ಹನ್ನೆರಡನೆಯ ಶತಮಾನದಲ್ಲಿ ಬಸವಾದಿ ಶಿವಶರಣರು ಮಾಡಿದ ಕ್ರಾಂತಿ ಇತಿಹಾಸದಲ್ಲಿ ಸುವರ್ಣಾಕ್ಷರಗಳಿಂದ ಬರೆಯಲ್ಪಟ್ಟಿದೆ. ಬಸವಣ್ಣನವರು ಸರ್ವಸಮಾನತೆ-ಕಾಯಕ-ದಾಸೋಹ ತತ್ವದ ಸರ್ವಾಂಗ ಸುಂದರ ಸಮಾಜ ನಿರ್ಮಾಣಕ್ಕಾಗಿ ಮಾಡಿದ ಈ ಕ್ರಾಂತಿ ಮನುಕುಲದ ಏಕತೆಗಾಗಿ ನಡೆದ ಮೊದಲ ಪ್ರಯತ್ನವಾಗಿದೆ. ಸಾವಿರಾರು ವರ್ಷಗಳಿಂದ ಶೋಷಿತ-ದಮನಿತ ಸಮುದಾಯಕ್ಕೆ ದನಿಯನ್ನು ಕೊಟ್ಟ ಶ್ರೇಯಸ್ಸು ಬಸವಣ್ಣನವರಿಗೆ ಸಲ್ಲುತ್ತದೆ. ಬಸವಣ್ಣನವರ ಕೀರ್ತಿ-ವಾರ್ತೆಗಳನ್ನು ಕೇಳಿ ಕಾಶ್ಮೀರದಿಂದ-ಗುಜರಾತದಿಂದ, ದೂರದ ಕಂದಹಾರದಿಂದ, ಮಹಾರಾಷ್ಟ್ರದಿಂದ ಹೀಗೆ ದೇಶ-ವಿದೇಶಗಳಿಂದ ಅಭಿಮಾನಿ ಶರಣರು ಕಲ್ಯಾಣಕ್ಕೆ ಬಂದರು. ಕಲ್ಯಾಣಪಟ್ಟಣ ಭೂಕೈಲಾಸವಾಯಿತು. ಬಸವಣ್ಣನವರು ಸ್ಥಾಪಿಸಿದ ‘ಅನುಭವ ಮಂಟಪ’ ಜಗತ್ತಿನ ಮೊಟ್ಟಮೊದಲ ಸಾರ್ವಜನಿಕ ಸಂಸತ್ತಾಯಿತು.
ಇದೆಲ್ಲ ನಡೆದದ್ದು ಕೇವಲ ೧೨ ವರ್ಷಗಳ ಅಲ್ಪಾವಧಿಯಲ್ಲಿ. ಅಷ್ಟರಲ್ಲಿ ಪುರೋಹಿತಶಾಹಿ ವರ್ಗದ ಕುತಂತ್ರದಿಂದ ಶರಣರ ವಿರುದ್ಧ ರಾಜನಲ್ಲಿಗೆ ದೂರುಹೋಯಿತು. ಶರಣರು ನ್ಯಾಯನಿಷ್ಠುರಿಗಳು. ಯಾರಿಗೂ ಅಂಜದ ಧೀರರು. ಹೀಗಾಗಿ ಪ್ರಭುತ್ವವನ್ನು ಎದುರು ಹಾಕಿಕೊಳ್ಳುವ ಪ್ರಸಂಗ ಬಂದಿತು. ಇದರಿಂದ ಶರಣರಿಗೆ ಹಿಂಸೆ ಕೊಡಲು ಪ್ರಾರಂಭಿಸಿದರು. ಕಲ್ಯಾಣದಲ್ಲಿ ಇನ್ನು ರಕ್ತಕ್ರಾಂತಿಯಾಗುವುದೆಂದು ಬಸವಣ್ಣನವರು ಕಲ್ಯಾಣ ತೊರೆದು ಕೂಡಲಸಂಗಮಕ್ಕೆ ಬಂದರು. ಸಿಕ್ಕ ಸಿಕ್ಕ ಶರಣರ ಮೇಲೆ ಹಲ್ಲೆ ಮಾಡಲಾಯಿತು; ಸಿಕ್ಕ ಸಿಕ್ಕ ವಚನ ಕಟ್ಟುಗಳನ್ನು ಸುಡಲಾಯಿತು. ಪುರೋಹಿತಶಾಹಿ ವರ್ಗ ಮತ್ತು ಪ್ರಭುತ್ವ ಕೂಡಿ ಶರಣ ಸಂಸ್ಕೃತಿಯನ್ನೇ ನಿರ್ನಾಮ ಮಾಡಬೇಕೆಂದು ಪ್ರಯತ್ನಿಸಿದವು. ಆಗ ಉಳಿದ ಶರಣರು ತಂಡ ಮಾಡಿಕೊಂಡು, ವಚನ ಕಟ್ಟುಗಳನ್ನು ಬೆನ್ನಿಗೆ ಕಟ್ಟಿಕೊಂಡು ತಮಗೆ ತಿಳಿದಲ್ಲಿಗೆ ಹೋದರು. ಈ ವಿಷಯವನ್ನು ತುರಗಾಹಿ ರಾಮಣ್ಣ ಎಂಬ ವಚನಕಾರ ಸ್ಪಷ್ಟವಾಗಿ ಹೇಳುತ್ತಾನೆ:
ಬಂದಿತ್ತು ದಿನ-ಬಸವಣ್ಣ ಕಲ್ಲಿಗೆ,
ಚೆನ್ನಬಸವಣ್ಣ ಉಳಿವೆಯಲ್ಲಿಗೆ,
ಪ್ರಭು ಅಕ್ಕ ಕದಳಿದ್ವಾರಕ್ಕೆ
ಮಿಕ್ಕಾದ ಪ್ರಮಥರೆಲ್ಲರೂ ತಮ್ಮ ಲಕ್ಷ್ಯಕ್ಕೆ
ನಾನು ತುರುವಿನ ಬೆಂಬಳಿಯಲ್ಲಿ ಹೋದೆ ಮರೆಯಲ್ಲಿ
ಅಡಗಿಹರೆಲ್ಲರೂ ಅಡಗಿ ಅದ ಕೇಳಿ
ನಾಗೋಪತಿನಾಥ ವಿಶ್ವೇಶ್ವರ ಲಿಂಗದಲ್ಲಿಯೇ ಉಡುಗುವೆನು.
ಚೆನ್ನಬಸವಣ್ಣ-ಅಕ್ಕನಾಗಮ್ಮನವರ ನೇತೃತ್ವದಲ್ಲಿ ಕಲ್ಯಾಣದಿಂದ ಉಳವಿಗೆ ಬಂದ ಒಂದು ಶರಣರ ತಂಡ ಬೆಳಗಾವಿ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಹಾದು ಹೋದ ಹೆಜ್ಜೆ ಗುರುತುಗಳನ್ನು ಇಂದಿಗೂ ಗುರುತಿಸಬಹುದು. ಕಲ್ಯಾಣದಿಂದ ಉಳವಿಗೆ ಹೋದ ದಾರಿಯ ಬಗ್ಗೆ ಡಾ. ಆರ್.ಸಿ.ಹಿರೇಮಠ, ಡಾ. ಎಚ್. ತಿಪ್ಪೇರುದ್ರಸ್ವಾಮಿ ಮೊದಲಾದವರು ಎರಡು ಸಂಭಾವ್ಯ ಹಾದಿಗಳನ್ನು ಗುರುತಿಸಿದ್ದರು. ಇತ್ತೀಚೆಗೆ ಸೋದೆಯ ಸದಾಶಿವರಾಯನ ‘ಉಳವಿ ಮಹಾತ್ಮೆ’ ಎಂಬ ಕೃತಿಯ ಶೋಧದಿಂದ ಈ ದಾರಿಯ ಸ್ಪಷ್ಟತೆ ದೊರೆಯಿತು.
ಡಾ. ಆರ್.ಸಿ.ಹಿರೇಮಠ ಮತ್ತು ಡಾ. ಎಚ್. ತಿಪ್ಪೇರುದ್ರಸ್ವಾಮಿ ಅವರು ಬೆಳಗಾವಿ ಜಿಲ್ಲೆಯ ಎಲ್ಲ ಶರಣ ಕ್ಷೇತ್ರಗಳನ್ನು ಕ್ಷೇತ್ರಕಾರ್ಯ ಮಾಡಿ ವಿವರವಾದ ಮಾಹಿತಿಗಳನ್ನು ನೀಡುವ ಪ್ರಯತ್ನ ಮಾಡಿದ್ದರು. ನಂತರ ಡಾ. ಬಸವರಾಜ ಮಲಶೆಟ್ಟಿ ಅವರು ಕ್ಷೇತ್ರಕಾರ್ಯ ಮಾಡಿ ‘ಶರಣ ಕ್ಷೇತ್ರಗಳು’ ಎಂಬ ಬೃಹತ್ಯೋಜನೆಯನ್ನು ಅತ್ಯಂತ ಯಶಸ್ವಿಯಾಗಿ ಮುಗಿಸಿದ್ದರು. ಇದೇ ಸಂದರ್ಭದಲ್ಲಿ ಕಲಬುರ್ಗಿ ವಿಶ್ವವಿದ್ಯಾಲಯದ ಡಾ. ವೀರಣ್ಣ ದಂಡೆ ಅವರು ‘ಬಸವಾದಿ ಶರಣರ ಕ್ಷೇತ್ರಗಳು’ ಎಂಬ ಕೃತಿಯನ್ನು ಪ್ರಕಟಿಸಿದರು. ಆದರೆ ಅದರಲ್ಲಿ ಬೆಳಗಾವಿ ಜಿಲ್ಲೆಯ ಶರಣ ಕ್ಷೇತ್ರಗಳ ದಾಖಲೀಕರಣವಾಗಿರಲಿಲ್ಲ. ಈ ಕಾರಣಕ್ಕಾಗಿ ಇನ್ನೊಂದು ಸಂಪುಟವನ್ನು ಸಿದ್ಧಪಡಿಸಲು ಅವರು ಆಲೋಚಿಸಿ ದಿನಾಂಕ ೧೬-೩-೨೦೧೫ರಂದು ಬೆಳಗಾವಿ ಜಿಲ್ಲೆಯ ಶರಣ ಕ್ಷೇತ್ರಗಳ ಕ್ಷೇತ್ರಕಾರ್ಯ ಕೈಕೊಂಡರು. ಅವರೊಂದಿಗೆ ನಾನು ಹೋಗಿದ್ದೆ. ಎಲ್ಲ ಶರಣಕ್ಷೇತ್ರಗಳನ್ನು ಕಣ್ಣಾರೆ ಕಾಣುವ ಯೋಗ ಲಭ್ಯವಾದುದು ನನ್ನ ಸುಕೃತವೆಂದು ತಿಳಿದಿರುವೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಲೇಖನ ಒಂದು ದೃಷ್ಟಿಯಿಂದ ಪರಿಪೂರ್ಣವಾಗಿದೆ ಎಂದು ನಾನು ಭಾವಿಸಿದ್ದೇನೆ.
ಬೆಳಗಾವಿ ಜಿಲ್ಲೆ ಚನ್ನಬಸವಣ್ಣನವರ ನೇತೃತ್ವದಲ್ಲಿ ಉಳಿದ ಶಿವಶರಣರು ನಡೆದಾಡಿದ ಪವಿತ್ರಭೂಪ್ರದೇಶವಿದು. ಈ ಭೂಪ್ರದೇಶದಲ್ಲಿ ಆಗಿ ಹೋದ ಅನುಭಾವಿಗಳಿಗೆ ಕೊರತೆಯಿಲ್ಲ, ಅಲ್ಲಿಗಲ್ಲಿಗೆ ದೀಪಸ್ತಂಭಗಳಾಗಿರುವ ಕ್ಷೇತ್ರಗಳಿಗೂ ಕೊರತೆಯಿಲ್ಲ. ಚನ್ನಬಸವರಾದಿಯಾಗಿ ಎಲ್ಲ ಶರಣರು ನಡೆದಾಡಿದ ಕೆಲವು ಹೆಜ್ಜೆಗುರುತುಗಳನ್ನು ಅರಿಯುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ.
ಅಂಕಲಗಿ
ಹನ್ನೆರಡನೆಯ ಶತಮಾನದ ಶರಣರ ದಂಡಿನಲ್ಲಿ ರೇಚಣ್ಣನೆಂಬ ಶರಣನಿದ್ದ. ಕಾದರವಳ್ಳಿಯಲ್ಲಿ ಯುದ್ಧವಾದ ನಂತರ ಶರಣರು ಮುಂದೆ ಉಳವಿಯತ್ತ ನಡೆದರು. ಆಗ ರೇಚಣ್ಣ ಶರಣರಿಗೆ ಇಲ್ಲಿಯೇ ಉಳಿದುಕೊಳ್ಳಲು ಸೂಚಿಸಿದರು. ಚನ್ನಬಸವಣ್ಣನವರ ಆಶಯದಂತೆ ರೇಚಣ್ಣ ಶರಣ ಅಂಕಲಗಿಯನ್ನು ತಮ್ಮ ಕರ್ಮಭೂಮಿಯನ್ನಾಗಿ ಮಾಡಿಕೊಂಡು ಏಳುನೂರು ವರ್ಷಗಳ ಕಾಲ ಬದುಕಿದರು ಎಂಬುದು ಭಕ್ತರ ನಂಬಿಕೆ. ಉಪನಿಷತ್ತುಗಳ ಕಾಲಕ್ಕೆ ಮನುಷ್ಯನ ಆಯುಷ್ಯ ನೂರು ವರ್ಷಗಳಿಗೆ ಸೀಮಿತವಾಗಿತ್ತು. ಇಂಥ ಸಂದರ್ಭದಲ್ಲಿ ಏಳು ನೂರು ವರ್ಷ ಬದುಕುವುದು ಅಸಾಧ್ಯವೆಂದು ಭಾವಿಸಿದರೂ ಇತ್ತೀಚೆಗೆ ಸ್ವಾಮಿ ರಾಮ ಅವರು ‘ಹಿಮಾಲಯ ಮಹಾತ್ಮರ ಸನ್ನಿಧಿಯಲ್ಲಿ’ ಎಂಬ ಸ್ವಾನುಭವ ಕಥನವನ್ನು ಬರೆದಿದ್ದಾರೆ. ಅದರಲ್ಲಿ ಅವರು ‘ಹಿಮಾಲಯದ ಋಷಿಶೃಂಗದಲ್ಲಿ ಸಾವಿರಾರು ವರ್ಷಗಳಿಂದ ಬದುಕಿದವರು ಇದ್ದಾರೆ’ ಎಂದು ಹೇಳುತ್ತಾರೆ. ಈ ಹಿನ್ನೆಲೆಯಲ್ಲಿ ರೇಚಣ್ಣ ಶರಣರು ಬದುಕಿ ಆಧುನಿಕ ಕಾಲಘಟ್ಟದಲ್ಲಿ ಅಡವಿಸಿದ್ಧೇಶ್ವರರೆಂಬ ಅಭಿಧಾನಕ್ಕೆ ಪಾತ್ರರಾದರು. ಹುಣಸೆ ಮರಗಳಿಗೆ ಸಾವಿರಾರು ವರ್ಷಗಳ ಆಯುಷ್ಯವಂತೆ. ಶರಣ ರೇಚಪ್ಪನವರು ಹುಣಸೆಮರದ ಹೊದರಿನಲ್ಲಿ ವಾಸಿಸಿದ್ದರು. ಹೀಗಾಗಿ ಏಳುನೂರು ವರ್ಷ ಬದುಕಿರುವ ಸಾಧ್ಯತೆಯೂ ಇದೆ ಎಂದು ಭಾವುಕ ಭಕ್ತರು ನಂಬುತ್ತಾರೆ. ಅಂಕಲಗಿಯಲ್ಲಿ ಅಡವಿಸಿದ್ಧೇಶ್ವರಮಠ ಇಂದಿಗೂ ಜಾಗೃತಸ್ಥಾನವಾಗಿದೆ. ಮತ್ತಿಕೊಪ್ಪ ಗ್ರಾಮದಲ್ಲಿ ಒಂದು ಅಡವಿಸಿದ್ಧೇಶ್ವರಮಠವಿದೆ. ಆರೇಳು ದಶಕಗಳ ಹಿಂದೆ ಈ ಊರಿನ ಸುತ್ತ ಮುತ್ತಲಿನ ಜನರು ಮತ್ತಿಕೊಪ್ಪ ಗ್ರಾಮದ ಉತ್ತರಕ್ಕೆ ಇರುವ ದೇಶನೂರ ಗುಡ್ಡದ ವಾರಿಯನ್ನು ಏರಿ ಅಂಕಲಗಿ ಅಡವಿಸಿದ್ಧೇಶ್ವರಮಠದ ದರ್ಶನಕ್ಕೆ ಹೋಗುತ್ತಿದ್ದರು ಎಂದು ಅಂಕಲಗಿಯಲ್ಲಿ ಹಲವಾರು ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಚಿಂತಕರಾದ ಶ್ರೀ ರಾಯನಗೌಡ ಪಾಟೀಲ ಅವರು ಮತ್ತು ಆ ಭಾಗದ ಅನೇಕ ಹಿರಿಯರು ಅಭಿಪ್ರಾಯ ಪಡುತ್ತಾರೆ.
ಗೊಡಚಿ
ಗೊಡಚಿಯಲ್ಲಿ ಇಂದು ವೀರಭದ್ರ ದೇವಸ್ಥಾನ ತುಂಬ ಪ್ರಸಿದ್ಧವಾಗಿದೆ. ಗೊಡಚಿಯಲ್ಲಿ ಇಂದಿಗೂ ಪೂಜಿಸಲಾಗುತ್ತಿರುವ ಮುದಿ ವೀರಭದ್ರನೆಂಬ ಮೂರ್ತಿ ನಿಸ್ಸಂದೇಹವಾಗಿ ಒಬ್ಬ ಶರಣನದು. ಇಷ್ಟಲಿಂಗ, ಕಟ್ಟಿದ ಕಾಶಿ, ಜಂಭೆ, ರುದ್ರಾಕ್ಷಿಮಾಲೆ ಧರಿಸಿರುವ ಈ ವಿಗ್ರಹ ಮಡಿವಾಳ ಮಾಚಿದೇವರದೆಂದು ಡಾ. ಆರ್.ಸಿ. ಹಿರೇಮಠ ಅವರು ಊಹೆ ಮಾಡುತ್ತಾರೆ. ಅಲ್ಲದೆ ಮಾಚಿದೇವರು ವೀರಭದ್ರನ ಅವತಾರವೆಂದು ಜನ ನಂಬಿರುವುದು ಇದಕ್ಕೆ ಪುಷ್ಟಿ ನೀಡುತ್ತದೆ. ಗೊಡಚಿ ಸಮೀಪದ ತೊರಗಲ್ದಲ್ಲಿ ಶರಣರು ತಂಗಿದ್ದರು ಎಂಬುದಕ್ಕೆ ಎರಡು ಚಿಕ್ಕ ಮಂಟಪಗಳು ಸಾಕ್ಷಿ ಒದಗಿಸುತ್ತವೆ.
ಉಳವಿಯ ಹೆಬ್ಬಾಗಿಲು ಮುರುಗೋಡ
ಶರಣರ ಕ್ರಾಂತಿಯ ಪರಿಣಾಮವಾಗಿ ಕಲ್ಯಾಣದಿಂದ ಎಲ್ಲ ಶರಣರು ಚದುರಿದರು. ತಮಗೆ ಸೂಕ್ತಕಂಡಲ್ಲಿ ಹೋದರು. ಶರಣರು ಉಳವಿಯತ್ತ ಸಾಗುವಾಗ ಮುರುಗೋಡ ಗ್ರಾಮಕ್ಕೂ ಬಂದಿದ್ದರು. ಶರಣರ ಯುದ್ಧ ಇಲ್ಲಿಯೇ ಮುಕ್ತಾಯವಾದ ಸಂಕೇತದಂತೆ ಶರಣರ ಯುದ್ಧ ಮುರುಗಡೆಯಾದದ್ದೇ ಮುರುಗೋಡ ಎಂಬ ಸ್ಥಳನಾಮ ಬಂದ ಐತಿಹ್ಯವಿದೆ. ಶರಣರು ಉಳವಿಯ ಮಾರ್ಗದತ್ತ ಸಾಗಿದಾಗ ಮುರುಗೋಡು ಉಳವಿಯ ಹೆಬ್ಬಾಗಿಲು ಎಂದು ಭಾವಿಸಿದ ಒಂದು ಸ್ಮಾರಕ ಅಲ್ಲಿದೆ.
ಉಳವಿಯ ಹೆಬ್ಬಾಗಿಲು, ಶರಣರು ಇದ್ದ ಗವಿಗಳು, ಶರಣ ಕೂಗು ಮಾರಿತಂದೆ ಸ್ಮಾರಕವಾಗಿರುವ ಮೂಲ ಕೂಗು ಬಸವನ ಶಿಲ್ಪ ಮತ್ತು ಸಮಾಧಿ, ಮಡಿವಾಳ ಮಾಚಿದೇವರ ಗದ್ದುಗೆ, ಬೊಮ್ಮಯ್ಯನ ಗದ್ದುಗೆ, ಸಿದ್ಧನಗವಿ, ಬಯಲ ಬಸವ ಹಾಗು ಹುಚ್ಚಯ್ಯ ಶರಣನ ಗುಡಿ, ಜಂಭುಲಿಂಗೇಶ್ವರ ಗುಡಿ, ಮಡಿವಾಳೇಶ್ವರ ಗುಡಿ, ಸಿದ್ಧಲಿಂಗೇಶ್ವರ ದೇವಾಲಯ ಮುಂತಾದ ಶರಣ ಸ್ಮಾರಕಗಳು ಇಲ್ಲಿವೆ. ಗ್ರಾಮದ ಹೊರವಲಯದಲ್ಲಿ ಚನ್ನಬಸವಣ್ಣನವರ ದೇವಸ್ಥಾನವಿದೆ. ಅದರ ಬಯಲಿನಲ್ಲಿಯೇ ಯುದ್ಧವಾಯಿತೆಂದು ಜನ ಹೇಳುತ್ತಾರೆ. ಯುದ್ಧಮುಗಿದ ನಂತರ ತಮ್ಮ ಖಡ್ಗಗಳನ್ನು ಸಮೀಪದ ಕೆರೆಯಲ್ಲಿ ತೊಳೆದುಕೊಂಡರು. ಖಡ್ಗದ ರಕ್ತ ನೀರಿನಲ್ಲಿ ಕೂಡಿ ಇಡೀ ಕೆರೆ ಕೆಂಪಾಗಿ ಕಂಡಿತು. ರಕ್ತದಿಂದ ಕೆಂಪಾದ ಕೆರೆಯನ್ನು ‘ಕೆಂಗೆರಿ’ ಎಂದು ಗುರುತಿಸಲಾಗುತ್ತಿದೆ.
ಎಡೆಯೂರು ತೋಂಟದಾರ್ಯ ಪರಂಪರೆಯ ಗೋಸಲ ಸಿದ್ಧೇಶ್ವರರಿಗೂ ಮತ್ತು ಮುರಗೋಡಿಗೂ ಅವಿನಾಭಾವ ಸಂಬಂಧವಿದೆ ಎಂದು ವಿದ್ವಾಂಸರು ಹೇಳುತ್ತಾರೆ. ಮುನವಳ್ಳಿ ಮುರುಗೋಡ ಮತ್ತು ಸೊಗಲ ಕ್ಷೇತ್ರಗಳಲ್ಲಿ ಗೋಸಲ ಸಿದ್ಧೇಶ್ವರರು ಸಂಚರಿಸಿದ ಕುರುಹುಗಳಿರುವುದನ್ನು ಗುರುತಿಸಲಾಗುತ್ತಿದೆ. ಈ ಪರಂಪರೆಯ ಆದಿಲಿಂಗದೇವರು ಮುರುಗೋಡ ಸಮೀಪದ ಕಲ್ಲೂರು ಗುಡ್ಡದಲ್ಲಿ ನಿರ್ವಯಲಾದರು. ಹೀಗೆ ಎಡೆಯೂರು ತೋಂಟದಾರ್ಯ ಸಂಸ್ಥಾನಮಠಕ್ಕೂ ಮುರುಗೋಡ ಗ್ರಾಮಕ್ಕೂ ಒಂದು ಆತ್ಮೀಯ ಸಂಬಂಧ ಇರುವುದನ್ನು ಗಮನಿಸಬಹುದು.
ಮುರುಗೋಡ ಗ್ರಾಮದಲ್ಲಿ ಐವತ್ತಕ್ಕೂ ಹೆಚ್ಚು ಲಿಂಗಾಯತಮಠಗಳಿರುವ ದಾಖಲೆಗಳು ದೊರೆಯುತ್ತವೆ. ಇಲ್ಲಿಯ ಮಹಾಂತೇಶ್ವರಮಠ ಪೂಜ್ಯಶ್ರೀ ಶತಾಯುಷಿ ಮಹಾಂತ ಶಿವಯೋಗಿಗಳವರಿಂದ ಖ್ಯಾತಿ ಪಡೆದಿದೆ. ಅರಭಾವಿ ಪುಣ್ಯಾರಣ್ಯಪೀಠದ ಅಧಿಪತಿಗಳಾಗಿದ್ದ ಪೂಜ್ಯರು ಶರಣರ ಭೂಮಿ ಮುರುಗೋಡಿಗೆ ಬಂದು ನೆಲೆಸಿ ಇಲ್ಲಿಯೇ ಮಠ ಸ್ಥಾಪಿಸಿದರು. ಇದೊಂದು ಜಾಗೃತಪೀಠವಾಗಿ ಇಂದಿಗೂ ಭಕ್ತರ ಪಾಲಿನ ಕಾಮಧೇನುವಾಗಿದೆ. ಇಲ್ಲಿ ಶೈವ ಸ್ಮಾರ್ತಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಶಿವಚಿದಂಬರರು ಎಲ್ಲ ಜಾತಿಮತ ಪಂಥಗಳನ್ನು ಮೀರಿ ಬೆಳೆದ ಮಹಾನುಭಾವರು. ಇವರ ಲೀಲಾಭೂಮಿಯಾಗಿ ಮುರುಗೋಡ ತುಂಬ ಪ್ರಸಿದ್ಧವಾಗಿದೆ.
ಕಾರೀಮನಿ
ಮುರುಗೋಡದಿಂದ ಮೂರು ಕಿ.ಮೀ. ದೂರದಲ್ಲಿರುವ ಕಾರೀಮನಿ ಗ್ರಾಮದಲ್ಲಿ ಮಡಿವಾಳ ಮಾಚಿದೇವರ ಗದ್ದುಗೆ ಇದೆ. ಮಾಚಿದೇವರು ಮುರುಗೋಡ ಯುದ್ಧದಲ್ಲಿ ಗಾಯಗೊಂಡು, ಇಲ್ಲಿ ಬಂದು ರಕ್ತವನ್ನು ಕಾರಿಕೊಂಡ ಕಾರಣಕ್ಕಾಗಿ ‘ಕಾರೀಮನಿ’ ಎಂಬ ಎಂಬ ಸ್ಥಳನಾಮ ಬಂದಿತೆAದು ಈ ಗ್ರಾಮದ ಜನರು ಹೇಳುತ್ತಾರೆ. ಇಲ್ಲಿಯೇ ಬಯಲ ಬಸವೇಶ್ವರ ದೇವಸ್ಥಾನವಿದೆ. ಇತ್ತೀಚೆಗೆ ಜನರು ಹೊಸ ದೇವಸ್ಥಾನವನ್ನು ನಿರ್ಮಾಣ ಮಾಡಿದ್ದಾರೆ. ಕಾರೀಮನಿ ಗುಡ್ಡದಲ್ಲಿ ‘ಮಲ್ಲಯ್ಯನ ದೇವಸ್ಥಾನ’ವಿದೆ. ಮಹಾರಾಷ್ಟ್ರದ ಖ್ಯಾತ ಸಂಶೋಧಕ ಡಾ. ರಾ.ಚಿಂ.ಢೇರೆ ಅವರು ಇದು ಮೈಲಾರಲಿಂಗ ಕ್ಷೇತ್ರವೆಂದು ಹೇಳುತ್ತಾರೆ. ಮಾಚಿದೇವನ ಮೂಲ ಸಮಾಧಿ ದೇವರಹಿಪ್ಪರಗಿಯಲ್ಲಿದೆ ಎಂದು ಕೆಲವರು ಹೇಳುತ್ತಾರೆ. ಆ ದೇವರ ಹಿಪ್ಪರಗಿಯಲ್ಲಿ ಕೂಡ ಒಂದು ‘ಮಲ್ಲಯ್ಯನ ದೇವಸ್ಥಾನ’ವಿರುವುದು ಸೋಜಿಗ. ಮೈಲಾರಲಿಂಗನಿಗೂ-ಮಡಿವಾಳ ಮಾಚಯ್ಯನಿಗೂ ಇರುವ ಸಂಬಂಧದ ಬಗ್ಗೆ ಇನ್ನಷ್ಟು ವಿವರವಾದ ಶೋಧ ನಡೆಯಬೇಕಾದ ಅಗತ್ಯವಿದೆ.
ಸೊಗಲ ಕ್ಷೇತ್ರ
ರಟ್ಟರ ಕಾಲದಲ್ಲಿ ಸೊಗಲ ಒಂದು ಪ್ರಮುಖ ಅಧ್ಯಾತ್ಮ ಕ್ಷೇತ್ರವಾಗಿತ್ತು. ಇಲ್ಲಿ ಸೋಮೇಶ್ವರ ದೇವಸ್ಥಾನ ತುಂಬ ಪ್ರಸಿದ್ಧವಿದೆ. ಈ ಸೊಗಲ ಕ್ಷೇತ್ರದಲ್ಲಿ ಕೂಗು ಬಸವನ ಗುಡಿ ಮತ್ತು ವೀರಭದ್ರದೇವರ ಗುಡಿಗಳಿವೆ. ಈ ಎರಡು ದೇವಸ್ಥಾನಗಳ ಆಧಾರದ ಮೇಲೆ ಇಲ್ಲಿಯೂ ಶರಣರು ಬಂದು ತಂಗಿರಬಹುದೆಂದು ಜನರು ಹೇಳುತ್ತಾರೆ.
ಹೊಸೂರು
ಸೊಗಲದಿಂದ ಎಂಟು ಕಿ.ಮೀ. ಅಂತರದಲ್ಲಿರುವ ಹೊಸೂರು ಗ್ರಾಮದಲ್ಲಿ ಚೆನ್ನಬಸವಣ್ಣನವರ ದೇವಸ್ಥಾನವಿದೆ. ಆ ದೇವಸ್ಥಾನದ ಪಕ್ಕದಲ್ಲಿ ದಾನಮ್ಮ ಎಂಬ ಸ್ಥಳೀಯ ಶರಣೆಯೊಬ್ಬಳ ಗದ್ದುಗೆ ಇದೆ. ಚನ್ನಬಸವಣ್ಣನವರು ಇಲ್ಲಿ ಉಳಿದುಕೊಂಡು ಲಿಂಗಪೂಜೆ ಮಾಡಿಕೊಂಡರೆಂದು ಸ್ಥಳೀಯರು ನಂಬಿದ್ದಾರೆ.
ಇಂಚಲ
ಬೈಲಹೊಂಗಲದಿಂದ ಆರು ಕಿ.ಮೀ. ಅಂತರದಲ್ಲಿರುವ ಇಂಚಲದಲ್ಲಿ ಶರಣ ಬಂಕನಾಥನ ದೇವಸ್ಥಾನವಿದೆ. ದೇವಸ್ಥಾನ ಗಮನಿಸಿದರೆ ಅದೊಂದು ಜೈನರ ಬಸದಿ ಇರಬಹುದು. ದೇವಸ್ಥಾನದ ಹೊರಗೆ ಭಗ್ನಗೊಂಡ ತೀರ್ಥಂಕರ ಮೂರ್ತಿಗಳು ನೋಡಲು ದೊರೆಯುತ್ತವೆ. ದೇವಸ್ಥಾನದ ಪೌಳಿಯಲ್ಲಿ ಒಂದು ಶಾಸನವೂ ಇದೆ. ಜೈನ ಮತ್ತು ಲಿಂಗಾಯತ ಧರ್ಮಗಳ ಸಂಘರ್ಷದ ಚಿತ್ರಣವನ್ನು ಇಲ್ಲಿ ಗಮನಿಸಬಹುದು. ಜೈನ ಬಸದಿಗಳಲ್ಲಿ ಲಿಂಗಪ್ರತಿಷ್ಠೆ ಮಾಡಿದ ಕುರುಹುಗಳನ್ನು ಇಲ್ಲಿ ಗಮನಿಸಬಹುದು. ಇಲ್ಲಿ ಬರುವ ಬಂಕನಾಥ ಯಾರು ಎಂಬ ಪ್ರಶ್ನೆ ಕಾಡುತ್ತದೆ. ಬಂಕನಾಥ ದೇವಸ್ಥಾನದ ಹತ್ತಿರದ ಹೊಲವೊಂದರಲ್ಲಿ ಪ್ರಾಚೀನ ಶಿವದೇವಾಲಯವಿದೆ. ಆ ದೇವಾಲಯದ ಬಗ್ಗೆ ಸ್ಪಷ್ಟವಾದ ಮಾಹಿತಿ ದೊರೆಯಲಿಲ್ಲ.
ಮುರಕಿಭಾವಿ
ನೇಸರಗಿಯಿಂದ ಐದು ಕಿ.ಮಿ. ಅಂತರದಲ್ಲಿರುವ ಮುರಕಿಬಾವಿಯಲ್ಲಿ ಶರಣೆ ನೀಲಮ್ಮನ ದೇವಸ್ಥಾನವಿದೆ. ಶರಣರ ದಂಡಿನೊಂದಿಗೆ ಬಂದ ನೀಲಮ್ಮನನ್ನು ಗಾಯಗೊಂಡ ಕಾರಣವಾಗಿ ಪಲ್ಲಕ್ಕಿಯಲ್ಲಿ ಕರೆದುಕೊಂಡು ಹೋಗುತ್ತಿರುವ ಸಂದರ್ಭದಲ್ಲಿ ಪಲ್ಲಕ್ಕಿ ಮುರಿಯಿತು, ಅದರ ಪಕ್ಕದಲ್ಲಿಯೇ ಒಂದು ಬಾವಿ ಇತ್ತು. ಈ ಕಾರಣಕ್ಕಾಗಿ ಈ ಗ್ರಾಮಕ್ಕೆ ‘ಮುರಕಿಬಾವಿ’ ಎಂಬ ಹೆಸರು ಬಂದಿತೆಂದು ಸ್ಥಳೀಯರು ಹೇಳುವುದನ್ನು ಒಪ್ಪುವುದು ಸ್ವಲ್ಪ ಕಷ್ಟ. ಅಲ್ಲದೆ ಬಸವಣ್ಣನವರ ಧರ್ಮಪತ್ನಿ ನೀಲಮ್ಮ ಸ್ವತಃ ಗಂಡನೇ ಕರೆದರೂ ಕಲ್ಯಾಣ ಬಿಟ್ಟು ಬಂದಿರಲಿಲ್ಲ. ಅಲ್ಲಿರುವ ಲಿಂಗಯ್ಯ ಇಲ್ಲಿಲ್ಲವೆ? ಎಂದು ಪ್ರಶ್ನಿಸಿದಳು. ಅವಳು ಶರಣರ ದಂಡಿನೊಂದಿಗೆ ಬಂದಳೆಂಬುದು ನಂಬುವುದು ಸ್ವಲ್ಪ ಕಷ್ಟ. ಆದರೆ ನೀಲಮ್ಮ ಎಂಬ ಬೇರೊಬ್ಬ ಶರಣೆ ಇದ್ದಿರುವ ಸಾಧ್ಯತೆಯೂ ಇದೆ. ನಾಲ್ಕು ದಶಕಗಳ ಹಿಂದೆ ನಾಗನೂರು ರುದ್ರಾಕ್ಷಿಮಠದ ಪೂಜ್ಯ ಶ್ರೀ ಶಿವಬಸವ ಮಹಾಸ್ವಾಮಿಗಳವರು ಮೊದಲ ಬಾರಿಗೆ ನೀಲಮ್ಮನ ಸ್ಮಾರಕ ಉಳಿಯಲಿ ಎಂದು ದೇವಸ್ಥಾನ ಕಟ್ಟಿಸಿದ್ದರು. ಇತ್ತೀಚೆಗೆ ಊರಿನ ಜನ ಈ ದೇವಸ್ಥಾನವನ್ನು ನವೀಕರಣ ಮಾಡಿದ್ದಾರೆ. ಆದರೆ ಶರಣರು ಬಳಸಿದ ಬಾವಿ ಎಂದು ಹೇಳುವ ಪ್ರಾಚೀನ ಬಾವಿ ಇಂದು ನೀರಿಲ್ಲದೆ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಈ ನೀಲಮ್ಮನ ದೇವಸ್ಥಾನದ ಪಕ್ಕದಲ್ಲಿ ಇತ್ತೀಚಿನ ಇಬ್ಬರು ಅವಧೂತರ ಗದ್ದುಗೆಗಳನ್ನು ನಿರ್ಮಾಣ ಮಾಡಿದ್ದು ಯಾವ ಕಾರಣಕ್ಕೆಂದು ತಿಳಿಯದು.
ಸಂಪಗಾವಿ-ಕಲ್ಲೂರ
ಸಂಪಗಾವಿ ಮತ್ತು ಕಲ್ಲೂರ ಗ್ರಾಮಗಳಲ್ಲಿ ಬಯಲ ಬಸವೇಶ್ವರ ದೇವಸ್ಥಾನಗಳಿವೆ. ಸಂಪಗಾವಿಯಲ್ಲಿರುವ ಬಯಲಬಸವೇಶ್ವರ ದೇವಸ್ಥಾನ ನವೀಕರಣಗೊಂಡಿದೆ. ಇಲ್ಲಿ ಮದುವೆ ಮೊದಲಾದ ಮಂಗಲ ಕಾರ್ಯಗಳು ಜರುಗುತ್ತವೆ. ಕಲ್ಲೂರ ಗ್ರಾಮದ ಹೊರವಲಯದಲ್ಲಿ ಬಸವೇಶ್ವರ ದೇವಸ್ಥಾನವಿದೆ. ಈ ಗ್ರಾಮದಲ್ಲಿ ಕಲ್ಯಾಣಮ್ಮನ ದೇವಸ್ಥಾನವೂ ಒಂದಿದೆ.
ತಿಗಡಿ
ತಿಗಡಿ ಗ್ರಾಮದಲ್ಲಿ ಮೂರು ಗುಡಿಗಳಿದ ಕಾರಣಕ್ಕಾಗಿ ‘ತ್ರಿಗುಡಿ’ ಎಂಬ ಪ್ರಾಚೀನ ಹೆಸರೇ ತಿಗಡಿಯಾಗಿದೆ ಎಂದು ಸ್ಥಳನಾಮ ಹೇಳುತ್ತಾರೆ. ಇಲ್ಲಿ ಚೆನ್ನಬಸವೇಶ್ವರ ದೇವಸ್ಥಾನ ಮತ್ತು ಕಲ್ಯಾಣಮ್ಮನ ದೇವಸ್ಥಾನಗಳಿವೆ. ಹರಳಯ್ಯನ ಹೆಂಡತಿ ಕಲ್ಯಾಣಮ್ಮ ಇಲ್ಲಿಯೇ ಲಿಂಗೈಕ್ಯಳಾದಳೆಂದು ಇಲ್ಲಿನ ಜನ ಭಾವಿಸಿದ್ದಾರೆ. ಆದರೆ ಬಿಜ್ಜಳನ ಎಳೆಹೂಟೆ ಶಿಕ್ಷೆಗೆ ಬಲಿಯಾದ ಮೊದಲ ವ್ಯಕ್ತಿಗಳೇ ಹರಳಯ್ಯ ಮತ್ತು ಕಲ್ಯಾಣಮ್ಮ. ಹೀಗಿರುವಾಗ ಕಲ್ಯಾಣಮ್ಮ ಇಲ್ಲಿಯವರೆಗೆ ಹೇಗೆ ಬಂದಳೆಂಬುದು ಶೋಧನೆಯ ವಿಷಯವಾಗಿದೆ. ಅಥವಾ ಕಲ್ಯಾಣಮ್ಮ ಎಂಬ ಬೇರೆ ಹೆಸರಿನ ಶರಣೆ ಇದ್ದರೂ ಇರಬಹುದು.
ಮರಡಿ ನಾಗಲಾಪುರ
ಇಲ್ಲಿ ಚೆನ್ನಬಸವಣ್ಣನವರ ತಾಯಿ ಅಕ್ಕನಾಗಮ್ಮನ ದೇವಸ್ಥಾನವಿದೆ. ನಾಗಮ್ಮನ ಹೆಸರಿನ ಕಾರಣವಾಗಿಯೇ ಈ ಗ್ರಾಮಕ್ಕೆ ‘ನಾಗಲಾಪುರ’ ಎಂಬ ಹೆಸರು ಬಂದಿದೆ. ಇತ್ತೀಚೆಗೆ ನಾಗಮ್ಮನ ದೇವಸ್ಥಾನ ತುಂಬ ಚೆನ್ನಾಗಿ ನವೀಕರಣಗೊಂಡಿದೆ. ನಾಗಮ್ಮನ ಸಮಾಧಿ ಇಲ್ಲಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ. ಆದರೆ ತರೀಕೆರೆ ಸಮೀಪದ ಎಣ್ಣೆಹೊಳೆಯಲ್ಲಿಯೂ ಅವರ ಸಮಾಧಿ ಇದೆ ಎಂದು ಅಲ್ಲಿನ ಜನ ಹೇಳುತ್ತಾರೆ. ಆದರೆ ಒಂದು ವಿಷಯ ಅಕ್ಕನಾಗಮ್ಮನಷ್ಟು ಸುದೀರ್ಘ ಪ್ರಯಾಣ ಮಾಡಿದ ಮತ್ತೊಬ್ಬ ಶರಣೆ ಇಲ್ಲ. ಅವಳ ಧೈರ್ಯ ಮೆಚ್ಚಲೇಬೇಕು. ಶರಣರ ದಂಡನ್ನು ವಚನ ಕಟ್ಟುಗಳೊಂದಿಗೆ ಮುನ್ನಡೆಸಿದ ಧೀಮಂತಿಕೆ ಅಕ್ಕನಾಗಮ್ಮನದು.
ಎಂ.ಕೆ.ಹುಬ್ಬಳ್ಳಿ
ರಾಷ್ಟ್ರೀಯ ಹೆದ್ದಾರಿಗೆ ಹತ್ತಿಕೊಂಡಿರುವ ಎಂ.ಕೆ.ಹುಬ್ಬಳ್ಳಿಯ ಹೊರವಲಯದ ಮಲಪ್ರಭಾ ನದಿಯಲ್ಲಿ ಬಸವಣ್ಣನವರ ಧರ್ಮಪತ್ನಿ ಗಂಗಾಂಬಿಕೆಯ ಸಮಾಧಿ ಇದೆ. ಕಾದರವಳ್ಳಿಯಲ್ಲಿ ಯುದ್ಧ ನಡೆದ ಸಂದರ್ಭದಲ್ಲಿ ಗಾಯಗೊಂಡ ಗಂಗಾಂಬಿಕೆ ಇಲ್ಲಿ ಲಿಂಗೈಕ್ಯಳಾದಳೆಂಬ ಪ್ರತೀತಿ ಇದೆ. ಬಿ.ಎಸ್.ಯಡಿಯೂರಪ್ಪನವರ ಇಚ್ಛಾಶಕ್ತಿ ಕಾರಣವಾಗಿ ಗಂಗಾಂಬಿಕೆ ಮುಕ್ತಿಕ್ಷೇತ್ರ ಕೂಡಲಸಂಗಮದ ಮಾದರಿಯಲ್ಲಿ ನವೀಕರಣಗೊಂಡಿದೆ.
ಕಾದರವಳ್ಳಿ
ಎಂ.ಕೆ. ಹುಬ್ಬಳ್ಳಿಯಿಂದ ಐದಾರು ಕಿ.ಮಿ. ಅಂತರದಲ್ಲಿರುವ ಕಾದರವಳ್ಳಿ ಗ್ರಾಮದಲ್ಲಿ ಶರಣರು ಯುದ್ಧಮಾಡಿದರು ಎಂದು ಹೇಳಲಾಗುತ್ತಿದೆ. ಶಾಂತಿಪ್ರಿಯರಾದ ಶರಣರು ಯುದ್ಧಾಕಾಂಕ್ಷಿಗಳಾಗಿರಲಿಲ್ಲ. ಆದರೆ ಬಿಜ್ಜಳನ ಸೈನಿಕರಿಗೂ, ಗೋವೆಯ ಕದಂಬ ರಾಜ್ಯದ ಸೈನಿಕರಿಗೂ ಇಲ್ಲಿ ಕಾದಾಟ ಆಗಿರಬಹುದು. ಕಾದು ಆಡಿದ ಕಾರಣಕ್ಕಾಗಿ ಈ ಗ್ರಾಮಕ್ಕೆ ‘ಕಾದರವಳ್ಳಿ’ ಎಂಬ ಹೆಸರು ಬಂದಿದೆ ಎಂದು ಕೆಲವು ವಿದ್ವಾಂಸರು ಹೇಳುತ್ತಾರೆ. ಈ ಗ್ರಾಮದಲ್ಲಿ ರಾಮಲಿಂಗೇಶ್ವರ ದೇವಸ್ಥಾನವಿದೆ. ಇಲ್ಲಿಯ ಹೊಲವೊಂದರಲ್ಲಿ ಯುದ್ಧವಾಯಿತೆಂದು ಜನರು ಎಂಟು ಎಕರೆ ವಿಸ್ತಾರದ ಒಂದು ಹೊಲವನ್ನು ತೋರಿಸುತ್ತಾರೆ. ಇಲ್ಲಿ ಜನಿಸಿದ ಅದೃಶ್ಯ ಶಿವಯೋಗಿಗಳನ್ನು ಜನರು ಚೆನ್ನಬಸವಣ್ಣನವರ ಅವತಾರವೆಂದು ನಂಬುತ್ತಾರೆ.
ಹುಣಸಿಕಟ್ಟಿ
ಕಾದರವಳ್ಳಿಯಿಂದ ಮೂರು ಕಿ.ಮಿ. ಅಂತರದಲ್ಲಿರುವ ಹುಣಸಿಕಟ್ಟಿ ಗ್ರಾಮದಲ್ಲಿ ರುದ್ರಮುನಿ ದೇವಸ್ಥಾನವಿದೆ. ಇದು ರೇವಣಸಿದ್ಧನ ಮಗನಾದ ರುದ್ರಮುನಿಯ ದೇವಸ್ಥಾನವೆಂದು ಇಲ್ಲಿನ ಪೂಜಾರಿಗಳು ಹೇಳುತ್ತಾರೆ. ಆದರೆ ಸ್ಥಳೀಯ ಕೆಲವರ ಪ್ರಕಾರ ಎರಡು ನೂರು ವರ್ಷಗಳ ಹಿಂದೆ ರುದ್ರಮುನಿ ಎಂಬ ಯೋಗಿಗಳೊಬ್ಬರು ಇದ್ದರು. ಅವರ ದೇವಸ್ಥಾನವಿದು ಎಂದು ಹೇಳುತ್ತಾರೆ. ಆದರೆ ದೇವಸ್ಥಾನದ ಶಿಲ್ಪವನ್ನು ಗಮನಿಸಿದರೆ ಹನ್ನೆರಡನೆಯ ಶತಮಾನದ ರುದ್ರಮನಿಯ ಸ್ಮಾರಕವೆಂದು ತೋರುತ್ತದೆ. ಪ್ರಾಚ್ಯವಿಭಾಗದ ವಿದ್ವಾಂಸರಿಂದ ಈ ದೇವಸ್ಥಾನದ ಕಟ್ಟಡವನ್ನು ಪರಿಶೀಲಿಸಿದರೆ ಇದನ್ನು ಸ್ಪಷ್ಟಪಡಿಸಬಹುದು.
ಚಿಕ್ಕನಂದಿಹಳ್ಳಿ
ಕಿತ್ತೂರಿನಿಂದ ಆರು ಕಿ.ಮೀ. ಅಂತರದಲ್ಲಿರುವ ಈ ಗ್ರಾಮದಲ್ಲಿ ಬಸವೇಶ್ವರ ದೇವಸ್ಥಾನವಿದೆ. ಈ ದೇವಸ್ಥಾನದ ವಿಶೇಷವೆಂದರೆ ಲಿಂಗ ಅತ್ಯಂತ ಚಿಕ್ಕದಾಗಿದ್ದು, ನಂದಿ ಮೂರ್ತಿ ಬೃಹದಾಕಾರವಿದೆ. ಬಸವಣ್ಣನವರನ್ನು ನಂದಿಯ ಅವತಾರವೆಂದು ಜನಪದರು ಭಾವಿಸಿದ ಕಾರಣವಾಗಿ ಲೋಕಾರೂಢಿಯಾಗಿ ಬಸವೇಶ್ವರ ದೇವಸ್ಥಾನವೆಂದರೂ ಒಳಗೆ ನಂದಿಯ ಮೂರ್ತಿ ಇದೆ. ಈ ಗ್ರಾಮದಿಂದ ಒಂದು ಕಿ.ಮೀ. ಅಂತರದಲ್ಲಿ ಒಂದು ತೊರೆ ಇದೆ. ಪ್ರಶಾಂತವಾದ ಈ ತೊರೆಯಲ್ಲಿ ಶರಣರು-ಬಸವಣ್ಣನವರು ಲಿಂಗಪೂಜೆ ಮಾಡಿಕೊಂಡರೆಂಬ ಪ್ರತೀತಿ ಇದೆ. ಇಂದಿಗೂ ಈ ಸ್ಥಳ ಅತ್ಯಂತ ಪ್ರಶಾಂತಮಯವಾಗಿದೆ.
ಬೈಲೂರು-ಬಸರಕೋಡ
ಬೈಲೂರಿನಲ್ಲಿ ಚನ್ನಬಸವೇಶ್ವರ ದೇವಸ್ಥಾನವಿದೆ. ಬಸರಕೋಡ ಗ್ರಾಮದಲ್ಲಿ ಕೂಗುಬಸವನ ದೇವಸ್ಥಾನವಿದೆ. ಇತ್ತೀಚೆಗೆ ಈ ದೇವಸ್ಥಾನಗಳು ನವೀಕರಣಗೊಂಡಿವೆ.
ಕಕ್ಕೇರಿ
ಖಾನಾಪೂರ ತಾಲೂಕಿನ ಕಕ್ಕೇರಿಯಲ್ಲಿ ಡೋಹರ ಕಕ್ಕಯ್ಯನವರ ಸಮಾಧಿಯಿದೆ. ಕಕ್ಕಯ್ಯನ ಪತ್ನಿ ಭಿಷ್ಟಾದೇವಿಯ ದೇವಸ್ಥಾನವೂ ಇದೆ. ಇದು ಈಗ ಗ್ರಾಮದೇವತೆಯಾಗಿ ಪರಿವರ್ತನೆಯಾಗಿದೆ. ಈ ದೇವತೆಯ ಜಾತ್ರಾ ನಿಮಿತ್ಯ ನೂರಾರು ಕುರಿಗಳನ್ನು ಬಲಿಕೊಡುತ್ತಿರುವುದು ಶರಣತತ್ವಕ್ಕೆ ವಿರುದ್ಧವಾದ ಕ್ರಿಯೆಯಾಗಿದೆ. ಇನ್ನೂ ದುರಂತವೆಂದರೆ ಅಲ್ಲಿಯ ದೇವಸ್ಥಾನ ಕಮೀಟಿಯವರು ಈ ದೇವಸ್ಥಾನದ ಒಂದು ಭಾವಚಿತ್ರವನ್ನು ತೆಗೆಯಲು ನಮಗೆ ಅನುಮಿತಿ ನೀಡಲಿಲ್ಲ. ದೇವಿ ಭಯಂಕರ ಕಾಡುತ್ತಾಳೆ ಎಂದು ಮೂಢನಂಬಿಕೆಯನ್ನು ಹೇಳಿ ಫೋಟೋ ತೆಗೆಯಲು ಅವಕಾಶ ಕೊಡಲಿಲ್ಲ. ಇಂಥ ಮೂಢ ಭಕ್ತರ ಕಾರಣವಾಗಿಯೇ ಶರಣರ ಸ್ಮಾರಕಗಳು ಹೀಗೆ ನಿರ್ಲಕ್ಷ್ಯಕ್ಕೆ ಒಳಗಾಗಿವೆ.
ಇತರ ಕ್ಷೇತ್ರಗಳು
ಇವಲ್ಲದೆ ಮೂಗಬಸವ ಗ್ರಾಮದಲ್ಲಿ ಶರಣರ ಕುರುಹುಗಳಿವೆ ಎಂದು ಹೇಳಲಾಗುತ್ತಿದೆ. ತುರಮರಿ ಗ್ರಾಮದಲ್ಲಿ ಚೆನ್ನಬಸವೇಶ್ವರನು ತಂಗಿದನೆಂದು ಹೇಳುವ ದಿನ್ನೆ, ಗುಡಿ ಇವೆ. ಕಿತ್ತೂರು ಸಮೀಪ ‘ರಣಗಟ್ಟಿ’ ಎಂಬ ಹೆಸರು ಯುದ್ಧದ್ಯೋತಕವೆಂದು ಜನಗಳ ನಂಬಿಕೆ. ಲಿಂಗನಮಠದಲ್ಲಿಯೂ ಶರಣರ ಕುರುಹುಗಳಿವೆ. ಹೀಗೆ ಬೆಳಗಾವಿ ಜಿಲ್ಲೆ ದಾಟಿ ಜಂಗಮಟ್ಟಿ, ಜಗಳಬೆಟ್ಟ, ಸಾಂಬ್ರಾಣಿ ಮೈಲಯಗೈಲ್ಲಾಪುರ ಮಾರ್ಗವಾಗಿ ಉಳವಿ ತಲುಪಿದರು ಎಂದು ವಿದ್ವಾಂಸರು ಹೇಳುತ್ತಾರೆ. ಇನ್ನೊಂದು ತಂಡ ಧಾರವಾಡ, ಹಾವೇರಿ ರಾಣೇಬೆನ್ನೂರತನಕ ಹೋಗಿ ಅಲ್ಲಿಂದ ಸತ್ತೂರು ಮಾರ್ಗವಾಗಿ ಉಳವಿ ತಲುಪಿತೆಂದು ಕೆಲವರು ಹೇಳುತ್ತಾರೆ.
ಉಳವಿ ತಲುಪಿದ ನಂತರ ಅಲ್ಲಿನ ತಂಪು ನೀರಿನ ಕಾರಣವಾಗಿ ಚೆನ್ನಬಸವಣ್ಣನವರು ಕೆಲವೇ ದಿನಗಳಲ್ಲಿ ವಿಷಮಶೀತ ಜ್ವರದಿಂದ ಬಳಲಿ ಲಿಂಗೈಕ್ಯರಾದರು. ಇಲ್ಲಿಗೆ ಶರಣರ ಹೋರಾಟ ಒಂದು ಅಂತಿಮ ಘಟ್ಟ ತಲುಪಿತು. ಹೀಗೆ ಬೆಳಗಾವಿ ಜಿಲ್ಲೆಯ ಅನೇಕ ಗ್ರಾಮಗಳು ಶರಣರ ಹೆಜ್ಜೆಗುರುತುಗಳನ್ನು ಇಂದಿಗೂ ಕಾಪಾಡಿಕೊಂಡು ಬಂದಿವೆ.
ಆಧುನಿಕ ಯುಗ
ಬೆಳಗಾವಿ ಜಿಲ್ಲೆಯಲ್ಲಿ ಶರಣರ ವಾರಸುದಾರಿಕೆಯನ್ನು ಮುಂದುವರಿಸುವ ಆಧುನಿಕ ಶರಣ ಪರಂಪರೆ ಇಂದಿಗೂ ಬೆಳಗುತ್ತ ಬಂದಿರುವುದು ಅಭಿಮಾನದ ಹೆಮ್ಮೆಯ ಸಂಗತಿಯಾಗಿದೆ. ೧೬ನೇ ಶತಮಾನದಲ್ಲಿ ತೋಂಟದ ಸಿದ್ಧಲಿಂಗೇಶ್ವರ ನೇತೃತ್ವದಲ್ಲಿ ವಿರಕ್ತರ ಗುಂಪು ಐದು ವಿಭಾಗವಾದವು. ಮುರುಘಾ ಸಮಯ, ಚೀಲಾಳ ಸಮಯ, ಕೆಂಪಿನ ಸಮಯ, ಕುಮಾರ ಸಮಯ, ಮತ್ತು ಸಂಪಾದನಾ ಸಮಯ ಎಂದು ಐದು ಭಾಗಗಳಲ್ಲಿ ಕವಲೊಡೆದವು. ಬೆಳಗಾವಿ ಜಿಲ್ಲೆಯ ವಂಟಮುರಿಯಲ್ಲಿ ಸಂಪಾದನಾ ಮಠವೊಂದು ಪ್ರಸಿದ್ಧವಾಗಿತ್ತು. ಇದೇ ಸಂಪಾದನ ಸಮಯದ ಮೂಲವೆಂದು ಕೆಲವು ವಿದ್ವಾಂಸರು ಗುರುತಿಸುತ್ತಾರೆ. ಚಿಕ್ಕೋಡಿ ಸಂಪಾದನಾ ಮಠ, ಗೋಕಾಕದ ಶೂನ್ಯಸಂಪಾದನಾ ಮಠಗಳು ಇದಕ್ಕೆ ಇನ್ನಷ್ಟು ಪುಷ್ಟಿಯನ್ನೊದಗಿಸುತ್ತವೆ.
ನಿಡಸೋಸಿ-ಅರಭಾವಿ ದುರದುಂಡೀಶ್ವರರು, ಅಥಣಿ ಶಿವಯೋಗಿಗಳು, ನಾಗನೂರು ರುದ್ರಾಕ್ಷಿಮಠದ ಪೂಜ್ಯ ಡಾ. ಶಿವಬಸವ ಶಿವಯೋಗಿಗಳು ಮೊದಲಾದ ಅನೇಕ ಯೋಗಿಗಳು-ಅನುಭಾವಿಗಳು ಈ ಶರಣಪರಂಪರೆಯನ್ನು ಮುನ್ನಡೆಸಿಕೊಂಡು ಬಂದಿದ್ದಾರೆ.