ಚನ್ನಬಸವಣ್ಣ ಚರಿತ್ರೆ 23: ನೈಷ್ಠಿಕ ಬದುಕಿನ ನೆಲೆಗಟ್ಟು ಮಾಹೇಶ್ವರ ಸ್ಥಲ

ನಿಷ್ಠೆ ನಿಬ್ಬೆರಗು ಗಟ್ಟಿಗೊಂಡಡೆ
ಏಕೋಭಾವದಲ್ಲಿ ಸೊಮ್ಮು ಸಂಬಂಧ.
ಆಹ್ವಾನ ವಿಸರ್ಜನ ದುರ್ಭಾವಬುದ್ಧಿ ಲಯವಾದಡೆ,
ಆತ ಮಾಹೇಶ್ವರ.
ಗುರುಮುಖದಲ್ಲಿ ಸರ್ವಶುದ್ಧನಾಗಿ
ಪಂಚಭೂತದ ಹಂಗಡಗಿದಡೆ ಆತ ಮಾಹೇಶ್ವರ.
ಪರದೈವ ಮಾನವಸೇವೆ ಪರಸ್ತ್ರೀ
ಪರಧನವ ಬಿಟ್ಟು ಏಕಲಿಂಗನಿಷ್ಠಾಪರನಾಗಿ,
“ದಾಸತ್ವಂ ವೀರದಾಸತ್ವಂ ಭೃತ್ಯತ್ವಂ ವೀರಭೃತ್ಯತಾ|
ಸಮಯಃ ಸಕಲಾವಸ್ಥಃ ಸಜ್ಜನಃ ಷಡ್ವಿಧಸ್ತಥಾ”||
ಎಂಬ ಶ್ರುತ್ಯರ್ಥದಲ್ಲಿ ನಿಹಿತನಾಗಬಲ್ಲಡೆ
ಆತ ಮಾಹೇಶ್ವರನಪ್ಪನಯ್ಯಾ.
ಗುರುಮಾರ್ಗವೆ ತನಗೆ ಸನ್ಮತವಾಗಿ
ಇರಬಲ್ಲಡೆ ಆತ ಮಾಹೇಶ್ವರ.
ಈ ಮತವನರಿಯದ ಮೂಕೊರೆಯರ ಮೆಚ್ಚುವನೆ
ಕೂಡಲಚೆನ್ನಸಂಗಮದೇವ.

ಚನ್ನಬಸವಣ್ಣನವರು ಮಾಹೇಶ್ವರ ಸ್ಥಲದ ನೈಷ್ಠಿಕ ನಿಲುವನ್ನು ಕುರಿತು ರಚಿಸಿದ ತುಂಬ ಮಹತ್ವದ ವಚನವಿದು. ಮಾಹೇಶ್ವರ ಸ್ಥಲದಲ್ಲಿರುವ ಸಾಧಕನು ಗುರುವಿನಲ್ಲಿ ವಿಶೇಷವಾಗಿ ನಿಷ್ಠಾಭಕ್ತಿಯುಳ್ಳವನಾಗಿರುತ್ತಾನೆ. ಯಾಕೆಂದರೆ ಮಹೇಶ ಸ್ಥಲಕ್ಕೆ ಗುರುಲಿಂಗವೇ ಮುಖ್ಯವಾಗಿದೆ. ಮಹೇಶನು ಗುರುವಿನಿಂದ ತ್ರಿವಿಧ ದೀಕ್ಷಾ ಸಂಪನ್ನನಾಗಿ ಗುರುವು ಹೇಳಿಕೊಟ್ಟ ವ್ರತ ನೇಮಾದಿಗಳನ್ನು ತಪ್ಪದೇ ಆಚರಿಸುತ್ತ ಹೋಗುವನು. ಎಂಥ ವಿಘ್ನಗಳು ಬಂದರೂ ಆತನು ಹಿಡಿದ ವ್ರತವನ್ನೆಂದಿಗೂ ಬಿಡುವನಲ್ಲ. ಮಹೇಶನು ಪರನಾರಿಯರನ್ನು ಕಣ್ಣೆತ್ತಿಯೂ ನೋಡನು. ಪರದ್ರವ್ಯವನ್ನು ಕೈಯಿಂದ ಮುಟ್ಟನು. ಅನ್ಯ ದೈವಕ್ಕೆಂದಿಗೂ ಎರಗನು. ತೀರ್ಥ ಕ್ಷೇತ್ರ ಯಾತ್ರೆಗಳಿಗೆಂದಿಗೂ ಹೋಗಲಾರನು. ಗುರುಲಿಂಗ ಜಂಗಮ ನಿಂದೆಯನ್ನು ಸಹಿಸಿಕೊಳ್ಳಲಾರನು. ಜ್ಯೋತಿಷ್ಯ, ಶಕುನ, ಸೂತಕಗಳನ್ನು ನಂಬಲಾರನು. ಯಜ್ಞ ಯಾಗ, ಬಲಿ ದಾನ ಮೊದಲಾದ ಹಿಂಸೆಗಳನ್ನೆಷ್ಟು ಮಾತ್ರವೂ ಸಹಿಸನು. ಡಾಂಭಿಕ ವೇಷವನ್ನು ಮೆಚ್ಚಲಾರನು. ಮಠ ಅಥವಾ ಸಂಸ್ಥೆಯ ಅಧಿಕಾರಿಯಾಗಿ ಸಮಾಜಕ್ಕೆ ಹಿತವಾಗುವ ವ್ಯಾಖ್ಯಾನ, ಪ್ರವಚನ, ಲೇಖನ ಮುಂತಾದ ಕಾರ್ಯಗಳನ್ನು ಮಾಡುವವನು. ಸಮಾಜ ಸೇವೆಯೇ ಮಹೇಶ ಸ್ಥಲದ ಲಕ್ಷಣವಾಗಿದೆ.

ಪರಮ ಪರತರ ವ್ರತಗಳಂ ನಿಷ್ಠೆಯಿಂದ ತಾನು
ಚರಿಸಿ ಲೋಕಕೆ ಬೋಧೆಗೆಯ್ವಾಡಾತನು ಜಗದಿ
ವರಮಹೇಶ್ವರನೆಂಬ ಸರಸನಾಮವನಾಂತು ಪರಿಶೋಭಿಪಂ ಸಂತತಂ
ಮಿರುಪ ಷಟ್ಸ್ಥಲ ಜ್ಞಾನಿ ಶ್ರೀ ಚನ್ನಬಸವೇಶ
ಕರುಣದಿಂ ಬಂದೆನ್ನ ಶಿರಸರೋರುಹದಲ್ಲಿ
ಹರುಷದಿಂದನವರತ ಸಿಂಗರಿಸೆಲೈ ಹರನ ಫಣಿಯ ಚಂದ್ರಮನಂದದೋಳ್

ಭಕ್ತನಾದವನು ಮಹೇಶ ಸ್ಥಲಕ್ಕೆ ಏರಿದ ನಂತರ ಗುರುವಿನಿಂದ ಅನುಗ್ರಹಿತನಾಗಿ ಅವರು ಆಚರಿಸಿ ತೋರಿದ ಇಷ್ಟಲಿಂಗ ವ್ರತವನ್ನು ನಿಷ್ಠೆಯಿಂದ ಮಾಡುವವನು. ನಾನಾ ದೈವಂಗಳ ಕಡೆಗೆ ಹರಿದಾಡುತ್ತಿರುವ ಮನಸ್ಸನ್ನು ಎಳೆದು ತಂದು ಒತ್ತಟ್ಟಿಗೆ ಇಷ್ಟಲಿಂಗದಲ್ಲಿ ಸುಸ್ಥಿರಗೊಳಿಸುವನು. ಹರಿಯುವ ಹೊಳೆಗಳು ಸಮುದ್ರಕ್ಕೆ ಕೂಡಿದರೆ ಆ ಸಮುದ್ರವು ಯಾವ ಪ್ರಕಾರ ಗಂಭೀರವೂ ಆಗಾಧವೂ ಆಗುವುದೋ ಅದೇ ಪ್ರಕಾರ ಮಹೇಶನ ಮನಸ್ಸೆಂಬ ಸಮುದ್ರವು ಇಂದ್ರಿಯಗಳೆಂಬ ನದಿಗಳನ್ನು ಕೂಡಿಕೊಂಡಿದೆ. ತಿಳಿಯದ ಶ್ರದ್ಧೆಯೇ ಹೆಪ್ಪುಗಟ್ಟಿ ನಿಷ್ಠೆಯಿಂದೆನಿಸುತ್ತದೆ. ಮಹೇಶನು ಕ್ರಮಬದ್ಧವಾದ ನೇಮ ವ್ರತಾದಿಗಳಿಂದ ತನ್ನ ನಿಷ್ಠೆಯನ್ನು ಭದ್ರಪಡಿಸಿಕೊಳ್ಳುವನು. ನಮ್ಮ ಮನಸ್ಸು ಒಂದೆಡೆ ಸ್ಥಿರವಾಗಿ ನಿಲ್ಲಬೇಕಾದರೆ ನಾವು ಮೊದಲು ನಿಯಮಬದ್ಧವಾಗಿ ನಡೆಯುವುದನ್ನು ರೂಢಿಸಿಕೊಳ್ಳಬೇಕು. ಎಂಥ ಅಡೆತಡೆಗಳು ಬಂದರೂ ಇಷ್ಟಲಿಂಗ ಪೂಜಾನೇಮವನ್ನು ತಪ್ಪದೆ ಮಾಡುವೆನೆಂಬ ಮನೋಸ್ಥೈರ್ಯ ಆತನಲ್ಲಿರಬೇಕು. ಇವತ್ತು ಒಂದು ನಾಳೆ ಮತ್ತೊಂದು ಹೀಗೆ ಬೇರೆ ಬೇರೆ ವಿಷಯಗಳ ಕಡೆಗೆ ಚಂಚಲ ಮನಸ್ಕನಾಗಿ ಮಹೇಶನು ವರ್ತಿಸಬಾರದು. ಎಂಥ ಬಿಕ್ಕಟ್ಟಿನ ಪ್ರಸಂಗ ಬಂದರೂ ತಾನು ಹಿಡಿದ ನೇಮಗಳಿಗೆ ಕುಂದು ಬಾರದಂತೆ ಆಚರಿಸುವುದೇ ಮಹೇಶ್ವರನ ಲಕ್ಷಣವು.

ಮಹೇಶನು ನೋಡಬಾರದ ವಿಷಯಗಳನ್ನೆಂದಿಗೂ ಕಣ್ಣೆತ್ತಿ ನೋಡಲಾರನು. ಕೇಳಬಾರದ ವಿಷಯಗಳನ್ನೆಂದಿಗೂ ಕಿವಿಯಿಂದ ಕೇಳಲಾರನು. ಆಡಬಾರದ ನುಡಿಗಳನ್ನೆಂದಿಗೂ ನುಡಿಯನು. ಮುಟ್ಟಬಾರದ ಪರಧನ ಪರಸ್ತ್ರೀಯರನ್ನೆಂದಿಗೂ ನೋಡಲಾರನು. ಆದರೆ ಆತ ತನ್ನ ಕಣ್ಣು, ಕವಿ, ಮೂಗು, ನಾಲಿಗೆ, ತ್ವಚೆ ಈ ಪಂಚೇಂದ್ರಿಗಳು ಲಿಂಗಸೇವೆಯಲ್ಲಿ ಸದಾಕಾಲ ನಿರತವಾಗುವಂತೆ ನಿಷ್ಠೆಯಿಂದ ಅಭ್ಯಾಸ ಮಾಡುವನು. ಇಂಥ ಕ್ರಿಯೆಗಳಿಂದಲೇ ಮಹೇಶನ ಸ್ವಭಾವ ಸುಸ್ಥಿರವಾಗಿ ಆತನ ಸಾಧನೆ ಎತ್ತರಕ್ಕೆ ಏರುವುದು. ಇಂದ್ರಿಯಗಳ ಬಲಿಕೆ ಸಿಲುಕಿ ಪೇಚಾಡುವವರು ಜನರಲ್ಲಿ ನಿಂದೆ ಅಪಹಾಸ್ಯಗಳಿಗೆ ಒಳಗಾಗುವವರು. ಆದರೆ ಇಂದ್ರಿಯಗಳ ದುಷ್ಟ ಪ್ರವೃತ್ತಿಯನ್ನು ಸದ್ವಿಷಯಗಳ ಕಡೆಗೆ ಎಳೆದು ತರುವಂತಹವರು ಈ ಲೋಕದ ಜನರಿಂದ ಗೌರವಿಸಲ್ಪಡುತ್ತಾರೆ.

ನಿಷ್ಠೆಯೆಂದರೆ ಮತ್ತೇನೂ ಅಲ್ಲ. ಅದು ಪ್ರತಿನಿತ್ಯದ ತಪಸ್ಸು. ಹಿಂದಿನ ಕಾಲದಲ್ಲಿ ಋಷಿಗಳು-ಅಸುರರು-ದೇವತೆಗಳು ತಮ್ಮ ದೇಹವನ್ನು ದಂಡಿಸಿ ಉಗ್ರತರವಾದ ತಪಸ್ಸನ್ನು ಆಚರಿಸುತ್ತಿದ್ದರು ಎಂದು ಓದಿದ್ದೇವೆ. ಆದರೆ ಆ ತಪಸ್ಸುಗಳು ನಿರಂತರವಾಗಿರದೆ ಯಾವುದಾದರೊಂದು ದೈವೀಶಕ್ತಿಯನ್ನು ಪ್ರಸನ್ನಗೊಳಿಸಿ ಅದರಿಂದ ತಮ್ಮ ಅಭೀಷ್ಟವಾದ ವರವನ್ನು ಪಡೆದುಕೊಂಡು ಬಿಟ್ಟರೆ ಮುಗಿಯಿತು. ಅಲ್ಲಿಗೇ ಆ ತಪಶ್ಚರ್ಯದ ಪರ್ಯವಸನಾವಾಗುತ್ತಿತ್ತು. ಆ ತಪಸ್ಸುಗಳು ಕೆಲಕಾಲದ ಮಟ್ಟಿಗೆ ನಡೆದ ಬಳಿಕ ದೈವೀ ಸಾಕ್ಷಾತ್ಕಾರವಾಗಿ ಬೇಡಿದ ಇಷ್ಟಾರ್ಥಗಳು ಸಿದ್ಧಿಸುತ್ತಿದ್ದವೆಂಬುದೇನೋ ನಿಜ. ಆದರೆ ಆ ವ್ಯಕ್ತಿಗಳು ಮುಂದೆ ಅಲ್ಲಿಗೇ ಆ ತಪಸ್ಸನ್ನು ನಿಲ್ಲಿಸಿಬಿಡುತ್ತಿದ್ದರು. ಅದರಿಂದ ಅವರ ಶಕ್ತಿಯು ದಿನೇ ದಿನೇ ಕುಗ್ಗುತ್ತ ಕೊನೆಗೆ ಸಂಪೂರ್ಣ ನಾಶವಾಗುತ್ತಿತ್ತು. ಆದರೆ ಮಹೇಶನ ತಪಸ್ಸು ಏನೋ ಒಂದು ಇಷ್ಟಾರ್ಥ ಸಿದ್ಧಿಗಾಗಿ ಕೆಲಕಾಲದ ವರೆಗೆ ಮಾತ್ರ ಆಚರಿಸುವಂತಹದಲ್ಲ. ಅದು ನಿಷ್ಕಾಮ ಬುದ್ಧಿಯಿಂದ ನಿರಂತರ ನಡೆಯುವ ತಪಸ್ಸಾಗಿದೆ.

ಏಕಕಾಲಕ್ಕೆ ಉಗ್ರ ತಪಸ್ಸು ಮಾಡಿ ಅತ್ಯದ್ಭುತ ಸಾಮರ್ಥ್ಯ ಪಡೆದುಕೊಳ್ಳುವುದಕ್ಕಿಂತ ಪ್ರತಿನಿತ್ಯ ಅಲ್ಪ ಸ್ವಲ್ಪ ಶಕ್ತಿಯನ್ನು ಹೆಚ್ಚಿಸುತ್ತ ಹೋಗುವುದು ಉತ್ತಮ. ಒಮ್ಮೆಲೇ ಸಂಪಾದಿಸಿ ಶಕ್ತಿಯು ಒಮ್ಮೆಲೆ ನಷ್ಟವಾಗುವ ಸಂಭವ ಹೆಚ್ಚು. ದೊಡ್ಡದೊಂದು ಬಣವಿಗೆ ಬೆಂಕಿ ಹಚ್ಚಿದರೆ ಕ್ಷಣಾರ್ಧದಲ್ಲಿ ಸುಟ್ಟು ಬೂದಿಯಾಗುವಂತೆ, ಒಮ್ಮೆಲೆ ಪಡೆದ ಸಿದ್ಧಿಯು ನಾಶವಾಗುವುದು. ಆದರೆ ಕ್ರಮೇಣ ಸಂಪಾದಿಸಿದ ಶಕ್ತಿಯು ಬೂದಿ ಮುಚ್ಚಿದ ಕೆಂಡದಂತೆ ಹೆಚ್ಚು ಕಾಲ ಉಳಿಯುವುದು. ದೊಡ್ಡದೊಂದು ಕಟ್ಟಿಗೆಯ ತುಂಡಿಗೆ ಹತ್ತಿದ ಬೆಂಕಿಯು ಸಾವಕಾಶವಾಗಿ ಪ್ರಜ್ವಲಿಸುತ್ತ ಹೋಗುವಂತೆ ಮಹೇಶನ ಲಿಂಗಪೂಜೆಯ ಶಕ್ತಿಯು ನಂದಾದೀಪದಿಂದ ನಿತ್ಯನಿರಂತರವಾಗಿ ಬೆಳಗುತ್ತ ಹೋಗುವುದು.

ಭಕ್ತನಾದವನು ಮಹೇಶನಾಗಬೇಕಾದರೆ ಮೊದಲು ಆತನ ಗುರುವಿನಿಂದ ಲಿಂಗದೀಕ್ಷೆಯನ್ನು ಪಡೆಯಬೇಕು. ವಿವಾಹವಾಗದ ಸ್ತ್ರೀಯಳ ಸಂಯೋಗವು ಹೇಗೆ ಶಾಸ್ತ್ರವಿರುದ್ಧವೋ ಹಾಗೆ ಗುರುವಿನಿಂದ ವಿಧಿಪೂರ್ವಕವಾಗಿ ದೀಕ್ಷೆ ಹೊಂದದೆ ತನ್ನಷ್ಟಕ್ಕೆ ತಾನೇ ನೇಮ ವ್ರತಗಳನ್ನು ಹಿಡಿದು ಮಹೇಶ್ವರನಾಗುವೆನೆಂಬುದು ಅಸಂಗತವಾದುದು. ‘ಮಂಗಾ ನಿನಗೆ ಲಿಂಗವನಾರು ಕಟ್ಟಿದರೆಂದರೆ, ಮಂಗಳವಾರ ಮೈತೊಳೆದುಕೊಂಡು ನಾನೇ ಕಟ್ಟಿಕೊಂಡೆನೆಂದನಂತೆ’ ಎಂಬ ಗಾದೆ ಮಾತು ಜನಮಾನಸದಲ್ಲಿ ಇದನ್ನು ನೋಡಿಯೇ ಹುಟ್ಟಿರಬೇಕು. ಲಿಂಗಧಾರಣ ದೀಕ್ಷೆ ಬೇರೆ ಕ್ರಿಯಾಚಾರ ದೀಕ್ಷೆ ಬೇರೆ. ಲಿಂಗದೀಕ್ಷೆ ಭಕ್ತಸ್ಥಲದವನಿಗೆ, ಕ್ರಿಯಾದೀಕ್ಷೆ ಮಹೇಶ್ವರ ಸ್ಥಲದವರಿಗೆ.

ಮಹೇಶನು ಭಿಕ್ಷೆ ಬೇಡುವುದು ತನ್ನ ಸಲುವಾಗಿಯಲ್ಲ. ತಾನು ಸ್ವತಃ ಈ ಕಾಯಕವನ್ನು ಮಾಡಿ ತನ್ನ ಕುಟುಂಬವನ್ನು ಸಲುಹಬೇಕು. ತಾನು ಭಿಕ್ಷೆಯ ಮೂಲಕ ಸಂಗ್ರಹಿಸಿದ ಧನಧಾನ್ಯಗಳನ್ನು ತನಗಾಗಿ ಉಪಯೋಗಿಸಿಕೊಳ್ಳದೆ ಕೇವಲ ಸಮಾಜಕ್ಕಾಗಿ ಉಪಯೋಗಿಸುವುದೇ ಮಹೇಶನ ಕರ್ತವ್ಯ. ಸಾರ್ವಜನಿಕ ಕಾರ್ಯಕ್ಕಾಗಿ ಭಿಕ್ಷೆ ಬೇಡುವುದು ಮಹೇಶನ ಉಪಕ್ರಮ. ಭಕ್ತನಾದವನಿಗೆ ಭಿಕ್ಷಾಧಿಕಾರವಿಲ್ಲ. ಅದು ಮಹೇಶ ಸ್ಥಲಕ್ಕೆ ಬಂದಾಗ ಮಾತ್ರ ಬರುತ್ತದೆ. ಭಕ್ತ ಸ್ಥಲದಲ್ಲಿ ಇರುವ ಸಾಧಕನ ಮನಸ್ಸು ಸ್ಥಿರವಾಗಿರುವುದಿಲ್ಲ. ಆದುದರಿಂದ ಭಿಕ್ಷೆಯಿಂದ ಬಂದ ಸಾರ್ವಜನಿಕ ಹಣವನ್ನು ಎತ್ತಿಹಾಕುವ ಸಂಭವವಿರುತ್ತದೆ. ಮಹೇಶನು ತನ್ನ ಸಲುವಾಗಿ ಯಾವುದನ್ನು ಇಟ್ಟುಕೊಳ್ಳದೆ ಸರ್ವಸ್ವವನ್ನು ಗುರುವಿಗೆ ಧಾರೆಯೆರೆದು ದೀಕ್ಷಾಬದ್ಧನಾಗಿ ಸಮಾಜ ಸೇವೆಯಲ್ಲಿ ನಿರತನಾಗಿರುವುದರಿಂದ ಸಾರ್ವಜನಿಕ ಧನದ ಅಪವ್ಯಯವಾಗುವ ಭಯವಿಲ್ಲ. ನಿಸ್ವಾರ್ಥಬುದ್ಧಿಯ ಮಹೇಶನು ಸಮಾಜೋದ್ಧಾರಕ್ಕಾಗಿ ಧನಧಾನ್ಯ ಸಂಗ್ರಹಿಸಿ ವಿನಿಯೋಗಿಸಿದ ಪರಿಣಾಮವೇ ಇಂದು ಮಠಗಳು ಸಾರ್ವಜನಿಕ ಸೇವಾಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಹೆಚ್ಚು ಸಾಧ್ಯವಾಗಿದೆ.

ಮಹೇಶ ಸ್ಥಲದಲ್ಲಿ ನಿಂತ ದೀಕ್ಷಾಬದ್ಧನಾದ ಸಾಧಕನು ತನ್ನ ಸ್ವಾರ್ಥವನ್ನೆಲ್ಲ ಬದಿಗೊತ್ತಿ ಕೇವಲ ಸಮಾಜ ಹಿತದ ಕಾರ್ಯದಲ್ಲಿ ತೊಡಗಿಸಿಕೊಳ್ಳುವನು. ಧಾರ್ಮಿಕ, ನೈತಿಕ, ಸಾಮಾಜಿಕ, ಸಾಂಸ್ಕೃತಿಕ ಮೊದಲಾದ ವಿಷಯಗಳನ್ನು ಕುರಿತು ಉಪದೇಶ ಮಾಡುತ್ತ ಸಮಾಜದಲ್ಲಿ ಜಾಗೃತಿಯನ್ನುಂಟು ಮಾಡುವನು. ಕಾಲಮಾನಕ್ಕೆ ತಕ್ಕಂತೆ ಸಮಾಜ ಬದಲಾವಣೆಯತ್ತ ಸಾಗಿದಂತೆ ತನ್ನ ಚಟುವಟಿಕೆಗಳನ್ನು ಬದಲಾಯಿಸಿಕೊಳ್ಳುತ್ತ ಹೋಗುವನು ಮಹೇಶಸ್ಥಲದ ಸಾಧಕ. ನೂರು ವರ್ಷಗಳ ಹಿಂದೆ ನಮ್ಮ ಸಮಾಜದಲ್ಲಿ ಅಜ್ಞಾನ ಅನಕ್ಷರತೆ ತಾಂಡವಾಡುತ್ತಿರುವುದನ್ನು ನೋಡಿದ ಕೆಲವು ಮಹೇಶ ಸ್ಥಲದ ಸಾಧಕರು ತಮ್ಮ ಮಠಗಳ ಮೂಲಕ ಉಚಿತ ಪ್ರಸಾದ ನಿಲಯ ಸ್ಥಾಪಿಸಿ ಬಡಮಕ್ಕಳ ಅಧ್ಯಯನಕ್ಕೆ ಅನುಕೂಲ ಮಾಡಿಕೊಟ್ಟರು. ಇಂದು ಸರಕಾರ ಮಾಡಬೇಕಾದ ಶೈಕ್ಷಣಿಕ ಸೇವಾ ಕಾರ್ಯವನ್ನು ಮಠಗಳು ನಿರ್ವಹಿಸಿದ್ದು ಅನನ್ಯ ಅಪರೂಪ.

ಮಹೇಶ ಸ್ಥಲದ ಸಾಧಕನು ಇಷ್ಟಲಿಂಗದಲ್ಲಿ ಅತ್ಯಂತ ನಿಷ್ಠೆಯುಳ್ಳವನಾಗಿರುತ್ತಾನೆ. ಆತ ಅನ್ಯ ದೈವಗಳಿಗೆ ಎಂದಿಗೂ ನಮಸ್ಕಾರ ಮಾಡಲಾರನು. ಕೊರಳಲ್ಲಿ ಲಿಂಗ ಧರಿಸಿಕೊಂಡ ಲಿಂಗಾಯತರು ಸ್ಥಾವರಲಿಂಗ, ಹನುಮಂತ, ವೀರಭದ್ರ, ದ್ಯಾಮವ್ವ ಮುಂತಾದ ದೇವರುಗಳಿಗೆ ಕಾಯಿ ಕರ್ಪೂರ ಕೊಟ್ಟು ಬೇಡಿಕೊಳ್ಳುವುದು ತಪ್ಪು ಎಂದು ತಿಳಿ ಹೇಳುವವನೇ ಮಹೇಶನು. ಲಿಂಗವಂತರಾಗಿ ಅನ್ಯಧರ್ಮದ ಆಚರಣೆಗಳಲ್ಲಿ ಮನಸ್ಸು ಮಾಡುವ ತಿಳಿಗೇಡಿ ಭಕ್ತರಿಗೆ ತಿಳುವಳಿಕೆ ನೀಡುವವನು ಮಹೇಶ. ವೈದಿಕ ಧರ್ಮದಲ್ಲಿ ಹೇಳಿದ ಯಜ್ಞ ಯಾಗಾದಿ ಹಿಂಸಾಕರ್ಮಗಳನ್ನು ಬಸವಾದಿ ಶರಣರು ವಿರೋಧಿಸಿ ನುಡಿದ ಮಾಹೇಶ್ವರ ಸ್ಥಲದ ವಚನಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅವರ ವಿರೋಧವು ಲಿಂಗಾಯತರಲ್ಲಿ ಲಿಂಗನಿಷ್ಠೆಯನ್ನು ಬೆಳೆಸುವುದಾಗಿದೇ ಹೊರತು ಪರಧರ್ಮ ದೂಷಣೆಯಲ್ಲವೆಂಬುದು ಸ್ಪಷ್ಟವಾಗುತ್ತದೆ.

ಮಹೇಶನು ಅಂತರಂಗ ಬಹಿರಂಗ ಎರಡರಲ್ಲಿಯೂ ಪರಿಶುದ್ಧನಾಗಿರುವನು. ಕೆಲವರು ಬಾಹ್ಯದಲ್ಲಿ ವಿಭೂತಿ, ರುದ್ರಾಕ್ಷಿ, ಕಾವಿಲಾಂಛನ ಮುಂತಾದ ಧಾರ್ಮಿಕ ಚಿಹ್ನೆಗಳನ್ನು ಧರಿಸಿ ಶೋಭಿಸುವರು. ಒಳಗೊಳಗೆ ದ್ವೇಷ ಅಸೂಯೆ, ಕಾಮ ಕ್ರೋಧಾದಿ ಗುಣಗಳನ್ನು ತುಂಬಿಕೊಂಡಿರುವರು. ಅವರು ಹೇಳುವುದೊಂದು, ಮಾಡುವುದೊಂದು. ಮೇಲೆ ಬೆಳಕು, ಒಳಗೆ ಹುಳುಕು. ‘ಮಾತಿನಂತೆ ಮನವಿಲ್ಲದ ಜಾತಿಡೊಂಬರ ನೋಡಿ ನಗುವ ನಮ್ಮ ಕೂಡಲಸಂಗಮದೇವಾ’ ಎಂದು ಬಸವಣ್ಣನವರು ಹೇಳಿದಂತೆ, ಅಂತರಂಗ ಬಹಿರಂಗ ಎರಡರಲ್ಲೂ ಶುದ್ಧವಿದ್ದವರನ್ನೇ ಸಮುದಾಯ ನಂಬಿ ಗೌರವಿಸುತ್ತದೆ. ಆದರೆ ಕೆಲವು ಡಾಂಭಿಕರು ‘ಶಾಸ್ತ್ರ ಹೇಳುವುದಕ್ಕೆ ಮಾಡಿದೆ, ಬದನೇಕಾಯಿಗಳನ್ನು ತಿನ್ನುವುದಕ್ಕೆ ಮಾಡಿದೆ’ ಎಂದು ವಿತಂಡವಾದ ಮಾಡುವವರು, ಹೊತ್ತು ಬಂದಾಗ ಕೊಡೆ ಹಿಡಿಯುವರು, ಅನುಕೂಲ ಸಿಂಧುವನ್ನು ಪ್ರತಿಪಾದಿಸುವರು ಎಂದು ಮಹೇಶ ಸ್ಥಲಕ್ಕೆ ಏರಲಾರರು.

ಅಂತರಂಗ ಶುದ್ಧವಾಗಿದ್ದರೂ ಬಾಹ್ಯಾಚಾರವನ್ನು ಬಿಟ್ಟಿರುವುದು ಕೂಡ ಮಹೇಶ ಸ್ಥಲದ ಸಾಧಕನಿಗೆ ಸಲ್ಲದ ಕ್ರಿಯೆ. ಇಂತಹ ಆಚಾರಭ್ರಷ್ಟರೊಡನೆ ಜನರು ಅನ್ನಪಾನಾದಿ ವ್ಯವಹಾರಗಳನ್ನು ಮಾಡಲು ಹಿಂಜರಿಯುವರು. ಅಂತರಂಗ ಕ್ರಿಯಾಭ್ರಷ್ಟನಿಗಿಂತಲೂ ಬಾಹ್ಯಕ್ರಿಯಾಭ್ರಷ್ಟನನ್ನು ಜನರು ಕೀಳಾಗಿ ಕಾಣುವರು. ಆದ್ದರಿಂದ ಮಹೇಶ ಸ್ಥಲದ ಸಾಧಕನು ತನ್ನ ಒಳಹೊರಗು ಉಭಯ ರಂಗವನ್ನು ಶುದ್ಧವಾಗಿಟ್ಟುಕೊಳ್ಳಬೇಕು. ಇದನ್ನೇ ಬಸವಣ್ಣನವರು ‘ಲಾಂಛನಕ್ಕೆ ತಕ್ಕ ಆಚರಣೆಯಿಲ್ಲದಿದ್ದರೆ ಕೂಡಲಸಂಗಮದೇವಾ ನೀ ಸಾಕ್ಷಿಯಾಗಿ ಛಿ ಎಂಬೆ’ ಎಂದು ಹೇಳುತ್ತಾರೆ.

ಮಹೇಶ ಸ್ಥಲದ ಸಾಧಕನು ಪಂಚಸೂತಕಗಳನ್ನು ಆಚರಿಸುವುದಿಲ್ಲ. ಶಕುನ ತೀರ್ಥಯಾತ್ರೆ ಮೊದಲಾದವುಗಳನ್ನು ನಂಬುವುದಿಲ್ಲ. ಪಂಚಾಂಗ ಮುಹೂರ್ತಗಳನ್ನು ನೋಡಲಾರನು. ಮಹೇಶನಿಗೆ ಪ್ರತಿನಿತ್ಯವೂ ಶುಭದಿನವೇ ಆಗಿದೆ. ಮಹೇಶನು ಪರರ ಹೊನ್ನು ಹೆಣ್ಣು ಮಣ್ಣುಗಳಿಗೆ ಎಷ್ಟು ಮಾತ್ರವೂ ಹಂಬಲಿಸಲಾರನು. ಹೀಗಾಗಿ ಸಮಾಜದ ಜನರು ಅವರನ್ನು ತಮ್ಮ ಮನೆಗೆ ಕರೆಯಿಸಿ ಊಟೋಪಚಾರಗಳನ್ನು ಮಾಡಿಸುವರು.

ಭಕ್ತ ಮಹೇಶ್ವರರಲ್ಲಿರುವ ವ್ಯತ್ಯಾಸವೇನು? ಭಕ್ತನಿಗೆ ನೇಮ ವ್ರತಗಳ ಪ್ರತಿಬಂಧವಿಲ್ಲ. ಆದರೆ ಮಹೇಶನು ಅವುಗಳನ್ನು ಅವಶ್ಯವಾಗಿ ಪಾಲಿಸಬೇಕು. ಭಕ್ತನಿಗೆ ಉಪದೇಶ ಮಾಡುವ ಅಧಿಕಾರವಿಲ್ಲ. ಮಹೇಶನಿಗೆ ಆ ಅಧಿಕಾರವಿದೆ. ಲಿಂಗಾಯತ ತತ್ವಗಳನ್ನು ಅರಿತು ಆಚರಿಸಿ ಅವುಗಳನ್ನು ಉಪದೇಶಿಸುವ ಸಾಮರ್ಥ್ಯ ಮಹೇಶನಿಗೆ ಬರುತ್ತದೆ. ಮಹೇಶ ಸ್ಥಲವು ಭಕ್ತಸ್ಥಲದ ಸಾಧಕನು ಅನುಭಾವಿಯಾಗುವ ಪರಿಯನ್ನು ತಿಳಿಸುತ್ತದೆ. ಹೀಗಾಗಿ ಅನುಭಾವಿಯಾದವನಿಗೆ ಯಾವುದೇ ಕುಲಗೋತ್ರಗಳ ಮೋಹವಿರುವುದಿಲ್ಲ. ಇಷ್ಟಲಿಂಗಧಾರಿಗಳೆಲ್ಲರೂ ಒಂದೇ ಎಂಬ ಭಾವ ಮೂಡುತ್ತದೆ. ಭಕ್ತನು ತನಗೆ ಗಂಡಾಂತರಗಳು ಬಂದಾಗ ದೇವರಲ್ಲಿ ಮೊರೆ ಹೋಗುವನು. ಆದರೆ ಮಹೇಶನು ಎಂಥ ಗಂಡಾಂತರ ಬಂದರೂ ಎದೆಗೊಟ್ಟು ತನ್ನ ನಿಷ್ಠೆಯ ಬಲದಿಂದ ಆ ಗಂಡಾಂತರವನ್ನು ನೀಗಿಕೊಳ್ಳುವನು. ಭಕ್ತನಿಗೆ ಲಿಂಗಧಾರಣ ದೀಕ್ಷೆಯೊಂದೇ ಆಗಿರುತ್ತದೆ. ಆದರೆ ಮಹೇಶನಿಗೆ ಕ್ರಿಯಾಚಾರ ದೀಕ್ಷೆಯಾಗಿರುತ್ತದೆ. ಭಕ್ತನು ಯಾವುದಾದರೊಂದು ಕಾಯಕವನ್ನು ಕೈಕೊಂಡು ತನ್ನ ಕುಟುಂವನ್ನು ಮುನ್ನಡೆಸುವನು. ಮಹೇಶನು ತನ್ನ ಸರ್ವಸ್ವವನ್ನೆಲ್ಲ ಗುರುಲಿಂಗ ಜಂಗಮಕ್ಕೆ ಧಾರೆಯೆರೆದು ತಾನು ಪವಿತ್ರ ಕಾಯಕದಿಂದ ಉಪಜೀವನ ನಡೆಸಿ ಪ್ರತಿಫಲಾಪೇಕ್ಷೆಯಿಲ್ಲದೆ ಭಕ್ತರಿಗೆ ಬೋಧೆ ಮಾಡುವನು. ಭಕ್ತನು ಪಂಚಾಂಗ ಮುಹೂರ್ತ ತೀರ್ಥಯಾತ್ರೆ ದೇವರು ದಿಂಡರು ಈ ಮುಂತಾದ ರೂಢಾಚಾರಗಳ ಮೇಲಿನ ವಿಶ್ವಾಸವನ್ನು ಒಮ್ಮೆಲೆ ತೆಗೆದು ಹಾಕದೆ ಸಾವಕಾಶವಾಗಿ ಕಡಿಮೆ ಮಾಡಿಕೊಳ್ಳುತ್ತ ಹೋಗುವನು. ಆದರೆ ಮಹೇಶನು ಇವುಗಳ ಮೇಲಿನ ವಿಶ್ವಾಸವನ್ನು ಸಂಪೂರ್ಣವಾಗಿ ತ್ಯಹಿಸಿ ಬಿಟ್ಟಿರುತ್ತಾನೆ. ಭಕ್ತನು ಹಸುಗೂಸಾಗಿ ತನ್ನ ಇಷ್ಟಲಿಂಗವನ್ನು ತಾಯಿಯಂತೆ ಭಾವಿಸುವನು. ಮಹೇಶನು ಇಷ್ಟಲಿಂಗವು ತನ್ನನ್ನು ಸನ್ಮಾರ್ಗಕ್ಕೆ ಹಚ್ಚುವ ತಂದೆಯೆಂದು ಭಾವಿಸುವನು. ಮಹೇಶನ ಮನಸ್ಸು ಗಟ್ಟಿಯಾಗಿ ಹೆಪ್ಪುಗೊಂಡಿರುತ್ತದೆ. ಭಕ್ತಸ್ಥಲವು ಆಧ್ಯಾತ್ಮಿಕ ಉನ್ನತಿಯ ಪ್ರಥಮ ಸೋಪಾನವಾದರೆ ಮಹೇಶ ಸ್ಥಲವು ಎರಡನೆಯ ಸೋಪಾನ. ಭಕ್ತನಿಗೆ ಶ್ರದ್ಧೆಯೇ ಮುಖ್ಯಗುಣ, ಮಹೇಶನಿಗೆ ನಿಷ್ಠೆಯೇ ಮೂಲಾಧಾರ.

ನಿಷ್ಠಾಭಕ್ತಿಯೆಂದರೆ ಒಮ್ಮೆ ನಂಬಿದ ವಸ್ತುವನ್ನಾಗಲಿ ಅಥವಾ ವ್ಯಕ್ತಿಯನ್ನಾಗಲಿ ಯಾವಾಗಲೂ ನಂಬಿಕೊಂಡಿರುವುದು ಮತ್ತು ತಾನು ನಂಬಿದ ತತ್ವವನ್ನೇ ಚಾಚೂತಪ್ಪದೆ ಆಚರಿಸುವುದು. ಅಜ್ಞರಾದ ಸಾಮಾನ್ಯ ಜನರು ಏನೂ ಅರ್ಥವಿಲ್ಲದಂತಹ ದೇಶಕಾಲ ಪರಿಸ್ಥಿತಿಗೆ ಬಾಧಕವಾಗುವ ಕೆಲವು ರೂಢಾಚಾರಗಳನ್ನು ಆಚರಿಸುವರು. ಮಹೇಶ ಸ್ಥಲದ ಸಾಧಕನು ಈ ಆಚರಣೆಗಳ ಹಿಂದಿರುವ ಅಂಧಶ್ರದ್ಧೆ ಮೂಢನಂಬಿಕೆಗಳ ಕುರಿತು ಜಾಗೃತಿ ಮೂಡಿಸುವನು.

ಶರಣ ಧರ್ಮವು ಅನುಭಾವ ಪ್ರಧಾನವಾದ ಧರ್ಮ. ಸಾಧಕನು ತಾನು ಯಾರು? ಎಂಬುದನ್ನು ಅರಿತುಕೊಳ್ಳಲು ಸಾಗುವ ಮಾರ್ಗವೇ ಷಟ್ಸ್ಥಲ ಮಾರ್ಗ. ಅದರಲ್ಲೂ ಮಾಹೇಶ ಸ್ಥಲದ ಸಾಧಕನು ಅನುಭಾವದ ನೆಲೆಯಲ್ಲಿ ಹೆಚ್ಚು ಚಲನಶೀಲನಾಗಿರುತ್ತಾನೆ. ಆನುಭಾವಿಕ ನೆಲೆಯಲ್ಲಿ ನಿಂತ ಸಾಧಕನಿಗೆ ತರ್ಕ, ವಾದ, ಊಹೆ, ಉತ್ತರಪಕ್ಷ, ಪೂರ್ವಪಕ್ಷ, ಇಂಥ ವಾದವಿವಾದ ವಿಷಯಗಳಿಗೆ ಇಂಬು ಇರುವುದಿಲ್ಲ. ಆದರೆ ಮನುಷ್ಯನು ಹೇಗೆ ನಡೆಯಬೇಕು, ಮನಸ್ಸನ್ನು ಹೇಗೆ ಶುದ್ಧಿಕರಿಸಿಕೊಳ್ಳಬೇಕು. ತನ್ನಲ್ಲಿ ಪರಮಾತ್ಮನ ಗುರುಗಳನ್ನು ಹೇಗೆ ಬರಮಾಡಿಕೊಳ್ಳಬೇಕು. ಇಂಥ ವಿಷಯಗಳೇ ಮಾಹೇಶ ಸ್ಥಲದಲ್ಲಿ ಬರುತ್ತವೆ.

ಷಟ್ಸ್ಥಲ ಮಾರ್ಗ, ಒಂದು ಸರಳ, ಸುಂದರ ಮತ್ತು ಸುಲಭವಾದ ಸೋಪಾನ. ಷಟ್ಸ್ಥಲದ ತತ್ವಗಳಿಗೆ ಸಂಬಂಧಿಸಿದ ಕ್ಲಿಷ್ಟ ಪದಗಳನ್ನು ಹೊರಗಿಟ್ಟು, ಪವಿತ್ರ ಭಾವನೆಯಿಂದ ಷಟ್ಸ್ಥಲ ಮಾರ್ಗ ಹಿಡಿದಾಗ ಅದು ಕಷ್ಟದಾಯಕವಾಗಿ ತೋರುವುದಿಲ್ಲ. ಪ್ರೇಮ ಮತ್ತು ಪವಿತ್ರಭಾವ ಕೊಟ್ಟು ಹೋಗಬಾರದ ಹಾಗೆ ಅವುಗಳನ್ನು ಭಗವಂತನ ಅಡಿಯಲ್ಲಿ ಅರ್ಪಿಸುವುದರಿಂದ ಭಕ್ತಸ್ಥಲದ ಮಾರ್ಗ ಸುಲಭವಾಗುತ್ತದೆ. ನಮ್ಮದೆಂಬುದು ಏನಾದರೂ ಇದ್ದರೆ ಅದು ಕೇವಲ ಅಮೋಘವಾದ ಭಾವ ಸಂಪತ್ತು. ಅಂಥ ಭಾವವನ್ನು ವಸ್ತುಗಳ ಮಧ್ಯ ಇಡುವುದಕ್ಕಿಂತ ವಸ್ತುಗಳ ನಿರ್ಮಾಪಕ ಅಥವಾ ವಸ್ತುಗಳ ಹಿಂದೆ ಇರುವ ಒಂದು ಶಕ್ತಿಯಲ್ಲಿ ಇದ್ದರೆ ಅದನ್ನು ಷಟ್ಸ್ಥಲಮಾರ್ಗವೆಂದು ಗುರುತಿಸಬಹುದು.

ಶೂನ್ಯವನ್ನು ಪ್ರವೇಶಿಸಬೇಕಾದರೆ ಶ್ರದ್ಧೆಬೇಕು. ಮಾಹೇಶ್ವರ ಸ್ಥಲಕ್ಕೆ ಬಂದಾಗ ಶ್ರದ್ಧೆ ಘನಗೊಳ್ಳುವುದು ಮತ್ತು ಶ್ರದ್ಧೆ ನಿಷ್ಠೆಯಾಗಿ ಪರಿಣಮಿಸುವುದು. ಅಲ್ಲಿರುವುದು ಪರಮಸತ್ಯ. ವಸ್ತುಗಳ ಮೇಲಿನ ಪ್ರೀತಿಯನ್ನು ಪರಮಸತ್ಯದತ್ತ ತಿರುಗಿಸುವುದು. ಭಕ್ತನ ಸದ್ಭಕ್ತಿಗೆ ನಂಬಿಕೆ, ನಿಷ್ಠೆ, ಏಕನಿಷ್ಠೆ, ಲಿಂಗನಿಷ್ಠೆ ನಿಸ್ಸಂದೇಹಗಳು ಇರಬೇಕಾದಂತಹ ಮಾಹೇಶ್ವರಸ್ಥಲ. ಲಿಂಗದಲ್ಲಿ ನೆಟ್ಟ ಭಕ್ತನ ಭಕ್ತಿಯೇ ನಿಷ್ಠಾಭಕ್ತಿ. ಆಕರ್ಷಣೆಗಳನ್ನು ಮೀರಿ ನಿಲ್ಲುವಂಥ ದೃಢತೆ ಬಂದಾಗ ನಿಷ್ಠೆಯಾಗಿ ಪರಿಣಮಿಸುವುದು. ಜಗತ್ತಿನಲ್ಲಿ ಆಕರ್ಷಣೆಗಳು ಒಂದೆ, ಎರಡೆ! ಶಬ್ದ, ಸ್ಪರ್ಶ, ರಸ, ರೂಪ, ಗಂಧಾದಿಗಳು ಮನಸ್ಸನ್ನು ವಿಚಲಿತಗೊಳಿಸುತ್ತವೆ. ಆಕರ್ಷಣೆಗಳು ಸಾಧಕನನ್ನು ಷಟ್ಸ್ಥಲ ಯಾತ್ರೆಗೆ ಚ್ಯುತಿ ಉಂಟು ಮಾಡುವಂಥವುಗಳು. ಆಮಿಷಗಳಿಗೆ ಒಳಗಾದಾಗ ಪ್ರೇಮ ಪ್ರೀತಿಗಳು ಹೊಯ್ದಾಡಲು ಪ್ರಾರಂಭ ಮಾಡುವವು. ಪ್ರೇಮ, ಹೊಯ್ದಾಡದೆ ಗಟ್ಟಿಯಾದಾಗ ಅದು ಮಾಹೇಶ್ವರ ಸ್ಥಲ. ಮೊದಲನೆಯದ್ದು ಶ್ರದ್ಧೆ; ಅದು ಸಹಜಭಾವ; ದೇವನಿದ್ದಾನೆ, ಆತನನ್ನು ನಾನು ಪ್ರೀತಿಸಬೇಕು. ಆದರೆ ಸಾಮಾನ್ಯ ಮನುಷ್ಯನ ಪ್ರೀತಿ ಯಾವಾಗಲೂ ಅಸ್ಥಿರವಾಗಿರುತ್ತದೆ. ವಸ್ತುಗಳನ್ನು ನೋಡಿದ ತಕ್ಷಣ ಪ್ರೇಮ ವಸ್ತುಗಳತ್ತ ಹರಿಯುತ್ತದೆ. ತಪಸ್ಸಿಗೆ ಕುಳಿತ ಸನ್ಯಾಸಿಯನ್ನು ಕೂಡ ವಸ್ತುಗಳು ಬಿಡುವುದಿಲ್ಲ. ವಸ್ತುಗಳತ್ತ ಸನ್ಯಾಸಿ ಮನಸ್ಸು ಹರಿಯುತ್ತದೆ. ಎಲ್ಲಿದೆ. ಏಕಾಗ್ರತೆ? ಏಕಾಗ್ರತೆಗೆ ಭಂಗವುಂಟು ಮಾಡುತ್ತದೆ ಆಕರ್ಷಣೆ. ಒಂದು ಸಣ್ಣ ಕತೆ ಕೇಳಿ:

ಒಬ್ಬ ಬೌದ್ಧ ಭಿಕ್ಷು ಮರದ ನೆರಳಿನಲ್ಲಿ ಬುದ್ಧನ ಮೂರ್ತಿಯೊಂದರ ಮುಂದೆ ಕುಳಿತಿದ್ದಾನೆ. ಅದು ಮಣ್ಣಿನ ಮೂರ್ತಿ. ಅದರ ಮುಖಮುದ್ರೆಯಲ್ಲಿ ಪ್ರಶಾಂತವಾದ ಭಾವವಿದೆ. ಕಾಮಕ್ರೋಧಾದಿ ಭಾವ ಒಂದಿನಿತಿಲ್ಲ. ಮೂರ್ತಿಯ ಎದುರಿಗೆ ಶಾಂತನಾಗಿ ಕುಳಿತಿದ್ದ ಬೌದ್ಧ ಭಿಕ್ಷು. ಧ್ಯಾನದಲ್ಲಿ ತಲ್ಲೀನನಾಗಿದ್ದ.

ಒಂದು ದಿನ ಆಗರ್ಭ ಶ್ರೀಮಂತ ಶಿಷ್ಯನೊಬ್ಬ ಆಶ್ರಮಕ್ಕೆ ಬಂದ. ಆತನನಿಗೆ ಬುದ್ಧನ ಮೇಲೆ, ಭಿಕ್ಷುವಿನ ಮೇಲೆ ಬಹಳ ಭಕ್ತಿ. ಭಿಕ್ಷುವನ್ನು ಉದ್ದೇಶಿಸಿ ‘ಮಹಾನುಭಾವರೇ ತಾವು ಬಹಳ ದೊಡ್ಡ ಭಿಕ್ಷುಗಳು, ಬಹಳ ಚಿಕ್ಕದಾದ ಮಣ್ಣಿನಿಂದ ತಯಾರಿಸಿದ ಬುದ್ಧನ ಮೂರ್ತಿಯನ್ನು ಇಟ್ಟುಕೊಂಡಿದ್ದೀರಲ್ಲ! ತಮ್ಮಂಥವರು ಮಣ್ಣಿನ ಮೂರ್ತಿಯನ್ನಿಟ್ಟುಕೊಳ್ಳುವುದು ಸರಿಯಲ್ಲ. ನಾನು ಬಂಗಾರದ ಬುದ್ಧನ ಮೂರ್ತಿಯನ್ನು ಮಾಡಿಸಿಕೊಡುತ್ತೇನೆ.’ ಎಂದು ಹೇಳಿ ಹೋದ.

ಕೆಲವೊಂದು ವ್ಯಕ್ತಿಗಳ ಪ್ರಾಮಾಣಿಕ ವಿಚಾರಗಳೇ ಹಾಗಿರುತ್ತವೆ. ಬಹಳ ದೊಡ್ಡ ಭಿಕ್ಷುಗಳು; ಮಣ್ಣಿನ ಮೂರ್ತಿ ಪೂಜಿಸಬಾರದು. ಬೆಳ್ಳಿ ಬಂಗಾರದಿಂದ ತಯಾರಿಸಿದ ಮೂರ್ತಿಗಳನ್ನೇ ಅವರು ಪೂಜಿಸಬೇಕು. ಮಣ್ಣಿನ ಮೂರ್ತಿಯನ್ನು ಪೂಜಿಸಿದರೆ, ಅವರ ದೊಡ್ಡಸ್ತನಕ್ಕೆ ಚ್ಯುತಿಯುಂಟಾಗುವುದು. ಅವರು ಸಣ್ಣವರಾಗುತ್ತಾರೆ; ಮುಂತಾದವು.

ಕೆಲದಿನಗಳ ತರುವಾಯ, ಬಂಗಾರದಿಂದ ತಯಾರಿಸಿದ ಸುಂದರವಾದ ಬುದ್ಧನ ಮೂರ್ತಿಯೊಂದಿಗೆ ಶ್ರೀಮಂತ ವ್ಯಕ್ತಿ ಭಿಕ್ಷುವಿನ ಕಡೆಗೆ ಬಂದ. ಮೂರ್ತಿಯನ್ನು ಭಿಕ್ಷುವಿಗೆ ಅರ್ಪಿಸಿದ. ಬೌದ್ಧ ಭಿಕ್ಷು ಸಂತೋಷಪಟ್ಟ. ಭಿಕ್ಷು ಲಕಲಕ ಹೊಳೆಯುವ ಬಂಗಾರದ ಮೂರ್ತಿಯ ಮುಂದೆ ತಪಸ್ಸು ಮಾಡಲು ಕುಳಿತ. ಭಿಕ್ಷುವಿಗೆ ಬುದ್ಧ ಕಾಣಿಸಲಿಲ್ಲ, ಕೇವಲ ಬಂಗಾರ ಕಾಣತೊಡಗಿತು. ಮಣ್ಣಿನ ಮೂರ್ತಿಯ ಮುಂದೆ ಕುಳಿತಾಗ ಬುದ್ಧ ಕಾಣುತ್ತಿದ್ದ, ಮಣ್ಣು ಕಾಣುತ್ತಿರಲಿಲ್ಲ. ಈಗ ಬುದ್ಧ ಕಾಣುವುದಿಲ್ಲ; ಬಂಗಾರ ಮಾತ್ರ ಕಾಣಿಸುವುದು. ಬೌದ್ಧ ಭಿಕ್ಷುವಿನ ನಿಷ್ಠೆ ಬಂಗಾರದಲ್ಲಿ ಕರಗಿ ಹೋಗಿತ್ತು. ಬುದ್ಧನ ನೋಡುವ ಕಣ್ಣುಗಳು ಹೊಲಸಾಗಿದ್ದವು.

ಇದೇ ಆಕರ್ಷಣೆ; ಆಕರ್ಷಣೆಗಳೇನೆ ಇರಲಿ, ಅವುಗಳ ಪ್ರಭಾವಕ್ಕೆ ಸಿಲುಕದಂತೆ ಅವುಗಳತ್ತ ಮನಸ್ಸು ಎಳೆಯದಂತೆ, ಸೋಲದೆ ಇರುವುದಕ್ಕೆ ‘ಮಾಹೇಶ್ವರ ನಿಷ್ಠಾಭಾವ’ ಎಂದರು ಶರಣರು.

ಸಂಪತ್ತು ದೊರೆಯಲಿ ಅಧಿಕಾರ ಬರಲಿ ಅಥವಾ ಮಾನ ಮರ್ಯಾದೆಗಳೇ ದೊರೆಯಲಿ ಯಾವುದರ ಮೇಲೂ ಪ್ರೇಮ, ಮನಸ್ಸು ಚಲ್ಲಾಟವಾಡಬಾರದು. ಹಾಗಿದ್ದಾಗ ಅದು ಮಾಹೇಶ್ವರ. ವಿಶ್ವಾಸವೇ ಪ್ರಾಣವಾಗಿ ಇರುವಾತ ಭಕ್ತ, ಆ ವಿಶ್ವಾಸದೊಳಗಣ ಏಕೋನಿಷ್ಠೆಯಲ್ಲಿ ನಿಂದಿರುವಾತ ಮಾಹೇಶ್ವರ. ಲಿಂಗದೇವೈಕ್ಯ ನಿಷ್ಠನಾಗಿ, ಅಸತ್ಯ, ಅನೀತಿ ಪರಧನ ಪರಸ್ತ್ರೀ ಮುಂತಾದ ಆಕರ್ಷಣೆಗಳಿಗೆ ಜಗ್ಗದೆ, ಅಪ್ರತಿಮ ಛಲಿಯಾಗಿ, ಇಂದಿಂಗೆ ನಾಳಿಂಗೆ ಬೇಕೆಂಬ ಪರಿಗ್ರಹ ಭಾವ ತೊರೆದು, ನಯ ವಿನಯಗಳನ್ನು ಮೈಗೂಡಿಸಿಕೊಂಡು ಇರುವಾಗ ಮಾಹೇಶ್ವರ.

ದಾರಿಹೋಕನಿಗೆ ಅಕಸ್ಮಾತ್ ಏನಾದರೂ ಲಾಭಾಂಶ ದೊರೆತಾಗ ಅಥವಾ ಲಾಭದಾಯಕ ಪ್ರಸಂಗ ಬಂದಾಗ ಎಲ್ಲಿದೆ ಷಟ್ಸ್ಥಲ? ಆಗ ಧನಸ್ಥಲವೆ ವಿನಃ ಷಟ್ಸ್ಥಲ ನೆನಪಾಗುವುದಿಲ್ಲ. ಶರಣರು ಆಕರ್ಷಣೆಗಳ ಪ್ರಭಾವಕ್ಕೆ ಒಳಗಾಗಲಿಲ್ಲ; ಇದೆ ಅವರ ದೊಡ್ಡ ಸಾಧನೆ.

ಷಟ್ಸ್ಥಲದ ಸಕೀಲಗಳ ಕ್ಲಿಷ್ಟತೆಯನ್ನು ಹೊರತು ಪಡಿಸಿದಾಗ ಉಳಿಯುವುದು ಸ್ವಚ್ಛ ಸುಂದರವಾದ ಭಾವ ಪಯಣ. ಮಾಹೇಶ್ವರ ಸ್ಥಲ. ಅತ್ಯಂತ ಪ್ರಬಲವಾದ ಸಾಧನೆಯ ಸ್ಥಲ. ಇದು ಮುಂದಿನ ದಾರಿಯನ್ನು ಸುಲಭಗೊಳಿಸುವಂಥದು. ಛಲಬೇಕು ಸಾಧಕನಲ್ಲಿ; ಮನಸ್ಸು ಸೋಲಬಾರದು. ಭಗವಂತ ಏನಾದರೂ ಕೊಡಲಿ, ಬಿಡಲಿ, ಮನಸ್ಸಿನ ದೃಢತೆ ಬೇಕು. ಇಂತಹ ದೃಢತೆ ಮೂಡಿದಾಗ ಮಾಹೇಶ್ವರ ಸ್ಥಲ.

ಮಾಹೇಶ್ವರ ಸ್ಥಲದಲ್ಲಿ ದೇವರ ಸ್ಮರಣೆ ಹೆಚ್ಚು ನಡೆಯುತ್ತದೆ. ಎಲ್ಲವೂ ಲಿಂಗಮಯ; ಈ ವಿಶ್ವ ಒಂದು ಸುಂದರವಾದ ಲಿಂಗ; ಅದು ಶಾಂತ ಸ್ತಬ್ಧವಾಗಿರುವುದು. ಅದರಲ್ಲಿ ಎಲ್ಲವೂ ಇದೆ. ಆದರೆ ಅಲ್ಲಿ ಯಾವ ಗದ್ದಲವಿಲ್ಲ. ಎಲ್ಲವನ್ನೂ ತನ್ನಲ್ಲಿ ಇಟ್ಟುಕೊಂಡು ಶಾಂತವಾಗಿರುವುದು. ಅದು ಲಿಂಗ; ಅಂಥ ಅದ್ಭುತವಾದ ಲಿಂಗವಿದು ಅಂಥ ಭಾವ ಮೂಡಿಸಿಕೊಳ್ಳುವುದೇ ಸ್ಮರಣೆ. ಇದು ಮಾಹೇಶ್ವರಸ್ಥಲ.

Share This Article
Leave a comment

Leave a Reply

Your email address will not be published. Required fields are marked *