ಗುಳೇದಗುಡ್ಡ
ಪ್ರತಿ ಶನಿವಾರ ಜರುಗುವ ‘ಮನೆಯಲ್ಲಿ ಮಹಾಮನೆ’ ಸಾಪ್ತಾಹಿಕ ಕಾರ್ಯಕ್ರಮವು ಬಸವ ಕೇಂದ್ರದ ವತಿಯಿಂದ ಜನವರಿ ನಾಲ್ಕರ ಸಂಜೆ ಶ್ರೀ ನೀಲಕಂಠೇಶ್ವರ ಮಠದಲ್ಲಿ ಜರುಗಿತು.
ಅಂದು ಅವಿರಳ ಜ್ಞಾನಿ ಚೆನ್ನಬಸವ ತಂದೆಗಳ ವಚನ –
“ಸತ್ಯವಿಲ್ಲದ ಭಕ್ತಿಯ ಸಾವಿರ ವರುಷ ಮಾಡಿದರೇನು?
ನಿಷ್ಠೆಯಿಲ್ಲದ ಪೂಜೆಯನೇಸುಕಾಲ ಮಾಡಿದರೇನು?
ಭಾವ ನೆಲೆಗೊಳ್ಳದ ಪ್ರಸಾದವನೇಸುಕಾಲ ಕೊಂಡಲ್ಲಿ ಫಲವೇನು?
ಅಭ್ಯಾಸವಾಯಿತ್ತಲ್ಲದೆ,
ಒಬ್ಬರೊಬ್ಬರ ಕಂಡು ಮಾಡುವರಲ್ಲದೆ, ಸಹಜವಿಲ್ಲ, ಸಮ್ಯಕ್ಕಿಲ್ಲ, ನಿಜವಿಲ್ಲ.
ಇದು ಕಾರಣ, ಇಂತಪ್ಪವರ ಭಕ್ತರೆಂದೆನಲಾಗದು,
ಕೂಡಲಚೆನ್ನಸಂಗಯ್ಯಾ ನೀ ಸಾಕ್ಷಿಯಾಗಿ ಛೀಯೆಂಬೆನು.”
ಎಂಬ ವಚನದ ಮೇಲೆ ಅನುಭಾವ ನಡೆಯಿತು.

ಪ್ರತಿ ಸಾಪ್ತಾಹಿಕ ಮಹಾಮನೆಯ ಕಾರ್ಯಕ್ರಮದಂತೆ ಪ್ರಾರಂಭದಲ್ಲಿ ಶರಣೆ ದಾನಮ್ಮ ಕುಂದರಗಿ, ಜಯಕ್ಕ ಬರಗುಂಡಿ ಹಾಗೂ ಸಂಗಡಿಗರಿಂದ ಸಾಮೂಹಿಕ ಪ್ರಾರ್ಥನೆಯ ನಂತರ ಪ್ರೊ. ಶ್ರೀಕಾಂತ ಗಡೇದವರು ಸಂಕ್ಷಿಪ್ತವಾಗಿ ವಚನಕಾರರಾದ ಚೆನ್ನಬಸವ ತಂದೆಗಳ ಬಗ್ಗೆ ತಿಳಿಸುತ್ತಾ ಅನುಭಾವ ಪ್ರಾರಂಭಿಸಿದರು.
ಚೆನ್ನಬಸವಣ್ಣ ಅವರು ಶರಣರಿಗೆ ಅರಿವಿನ ನಿಧಿಯಾಗಿದ್ದರು. ಭಕ್ತಿಗೆ ಸತ್ಯವೇ ಆಧಾರ. ಭಕ್ತನಾದವನು ಪಂಚ ಆಚಾರಗಳನ್ನು ಅಳವಡಿಸಿಕೊಳ್ಳಬೇಕು. ಬದುಕಿನ ಆಚಾರವನ್ನು ಅರಿವಿನಿಂದ ಭಕ್ತನಾದವನು ಮಾಡಬೇಕೆಂದು ತಮ್ಮ ಚಿಂತನೆಯಲ್ಲಿ ತಿಳಿಸಿದರು.
ಚಿಂತನೆ ಮುಂದುವರೆದು ಶರಣ ಮಹಾಂತೇಶ ಸಿಂದಗಿ ಮಾತನಾಡುತ್ತಾ, ವಚನಗಳು ಕೇವಲ ಓದಿನ ಬರಹವಲ್ಲ, ಅವು ನಡೆ ನುಡಿಗಳ ಆಕರಗಳು. ಭಕ್ತಿಗೆ ನಿಷ್ಠೆಯೇ ತಳಹದಿ. ಲಿಂಗಾಯತರು ಪೂಜಕರಲ್ಲ. ಶಿವಯೋಗದ ಮಹತ್ವವನ್ನು ತಿಳಿಸುತ್ತ, ಶಿವಯೋಗದಿಂದ, ಸತ್ಯದ ಅರಿವಿನಿಂದ ಆಚರಣೆಗೈದರೆ ಅಂಗ ಲಿಂಗವಾಗುತ್ತದೆ.

ಶಿವ ನಮ್ಮಲ್ಲಿಯೇ ಇದ್ದಾನೆ, ನಾವು ಆ ಪರವಸ್ತುವಿನ ಅಂಶವೇ. ಅದನ್ನು ನಾವು ಕಂಡುಕೊಳ್ಳಬೇಕು ಇಲ್ಲದಿದ್ದರೆ ಅಗಸ ನೀರೊಳಗಡೆ ಇದ್ದರೂ ಬಾಯರಿಕೆಯಾಗಿ ಸತ್ತಂತೆ ಆಗುತ್ತದೆ ನಮ್ಮ ಬದುಕು. ಭಾವದಲ್ಲಿ ಶಿವಭಾವ ಇಲ್ಲದಿದ್ದರೆ ಪದಾರ್ಥ ಪ್ರಸಾದವಾಗಲಾರದು. ಹಿರಿಯರ ಸಂಪ್ರದಾಯದ ಆಚರಣೆಗಳು ಸತ್ಯದ ಅರಿವಿಲ್ಲದೆ ಮಾಡಬಾರದು ಎಂದು ತಮ್ಮ ಅನುಭಾವದಲ್ಲಿ ಹೇಳಿದರು.
ಪ್ರೊ. ಸುರೇಶ ತಿ. ರಾಜನಾಳ ಅವರು ಚಿಂತನೆಗೈಯುತ್ತ, ಭಕ್ತಿಯ ಫಲ ದೊರೆಯಬೇಕಾದರೆ, ಭಕ್ತಿ ಸತ್ಯ ಶುದ್ಧವಾಗಿರಬೇಕು. ದಾಸಿಮಯ್ಯನವರ “ನಿಷ್ಠೆಯಿಲ್ಲದ ಭಕ್ತ…” ಎಂಬ ವಚನವನ್ನು ಉಲ್ಲೇಖಿಸುತ್ತಾ ಭಕ್ತನ ಬದುಕು ನಡೆ ನುಡಿ, ನುಡಿ ನಡೆಯಾಗಿರಬೇಕು ಎಂದು ತಿಳಿಸಿದರು.
ಗೋಷ್ಠಿಯ ಸಮಾರೋಪದಂತೆ ಪ್ರೊ. ಮಹಾದೇವಯ್ಯ ಪ. ನೀಲಕಂಠಮಠ ಅವರು ವಚನವನ್ನು ಮತ್ತೊಮ್ಮೆ ವಾಚಿಸುತ್ತ ಭಕ್ತನ ಬದುಕಿಗೆ ಷಟ್ ಸ್ಥಲಗಳು ಮಾರ್ಗದರ್ಶಕವಾಗಿವೆ. ಆರು ವಿಧದ ಭಕ್ತಿಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು. ಶ್ರದ್ಧಾ ಭಕ್ತಿಯಿಂದ ನಿಷ್ಠೆ ಬಲಗೊಳ್ಳುತ್ತಾ ಹೋಗುತ್ತ ಸಮರಸ ಭಕ್ತಿ ಆಗುತ್ತದೆ. ದ್ವೈತ ಭಾವದ ಪೂಜೆ ಅಳಿಯಬೇಕು. ನಮ್ಮ ಭಕ್ತಿಯ ಆಚರಣೆಗಳು ಸತ್ಯದ ಅರಿವಿಲ್ಲದೆ ಕೂಡಿರುವವು. ನಮ್ಮಲ್ಲಿ ಧಾರ್ಮಿಕ ಅಧ್ಯಯನ ಬಹಳ ಕಡಿಮೆ ಅಗಿವೆ.

ವರ್ಣಾಶ್ರಮ ಸಾಮಾಜಿಕ ವ್ಯವಸ್ಥೆಯಲ್ಲಿ ಒಂದು ವರ್ಗದವರಿಗೆ ಜ್ಞಾನದ ಅವಕಾಶ ಕಲ್ಪಿಸಿದ್ದಿಲ್ಲ. ಆದರೆ ಇಂದು ಎಲ್ಲರಿಗೂ ಅವಕಾಶ ಇದೆ. ಆದರೂ ನಾವು ಅದನ್ನು ಸದುಪಯೋಗಿಸುತ್ತಿಲ್ಲ. ಹೀಗಾಗಿ ಐತಿಹಾಸಿಕ ಧಾರ್ಮಿಕ ಸತ್ಯಾಸತ್ಯೆಗಳನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿಲ್ಲ. ಹಾಗಾಗಿ ಭಕ್ತಿಯಲ್ಲಿ ಸಹಜ, ಸಮ್ಯಕ್ಕ, ಮತ್ತು ನಿಜವಿಲ್ಲದ್ದಾಗಿದೆ.
ಭಕ್ತಿಯನ್ನು ಕೇವಲ ಒಬ್ಬರೊಬ್ಬರ ಕಂಡು ಮಾಡುವಂತಾಗಿದೆ. ಅದು ಅಭ್ಯಾಸ ಮಾಡಿದಂತೆ ಅಷ್ಟೇ. ಅದಕ್ಕೆ ನಮ್ಮ ಶ್ರಮದ ಫಲ, ಬದುಕಿನ ಸಮಯ ವ್ಯರ್ಥವಾಗಿ ಹೋಗುತ್ತದೆ. ಸತ್ಯದ ಅರಿವು ಇಲ್ಲದೆ ಆಚರಣೆ ಮಾಡುವವರನ್ನು ಭಕ್ತಾರೆಂದೆನಲಾಗದು. ಅಂಥವರನ್ನು ದೇವನ ಸಾಕ್ಷಿಯಾಗಿ ಒಪ್ಪುವುದಿಲ್ಲ ಎಂದು ಹೇಳಿದರು.
ವಚನ ಪ್ರಾರ್ಥನೆ, ಧರ್ಮ ಗುರು ಬಸವ ಸ್ಮರಣೆಯೊಂದಿಗೆ ಪ್ರಾರಂಭವಾದ ಮಹಾಮನೆಯ ಚಿಂತನಾ ಗೋಷ್ಠಿಯು ಸಾಮೂಹಿಕ ವಚನಗಳನ್ನು ಹೇಳುವುದರ ಮೂಲಕ ಸಂಪನ್ನಗೊಂಡಿತು.

ಗೋಷ್ಠಿಯಲ್ಲಿ ಮಹಾಮನೆಯ ಒಡೆಯರಾಗಿರುವ ಶ್ರೀ ನೀಲಕಂಠಮಠದ ಭಕ್ತರು, ಪರಿವಾರದವರು, ನೆರೆಹೊರೆಯವರು, ಕುರುಹಿನಶೆಟ್ಟಿ ಸಮಾಜ ಬಾಂಧವರು, ಗುಳೇದಗುಡ್ಡ ಬಸವಕೇಂದ್ರದ ರಾಚಣ್ಣ ಕೆರೂರ ದಂಪತಿಗಳು, ಪ್ರೊ. ಬಸಲಿಂಗಯ್ಯ ಕಂಬಾಳಿಮಠ, ಪ್ರೊ. ಶ್ರೀಕಾಂತ ಗಡೇದ, ಪುತ್ರಪ್ಪ ಬೀಳಗಿ, ದಾನಪ್ಪ ಬಂಡಿ, ಮಹಾಲಿಂಗಪ್ಪ ಕರನಂದಿ, ಡಾ. ಗಿರೀಶ ನೀಲಕಂಠಮಠ, ಪಾಂಡಪ್ಪ ಕಳಸಾ, ಸುರೇಶ ರಾಜನಾಳ, ಕಂಠಿ ಹಿರಿಯರು, ಮಂಜುನಾಥ ನಾಯನೇಗಲಿ, ಸಿದ್ದಯ್ಯ ಎಂ. ರೇವಣಸಿದ್ದೇಶ್ವರಮಠ ಮತ್ತು ಶರಣೆಯರಾದ ದಾಕ್ಷಾಯಣಿ ತೆಗ್ಗಿ, ನಿರ್ಮಲಾ ಬರಗುಂಡಿ, ಪ್ರೊ. ಗಾಯತ್ರೀ ಕಲ್ಯಾಣಿ, ಶ್ರೀದೇವಿ ಮು. ಶೇಖಾ, ಜಯಶ್ರೀ ಬರಗುಂಡಿ, ವಿಶಾಲಾಕ್ಷಿ ಗಾಳಿ, ಸುರೇಖಾ ಗೆದ್ದಲಮರಿ ಹಾಗೂ ಇನ್ನಿತರರು ಹಾಗೂ ಪಟ್ಟಣದ ಹೊರವಲಯದ ಬಸವ ಕೇಂದ್ರದ ಸದಸ್ಯರು google meet ಮೂಲಕ ಭಾಗವಹಿಸಿ ಕಾರ್ಯಕ್ರಮವನ್ನು ಯಶ್ವಿಸಿಗೊಳಿಸಿದರು.