ಚನ್ನಬಸವಣ್ಣ ಚರಿತ್ರೆ 27: ಕಲ್ಯಾಣ ಕ್ರಾಂತಿ

[ ಚನ್ನಬಸವಣ್ಣನವರ ವಿಷಯವಾಗಿ 27 ದಿನಗಳಿಂದ ಬರೆಯುತ್ತ ಬಂದರೂ, ಇನ್ನೂ ಅವರ ವಚನಗಳ ಅಂತರಂಗವನ್ನು ಹೊಕ್ಕುವ ನೋಡುವ ಅವಕಾಶ ದೊರೆಯಲಿಲ್ಲ. ಧಾರ್ಮಿಕ ಸಂವಿಧಾನವನ್ನು ರೂಪಿಸಿದರೂ ಚನ್ನಬಸವಣ್ಣನವರು ಪ್ರಖರ ವೈಚಾರಿಕಪ್ರಜ್ಞೆಯುಳ್ಳವರಾಗಿದ್ದರು. ಅವರ ವೈಚಾರಿಕ ಚಿಂತನೆಗಳನ್ನು ಕುರಿತು ಇನ್ನೂ ಬರೆಯಬೇಕಾಗಿದೆ. ‘ಆದಾವು ನಮ ಜೋಳ, ಉಳಿದಾವು ನಮ ಹಾಡು’ ಎಂಬ ತ್ರಿಪದಿಯ ಸಾಲಿನಂತೆ ಎಷ್ಟು ಅಳೆದರೂ ಕರಗದ ಕಣದ ರಾಶಿ ವಚನಸಾಹಿತ್ಯ. ಒಂಬತ್ತುನೂರು ವರ್ಷಗಳ ಇತಿಹಾಸ ಹೊಂದಿರುವ ಈ ಸಾಹಿತ್ಯವನ್ನು ಅಸಂಖ್ಯಾತ ಆಸಕ್ತರು ಅಧ್ಯಯನ ಮಾಡಿದ್ದಾರೆ. ಅನೇಕ ಸಂಶೋಧಕರು ಹೊಸತನ್ನು ಕಾಣಲು ಪ್ರಯತ್ನಿಸಿದ್ದಾರೆ. ವಿಮರ್ಶಕರು ನಾನಾ ದೃಷ್ಟಿಕೋನಗಳಿಂದ ಪರಿಶೀಲಿಸಿದ್ದಾರೆ. ವ್ಯಾಖ್ಯಾನಕಾರರು ತಮ್ಮ ಇತಿಮಿತಿಗೆ ಹೊಳೆದಷ್ಟು ವಿವರಣೆ ನೀಡಿದ್ದಾರೆ. ಚಿಂತಕರು ಅದರ ಅಂತರಂಗವನ್ನು ಅನುಭವಿಸಿದ್ದಾರೆ. ಭಾಷಾತಜ್ಞರು ಕನ್ನಡ ಪದಪ್ರಯೋಗಗಳನ್ನು ಕಂಡು ಅಚ್ಚರಿಪಟ್ಟಿದ್ದಾರೆ. ಹೀಗೆ ಪ್ರತಿಯೊಬ್ಬ ಶರಣ ತತ್ವಾನುಭಾವಿ ಓದುಗ ದೃಷ್ಟಿಯಲ್ಲಿ ವಚನ ಸಾಹಿತ್ಯ ಹತ್ತು ಹಲವು ಬಗೆಯಾಗಿ ಕಂಡಿದೆ. ಹತ್ತು ಮಾರು ಹಬ್ಬಿದೆ; ಹೂ ಬಿಟ್ಟಿದೆ; ಫಲ ಕೊಟ್ಟಿದೆ. ನನ್ನ ಈವರೆಗಿನ ಚಿಂತನೆಗಳನ್ನು ಓದಿ ಪ್ರೋತ್ಸಾಹಿಸಿದ ಸಕಲರಿಗೂ ಶರಣು ಶರಣಾರ್ಥಿಗಳು- ಪ್ರಕಾಶ ಗಿರಿಮಲ್ಲನವರ ]

ನಾನು ಬಂದ ಕಾರ್ಯಕ್ಕೆ ನೀವು ಬಂದಿರಯ್ಯಾ,!
ನೀವು ಬಂದ ಕಾರ್ಯಕ್ಕೆ ನಾನು ಬಂದೆನಯ್ಯಾ,!
ನಾನು, ನೀವು ಬಂದ ಕಾರ್ಯಕ್ಕೆ ,
ಪ್ರಭುದೇವರು ಬಂದರಯ್ಯಾ,!
ಕಲ್ಯಾಣವೆಂಬುದು ಪ್ರಣತೆಯಾಗಿತ್ತು ,
ನಾನು ತೈಲವಾದೇನು, ನೀವು ಬತ್ತಿಯಾದಿರಿ,
ಪ್ರಭುದೇವರು ಜ್ಯೋತಿಯಾದರು,!
ಪ್ರಣತೆ ಒಡೆದಿತ್ತು, ತೈಲ ಚೆಲ್ಲಿತ್ತು,
ಬತ್ತಿ ಬಿದ್ದಿತ್ತಯ್ಯಾ, ಜ್ಯೋತಿ ನಂದಿತ್ತಯ್ಯಾ,!
ನಮ್ಮ ಕೂಡಲ ಸಂಗಮ ಶರಣರಮನ ನೊಂದಿತ್ತಯ್ಯಾ.!!

ಇದು ಸಮಗ್ರ ವಚನ ಸಂಪುಟದಲ್ಲಿ ಇಲ್ಲದ ವಚನ. ಇದು ಕಾಲಜ್ಞಾನದ ವಚನವೆಂದು ಮೊಟ್ಟ ಮೊದಲು ಉತ್ತಂಗಿ ಚೆನ್ನಪ್ಪನವರು ಕಲಬುರ್ಗಿಯಲ್ಲಿ ಜರುಗಿದ ಅಖಿಲ ಭಾರತ ೩೨ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಭಾಷಣದ ಕೊನೆಯಲ್ಲಿ ಉಲ್ಲೇಖಿಸಿದ್ದಾರೆ. ಅವರಿಗೆ ಇದು ಯಾವ ಹಸ್ತಪ್ರತಿಯಲ್ಲಿ ದೊರಕಿತೊ ತಿಳಿದು ಬಂದಿಲ್ಲ. ಪ್ರಕಟಿತ ಕಾಲಜ್ಞಾನ ವಚನಗಳಲ್ಲಿಯೂ ಇದು ದಾಖಲಾಗಿಲ್ಲ. ಅಂದಿನಿಂದ ಈ ವಚನವನ್ನು ನಮ್ಮ ಜನ ಅಲ್ಲಲ್ಲಿ ಸಮಯ ಸಂದರ್ಭ ದೊರೆತಾಗ ಉಲ್ಲೇಖಿಸುತ್ತಲೇ ಬಂದಿದ್ದಾರೆ. ಏನೇ ಇರಲಿ, ಇದೊಂದು ಐತಿಹಾಸಿಕ ವಚನ ಎನ್ನುವುದರಲ್ಲಿ ಎರಡು ಮಾತಿಲ್ಲ.

ಕಲ್ಯಾಣ ಕ್ರಾಂತಿಯ ಸಂದರ್ಭವನ್ನು ಅತ್ಯಂತ ವಸ್ತುನಿಷ್ಠವಾಗಿ ದಾಖಲಿಸಿದ ವಚನವಿದು. ಈ ವಚನಕ್ಕೆ ಪರ್ಯಾಯವಾಗಿ ಬಸವಣ್ಣನವರ ಷಟ್ಸ್ಥಲ ವಚನದಲ್ಲಿಯೂ ಒಂದು ಮಹತ್ವದ ಐತಿಹಾಸಿಕ ವಚನ ದಾಖಲಾಗಿದೆ. ಆ ವಚನ ಹೀಗಿದೆ:

ಅರಸು ವಿಚಾರ ಸಿರಿಯು, ಶೃಂಗಾರ, ಸ್ಥಿರವಲ್ಲ ಮಾನವಾ:
ಕೆಟ್ಟಿತ್ತು ಕಲ್ಯಾಣ, ಹಾಳಾಯಿತ್ತು, ನೋಡಾ!
ಒಬ್ಬ ಜಂಗಮದಭಿಮಾನದಿಂದ
ಚಾಳುಕ್ಯರಾಯನ ಆಳಿಕೆ ತೆಗೆಯಿತ್ತು,
ಸಂದಿತ್ತು, ಕೂಡಲಸಂಗಮದೇವಾ ನಿಮ್ಮ ಕವಳಿಗೆಗೆ!

ಈ ವಚನ ಶೂನ್ಯಸಂಪಾದನೆಗಳಲ್ಲಿಯೂ ಬಂದಿದೆ. ಆದರೆ ಈ ವಚನದ ನಡುವೆ, ಮೊಲ್ಲೆ ಬೊಮ್ಮಣ್ಣಗಳ ಕೈಯಲ್ಲಿ ಮಡದಿಹನು ಬಿಜ್ಜಳನು ಎಂಬ ಸಾಲು ಸೇರಿಕೊಂಡಿದೆ. ಪ್ರಾಯಶಃ ಶೂನ್ಯಸಂಪಾದನಕಾರ ಈ ಸಾಲನ್ನು ಸೇರಿಸಿದ್ದಾನೆ. ಯಾಕೆಂದರೆ ಬಸವಣ್ಣನವರ ಷಟ್ಸ್ಥಲ ವಚನ ಕಟ್ಟುಗಳಲ್ಲಿ ಈ ಸಾಲು ಇಲ್ಲ. ೧೫ನೇ ಶತಮಾನದಲ್ಲಿ ವಚನಗಳಲ್ಲಿ ಯಾರು ಯಾರೋ ಕೈಯಾಡಿಸುವ ಕೆಲಸ ನಡೆದಿತ್ತು ಎಂಬುದಕ್ಕೆ ಇದು ಸಾಕ್ಷಿಯಾಗಿದೆ.

ವಚನದ ಅರ್ಥವನ್ನು ಕುರಿತು ಆಲೋಚಿಸಿದಾಗ, ಇದೊಂದು ಅಪ್ಪಟ ಐತಿಹಾಸಿಕ ವಚನವೆನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಬಸವಣ್ಣನವರು ಕಲ್ಯಾಣ ಬಿಡುವ ಸಂದರ್ಭದಲ್ಲಿ ಇದ್ದದ್ದು ಕಲಚೂರಿ ರಾಯನ ಆಳ್ವಿಕೆ, ಇಲ್ಲಿ ಚಾಳುಕ್ಯ ರಾಯ ಎಂಬ ಶಬ್ದ ಬಂದಿದೆ. ಅಲ್ಲದೆ ಒಬ್ಬ ಜಂಗಮನ ಅಭಿಮಾನದಿಂದ ಎಂಬ ಶಬ್ದ ಬಹಳ ಗಮನ ಸೆಳೆಯುತ್ತದೆ. ಅಭಿಮಾನ ಎಂಬ ಶಬ್ದಕ್ಕೆ ಶಬ್ದಕೋಶದಲ್ಲಿ ಹಿಂಸೆ ಎಂಬ ಅರ್ಥವೂ ಒಂದಿದೆ. ಕಲ್ಯಾಣದಲ್ಲಿ ಒಬ್ಬ ಜಂಗಮನಿಗೆ ಹಿಂಸೆ ಕೊಟ್ಟ ಕಾರಣವಾಗಿಯೇ ಕಲ್ಯಾಣದಲ್ಲಿ ಕ್ರಾಂತಿ ಜರುಗಿತು ಎಂಬುದು ಈ ವಚನದ ಮೇಲ್ನೊಟದ ಅರ್ಥವಾಗುತ್ತದೆ.

ಈ ಜಂಗಮ ಯಾರು? ಎಂಬ ಪ್ರಶ್ನೆ ನಮ್ಮ ವಿದ್ವಾಂಸರನ್ನು ಕಾಡಿದೆ. ಡಾ. ಆರ್. ಸಿ. ಹಿರೇಮಠ ಅವರು ತಮ್ಮ ಷಟ್ಸ್ಥಲ ಜ್ಞಾನ ಸಾರಾಮೃತ ಕೃತಿಯ ಪ್ರಸ್ತಾವನೆಯಲ್ಲಿ ಈ ಜಂಗಮ ರೇವಣಸಿದ್ಧ ಇರಬಹುದು ಎಂದು ತರ್ಕಿಸಿದ್ದಾರೆ. ಡಾ. ಎಂ. ಎಂ. ಕಲಬುರ್ಗಿ ಅವರು ‘ಕೆಟ್ಟಿತ್ತು ಕಲ್ಯಾಣ’ ಎಂಬ ನಾಟಕದಲ್ಲಿ ‘ಶೂದ್ರನಾದ ಅಲ್ಲಮನು ಶೂನ್ಯಪೀಠ ಏರುವುದನ್ನು ನಾವು ವಿರೋಧಿಸುತ್ತೇವೆ’ ಎಂಬ ವಾಕ್ಯವನ್ನು ಹೇಳಿಸುವ ಮೂಲಕ ಅಲ್ಲಮನೇ ಈ ಜಂಗಮ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಹರಳಯ್ಯ-ಮಧುವಯ್ಯಗಳು ಕೂಡ ಶರಣಧರ್ಮಕ್ಕೆ ಬಂದ ನಂತರ ಅವರು ಜಂಗಮಸ್ಥಲಕ್ಕೆ ಏರಿದರೆಂದು ವೀ. ಸಿದ್ಧರಾಮಣ್ಣನವರಂತಹ ಹಿರಿಯರು ಪ್ರತಿಪಾದಿಸಿದ್ದಾರೆ. ಹೀಗಾಗಿ ಆ ಜಂಗಮ ಯಾರು? ಎಂಬ ಜಿಜ್ಞಾಸೆ ಇನ್ನೂ ವಿದ್ವತ್ ವಲಯದಲ್ಲಿ ನಡದೇ ಇದೆ.

ಶೂನ್ಯಪೀಠವನ್ನು ಮೊದಲು ಏರಿದವರು ಅಲ್ಲಮಪ್ರಭುದೇವರು, ತದನಂತರ ಚನ್ನಬಸವಣ್ಣನವರು ಈ ಪೀಠವನ್ನು ಏರಿದರು. ಅವರು ಶೂನ್ಯಪೀಠದ ಅಧಿಕಾರ ವಹಿಸಿಕೊಂಡಾಗ ಕಲ್ಯಾಣದಲ್ಲಿ ತುಂಬ ಸಂಕ್ರಮಣಕಾಲವಿತ್ತು. ಯಾವುದೇ ಸಂದರ್ಭದಲ್ಲಾದರೂ ಕ್ರಾಂತಿ ಭುಗಿಲೇಳುವ ಎಲ್ಲ ಸಾಧ್ಯತೆಗಳಿದ್ದವು.

ಲಕ್ಷದಾ ಮೇಲೆ ತೊಂಬತ್ತಾರು ಸಾವಿರ ಜಂಗಮರಿದ್ದಾಗಲೂ ಬಸವಣ್ಣನವರು ಹೊರಗಿನಿಂದ ಬಂದ ಅಲ್ಲಮನನ್ನೇ ಶೂನ್ಯಪೀಠದ ಅಧಿಪತಿಯನ್ನಾಗಿ ಮಾಡಿದ್ದು ಕೆಲವರಿಗೆ ನಿರಾಶೆಯಾಗಿರಬಹುದು, ಹೊರಗಿನ ಶತ್ರುಗಳಿಗಿಂತಲೂ ಒಳಗಿನ ಶತ್ರುಗಳೇ ಒಟ್ಟು ವ್ಯವಸ್ಥೆಯನ್ನು ಹಾಳು ಮಾಡುತ್ತಾರೆ ಎಂಬುದಕ್ಕೆ ಕಿತ್ತೂರು ಕದನದಲ್ಲಿ ಗೆಜ್ಜಿ ಮಹಾಂತಮ್ಮ ಎಂಬುವಳು ಮದ್ದು ಗುಂಡುಗಳ ಸಂಗ್ರಹಕ್ಕೆ ಸೆಗಣಿ ಹಾಕಿ, ಯುದ್ಧದಲ್ಲಿ ಕಿತ್ತೂರು ಆಂಗ್ಲರ ಕೈವಶ ಮಾಡಿಕೊಳ್ಳಲು ಸಹಾಯ ಮಾಡಿದಂತೆ, ಒಳಗಿನ ಶತ್ರುಗಳೇ ಈ ಶರಣಸಂಸ್ಕೃತಿಯನ್ನು ಹಾಳು ಮಾಡಲು ಯೋಚಿಸಿರುವ ಸಾಧ್ಯತೆ ಇದೆ.

ಕಲ್ಯಾಣ ಭಕ್ತಿಗೆ ಬೀಡಾದುದು ಮೂವತ್ತಾರು ವರ್ಷ ಎಂಬ ವಚನದ ನುಡಿಯನ್ನು ನೆನಪಿಸಿಕೊಂಡಾಗ, ಬಸವಣ್ಣನವರು-ಚನ್ನಬಸವಣ್ಣನವರು ಕಲ್ಯಾಣ ಪಟ್ಟಣದಲ್ಲಿ ಇದ್ದ ಸಂದರ್ಭ ತಿಳಿಯುತ್ತದೆ. ಬಸವಾದಿ ಶಿವಶರಣರ ಕ್ರಾಂತಿಕಾರಿ ವಿಚಾರಗಳನ್ನು ಆ ಕಾಲದ ಸಂಪ್ರದಾಯ ವಾದಿಗಳಿಗೆ ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇಷ್ಟೆಲ್ಲ ತಂತ್ರಜ್ಞಾನ ಮುಂದುವರಿದ ಸಂದರ್ಭದಲ್ಲಿಯೂ ಇಂದಿಗೂ ಅಸ್ಪೃಶ್ಯತೆ ಜಾತಿವ್ಯವಸ್ಥೆಯ ಕರಾಳ ಮುಖಗಳನ್ನು ನಾವು ಕಾಣುತ್ತಿರುವಾಗ, ೧೨ನೇ ಶತಮಾನದಲ್ಲಿ ಇದನ್ನು ಊಹಿಸಿಕೊಳ್ಳುವುದೂ ಕೂಡ ಕಷ್ಟ. ಇಂತಹ ಸಂದರ್ಭದಲ್ಲಿ ಬಸವಾದಿ ಶಿವಶರಣರು ಜಾತಿವ್ಯವಸ್ಥೆಯನ್ನೇ ಬುಡಮೇಲು ಮಾಡಿ, ಸರ್ವಸಮಾನತೆಯ ಸಮಾಜವೊಂದನ್ನು ಕಟ್ಟಲು ಹೊರಟಾಗ ಸಹಜವಾಗಿಯೇ ಮೂಲಭೂತವಾದಿಗಳು ಅದನ್ನು ವಿರೋಧಿಸುತ್ತಾರೆ. ಅದರಲ್ಲೂ ಬಸವಣ್ಣನವರ ಒಂದೊಂದೆ ಕೆಲಸಗಳನ್ನು ಟೀಕಿಸುತ್ತ, ಬಿಜ್ಜಳರಾಜನಲ್ಲಿ ಆಗಾಗ ಚಾಡಿ ಹೇಳುತ್ತಲೇ ಇರುತ್ತಾರೆ. ಯಾವಾಗ ಹರಳಯ್ಯ-ಮಧುವಯ್ಯಗಳ ಮಕ್ಕಳ ನಡುವೆ ಮದುವೆ ಸಂಬಂಧ ಏರ್ಪಟ್ಟಿತೋ ಆಗ ನಿಜವಾಗಿಯೂ ಸಂಪ್ರದಾಯವಾದಿಗಳು ಇನ್ನು ತಮಗೆ ಉಳಿಗಾಲವಿಲ್ಲ. ಇದಕ್ಕೆ ಏನಾದರೂ ಮಾಡಲೇಬೇಕು ಎಂಬ ನಿರ್ಧಾರಕ್ಕೆ ಬಂದರು. ಶರಣರ ಯಾವ ವಿಚಾರಗಳು ಸಂಪ್ರದಾಯವಾದಿಗಳ ಮನಸ್ಸು ಕೆಡಿಸಿದವು ಎಂಬುದನ್ನು ಡಾ. ಎಚ್. ತಿಪ್ಪೇರುದ್ರ ಸ್ವಾಮಿ ಅವರು ತಮ್ಮ ಕಲ್ಯಾಣ ಕ್ರಾಂತಿ ಕೃತಿಯಲ್ಲಿ ಹೀಗೆ ವಿವರಿಸುತ್ತಾರೆ :

“ವಾಸ್ತವವಾಗಿ ಬಸವಣ್ಣ ಅಂದು ಮಾಡಿದುದೆಲ್ಲಾ ಇಂದು ನಾವು ಒಪ್ಪಿ ಕೊಂಡಿರುವ ಮೌಲ್ಯಗಳು. ಸ್ತ್ರೀಪುರುಷ ಸಮಾನತೆ, ಅಸ್ಪೃಶ್ಯತೆಯ ನಿವಾರಣೆ, ಜಾತಿವಿನಾಶ, ವಿಚಾರ ಸ್ವಾತಂತ್ರ್ಯ, ದುಡಿಮೆಯ ಮಹತ್ವ, ಸಮಾನ ಹಂಚಿಕೆ- ಸರ್ವರಿಗೂ ಸಮ ಬಾಳು, ಸಮ ಪಾಲು-ಇವೆಲ್ಲಾ ಬಸವ ಬೀರಿದ ಬೆಳಕಿನ ಕಿರಣಗಳು. ಆದರೆ ಆ ಯುಗದಲ್ಲಿ ಅವು ವ್ಯವಸ್ಥೆಗೆ ವಿರೋಧವಾಗಿ ಪರಿಣಮಿಸಿ ದುವು. ಈ ಯುಗದಲ್ಲಿಯೂ ಇವುಗಳ ಆಚರಣೆ ಸಂಪೂರ್ಣವಾಗಿ ಸಾಧ್ಯವಾಗದಿದ್ದರೂ, ಇಂದು ಇವುಗಳನ್ನು ತಾತ್ವಿಕವಾಗಿಯಾದರೂ ಒಪ್ಪಿಕೊಂಡಿದ್ದೇವೆ. ಆದರೆ ಇವುಗಳಿಗಾಗಿಯೇ ಬಸವಣ್ಣ ವಿರೋಧವನ್ನು ಎದುರಿಸಬೇಕಾಯಿತು. ಆತ ಬೀರಿದ ಬೆಳಕು ವಿರೋಧದ ಬೆಂಕಿಯನ್ನು ಕಟ್ಟಿಕೊಳ್ಳಬೇಕಾಯಿತು. ವಿರೋಧಶಕ್ತಿಗಳೆಲ್ಲಾ ಸಂಘಟಿತವಾಗಿ ಬಸವಣ್ಣನ ಮೇಲೆ ಬೀಳಲು ಸಿದ್ಧವಾದುವು. ಬಿಜ್ಜಳನ ಬಳಿಯಲ್ಲಿ ಮತ್ತೆ ಮತ್ತೆ ದೂರುವುದು ಸಾಮಾಜಿಕ ಅಸಹನೆಯನ್ನು ಸೃಷ್ಟಿಸುವುದು, ಆಪಾದನೆ ಗಳನ್ನು ಹೊರಿಸುವುದು-ಈ ಮೊದಲಾದ ಪ್ರಯತ್ನಗಳು ನಿರಂತರವಾಗಿ ನಡೆದುವು. ಪುರೋಹಿತಶಾಹಿ ಮತ್ತು ಬಂಡವಾಳಶಾಹಿಗಳೆರಡೂ ಈ ಪ್ರಯತ್ನದಲ್ಲಿ ಕೈಕುಲುಕಿದವು.

ಇದರ ಜೊತೆಗೆ ಅಂದಿನ ರಾಜಕೀಯದ ಬೆಳವಣಿಗೆಯೂ ಸೇರಿತು. ಒಳಗೊಳಗೇ ಹೊಗೆಯಾಡುತ್ತಿದ್ದುದನ್ನು ಊದಿ ಉಜ್ವಲಗೊಳಿಸಲು ಇದು ಸಹಾಯಕವಾಯಿತು. ಅಧಿಕಾರಶಾಹಿಗೆ ಬಸವಣ್ಣನ ಈ ಸಾಮಾಜಿಕ ಪರಿವರ್ತನೆಯ ಕ್ರಾಂತಿ ಒಂದು ನೆಪವಾಯಿತು. ಕುಡಿಯೊಡೆಯುತ್ತಿದ್ದ ಈ ಕ್ರಾಂತಿಕಿಡಿಯನ್ನು ಹೊಸಕಿಹಾಕುವುದಕ್ಕೆ ಅದೂ ತನ್ನ ಕೈಯನ್ನು ಸೇರಿಸಿತು. ಹೀಗೆ ಎಲ್ಲಾ ವಿರೋಧ ಶಕ್ತಿಗಳೂ ಬಸವಣ್ಣನನ್ನು ಎದುರಿಸಲು ಸಜ್ಜಾಗುತ್ತಿರುವಾಗ ಅವರಿಗೆ ಸಹಾಯಕವಾಗು ವಂತಹ ಒಂದು ಘಟನೆ ನಡೆಯಿತು. ಬಸವಣ್ಣನ ಸರ್ವಸಮಾನತೆಯ ಕ್ರಾಂತಿ, ತನ್ನ ಅದುವರೆಗಿನ ಬೆಳವಣಿಗೆಯನ್ನು ದಾಟಿ ತನಗೆ ಸಹಜವಾದ ತಾರ್ಕಿಕ ಕೊನೆಯನ್ನು ಮುಟ್ಟಿತು. ಅಸ್ಪೃಶ್ಯ ಗಂಡಿನೊಡನೆ ಬ್ರಾಹ್ಮಣ ಹೆಣ್ಣನ್ನು ಮದುವೆ ಮಾಡುವುದರಲ್ಲಿ ರ‍್ಯವಸಾನಗೊಂಡಿತು. ಅಂದಿನ ಸಮಾಜ ಇದನ್ನು ಅರಗಿಸಿಕೊಳ್ಳಲಾರದೆ ಹೋಯಿತು.” (ಡಾ. ತಿಪ್ಪೇರುದ್ರಸ್ವಾಮಿ : ಕಲ್ಯಾಣ ಕ್ರಾಂತಿ ಪು. ೨೫)

ಅಸ್ಪೃಶ್ಯನಾದ ಚೆನ್ನಯ್ಯನ ಮನೆಯಲ್ಲಿ ಪೂರ್ವಾಶ್ರಮದಲ್ಲಿ ಬ್ರಾಹ್ಮಣನಾದ ಬಸವಣ್ಣನವರು ಸಹಪಂಕ್ತಿಯಲ್ಲಿ ಕುಳಿತು ಊಟ ಮಾಡಿರುವದನ್ನೇ ಸನಾತನಿಗಳು ಧರ್ಮಬಾಹಿರವೆಂದು ಅವರನ್ನು ಹೀಯಾಳಿಸುತ್ತಾರೆ. ಶರಣರು ವೇದ, ಶಾಸ್ತ್ರ, ತರ್ಕ, ಆಗಮ ಇವುಗಳನ್ನು ಮೂದಲಿಸಿದ್ದಾರೆ. ಬಸವಣ್ಣನವರ ಕ್ರಾಂತಿಯಲ್ಲಿ ಇಡೀ ಮಾನವರೆಲ್ಲರೂ ಸಾಮಾಜಿಕವಾಗಿ, ಧಾರ್ಮಿಕವಾಗಿ ಸಮಾನಸ್ಕಂದರು. ಅವರಲ್ಲಿ ಮೇಲು ಕೀಳೆಂದು ಇಲ್ಲ. ಇಂತಹ ಸಂದರ್ಭದಲ್ಲಿ ಸದ್ಗುಣಿಯಾದ, ಸತ್ ಕ್ರಿಯಾಶೀಲನಾದ, ಇಷ್ಟಲಿಂಗ ಪೂಜಕನಾದ ಮಾದರ ಚೆನ್ನಯ್ಯನವರ ಮನೆಯಲ್ಲಿ ಬಸವಣ್ಣನವರು ಪ್ರಸಾದ ಸ್ವೀಕರಿಸಿದ್ದು ಉಚ್ಚವರ್ಗದವರಿಗೆ ಧರ್ಮಬಾಹಿರವಾಗಿ ಕಾಣುತ್ತದೆ. ಆದರೆ ಈ ಯಾವ ಧರ್ಮಗ್ರಂಥಗಳೂ ಅಸ್ಪೃಶ್ಯರನ್ನು, ದಲಿತರನ್ನು ಉದ್ಧರಿಸುವ ಯಾವುದೇ ಮಾರ್ಗವನ್ನು ಸೂಚಿಸಿಲ್ಲ. ಆ ಗ್ರಂಥಗಳ ವಾರಸುದಾರರಿಗೂ ಮಾರ್ಗದರ್ಶನ ನೀಡಿಲ್ಲ. ಆದುದರಿಂದ ಇಂಥ ಅಮಾನವೀಯ ಗ್ರಂಥಗಳನ್ನು ಬಸವಣ್ಣನವರು ಬಹು ಮನೋಜ್ಞವಾಗಿ ಟೀಕಿಸಿದ್ದಾರೆ.

ಇಂತಹ ವೈದಿಕ ಧರ್ಮವನ್ನು ವಿರೋಧಿಸುವ, ತಿರಸ್ಕರಿಸುವ ಮಾತುಗಳು ವಚನ ಸಾಹಿತ್ಯದಲ್ಲಿ ವಿಪುಲವಾಗಿ ಬರುತ್ತವೆ. ಇವುಗಳನ್ನು ಸಮಗ್ರವಾಗಿ ಅವಲೋಕಿಸಿದರೆ, ಅಭ್ಯಾಸ ಮಾಡಿದರೆ ಬಸವಣ್ಣನವರು, ಹಳೆಯದಾದ ಪ್ರಾಚೀನ ಕಾಲದ ಕಂದಾಚಾರ, ಜಾತೀಯತೆ, ಲಿಂಗತಾರತಮ್ಯ, ಪಂಚಸೂತಕಗಳು ಮುಂತಾದ ಅನಿಷ್ಟ ಪದ್ಧತಿಗಳ ಗೂಡಾಗಿದ್ದ ಈ ಧರ್ಮ ವನ್ನು ಸಂಪೂರ್ಣವಾಗಿ ಕಿತ್ತೊಗೆದು ನವೀನ ಧರ್ಮಕ್ಕೆ ನಾಂದಿ ಹಾಡಿದರು. ಅಂತೆಯೇ ಸಮಕಾಲೀನ ಶರಣರು ಬಸವಣ್ಣನವರಿಗೆ ‘ಸಮಯಾಚಾರಿ’ ಯೆಂದು ಕರೆದಿದ್ದಾರೆ. ಸಮಯಾಚಾರಿ ಎಂದರೆ, “ಧರ್ಮಸಂಸ್ಥಾಪಕ” ಎಂಬ ಅರ್ಥವಾಗುತ್ತದೆ.

ಇದೇ ಸಂದರ್ಭದಲ್ಲಿ ಬಸವಣ್ಣನವರು ಆ ಕಾಲದ ಧರ್ಮಾಚಾರದಲ್ಲಿ ಉಪಯೋಗಿಸಲಾಗುತ್ತಿದ್ದ ಪಾರಾಯಣ ಗ್ರಂಥ ಅಥವಾ ಧರ್ಮಗ್ರಂಥವಾದ “ಮನುಸ್ಮೃತಿ”ಯಲ್ಲಿ ಹೇಳಿದ ನಿಯಮಾವಳಿಯ ವಿರೋಧವಾಗಿ ಉಚ್ಚ ವರ್ಗದ ಮಧುವರಸನ ಮಗಳನ್ನು ಅಸ್ಪೃಶ್ಯನಾದ ಹರಳಯ್ಯನ ಮಗನೊಂದಿಗೆ ಮದುವೆ ಮಾಡಿಸಿದರು. ಇದು ಮನುಧರ್ಮ ಶಾಸ್ತ್ರದಲ್ಲಿ ಪ್ರತಿಲೋಮ ಮದುವೆ. ಆದರೆ ಶರಣರ ದೃಷ್ಟಿಯಲ್ಲಿ ಇದು ಸಮಾನಸ್ಕಂದರ ಮಧ್ಯದಲ್ಲಿಯ ಶರೀರ ಸಂಬಂಧ. ಇದರಿಂದ ಮನುಧರ್ಮಶಾಸ್ತ್ರವನ್ನು ಅನುಸರಿಸುವ ಪುರೋಹಿತರಲ್ಲಿ ಅತ್ಯಂತ ಕ್ರೋಧ ಉಂಟಾಯಿತು. ‘ಬಸವಾದಿ ಶರಣರು ಸನಾತನ ಧರ್ಮದ ವಿರೋಧಿಯಾಗಿ ಕುತಂತ್ರ ನಡೆಸುತ್ತಿದ್ದಾರೆ’ ಎಂದು ರಾಜನಿಗೆ ಚಾಡಿ ಹೇಳಿ ಪ್ರಚೋದಿಸಿದರು. ಅದರಿಂದ ಕುಪಿತನಾದ ಬಿಜ್ಜಳ ಅರಸನು ಶರಣರ ಹತ್ಯೆ ಮಾಡಲು ಸೈನ್ಯಕ್ಕೆ ಆದೇಶ ನೀಡಿದನು. ಜೊತೆಗೆ ಪ್ರತಿಲೋಮ ವಿವಾಹವನ್ನು ಮಾಡಿಕೊಂಡ ಹರಳಯ್ಯ ಮಧುವಯ್ಯ – ಅವರ ಮಕ್ಕಳು ಇವರಿಗೆ ಮರಣ ದಂಡನೆ ವಿಧಿಸಿದನು. ಇದರಿಂದ ಶರಣರಲ್ಲಿ ಭಯಂಕರವಾದ ಕ್ಷೋಭೆ ಉಂಟಾಯಿತು. ಪೂರ್ವ ಯೋಜನೆಯಂತೆ ಮನುಧರ್ಮ ಶಾಸ್ತ್ರಕ್ಕೆ ವಿರೋಧವಾದ ವಚನ ಸಾಹಿತ್ಯವನ್ನು ನಾಶ ಪಡಿಸುವ ಹುನ್ನಾರವೂ ಇದರಲ್ಲಿ ಅಡಗಿತ್ತು. ಹೀಗಾಗಿ ವಚನಗಳನ್ನು ನಾಶ ಮಾಡುತ್ತಿರು ವಂತೆಯೇ ಚನ್ನಬಸವಣ್ಣ, ಅಕ್ಕನಾಗಮ್ಮ, ಗಂಗಾಬಿಕೆ, ಮಡಿವಾಳ ಮಾಚಯ್ಯ, ಕಕ್ಕಯ್ಯ ಮುಂತಾದ ಶರಣಶರಣೆಯರು ತಮ್ಮ ಕೈಗೆ ಸಿಕ್ಕಷ್ಟು ವಚನ ಕಟ್ಟು ಗಳನ್ನು ಹೊತ್ತುಕೊಂಡು ಉಳವಿಯತ್ತ ಹೊರಟರು. ಮತ್ತು ಕೆಲವು ಶರಣರು ವಚನಗಳನ್ನು ತೆಗೆದುಕೊಂಡು ಹಳ್ಳಿಗಳನ್ನು ಸೇರಿದರು. ಇದನ್ನರಿತ ಬಿಜ್ಜಳನ ಯೋಧರು ಅವರನ್ನು ಬೆನ್ನಟ್ಟಿದರೆಂದು ತಿಳಿಯಲಾಗುತ್ತದೆ. ಅವರೊಂದಿಗೆ ಹೋರಾಡುತ್ತಲೇ ಈ ವಚನ ಕಟ್ಟುಗಳನ್ನು ಉಳವಿಗೆ ತಂದು ಅಡವಿಯ ಮಹಾಮನೆಯ-ಗವಿಯಲ್ಲಿ ಸಂರಕ್ಷಿಸಿದರು. ಈ ಕ್ರಾಂತಿಯಲ್ಲಿ ದಿಕ್ಕು ದಿಕ್ಕಿನಲ್ಲಿ ವಚನಗಳನ್ನು ಶರಣರು ಒಯ್ದು ಬಚ್ಚಿಟ್ಟರು.
ಈ ಕ್ರಾಂತಿಯ ಕದನದಲ್ಲಿ ವಚನ ಭಂಡಾರದ ತಾಳೆಯ ಗ್ರಂಥಗಳು ಸೈನಿಕರಿಂದ ಸೂರೆಗೊಂಡು ನಾಶವಾದವು. ಈ ಹೃದಯವಿದ್ರಾವಕವಾದ ಸಂಗತಿ ಯನ್ನು ಶಾಂತರಸನು ತನ್ನ ಮತ್ತೊಂದು ವಚನದಲ್ಲಿ ಹೀಗೆ ಹೇಳಿದ್ದಾನೆ, –

“ ಕಲ್ಯಾಣ ಹಾಳಾಯಿತು. ಭಂಡಾರ ಸೂರೆಹೋಯಿತ್ತು .
ನಿರ್ವಚನವಾಯಿತ್ತು. ಅಲೇಖ ನಾಶವಾಯಿತ್ತು.
ಪತ್ರ ಹರಿಯಿತ್ತು. ನಾದ ಶೂನ್ಯವಾಯಿತ್ತು.” (ವಚನ – ೩)

ಈ ಮಾತುಗಳಿಂದ ಅಪಾರಪ್ರಮಾಣದ ವಚನ ಸಾಹಿತ್ಯವನ್ನು ಕದನದಲ್ಲಿ ನಾಶ ಮಾಡಲಾಯಿತೆಂಬುದು ವ್ಯಕ್ತವಾಗುತ್ತದೆ. ಹೀಗೆ ಚೆನ್ನಬಸವಣ್ಣನ ನೇತೃತ್ವದಲ್ಲಿ ಹೊತ್ತು ತಂದ ವಚನಗಳಲ್ಲಿ ನಮಗೆ ಇಂದು ಲಭ್ಯವಾಗಿರುವುದು ಅಲ್ಪಪ್ರಮಾಣದಲ್ಲಿ ಮಾತ್ರ.

ಡಾ. ವಿ. ಕೆ. ಗೋಕಾಕ ಅವರು ‘ ಕಲ್ಯಾಣದಲ್ಲಿ ಕೊನೆಯ ದಿನ ’ ಎಂಬ ಅದ್ಭುತ ಖಂಡಕಾವ್ಯವೊಂದನ್ನು ರಚಿಸಿದ್ದಾರೆ. ಕಲ್ಯಾಣದಲ್ಲಿ ಕ್ರಾಂತಿಯ ಕೊನೆಯ ದಿನ ಏನೆಲ್ಲ ನಡೆಯಿತು ಎಂಬುದನ್ನು ವಿ.ಕೃ.ಗೋಕಾಕರು ಕಣ್ಣಿಗೆ ಕಟ್ಟುವಂತೆ, ಕವಿಕಲ್ಪನೆಯಿಂದ ಅದ್ಭುತವಾಗಿ ಚಿತ್ರಿಸಿದ್ದಾರೆ. ಸಮಸ್ತ ಲಿಂಗಾಯತರು ಈ ಕಿರುಕಾವ್ಯವನ್ನು ಅವಶ್ಯವಾಗಿ ಓದಲೇಬೇಕು.

ಕಲ್ಯಾಣ ಕ್ರಾಂತಿಗೆ ನಾಂದಿ ಹಾಡಿದ ಬಸವಣ್ಣನವರು ಸ್ವಂತ ಅಕ್ಕನ ಮುಂದೆಯೇ ಲಿಂಗೈಕ್ಯರಾದ ಸುದ್ದಿ ಬರುತ್ತದೆ. ಇದು ನಿಜಕ್ಕೂ ಹೃದಯಸ್ಪರ್ಶಿ ಸನ್ನಿವೇಶ. ಈ ಸಂದರ್ಭದಲ್ಲಿ ದುಃಖದಿಂದ ಅಕ್ಕನಾಮಗಮ್ಮ ಹೇಳುವ ವಚನದ ಸಾಲುಗಳು ಮನದ ಕದ ತಟ್ಟುತ್ತವೆ :

ಬಸವಣ್ಣಾ, ನೀವು ಮರ್ತ್ಯಕ್ಕೆ ಬಂದು ನಿಂದಡೆ
ಭಕ್ತಿಯ ಬೆಳವಿಗೆ ದೆಸೆದೆಸೆಗೆಲ್ಲಾ ಪಸರಿಸಿತ್ತಲ್ಲಾ !
ಅಯ್ಯಾ, ಸ್ವರ್ಗ ಮರ್ತ್ಯ ಪಾತಾಳದೊಳಗೆಲ್ಲಾ
ನಿಮ್ಮ ಭಕ್ತಿಯ ಬೆಳವಿಗೆಯ ಘನವನಾರು ಬಲ್ಲರು?
ಅಣ್ಣಾ, ಶಶಿಧರನಟ್ಟಿದ ಮಣಿಹ ಪೂರೈಸಿತ್ತೆಂದು
ನೀವು ಲಿಂಗೈಕ್ಯವಾದೊಡೆ, ನಿಮ್ಮೊಡನೆ ಭಕ್ತಿ ಹೋಯಿತ್ತಯ್ಯಾ.
ನಿಮ್ಮೊಡನೆ ಅಸಂಖ್ಯಾತ ಮಹಾಗಣಂಗಳು ಹೋದರಣ್ಣಾ.
ಮರ್ತ್ಯಲೋಕದ ಮಹಾಮನೆ ಶೂನ್ಯವಾಯಿತ್ತಲ್ಲಾ ಬಸವಣ್ಣಾ.
ಎನ್ನನೊಯ್ಯದೆ ಹೋದೆಯಲ್ಲಾ ಪಂಚಪರುಷಮೂರ್ತಿ ಬಸವಣ್ಣಾ.
ಬಸವಣ್ಣಪ್ರಿಯ ಚೆನ್ನಸಂಗಯ್ಯಂಗೆ ಪ್ರಾಣಲಿಂಗವಾಗಿ
ಹೋದೆಯ ಸಂಗನಬಸವಣ್ಣಾ? –ಅಕ್ಕನಾಗಮ್ಮ

ಅಕ್ಕನಾಗಮ್ಮನ ಈ ಹೃದಯವಿದ್ರಾವಕ ವಚನಗೀತೆಯನ್ನು ಕೇಳಿದಾಗ, ನಿಜಕ್ಕೂ ಹೃದಯ ಕಂಪಿಸುತ್ತದೆ.

ಮೋಳಿಗೆ ಮಾರಯ್ಯನವರು ಈ ಕ್ರಾಂತಿಗೆ ಸಾಕ್ಷಿಯೊದಗಿಸುವ ಒಂದು ಮಹತ್ವದ ವಚನವನ್ನು ಬರೆದಿದ್ದಾರೆ :

ಊರು ಕೆಟ್ಟು ಸೂರೆಯಾಡುವಲ್ಲಿ ಆರಿಗಾರೂ ಇಲ್ಲ.
ಬಸವಣ್ಣ ಸಂಗಮಕ್ಕೆ, ಚನ್ನಬಸವಣ್ಣ ಉಳುವೆಗೆ ,
ಪ್ರಭು ಕದಳಿಗೆ, ಮಿಕ್ಕಾದ ಪ್ರಮಥರೆಲ್ಲರೂ
ತಮ್ಮ ತಮ್ಮ ಲಕ್ಷಭಾವಕ್ಕೆ ಮುಕ್ತಿಯನೆಯ್ದಿಹರು.
ನನಗೊಂದು ಬಟ್ಟೆಯ ಹೇಳಾ, ನಿಃಕಳಂಕ ಮಲ್ಲಿಕಾರ್ಜುನಾ.

ಚನ್ನಬಸವಣ್ಣನವರು ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ತುಂಬ ನಿರ್ಣಾಯಕ ಪಾತ್ರವನ್ನು ಆಡಿದವರು. ಯಾಕೆಂದರೆ, ಆಗಲೇ ಬಸವಣ್ಣನವರ ಗಡಿಪಾರಾಗಿತ್ತು. ಅವರು ಕೂಡಲಸಂಗಮಕ್ಕೆ ಹೊರಟು ಹೋಗಿದ್ದರು. ಈಗ ಎಲ್ಲ ಶರಣರ ಜವಾಬ್ದಾರಿ ಚನ್ನಬಸವಣ್ಣನವರ ಮೇಲಿತ್ತು. ಚನ್ನಬಸವಣ್ಣನವರು ಎಲ್ಲ ಶರಣರನ್ನು ಕರೆದು, ನಿಮ್ಮಗಳ ಜೀವಕ್ಕೆ ಅಪಾಯವಿದೆ, ಹೊರಡಲು ಸಿದ್ಧರಾಗಿ ಎಂದಾಗ, ಕಾಲಜ್ಞಾನ ವಚನದಲ್ಲಿ ಬಹುಸೂಕ್ಷ್ಮವಾದ ಒಂದು ಸಂಗತಿ ಪ್ರಸ್ತಾಪವಾಗಿದೆ. ಅದೇನೆಂದರೆ- ಎಮ್ಮವರಿಗೆ ಸಾವಿಲ್ಲ. ಶರಣರಾದವರಿಗೆ ಎಂದಿಗೂ ಸಾವಿಲ್ಲ. ಶರಣರು ಸಾವಿಗೆ ಎಂದೂ ಹೆದರಿದವರಲ್ಲ. ಹೀಗಾಗಿ ನಾವು ಹೇಡಿಗಳಂತೆ ಕಲ್ಯಾಣ ಪಟ್ಟಣವನ್ನು ತೊರೆದು ಹೋಗುವುದರಲ್ಲಿ ಯಾವ ಅರ್ಥವಿದೆ? ಎಂದು ಎಲ್ಲ ಶರಣರು ಪ್ರಶ್ನೆ ಮಾಡುತ್ತಾರೆ. ಆಗ ಚನ್ನಬಸವಣ್ಣನವರು ಶರಣರು ಯಾರಿಗೂ ಹೆದರಲ್ಲ, ಇಲ್ಲಿಯೇ ಇದ್ದು ಎಲ್ಲವನ್ನು ಎದುರಿಸಬಹುದು. ಆದರೆ ನಾವು ಈ ವರೆಗೆ ಬರೆದ ವಚನ ಕಟ್ಟುಗಳನ್ನು ಅವರು ನಾಶ ಮಾಡುವ ಸಂದರ್ಭವಿದೆ. ವಚನಗಳ ಸಂರಕ್ಷಣೆಗಾದರೂ ನಾವು ಕಲ್ಯಾಣಪಟ್ಟಣವನ್ನು ತೊರೆಯಬೇಕು ಎಂದು ವಿನಂತಿಸುತ್ತಾರೆ. ಆಗ ಎಲ್ಲ ಶರಣರು ಒಪ್ಪಿಕೊಳ್ಳುತ್ತಾರೆ. ಹಾಗೆ ನೋಡಿದರೆ ಬಿಜ್ಜಳನ ಸೈನಿಕರಿಂದ ಶರಣರಿಗೆ ಹೆಚ್ಚು ತೊಂದರೆಯಾಗಾವುದಕ್ಕಿಂತ, ಮೂಲಭೂತವಾದಿಗಳಿಂದಲೇ ಹೆಚ್ಚು ಅಪಾಯ ಒದಗಿರುವ ಸಾಧ್ಯತೆ ಇದೆ.

ಎಲ್ಲ ಶರಣರಿಗೂ ಈ ಸಂದರ್ಭದಲ್ಲಿ ಮಾರ್ಗದರ್ಶನ ಮಾಡುತ್ತ ಚನ್ನಬಸವಣ್ಣನವರು ಎಲ್ಲ ಗಣತಿಂಥಿಣಿಯೊಡನೆ ಉಳವಿಗೆ ದಯಮಾಡಿಸುತ್ತಿರುವ ಸಂಗತಿಯು ಬಿಜ್ಜಳನ ಸೈನಿಕರಿಗೆ ತಿಳಿದು ಉಗ್ರಕೋಪದಿಂದ ಬೆನ್ನ ಹತ್ತಿ ಬರುವ ಕಾಲದಲ್ಲಿ ಹಿರಿಯ ಹೆಗ್ಗಡತಿಯ ಹೊನ್ನಮ್ಮನ ಚಾವಡಿಯ ಬಳಿಯ ಜಗದೇವ ಮಲ್ಲಿ ಬೊಮ್ಮಯ್ಯಗಳೆಂಬ ಶರಣರು ಪಂಜುಗಾರರಾಗಿ ಶಿವ ಶರಣ ದ್ರೋಹಿಯಾದ ಬಿಜ್ಜಳರಸನ ಇರಿಯುತ್ತೇವೆ ಎಂದು ಮೂರು ವೇಳೆ ಸಾರಿ ರಕ್ತಾಕ್ಷಿನಾಮ ಸಂವತ್ಸರದ ಕಾರ್ತಿಕ ಶುದ್ಧ ಪೌರ್ಣಿಮೆ ಮಂಗಳವಾರ ರಾತ್ರಿಯಲ್ಲಿ ಬಿಜ್ಜಳರಸನನ್ನು ಸಂಹರಿಸಿ ಬುಧವಾರ ಕಲ್ಯಾಣ ಪಟ್ಟಣವನ್ನು ಬಿಟ್ಟು ದಯಮಾಡಿಸುವ ಮಾರ್ಗದಲ್ಲಿ ತಡಗೋಡದಲ್ಲಿ ಅಳಿಯ ಬಿಜ್ಜಳನ ದಂಡು ತಡೆದ ಕಾರಣ ಆ ಸ್ಥಳದಲ್ಲಿ ತಡಗೋಡೆಂಬ ಗ್ರಾಮ ನಿರ್ಮಾಣವಾಯಿತ್ತು. ಅಲ್ಲಿಂದ ಮಾರ್ಗದಲ್ಲಿ ಗೊಡಚಿಯ ಗಿಡದ ಹುತ್ತದಲ್ಲಿ ಚಿಕ್ಕ ದೇವಾಲಯವನ್ನು ಕಟ್ಟಿ ಆ ಗುಡಿಯಲ್ಲಿ ವೀರಗಂಟಿ ಮಡಿವಾಳ ಮಾಚಿದೇವರು ತಮ್ಮ ವೀರೇಶನಂ ಸ್ಥಾಪಿಸಿ ಕಡಕೊಳ್ಳದಲ್ಲಿ ಲಿಂಗಾರ್ಚನೆಯನ್ನು ಮಾಡಿ ಪಾದೋದಕ ಸ್ವೀಕರಿಸಿ ಮುನ್ನಡೆದರು. ಅಲ್ಲಿಂದ ಸತ್ತಿಗೇರಿಯಲ್ಲಿ ಸತ್ತಿಗೆಯಿಂದ ಹಿಡಿಸಿಕೊಂಡು ಮೊದಲೂರಲ್ಲಿ ಅಳಿಯ ಬಿಜ್ಜಳನ ದಂಡಿಗೂ ಶರಣರಿಗೂ ಯುದ್ಧ ನಡೆಯಿತು. ತಲೆಯರಲ್ಲಿ ತಲೆಯ ಕಡಿದು ಮುರಗೋಡಲಿ ಮುಂದೋಡಿಸಿ ಶರಣರ ದಂಡು ಕೆಂಗೇರಿಯಲ್ಲಿ ರಕ್ತಸಿಕ್ತ ಆಯುಧಗಳನ್ನು ತೊಳೆದುಕೊಂಡರು. ಅಂತೆಯೆ ಮುರುಗೋಡ ಉಳವಿಯ ಹೆಬ್ಬಾಗಿಲು ಎಂಬ ಕೀರ್ತಿಗೆ ಪಾತ್ರವಾಯಿತು. ಮೂಗಬಸ್ತಿಯಲ್ಲಿ ರವಡೆಜಾಗುಟಿಯಂ ಹೊಡಿಸಿ ಕಾದರವಳ್ಳಿಯಲ್ಲಿ ಕಾದಾಡಿದರು. ಮಲಪ್ರಭಾ ನದಿಯ ದಂಡೆಯ ಮೇಲಿರುವ ಕಾದರೊಳ್ಳಿ ಗ್ರಾಮದಲ್ಲಿ ಶರಣರಿಗೂ ಬಿಜ್ಜಳನ ಸೈನಿಕರಿಗೂ ಘೋರಯುದ್ಧ ನಡೆದ ಸಂದರ್ಭವಿದೆ. ಕದು ಆಡಿದ ಹಳ್ಳಿ ಕಾದ್ರೊಳ್ಳಿ ಆಯಿತ್ತೆಂಬ ಗ್ರಾಮನಿಷ್ಪತ್ತಿಯನ್ನು ಗುರುತಿಸುತ್ತಾರೆ.

ಅಲ್ಲಿಂದ ಮುಂದೆ ದಯಮಾಡಿಸುವಷ್ಟರಲ್ಲಿ ಎಲ್ಲ ಗಣಂಗಳ ಸಮೂಹವು ನಿಂತು ಅಳಿಯ ಬಿಜ್ಜಳನ ದಂಡು ಬರುತ್ತದೋ ಇಲ್ಲವೊ ಎಂದು ಹಿಂದಕ್ಕೆ ಹಣೆಯ ಮೇಲೆ ಕೈ ಹಚ್ಚಿ ನೋಡಿದ ಸ್ಥಲದಲ್ಲಿ ಮೇಲುಗೈ ಯಲ್ಲಾಪುರವೆಂಬ ಗ್ರಾಮ ನಿರ್ಮಾಣವಾಗಿದೆ. ಮೇಲೆ ಉಲ್ಲೇಖಿಸಿದ ಗ್ರಾಮಗಳು ಶರಣರು ಯಾವ ಯಾವ ಕಾರ್ಯಗಳ ಮಾರ್ಗದಲ್ಲಿ ನಡೆಸಿದ್ದಾರೋ ಆ ಹೆಸರಿನ ಗ್ರಾಮಗಳು ನಿರ್ಮಾಣವಾಗಿವೆ. ಅಲ್ಲಿಂದ ಉಳವಿಗೆ ಹೋಗುವ ಮಾರ್ಗದಲ್ಲಿದ್ದ ಒಂದು ಬೆಟ್ಟದಲ್ಲಿ ಪ್ರಮಥರು ಶಿವಾರ್ಚನೆಯ ಮಾಡಿದ ಸ್ಥಳದಲ್ಲಿ ಲಕ್ಷೋಪ ಲಕ್ಷ ಮಜ್ಜನ ಸಾಲೆ ಧೂಪಾರತಿಗಳನ್ನು ಬಿಟ್ಟು ಮುಂದಕ್ಕೆ ಚಿತ್ತೈಸಿದ ಕಾರಣ ಆ ಮಜ್ಜನ ಸಾಲೆ ಧೂಪಾರತಿಗಳು ಇದ್ದ ಸ್ಥಳಕ್ಕೆ ಹುತ್ತು ಬೆಳೆದು ರಾಶಿ ತುಂಬ ಕಾಣುತ್ತವೆ. ಆ ಸ್ಥಳದಲ್ಲಿ ಧೂಪದ ಗುಡಿ ಎಂತಲು ಹುತ್ತದ ಗುಡಿ ಎಂತಲು ಹೀಗೆ ಆ ಸ್ಥಳಗಳಲ್ಲಿ ದೇವಾಲಯ ಉಂಟಾಗಿದೆ. ಅಲ್ಲಿಂದ ಕರಿಯ ಹೊಳೆಯ ಮುಂತಾದ ನದಿ ಬೆಟ್ಟಗಳು ಕಾಡು ವನಾಂತರಗಳನ್ನು ದಾಟುವಷ್ಟರೊಳಗಾಗಿ ಅಳಿಯ ಬಿಜ್ಜಳನ ದಂಡು ಬೆಟ್ಟದ ಬಲಭಾಗದ ಉತ್ತರ ದಿಕ್ಕಿನ ಮಾರ್ಗವಾಗಿ ಬೆಟ್ಟವನ್ನು ಹತ್ತುತ್ತಿರುವಾಗ ಆ ಪ್ರಮಥ ಗಣಂಗಳೊಡನೆ ಇದ್ದ ಕಿನ್ನರಿಯ ಬ್ರಹ್ಮಯ್ಯ ಶರಣರು ಇದಿರಿಗೆ ನಿಂತು ಆ ದಂಡಿನ ಸಂಗಡ ಜಗಳ ಮಾಡಿ ದಂಡು ಮುಂದಕ್ಕೆ ಬಾರದ ಹಾಗೆ ಆ ಗುಡ್ಡದ ಸುತ್ತು ಹೊಳೆಯ ನಿರ್ಮಿಸಿದನು. ಅದರಿಂದ ಅಳಿಯ ಬಿಜ್ಜಳನ ದಂಡು ಮುಂದಕ್ಕೆ ಹೋಗುವದಕ್ಕೆ ಆಸ್ಪದವಾಗದ ಕಾರಣ ಶರಣರ ಕೂಡ ಅಲ್ಲೇ ಯುದ್ಧವನ್ನು ಮಾಡಿದ್ದರಿಂದ ಅದಕ್ಕೆ ಜಗಳಬೆಟ್ಟ ಎಂಬ ಹೆಸರಾಯಿತು. ಇಲ್ಲಿಯವರೆಗೆ ಬೆನ್ನು ಹತ್ತಿದ್ದ ಅಳಿಯ ಬಿಜ್ಜಳನು ಶರಣರಿಗೆ ಶರಣಾಗತನಾಗುತ್ತಾನೆ. ಆಗ ಆತನ ಆನೆ, ಕುದುರೆ, ಕಾಲಾಳು ಮುಂತಾದ ಸೇನೆಯ ಮುಡಿಸಿ ಅಳಿಯ ಬಿಜ್ಜಳನ ಕೈಸೆರೆಯಲ್ಲಿ ಹಿಡಿದುಕೊಂಡು ಶರಣರೊಡನೆ ಬಂದು ಶ್ರೀ ಚನ್ನದಂಡನಾಯಕನಿಗೆ ಒಪ್ಪಿಸಲು ಇದನ್ನು ಕಂಡು ಚನ್ನಬಸವಣ್ಣನವರ ತಾಯಿ ಅಕ್ಕನಾಗಮ್ಮನವರು ಶಿವಶರಣರಲ್ಲಿ ಇಂಥ ಶತ್ರು ಜಯಾರ್ಥವಾದ ಪ್ರಾಣಹಿಂಸೆಯು ಸಲ್ಲದು. ಈ ಅಳಿಯ ಬಿಜ್ಜಳನ ಸೆರೆಯಂ ಬಿಟ್ಟು ಆತನ ಆನೆ, ಕುದುರೆ, ಕಾಲಾಳು, ರಾವುತ ರಾಣಿಯರು, ಪ್ರಧಾನರು ಮುಂತಾದ ಮಡಿದವರಿಗೆ ಪ್ರಾಣವಂ ಕೊಟ್ಟು ರಕ್ಷಿಸಿ ಅಳಿಯ ಬಿಜ್ಜಳನಿಗೆ ಕಲ್ಯಾಣಪುರದರಸ ಬಿಜ್ಜಳನ ಪಟ್ಟವಂ ಕಟ್ಟ ಕಳುಹಿಸು ಎಂದು ಚನ್ನಬಸವರಾಜೇಂದ್ರರಿಗೆ ಅಪ್ಪಣೆ ಕೊಡಲು, ತಾಯಿಯವರ ನಿರೂಪ ಪ್ರಕಾರ ನೃಪತಿಗೆ ಶ್ರೀ ಚನ್ನಬಸವರಾಜೇಂದ್ರರು ಪಟ್ಟವಂ ಕಟ್ಟಿ ಅವನ ಆನೆ, ಕುದುರೆ, ಕಾಲಾಳು ಮಂತ್ರಿ ಸೇನಾಧಿಪರು ಮುಂತಾದ ದಂಡಿಗೆ ಪ್ರಾಣವಂ ಕೊಟ್ಟ ನೀನು ಕಲ್ಯಾಣಕ್ಕೆ ಹೋಗು ಎಂದು ಆಶೀರ್ವಾದ ಮಾಡುತ್ತಾರೆ ಎಂಬ ಸಂಗತಿ ಕಾಲಜ್ಞಾನ ವಚನದಲ್ಲಿ ಬರುತ್ತದೆ. ಶರಣರು ಎಷ್ಟು ಕ್ಷಮಾ ಹೃದಯಿಗಳು ಆಗಿದ್ದರು ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.

ಶರಣರ ಹೆಜ್ಜೆ ಗುರುತುಗಳು ಬೆಳಗಾವಿ ಜಿಲ್ಲೆಯಲ್ಲಿ ಹೇಗೆ ಸಾಗಿ ಹೋದವು ಎಂಬುದನ್ನು ಹಿಂದಿನ ಲೇಖನದಲ್ಲಿ ಗಮನಿಸಿದ್ದೇವೆ.

ಕಿನ್ನರಿಯ ಬೊಮ್ಮಯ್ಯಗಳು ಹೊಳೆಯ ದಾರಿ ತೋರಿದ ಕಾರಣ, ಬೊಮ್ಮಯ್ಯನ ಹೊಳೆ ಎಂತಲು, ಪ್ರಮಥರು ಕೂಡಿದ ಬೈಲಿಗೆ ಬೈಲ ಬಸವನ ಗುಡಿಯೆಂತಲು, ಉಳಿವಿಯಲ್ಲಿ ಚನ್ನಬಸವೇಶ್ವರನ ಮಠ ವೆಂತಲು, ಮಹಾಮನೆ ಗವಿಯು ಅಕ್ಕ ನಾಗಮ್ಮನ ಗವಿಯು ಉಳಿವಿ ವಿಭೂತಿ ರುದ್ರಾಕ್ಷಿ ಕಣಜವು ಕೈಲಾಸದ ದ್ವಾರವು ಮೊದಲಾದ ಅನೇಕ ಮಹತ್ವವುಳ್ಳ ಸ್ಥಳುಗಳು ಉಳವಿಯಲ್ಲಿ ಇಂದಿಗೂ ನೋಡಲು ದೊರೆಯುತ್ತವೆ.

ಚನ್ನಬಸವಣ್ಣನವರು ಅಪಾರ ಶರಣಸಮೂಹವನ್ನು ಕಲ್ಯಾಣದಿಂದ ನಡೆದುಕೊಂಡು ಉಳವಿಯವರೆಗೆ ಬರುವ ಸಂದರ್ಭದಲ್ಲಿ ಅನುಭವಿಸಿದ ಆತಂಕ, ನೋವು ವರ್ಣಿಸಲು ಸಾಧ್ಯವಿಲ್ಲ. ಬೆಳಗಾವಿ ಜಿಲ್ಲೆ ಕಾರೀಮನಿಯಲ್ಲಿ ಮಡಿವಾಳ ಮಾಚಿದೇವರು ರಕ್ತಕಾರಿಕೊಂಡರೆಂದು ಹೇಳುತ್ತಾರೆ. ಹೀಗೆ ಶರಣರು ಪ್ರತಿಯೊಂದು ಹೆಜ್ಜೆ ಹೆಜ್ಜೆಗೂ ಅನುಭವಿಸಿದ ಯಾತನೆ ನೆನಪಿಸಿಕೊಂಡರೆ ಮೈಜುಮ್ಮೆನ್ನುತ್ತದೆ. ಎಂತಹ ಗಂಡಾಂತರವನ್ನು ಎದುರು ಹಾಕಿಕೊಂಡು ಶರಣರು ಉಳವಿಯತ್ತ ಪಯಣ ಮಾಡಿದರು ಎಂಬುದರ ಅರಿವು ನಮಗಾಗುತ್ತದೆ.

ಅಂದು ಶರಣರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ವಚನಗಳನ್ನು ಸಂರಕ್ಷಣೆ ಮಾಡಿದರೆಂದು ನಾವಿಂದು ವಚನಗಳನ್ನು ಓದುತ್ತಿದ್ದೇವೆ, ಅಧ್ಯಯನ ಮಾಡುತ್ತಿದ್ದೇವೆ. ಅಂತಹ ಪರಮ ಪವಿತ್ರ ಶರಣ ಚೇತನಗಳಿಗೆ ಲಿಂಗಾಯತರು ಎಷ್ಟು ಚಿರಋಣಿಗಳಾದರೂ ಸಾಲದು.

ಚನ್ನಬಸವಣ್ಣನವರು ಉಳವಿಗೆ ಬಂದ ಕೆಲವು ದಿನಗಳಲ್ಲಿ ಲಿಂಗೈಕ್ಯರಾದರು. ಅವರ ಒಟ್ಟು ಆಯುಷ್ಯವನ್ನು ಕೇವಲ ೨೪ ವರ್ಷವೆಂದು ಈಗಾಗಲೇ ಎಲ್ಲ ವಿದ್ವಾಂಸರು ಒಪ್ಪಿದ್ದಾರೆ. ಮಹಾಜ್ಞಾನಿಗಳಾದವರ ಆಯುಷ್ಯ ತುಂಬ ಕಡಿಮೆ ಇರುತ್ತದೆ ಎಂಬ ಭಾವ ಮೂಡುತ್ತದೆ. ವೈದಿಕರ ಕಿರುಕುಳಕ್ಕೆ ಬೇಸತ್ತು, ಭಗವದ್ಗೀತೆಯನ್ನೇ ಅಪವರ್ಗೀಕರಣಗೊಳಿಸಿ, ಜ್ಞಾನೇಶ್ವರಿ ರಚಿಸಿದ ಮಹಾರಾಷ್ಟçದ ಮಹಾಸಂತ ಜ್ಞಾನೇಶ್ವರನು ಬದುಕಿದ್ದು ಕೇವಲ ೧೯ ವರುಷಗಳು. ಇಡೀ ಭರತಖಂಡ ಸುತ್ತಿ ವೇದಾಂತ ಪ್ರಸಾರ ಮಡಿದ ಶಂಕರಾಚಾರ್ಯರು ಬದುಕಿದ್ದು ಕೇವಲ ೩೨ ವರುಷ. ಭಾರತದ ಧರ್ಮಪರಂಪರೆಯನ್ನು ಪಾಶ್ಚಾತ್ಯರಿಗೆ ಮೊಟ್ಟ ಮೊದಲು ಪರಿಚಯಿಸಿದ ಸ್ವಾಮಿ ವಿವೇಕಾನಂದರು ಬದುಕಿದ್ದು ಕೇವಲ ೩೬ ವರುಷ. ಹಾಗೆಯೇ ಚನ್ನಬಸವಣ್ಣನವರು ಕೂಡ ೨೪ನೇ ವಯಸ್ಸಿನಲ್ಲಿಯೇ ಲಿಂಗೈಕ್ಯರಾದರು ಎಂಬ ಸಂಗತಿ ದಾಖಲಾಗಿದೆ.

ಹೀಗೆ ಸಂಪ್ರದಾಯವಾದಿಗಳ, ಮೂಲಭೂತವಾದಿಗಳ ತಂತ್ರ ಕುತಂತ್ರದಿಂದ ಶರಣರ ವಚನ ಚಳವಳಿ ಕ್ರಾಂತಿಯ ಸ್ವರೂಪವನ್ನು ಪಡೆಯುವಂತಾಯಿತು. ಇಂತಹ ಘಟನೆ ಜಗತ್ತಿನ ಯಾವ ಭಾಗದಲ್ಲಿಯೂ ನಡೆದ ಸಾಕ್ಷಿಯಿಲ್ಲ.

ಚನ್ನಬಸವಣ್ಣನವರು ಶರಣ ಸಂಕುಲದ ನೇತಾರರಾಗಿ, ಷಡುಸ್ಥಲಜ್ಞಾನಿಯಾಗಿ ಲಿಂಗಾಯತ ಧರ್ಮಕ್ಕೊಂದು ಸಂವಿಧಾನವನ್ನು ಕಲ್ಪಿಸಿಕೊಟ್ಟ ಮಹಾನುಭಾವರು. ಅಂತಹ ಮಹಾತ್ಮರನ್ನು ನೆನೆಯುವುದೇ ನಮ್ಮಗಳ ಉದಯ; ಮರೆಯುವುದೇ ಅಸ್ತಮಾನ!

Share This Article
Leave a comment

Leave a Reply

Your email address will not be published. Required fields are marked *