ಚನ್ನಬಸವಣ್ಣ ಚರಿತ್ರೆ 9: ಸ್ವರವಚನಗಳು

ಚನ್ನಬಸವಣ್ಣನವರು ವಚನಗಳಲ್ಲದೆ, ಸ್ವರವಚನಗಳನ್ನೂ ರಚಿಸಿದ್ದಾರೆ. ಅವರು ಬರೆದ ೭೫ ಸ್ವರವಚನಗಳು ಇಂದು ನಮಗೆ ಲಭ್ಯವಿವೆ. ಸಾಹಿತ್ಯದ ಸಂವಹನವು ಜನರಿಂದ ಜನರಿಗೆ ಮುಟ್ಟಬೇಕಾದರೆ, ಆ ಕಾಲದಲ್ಲಿ ಸಂಗೀತವೇ ಪ್ರಧಾನ ಮಾಧ್ಯಮ ಆಗಿತ್ತು. ಹೀಗಾಗಿ ವಚನಗಳನ್ನು ಸ್ವರವಚನದ ಮಾಧ್ಯಮದಲ್ಲಿ ರಾಗ-ತಾಳ-ಲಯ ಗಳಿಂದ ರಚನೆ ಮಾಡಿದ ಪರಿಣಾಮವಾಗಿ

ಇಂದಿಗೂ ನಮ್ಮ ಹಳ್ಳಿಗಳಲ್ಲಿ ಜನರು ಭಜನಾ ಪದದ ರೂಪದಲ್ಲಿ ಶರಣ ಸಾಹಿತ್ಯವನ್ನು ಕಾಪಾಡಿಕೊಂಡು ಬಂದಿದ್ದಾರೆ. ಚನ್ನಬಸವಣ್ಣನವರು ರಚಿಸಿದ ಸ್ವರವಚನಗಳ ಸಾಹಿತ್ಯ-ಸ್ವರೂಪ-ಲಕ್ಷಣಗಳನ್ನು ಅಧ್ಯಯನ ಮಾಡಬೇಕಾದ ಅನಿವರ‍್ಯತೆ ಇದೆ. ಸಾಹಿತ್ಯ ಚರಿತ್ರೆಯ ಉದ್ದಕ್ಕೂ ನಿರ್ಲಕ್ಷ್ಯಕ್ಕೆ ಒಳಗಾಗುತ್ತ ಬಂದ ಚನ್ನಬಸವಣ್ಣನವರ ಸ್ವರವಚನ ಸಾಹಿತ್ಯವನ್ನು ಕುರಿತು ಈ ವರೆಗೆ ಯಾರೂ ಗಂಭೀರವಾಗಿ ಅಧ್ಯಯನ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ಅವರ ಎರಡು ಸ್ವರವಚನಗಳನ್ನು ಮಾತ್ರ ನನ್ನ ಅಧ್ಯಯನದ ಕಕ್ಷೆಗೆ ತೆಗೆದುಕೊಂಡು, ಇಲ್ಲಿ ವಿಶ್ಲೇಷಣೆಗೆ ಒಳಗು ಮಾಡಿದ್ದೇನೆ.

ಚತುರ್ವಿಧ ಸಾರಾಯ ಸಂಪತ್ತು

ಸಾರಾಯ ಚತುರ್ವಿಧವ |
ನಾರೈದು ನೋಡಿ ಗುರು
ಕಾರುಣ್ಯದಿಂದ ಮಾಡುವುದುಚಿತವ ||

ಗುರುಚರಣಕಮಲಕ್ಕೆ ಹರುಷ ದಯ ಚಿತ್ತದಿಂ |
ಶರೀರಮರ್ಥಂಚ ಪ್ರಾಣಂಗಳ
ಕರಣ ಸಂತತಿಗಳನು ಹರಕರಿಸಲೀಯದೆ
ಪರಿಣಮಿಸಿ ಮಾಡೆ ಗುರುಭಕ್ತಿ ನೋಡಾ ||

ಶಿವಲಿಂಗದಲ್ಲಿ ತನ್ನ ವಯವಂ ಬೆರಸಿ ಮಾ |
ಡುವ ನಿತ್ಯ ನಿಯತ ವ್ರತನೇಮಂಗಳ
ಸವೆಯಲೀಯದೆ ಪೂರವಿಸಿ ಮಾಡಲಿಕೆ ಸಂ
ಭವಿಸುವುದು ಶಿವಲಿಂಗ ನಿಷ್ಠೆ ನೋಡಾ ||

ಹರನ ವೇಷವನೊಲಿದು ಧರಿಸಿಪ್ಪ ಜಂಗಮಕಾ |
ದರದಿಂದ ವಸ್ತ್ರಾನ್ನ ಪಾನಂಗಳ
ಭರದಿಂದಲಿತ್ತವರವರ ತೃಪ್ತಿ ಬಡಿಸೆ ಸಂ
ಭವಿಸುವುದು ಜಂಗಮ ಪ್ರೇಮ ನೋಡಾ ||

ಅಸಮಾಕ್ಷಲಿಂಗಕ್ಕೆ ಸ್ವಶರೀರವಿಡಿದು ಭಾ |
ವಿಸಿ ಬಂದ ಸಕಲ ಸುಪದಾರ್ಥಂಗಳ
ಸಸಿನ ಗೆಯ್ದಲ್ಲಿ ಯೋಜಿಸಿಯರ್ಪಿಸುತ್ತ ಭೋ
ಗಿಸುವಲ್ಲಿ ಪ್ರಸಾದ ನಿಷ್ಠೆ ನೋಡಾ ||

ಗುರು ಸದಾಚಾರದಲಿ ಹರ ಮನೋಚಿತ್ತದಲಿ |
ವರಪ್ರಸಾದವು ಶುದ್ಧ ದೇಹದಲ್ಲಿ,
ಪರಿಣಾಮ ಜಂಗಮ ಸ್ಥಿರಹೇಮದಲಿ ನೆಲ
ಸಿರಲು ಚತುಷ್ಟಯದ ಒಲವು ನೋಡಾ ||

ತಮವ ಕಳೆಯಲಿಕೆ ಗುರು, ಭ್ರಮೆಯ ಕಳೆಯಲಿಕೆ ಶಿವ, |
ಅಮಲ ದೇಹವ ಮಾಳ್ಪ ಪ್ರಸಾದವು,
ಸುಮನ ಸುಜ್ಞಾನಕಿಂ ಸುಮುಖ ಜಂಗಮವಿನಿತು
ಕ್ರಮವಱಿದು ಮಾಡೆ ಸದ್ಭಕ್ತಿ ನೋಡಾ ||

ಸುಲಭರೀ ಚತುರ್ವಿಧದ ಹೊಲಬ ನೋಡಿಯೆ ತಿಳಿದು, |
ಕೆಲಬಲಕೆ ಹರಿಯಲೀಯದೆ, ಅರ್ಪಿಸೆ;
ಕುಲದೀಶ ಕೂಡಲ ಚೆನ್ನಸಂಗನೋರಂತೆ
ನೆಲಸಿಪ್ಪನಂತರಂಗದಲಿ ನೋಡಾ ||

ಭಾರತೀಯ ಸಂಸ್ಕೃತಿಯಲ್ಲಿ ಚತುರ್ವಿಧ ಪುರುಷಾರ್ಥಗಳನ್ನು ಹೇಳುತ್ತಾರೆ. ಧರ್ಮ, ಅರ್ಥ, ಕಾಮ ಮತ್ತು ಮೋಕ್ಷಗಳೆಂಬ ಹಂತಗಳಲ್ಲಿ ಮನುಷ್ಯ ತನ್ನ ಬದುಕನ್ನು ಅರಳಿಸಿಕೊಳ್ಳಬೇಕೆಂಬುದು ಈ ಸಿದ್ಧಾಂತದ ಮುಖ್ಯ ಆಶಯ. ಮಾನವನ ಅಂತಿಮ ಗುರಿ ಮೋಕ್ಷವೇ ಆಗಿರುವುದರಿಂದ, ಈ ಹಂತವನ್ನು ತಲುಪಲು ಆತ ಧರ್ಮವನ್ನು ಪರಿಪಾಲಿಸಬೇಕು, ನಂತರ ಬದುಕಿನ ನಿಜವಾದ ಅರ್ಥವನ್ನು ತಿಳಿದುಕೊಳ್ಳಬೇಕು. (ಲೌಕಿಕಾರ್ಥದಲ್ಲಿ ಅರ್ಥವೆಂದರೆ ಹಣ-ಸಂಪತ್ತು ಎಂದರ್ಥ, ಒಂದು ದೃಷ್ಟಿಯಲ್ಲಿ ಬದುಕಲು ಈ ಹಣವೂ ಬೇಕಾಗುತ್ತದೆ.) ಎಲ್ಲಕ್ಕೂ ಮಿಗಿಲಾಗಿ ಮನುಷ್ಯನನ್ನು ಕಾಡುವ ಪಂಚೇಂದ್ರಿಯಗಳ ಶಮನಕ್ಕೆ ಕಾಮಭೋಗವೂ ಮುಖ್ಯವಾಗಿದೆ. ಎಷ್ಟೋ ವರ್ಷಗಳ ಕಾಲ ಕೇವಲ ಗಿಡಗಳ ಒಣ ಎಲೆ ತಿಂದು ಬದುಕಿದ ವಿಶ್ವಾಮಿತ್ರ, ಒಂದು ಮೈಲು ದೂರದಲ್ಲಿದ್ದ ಮೇನಕೆಯನ್ನು ನೋಡಿ ಮೋಹಗೊಂಡು, ಅವಳೊಂದಿಗೆ ಸಂಸಾರ ಮಾಡಿದನೆಂಬ ಕತೆ ಬರುತ್ತದೆ. ಹಾಗೆ ಈ ಕಾಮವನ್ನು ಉದಾತ್ತೀಕರಣಗೊಳಿಸಿ, ಮೋಕ್ಷ ಪದವನ್ನು ಸಂಪಾದಿಸಬೇಕೆಂದು ಭಾರತೀಯ ಧಾರ್ಮಿಕ ಪರಂಪರೆ ತಿಳಿಸುತ್ತದೆ. ಆದರೆ ಇದಕ್ಕೆ ಪರ್ಯಾಯವಾಗಿ ಚನ್ನಬಸವಣ್ಣನವರು ಚತುರ್ವಿಧ ಸಾರಾಯ ಸಂಪತ್ತನ್ನು ವಿವರಿಸುತ್ತಾರೆ. ಅವರ ಕೆಲವು ವಚನಗಳಲ್ಲಿ ಈ ಧರ್ಮಾರ್ಥಕಾಮ ಮೋಕ್ಷಗಳ ಬಗೆಗೆ ವಿಡಂಬನೆಯ ನಿಲುವು ತೋರುತ್ತದೆ.

ಧರ್ಮ ಅರ್ಥ ಕಾಮ ಮೋಕ್ಷವೆಂಬ ಚತುರ್ವಿಧ
ಪುರುಷಾರ್ಥಂಗಳಂ ಕೆಡಿಸಿ,
ಸಾಲೋಕ್ಯ ಸಾಮೀಪ್ಯ ಸಾರೂಪ್ಯ ಸಾಯುಜ್ಯವೆಂಬ
ಚತುರ್ವಿಧ ಮುಕ್ತಿಯ ಬಯಸದೆ (೧೦೦೧)

ಮೇಲಿನ ವಚನದ ನುಡಿಯಲ್ಲಿ ಪುರುಷಾರ್ಥಗಳನ್ನು ಅಲ್ಲಗಳೆದುದು ಕಂಡು ಬರುತ್ತದೆ. ಚನ್ನಬಸವಣ್ಣನವರು ಈ ಪುರುಷಾರ್ಥ ಚತುಷ್ಟಯಕ್ಕೆ ಬದಲಾಗಿ ಚತುರ್ವಿಧ ಸಾರಾಯ ಸಂಪತ್ತನ್ನು ಬೋಧಿಸಿದ್ದಾರೆ. ಇದು ವ್ಯಕ್ತಿಯ ಆತ್ಮೋನ್ನತಿಗೆ ದಿವ್ಯ ಪಥವನ್ನು ತೋರುವ ಒಂದು ಅಪರೂಪದ ಸಾಧನಾಮಾರ್ಗವಾಗಿದೆ. ಈ ಚತುರ್ವಿಧ ಸಾರಾಯ ಸಂಪತ್ತಿನಲ್ಲಿ ಮೊದಲು ಬರುವುದು ಗುರು. ಗುರುವಿನ ಸಹಾಯವಿಲ್ಲದೆ ಸಾಧಕನಾದವನು ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಎಲ್ಲಕ್ಕೂ ಮೊದಲು ಗುರುಕೃಪೆಯೇ ಬೇಕು. ಹೀಗಾಗಿ ಈ ಸಂಪತ್ತಿನ ಮೊದಲ ಭಾಗವಾಗಿ ಗುರುವಿಗೆ ಅಗ್ರಗಣ್ಯ ಸ್ಥಾನವನ್ನು ಚನ್ನಬಸವಣ್ಣನವರು ಕಲ್ಪಿಸಿಕೊಟ್ಟಿದ್ದಾರೆ.

ಶ್ರೀಗುರುವಿನ ಪಾದಕಮಲಕ್ಕೆ ಪ್ರೀತಿಯಿಂದ ಚಿತ್ತಶುದ್ಧಿಯಿಂದ ಶರೀರ, ಅದರೊಳಗಿನ ಪ್ರಾಣ, ಕರಣ ಹೀಗೆ ತನ್ನದೆಲ್ಲವನ್ನೂ ಭಕ್ತಿಯಿಂದ ಸಮರ್ಪಿಸಿ ಮಾಡುವ ಗುರುಭಕ್ತಿ ಶ್ರೇಷ್ಠವಾದುದು ಎಂದು ಹೇಳುತ್ತಾರೆ. ಚನ್ನಬಸವರು ತಮ್ಮ ಗುರು ಜ್ಞಾನಗುರು ಎಂದು ಸಂಬೋಧಿಸುತ್ತಾರೆ. ಎಲ್ಲರ ಗುರುಗಳಂತೆ ನನ್ನ ಗುರುಗಳಲ್ಲ, ಅವರು ಭವಭಾರವನ್ನು ನೂಕುವ ಪರಮ ಗುರುವಿನ ಕರುಣೆ ತಮ್ಮ ಮೇಲಾಗಿದೆ ಎಂದು ಹೇಳುತ್ತಾರೆ. ಗುರು ಕರುಣಿಸಿದನೆಂದರೆ ಮಾಯೆ, ಮರವೆ, ಲೌಕಿಕ ಪ್ರಪಂಚ ಮೊದಲುಗೊಂಡು ಎನ್ನ ಕರ್ಮನಾಶವೂ ಆಗುತ್ತದೆ ಎಂದು ಹೇಳುತ್ತಾರೆ.

ಚನ್ನಬಸವಣ್ಣನವರು ಹೇಳುವ ಎರಡನೆಯ ಸಾರಾಯ ಸಂಪತ್ತೆಂದರೆ ಲಿಂಗ. ಇಷ್ಟಲಿಂಗದಲ್ಲಿ ಭಕ್ತನು ತದೇಕನಿಷ್ಠೆಯುಳ್ಳವನಾದರೆ, ಅದೇ ಆತನ ಸಂಪತ್ತಾಗುವುದು. ಲಿಂಗವೆಂಬುದು ಜ್ಯೋತಿಯಲೊದಗಿದ ಜ್ಯೋತಿಯಂತೆ, ದರ್ಪಣದೊಳಗಿನ ಪ್ರತಿಬಿಂಬದಂತೆ, ಪದಕದೊಳಗಿನ ರತ್ನದಂತೆ, ರೂಪಿನ ನೆಳಲಿನ ಅಂತರಂಗದಂತೆ ದರ್ಪಣಕ್ಕೆ ದರ್ಪಣವ ತೋರಿದಂತಾಯಿತು ಎಂದು ಚನ್ನಬಸವಣ್ಣನವರು ವಿವರಿಸುತ್ತಾರೆ. ಲಿಂಗತತ್ವದ ಬಗ್ಗೆ ಚನ್ನಬಸವಣ್ಣನವರು ತುಂಬ ನಿರ್ಣಾಯಕವೆನ್ನುವ ವಚನಗಳನ್ನು ರಚಿಸಿದ್ದಾರೆ. ಲಿಂಗ ಸಕೀಲಗಳನ್ನು ವಿವರಿಸಿ, ಭಕ್ತ ಸಾಧಕನು ಲಿಂಗಾಂಗ ಸಾಮರಸ್ಯ ಸುಖವನ್ನು ಅನುಭವಿಸುವ ಮಾರ್ಗವನ್ನು ತಿಳಿಯಪಡಿಸಿದ್ದಾರೆ.

ಮೂರನೆಯ ಸಾರಾಯ ಸಂಪತ್ತು ಜಂಗಮಪ್ರೇಮ. ಜಂಗಮ ತತ್ವಕ್ಕೆ ಚನ್ನಬಸವಣ್ಣನವರು ತುಂಬ ಮಹತ್ವ ಕೊಟ್ಟಿದ್ದಾರೆ. ತಮ್ಮ ಒಂದು ವಚನದಲ್ಲಿ ಲಿಂಗಾರ್ಚನೆ ಮಾಡುವೆನಯ್ಯಾ ನಾನು ಜಂಗಮ ಮನೆಗೆ ಬರಬೇಕೆಂದು ಹೇಳುತ್ತಾ, ಜಂಗಮ ಮನೆಗೆ ಬಂದಡೆ, ಆ ಲಿಂಗಾರ್ಚನೆಯ ಮಾಡದೆ ಜಂಗಮಾರ್ಚನೆಯ ಮಾಡುವೆ, ಲಿಂಗದಲ್ಲಿ ಏನಿದೆ? ಜಂಗಮದಲ್ಲಿ ಏನುಂಟು? ಲಿಂಗದಲ್ಲಿ ಕುಲ, ಛಲ, ಫಲ, ಪದ, ಭವಗಳುಂಟು, ಜಂಗಮದಲ್ಲಿ ಕುಲಂ ನಾಸ್ತಿ, ಛಲಂ ನಾಸ್ತಿ, ಫಲಂ ನಾಸ್ತಿ, ಪದಂ ನಾಸ್ತಿ, ಭವಂ ನಾಸ್ತಿಯಾಗುವುದು. ಆದ್ದರಿಂದ ಕೂಡಲಚನ್ನಸಂಗಯ್ಯನಲ್ಲಿ ಬಸವಣ್ಣನವರೊಬ್ಬರೆ ಜಂಗಮ ಸಾಧಕರಾಗಿ ಸ್ವಯಲಿಂಗವಾದರು ಎಂದು ಹೇಳುತ್ತಾರೆ. ಅಷ್ಟಾವರಣಗಳಲ್ಲಿ ತ್ರಿವಿಧ ಪೂಜ್ಯನೀಯ ವಸ್ತುಗಳಲ್ಲಿ ಜಂಗಮವೂ ಒಂದು. ಜಂಗಮ ಎಂದರೆ ಸಮಾಜ ಎನ್ನುವ ಭಾವ ಬರುತ್ತದೆ ಎಂದು ಕೆಲವರು ವಿವರಿಸುತ್ತಾರೆ. ಆದರೆ ತತ್ವಪ್ರತಿಪಾದನೆಯ ದೃಷ್ಟಿಯಿಂದ ಚನ್ನಬಸವಣ್ಣನವರ ವಚನಗಳನ್ನು ಗಮನಿಸಿದಾಗ, ಜಂಗಮ ಎನ್ನುವುದು ವ್ಯಕ್ತಿಗತ ದೃಷ್ಟಿಯಿಂದ ನೋಡಲಾಗಿದೆ ಎಂದು ತಿಳಿಯುತ್ತದೆ. ಜಂಗಮ ಸಮಾಜವನ್ನು ಉದ್ಧರಿಸುವ ಪರಶಿವನ ಸಾಕ್ಷಾತ್ ಸ್ವರೂಪವೇ ಆಗಿದ್ದಾನೆ. ಅಂತಹ ಜಂಗಮನಿಗೆ ಅನ್ನ ವಸ್ತ್ರಾದಿಗಳನ್ನು ನೀಡಿ ತೃಪ್ತಿಪಡಿಸುವುದೇ ಜಂಗಮ ಪ್ರೇಮವೆಂದು ಈ ಸ್ವರವಚನದಲ್ಲಿ ಹೇಳಿದ್ದಾರೆ.

ಇನ್ನು ನಾಲ್ಕನೆಯ ಸಾರಾಯ ಸಂಪತ್ತೆಂದರೆ- ಪ್ರಸಾದ. ಲಿಂಗ ಶರೀರಿಯಾದ ಸಾಧಕ ಭಕ್ತನು ತಾನು ಸ್ವೀಕರಿಸುವ ಪದಾರ್ಥಗಳನ್ನು ಭಗವಂತನಿಗೆ ಅರ್ಪಿಸಿತ್ತಿದ್ದೇನೆ ಎಂಬ ಭಾವವನ್ನು ಹೊಂದುವುದೇ ಪ್ರಸಾದ ನಿಷ್ಠೆ ಎನ್ನುತ್ತಾರೆ. ಸಿದ್ಧ, ಶುದ್ಧ, ಪ್ರಸಿದ್ಧ ಪ್ರಸಾದಗಳ ವಿವರಣೆಯನ್ನು ಚನ್ನಬಸವಣ್ಣನವರು ತಮ್ಮ ವಚನಗಳಲ್ಲಿ ಕೊಟ್ಟಿದ್ದಾರೆ. ಮಿಶ್ರಾರ್ಪಣ ಕೃತಿಯಲ್ಲಿ ಪ್ರಸಾದ ತತ್ವವನ್ನು ದಾರ್ಶನಿಕ ನೆಲೆಯಲ್ಲಿ ವಿವೇಚಿಸಿದ್ದಾರೆ. ಸದಾಚಾರದಿಂದ ನಡೆಯುತ್ತಲೇ ಗುರುಕಾರುಣ್ಯ ಪಡೆದು, ಮನೋಚಿತ್ತದಿಂದ ಇರುತ್ತಲೇ ಪರಶಿವನನ್ನು ಒಲಿಸಿಕೊಳ್ಳುವುದು, ಶುದ್ಧ ದೇಹದಿಂದ ವರಪ್ರಸಾದವನ್ನು ಪಡೆಯುವುದು ಇದರ ಒಟ್ಟು ಪರಿಣಾಮವೇ ಜಂಗಮತ್ವದ ನಿಲುವು ನೆಲಸುತ್ತದೆ. ಅದೇ ಈ ಚತುಷ್ಟಯದ ಒಲವು ಎನ್ನುತ್ತಾರೆ.

ಸಾಧಕನ ಮನದ ಕತ್ತಲೆಯನ್ನು ದೂರಮಾಡಲು ಗುರು ಬೇಕು, ಭ್ರಮೆಯನ್ನು ಕಳೆಯಲು ಶಿವ ಬೇಕು ಹಾಗೆಯೇ ದೇಹವನ್ನು ಅಮಲ ಮಾಡಲು ಪ್ರಸಾದ ಬೇಕು. ಒಳ್ಳೆಯ ಮನಸ್ಸು ಮತ್ತು ಸುಜ್ಞಾನವನ್ನು ಪಡೆಯಲು ಜಂಗಮ ಬೇಕು. ಈ ಕ್ರಮದಿಂದ ಸಾಧನೆ ಮಾಡುವುದೇ ಸದ್ಭಕ್ತಿ ಎನ್ನಿಸಿಕೊಳ್ಳುತ್ತದೆ ಎನ್ನುತ್ತಾರೆ.

ಈ ನಾಲ್ಕು ಸಾರಾಯ ಸಂಪತ್ತು ವಶಪಡಿಸಿಕೊಳ್ಳಲು ಹೆಚ್ಚಿನ ಶ್ರಮ ಬೇಕಿಲ್ಲ. ಸುಲಭವಾದ ಮಾರ್ಗದಲ್ಲಿ ಸಾಗಿದರೆ ಇವುಗಳ ನಿಜವಾದ ಹೊಲಬು ತಿಳಿಯುತ್ತದೆ. ಇಂತಹ ಸಾರಾಯ ಸಂಪತ್ತನ್ನು ತನ್ನೊಡಲೊಳಗೆ ಅಂಕುರಿಸಿಕೊಂಡರೆ ಆತನ ಅಂತರಂಗದಲ್ಲಿ ಕೂಡಲಚೆನ್ನಸಂಗಮ ನೆಲೆಸುವನು ಎಂಬ ಭಾವ ಇಲ್ಲಿದೆ.

ಗುರು-ಲಿಂಗ-ಜಂಗಮ ಮತ್ತು ಪ್ರಸಾದ ಇವು ಲಿಂಗಾಯತ ಧರ್ಮದ ಚತುರ್ವಿಧ ಸಾರಾಯ ಸಂಪತ್ತುಗಳಾಗಿವೆ. ಇವುಗಳ ಸರಿಯಾದ ಅನುಷ್ಠಾನದಿಂದ ಪ್ರತಿಯೊಬ್ಬ ಲಿಂಗಾಯತನು ತನ್ನ ಬದುಕಿನಲ್ಲಿ ಬೆಳಕು ಕಾಣಲು ಸಾಧ್ಯವಾಗುತ್ತದೆ.

ಸರ್ವಾಚಾರ ಸಂಪತ್ತು

ಶಿವನೆ ಬಸವಣ್ಣನ ರೂಪಾಗಿ |
ಅವಿರಳ ತತ್ವವಾಗಿರುತಿಪ್ಪ ||

ಪೃಥ್ವಿಯಂಗವಾಗಿ, ಅವಿತಥವಿಲ್ಲದೆ |
ಮಥನದಿ ಭಕ್ತ ಸುಚಿತ್ತದ
ಹಸ್ತದೊಳಾಚಾರಲಿಂಗವಾಗಿರ್ದು ಮತ್ತೆ
ನಾಸಿಕದಲ್ಲಿ ಗಂಧವ ಭೋಗಿಪ್ಪ ||

ಜಲವೆ ಅಂಗವಾಗಿ, ಕುಲವಳಿವ |
ಬಲುಹುಳ್ಳ ಮಾಹೇಶ್ವರ ಬುದ್ಧಿಯ
ಬಲೆಯೊಳು ಗುರುಲಿಂಗವಾಗಿ ಸಿಲುಕಿ,
ಜಿಹ್ವೆಯೊಳು ರುಚಿಯನ್ನು ಭೋಗಿಪ್ಪ ||

ಅಗ್ನಿಯಂಗವಾಗಿಪ್ಪ ಪ್ರಸಾದಿಯ |
ಹಂಗಿಲ್ಲದ ನಿರಹಂಕಾರ ಹಸ್ತದಿ
ಭಂಗವಳಿದು ಶಿವಲಿಂಗವಾಗಿರ್ದು
ಕಂಗಳಲಿ ರೂಪನ್ನು ಭೋಗಿಪ್ಪ ||

ಅನಿಲನಂಗವಾದ ಪ್ರಾಣಲಿಂಗಿಯ ಸು |
ಮನವೆಂಬ ಹಸ್ತದೊಳನುಶ್ರುತ
ಘನ ಮಹಾಚರಲಿಂಗವಾಗಿ ಸಿಲುಕಿ ಸ್ಪ
ರ್ಶನೇಂದ್ರಿಯದಲ್ಲಿ ಭೋಗಿಪ್ಪ ||

ಆಕಾಶವೆ ಅಂಗವಾಗಿಪ್ಪ ಶರಣನ
ವಿಕಸಿತ ಸುಜ್ಞಾನ ಹಸ್ತದಿ
ಏಕೋ ಪ್ರಸಾದಲಿಂಗವಾಗಿರ್ದು
ಶ್ರೋತ್ರೇಂದ್ರಿಯದಲ್ಲಿ ಭೋಗಿಪ್ಪ ||

ಭಾವಾಂಗ ಹಸ್ತವಾದ ಶಿವೈಕ್ಯಂಗೆ |
ಸ್ವಾನುಭಾವ ಸಮರಸದಲ್ಲಿ
ಅನುಭಾವದೊಳು ಮಹಾ ಲಿಂಗವಾಗಿರ್ದು
ವಿವರಿಸಬಾರದ ಭೋಗಂ ಭೋ ||

ಸರ್ವಾಂಗವು ಲಿಂಗಸಂಗಿಯಾಗಿರ್ದು |
ಸರ್ವೇಂದ್ರಿಯ ಸನುಮತವಾಗಿ
ನಿರ್ವಾಹ ಕೂಡಲ ಚೆನ್ನ ಸಂಗಯ್ಯನಲ್ಲಿ,
ಉರ್ವಿಗೆ ಶರಣ ಮಹಂತಂ ಭೋ ||

ಪ್ರಸ್ತುತ ಪದ್ಯದಲ್ಲಿ ಬಸವಣ್ಣನವರ ಸಮಸ್ತ ಬದುಕು ಸರ್ವಾಚಾರ ಸಂಪತ್ತಿನಿಂದ ಕೂಡಿತ್ತು ಎಂಬುದನ್ನು ಅತ್ಯಂತ ಸರಳವಾಗಿ ವಿವರಿಸಿದ್ದಾರೆ. ಬಸವಣ್ಣನವರು ಐವತ್ತೆರೆಡು ತೆರದ ಆಚಾರಗಳನ್ನು ಪಾಲಿಸುತ್ತಿದ್ದರು ಎಂದು ಅಕ್ಕಮಹಾದೇವಿಯವರು ತಮ್ಮ ವಚನವೊಂದರಲ್ಲಿ ಹೇಳುತ್ತಾರೆ. ಇಂತಹ ಆಚಾರವಂತ ಬಸವಣ್ಣ ಸರ್ವಾಚಾರ ಸಂಪತ್ತು ಆಗಿದ್ದನೆಂಬುದು ಚನ್ನಬಸವಣ್ಣನವರ ಅಭಿಪ್ರಾಯ. ಈ ಸ್ವರವಚನದ ಸರಳಾರ್ಥವನ್ನು ಗ್ರಹಿಸುವುದಾದರೆ-

೧. ಪೃಥ್ವಿ, ಅಪ್ಪು, ಅಗ್ನಿ, ವಾಯು, ಆಕಾಶ ಮತ್ತು ಭಾವ ಇವು ಆರು ಲಿಂಗಗಳು. ಅವಿನಾಶವಾಗದ ತತ್ವಮಂಥನದಿಂದ ಚಿತ್ತವೆಂಬ ಹಸ್ತದಲ್ಲಿ ಆಚಾರಲಿಂಗ ವನ್ನಿಟ್ಟುಕೊಂಡು ಭಕ್ತನು ನಾಸಿಕದ ಮುಖಾಂತರ ಗಂಧವನ್ನು ಭೋಗಿಸುವಂತೆ ಶಿವನ ರೂಪವಾದವನು ಬಸವಣ್ಣ.

೨. ಜಲವೆ ಅಂಗವಾಗಿ ಕುಲದ ಮದವನ್ನು ಅಳಿದ ಮಾಹೇಶ್ವರನು ಬುದ್ಧಿಯಲ್ಲಿ ಗುರುಲಿಂಗವಾಗಿ ಜೋಡಣೆಗೂಂಡು ನಾಲಿಗೆಯ ಮೂಲಕ ರುಚಿಯನ್ನು ಸ್ವಾದಿಸುವ ಬಸವಣ್ಣನಂತೆ ಶಿವನ ಸ್ವರೂಪದ ಸರ್ವಾಂತರ್ಯಾಮಿ ಯಾಗಿರುವನು.

೩. ಅಗ್ನಿಯೇ ದೇಹವಾಗಿರುವ ಪ್ರಸಾದಿಯು ನಿರ್ಭಿಡೆಯಿಂದ ನಿರಹಂಕಾರ ಹಸ್ತದಲ್ಲಿ ಇಷ್ಟಲಿಂಗವನ್ನಿಟ್ಟುಕೊಂಡು ಕಣ್ಣಿನ ಮುಖಾಂತರ ರೂಪವನ್ನು ಭೋಗಿಸುವ ಅವನು ಬಸವಣ್ಣನಂತೆ ಅವಿರಳವಾಗಿರುವ ಶಿವನಾಗಿರುವನು.

೪. ವಾಯುವೆ ಅಂಗವಾದ ಪ್ರಾಣಲಿಂಗಿಯು ಒಳ್ಳೆಯ ಮನಸ್ಸೆಂಬ ಹಸ್ತದಲ್ಲಿ ಶಾಶ್ವತವಾಗಿರುವ ಚರಲಿಂಗವಾಗಿದ್ದು ಸ್ಪರ್ಶನ ಇಂದ್ರಿಯದ ಮೂಲಕ ಅನುಭವಿಸುತ್ತಿರುವ ಶಿವಸ್ವರೂಪಿ ಬಸವಣ್ಣನು ಅವಿರಳ ತತ್ವ ಹೊಂದಿರುವನು.

೫. ಆಕಾಶವೇ ಅಂಗವಾಗಿರುವ ಶರಣನು ಸುಜ್ಞಾನಹಸ್ತದಿಂದ ಪ್ರಸಾದಲಿಂಗವಾದ ಕಿವಿಯ ಇಂದ್ರಿಯ ಮೂಲಕ ಭೋಗಿಸುತ್ತಿಪ್ಪವನೇ ಶಿವಸ್ವರೂಪಿ ಬಸವಣ್ಣನು.

೬. ಆರು ಹಸ್ತಗಳಲ್ಲಿ ಭಾವಾಂಗ ಹಸ್ತವೂ ಒಂದು. ಇಂತಹ ಹಸ್ತದಲ್ಲಿ ಅವರ್ಣನೀಯ ಭಾವದಿಂದ ಐಕ್ಯನಾಗಿ ಮಹಾಲಿಂಗವಾಗಿ ಸಮರಸವಾದವನು ಬಸವಣ್ಣ.

೭. ಹೀಗೆ ಸಮಸ್ತ ಶರೀರವೇ ಲಿಂಗಸಂಗಿಯಾಗಿ ಸರ್ವೇಂದ್ರಿಯಂಗಳೊಂದಿಗೆ ಕೂಡಿ ಕೂಡಲಚೆನ್ನಸಂಗಯ್ಯನಲ್ಲಿ ಸಮರಸಗೊಂಡ ಶರಣನು ಭೂಲೋಕದಲ್ಲಿ ಪೂಜ್ಯನಾಗಿದ್ದಾನೆ. ಇಂಥ ಶರಣನ ಪ್ರತಿರೂಪವೇ ಬಸವಣ್ಣನಾಗಿದ್ದಾನೆ.

ಬಸವಣ್ಣನವರು ಸರ್ವಾಚಾರ ಸಂಪತ್ತಿನ ಒಡೆಯರಾಗಿದ್ದರಿಂದಲೇ ಅವರ ಕೀರ್ತಿವಾರ್ತೆಗಳನ್ನು ಕೇಳಿ, ದೇಶ-ವಿದೇಶಗಳಿಂದ ಅವರ ಅನುಯಾಯಿಗಳಾಗಲು ಕಲ್ಯಾಣಪಟ್ಟಣಕ್ಕೆ ದಯಮಾಡಿಸಿದರು. ಇದೊಂದು ಲೋಕಸೋಜಿಗದ ಘಟನೆಯೆಂದೇ ಹೇಳಬೇಕು

Share This Article
Leave a comment

Leave a Reply

Your email address will not be published. Required fields are marked *