಿಗಳವರ ಶೂನ್ಯಸಿಂಹಾಸನಕ್ಕೆ ಕಾರಣಕರ್ತರಾಗಿ ಗುರುಲಿಂಗ ಜಂಗಮದ ದಾಸೋಹಕ್ಕೆ ದಿನನಿತ್ಯ ತೃಪ್ತಿಪಡಿಸಿ ಬೇಡಿದ ಇಷ್ಟಾರ್ಥಗಳನ್ನು ಕೊಡುವ ಶಕ್ತಿಯುಳ್ಳವರಾಗಿ ೭೨ ಬಿರುದಾವಳಿಗಳಿಂದ ಉತ್ಸವಗೊಳ್ಳುತ್ತ ಪ್ರಧಾನತ್ವದಿಂದ ರಾಜ್ಯಕಾರ್ಯವನ್ನು ನಿರ್ವಹಿಸುತ್ತಾರೆ. ಚನ್ನಬಸವಣ್ಣನವರು ಶೂನ್ಯಪೀಠದ ಮೇಲೆ ಕುಳಿತುಕೊಂಡು ಹೇಗೆಲ್ಲ ನಿರ್ವಹಣೆ ಮಾಡುತ್ತಿದ್ದರು ಎಂಬುದನ್ನು ವಚನವೊಂದು ನಮಗೆ ಅತ್ಯಂತ ಸುಂದರವಾಗಿ ವಿವರಿಸುತ್ತದೆ. ಆ ವಚನ ಹೀಗಿದೆ:
ಅಯ್ಯ, ಇಂತು ಕಲ್ಯಾಣಪಟ್ಟಣದ ಅನುಭಾವಮಂಟಪದ
ಶೂನ್ಯಸಿಂಹಾಸನದಲ್ಲಿ ಪ್ರಭುಸ್ವಾಮಿಗಳು
ಬಸವರಾಜೇಂದ್ರ ಮುಖ್ಯವಾದ ಸಕಲಪ್ರಮಥಗಣಂಗಳು ಕೂಡಿ,
ಚಿಕ್ಕದಂಡನಾಯಕ ಮುಖವಚನದಿಂದೆ
ಶಿವಯೋಗಿ ಸಿದ್ಧರಾಮೇಶ್ವರನ ಉಪದೇಶಕಾರಣಾರ್ಥವಾಗಿ,
ನವರತ್ನ ಖಚಿತ ಮಂಟಪವ ರಚಿಸಿ,
ಶುಚಿ, ರುಚಿ, ಪರುಷ, ನಿಜ, ಸದ್ಭಕ್ತಿ, ಜ್ಞಾನ, ವೈರಾಗ್ಯ,
ಸತ್ಕ್ರಿಯಾಚಾರ ಷಟ್ಸ್ಥಲಮಾರ್ಗವ
ಚೆನ್ನಬಸವಣ್ಣನ ಮುಖವಚನದಿಂದೆ ಸಿದ್ಧರಾಮದೇಶಿಕೇಂದ್ರನಿಗೆ
ಬೋಧಿಸಿದ ನಿಲುಕಡೆಯ ಸೂತ್ರವದೆಂತೆಂದಡೆ …….
ಈ ವಚನದ ಪ್ರಕಾರ ಅನುಭವ ಮಂಟಪ ಮತ್ತು ಶೂನ್ಯಸಿಂಹಾಸನ ಎರಡೂ ಅಸ್ತಿತ್ವದಲ್ಲಿದ್ದವು ಎಂಬುದನ್ನು ಗುರುತಿಸಬಹುದು. ಇಂತಹ ಸಂದರ್ಭದಲ್ಲಿ ಬಿಜ್ಜಳನಲ್ಲಿ ಶರಣರ ಬಗ್ಗೆ ಚಾಡಿ ಹೇಳಿದ ಕೆಲವರು, ಹರಳಯ್ಯ ಮಧುವಯ್ಯಗಳಿಗೆ ಎಳೆಹೂಟೆ ಶಿಕ್ಷೆ ನೀಡುವಂತೆ ಪ್ರಚೋದಿಸುತ್ತಾರೆ. ಇಂತಹ ಆಘಾತವಾದ ಸುದ್ದಿಯನ್ನು ಕೇಳಿದ ತಕ್ಷಣ ಚನ್ನಬಸವಣ್ಣನವರು ತಕ್ಷಣ ಎಲ್ಲ ಶರಣ ಸಮೂಹವನ್ನು ಅನುಭವ ಮಂಟಪಕ್ಕೆ ಕರೆಯಿಸಿಕೊಂಡು ಸಮಾಲೋಚನೆ ಮಾಡುತ್ತಾರೆ. ಶರಣರಿಗೆ ಆಪತ್ತು ಬರುವ ಮುನ್ಸೂಚನೆ ಇದೆ. ತಾವೆಲ್ಲ ಸಿದ್ಧರಾಗಿ ಎಂದು ಅಪ್ಪಣೆ ಕೊಡುತ್ತಾರೆ. ಆಗ ಕಲ್ಯಾಣದಲ್ಲಿದ್ದ ಹಿರಿಯರಲ್ಲಿ ಸಿದ್ಧರಾಮೇಶ್ವರರು, ರುದ್ರಮುನಿಗಳಿಗೆ ಈ ಸಿದ್ಧತೆಯ ಜವಾಬ್ದಾರಿ ವಹಿಸುತ್ತಾರೆ.
ಆಗ ದಿಲ್ಲಿಯನ್ನು ೧೨ ಸಾವಿರ ದಂಡಿನೊಂದಿಗೆ ಆಳುತ್ತಿದ್ದ ಮಲ್ಲುಖಾನನೆಂಬ ವಜೀರನನ್ನು ಕರೆಯಿಸಿ ತಮ್ಮ ಗುರುಗಳಾದ ಅಲ್ಲಮಪ್ರಭುದೇವರು ತಮಗೆ ಕೊಟ್ಟಿದ್ದ ಸುವರ್ಣ ಶೂನ್ಯಸಿಂಹಾಸನ, ಪ್ರಣವ, ಶಿಖಾಶೈಲ ಈ ಮೂರು ವಸ್ತುಗಳನ್ನು ಕೊಟ್ಟು ಇವುಗಳನ್ನು ದಿಲ್ಲಿಗೆ ತೆಗೆದುಕೊಂಡು ಹೋಗಿ ರಕ್ಷಣೆ ಮಾಡಿ ಎಂದು ಹೇಳುತ್ತಾರೆ. ಇನ್ನು ಮುಂದೆ ನೀನು ದಿಲ್ಲಿಯ ದೊರೆಯಾಗಿ ಆಳುವ ಯೋಗವಿದೆ. ಆ ಸಂದರ್ಭದಲ್ಲಿ ಕರ್ನಾಟಕದಿಂದ ಇಬ್ಬರು ಗಣಂಗಳು ನಿನ್ನ ಅರಮನೆಗೆ ಬರುತ್ತಾರೆ. ಆಗ ನಿನ್ನ ಅರಮನೆಯಲ್ಲಿ ಎರಡು ಸತ್ತ ಆನೆಗಳಿಗೆ ಜೀವ ನೀಡುತ್ತಾರೆ. ಅವರ ಕೈಯಲ್ಲಿ ಈ ಮೂರು ವಸ್ತುಗಳನ್ನು ನೀಡು. ಈಗ ನಮಗೆ ಬಿಜ್ಜಳನ ಸೈನಿಕರಿಂದ ತುಂಬ ತೊಂದರೆಯಿದೆ. ಅದಕ್ಕಾಗಿ ಗೋವೆಯ ಕಂದಬರ ರಾಜ್ಯದ ಗಡಿ ಅಂದರೆ ಉಳವಿಯವರೆಗೆ ನಮ್ಮ ಶರಣ ಸಮೂಹಕ್ಕೆ ರಕ್ಷಣೆ ನೀಡು’ ಎಂದು ಅಪ್ಪಣೆ ಕೊಡುತ್ತಾರೆ.
ಶೂನ್ಯಪೀಠದ ಮೂರು ಮುಖ್ಯ ವಸ್ತುಗಳನ್ನೇ ದಿಲ್ಲಿ ವಜೀರನಿಗೆ ಕೊಟ್ಟ ಚನ್ನಬಸವಣ್ಣನವರು ಈ ಶೂನ್ಯಪೀಠದ ಪರಂಪರೆ ನಿರಂತರವಾಗಿ ಮುಂದುವರೆಯಬೇಕು ಎಂದು ಆಶಿಸುತ್ತ, ತಾವೇ ಲಿಂಗದೀಕ್ಷೆ ನೀಡಿದ ಸಿದ್ಧರಾಮೇಶ್ವರರನ್ನು ಸಮೀಪ ಕರೆದು, ‘ನೀವು ನಿಮ್ಮ ಸ್ನೇಹ ವರ್ತುಲದಲ್ಲಿರುವ ಚನ್ನಂಜಯ್ಯ, ಕೋಲು ಶಾಂತಯ್ಯ, ಕುದುರೆ ಶಾಂತಯ್ಯ, ಪಂಚದ ಶಾಂತಯ್ಯ ಮುಂತಾದ ಮೂರು ಸಾವಿರ ವಿರಕ್ತರಿಗೆ ಗುರುಗಳಾಗಿರಿ’ ಎಂದು ಆಜ್ಞಾಪಿಸಿ ತಮ್ಮ ಶಿವಾನುಭವ ಚರಂತಿಗೆ ಪುಸ್ತಕವನ್ನು ಕೊಟ್ಟು ಆಶೀರ್ವದಿಸುತ್ತಾರೆ. ಹೀಗೆ ಚನ್ನಬಸವಣ್ಣನವರು ನಿರ್ಲಿಪ್ತ, ನಿರಪೇಕ್ಷ ಭಾವದಿಂದ ತಮ್ಮ ಅಧಿಕಾರವನ್ನು ಸಿದ್ಧರಾಮೇಶ್ವರರಿಗೆ ವಹಿಸಿಕೊಟ್ಟು, ಉಳವಿಯತ್ತ ಪಯಣ ಮಾಡಿದರೆಂದು ತಿಳಿದು ಬರುತ್ತದೆ.
ಎನ್ನ ಮನದಲ್ಲಿ ಇದೇ ಪಥವಯ್ಯಾ ಬೆರಸುವಡೆ;
ಪ್ರಾಣದ ಮಥನಭಾವ ನಟ್ಟು ತನುಸ್ಥಿತಿ ಮರೆದು,
ಭ್ರಾಂತು ಸೂತಕವೆಲ್ಲಾ [ನಿವಾ]ರಿಸಿ ಹೋದವು
ಶೂನ್ಯಸಿಂಹಾಸನದ ಮೇಲೆ
ಕೂಡಲಚೆನ್ನಸಂಗಾ ನಿಮ್ಮ ಶರಣನ ಪ್ರಭೆಯಿಂದ.
ಚನ್ನಬಸವಣ್ಣನವರು ತಾವು ಶೂನ್ಯಸಿಂಹಾಸನವನ್ನು ಏರಿದ ಘಟನೆಯನ್ನು ತಮ್ಮ ಮೇಲಿನ ವಚನವೊಂದರಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ಇದೊಂದು ಐತಿಹಾಸಿಕ ವಚನವೆಂದೇ ಹೇಳಬೇಕು.
ಈ ಶೂನ್ಯಸಿಂಹಾಸನವನ್ನು ಸಿದ್ಧರಾಮೇಶ್ವರರು ಸೊನ್ನಲಾಪುರಕ್ಕೆ ತೆಗೆದುಕೊಂಡು ಹೋದರು. ಮುಂದೆ ಶೂನ್ಯಸಿಂಹಾಸನ ಪರಂಪರೆಯು ‘ಪ್ರಭು ಸಂಪ್ರದಾಯ’ವೆಂದು ಮುಂದುವರಿಯಿತು. ಅದನ್ನೇ ಚಾಮರಸ ತನ್ನ ಪ್ರಭುಲಿಂಗಲೀಲೆಯಲ್ಲಿ ‘ಅಲ್ಲಮಪ್ರಭು ಸಂಪ್ರದಾಯದ ಸಲ್ಲಲಿತ ಸನ್ಮಾರ್ಗ’ವೆಂದು ಹೇಳುತ್ತಾನೆ. ಈ ಮಾರ್ಗ ಕ್ರಮಣದಲ್ಲಿ ಕಲ್ಯಾಣದಲ್ಲಿ ನಡೆದ ವಿಪ್ಲವ ಕಾರಣವಾಗಿ ಈ ಶೂನ್ಯಸಿಂಹಾಸನ ಒಂದು ರೀತಿಯಲ್ಲಿ ನೇಪಥ್ಯಕ್ಕೆ ಸೇರುತ್ತದೆ. ಆದರೆ ಈ ಪರಂಪರೆಯನ್ನು ನಿರಂಜನ ವಂಶರತ್ನಾಕರ ಹೀಗೆ ಹೇಳುತ್ತದೆ:
೧. ಅಲ್ಲಮಪ್ರಭು, ೨. ಚನ್ನಬಸವಣ್ಣ, ೩. ಸಿದ್ಧರಾಮೇಶ್ವರ, ೪. ಅನಾದಿ ಗಣನಾಥ, ೫. ಆದಿಗಣೇಶ್ವರ, ೬. ನಿರ್ಮಾಯ ಗಣೇಶ್ವರ, ೭. ನಿರಂಜನಸ್ವಾಮಿ, ೮. ಜ್ಞಾನಾನಂದ ಸ್ವಾಮಿ, ೯. ಆತ್ಮಗಣವರ, ೧೦. ಅಧ್ಯಾತ್ಮ ಗಣನಾಥ, ೧೧. ರುದ್ರಮುನಿಸ್ವಾಮಿ, ೧೨. ಬಸವಪ್ರಭು, ೧೩. ಆದಿಲಿಂಗಸ್ವಾಮಿ, ೧೪. ಚನ್ನವೀರ ಸ್ವಾಮಿ, ೧೫. ಗೋಸಲ ಸಿದ್ಧೇಶ್ವರ, ೧೬. ಶಂಕರಾಚಾರ್ಯ ಸ್ವಾಮಿ, ೧೭. ದಿವ್ಯಲಿಂಗೇಶ್ವರಸ್ವಾಮಿ, ೧೮. ಗೋಸಲ ಚನ್ನಬಸವೇಶ್ವರ, ೧೯. ತೋಂಟದ ಸಿದ್ಧಲಿಂಗೇಶ್ವರ ಹೀಗೆ ಪರಂಪರೆ ಮುಂದುವರೆಯುತ್ತದೆ.
ಇಲ್ಲಿ ಬರುವ ಅನಾದಿ ಗಣನಾಥರಿಂದ ಅಧ್ಯಾತ್ಮ ಗಣನಾಥ ವರೆಗಿನ ಹೆಸರುಗಳು ಬಗ್ಗೆ ಸಂಶೋಧಕರಿಗೆ ಸಂದೇಹವಿದೆ. ಏನೇ ಇರಲಿ, ಕಲ್ಯಾಣ ಕ್ರಾಂತಿಯ ತರುವಾಯ ಶೂನ್ಯಪೀಠ ಒಂದು ನೆಲೆಯಿಲ್ಲದೆ ಅಲ್ಲಲ್ಲಿ ತಿರುಗಾಡಿತು ಎಂಬುದು ಸತ್ಯ. ನಂತರ ೧೯ನೇ ಪೀಠಾಧಿಪತಿಯಾದ ತೋಂಟದ ಸಿದ್ಧಲಿಂಗೇಶ್ವರರು ಈ ಶೂನ್ಯಪೀಠಕ್ಕೊಂದು ಘನತೆ ಗೌರವ ತಂದುಕೊಟ್ಟರು. ಅಂತೆಯೆ ಅವರನ್ನು ದ್ವಿತೀಯ ಅಲ್ಲಮ ಎಂದು ಕರೆದರು. ಏಳು ನೂರೊಂದು ವಿರಕ್ತರ ಪಡೆಯನ್ನೇ ತೋಂಟದ ಸಿದ್ಧಲಿಂಗರು ನಿರ್ಮಾಣ ಮಾಡಿದರು. ತಮ್ಮ ಪ್ರೀತಿಯ ಶಿಷ್ಯ ಬೋಳಬಸವೇಶ್ವರ ದೇವರಿಗೆ ಶೂನ್ಯಪೀಠವನ್ನು ಒಪ್ಪಿಸಿ ನಿರ್ವಿಕಲ್ಪ ಸಮಾಧಿಸ್ಥರಾದರು.
ಬೋಳಬಸವೇಶ್ವರರ ತರುವಾಯ ಗೂಳೂರು ಸಿದ್ಧವೀರಣ್ಣೊಡೆಯರು, ಉದ್ದನಾರ್ಯರು, ಹರಿಹರಸ್ವಾಮಿ, ಭಿಕ್ಷದ ಬಸವಲಿಂಗ ಸ್ವಾಮಿ, ಅರ್ಧನಾರೀಶ್ವರ ಸ್ವಾಮಿ, ಈಸೂರು ನಂದೀಶ್ವರಸ್ವಾಮಿ, ಉಗ್ಗದ ತೋಂಟದಾರ್ಯ, ಸದಾಶಿವದೇಶಿಕ, ಮಹಾಂತಸ್ವಾಮಿ, ತೋಂಟದ ಮಹಾಸ್ವಾಮಿ, ಮೃತ್ಯುಂಜಯ ಸ್ವಾಮಿ, ಸಿದ್ಧೇಶ್ವರ ಸ್ವಾಮಿ, ತೋಂಟದ ಸಿದ್ಧಲಿಂಗ ಸ್ವಾಮಿಗಳು, ತೋಂಟದ ಸಿದ್ಧರಾಮ ಸ್ವಾಮಿಗಳು ಹೀಗೆ ಗದುಗಿನ ತೋಂಟದಾರ್ಯ ಮಠದಲ್ಲಿ ೧೨ನೇ ಶತಮಾನದ ಬಸವಾದಿ ಶಿವಶರಣರು ಸ್ಥಾಪಿಸಿದ ಶೂನ್ಯಪೀಠವು ಮುಂದುವರೆದು ಬಂದಿದೆ. ಈ ಶೂನ್ಯಪೀಠದ ಪರಂಪರೆಯ ಇತಿಹಾಸವನ್ನು ಕುರಿತು ‘ನಿರಂಜನ ಜಂಗಮ ವಂಶ ದರ್ಪಣ’ ಎಂಬ ಕೃತಿಯಲ್ಲಿ ಸ್ಪಷ್ಟವಾಗಿ ದಾಖಲಿಸಲಾಗಿದೆ. ಹೀಗಾಗಿ ಗದುಗಿನ ತೋಂಟದಾರ್ಯ ಮಠವೇ ೧೨ನೇ ಶತಮಾನದ ಶೂನ್ಯಪೀಠವೆಂದು ಖ್ಯಾತ ಸಂಶೋಧಕರಾದ ಓ.ಎನ್.ಲಿಂಗಣ್ಣಯ್ಯ ಅವರು ತಮ್ಮ ‘ಶೂನ್ಯಸಿಂಹಾಸನ’ ಕೃತಿಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಚನ್ನಬಸವಣ್ಣನವರಿಂದ ಷಟ್ಸ್ಥಲ ನಿರ್ಣಯ ಪಡೆದ ವಿರಕ್ತಪಡೆ ಈ ಶೂನ್ಯ ಪೀಠದ ಪರಂಪರೆಯನ್ನು ಮುಂದುವರಿಸಿತು. ತೋಂಟದ ಸಿದ್ಧಲಿಂಗ ಯತಿಗಳು ಈ ಪರಂಪರೆಯನ್ನು ಪುನರುಜ್ಜೀವನಗೊಳಿಸಿದರು. ತದನಂತರ ಸಿದ್ಧಲಿಂಗ ಶಿವಯೋಗಿಗಳ ಐದು ಜನ ಶಿಷ್ಯರಲ್ಲಿ ಭಿನ್ನಾಭಿಪ್ರಾಯ ಬಂದು ಈ ಶೂನ್ಯಪೀಠವು ಐದು ಸಮಯ ಭೇದಗಳಲ್ಲಿ ಒಡೆದು ಹೋಯಿತು. ನಿಜವಾದ ನೇರ ವಾರಸುದಾರರಾದ ಗದುಗಿನ ತೋಂಟದಾರ್ಯ ಸಂಸ್ಥಾನಮಠವು ಚೀಲಾಳ ಸಮಯವೆಂದೂ, ಚಿತ್ರದುರ್ಗ ಮುರುಘಾಮಠವು ಮುರುಘಾ ಸಮಯವೆಂದೂ, ಹುಬ್ಬಳ್ಳಿ ಮೂರುಸಾವಿರ ಮಠ ಕುಮಾರ ಸಮಯವೆಂದೂ, ವಂಟಮುರಿ ಸಂಪಾದನೆ ಮಠವು ಸಂಪಾದನೆ ಸಮಯವೆಂದೂ, ಕೆಂಪಿನ ಜಡೆಸಿದ್ಧರಿಂದ ಕೆಂಪಿನ ಸಮಯವೆಂದೂ ಐದು ಭಾಗವಾಗಿ ಒಡೆದು ಹೋದವು. ವಂಟಮುರಿಯಲ್ಲಿದ್ದ ಸಂಪಾದನೆ ಸಮಯದ ಮಠವು ಹಿಡಕಲ್ ಜಲಾಶಯದಲ್ಲಿ ಮುಳುಗಿ ಹೋಗುವ ಮೂಲಕ ಸಂಪಾದನೆ ಸಮಯದ ಮಠಗಳು ಅಸ್ತಿತ್ವ ಕಳೆದುಕೊಂಡವು. ಕೆಂಪಿನ ಸಮಯದ ಮಠಗಳು ಇಂದು ಅಸ್ತಿತ್ವ ಕಳೆದುಕೊಂಡಿವೆ. ಈಗ ಉಳಿದ ಮೂರು ಪ್ರಮುಖ ಸಮಯದ ಮಠಗಳು ಅಸ್ತಿತ್ವದಲ್ಲಿವೆ.
ಇಂದು ಅಲ್ಲಮಪ್ರಭು ಸಂಪ್ರದಾಯದ ಸಲ್ಲಲಿತ ಸನ್ಮಾರ್ಗದಲ್ಲಿ ಸಾಗಬೇಕಾದ ಶೂನ್ಯಪೀಠ ಪರಂಪರೆಯ ವಿರಕ್ತಮಠಗಳು ತಮ್ಮ ಇತಿಹಾಸವನ್ನು ಅವಲೋಕನ ಮಾಡಿಕೊಂಡು, ವರ್ತಮಾನವನ್ನು ನವೀಕರಣ ಮಾಡಿಕೊಳ್ಳಬೇಕಾದ ಅನಿವರ‍್ಯತೆ ಇದೆ. ಲಿಂಗಾಯತ ಧರ್ಮವನ್ನು ಉಳಿಸಬೇಕೆಂಬ ಏಕೈಕ ಉದ್ದೇಶದಿಂದ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಬಸವಣ್ಣನವರು ಶೂನ್ಯಪೀಠವನ್ನು ಸ್ಥಾಪಿಸಿದರು. ಈ ಶೂನ್ಯಪೀಠವನ್ನು ಮೊದಲು ಅಲ್ಲಮರು ಏರಿದಾಗ ಪ್ರಾಯಶಃ ಬಸವಣ್ಣನವರ ಸುತ್ತಮುತ್ತ ಇದ್ದ ಜಂಗಮ ಸಮೂಹ ಅದನ್ನು ಸಹಜವಾಗಿ ವಿರೋಧಿಸಿತು. ಮೂಲತಃ ನಾಥಪಂಥೀಯನಾಗಿದ್ದ ಅಲ್ಲಮಪ್ರಭು ಬಸವಣ್ಣನವರ ಕೈಯಲ್ಲಿ ಸಿಕ್ಕಿ, ಬಸವನ ಕರುಣೆಯ ಕಂದ ನಾನು ಎಂದು ಹೇಳುವ ಪರಿಸ್ಥಿತಿ ಬರುತ್ತದೆ. ಅಲ್ಲಮರು ನಾಥಪಂಥವನ್ನು ಬಿಟ್ಟು, ಬಸವಪಥದಲ್ಲಿ ಸಾಗಿದರು. ಅಲ್ಲಮರು ಏರಿದ ಶೂನ್ಯಪೀಠದ ಪರಂಪರೆ ಅವಿಚ್ಛಿನವಾಗಿ ಮುಂದುವರೆಯಿತು.
ಐದು ದಶಕಗಳ ಹಿಂದೆ ಟಿ.ಜಿ.ಸಿದ್ಧಪ್ಪಾರಾಧ್ಯ ಎಂಬ ವಿದ್ವಾಂಸರು ‘ಶೂನ್ಯಪೀಠದ ಪ್ರಭಾವ’ ಎಂಬ ಪುಸ್ತಕವನ್ನು ಬರೆದರು. ಅದರಲ್ಲಿ ಜಾತಿಯಿಂದ ಜಂಗಮರಾದ ಸ್ವಾಮಿಗಳು ಮಾತ್ರ ನಿಜವಾದ ಸ್ವಾಮಿಗಳು, ಜಾತಿಯಿಲ್ಲದೆ ಜಂಗಮತ್ವಕ್ಕೆ ಏರಿದ ಸಿರಿಗೆರೆ ಶ್ರೀಗಳು, ಸಿದ್ಧಗಂಗಾ ಶ್ರೀಗಳು, ಸುತ್ತೂರು ಶ್ರೀಗಳು ನಿಜವಾದ ಸ್ವಾಮಿಗಳಲ್ಲ. ಆದ್ದರಿಂದ ಜಾತಿಜಂಗಮತ್ವದಿಂದ ಸ್ವಾಮಿಗಳಾದವರಿಗೆ ಮಾತ್ರ ನಮಸ್ಕಾರ ಮಾಡಿ, ಅವರ ಪಾದೋದಕ ಮಾತ್ರ ತೆಗೆದುಕೊಳ್ಳಬೇಕೆಂದು ಆ ಪುಸ್ತಕದಲ್ಲಿ ಬರೆದರು. ಆದರೆ ಸ್ವಾತಂತ್ರ್ಯೋತ್ತರ ಭಾರತದಲ್ಲಿ ಸಿರಿಗೆರೆ, ಸಿದ್ಧಗಂಗಾ, ಸುತ್ತೂರು ಮಠಗಳು ಮಾಡಿದಷ್ಟು ಸಾಧನೆಯನ್ನು ಉಳಿದ ಯಾವ ಲಿಂಗಾಯತ ಮಠಗಳೂ ಸಾಧಿಸಲಿಲ್ಲವೆನ್ನುವುದು ಸರ್ವಲೋಕಕ್ಕೂ ವೇದ್ಯವಾದ ಸಂಗತಿಯೇ ಆಗಿದೆ. ಕುತ್ಸಿತ ಮನೋಭಾವದಿಂದ ಬರೆದ ಶೂನ್ಯಪೀಠದ ಪ್ರಭಾವ ಕೃತಿಯನ್ನು ಖಂಡಿಸಿ ಖ್ಯಾತ ವಿದ್ವಾಂಸರಾದ ಓ.ಎನ್. ಲಿಂಗಣ್ಣಯ್ಯ ಅವರು ‘ಶೂನ್ಯಸಿಂಹಾಸನ’ ಎಂಬ ಕೃತಿಯನ್ನು ಬರೆದರು. ಆದರೆ ಸ್ಥಾಪಿತ ಶಕ್ತಿಗಳು ಲಿಂಗಣ್ಣಯ್ಯ ಅವರ ಕೃತಿಯನ್ನು ಜನರ ಕೈಗೆ ಸಿಗದಂತೆ ತಡೆದವು. ಅದೊಂದು ನಮ್ಮ ಲಿಂಗಾಯತ ಸಮಾಜದ ದುರಂತವೆಂದೇ ಹೇಳಬೇಕು.