[ನಿನ್ನೆ ಕರಣ ಹಸಿಗೆ ಕುರಿತಾಗಿ ಬರೆದ ಬರಹವನ್ನು ಬಹಳಷ್ಟು ಜನ ಆಸ್ಥೆಯಿಂದ ಓದಿ, ಇದನ್ನು ಇನ್ನಷ್ಟು ಸರಳವಾಗಿ ನಿರೂಪಿಸಲು ಸಾಧ್ಯವೆ? ಎಂದು ಕೇಳಿದರು. ಈ ವಿಷಯವಾಗಿ ವಿವರಣೆ ನೀಡುತ್ತ ಹೋದರೆ, ಅದೇ ಒಂದು ಹೊತ್ತಿಗೆಯಾಗುತ್ತದೆ. ಹೀಗಿದ್ದೂ ಚನ್ನಬಸವಣ್ಣನವರು ನಿರೂಪಿಸಿದ ಶರೀರ ರಚನ ಶಾಸ್ತ್ರವನ್ನು ಇನ್ನಷ್ಟು ಸರಳವಾಗಿ ಇಲ್ಲಿ ವಿವರಿಸುವ ಪ್ರಯತ್ನ ಮಾಡಿರುವೆ]
‘ದೋಷಧಾತು ಮಲ ಮೂಲಂ ಶರೀರಂ’ ಎಂದು ಶುಶ್ರುತರು ಹೇಳುತ್ತಾರೆ. ಯಾವುದಕ್ಕೆ ಶರೀರ ಎಂದು ವಿಜ್ಞಾನ ಹೇಳುತ್ತದೆ ಎಂದರೆ- ಎರಡು ಮಹತ್ವದ ದೋಷ ಮತ್ತು ಧಾತುಗಳ ಮೂಲವೆ ಶರೀರ ಎನಿಸಿಕೊಂಡಿದೆ. ದೋಷಗಳೆಂದರೆ ವಾತ-ಪಿತ್ತ-ಕಫಗಳು. ಧಾತುಮೂಲ ಎಂದರೆ ಸಪ್ತಧಾತುಗಳು- ರಸ, ರಕ್ತ, ಮಾಂಸ, ಮೇದ, ಅಸ್ಥಿ, ಮಜ್ಜ, ಶುಕ್ರ ಈ ಏಳು ಧಾತುಗಳ ವಿಕಾರವೇ ಮನುಷ್ಯನ ಶರೀರ.
ಮನುಷ್ಯ ಸೇವಿಸುವ ಆಹಾರ ಜಠರಾಗ್ನಿ ಪ್ರವೇಶಿಸುವ ಪೂರ್ವದಲ್ಲಿ ಬಾಯೊಳಗೆ ಅದನ್ನು ರಸ ಮಾಡುತ್ತದೆ, ರಸರೂಪದಿಂದಿರುವ ಅನ್ನ ನಮ್ಮ ಜಠರಕ್ಕೆ ಪ್ರವೇಶ ಮಾಡುತ್ತದೆ. ಆ ಜಠರದೊಳಗೆ ಪಿತ್ತಕೋಶದ ಕಾರಣವಾಗಿ ರಸ ಹೋಗಿ ನಾನಾಗ್ರಂಥಿಗಳು ರಸವನ್ನು ಸ್ರವಿಸುವ ಮೂಲಕ ನಾವು ಉಂಡ ಆಹಾರವನ್ನು ಮತ್ತಷ್ಟು ರಸಮಯ ಮಾಡುತ್ತದೆ. ನಮ್ಮ ಜೀರ್ಣಾಂಗ ವ್ಯವಸ್ಥೆ ಅದ್ಭುತವಾಗಿದೆ. ನಾವು ಸೇವಿಸಿದ ಆಹಾರ ದ್ರವರೂಪದಲ್ಲಿರಲಿ, ಘನರೂಪದಲ್ಲಿ ಇರಲಿ, ಅದು ಜಠರ ಪ್ರವೇಶಿಸಿದಾಕ್ಷಣ ಮತ್ತೆ ದ್ರವರೂಪ ಪಡೆಯುತ್ತದೆ. ಈ ದ್ರವರೂಪ ನಮ್ಮ ಸಣ್ಣ ಕರುಳಿಗೂ ದೊಡ್ಡ ಕರುಳಿಗೂ ಹೋಗುತ್ತದೆ. ಅಲ್ಲಿ ಈ ದ್ರವರೂಪದ ಆಹಾರದಲ್ಲಿರುವ ಎಲ್ಲ ಪೋಷಕಾಂಶಗಳನ್ನು ರಕ್ತ ಹೀರಿಕೊಳ್ಳುತ್ತದೆ. ನಾವು ಸೇವಿಸುವ ಆಹಾರ ಮೊದಲು ರಸವಾಗಿ ನಂತರ ರಕ್ತವಾಗಿ ಪರಿವರ್ತನೆಯಾಗುತ್ತದೆ. ಇಷ್ಟೆಲ್ಲ ಪ್ರಕ್ರಿಯೆ ನಡೆಯಲು ೨೧ ದಿನಗಳು ಬೇಕು ಎಂದು ಆಯುರ್ವೇದ ಶಾಸ್ತ್ರ ಹೇಳುತ್ತದೆ.
ದೇಹದಲ್ಲಿ ರಕ್ತವಾಗಿ ಪರಿವರ್ತನೆಯಾದದ್ದು ಮುಂದೆ ಮಾಂಸವಾಗಿ ರೂಪಗೊಳ್ಳುತ್ತದೆ. ಮಾಂಸ ಮುಂದೆ ಮೇದವಾಗುತ್ತದೆ. ಮೇದ ಎಂದರೆ ನಮ್ಮ ಶರೀರದ ಕೀಲುಗಳ ನಡುವೆ ಬಾಗಲು, ಮಡಚಲು ಬೇಕಾದ ತೈಲ. ‘ಗ್ರೀಸ್’ ರೂಪದಲ್ಲಿರುವ ಈ ಮೇದ ಕಾರಣದಿಂದಲೇ ಮನುಷ್ಯ ಹಿಂದೆ ಮುಂದೆ ಬಾಗಲೂ ಸಾಧ್ಯವಾಗುತ್ತದೆ. ಮಾಂಸದಿಂದ ಮೇದ ತಯಾರಾಗುತ್ತದೆ. ಈ ಮೇದದಿಂದ ‘ಅಸ್ಥಿ’ ತಯಾರಾಗುತ್ತವೆ. ಅಸ್ಥಿ ಎಂದರೆ ಎಲವುಗಳು. ಈ ಎಲುವಿನಿಂದ ‘ಮಜ್ಜ’ ತಯಾರಾಗುತ್ತದೆ. ಮಜ್ಜ ಎಂದರೆ ಬೆನ್ನ ಹಿಂದಿನ ಎಲವುಗಳ ಸಂಕೀರ್ಣಕ್ಕೆ ಮಜ್ಜ ಎನ್ನುತ್ತಾರೆ. ಮಜ್ಜದ ಶಕ್ತಿಯೇ ಶುಕ್ರ ಅಥವಾ ವೀರ‍್ಯವಾಗಿ ರೂಪಗೊಳ್ಳುತ್ತದೆ. ಈ ದೇಹ ಅನ್ನದಿಂದ ಬೆಳೆಯುವುದರಿಂದ ಈ ದೇಹವನ್ನು ಅನ್ನಮಯಕೋಶ ಎನ್ನುತ್ತಾರೆ. ಮಾಡಿಟ್ಟ ಅನ್ನ ೨೪ ಗಂಟೆಯಲ್ಲಿ ಹಳಸಿ ಹೋಗುತ್ತದೆ. ಹಳಸಿ ಹೋಗುವ ಅನ್ನ ತಿಂದ ದೇಹವು ವಿಕಾರಕ್ಕೆ ಒಳಗಾಗುತ್ತದೆ.
ಹೀಗಿದ್ದೂ ಈ ಶರೀರ ರಚನೆ ಅದ್ಭುತವಾಗಿದೆ. ಈ ದೇಹದೊಳಗಿನ ಶಕ್ತಿ ಕುರಿತು ವಿಜ್ಞಾನಿಗಳಿಗೆ ಇನ್ನೂ ಅಧ್ಯಯನ ಮಾಡಲು ಸಾಧ್ಯವಾಗಿಲ್ಲ. ವಿಜ್ಞಾನ ಏನೇ ಕಂಡು ಹಿಡಿದರೂ, ರಕ್ತವನ್ನು ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಇದು ಶರೀರ ರಚನಾ ಶಾಸ್ತ್ರದ ಸೋಜಿಗ ಮತ್ತು ಕೌತುಕವಾಗಿದೆ. ಅಂತೆಯೆ ಚನ್ನಬಸವಣ್ಣನವರು ಈ ಕುರಿತು ಆ ಕಾಲದಲ್ಲಿಯೇ ಚಿಂತನೆ ಮಾಡಿದ್ದು ನಿಜಕ್ಕೂ ಲೋಕಸೋಜಿಗವಾಗಿದೆ.
ಮನುಷ್ಯ ಅವಸ್ಥಾತ್ರಯಗಳಿಗೆ ಸಾಕ್ಷಿಭೂತನಾಗಿದ್ದಾನೆ. ಸ್ವಪ್ನ, ಜಾಗ್ರ, ಸುಷುಪ್ತ ಅವಸ್ಥೆಗಳ ಪರಿಜ್ಞಾನ ಅವನಿಗಿದೆ. ಈ ತರ‍್ಯಾವಸ್ಥೆಯನ್ನು ಅನುಭವಿಸುವವನು ಮನುಷ್ಯ ಮಾತ್ರ. ಅಷ್ಟೇ ಅಲ್ಲ ಮನುಷ್ಯ ಪಂಚಕೋಶ ತತ್ವಗಳಿಗೆ ಅತೀತನಾಗಿದ್ದಾನೆ. ಅನ್ನಮಯ ಕೋಶ, ಪ್ರಾಣಮಯ ಕೋಶ, ಮನೋಮಯ ಕೋಶ, ವಿಜ್ಞಾನಮಯ ಕೋಶ ಮತ್ತು ಆನಂದಮಯ ಕೋಶ ಎಂಬ ಪಂಚಕೋಶ ವಿಲಕ್ಷಣ ತತ್ವಗಳಿಗೆ ಅತೀತನಾಗಿದ್ದೇನೆ ಎಂಬ ಅರುವು ಇರುವುದು ಮನುಷ್ಯನಿಗೆ ಮಾತ್ರ.
ಶರೀರ, ಇಂದ್ರಿಯ, ಮನಸ್ಸು ಕೂಡಿಕೊಂಡ ಅವಸ್ಥೆಗೆ ಜಾಗ್ರದಾವಸ್ಥೆ ಎನ್ನುತ್ತಾರೆ. ಈ ಮೂರು ಎಚ್ಚರವಿದ್ದ ಅವಸ್ಥೆ ಜಾಗ್ರದಾವಸ್ಥೆ. ಸ್ವಪ್ನಾವಸ್ಥೆಯಲ್ಲಿ ಶರೀರ ಇಂದ್ರಿಯಗಳು ಇಲ್ಲದೆ ಮನಸ್ಸು ಮಾತ್ರ ಶಾಂತವಾಗಿರುತ್ತದೆ. ಸ್ವಪ್ನಾವಸ್ಥೆಯಲ್ಲಿ ಕನಸು-ಮನಸ್ಸುಗಳ ಚೆಲ್ಲಾಟವಿರುತ್ತದೆ. ಭಗವಂತ ಮನುಷ್ಯ ಸುಖವಾಗಿರಲೆಂದು ಕನಸು-ಮನಸ್ಸುಗಳನ್ನು ಕಣ್ಣಿಗೆ ಕಾಣದಂತಿರಿಸಿದ್ದಾನೆ. ಶರೀರ-ಇಂದ್ರಿಯರಹಿತ ಮನಸ್ಸು ಮಾತ್ರ ಕನಸು ಕಾಣುವ ಅವಸ್ಥೆಗೆ ಸ್ವಪ್ನಾವಸ್ಥೆ ಎನ್ನುತ್ತಾರೆ.
ಇನ್ನು ಸುಷುಪ್ತಾವಸ್ಥೆಯಲ್ಲಿ ಶರೀರ-ಇಂದ್ರಿಯ-ಮನಸ್ಸು ಯಾವದೂ ಇರುವುದಿಲ್ಲ. ಇದು ಗಾಢನಿದ್ರಾವಸ್ಥೆಯಾಗಿದೆ. ಮನುಷ್ಯನಿಗೆ ಹಣ-ಸಂಪತ್ತು ಇಲ್ಲದಿದ್ದರೂ ನಡೆಯುತ್ತದೆ. ಆದರೆ ಊಟ-ನಿದ್ರೆ ಇಲ್ಲದಿದ್ದರೆ ನಡೆಯುವುದಿಲ್ಲ. ನಿದ್ರೆ ಎಂಬ ವಿಶೇಷ ವರವನ್ನು ಭಗವಂತ ಕೊಟ್ಟಿರುವ ಕಾರಣಕ್ಕೆ ಮನುಷ್ಯ ಇಷ್ಟು ಚಲನಶೀಲ ಕ್ರಿಯಾಶೀಲನಾಗಿದ್ದಾನೆ. ನಿದ್ರೆಯಲ್ಲಿ ಪರಮ ಆನಂದದ ಸ್ಥಿತಿಯುಂಟಾಗುತ್ತದೆ. ನಿದ್ರೆಗಿಂತ ದೊಡ್ಡದಾದ ಸಂಪತ್ತು ಮತ್ತೊಂದಿಲ್ಲ. ಇಂದು ಶ್ರೀಮಂತರು ನಿದ್ರೆಗಾಗಿ ಮಾತ್ರೆ ತೆಗೆದುಕೊಳ್ಳುವ ಸ್ಥಿತಿ ಇರುವುದನ್ನು ಗಮನಿಸಿದರೆ, ನಿದ್ರೆಯ ಮಹತ್ವ ನಮಗೆ ಮನದಟ್ಟಾಗುತ್ತದೆ.
ಜಾಗ್ರ-ಸ್ವಪ್ನ-ಸುಷುಪ್ತಿಗಳ ಜ್ಞಾನ ವಿವೇಕ ಮನುಷ್ಯನಿಗೆ ಇರುವುದರಿಂದ ಆತ ಉಳಿದ ಪ್ರಾಣಿಗಳಿಗಿಂತ ಭಿನ್ನವಾಗಿ ನಿಲ್ಲುತ್ತಾನೆ. ಈ ಶರೀರಕ್ಕೆ ಅನ್ನಮಯ ಕೋಶ ಎನ್ನುತ್ತಾರೆ. ಪಂಚವಿಂಶತಿ (೨೫) ತತ್ವಗಳಿಂದ ಈ ಶರೀರ ರಚನೆಯುಂಟಾಗಿದೆ. ಹೀಗಾಗಿ ಕಣ್ಣಿಗೆ ಕಾಣುವ ಶರೀರಕ್ಕೆ ಅನ್ನಮಯ ಕೋಶ ಎನ್ನುವರು. ಈ ಶರೀರ ಅನ್ನವನ್ನುಂಡು ಬದುಕುವ ಕಾರಣ. ಇದಕ್ಕೆ ಆ ಹೆಸರು ಬಂದಿದೆ.
ಇಲ್ಲಿ ತಿಳಿದುಕೊಳ್ಳಬೇಕಾದ ಮಹತ್ವದ ವಿಷಯವೆಂದರೆ- ಮನೆಯಲ್ಲಿ ಮಾಡಿದ ಅನ್ನ ೨೪ ಗಂಟೆಯಲ್ಲಿ ಹಳಸುತ್ತದೆ. ಹಾಗೆ ಈ ಅನ್ನವನ್ನು ಉಂಡ ಮನುಷ್ಯನ ಪ್ರಾಣ ಹೋದ ನಂತರ ೨೪ ಗಂಟೆಯಲ್ಲಿ ಮನುಷ್ಯ ಶರೀರ ಸಹ ಕೆಟ್ಟು ವಾಸನೆ ಬೀರುತ್ತದೆ. ಹೀಗಾಗಿ ಮಾಡಿದ ಅನ್ನಕ್ಕೆ ಹೇಗೆ ಅವಸಾನವಿದೆಯೋ, ಅದನ್ನುಂಡ ದೇಹಕ್ಕೂ ಅವಸಾನವಿದೆ.
೧. ಅಸ್ಥಿ ೨. ಜಾಯತೇ, ೩. ವಿವರ್ಧತೆ, ೪. ಪರಿಣಮತೆ, ೫.ಅಪಕ್ಷಿಯತೇ, ೬. ವಿನಶ್ಯತಿ ಈ ಷಡ್ಭಾವ ವಿಕಾರಗಳಿಂದ ಈ ಶರೀರ ತುಂಬಿದೆ. ಅನ್ನಕ್ಕೆ ಹೇಗೆ ಅವಸ್ಥೆಗಳಿವೆಯೋ ಹಾಗೇ ಶರೀರಕ್ಕೂ ಅವಸ್ಥೆಗಳಿವೆ. ಇದು ಭ್ರೂಣಾವಸ್ಥೆಯಲ್ಲಿ ಅಸ್ಥಿಯಾಗಿರುತ್ತದೆ. ಎರಡನೆಯ ವಿಕಾರ ಜಾಯತೆ. ಅಂದರೆ ಹುಟ್ಟು. ಹೀಗೆ ಹುಟ್ಟಿದ ಮಗು ಮೂರನೆಯ ಹಂತದಲ್ಲಿ ‘ವಿವರ್ಧತೆ’ ಎಂದರೆ ಬೆಳೆಯುತ್ತದೆ. ಮುಂದೆ ನಾಲ್ಕನೆಯ ವಿಕಾರ ಹಂತದಲ್ಲಿ ಬೆಳೆದು ದೊಡ್ಡವನಾದ ವ್ಯಕ್ತಿಯ ಇಂದ್ರಿಯಗಳೆಲ್ಲ ನಿಚ್ಚಳವಾಗುತ್ತವೆ. ಈ ಜಗತ್ತಿನ ನೋಟ ವೈಭವವನ್ನು ಅನುಭವಿಸುವ ‘ಪರಿಣಮತೆ’ ಆತನಿಗೆ ಬರುತ್ತದೆ. ಸುಂದರ ದೇಹವನ್ನು ಹೊಂದಿದ ವ್ಯಕ್ತಿ ೬೦ ವರ್ಷ ದಾಟಿದ ನಂತರ ತನ್ನ ಅಂಗಾಂಗಳಲ್ಲಿ ‘ಅಪಕ್ಷಿಯತೆ’ ಕಾಣುತ್ತಾನೆ. ಅಂದರೆ ಕರಿಯ ಕೂದಲು ಬೆಳಗಾಗುತ್ತವೆ, ದೇಹಕ್ಕೆ ಮುಪ್ಪು ಆವರಿಸುತ್ತದೆ. ಅದಕ್ಕೆ ಡಿ.ವಿ.ಜಿ. ಒಂದೆಡೆ ಹೇಳುತ್ತಾರೆ-
ಕಿವುಡತನ ತಪ್ಪಿತೇ ರನ್ನಕುಂಡಲದಿಂದ
ತವಲು ಜೊಬ್ಬಲು ಮೃಷ್ಟಾನದಿಂದ
ಭುವಿಯ ಪರಿಣಾಮದಲ್ಲಿ ಸಿರಿಬಡತನವೊಂದೆ
ಜವರಾಯ ಸಮವರ್ತಿ ಮಂಕುತಿಮ್ಮ
ಬಂಗಾರ-ವಜ್ರ-ವೈಢೂರ‍್ಯಗಳಿಂದ ಕರ್ಣಾಭರಣ ಮಾಡಿಸಿಕೊಂಡರೆ ಕಿವುಡತನ ಬರುವುದು ತಪ್ಪುವುದಿಲ್ಲ. ಪ್ರತಿನಿತ್ಯ ಮೃಷ್ಟಾನ್ನ-ಷಡ್ರಸಾನ್ನ ಉಂಡರೂ ವಯಸ್ಸಾದ ನಂತರ ದೇಹದ ತೊಗಲು ಜೊಬ್ಬಲು ಆಗುವುದೇ. ಈ ಭೂಮಿಯ ಪರಿಣಾಮದಲ್ಲಿ ಸಿರಿತನ-ಬಡತನ ಒಂದೇ. ಜವರಾಯನಾದ ಯಮ ಇಬ್ಬರನ್ನೂ ಸಮದೃಷ್ಟಿಯಿಂದ ನೋಡುತ್ತಾನೆ. ಹೀಗೆ ಶರೀರ ವಯಸ್ಸಾದ ನಂತರ ‘ಅಪಕ್ಷಿಯತೆ’ ವಿಕಾರಕ್ಕೆ ಒಳಗಾಗುತ್ತದೆ.
ವಯಸ್ಸಾದ ಮೇಲೆ ಅವಯವಗಳು ಬಲಹೀನವಾಗುತ್ತವೆ. ಕೂದಲು ನೆರೆತು ತಲೆಯು ಬೆಳ್ಳಗಾಗುತ್ತದೆ. ಬಾಯಿಯಲ್ಲಿದ್ದ ಹಲ್ಲುಗಳೆಲ್ಲ ಉದುರಿಹೋಗುತ್ತವೆ. ಇಷ್ಟಾದರೂ ಮನುಷ್ಯ ದೊಣ್ಣೆಯನ್ನು ಹಿಡಿದು ಎಲ್ಲಿಗೋ ಹೋಗುತ್ತಲೇ ಇರುತ್ತಾನೆ. ವಯಸ್ಸಾದರೂ ಆಶಾಪಿಂಡವು (ಆಸೆಯು) ಆತನ ಶರೀರವನ್ನು ಬಿಟ್ಟು ಹೋಗುವುದಿಲ್ಲ. ಅದನ್ನೆ ಬಸವಣ್ಣನವರು ಇನ್ನೊಂದು ಬಗೆಯಲ್ಲಿ ವಿವರಿಸುತ್ತಾರೆ.
ನೆರೆಕೆನ್ನೆಗೆ ತೆರೆಗಲ್ಲಕೆ ಶರೀರ ಗೂಡುಹೋಗದ ಮುನ್ನ
ಹಲ್ಲು ಹೋಗಿ ಬೆನ್ನು ಬಾಗಿ ಅನ್ಯರಿಗೆ ಹಂಗಾಗದ ಮುನ್ನ
ಕಾಲಮೇಲೆ ಕೈನೂರಿ ಕೋಲ ಹಿಡಿಯದ ಮುನ್ನ
ಮುಪ್ಪಿದೊಂಪ್ಪಳಿಯದ ಮುನ್ನ, ಮೃತ್ಯು ಮುಟ್ಟದ ಮುನ್ನ
ಪೂಜಿಸು ಕೂಡಲಸಂಗಮದೇವನ
ಮನುಷ್ಯನಿಗೆ ಮೃತ್ಯು ಯಾವಾಗ ಬರುತ್ತದೆ ಎನ್ನುವುದು ಗೊತ್ತಿಲ್ಲ. ಆದ್ದರಿಂದ ಭಗವಂತನ ನಾಮಸ್ಮರಣೆಯಲ್ಲಿ ಸದಾಕಾಲ ಇರುವ ಮೂಲಕ ಮಾನವ ಜನ್ಮ (ನರಜನ್ಮ) ಸಾರ್ಥಕ್ಯ ಪಡೆಯಬೇಕು.
ಶರೀರದ ತುಂಬ ತುಂಬಿಕೊಂಡಿರುವುದು ಅನ್ನ. ‘ಅನ್ನಾತ್ ಭವಂತಿ ಭೂತಾನಿ ಪರ್ಜನ್ಯಾದನ್ನ ಸಂಭವ’ ಇಡೀ ಭೂತಪ್ರಪಂಚ ನಿರ್ಮಾಣ ವಾಗಿರುವುದು ಅನ್ನದಿಂದ. ನಾವು ಸ್ವೀಕಾರ ಮಾಡಿದ ಅನ್ನ ರಕ್ತವಾಗುತ್ತದೆ. ಸಪ್ತಧಾತುಗಳಾಗಿ ಪರಿವರ್ತನೆ ಹೊಂದುತ್ತದೆ. ರಸ, ರಕ್ತ, ಮಾಂಸ, ಮೇದ, ಅಸ್ಥಿ, ಮಜ್ಜಾ ಮತ್ತು ಶುಕ್ರಗಳೆಂಬ ಸಪ್ತಧಾತುಗಳು ಉತ್ಪತ್ತಿಯಾಗುತ್ತವೆ. ಮನುಷ್ಯ ಉಂಡ ಅನ್ನ ಮೊದಲು ರಸವಾಗುತ್ತದೆ, ರಸ ಮುಂದೆ ರಕ್ತವಾಗಿ ಪರಿವರ್ತನೆ ಹೊಂದುತ್ತದೆ. ರಕ್ತವಿದ್ದುದು ಮಾಂಸವಾಗುತ್ತದೆ. ಮಾಂಸವು ಮೇದಸ್ಸು ಆಗುತ್ತದೆ. ಮೇದಸ್ಸು ಮುಂದೆ ಎಲವು ಆಗುತ್ತದೆ. ನಂತರ ತೊಗಲಾಗುತ್ತದೆ. ಕೊನೆಗೆ ಜೀವಸಂಕುಲ ಹುಟ್ಟುವ ಶುಕ್ರ ನಿರ್ಮಾಣವಾಗುತ್ತದೆ. ಹೀಗೆ ಅನ್ನದಿಂದಲೇ ಸಪ್ತಧಾತುಗಳು ಹುಟ್ಟಿಕೊಳ್ಳುತ್ತವೆ.
ಈ ಶರೀರದೊಳಗೆ ಮತ್ತೆ ಸೂಕ್ಷ್ಮಶರೀರವಿದೆ ಎಂದು ಚನ್ನಬಸವಣ್ಣನವರು ಹೇಳುತ್ತಾರೆ. ಈ ಸೂಕ್ಷ್ಮಶರೀರದೊಳಗೆ ಇರುವುದೇ ಪ್ರಾಣ. ಇದನ್ನು ವಾಯು ಎನ್ನುವರು. ಈ ದೇಹದೊಳಗೆ ಐದು ವಾಯುಗಳಿವೆ. ಅವುಗಳನ್ನು ಪಂಚಪ್ರಾಣ ಎನ್ನುತ್ತಾರೆ. ಪ್ರಾಣ, ಅಪಾನ, ವ್ಯಾನ, ಸಮಾನ, ಉದಾನ ಎಂಬ ಪಂಚಪ್ರಾಣಗಳು ಮನುಷ್ಯನ ದೇಹದಲ್ಲಿವೆ.
ದೇಹದ ಒಂದೊಂದು ಭಾಗದಲ್ಲಿ ಒಂದು ವಾಯುಪ್ರಾಣವಿದೆ. ಹೃದಯದಲ್ಲಿ ಪ್ರಾಣವಾಯುವಿದೆ, ಹೃದಯಭಾಗದಿಂದ ಹೊಕ್ಕಳುವರೆಗಿರುವ ವಾಯುವಿಗೆ ಸಮಾನವಾಯು ಎನ್ನುತ್ತಾರೆ. ನಾಭಿಚಕ್ರದಿಂದ ಕೆಳಗಿರುವುದು ಅಪಾನವಾಯು, ಗಂಟಲಿನಿಂದ ಮೇಲಿರುವ ಭಾಗದಲ್ಲಿ ಉದಾನವಾಯು ವಿರುವುದು. ಇಡೀ ಶರೀರವನ್ನು ವ್ಯಾಪಿಸಿಕೊಂಡಿರುವುದು ವ್ಯಾನವಾಯು.
ಈ ಐದು ವಾಯುಗಳನ್ನು ಪಂಚಪ್ರಾಣವೆನ್ನುತ್ತಾರೆ. ಈ ಐದು ವಾಯುಗಳಿಗೆ ಮತ್ತೆ ಐದು ಉಪವಾಯುಗಳಿವೆ. ೧. ನಾಗ, ೨.ಪ್ರಖರ, ೩.ದೇವದತ್ತ, ೪.ಧನಂಜಯ ಮತ್ತು ೫. ಕೂರ್ಮ ಎಂಬ ವಾಯುಗಳಿವೆ. ಧನಂಜಯ ವಾಯುವಿನ ವಿಶೇಷವೆಂದರೆ ವ್ಯಕ್ತಿ ಸತ್ತು ಹತ್ತುದಿನಗಳವರೆಗೆ ಆತನ ದೇಹದಲ್ಲಿರುತ್ತದೆ. ಸತ್ತ ವ್ಯಕ್ತಿಯ ಶರೀರ ಉಬ್ಬಿ, ಒಡೆದು ಹೋಗುವುದೇ ಧನಂಜಯವಾಯು. ಹೀಗೆ ದಶವಾಯುಗಳಿಂದ ಕೂಡಿದ ದೇಹವನ್ನು ಪ್ರಾಣಮಯಕೋಶ ಎಂದು ಕರೆಯುತ್ತಾರೆ.
ಎಲ್ಲಿಯವರೆಗೆ ದೇಹದಲ್ಲಿ ಪ್ರಾಣವಾಯು ಇರುತ್ತದೆಯೋ ಅಲ್ಲಿಯವರೆಗೆ ನಿನ್ನ ದೇಹಸ್ಥಿತಿ ಹೇಗಿದೆಯೆಂದು ಕುಶಲವನ್ನು ಮನೆಯಲ್ಲಿ ವಿಚಾರಿಸಬಹುದು. ಯಾವಾಗ ಪ್ರಾಣವಾಯು ದೇಹದಿಂದ ಹೊರಟು ಹೋಗುತ್ತದೆಯೋ ಆಗ ಆ ದೇಹದ ಬಳಿಗೆ ಬರಲು ಹೆಂಡತಿ ಸಹ ಹೆದರುತ್ತಾಳೆ. ದೇಹದಲ್ಲಿ ವಾಯುವಿರುವವರೆಗೆ ಜೀವವಿರುತ್ತದೆ. ವಾಯುನಿಂತ ಕ್ಷಣವೇ ದೇಹ ಶವವಾಗುತ್ತದೆ. ಇಂಥ ಶರೀರ ಜ್ಞಾನವನ್ನು ಅರಿತುಕೊಳ್ಳುತ್ತೇನೆ ಎಂಬ ಪ್ರಜ್ಞೆ ಮಾನವನಿಗಿರುವುರಿಂದ ಆತ ಶ್ರೇಷ್ಠವೆನಿಸಿದ್ದಾನೆ.
‘ಘಟಂ ದೃಷ್ಟಾ ಘಟಾತ ಭಿನ್ನಃ’ ಶರೀರ ಅರಿಸಿಕೊಳ್ಳುತ್ತದೆ; ನಾನು ತಿಳಿಯುವವನಾಗಿದ್ದೇನೆ. ಅಂತೆಯೆ ಶರೀರ ಬೇರೆ ನಾನು ಬೇರೆ ಎಂಬ ಜ್ಞಾನವಾಗುತ್ತದೆ. ಆ ಜ್ಞಾನವೇ ಮುಂದೆ ಮನೋಮಯ ಕೋಶವೆನಿಸುತ್ತದೆ. ಮನಸ್ಸನ್ನು ನಾನು ಅರಿಯುತ್ತೇನೆ ಎಂಬ ಭಾವ ಜೀವನಿಗಿರುತ್ತದೆ. ಮನಸ್ಸಿನ ಎರಡು ಧರ್ಮಗಳೆಂದರೆ ಸಂಕಲ್ಪ ಮತ್ತು ವಿಕಲ್ಪ. ಮನಸ್ಸು ಸಂಕಲ್ಪವನ್ನು ಮಾಡುತ್ತದೆ, ವಿಕಲ್ಪವನ್ನು ಮಾಡುತ್ತದೆ. ಹಾಗೆ ಮಾಡಬೇಕು, ಹೀಗೆ ಮಾಡಬೇಕು ಎಂಬುದು ಸಂಕಲ್ಪವಾದರೆ, ಇಲ್ಲದೆ ಇರುವುದನ್ನು ಮನಸ್ಸು ಕಲ್ಪನೆ ಮಾಡಿಕೊಳ್ಳುವುದೆ ವಿಕಲ್ಪವೆನಿಸುತ್ತದೆ.
ಮನಸ್ಸಿಗೆ ಮೂರು ಪ್ರತಿಬಂಧಕಗಳಿವೆ. ೧. ಭೂತಪ್ರತಿಬಂಧಕ, ೨. ವರ್ತಮಾನ ಪ್ರತಿಬಂಧಕ, ೩. ಭವಿತವ್ಯ ಪ್ರತಿಬಂಧಕ. ಮನಸ್ಸು ವರ್ತಮಾನವನ್ನು ಬಿಟ್ಟು ಭೂತ-ಭವಿಷ್ಯತ್ತಿನ ಕುರಿತು ಆಲೋಚನೆ ಮಾಡುತ್ತದೆ. ವಸ್ತು ಶೂನ್ಯ ವಿಕಲ್ಪ ಎಂದರೆ ಇಲ್ಲದ್ದನ್ನು ಕುರಿತು ಚಿಂತನೆ ಮಾಡುವುದು. ಗಂಡ-ಹೆಂಡತಿ ಇಬ್ಬರೂ ಜಗಳವಾಡುತ್ತಿದ್ದರು. ತಮ್ಮ ಮಗ ಡಾಕ್ಟರ್ ಆಗಬೇಕೆಂದು ಗಂಡ ಹೇಳಿದರೆ, ತನ್ನ ಮಗ ‘ವಕೀಲ’ ನಾಗಬೇಕೆಂದು ಹೆಂಡತಿ ವಾದಿಸುತ್ತಿದ್ದಳು. ಇಬ್ಬರ ಜಗಳ ತಾರಕಕ್ಕೇರಿತು. ಊರ ಹಿರಿಯರು ಜಗಳ ಬಗೆಹರಿಸಲು ಬಂದು ಕೇಳಿದರು. ಇಬ್ಬರು ತಮ್ಮ ನಿಲುವು ಹೇಳಿದರು. ಆಗ ಹಿರಿಯರು ‘ನಿಮ್ಮ ಮಗನನ್ನೇ ಕೇಳೋಣ, ಆತನನ್ನು ಕರೆಯಿರಿ, ಭವಿಷ್ಯದಲ್ಲಿ ಏನಾಗುವನು ಅವನಿಂದಲೇ ಕೇಳೋಣ’ ಎಂದರು. ಆಗ ಗಂಡ-ಹೆಂಡತಿ ಇಬ್ಬರೂ ‘ತಮಗಿನ್ನು ಮಕ್ಕಳಾಗಿಲ್ಲ’ ಎಂದರು. ಹೀಗೆ ಮನುಷ್ಯ ವಸ್ತುಶೂನ್ಯ ವಿಕಲ್ಪಕ್ಕೆ ಒಳಗಾಗುವುದು ಈ ಮನಸ್ಸಿನಿಂದಲೇ. ಈ ಮನಸ್ಸು ಸಂಕಲ್ಪ ವಿಕಲ್ಪ ಮಾಡಿದ್ದು ತನಗೆ ತಿಳಿಯುತ್ತದೆ. ಆದ್ದರಿಂದ ಶರೀರ ಬೇರೆ, ಅದರೊಳಗಿನ ಚೈತನ್ಯ ಬೇರೆ ಎಂಬುದರ ಅರಿವಾಗುತ್ತದೆ. ಈ ಅರಿವೇ ಮನೋಮಯಕೋಶ.
ಮುಂದೆ ಬರುವುದೇ ವಿಜ್ಞಾನಮಯಕೋಶ. ವಿಜ್ಞಾನಮಯಕೋಶ ಎಂದರೆ ಬುದ್ಧಿ ಆಲೋಚನೆಯಿಂದ ತುಂಬಿರುವ ಕೋಶ. ಮನಸ್ಸು ಸಂಕಲ್ಪ ಮಾಡುತ್ತದೆ. ಆದರೆ ಆ ಸಂಕಲ್ಪ ಸಾಕಾರಗೊಳ್ಳಲು ಬುದ್ಧಿ ಪ್ರಚೋದನೆ ಮಾಡಬೇಕಾಗುತ್ತದೆ. ಒಬ್ಬ ವ್ಯಕ್ತಿ ಎಲ್ಲಿಗೋ ಹೋಗಬೇಕೆಂದು ಮನಸ್ಸಿನಲ್ಲಿ ಸಂಕಲ್ಪ ಮಾಡುತ್ತಾನೆ. ಆದರೆ ಹೋಗುವ ಜಾಗಕ್ಕೆ ಕರೆದುಕೊಂಡು ಬರುವುದು ಬುದ್ಧಿ. ಬುದ್ಧಿ ಪ್ರಚೋದನೆ ಕೊಡದೆ ಹೋದರೆ, ಮನಸ್ಸಿನ ಸಂಕಲ್ಪ ಪೂರ್ಣವಾಗುವುದಿಲ್ಲ. ಆದ್ದರಿಂದ ಇದು ವಿಜ್ಞಾನಮಯಕೋಶ.
ಇನ್ನು ಕೊನೆಯದು, ಆನಂದಮಯಕೋಶ. ನಿದ್ರಾವಸ್ಥೆಯಲ್ಲಿ ಎಲ್ಲವನ್ನು ಮರೆತು ‘ಆನಂದಮಯ’ ಸ್ಥಿತಿಯನ್ನು ಅನುಭವಿಸುವ ಮನುಷ್ಯ ಎಚ್ಚರಾದ ಬಳಿಕ, ತಾನು ನಿದ್ರೆ ಮಾಡುವಾಗ ತುಂಬಾ ಆನಂದವನ್ನು ಅನುಭವಿಸಿದೆ ಎಂದು ಹೇಳುತ್ತಾನೆ. ಹೀಗೆ ಹೇಳುವುದರಿಂದ ದೇಹದೊಳಗಿನ ಚೇತನವು ಬೇರೆಯಾಗಿದ್ದು, ದೇಹಬೇರೆ, ಆತ್ಮ ಬೇರೆ ಎಂಬ ಪರಿಕಲ್ಪನೆಯನ್ನು ನೀಡುತ್ತದೆ. ಆದ್ದರಿಂದ ಈ ಪಂಚಕೋಶ ವಿಲಕ್ಷಣ ತತ್ವವೇ ಜೀವ-ಶಿವರ ಕಲ್ಪನೆಯನ್ನು ಮೂಡಿಸುತ್ತದೆ.
ಹೀಗೆ ವಿವರಣೆಯನ್ನು ಇನ್ನೂ ಬೆಳೆಸುತ್ತ ಹೋಗಬಹುದು. ಕರಣ ಹಸಿಗೆಯನ್ನು ಮತ್ತೆ ಮತ್ತೆ ಓದಿದಾಗ ಹೊಸ ಹೊಸ ವಿಚಾರಗಳು ಮೂಡುತ್ತಲೇ ಇರುತ್ತವೆ.
೨
ಹಿರಿಯ ಮಂತ್ರಗೋಪ್ಯ
ಎರಡು ವಿಧದ ಭಕ್ತಿ ಜ್ಞಾನ ತರ‍್ಯಾತೀತವಾದಲ್ಲಿ
ಕುರುಹುಗೆಟ್ಟ ನಿರ್ವಾಣ ಲಿಂಗವು ಮೂಲವು
ಉನ್ಮನಿಯ ಸ್ಥಾನದಲ್ಲಿ ಉಲುಹು ಮಂತ್ರಗೋಪ್ಯವಾಗಿ
ಪರಮಲಿಂಗದ ಬೆಳಗುದೋರಲಾರು ಮೂಲವು.
“ಮಂತ್ರಗೋಪ್ಯವೆಂದರೇನು? ಶಿವಯೋಗದಲ್ಲಿ ಅದರ ಸ್ಥಾನವಾವುದು? ಎಂಬುದನ್ನು ಚನ್ನಬಸವಣ್ಣನವರು ಈ ಕೆಳಗಿನ ಪದ್ಯದಲ್ಲಿ ಸೂಚ್ಯವಾಗಿ ತಿಳಿಸಿದ್ದಾರೆ.. ಪರವಸ್ತುವು ಪ್ರಕಾಶರೂಪವಾಗಿದೆ. ಅದನ್ನು ಭಕ್ತಿ-ಜ್ಞಾನಗಳ ಮೂಲಕವಾಗಿ ಕಾಣಲು ಶಕ್ಯವಿದೆ. ವೈರಾಗ್ಯದ ಆಧಾರದಲ್ಲಿ ಅಳವಡಿಸಿಕೊಳ್ಳದ ಭಕ್ತಿ-ಜ್ಞಾನಗಳು ತರ‍್ಯಾವಸ್ಥೆಗೆ ನಿಲುಕಿಸಿ ಪರವಸ್ತುವಿನ ದರ್ಶನ ಸಾಕ್ಷಾತ್ಕಾರಗಳನ್ನು ಮಾಡಿಕೊಡಲಾರವು. ಅದಕ್ಕಾಗಿ ಭಕ್ತಿ-ಜ್ಞಾನ-ವೈರಾಗ್ಯದ ಆಚರಣೆಗೆ ಒಂದು ಅತ್ಯುಚ್ಚವಾದ ಸ್ಥಾನವನ್ನು ನೀಡಲಾಗಿದೆ. ಇಂತಹ ಪರವಸ್ತುವನ್ನು ತನ್ನಿಂದ ಅನ್ಯವಾಗಿ ಹುಡುಕುವಂತಿಲ್ಲ; ತನ್ನಲ್ಲಿಯೇ ಅದನ್ನು ಗುರುತಿಸಬೇಕು. ಸಂಕಲ್ಪ ವಿಕಲ್ಪದ ಕೀಳು ಪ್ರವೃತ್ತಿಯ ಮನವು ಮಾರ್ಪಟ್ಟು ಉನ್ಮನವಾಗಿ ತೋರಿದಾಗ ಅಲ್ಲಿ ಶಬ್ದಮುಗ್ಧ ಸ್ಥಿತಿಯೊದಗುತ್ತದೆ.
ಮನಮಾರುತಗಳು ಸ್ಥಿಮಿತಕ್ಕೆ ಬಂದು ನಿಂತಾಗ ಅಲ್ಲಿ ಉಲುಹಿಗೆ ಆಸ್ಪದವೆಲ್ಲಿರಬೇಕು? ಇಂತಹ ಅವಸ್ಥೆಯಲ್ಲಿ ಮಂತ್ರಮಯ ಮೂರ್ತಿಯು ಅಂತರಂಗದಲ್ಲಿ ಪ್ರಕಾಶ ರೂಪವಾಗಿ ಹೊಳೆಹೊಳೆಯುವದು. ಇದುವೇ ಇಲ್ಲಿ ಸೂಚಿತವಾಗಿರುವ ಮಂತ್ರಗೋಪ್ಯದ ರಹಸ್ಯವಾಗಿದೆ.” (ವೀರಣ್ಣ ರಾಜೂರ : ಮಂತ್ರಗೋಪ್ಯ ಸಂಪುಟ ಪ್ರಸ್ತಾವನೆಯಲ್ಲಿ)
ನಮ್ಮ ದೇಶದ ಯಾವುದೇ ಧರ್ಮದ ಸಿದ್ಧಾಂತವನ್ನು ತೆಗೆದುಕೊಂಡರು, ಅದರಲ್ಲಿ ಮಂತ್ರ ತತ್ವಕ್ಕೆ ತುಂಬ ಪ್ರಾಧಾನ್ಯತೆಯನ್ನು ನೀಡಲಾಗಿದೆ. ಮಂತ್ರದಿಂದ ಮಹಾಶಕ್ತಿಯನ್ನು ಪಡೆಯಬಹುದೆಂಬ ನಂಬಿಕೆ ಬಹುತೇಕ ಧರ್ಮ-ಪಂಥಗಳ ದಾರ್ಶನಿಕರಲ್ಲಿದೆ. ಯೋಗತತ್ವವನ್ನು ಎಲ್ಲ ಮತಗಳು ಅಂಗೀಕರಿಸಿವೆ. ಅದರಲ್ಲಿ ಮಂತ್ರಯೋಗವೂ ಒಂದು. ಬಸವಾದಿ ಶರಣರ ಪ್ರಣೀತ ಲಿಂಗಾಯತ ಧರ್ಮವೂ ಈ ಮಂತ್ರಯೋಗ ತತ್ವವನ್ನು ಅಂಗೀಕರಿಸಿದೆ, ಅಳವಡಿಸಿಕೊಂಡಿದೆ. ಲಿಂಗಾಯತ ಧರ್ಮದ ಮೂಲತತ್ವಗಳಾದ ಅಷ್ಟಾವರಣಗಳಲ್ಲಿ ಮಂತ್ರವೂ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಷಟ್ಸ್ಥಲ ಸಾಧನೆ ಮಾಡುವ ಸಾಧಕನು ಮಂತ್ರದ ಸಹಾಯದಿಂದ ಸಿದ್ಧಿಯ ಫಲರೂಪವಾಗಿ ಲಿಂಗಾಂಗ ಸಾಮರಸ್ಯದ ಔನ್ನತ್ಯವನ್ನು ಪಡೆಯುತ್ತಾನೆ. ಹೀಗೆ ಪಡೆದ ಲಿಂಗಸುಖದ ಅನುಭವವನ್ನು ಶಾಸ್ತ್ರೀಯ ನೆಲೆಯಲ್ಲಿ ಅನುಭಾವ ಸಾಹಿತ್ಯ ರೂಪ ಹಾಡುಗಬ್ಬದ ಮೂಲಕ ರಚಿಸಿ ಆನಂದ ಪಡುತ್ತಾನೆ. ಹೀಗೆ ರಚನೆಯಾದ ಸಾಹಿತ್ಯವನ್ನೇ ಶರಣರು ‘ಮಂತ್ರಗೋಪ್ಯ’ ಎಂಬ ಹೆಸರಿನಿಂದ ಕರೆದರು.
೧೨ನೇ ಶತಮಾನದ ಬಹುತೇಕ ಶರಣರು ಮಂತ್ರಗೋಪ್ಯದ ಹಾಡುಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಪ್ರಭುದೇವ, ಚನ್ನಬಸವಣ್ಣನವರು, ಬಸವಣ್ಣನವರು, ಸಿದ್ಧರಾಮೇಶ್ವರರು, ಹಡಪದ ಅಪ್ಪಣ್ಣ ಮತ್ತು ಅವರ ಪತ್ನಿ ಲಿಂಗಮ್ಮ ಇವರ ಮಂತ್ರಗೋಪ್ಯಗಳು ಮುಖ್ಯವಾದವು. ಈ ವರೆಗೆ ದೊರೆತ ‘ಮಂತ್ರಗೋಪ್ಯ’ ಎಂಬ ಹೆಸರಿನ ಕೃತಿಗಳು ಕೆಳಗಿನಂತಿವೆ :
೧. ಪ್ರಭುದೇವರ ಮಂತ್ರಗೋಪ್ಯ.
೨. ಚೆನ್ನಬಸವಣ್ಣನವರ ಹಿರಿಯಮಂತ್ರಗೋಪ್ಯ.
೩. ಚೆನ್ನಬಸವಣ್ಣನವರ ಪದಮಂತ್ರಗೋಪ್ಯ (ಅಥವಾ ಸ್ಥಲಮಂತ್ರಗೋಪ್ಯ)
೪. ಚೆನ್ನಬಸವಣ್ಣನವರ ಶೂನ್ಯಮಂತ್ರಗೋಪ್ಯ.
೫. ಹಡಪದ ಅಪ್ಪಣ್ಣನ ಮಂತ್ರಗೋಪ್ಯ-೧
೬. ಹಡಪದ ಅಪ್ಪಣನ ಮಂತ್ರಗೋಪ್ಯ.-೨
೭. ಹಡಪದ ಅಪ್ಪಣನ ರಾಣಿ ಲಿಂಗಮ್ಮನ ಮಂತ್ರಗೋಪ್ಯ.
(ಇತ್ತೀಚಿಗೆ ಡಾ. ವೀರಣ್ಣ ರಾಜೂರ ಅವರು ಈ ಏಳೂ ಮಂತ್ರಗೋಪ್ಯಗಳನ್ನು ಶಾಸ್ತ್ರಶುದ್ಧವಾಗಿ ಸಂಪಾದಿಸಿ ಧಾರವಾಡ ಮುರುಘಾಮಠದಿಂದ ಪ್ರಕಟಿಸಿದ್ದಾರೆ)
‘ನಿರಾಳ ಮಂತ್ರಗೋಪ್ಯ’ ಎಂಬ ಒಂದು ಕೃತಿ ವಚನಗಳ ರೂಪದಲ್ಲಿದೆ. ಅದು ಪ್ರಭುದೇವಾದಿ ಶರಣರ ಮಂತ್ರಗೋಪ್ಯಗಳಿಗಿಂತ ಭಿನ್ನವಾಗಿದೆ. ೭೮೦ ವಚನಗಳಿರುವ ಈ ಮಂತ್ರಗೋಪ್ಯ ೧೮ ಸ್ಥಲ ಕಟ್ಟುಗಳಲ್ಲಿ ವಿಶೇಷವಾಗಿ ಬೆಡಗಿನ ವಚನಗಳಿಂದ ಕೂಡಿದೆ. ಮಂತ್ರಗೋಪ್ಯವೆಂದು ಹೆಸರಿಟ್ಟು ಶಾಸ್ತ್ರೀಯ ಧರ್ಮ ಸಾಹಿತ್ಯವನ್ನು ರಚಿಸಿದವರ ಸಂಖ್ಯೆ ತೀರ ಕಡಿಮೆ. ಈಗ ದೊರೆತ ಮಂತ್ರಗೋಪ್ಯಗಳನ್ನು ಗಮನಿಸಿದರೆ ಅದು ತಿಳಿಯುತ್ತದೆ. ಆದರೆ ಮಂತ್ರಗೋಪ್ಯದಲ್ಲಿ ಹೇಳುವ ಅನೇಕ ವಿಷಯಗಳು ತಾವು ಹೇಳುವ ವಚನಗಳಲ್ಲಿಯೇ ಅಡಕಗೊಳಿಸಿ ಹೇಳಿರುವುದರಿಂದ ಪ್ರತ್ಯೇಕವಾಗಿ ಹೇಳುವ ಅವಶ್ಯಕತೆ ಶರಣರಿಗೆ ಕಾಣಲಿಲ್ಲ ವೆನಿಸುತ್ತದೆ. ಮಂತ್ರಗೋಪ್ಯಗಳು ಸಾಮಾನ್ಯವಾಗಿ ಒಟ್ಟು ೨೭ ನುಡಿಗಳಲ್ಲಿ ಮುಕ್ತಾಯವಾಗುತ್ತವೆ. ಪ್ರಾಯಶಃ ಇವುಗಳನ್ನು ನಕ್ಷತ್ರ ಮಾಲಿಕೆ ಎಂಬ ಸಂಕೇತದಲ್ಲಿ ಬರೆದಂತೆ ತೋರುತ್ತದೆ.
“ಪದ್ಯರೂಪವಾಗಿರುವ ಈ ಮಂತ್ರಗೋಪ್ಯಗಳಲ್ಲಿ ಹೊಳೆದು ಬಂದಿರುವ ಅನುಭವದ ವಿಚಾರಗಳು ಶಿವಶರಣರ ವಚನಗಳಲ್ಲಿ ಧಾರಾಳವಾಗಿ ಬಂದಿವೆ. ಆ ವಚನಗಳ ಸಾರವನ್ನೇ ಸಂಗ್ರಹಿಸಿ, ಸೂತ್ರರೂಪವಾಗಿ ರಚಿಸಿ, ಸುಲಭವಾಗಿ ಜ್ಞಾಪಕದಲ್ಲಿಟ್ಟುಕೊಳ್ಳಲು ರಾಗ ತಾಳ ಲಯಬದ್ಧವಾಗಿ ಅವನ್ನು ಪಠಿಸುತ್ತ ಮನನ ಮಾಡಿಕೊಳ್ಳಲು ಅನುಕೂಲವಾಗುವಂತೆ ಯೋಜಿಸಿಕೊಟ್ಟಿರುವುದು ಈ ಮಂತ್ರಗೋಪ್ಯಗಳ ಒಂದು ವೈಶಿಷ್ಟ್ಯವಾಗಿದೆ” (ವೀ. ರು. ಕೊಪ್ಪಳ : ಮಂತ್ರಗೋಪ್ಯ ಪ್ರಸಾದ ಪು. ೧೨೩)
ಎಂದು ಹಿರಿಯ ಸಾಹಿತಿ ವೀ.ರು.ಕೊಪ್ಪಳ ಅವರು ಮಂತ್ರಗೋಪ್ಯದ ವೈಶಿಷ್ಟ್ಯವನ್ನು ತಿಳಿಸಿದ್ದಾರೆ. ಪ್ರಭುದೇವ, ಬಸವಣ್ಣನವರು, ಸಿದ್ಧರಾಮೇಶ್ವರರು ಮತ್ತು ಚನ್ನಬಸವಣ್ಣನವರ ಹಿರಿಯ ಮಂತ್ರಗೋಪ್ಯಗಳು ಸಾಮಾನ್ಯವಾಗಿ ಒಂದೇ ಕ್ರಮಕ್ಕನುಗುಣವಾಗಿ ರಚನೆಗೊಂಡಿವೆ. ಮೊದಲು ಎರಡು ಸಾಲಿನ ಪಲ್ಲವಿ, ಅನಂತರ ನಾಲ್ಕು ನಾಲ್ಕು ಸಾಲಿನ ೨೭ ಪದ್ಯಗಳಿಂದ ಕೂಡಿವೆ. ಪಲ್ಲವಿಯಲ್ಲಿ ಸಾಮಾನ್ಯವಾಗಿ ತಾವು ಮಂತ್ರಗೋಪ್ಯದಲ್ಲಿ ಪ್ರತಿಪಾದನೆ ಮಾಡುವ ವಿಷಯದ ಸೂಚನೆಯು ಷಟ್ಪದಿಯ ಸೂಚನಾ ಪದ್ಯದ ಮಾದರಿಯಲ್ಲಿ ಪ್ರಾಯಶಃ ಇರುತ್ತದೆ. ಕನ್ನಡ ಪದ್ಯಗಳಿಗೆ ಸಹಜ ಪ್ರಾಸವು ಪಾಲಿಸಲ್ಪಟ್ಟಿದೆ. ಆದರೆ ಕೆಲವು ಕಡೆ ಮಿಕ್ಕಿರುವುದೂ ಉಂಟು. ಸೂಚನೆಯಲ್ಲಿ-
ನೋಡಲಿಲ್ಲ ನುಡಿಯಲಿಲ್ಲ
ಕೂಡಲಿಲ್ಲದಪ್ರತಿಮಂಗೊಡಲು ಇಲ್ಲಾ ||ಪಲ್ಲ||
ನೋಡಲು, ನುಡಿಯಲು, ಕೂಡಲು ಸಾಧ್ಯವಿಲ್ಲದ ಅಪ್ರತಿಮನಾದ ಶಿವನಿಗೆ ಒಡಲಿಲ್ಲ; ಅಂತಹ ಮಹಾತತ್ವವನ್ನು ಹೇಗೆ ಅನುಭವಗಮ್ಯಗೊಳಿಸಿಕೊಳ್ಳಬೇಕೆಂಬ ಬಗೆಗೆ ಮುಂದೆ ವಿವರಣಾತ್ಮಕ ೨೭ ಅನುಭಾವ ಗೀತೆಗಳನ್ನು ಹಾಡುತ್ತಾರೆ.
ಆಕಾರವಿಡಿದು ಅರ್ಚನೆ ಪೂಜನೆಯ ಮಾಡಿ
ಏಕೋದೇವನದ್ವಿತೀಯನೆಂದುದು ಶ್ರುತಿ
ಯಾಕೆ ವೃಥಾ ಬೊಮ್ಮದ ಮಾತು
ಆತ್ಮನೇ ದೈವವೆಂಬ ಭ್ರಾಂತಯೋಗಿ ಕೇಳು ವೀರಮಾಹೇಶ್ವರವ
ಆತ್ಮನಂತೆ ಪರಿಭವಕೆ ಬಪ್ಪನೆ ಶಿವಯೋಗಿ
ಯಾತಕ್ಕೆ ನಿನ್ನ ಕಂಥೆ ಧರೆಯೊಳುಳಿದುದು
ನೀತಿವಿಡಿದು ಭಕ್ತಿ ಜ್ಞಾನ ವೈರಾಗ್ಯವೇದ್ಯ ಶರಣ
ಕಂಥೆ ಸಹಿತ ಶಿವನ ಪಾದವನ್ನು ಬೆರಸುವ
ಶಿಷ್ಯನ ಕರಸ್ಥಲಕ್ಕೆ ಆತ್ನ ಮಸ್ತಕದ ಚಿತ್ಕಳೆಯೇ ಗುರುಕರುಣದಿಂದ ಭಾವ, ಮನ, ನೇತ್ರಗಳ ಮೂಲಕವಾಗಿ ಲಿಂಗಾಕಾರಗೊAಡು ಬಂದಿದೆ. ಹೀಗೆ ಕರಸ್ಥಲಕ್ಕೆ ಬಂದ ಲಿಂಗವನ್ನು ಅರ್ಚನಾದಿಗಳನ್ನು ಮಾಡಿ ಸಾಮರಸ್ಯವನ್ನು ಪಡೆಯುವ ರೀತಿಯನ್ನು ವಾಗದ್ವೈತಿಗೆ ವಿವರಿಸುವ ಹಾಗೆ ವಿಷಯ ಸಾಗುತ್ತದೆ. ಶಿವಯೋಗಿಯು ಆತ್ಮನಂತೆ ಪರಿಭವಕೆ ಮರಳಿ ಬಾರನು. ಅವನು ಕಂಥೆ ಸಹಿತ ಶಿವನಪಾದವನ್ನು ಸೇರುವ ಅಂದರೆ ಸದೇಹಮುಕ್ತಿಯನ್ನು ಪಡೆಯುವ ಸಾಮರ್ಥ್ಯವನ್ನು ತನ್ನ ಭಕ್ತಿ ಜ್ಞಾನ ವೈರಾಗ್ಯಗಳ ಪ್ರಕರ್ಷದಿಂದ ಪಡೆಯುವನು. ಅವನು ಧರ್ಮಾರ್ಥ ಕಾಮಮೋಕ್ಷಗಳೆಂಬ ಚತುರ್ವಿಧ ಪುರುಷಾರ್ಥಗಳ ಸೊಮ್ಮನ್ನು ಮೆಟ್ಟುವುದಿಲ್ಲ. ಅಷ್ಟೇ ಅಲ್ಲ ಯಾವ ಫಲಗಳನ್ನೂ ಬಯಸದ ಆ ಶಿವಯೋಗಿಯ ಘನತೆಯ ವಿವರಣಾತ್ಮಕವಾದ ಪದ್ಯಗಳು ಇಪ್ಪತ್ತೇಳರ ವರೆಗೆ ಬೆಳೆದು ಕೊನೆಯ ಪದ್ಯದಲ್ಲಿ-
ಲಿಂಗಕಳೆಯ ಮೀರಿದ ಲಿಂಗಕಳೆಯಲಾರೂಢ
ಲಿಂಗಪ್ರಸಾದ ಪ್ರಾಣ ಪರಮ ತತ್ವದ
ಲಿಂಗ ಕೂಡಲಚೆನ್ನಸಂಗನಾದ ಭೇದವನ್ನು
ಲಿಂಗ ಸಂಗ ಪ್ರಭುವಿನ ಕರುಣ ಬಸವಹಾದುದು
ಅಂಗ ಗುಣಗಳನ್ನೆಲ್ಲ ಲಿಂಗಗುಣಗಳಾಗಿ ಲಿಂಗೈಕ್ಯ ನಿರ್ಭರ ಸ್ಥಿತಿಯಳವಟ್ಟ ಬಸವಣ್ಣನವರ ನಿಲುವನ್ನು ಹೇಳಿ ಈ ಹಿರಿಯ ಮಂತ್ರಗೋಪ್ಯ ಮುಕ್ತಾಯಗೊಳ್ಳುತ್ತದೆ. ಆದರೆ ವಚನಗಳಂತೆ ಮಂತ್ರಗೋಪ್ಯದಲ್ಲಿಯೂ ತಪ್ಪದೆ ಅಂಕಿತ ಬಂದಿರುವುದನ್ನು ಗಮನಿಸಬೇಕು. ಇದು ಯಾರು ಪದ್ಯವನ್ನು ಬರೆದಿರುವರೆಂಬುದನ್ನು ಕಂಡುಹಿಡಿಲು ತುಂಬ ಸಹಕಾರಿ. ಹೀಗೆ ಈ ಮಂತ್ರಗೋಪ್ಯದ ಇಪ್ಪತ್ತೇಳು ಪದ್ಯಗಳಲ್ಲಿ ಸಮಸ್ತ ದರ್ಶನ ಸಾರವನ್ನು ಅಂಗೈ ನೆಲ್ಲಿಕಾಯಿಯಂತೆ ತೋರಿಸುವ ಈ ದಾರ್ಶನಿಕರ ಕಾವ್ಯಶಕ್ತಿಯನ್ನೂ ಮೆಚ್ಚಲೇಬೇಕು. ಮೂಲಮಟ್ಟಿನಲ್ಲಿ ಹಾಡಿದಾಗ ಕಾವ್ಯದ ಸೊಗಸು ಮನಂಬುಗುತ್ತದೆ.
ಚನ್ನಬಸವಣ್ಣನವರ ಪದಮಂತ್ರಗೋಪ್ಯದಲ್ಲಿ ಶಿವಯೋಗ ಸ್ವರೂಪ ನಿರ್ಣಯದ ಬಗೆಗೆ ವಿಚಾರ ಮಾಡಿದುದು ಕಂಡು ಬರುತ್ತದೆ.
೧. ಶಿವಯೋಗಸ್ಥಾಪನಾಸ್ಥಲ
ಗುರುವೆ ಪರಶಿವನೆ | ಸಕಲಾಗಮಂಗಳ ಮೂರ್ತಿ
ಗುರುವೆ ಅಜ್ಞಾನ ತಿಮಿರಕ್ಕಂಜನ
ನಾಸ್ತಿ ತತ್ತ್ವಗುರೋಃ ಪರವೆಂದುದಾಗಿ
ಶ್ರೀಗುರು ಪಾದಸೇವೆ ಕಾರಣ ಯೋಗಿಗೆ ||ಪಲ್ಲ||
ಆಕಾರ ನಿರಾಕಾರವೇಕವೆಂದೇ ನೋಡಿ
ಆಕಾರವಿಡಿದು ಅರ್ಚನೆ ಪೂಜೆಯು
ಏಕೋಭಾವದ ನಿಷ್ಠೆ ನಿರ್ವಾಣದಲಿ ನಿಲಲು ನಿ
ನ್ನಾಕಾರ ನಿರಾಕಾರ ತಾನು ತಾನೆ.
ಪಲ್ಲವಿಯಲ್ಲಿ ಹೇಳಿದ ನಗುರೋರಧಿಕವೆಂಬ ಮಾತನ್ನು ಸಮರ್ಥನೆ ಮಾಡಿ ಗುರುಸೇವೆಯಿಂದ ರಹಸ್ಯವರಿತುಕೊಂಡು ಆಕಾರ ನಿರಾಕಾರಗಳನ್ನು ಒಂದೇ ಎನ್ನುವಷ್ಟರ ಮಟ್ಟಿಗೆ ಲಿಂಗಜ್ಞಾನವನ್ನು ಅರ್ಚನೆ ಪೂಜನೆಗಳಿಂದ ಪಡೆದು ಏಕನಿಷ್ಠೆ ನಿರ್ವಾಣದಲ್ಲಿ ನಿಂತರೆ ತನ್ನ ಆಕಾರವಿಡಿದ ದೇಹವೂ ನಿರಾಕಾರವೆಂಬ ಅನುಭವದ ಮಾತಿನ ವಿವರಣೆ ಸಾಗುತ್ತದೆ. ಇಲ್ಲಿ ದೇಹವಿದ್ದೂ ದೇಹಗುಣ ನಷ್ಟವಾಗಿ ಜೀವಗುಣ ನಷ್ಟವಾದ ಶಿವಯೋಗಿಯ ಘನವನ್ನು ವಿವರಿಸುತ್ತಾರೆ. ಕೊನೆಯ ಸೂತ್ರರೂಪವಾದ ಗದ್ಯದಲ್ಲಿ “ಇಂತು ನಮ್ಮ ಶ್ರೀಗುರು ಸ್ತೋತ್ರ ಕರ್ಮಯೋಗನಿರಸನ ಶಿವಯೋಗ ಸ್ಥಾಪ್ಯವ ಮಾಡಿ, ಫಲಪದಂಗಳಂ ನಿರಾಕರಿಸಿ, ತಮ್ಮ ಹೃದಯಾಕಾಶದಲ್ಲಿ ಬೆಳಗುವ ಪರಬ್ರಹ್ಮವನರ್ಚಿಸಿ ಬೆರಸುತಿರ್ದನದೆಂತೆಂದಡೆ; ಮುಂದೆ ಸಕಲ ನಿಷ್ಕಲಾತ್ಮಕವಾದ ಪ್ರಣಮೂರ್ತಿ ಪೂಜಾವಿಧಾನ ಸಂಯೋಗ ಸ್ಥಲವಾದುದು”
ಈ ಏಳೂ ಮಂತ್ರಗಳೂ ಸ್ಥಲಕಟ್ಟಿನ ಅತಿ ಮಹತ್ವದ ಗುಟ್ಟಿನ ವಿಷಯಗಳೇ ಆಗಿವೆ. ಮುಂದಿನವು ಮೂಲ ಪ್ರಣವ ಸಂಯೋಗಸ್ಥಲ, ಪರತತ್ವ ಪ್ರಕಾಶ ಸ್ಥಲ, ಪ್ರಣವ ಸಂಯೋಗ ನಿಜೈಕ್ಯ ಸ್ಥಲ ಹೀಗೆ ಅತ್ಯಂತ ಮಹತ್ವದ ಗೌಪ್ಯವಾದ ವಿಷಯ ಪ್ರತಿಪಾದನೆ ಮಾಡುವ ಈ ಪದಮಂತ್ರಗೋಪ್ಯ ಅತ್ಯಂತ ಮಹತ್ವದ್ದಾಗಿದೆ. ಏಳನೆಯ ಪದಮಂತ್ರಗೋಪ್ಯದ ಕೊನೆಯ ಪದ್ಯ-
ಸೊಡರಿಲ್ಲದ ಬೆಳಗು ಕುಡಿವರಿದ ಪ್ರಭೆಯೊಳಗೆ
ಪಿಡಿದ ಕರ್ಪುರದುರಿಯು ಮರದೊರಗಿತು
ಗಡಣವಿಲ್ಲದ ಪ್ರಭೆಯ ಕುಡಿಯ ಬೆಳಗಿನ ನಡುವೆ
ಹಿಡಿ ಹಿಡಿಯೆ ಬಯಲಾದ ಕೂಡಲ ಚೆನ್ನಸಂಗಯ್ಯನು.
ಲಿಂಗಾಂಗ ಸಾಮರಸ್ಯವನ್ನು ಸಾಧಿಸಿದ ಸಾಧಕನ ಸ್ಥಿತಿಯ ಸ್ವರೂಪ ವರ್ಣನೆ ಮಾಡಿದ ಈ ಕೊನೆಯ ಪದ್ಯದೊಡನೆ ಪದಮಂತ್ರಗೋಪ್ಯ ಮುಕ್ತಾಯವಾಗುತ್ತದೆ. ಈ ಪದಮಂತ್ರಗೋಪ್ಯದ ಪದ್ಯಗಳು ವಿಶೇಷವಾಗಿ ಬೆಡಗಿನಿಂದ ಕೂಡಿದ್ದು ಅವುಗಳ ಅರ್ಥ ಅನುಭಾವಿಗಳಿಗಲ್ಲದೆ ಸಾಮಾನ್ಯರಿಗೆ ಕಷ್ಟವಾದುದು. ಈ ದಾರ್ಶನಿಕರು ಪ್ರಸನ್ನತೆಯ ತಮ್ಮ ಉದ್ದೇಶ ನಿರೂಪಣೆಗೆ ಅರ್ಹವಾದ ವಾಗ್ಝರಿ ಅಭಿವ್ಯಕ್ತಿಸಿ ಪ್ರಾಸಾದಿಕ ಕವಿತ್ವದ ಘನತೆಯನ್ನು ತಂದುಕೊಟ್ಟಿದ್ದಾರೆ.
ಒಟ್ಟಿನಲ್ಲಿ ಮಂತ್ರಗೋಪ್ಯವೆಂಬ ಹೆಸರಿನ ದರ್ಶನ ಸಾಹಿತ್ಯದ ಮುಖ್ಯ ಗುರಿ ಪರಶಿವಲಿಂಗದಿಂದ ಸೃಷ್ಟಿ ಅನ್ಯವಲ್ಲ; ಅವೆರಡೂ ಬಿಚ್ಚಿ ಬೇರಾಗದ ಕೂಡಿ ಒಂದಾಗದ ಶಿವಶಕ್ತ್ಯಾತ್ಮಕ. ಸೃಷ್ಟಿಯಂತೆಯೇ ಜೀವನ ಸೃಷ್ಟಿಯೂ ಕೂಡ. ಜೀವನಿಗೆ ಶಿವನೂ, ಶಿವನಿಗೆ ಜೀವನೂ ಅನ್ಯೋನ್ಯಾಶ್ರಯಗಳೇ ಹೀಗೆ ತನ್ನಲ್ಲಿ ಓತಪ್ರೋತಗೊಂಡು ಆ ಮಹಾತತ್ವವನ್ನು ತನ್ನ ‘ಯೋಗೇನ ಅಪರಾ’ ಎನಿಸುವ ಭಕ್ತಿಯಿಂದ ತನ್ನಲ್ಲಿಯೇ ಸ್ವಾನುಭಾವದಿಂದ ಕಂಡು ತಾನೇ ತಾನಾಗಿ ಆನಂದಿಸುವ ಶಾಸ್ತ್ರಶುದ್ಧ ಮಾರ್ಗವನ್ನು ಬೋಧಿಸುವ ತಿರುಳಿನಂತೆ ಈ ಮಂತ್ರಗೋಪ್ಯ ಕಂಗೊಳಿಸಿದೆ. ಇಂಥ ಅಮೂಲ್ಯ ಸಾಹಿತ್ಯ ರಾಶಿಯನ್ನು ಮಹಾಜ್ಞಾನಿಗಳಾದ ಚನ್ನಬಸವಣ್ಣನವರು ಕನ್ನಡ ಸಾರಸ್ವರ ಪ್ರಪಂಚಕ್ಕೆ, ದಾರ್ಶನಿಕ ಲೋಕಕ್ಕೆ ಸಮರ್ಪಿಸಿ, ಭಾಷೆ ಭಾವಗಳನ್ನು ಶ್ರೀಮಂತಗೊಳಿಸಿದ್ದಾರೆ, ಸತ್ವಯುಕ್ತವನ್ನಾಗಿ ಮಾಡಿದ್ದಾರೆ.
ಚನ್ನಬಸವಣ್ಣನವರು ‘ಶೂನ್ಯಮಂತ್ರಗೋಪ್ಯ’ ಎಂಬ ಮತ್ತೊಂದು ವಚನಕೃತಿಯನ್ನು ರಚಿಸಿದ್ದಾರೆ. ಒಂದೇ ವಚನದಲ್ಲಿ ಈ ರಹಸ್ಯವನ್ನು ಹಿಡಿದಿಟ್ಟಿದ್ದಾರೆ. ಚನ್ನಬಸವಣ್ಣನವರಂತಹ ಪರಮ ಜ್ಞಾನಿಗಳು ಲಿಂಗಾಯತ ಧರ್ಮ ತತ್ವಜ್ಞಾನವನ್ನು ತಮ್ಮ ಶಿಷ್ಯರಿಗೆ ಈ ರೀತಿಯ ಗೋಪ್ಯರೀತಿಯಲ್ಲಿ ಬೋಧಿಸುತ್ತ ಬಂದ ಪರಿಣಾಮವಾಗಿ ಪರಕೀಯ ಧರ್ಮಗಳ ಮತಾಂತರದ ಇಷ್ಟೆಲ್ಲ ಹಾವಳಿಗಳಾದರೂ ಕರ್ನಾಟಕದಲ್ಲಿ ಲಿಂಗಾಯತರು ಹೆಚ್ಚಿನ ಪ್ರಮಾಣದಲ್ಲಿ ಅನ್ಯಧರ್ಮಕ್ಕೆ ಹೋಗಲಿಲ್ಲ ಎನ್ನುವುದು ಗಮನಾರ್ಹ ಸಂಗತಿ. ನಾಥಪಂಥೀಯರು ಉಲಟ್ ಭಾಷೆ ಮೂಲಕ ತಮ್ಮ ಧರ್ಮ ಸಾಹಿತ್ಯವನ್ನು ಸಂರಕ್ಷಿಸಿಕೊಂಡರೆ, ಚನ್ನಬಸವಣ್ಣನವರಾದಿಯಾಗಿ ಎಲ್ಲ ಶರಣರು ಈ ಮಂತ್ರಗೋಪ್ಯದ ಹೆಸರಿನಲ್ಲಿ ಹಾಡುಗಬ್ಬವಾಗಿ ಪರಿವರ್ತಿಸಿ ಸಂರಕ್ಷಿಸಿಕೊಂಡು ಬಂದರು. ಅಂತೆಯೆ ಶರಣರ ಈ ಪ್ರಯತ್ನಕ್ಕೆ ಅನಂತ ಶರಣುಗಳನ್ನು ಸಲ್ಲಿಸಲೇಬೇಕು.