ಚರ್ಚೆ: ಸಾಹಸದಿಂದ ಮುನ್ನುಗ್ಗುವುದೇ ಲಿಂಗಾಯತ ಧರ್ಮೀಯರ ಕರ್ತವ್ಯ

ಕೆ. ವೀರೇಶ ಕುಮಾರ್
ಕೆ. ವೀರೇಶ ಕುಮಾರ್

ಲಿಂಗಾಯತ ಧರ್ಮೀಯರಿಗೆ ಕೊಡುವ ಹಿಂಸೆ, ದೌರ್ಜನ್ಯವನ್ನು ಶತಮಾನಗಳಿಂದ ನಾವು ಎದುರಿಸುತ್ತಲೇ ಬಂದಿದ್ದೇವೆ.

ಬೆಂಗಳೂರು

ಬಸವ ಸಂಸ್ಕೃತಿ ಅಭಿಯಾನದ ಯಶಸ್ಸಿನ ನಂತರ ಹಿಂದುತ್ವ ಸಂಘಟನೆಗಳು ಚಿಗುರುತ್ತಿರುವ ಲಿಂಗಾಯತ ಧರ್ಮವನ್ನು ಚಿವುಟಲು ಮುಂದಾಗಿವೆ.

ಲಿಂಗಾಯತ ಪೂಜ್ಯರ, ಮುಖಂಡರ, ಸಮಾಜದ ಮೇಲೆ ವ್ಯವಸ್ಥಿತ ದಾಳಿ ಶುರುವಾಗಿದೆ. ಬಸವ ಸಂಸ್ಕೃತಿ ಅಭಿಯಾನಕ್ಕೆ ವಿರುದ್ಧವಾಗಿ ತಾಲೂಕು ಮಟ್ಟದಲ್ಲಿ ‘ಬಸವಾದಿ ಶರಣರ ಹಿಂದೂ ಸಮಾವೇಶ’ ಮಾಡಲು ಆರೆಸ್ಸೆಸ್ ಜನ ಸಜ್ಜಾಗುತ್ತಿದ್ದಾರೆ.

ಈ ಬೆಳವಣಿಗೆಗಳನ್ನು ಅರ್ಥೈಸಲು ನಾಡಿನ ಪ್ರಮುಖ ಚಿಂತಕ, ಹೋರಾಟಗಾರರಿಗೆ ಬಸವ ಮೀಡಿಯಾ ಕೆಲವು ಪ್ರಶ್ನೆಗಳನ್ನು ಕೇಳಿದೆ. ಇಂದು ರಾಷ್ಟ್ರೀಯ ಬಸವದಳದ ರಾಜ್ಯಾಧ್ಯಕ್ಷ ಕೆ. ವೀರೇಶ ಕುಮಾರ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಗಮನಿಸಿ – ಈ ಚರ್ಚೆಯಲ್ಲಿ ಹೊಮ್ಮುವ ಅಭಿಪ್ರಾಯಗಳು ಆಯಾ ಲೇಖಕರದು. ಬಸವ ಮೀಡಿಯಾ ಅವುಗಳನ್ನು ಪ್ರಕಟಿಸಲು ಒಂದು ವೇದಿಕೆಯಷ್ಟೆ.

೧) ಅಭಿಯಾನದ ಮೇಲೆ ಲಿಂಗಾಯತ ಪೂಜ್ಯರ, ಮುಖಂಡರ ಮೇಲೆ ಹಿಂದುತ್ವವಾದಿಗಳಿಗೆ ಇಷ್ಟೊಂದು ಉದ್ವೇಗ ಬಂದಿರುವುದು ಏಕೆ?

ಲಿಂಗಾಯತ ಧರ್ಮೀಯರಿಗೆ ಕೊಡುವ ಹಿಂಸೆ, ದೌರ್ಜನ್ಯವನ್ನು ಶತಮಾನಗಳಿಂದ ನಾವು ಎದುರಿಸುತ್ತಲೇ ಬಂದಿದ್ದೇವೆ. ಲಿಂಗಾಯತ ಧರ್ಮ ಹುಟ್ಟಿದಾಗಿನಿಂದ ಇಂತಹ ಸಾವಿರಪಟ್ಟು ಉದ್ವೇಗಗಳನ್ನು ಪಟ್ಟಭದ್ರ ಹಿತಾಸಕ್ತಿಗಳು ಅನುಭವಿಸುತ್ತಲೇ ಬಂದಿವೆ. ಕಲ್ಯಾಣ ಕ್ರಾಂತಿಯಾದಾಗ ಕಂಡ ಕಂಡಲ್ಲಿ ಶರಣರ ಶಿರಶ್ಚೇದನ ಮಾಡಿದರು. ಅಂತರ್ಜಾತಿ ವಿವಾಹದ ನೆಪ ಒಡ್ಡಿ ಅಪ್ಪ ಬಸವಣ್ಣನವರನ್ನು ಗಡಿಪಾರು ಮಾಡಿದರು. ಶರಣ ಹರಳಯ್ಯ, ಮಧುವರಸ ಹಾಗೂ ಶೀಲವಂತರಿಗೆ ಕಾದ ಸಲಾಕೆಗಳಿಂದ ಕಣ್ಣು ಕೀಳಿಸಿ ಆನೆ ಕಾಲಿಗೆ ಕಟ್ಟಿ ಎಳೆಸಿದರು.

ಅಳಿದುಳಿದ ಶರಣರಿಗೆ ಬಹಿಷ್ಕಾರ ಹಾಕಿದರು. ೨೦ನೇ ಶತಮಾನದಲ್ಲಿ ಸ್ವಾಮಿ ಪೂಜ್ಯ ಲಿಂಗಾನಂದರು ಬಸವಣ್ಣನವರೇ ಧರ್ಮಗುರು ಎಂದು ಹೇಳಿದಾಗ ಕಲ್ಲು ಹೊಡೆದರು. ಲಿಂಗಾಯತ ಧರ್ಮದ ಪ್ರಕಾರ ೧೯೭೦ರಲ್ಲಿ ಮಹಿಳಾ ಪೀಠ ಮಾಡಿದಾಗ ಬೊಬ್ಬೆ ಹಾಕಿದರು. ಅಷ್ಟೇ ಏಕೆ ಪಂಚಪೀಠದವರು ವಿರಕ್ತ ಮಠಾಧೀಶರನ್ನು ಕೀಳಾಗಿ ಕಂಡರು.

ಬಸವ ತತ್ವಗಳು ಪ್ರಚಾರವಾದರೆ ಸಮಾನತೆಯ ಸಮಾಜವನ್ನು ಬಯಸದ ಹಿಂದುತ್ವವಾದಿಗಳಿಗೆ ಇಷ್ಟವಿಲ್ಲ. ಇಂತಹ ಸಹಸ್ರಾರು ವಿರೋಧಿಗಳು ಬಂದರೂ ನಾವು ಹೆದರುವುದಿಲ್ಲ.

೨) ಲಿಂಗಾಯತರ ಮೇಲೆ ಕೆಲವು ಸ್ವಾಮೀಜಿಗಳನ್ನು, ನಾಯಕರನ್ನು ಛೂ ಬಿಟ್ಟಿದ್ದಾರೆ. ಲಿಂಗಾಯತರ ವಿರುದ್ಧ ಸಮಾವೇಶ, ಹೋರಾಟ ಮಾಡುವ ಬೆದರಿಕೆ ಹಾಕಿದ್ದಾರೆ ಇವರ ಉದ್ದೇಶವೇನು?

ಅಜ್ಞಾನ ಮತ್ತು ಅಂಧಾಕಾರ ತುಂಬಿದಂತಹ ಕಾವಿ ಹಾಕಲು ಅನರ್ಹರಾದಂತಹ ಸ್ವಾಮೀಜಿಗಳನ್ನು ಹಿಂದುತ್ವವಾದಿಗಳು ಆಯ್ಕೆ ಮಾಡಿಕೊಳ್ಳುತ್ತಾರೆ. ಅವರಿಗೆ ಪ್ರಚಾರದ ಹುಚ್ಚು, ಲಿಂಗಾಯತ ಧರ್ಮಕ್ಕೆ ಸಹಕಾರವಾಗಿ ನಿಂತ ರಾಜಕಾರಣಿಗಳನ್ನು ಹೆದರಿಸಲು ಇಂತಹ ಸೂತ್ರಗಳನ್ನು ಬಳಸುತ್ತಾರೆ.

೩) ಲಿಂಗಾಯತ ಪೂಜ್ಯರ ಹಾಗೂ ಮುಖಂಡರ ಮೇಲೆ ಬಳಕೆಯಾಗುತ್ತಿರುವ ಭಾಷೆಗೆ ನಿಮ್ಮ ಪ್ರತಿಕ್ರಿಯೆ ಏನು?

“ಆನೆಯು ಹೋಗುವಾಗ ಶ್ವಾನ ಬೊಗಳಿದರೆ ಆನೆಯು ಶ್ವಾನಗೆ ಗದರಲು ಆನೆಗೆ ಅಭಿಮಾನದ ಹಾನಿ ಸರ್ವಜ್ಞ” ಎಂದು ಬಸವಾನುಯಾಯಿ ಸರ್ವಜ್ಞ ಹೇಳಿದ್ದಾರೆ. ನಾಲಿಗೆ ತನ್ನ ಕುಲವನರಸಿತು ಎಂಬ ಗಾದೆ ಮಾತಿದೆ. ನುಡಿದರೆ ಮುತ್ತಿನ ಹಾರದಂತಿರಬೇಕು ಎಂಬ ಧರ್ಮದವರು ನಾವು. ಹೀಗಿರುವಾಗ ಅವರ ಕೀಳು ಮನಸ್ಥಿತಿಗೆ ನಾವೇಕೆ ಪವಿತ್ರವಾದ ನಮ್ಮ ನಾಲಿಗೆಯನ್ನು ಹೊಲಸು ಮಾಡಿಕೊಳ್ಳಬೇಕು.

೪) ಈ ಸಂದರ್ಭದಲ್ಲಿ ಲಿಂಗಾಯತ ಪೂಜ್ಯರ, ಮುಖಂಡರ ಪರವಾಗಿ ಬಸವ ಸಂಘಟನೆಗಳು ನಿಲ್ಲಬೇಕೆ? ಅವರೇನು ಮಾಡಬೇಕು?

ತುಳಿತಕ್ಕೊಳಗಾದವರ ಪರವಾಗಿ ನಿಲ್ಲಬೇಕು. ದೀನದಲಿತರ, ಅಸ್ಪೃಶ್ಯರ ಧರ್ಮಬಹಿಷ್ಕೃತರ ಪರವಾಗಿ ನಿಲ್ಲಬೇಕು ಇದುವೇ ನಿಜವಾದ ಬಸವತತ್ವ.

ಧರ್ಮಬಹಿಷ್ಕೃತರು ಹಾಗೆಯೇ ಇರಲಿ ಎಂಬುದು ಹಿಂದುವಾದಿಗಳ ಉದ್ದೇಶ. ಇದಕ್ಕೆ ನಮ್ಮ ಸನ್ನಡತೆಯೇ ಉತ್ತರವಾಗಬೇಕು.

೫) ಈ ಬೆಳವಣಿಗೆಗಳಿಂದ ಲಿಂಗಾಯತ ಧರ್ಮದ ಧಾರ್ಮಿಕ ಸ್ವಾತಂತ್ರಕ್ಕೆ ಧಕ್ಕೆ ಬಂದಿದೆಯೇ? ಅದನ್ನು ಉಳಿಸಿಕೊಳ್ಳವುದು ಹೇಗೆ?

೮೫೦ ವರ್ಷಗಳಿಂದಲೂ ಉಳಿದುಕೊಂಡು ಬಂದಿದೆ, ಅಷ್ಟೇ ಅಲ್ಲ ಧರ್ಮಪಿತರ ಕಾಲದಲ್ಲಿ ೧,೯೬,೦೦೦ ಜನ ಅನುಯಾಯಿಗಳಿದ್ದ ಧರ್ಮ ಇಂದು ೫ ಕೋಟಿ ದಾಟಿದೆ.

ಏಸುಕ್ರಿಸ್ತರನ್ನು ಮತ್ತವರ ಅನುಯಾಯಿಗಳನ್ನು ಶಿಲುಬೆಗೇರಿಸಿದರೂ ಇಂದು ಕ್ರಿಶ್ಚಿಯನ್ ಧರ್ಮ ಕೋಟಿ ಕೋಟಿ ದಾಟಿದೆ. ಹೀಗಿರುವಾಗ ಧಕ್ಕೆ ಬರುವ ಪ್ರಶ್ನೆ ಎಲ್ಲಿಂದ ಬಂತು, ಧರ್ಮಾನುಯಾಯಿಗಳ ಪ್ರಾಮಾಣಿಕತನವೇ ಧರ್ಮವನ್ನು ಬೆಳೆಸುವ ಮಾರ್ಗ.

೬) ಸಾರ್ವಜನಿಕ ಸಂವಾದದಲ್ಲಿ ನಾವು ಸಭ್ಯತೆ ಕಳೆದುಕೊಳ್ಳಬೇಕೆ? ನಮ್ಮ ಸೈದ್ಧಾಂತಿಕ ವಿರೋಧಿಗಳ ಮೇಲೆ ನಾವು ಅದೇ ಭಾಷೆ ಬಳಸಬೇಕೆ?

ಸೌಮ್ಯತೆ ಕಳೆದುಕೊಳ್ಳುವವರು ದುರ್ಬಲರು. ಸತ್ಯದ ಪರವಿರುವವರು ಆತ್ಮಸ್ಥೈರ್ಯ ಕಳೆದುಕೊಳ್ಳುವುದಿಲ್ಲ. ಸುಳ್ಳಿನ ಪ್ರತಿಪಾದನೆ ಅವರದು, ಸತ್ಯದ ನಿಲುವು ನಮ್ಮದು. ಭಾಷೆಯ ವಿಷಯವಾಗಿ ಈಗಾಗಲೇ ಹೇಳಿದ್ದೇನೆ.

೭) ಈ ಸಮಯದಲ್ಲಿ ಬಸವಾದಿ ಶರಣರಿದ್ದಿದ್ದರೆ ಏನು ಮಾಡುತ್ತಿದ್ದರು?

ತೂಗುಗತ್ತಿಯ ಕೆಳಗೆ ಲಿಂಗಪೂಜೆಯ ಮಾಡಿಕೊಂಡವರು ಅವರು. ಎಂತಹ ಸಂದಿಗ್ದ ಪರಿಸ್ಥಿತಿಯಲ್ಲೂ ಕರ್ತವ್ಯ ನಿಷ್ಠೆ, ಧರ್ಮನಿಷ್ಠೆಯಿಂದ ಶರಣರು ಹಿಂದೆ ಸರಿದವರಲ್ಲ. ಅವರು ಇಂದು ದೈಹಿಕವಾಗಿ ಇಲ್ಲದಿರಬಹುದು, ಅವರ ಚೈತನ್ಯ ಇಂದಿನ ಶರಣ ಮಾರ್ಗಗಳ ಚಲನಶೀಲತೆಯಲ್ಲಿ ಅಡಕವಾಗಿದೆ. ಸಾಹಸಿಗಳಾದ ಲಿಂಗಾಯತ ಧರ್ಮೀಯರು ಮುನ್ನುಗ್ಗುವುದೇ ಕರ್ತವ್ಯ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/H81yNL3dGRcHb7EBxL5oqr

Share This Article
2 Comments
  • ನಮ್ನ ವಿರುದ್ಧ ಪ್ರಚಾರಕ್ಕೆ ನಿಂತಿರುವ ಈ ಆರ್ಎಸ್ಎಸ್ ಮನುವಾದಿಗಳಿಗೆ ಮಾತಿನಿಂದಲೇ ಮಣಿಸಬೇಕು ಅವರಿಗೆ.

Leave a Reply

Your email address will not be published. Required fields are marked *