ಕಿಂಕುರ್ವಾಣತೆಯಿಂದ ಬಂದ ಜಂಗಮವೆ ಲಿಂಗವೆಂದು
ಉಳ್ಳುದನರಿದು ಮನಸಹಿತ ಮಾಡುವಲ್ಲಿ ಭಕ್ತ.
ನಿಷ್ಠೆ ನಿಬ್ಬೆರಸಿ ಗಟ್ಟಿಗೊಂಡು
ಅಭಿಲಾಷೆಯ ಸೊಮ್ಮು ಸಮನಿಸದೆ
ಪರಿಚ್ಛೇದ ಬುದ್ಧಿಯುಳ್ಳಲ್ಲಿ ಮಾಹೇಶ್ವರ.
ಅನರ್ಪಿತ ಸಮನಿಸದೆ, ಬಂದುದ ಕಾಯದ ಕರಣದ
ಕೈಯಲು ಕೊಟ್ಟು, ಲಿಂಗಸಹಿತ ಭೋಗಿಸುವಲ್ಲಿ ಪ್ರಸಾದಿ.
ಪ್ರಾಣಕ್ಕೆ ಪ್ರಾಣವಾಗಿ ಇದ್ದುದನು ಕಾಯಸ್ಥಿತಿಯರಿದು
ಎಚ್ಚರಿಕೆಗುಂದದಿಪ್ಪಲ್ಲಿ ಪ್ರಾಣಲಿಂಗ ಸಂಬಂಧಿ.
ತನಗೆ ಲಿಂಗವಾಗಿ, ಲಿಂಗಕ್ಕೆ ತಾನಾಗಿ
ಬೆಚ್ಚು ಬೇರಿಲ್ಲದ ಬೆಡಗಿನ ಒಲುಮೆಯಲ್ಲಿ ಶರಣ.
ಸದಾಚಾರ ಸಂಪತ್ತಿನಲ್ಲಿ ಬಂದ ಅನುಭಾವವ ಮೀರಿ
ಹೆಸರಡಗಿದ ಸುಖವದು ಲಿಂಗೈಕ್ಯ.
ಇದು ಕಾರಣ, ಕೂಡಲಚೆನ್ನಸಂಗನಲ್ಲಿ
ಬಸವಣ್ಣಂಗಲ್ಲದೆ ಷಡುಸ್ಥಲ ವಪೂರ್ವ.
ಬಸವಾದಿ ಶಿವಶರಣರು ಸ್ಥಾಪಿಸಿದ ಲಿಂಗಾಯತ ಧರ್ಮದ ಆತ್ಮಸ್ವರೂಪವಾಗಿ ಷಟ್ ಸ್ಥಲಗಳು ಮೂಡಿ ಬಂದಿವೆ. ಅಂದರೆ ಲಿಂಗಾಯತ ಧರ್ಮವನ್ನು ಸ್ವೀಕರಿಸುವ ಪ್ರತಿಯೊಬ್ಬ ಸಾಧಕನು ತನ್ನ ಲಿಂಗಪೂಜೆಯ ಮೂಲಕ ಏರಬಹುದಾದ ಎತ್ತರದ ಆರು ಮಹತ್ವದ ಹಂತಗಳನ್ನು ಶರಣರು ಪ್ರತಿಪಾಸಿದರು. ಮೊದಲು ಭಕ್ತನಾಗಿ ಏನೂ ಗೊತ್ತಿಲ್ಲದ ಹಂತದಲ್ಲಿರುವಾಗಿ ಪಿಂಡಸ್ಥಲದಿಂದ ಗುರುಕರುಣೆಯೆಡೆಗೆ ಸಾಗುತ್ತಾನೆ. ನಂತರ ಮಹೇಶ್ವರ ಸ್ಥಲದಲ್ಲಿ ನಿಷ್ಠೆಯನ್ನು ಬೆಳೆಸಿಕೊಂಡು, ಪ್ರಸಾದಿ, ಪ್ರಾಣಲಿಂಗಿ, ಶರಣ ಮತ್ತು ಐಕ್ಯಸ್ಥಲದವರೆಗೆ ಸಾಗುವ ಪ್ರಕ್ರಿಯೆಯನ್ನು ಷಟ್ಸ್ಥಲಮಾರ್ಗವೆಂದು ಶರಣರು ಕರೆದರು.
ಅನುಭವ ಮಂಟಪದಲ್ಲಿ ಷಟ್ಸ್ಥಲವನ್ನು ಮೊಟ್ಟಮೊದಲು ಪ್ರತಿಪಾದಿಸಿದವರು ಚನ್ನಬಸವಣ್ಣನವರು. ಅಂತೆಯೆ ಅವರನ್ನು ಷಡುಸ್ಥಲಿ ನಿರ್ಣಯಿ, ಷಡುಸ್ಥಲ ಮೂರ್ತಿ, ಷಡುಸ್ಥಲ ಬ್ರಹ್ಮಿ, ಷಟ್ಸ್ಥಲ ಸ್ಥಾಪನಾಚಾರ್ಯ ಎಂದೆಲ್ಲ ಗುರುತಿಸಲಾಗಿದೆ. ‘ಷಡುಸ್ಥಲದ ಮೂರ್ತಿಯಾಗಿ ಬಂದೆಯಲ್ಲಾ ಚನ್ನಬಸವಣ್ಣ’ ಎಂದು ಬಸವಣ್ಣನವರೇ ಬಣ್ಣಿಸಿದ್ದಾರೆ.
ಷಟ್ಸ್ಥಲ ಸಿದ್ಧಾಂತ ಕ್ರಮಸಮುಚ್ಛಯದ ಬಗ್ಗೆ ಅನುಭವ ಮಂಟಪದಲ್ಲಿ ಎಲ್ಲ ಶರಣರೊಂದಿಗೆ ದೀರ್ಘವಾದ ಚರ್ಚೆ ನಡೆದಂತೆ ತೋರುತ್ತದೆ. ಅನೇಕರು ಈ ವಿಷಯವಾಗಿ ಕೆಲವು ಸಂದೇಹಗಳನ್ನು ಎತ್ತಿದಂತೆ ಕಾಣುತ್ತದೆ. ಅದಕ್ಕೆಲ್ಲ ಚನ್ನಬಸವಣ್ಣನವರು ತುಂಬ ಅರ್ಥಪೂರ್ಣವಾದ ಉತ್ತರಗಳನ್ನು ನೀಡಿ ಷಟ್ಸ್ಥಲ ಸಿದ್ಧಾಂತವನ್ನು ಪ್ರತಿಷ್ಠಾಪಿಸಿದರು. ಉದಾಹರಣೆಗೆ ಬಸವಣ್ಣನವರು ಷಟ್ಸ್ಥಲದ ವಿಷಯವಾಗಿ ಎತ್ತಿದ ಆಕ್ಷೇಪಣೆ ಹೀಗಿದೆ:
ಮೆಲ್ಲಮೆಲ್ಲನೆ ಭಕ್ತನಪ್ಪೆ
ಮೆಲ್ಲಮೆಲ್ಲನೆ ಮಹೇಶ್ವರನಪ್ಪೆ
ಮೆಲ್ಲಮೆಲ್ಲನೆ ಪ್ರಸಾದಿಯಪ್ಪೆ
ಮೆಲ್ಲಮೆಲ್ಲನೆ ಪ್ರಾಣಲಿಂಗಿಯಪ್ಪೆ
ಮೆಲ್ಲಮೆಲ್ಲನೆ ಶರಣನಪ್ಪೆ
ಮೆಲ್ಲಮೆಲ್ಲನೆ ಐಕ್ಯನಪ್ಪೆ….
ಎಂದು ಬಸವಣ್ಣನವರು ಹೇಳಿದಾಗ, ಅದಕ್ಕೆ ಪ್ರತಿಕ್ರಿಯೆಯಾಗಿ ಚನ್ನಬಸವಣ್ಣನವರು ಷಟ್ಸ್ಥಲದ ಕ್ರಮಸಮುಚ್ಛಯವನ್ನು ಹೀಗೆ ವಿವರಿಸುತ್ತಾರೆ:
ಮೆಲ್ಲಮೆಲ್ಲನೆ ಭಕ್ತ, ಮೆಲ್ಲಮೆಲ್ಲನೆ ಮಾಹೇಶ್ವರ
ಮೆಲ್ಲಮೆಲ್ಲನೆ ಪ್ರಸಾದಿ, ಮೆಲ್ಲಮೆಲ್ಲನೆ ಪ್ರಾಣಲಿಂಗಿ
ಮೆಲ್ಲಮೆಲ್ಲನೆ ಶರಣ, ಮೆಲ್ಲಮೆಲ್ಲನೆ ಐಕ್ಯರಾದೆವೆಂಬುವರು ನಿಮ್ಮ ಶರಣರು
ತಾವೇನು ಮರುಜೀವಣಿಯ ಕೊಂಡರೆ?
ಅಮೃತಸೇವನೆಯ ಮಾಡಿದರೆ?
ಆವ ಸ್ಥಲದಲ್ಲಿ ನಿಂದರೂ ಆ ಸ್ಥಲದಲ್ಲಿ ಷಡುಸ್ಥಲವಡಗದಿರ್ದಡೆ
ಆ ಭಕ್ತನ ಬಾಯಲ್ಲಿ ಹುಡಿಮಣ್ಣು ಹುಯ್ದು ಹೋಗನೆ…..
ಬಸವಣ್ಣನವರು ಒಂದೊಂದೆ ಸ್ಥಲವನ್ನು ಸಾಧಿಸುತ್ತ ಐಕ್ಯಸ್ಥಲವನ್ನು ಮುಟ್ಟಬೇಕೆಂಬ ಕ್ರಮ ಹೇಳಿದರೆ, ಅದಕ್ಕೆ ಪರ್ಯಾಯವಾಗಿ ಚನ್ನಬಸವಣ್ಣನವರು ಒಂದೇ ಸ್ಥಲದಲ್ಲಿ ನಿಂತುಕೊಂಡು, ಉಳಿದೆಲ್ಲ ಸ್ಥಲಗಳನ್ನು ಸಾಧನೆ ಮಾಡಬಹುದು ಎಂದು ಹೇಳುತ್ತಾರೆ. ಹೀಗೆ ಷಟ್ಸ್ಥಲಕ್ಕೆ ಒಂದು ಅಂತಿಮ ಸ್ವರೂಪ ನೀಡಿದ ಕೀರ್ತಿ ಮತ್ತು ಶ್ರೇಯಸ್ಸು ಚನ್ನಬಸವಣ್ಣನವರದು. ಅಂತೆಯೆ ಅವರು ನಿಜವಾದ ಷಟ್ಸ್ಥಲ ಜ್ಞಾನಿಯಾಗಿದ್ದಾರೆ.
ಷಟ್ಸ್ಥಲ ಸಿದ್ಧಾಂತ, ಪ್ರವೃತ್ತಿ ಮತ್ತು ನಿವೃತ್ತಿಗಳೆಂಬ ಎರಡು ಮಾರ್ಗಗಳನ್ನು ಹೊಂದಿದೆ. ಶೂನ್ಯದಿಂದ ಜಗತ್ತಿನವರೆಗೆ ವಿಕಾಸಗೊಳ್ಳುತ್ತ ಸಾಗುವುದು ಪ್ರವೃತ್ತಿ ಮತ್ತು ಇಲ್ಲಿಂದ ಶೂನ್ಯದತ್ತ ಸಾಗುವುದಕ್ಕೆ ನಿವೃತ್ತಿ ಮಾರ್ಗ ಎಂದು ಕರೆದರು. ಪ್ರವೃತ್ತಿ ಮತ್ತು ನಿವೃತ್ತಿ ಮಾರ್ಗಗಳಿಗೆ ಅನುಕ್ರಮವಾಗಿ ‘ಅವತರಣ’ ಮತ್ತು ‘ಉದ್ಧರಣ’ಗಳೆಂದು ಶರಣರು ಪಾರಿಭಾಷಿಕ ಪದಬಳಸಿ ನಿರೂಪಿಸಿದರು. ಸಾಧಕ ಅವತರಣದ ಅಜ್ಞಾನ ಮತ್ತು ಉದ್ಧರಣದ ಜ್ಞಾನ, ಎರಡನ್ನೂ ಸ್ಪಷ್ಟವಾಗಿ ಅರಿತಿರಬೇಕು. ಜಗತ್ತಿನ ಮೂಲ ಶೂನ್ಯ ಎಂಬ ಪರಿಜ್ಞಾನ ಇಲ್ಲದೆ ಇದ್ದರೆ, ಸಾಧನೆ ಮಾಡುವುದು ಕಷ್ಟ. ಸಾಧಕನಿಗೆ ಮೊದಲು ಶೂನ್ಯ, ಕೊನೆಗೆ ಶೂನ್ಯ ಎಂಬುದು ತಿಳಿದಿರಬೇಕು, ವಸ್ತುಗಳು ಸ್ಥೂಲ ಸ್ಥೂಲವಾಗಿ ರೂಪಗೊಂಡವು. ದೇಹ, ಶೂನ್ಯದ ಒಂದು ರೂಪ; ಶೂನ್ಯದಿಂದ ಹುಟ್ಟಿದ ವಸ್ತುಗಳು ಶೂನ್ಯದಿಂದ ಭಿನ್ನವಾಗಿರುವುದಿಲ್ಲ. ‘ನಾನು’ ಇದು ಕೂಡ ಶೂನ್ಯದ ರೂಪವೆ. ಅದೃಶ್ಯದಿಂದ, ದೃಶ್ಯವಾಗಿ ತೋರುವ ವಿಸ್ತಾರವಾದ ಜಗತ್ತು ಯಾವ ರೀತಿಯಲ್ಲಿ ದೃಶ್ಯವಾಗಿ ತೋರಿತೊ, ಅದೆ ರೀತಿಯಲ್ಲಿ ನಾವು ಶೂನ್ಯದತ್ತ ನಿಧಾನವಾಗಿ ಸಾಗುವುದು. ಇದು ಷಟ್ಸ್ಥಲ ಸಾಧನಾ ಪಥ.
ವಿಶ್ವಾಸದಿಂದ ಭಕ್ತನಾಗಿ,
ಆ ವಿಶ್ವಾಸದೊಳಗಣ ನಿಷ್ಠೆಯಿಂದ ಮಹೇಶ್ವರನಾಗಿ,
ಆ ನೈಷ್ಠೆಯೊಳಗಣ ಸಾವಧಾನದಿಂದ ಪ್ರಸಾದಿಯಾಗಿ
ಆ ಸಾವಧಾನದೊಳಗಣ ಸ್ವಾನುಭಾವದಿಂದ ಪ್ರಾಣಲಿಂಗಿಯಾಗಿ
ಆ ಸ್ವಾನುಭಾವದೊಳಗಣ ಅರಿವಿನಿಂದ ಶರಣನಾಗಿ,
ಆ ಅರಿವು ನಿಜದಲ್ಲಿ ಸಮರಸಭಾವದಿನೈದಿ ನಿರ್ಭಾವ ಪದದೊಳು
ನಿಂದ ಭೇದವೇ ಐಕ್ಯಸ್ಥಲ, ಕಾಣಾ ಗುಹೇಶ್ವರಾ
ಶರಣರು ಸಂಸಾರದಿಂದ ಶೂನ್ಯದವರೆಗೆ ಸಾಗುವ ಸಾಧನೆಯ ಪಥವನ್ನು ‘ಷಟ್ಸ್ಥಲ’ ಎಂದು ಕರೆದರು. ಷಟ್ಸ್ಥಲ ಮಾರ್ಗ ಶೂನ್ಯದಲ್ಲಿ ಪರಿಸಮಾಪ್ತಿಗೊಳ್ಳುವುದು.
ತತ್ವಗಳು ಜನತೆಯ ಆಚರಣೆಯಲ್ಲಿ ಇಳಿಯುವಂತಾದಾಗ ಮಾತ್ರ ಜೀವಂತವಾಗಿ ಸಾರ್ಥಕತೆಯನ್ನು ಪಡೆಯುತ್ತವೆ. ವಿಚಾರರಹಿತವಾದ ಆಚಾರವಾಗಲೀ, ಆಚಾರವಿಲ್ಲದ ವಿಚಾರವಾಗಲೀ ಪೂರ್ಣವಾಗುವುದಿಲ್ಲ. ಇವೆರಡರ ಸುಂದರ ಸಮನ್ವಯದಿಂದ ಪೂರ್ಣಗೊಂಡಿತು ಷಟ್ಸ್ಥಲಮಾರ್ಗ, ಶರಣ ಸಿದ್ಧಾಂತ. ಆ ಆಚರಣೆಯ ಮಾರ್ಗವನ್ನು ಶರಣರು ‘ಷಟ್ಸ್ಥಲ ಸಿದ್ಧಾಂತ’ ಎಂದು ಕರೆಯುತ್ತಾರೆ. ಇದು ಸಿದ್ಧಾಂತವೂ ಹೌದು, ಆಚರಣೆಯ ಪ್ರಾಯೋಗಿಕ ವಿಧಾನವೂ ಹೌದು.
‘ಸ್ಥಲ’ ಎನ್ನುವ ಮಾತಿಗೆ, ಮೆಟ್ಟಿಲು ಎನ್ನುವ ರೂಢವಾದ ಅರ್ಥವಿದೆ. ಸಾಧಕ ತನ್ನ ಕೊನೆಯ ಗುರಿಯನ್ನು ಸೇರುವ ಮಾರ್ಗದಲ್ಲಿ ನಿರ್ಮಿತವಾದ ವಿವಿಧ ಹಂತಗಳು ಎಂದು ಈ ಅರ್ಥದಲ್ಲಿ ಇಟ್ಟುಕೊಳ್ಳಬಹುದು. ಆದರೆ ಇಷ್ಟೆ ಅಲ್ಲದೆ ‘ಸ್ಥಲ’ ಶಬ್ದಕ್ಕೆ ಒಂದು ವಿಶಿಷ್ಟವಾದ ಅರ್ಥವನ್ನು ಶರಣರು ಕಲ್ಪಿಸಿದ್ದಾರೆ. ಏಕಮೇವಾದ್ವಿತೀಯವಾದ ಪರಶಿವತತ್ವವನ್ನೇ ‘ಸ್ಥಲ’ ಎನ್ನುವ ಹೆಸರಿನಿಂದ ಕರೆಯಲಾಗಿದೆ. ಶಕ್ತಿವಿಶಿಷ್ಟವಾದ ಈ ಸ್ಥಲ ಅಂದರೆ ಶಿವತತ್ವ, ತನ್ನಲ್ಲಿರುವ ವಿಮರ್ಶ ಶಕ್ತಿಯಿಂದ ಸೃಷ್ಟಿಗೆ ಕಾರಣವಾಗುತ್ತದೆ. ಎರಡಿಲ್ಲದಂತಿದ್ದ ಆ ನಿಃಕಲಲಿಂಗ ತನ್ನ ಶಕ್ತಿಯ ಕ್ಷೋಭೆಯಿಂದ ಅಂದರೆ ಚಲನೆಯಿಂದ ಲಿಂಗಸ್ಥಲ, ಅಂಗಸ್ಥಲ ಎಂದು ಎರಡಾಗುತ್ತದೆ. ಲಿಂಗಸ್ಥಲವೇ ಶಿವ, ಅಂಗಸ್ಥಲವೇ ಜೀವ. ಒಂದು ಉಪಾಸ್ಯ ಇನ್ನೊಂದು ಉಪಾಸಕ. ಈ ಎರಡೂ ಪರಶಿವಸ್ವರೂಪವೇ. ಆಭರಣ ರೂಪಗಳನ್ನು ಧರಿಸಿ ಚಿನ್ನ ಬೇರೆ ಬೇರೆ ಹೆಸರುಗಳನ್ನು ಪಡೆದರೂ ಸ್ವರೂಪತಃ ಚಿನ್ನವೇ ಆಗಿರುವಂತೆ ಲಿಂಗಸ್ಥಲದಂತೆ ಅಂಗ ಸ್ಥಲವೂ ಪರಶಿವ ಸ್ವರೂಪವೇ ಆಗಿರುತ್ತದೆ. ಆದರೆ ಸೃಷ್ಟಿ ಮುಖವಾದಾಗ ಆ ಅರಿವಿನಿಂದ ಅದು ಮರೆಯಾಗಿ ಹಂತ ಹಂತವಾಗಿ ಕೆಳಗಿಳಿದು ಜೀವ ಎನಿಸಿಕೊಳ್ಳುತ್ತದೆ. ಆ ಸ್ವರೂಪವನ್ನು ಪಡೆಯುವುದೇ ಪ್ರವೃತ್ತಿ ಪರವಾದ ಈ ಮಾರ್ಗದ ಕೊನೆಯ ಗುರಿ.
ಈ ಆರುಸ್ಥಲಗಳಾವುವೆಂಬುದನ್ನು ಮೊದಲು ಇಲ್ಲಿ ಗಮನಿಸಬೇಕು. ಅಂಗಸ್ಥಲ ಮೊದಲು ಮೂರಾಗುತ್ತದೆ; ಯೋಗಾಂಗ, ಭೋಗಾಂಗ, ತ್ಯಾಗಾಂಗ- ಎಂಬುದಾಗಿ. ಈ ಒಂದೊಂದರಲ್ಲೂ ಮತ್ತೆ ಎರಡೆರಡಾಗುತ್ತವೆ. ಯೋಗಾಂಗದಲ್ಲಿ ಐಕ್ಯಸ್ಥಲ, ಶರಣಸ್ಥಲ; ಭೋಗಾಂಗದಲ್ಲಿ ಪ್ರಾಣಲಿಂಗಿಸ್ಥಲ, ಪ್ರಸಾದಿಸ್ಥಲ; ತ್ಯಾಗಾಂಗದಲ್ಲಿ ಮಹೇಶ್ವರಸ್ಥಲ, ಭಕ್ತ ಸ್ಥಲ. ಇದು ಅವತರಣ ಕ್ರಿಯಾವಿನ್ಯಾಸ ಅಂದರೆ ಐಕ್ಯಸ್ಥಲದಿಂದ ಕ್ರಮೇಣ ಕೆಳಗಿಳಿಯುತ್ತಾ ಭಕ್ತಸ್ಥಲಕ್ಕೆ ಬರುವ ಕ್ರಮ ಸಾಧಕನ ಉತ್ತರಣಕ್ರಿಯೆಯ ದೃಷ್ಟಿಯಿಂದ ಭಕ್ತಸ್ಥಲ ಮೊದಲನೆಯದು. ಅಲ್ಲಿಂದ ಕ್ರಮವಾಗಿ ಮಹೇಶ್ವರ, ಪ್ರಸಾದಿ, ಪ್ರಾಣಲಿಂಗಿ, ಶರಣ ಮತ್ತು ಐಕ್ಯ ಸ್ಥಲಗಳವರೆಗೆ ಆತ ಏರಬೇಕಾಗುತ್ತದೆ. ಹಾಗೆಯೇ ಲಿಂಗಸ್ಥಲವೂ ಮೊದಲು ಭಾವಲಿಂಗ, ಪ್ರಾಣಲಿಂಗ, ಇಷ್ಟಲಿಂಗ ಎಂದಾಗಿ ಇವುಗಳಲ್ಲಿ ಕ್ರಮವಾಗಿ ಮತ್ತೆ ಎರಡೆರಡಾಗಿ ಮಹಾಲಿಂಗ, ಪ್ರಸಾದಲಿಂಗ, ಜಂಗಮಲಿಂಗ, ಶಿವಲಿಂಗ, ಗುರುಲಿಂಗ ಆಚಾರಲಿಂಗ ಎಂದು ಆರು ಲಿಂಗ ಸ್ಥಲಗಳಾಗುತ್ತವೆ. ಹಿಂದಿನಂತೆ ಉತ್ತರಣಕ್ರಿಯೆಯ ದೃಷ್ಟಿಯಿಂದ ಆಚಾರಲಿಂಗ ಮೊದಲನೆಯದಾಗಿ ಅದು ಭಕ್ತಸ್ಥಲವನ್ನು ಆಶ್ರಯಿಸುತ್ತದೆ. ಅಲ್ಲಿ ಮುಂದಿನ ಸ್ಥಲಗಳಲ್ಲಿ ಮೇಲೇರಿದಂತೆ ಲಿಂಗವೂ ಕ್ರಮವಾಗಿ ಗುರುಲಿಂಗ, ಶಿವಲಿಂಗ, ಜಂಗಮಲಿಂಗ, ಪ್ರಸಾದಲಿಂಗ, ಮಹಾಲಿಂಗ ಎಂದು ವಿಕಾಸ ಗೊಳ್ಳುತ್ತಾ ಹೋಗುತ್ತದೆ.
ಇದು ಷಟ್ಸ್ಥಲ ಮಾರ್ಗದಲ್ಲಿ ಗಮನಿಸಬೇಕಾದ ಬಹಳ ಮುಖ್ಯವಾದ ಅಂಶ. ಭಕ್ತ ಸ್ಥಲದಿಂದ ಐಕ್ಯಸ್ಥಲದವರೆಗೆ ಸಾಧಕ ಬೆಳೆಯುತ್ತಾ ಹೋದಂತೆ ಅವನ ಉಪಾಸನೆಯ ಮಾಧ್ಯಮವಾದ ಲಿಂಗದ ಕಲ್ಪನೆಯೂ ಬೆಳೆಯುತ್ತಾ ಹೋಗುತ್ತದೆ. ಮೊದಲನೆಯ ಎರಡು ಸ್ಥಲಗಳಲ್ಲಿ ಇಷ್ಟಲಿಂಗವಾದದ್ದು ಮೂರನೇ ಸ್ಥಲಕ್ಕೆ ಬರುವ ವೇಳೆಗೆ ಪ್ರಾಣಲಿಂಗವಾಗುತ್ತದೆ. ಕೊನೆಯ ಸ್ಥಲಗಳಲ್ಲಿ ಭಾವಲಿಂಗವಾಗುತ್ತದೆ. ಇದರ ಜೊತೆಗೆ ಅಂಗಸ್ಥಲವನ್ನು ಆಶ್ರಯಿಸಿರುವ ಭಕ್ತಿಯೂ ಬೆಳೆಯುತ್ತಾ ಹೋಗುತ್ತದೆ. ಭಕ್ತಸ್ಥಲದಲ್ಲಿ ಶ್ರದ್ಧಾಭಕ್ತಿಯಾದದ್ದು ಮುಂದಿನ ಸ್ಥಲಗಳಿಗೆ ಹೋದಂತೆ ಕ್ರಮವಾಗಿ ನೈಷ್ಠಿಕಾಭಕ್ತಿ, ಅವಧಾನಭಕ್ತಿ, ಅನುಭಾವಭಕ್ತಿ, ಆನಂದಭಕ್ತಿ, ಸಮರಸಭಕ್ತಿಯಾಗುತ್ತದೆ. ಲಿಂಗವನ್ನಾಶ್ರಯಿಸಿದ ಕಲಾಶಕ್ತಿಯೂ ಇದರ ಜೊತೆಯಲ್ಲಿಯೇ ವಿಕಾಸಗೊಳ್ಳುತ್ತಾ ಹೋಗುತ್ತದೆ. ಆಚಾರಲಿಂಗದಲ್ಲಿ ಕ್ರಿಯಾಶಕ್ತಿ ಯಾದದ್ದು ಮುಂದಿನ ಲಿಂಗಗಳಲ್ಲಿ ಕ್ರಮ ವಾಗಿ ಜ್ಞಾನಶಕ್ತಿ, ಇಚ್ಛಾಶಕ್ತಿ, ಆದಿಶಕ್ತಿ, ಪರಾಶಕ್ತಿ ಮತ್ತು ಚಿತ್ಶಕ್ತಿಯಾಗಿ ಪೂರ್ಣಗೊಳ್ಳುತ್ತದೆ. ಈ ಷಟ್ಸ್ಥಲ ಸಾಧನೆ ಯಾವ ಹಂತದಲ್ಲಿಯೂ ಜಡವಾಗಿ ಉಳಿಯದೆ ನಿರಂತರ ವಿಕಾಸಶೀಲವಾದ ಮಹಾಪರಿವರ್ತನೆಯ ಮಾರ್ಗ ಎಂಬುದನ್ನು ಅಂಗ ಲಿಂಗಗಳ ಮತ್ತು ಶಕ್ತಿ ಭಕ್ತಿಗಳ ಈ ಊರ್ಧ್ವಮುಖ ಬೆಳವಣಿಗೆಯ ಮೂಲಕ ನಿರೂಪಿಸಲು ಪ್ರಯತ್ನಿಸಿರುವುದನ್ನು ಕಂಡುಕೊಳ್ಳಬಹುದು. (ಡಾ. ಎಚ್. ತಿಪ್ಪೇರುದ್ರಸ್ವಾಮಿ : ವಚನ ಚಳುವಳಿ ಪು. ೭೪)
ಶರಣ ಸಂಸ್ಕೃತಿಯು ಎಲ್ಲ ಧರ್ಮ ಮತ ಪಂಥಗಳಿಗಿಂತ ತನ್ನದೇ ಆದ ವೈಶಿಷ್ಟö್ಯತೆಯೊಂದನ್ನು ಹೊಂದಿದೆ. ಶರಣ ಸಂಸ್ಕೃತಿ ಪರಿಪಾಲಿಸುವರು ತಮ್ಮ ಆಚಾರದಲ್ಲಿ, ಪದ್ಧತಿಯಲ್ಲಿ, ನಡೆನುಡಿಯಲ್ಲಿ ಒಂದೊಂದು ರೀತಿಯನ್ನು ಇಟ್ಟುಕೊಂಡಿರುವರು. ಇದು ಬೇರೆಯವರಲ್ಲಿ ಕಂಡುಬರುವದಿಲ್ಲ.
ಷಟ್ ಸ್ಥಲವು ಒಂದು ವಿಶಿಷ್ಟ ಪದ್ಧತಿಯಾಗಿದೆ. ಇದು ಆಲೋಚಿಸಿ ಕೇವಲ ಮಾತನಾಡುವ ವಿಷಯವಲ್ಲ. ಅದು ನಡತೆಯ ವಿಷಯವಾಗಿದೆ. ಶಿವಶರಣರು ಕೇವಲ ತಿಳಿದು ಜ್ಞಾನಿಗಳೆನಿಸಿಕೊಳ್ಳುವದರಲ್ಲಿ ಹೆಮ್ಮೆಪಡುವದಿಲ್ಲ. ಅವರು ಆ ಜ್ಞಾನವನ್ನು ತಮ್ಮ ನಡೆಯಲ್ಲಿ ಅನುಷ್ಠಾನಕ್ಕೆ ತರಲು ಮಹತ್ವ ಕೊಡುತ್ತಾರೆ. ಷಟ್ಸ್ಥಲವು ಈ ನಡೆಯ ವಿಷಯವನ್ನೇ ಹೇಳುತ್ತದೆ. ದೈವವು ಅನುಭವವ ವಿಷಯವಾಗಿದೆ. ಷಟ್ಸ್ಥಲದ ಗ್ರಂಥಗಳಲ್ಲಿ ತರ್ಕ, ವಾದ, ಊಹೆ, ಉತ್ತರಪಕ್ಷ, ಪೂರ್ವಪಕ್ಷ, ಇಂಥ ಯಾವ ವಾದವಿವಾದ ವಿಷಯಗಳಿಗೆ ಇಂಬು ಇಲ್ಲ. ಆದರೆ ಮನುಷ್ಯನು ಹೇಗೆ ನಡೆಯಬೇಕು, ಮನಸ್ಸನ್ನು ಹೇಗೆ ಶುದ್ಧಪಡಿಸಬೇಕು, ತನ್ನಲ್ಲಿ ಪರಮಾತ್ಮನ ಗುಣಗಳನ್ನು ಹೇಗೆ ಬರಮಾಡಿಕೊಳ್ಳಬೇಕು, ಇಂಥ ವಿಷಯಗಳೇ ಇವುಗಳಲ್ಲಿ ಇವೆ. ಬೌದ್ಧ ಧರ್ಮದಲ್ಲಿ ಮನುಷ್ಯನ ನಡೆಯ ಕುರಿತಾದ ವಿಷಯಗಳು ತುಂಬಿವೆ. ಧಮ್ಮಪದ ಇಂಥ ನಡೆನುಡಿಗಳ ಸಂಬಂಧವಾಗಿಯೇ ಮಹತ್ವವನ್ನು ಹೊಂದಿವೆ. ಹಾಗೆಯೇ ಶಿವಶರಣರ ವಚನಗಳು ಕೂಡ ಭಕ್ತನ ನಡೆಯ ವಿಷಯವಾಗಿ ವಿಶ್ಲೇಷಿಸಿ ವಿವೇಚಿಸಿ ಮನುಕುಲದ ಉದ್ಧಾರದ ಮಾರ್ಗವನ್ನು ತೋರಿವೆ.
ಚನ್ನಬಸವಣ್ಣನವರು ಈ ಷಟ್ಸ್ಥಲ ಸಿದ್ಧಾಂತವನ್ನು ಪ್ರತಿಪಾದಿಸುವ ಮೊದಲು ಅವರು ಮನುಷ್ಯನ ಸ್ವಭಾವವನ್ನು ಪರೀಕ್ಷಿಸಬೇಕಾಯಿತು. ಮನುಷ್ಯನ ಸ್ವಭಾವ ವರ್ಣನೆ ಎಂದರೆ ನೀತಿಶಾಸ್ತçವಾಗಿದೆ. ಶರಣರ ಸಮಗ್ರ ವಚನಗಳು ನೀತಿಯ ವಿವೇಚನೆಗಳಿಂದ ತುಂಬಿಹೋಗಿವೆ. ಇವುಗಳು ಒಂದಿಲ್ಲ ಒಂದು ರೀತಿಯಿಂದ ಷಟ್ಸ್ಥಲದ ಆಯಾ ಸ್ಥಳಕ್ಕೆ ಅನುಸರಿಸಿ ಈ ನೀತಿಯನ್ನೇ ಹೇಳುತ್ತವೆ.
ಚನ್ನಬಸವಣ್ಣನವರು ಪ್ರತಿಪಾದಿಸಿದ ಷಟ್ ಸ್ಥಲ ಮಾರ್ಗವು ಮನುಷ್ಯನು ಜಗತ್ತನ್ನು ಬಿಟ್ಟು ಗುಹೆಯಲ್ಲಿ ಕುಳಿತು ಏಕಾಂತದಲ್ಲಿರಬೇಕೆಂದು ಹೇಳುವದಿಲ್ಲ. ಶರಣರು ಹೀಗೆ ಆಚರಿಸುವವರಲ್ಲ. ಅವರು ಜಗತ್ತಿನ ವ್ಯವಹಾರಗಳನ್ನು ಬಿಟ್ಟಿರುವದಿಲ್ಲ. ಶಿವಶರಣರ ರೀತಿಯನ್ನು ನೋಡಿದರೆ ಅವರು ಒಂದೊಂದು ವೃತ್ತಿಯನ್ನು ಮಾಡಿದವರು. ಅವರಲ್ಲಿ ಒಬ್ಬ ಶರಣ ಹುಲ್ಲು ಮಾರುವವನು, ಇನ್ನೊಬ್ಬ ಶರಣ ಅಗಸನು, ಮತ್ತೊಬ್ಬ ಶರಣ ಶಿಂಪಿಗನು, ಹೀಗೆ ನಾನಾ ವಿಧದ ಕಾಯಕದಲ್ಲಿ ಅವರು ತೊಡಗಿಕೊಂಡಿದ್ದರು. ಹೀಗೆ ಶರಣಧರ್ಮವು ಸೋಮಾರಿಗಳ ಧರ್ಮವಾಗಿಲ್ಲ. ಅದು ಕಾರ್ಯತತ್ಪರರ, ಚಟುವಟಿಕೆಯವರ ಧರ್ಮವಾಗಿದೆ.
ಆದ್ದರಿಂದ ಷಟ್ಸ್ಥಲವು ಮನುಷ್ಯನು ಹೇಗೆ ಇದ್ದಾನೆ, ಅವನ ಮನಸ್ಸು, ಚಿತ್ತ, ಬುದ್ಧಿ ಮುಂತಾದವುಗಳ ಗುಣಧರ್ಮಗಳಾವವು, ಅವುಗಳ ಮಾರ್ಪಾಡುಗಳಾವವು, ಅವನ ಮನಸ್ಸಿನ ಶಕ್ತಿಗಳು ಎಂತಹವು, ಶರೀರದ ಕಾರ್ಯಗಳಲ್ಲಿ ಅವುಗಳ ಪರಸ್ಪರ ಸಂಬಂಧವು ಹೇಗಿದೆ ಮುಂತಾದ ಸಂಗತಿಗಳನ್ನು ವಿವೇಚಿಸುತ್ತದೆ. ಹೀಗೆ ಅದು ವಿವೇಚಿಸಿ, ಆಯಾ ಸ್ಥಿತಿಗಳ ಪ್ರಕಾರ ಮನುಷ್ಯನಲ್ಲಿ ಅಯಾ ಲಿಂಗ ಗುಣಗಳನ್ನು ಯಾವ ರೀತಿ ಬರಮಾಡಿಕೊಳ್ಳಬೇಕೆಂಬದನ್ನು ಸೂಚಿಸುತ್ತದೆ. ಪಟ್ಸ್ಥಲದಲ್ಲಿ ಎರಡು ಭಾಗಗಳನ್ನು ಮಾಡುತ್ತಾರೆ. ಒಂದು ಮನುಷ್ಯನ ಗುಣ ಮತ್ತು ಶಕ್ತಿಗಳ ಸ್ಥಿತಿಯ ನಿರೂಪಣೆ. ಮತ್ತೊಂದು ಈ ಗುಣ ಮತ್ತು ಶಕ್ತಿಗಳ ಪ್ರಕಾರ ಲಿಂಗ ಗುಣಗಳನ್ನು ಶರೀರದಲ್ಲಿ ಅಳವಡಿಸಿಕೊಳ್ಳುವಿಕೆ. ಈ ಮೊದಲಿನದನ್ನು ವಿವೇಚಿಸುವಂಥ ಭಾಗಕ್ಕೆ ಕರಣ ಹಸುಗೆ ಎಂದು ಕರೆದರು. ಇದೇ ಷಟ್ಸ್ಥಲ ಮಾರ್ಗದ ತಳಹದಿ ಎಂದು ಹೇಳಬಹುದು. ಇದರ ರಹಸ್ಯ ತಿಳಿದರೆ ಷಟ್ ಸ್ಥಲಗಳಲ್ಲಿ ಬರುವ ಅನೇಕ ಸ್ಥಲಗಳ ಪರಸ್ಪರ ಸಂಬಂಧಗಳನ್ನು ತಿಳಿಯಲು ಅನುಕೂಲವಾಗುತ್ತದೆ.
ಈ ಕರಣ ಹಸುಗೆಯಲ್ಲಿ ಮುಖ್ಯವಾಗಿ ೩೬ ತತ್ವಗಳ ವಿವರಣೆ ಬರುತ್ತದೆ. ಈ ತತ್ವಗಳ ಮೂಲಕವಾಗಿಯೇ ಮನುಷ್ಯನು ವ್ಯವಹರಿಸುತ್ತಾನೆ. ಈ ತತ್ವಗಳು ಯಾವವೆಂದರೆ: ಜ್ಞಾನೇಂದ್ರಿಯಗಳು ಕರ್ಮೇಂದ್ರಿಯಗಳು, ಕರಣಚತುಷ್ಟಯಗಳು ಪಂಚವಾಯುಗಳು, ಪಂಚವಿಷಯಗಳು, ಅಲ್ಲದೆ ಇವುಗಳಿಗೆ ಆಶ್ರಯವಾಗಿ ಅಥವಾ ಚೈತನ್ಯವಾಗಿರುವ ಆತ್ಮನು ಈ ಪ್ರಕಾರ ೨೫ ತತ್ವಗಳು ಇವೆ. ಈ ತತ್ವಗಳ ವಿಶೇಷ ವಿವರಣೆಗಳು ಇದರಲ್ಲಿ ಕಂಡು ಬರುತ್ತವೆ. ಅಲ್ಲದೆ ಇನ್ನೂ ೧೨ ತತ್ವಗಳನ್ನು ಇವುಗಳಲ್ಲಿ ಸೇರಿಸಿ ಒಟ್ಟು ೩೬ ತತ್ವಗಳ ಸಕೀಲ ಸಂಬಂಧ ಮಾಡಿದ್ದಾರೆ. ಇದರಲ್ಲಿ ೧೧ ತತ್ವಗಳು ಪರಮಾತ್ಮನಿಗೆ ಸಂಬಂಧಪಟ್ಟವುಗಳು. ಇವುಗಳಿಗೆ ಲಿಂಗ ತತ್ವಗಳೆಂತಲೂ ಹೆಸರು. ಮೊದಲಿನವುಗಳಿಗೆ ಅಂಗ ತತ್ವಗಳೆಂದು ಹೆಸರು. ಇವೆಲ್ಲ ಮನುಷ್ಯನ ವಿಶೇಷ ಶಕ್ತಿಗಳ ದ್ಯೋತಕವಾಗಿವೆ. ಈ ಎಲ್ಲ ತತ್ವಗಳ ವಿವೇಚನೆಗೆ ಮಹತ್ವದ ಸ್ಥಾನವು ಈ ಕರಣ ಹಸುಗೆಯಲ್ಲಿ ನಿರೂಪಿಲ್ಪಟ್ಟಿದೆ, ಯಾಕೆಂದರೆ ಮನುಷ್ಯನು ವಿಚಾರ ಮಾಡುವದು, ಕ್ರಿಯೆಗಳನ್ನು ಮಾಡುವದು ಇತ್ಯಾದಿ ಕಾರ್ಯಗಳು ಇವುಗಳ ಮೂಲಕವಾಗಿಯೇ ಮಾಡುತ್ತಾನೆ. ಇವುಗಳನ್ನು ಸರಿಯಾಗಿ ನಿರ್ವಹಿಸುದರಿಂದಲೇ ಮನುಷ್ಯನು ವಿಕಾಸತ್ವವನ್ನು ಹೊಂದುತ್ತಾನೆ.
ಈ ತತ್ವಗಳ ವಿವೇಚನೆ ತದನಂತರ ಕರಣ ಹಸುಗೆಯಲ್ಲಿ ಶರೀರದ ರಚನೆಯ ವಿಷಯವಾಗಿ ಅದ್ಭುತವಾದ ಅನೇಕ ವಿವೇಚನೆಗಳು ಮೂಡಿಬಂದಿವೆ. ಶರಣರ ಶರೀರವು ಸ್ಥೂಲ, ಸೂಕ್ಷ್ಮ, ಕಾರಣ ಎಂದು ಮೂರು ವಿಧವಾಗಿದೆ. ೩೬ ತತ್ವಗಳೆಲ್ಲವನ್ನು ಈ ಮೂರು ಶರೀರಗಳಿಗೆ ಅವರು ಸಂಬಂಧಿಸುತ್ತಾರೆ. ಈ ಶರೀರಗಳಲ್ಲದೆ ಇನ್ನೂ ಅನೇಕ ಉಪಶÀರೀರಗಳನ್ನು ಕಲ್ಪಿಸುವದುಂಟು. ಮೂರು ಶರೀರಗಳ ನಿಜವಾದ ಜ್ಞಾನವು ಆಗದ ಹೊರತು, ಪಟ್ ಸ್ಥಲಗಳ ವಿಚಾರವು ಸ್ಪಷ್ಟವಾಗಲಾರದು. ಅವರು ಮಾಡಿರುವ ಎಲ್ಲ ಆಚರಣೆಗಳು ಈ ಮೂರು ಶರೀರಗಳಲ್ಲಿ ಒಂದರ ಮೇಲೆ ಪರಿಣಾಮ ಮಾಡುತ್ತವೆ. ಇವುಗಳನ್ನು ಆ ದೃಷ್ಟಿಯಿಂದಲೇ ನೋಡಿದರೆ ಷಟ್ಸ್ಥಲ ಮಾರ್ಗದ ನಿಜವಾದ ಪರಿಕಲ್ಪನೆ ನಮಗಾಗುವುದು.
ಶರೀರದಲ್ಲಿಯ ವ್ಯಾಪಾರಗಳು ಅನೇಕ ಚಕ್ರಗಳ ಮೂಲಕವಾಗಿ ನಡೆಯುತ್ತವೆ. ಇದು ಯೋಗಶಾಸ್ತ್ರದಲ್ಲಿ ಬರುವ ಮುಖ್ಯ ವಿಷಯವಾಗಿದೆ. ಈ ಚಕ್ರಗಳ ಸ್ಥಿತಿ, ರೀತಿ, ಸ್ವರೂಪ ಮುಂತಾದವುಗಳ ವಿವರಣೆಗಳು ಕರಣಹಸುಗೆ ಯಲ್ಲಿ ಬರುತ್ತವೆ. ಈ ಚಕ್ರಗಳು ಒಟ್ಟು ಆರು. ಈ ಆರು ಚಕ್ರಗಳಿಗೂ ಷಟ್ಸ್ಥಲಗಳಿಗೂ ಅವಿನಾಭಾವ ಸಂಬಂಧವಿದೆ. ಈ ಚಕ್ರಗಳಲ್ಲಿ ದೇವರ ಶ್ರೇಷ್ಠ ಕಳೆಯನ್ನು ಬರಮಾಡಿಕೊಳ್ಳುವದರಿಂದಲೇ ಇವುಗಳಲ್ಲಿ ಆಯಾ ಲಿಂಗಗಳು ಉತ್ಪನ್ನ ವಾಗುತ್ತವೆ. ಅಲ್ಲದೆ ಇದರಲ್ಲಿ ಈ ಚಕ್ರಗಳ ವಿವರಣೆಯಲ್ಲದೆ ಅವುಗಳಿಗೆ ಸಂಬಂಧಿಸಿದ ವ್ಯಾಪಾರಗಳು, ವಾಯುಗಳು, ನಾಡಿಗಳು ಮುಂತಾದ ವಿಷಯಗಳ ವಿವೇಚನೆಯೂ ಅನನ್ಯವಾಗಿ ಬಂದಿದೆ.
ಕರಣ ಹಸಿಗೆಯಲ್ಲಿ ಮನುಷ್ಯನ ಗುಣಸ್ವಭಾವಗಳ ಸ್ಥಿತಿಗತಿಗಳ ವಿಷಯವಾಗಿ ವಿಸ್ತಾರವಾದ ವಿವೇಚನೆಗಳು ಬರುತ್ತವೆ. ಮನುಷ್ಯನ ಮಾನಸಿಕ ವಿಕಾರಗಳು ಯಾವವು, ಅವುಗಳು ಯಾವ ರೀತಿ ಇವೆ. ಉದಾಹರಣಾರ್ಥವಾಗಿ ಅವನಲ್ಲಿರುವ ಭ್ರಮೆಗಳು, ನಾನಾ ಬಗೆಯ ವ್ಯಸನಗಳು, ವಿಕಾರಗಳು, ಅಹಂಕಾರಗಳು, ದೋಷಗಳು ಮುಂತಾದ ವಿಷಯಗಳ ವಿಶ್ಲೇಷಣೆಯನ್ನು ಚನ್ನಬಸವಣ್ಣನವರು ತುಂಬ ಅರ್ಥಪೂರ್ಣವಾಗಿ ಮಾಡಿದ್ದಾರೆ.