ಆರೆಸ್ಸೆಸ್ ವಿರೋಧಿ ದಲಿತ ಸಮಾವೇಶಕ್ಕೆ ಬಸವ ಸಂಘಟನೆಗಳ ಬೆಂಬಲ

ಬಸವ ಮೀಡಿಯಾ
ಬಸವ ಮೀಡಿಯಾ

ಬೆಂಗಳೂರು

ದಲಿತ ಸಂಘರ್ಷ ಸಮಿತಿಗಳ ಒಕ್ಕೂಟದ ವತಿಯಿಂದ ನವೆಂಬರ್ 11 ನಗರದ ಗಾಂಧಿ ಭವನದಲ್ಲಿ ಆರೆಸ್ಸೆಸ್‌ ವಿರುದ್ಧ ನಡೆಯಲಿರುವ ಸಮಾವೇಶಕ್ಕೆ ಬಸವ ಸಂಘಟನೆಗಳು ಬೆಂಬಲ ಸೂಚಿಸಿವೆ.

‘ದಸಂಸ ಪ್ರತಿರೋಧ ಸಮಾವೇಶ’ವನ್ನು ಆಯೋಜಿಸಿರುವ ದಲಿತ ಸಂಘರ್ಷ ಸಮಿತಿಗಳ ಒಕ್ಕೂಟ ಭಾರತದ ಸಂವಿಧಾನದ ಮೇಲೆ ಯುದ್ಧ ಸಾರಿರುವ ಆರೆಸ್ಸೆಸ್, ಬಿಜೆಪಿಯವರ ಆಟ ಬಯಲುಗೊಳಿಸಿ ತಕ್ಕ ಪಾಠ ಕಲಿಸದೇ ಇದ್ದರೆ ಭಾಗ್ಯವಿಧಾತ ಭಾರತವನ್ನು ಬಲಿ ಭಾರತವನ್ನಾಗಿಸುತ್ತಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

“ಶತಮಾನೋತ್ಸವದ ಉನ್ಮಾದದ ಅಮಲಿನಲ್ಲಿರುವ ಆರೆಸ್ಸೆಸ್-ಬಿಜೆಪಿಗಳಿಗೆ ಮತ್ತೆ ಮನುಸ್ಮೃತಿ ಜಾರಿಗೆ ಬರಬೇಕಿದೆ. ಚಾತುರ್ವರ್ಣ ಪದ್ಧತಿಯಂತೆ ಎಸ್‌ಸಿ, ಎಸ್‌ಟಿ, ಒಬಿಸಿ ಸಮುದಾಯಗಳು ಇವರ ಜೀತದಾಳುಗಳಾಗಬೇಕಿದೆ. ಈ ಕಾರಣಕ್ಕಾಗಿಯೇ, ಆರೆಸ್ಸೆಸ್ ಹೇಳಿದಂತೆ ಕೇಳುವ ರಾಜಕಾರಣಿಗಳು ಇವರಿಗೆ ಬೇಕು,” ಎಂದು ತಿಳಿಸಿದೆ.

ದಲಿತ ಸಂಘಟನೆಗಳ ಒಕ್ಕೂಟ ನಡೆಸುವ ಆರೆಸ್ಸೆಸ್ ವಿರುದ್ಧದ ಸಮಾವೇಶವನ್ನು ವಿಶ್ವಗುರು ಬಸವಣ್ಣನವರ ಅನುಯಾಯಿಗಳ ಒಕ್ಕೂಟ ಬೆಂಬಲಿಸಿ ಭಾಗವಹಿಸುತ್ತದೆಂದು ರಾಜ್ಯಾಧ್ಯಕ್ಷ ಓಂಕಾರಪ್ಪ ಚೊಂಡಿ ತಿಳಿಸಿದ್ದಾರೆ.

ಶನಿವಾರ ಮಾಧ್ಯಮಗಳಿಗೆ ಕಳಿಸಿರುವ ಪ್ರಕಟಣೆಯಲ್ಲಿ “ಭಾರತದ ಮೂಲನಿವಾಸಿಗಳಾದ ಕನ್ನಡಿಗರು ಸೇರಿದಂತೆ ದ್ರಾವಿಡರ ಮೇಲೆ ಸಂಘ ಪರಿವಾರ ದಾಳಿ ಮಾಡುತ್ತಿದೆ. ಬಸವಾದಿ ಶರಣರ ತತ್ವ ಚಿಂತನೆಯ ಆಶಯಗಳನ್ನು ತಿರುಚಿ ಹೇಳುತ್ತಿದೆ. ವಚನ ದರ್ಶನ ಪುಸ್ತಕ ಪ್ರಕಟಿಸಿ ಲಿಂಗಾಯತ ಧರ್ಮಿಯರ ದಿಕ್ಕುತಪ್ಪಿಸುವ ಪ್ರಯತ್ನವನ್ನು ಸಂಘ ಪರಿವಾರ ಮುಂದುವರೆಸಿದೆ.

ದಲಿತರ ಮೇಲೆ ದಲಿತರನ್ನು, ಲಿಂಗಾಯತರ ಮೇಲೆ ಲಿಂಗಾಯತರನ್ನು ಛೂ ಬಿಡುವ ಕೆಲಸವನ್ನು ಆರೆಸ್ಸೆಸ್ ವ್ಯವಸ್ಥಿತವಾಗಿ ಮಾಡುತ್ತಿದೆ. ಬಸವವಾದಿ, ಅಂಬೇಡ್ಕರವಾದಿ, ಸಂವಿಧಾನವಾದಿಗಳನ್ನು ಗುರಿಯಾಗಿಸಿಕೊಳ್ಳಲಾಗಿದೆ, ಎಂದು ಚೊಂಡಿ ತಿಳಿಸಿದ್ದಾರೆ.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/H81yNL3dGRcHb7EBxL5oqr

Share This Article
Leave a comment

Leave a Reply

Your email address will not be published. Required fields are marked *