ಧಾರವಾಡ
ಇಂದು ನಗರದಲ್ಲಿ ನಡೆಯುತ್ತಿರುವ ಬಸವ ಸಂಸ್ಕೃತಿ ಅಭಿಯಾನದ ಸಂಜೆಯ ಸಮಾವೇಶದಲ್ಲಿ ಡಾ. ಎಚ್. ಎಸ್. ಅನುಪಮಾ ವ್ಯಸನಮುಕ್ತ ಸಮಾಜಕ್ಕೆ ಶರಣರ ಕೊಡುಗೆ ವಿಷಯದ ಮೇಲೆ ಮಾತನಾಡಿದರು.
ಭಾಂಡ ಭಾಜನ ಶುದ್ಧವಿಲ್ಲದಿದ್ದರೆ, ಮಾಡುವ ಪೂಜೆ ಹೆಂಡದ ಮಡಕೆಯ ಹೊರಗೆ ತೊಳೆದಂತೆ ಎಂಬ ಬಸವಣ್ಣನವರ ಮಾತಿನಂತೆ ನಾವು ಯಾವ ವ್ಯಸನಕ್ಕೂ ದಾಸರಾಗಬಾರದು. ಹೆಂಡದ ಮಾರಯ್ಯ ಕಲ್ಯಾಣಕ್ಕೆ ಬಂದು ತನ್ನ ಪೂರ್ವ ವೃತ್ತಿಯನ್ನು ಬಿಟ್ಟು ಹನ್ನೆರಡು ವಚನ ಬರೆದರು. ತನ್ನೆಲ್ಲ ಗಿರಾಕಿಗಳನ್ನು ವ್ಯಸನಮುಕ್ತರನ್ನಾಗಿ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ.

ನಂತರ ಪಾನಕ ಮಾರುವ ಕಾಯಕವನ್ನು ಪ್ರಾರಂಭಿಸಿದರು. ನಂತರದಲ್ಲಿಯೂ ತಮ್ಮ ಹೆಸರನ್ನು ಬದಲಿಸಿಕೊಳ್ಳದೇ ಇಂತಹ ವ್ಯಕ್ತಿಯಾಗಿದ್ದ ನಾನು ಮುಂದಿನ ಭವಿಷ್ಯದಲ್ಲಿ ಜನರಿಗೆ ಗೊತ್ತಾಗಲಿ ಎಂದು ಅದೇ ಹೆಸರಿನಿಂದ ಇಂದಿಗೂ ಪ್ರಸ್ತುತವಾಗಿದ್ದಾರೆ.
ಅಷ್ಟಮದಗಳು ವ್ಯಸನಕ್ಕೆ ಕಾರಣ ಎನ್ನುತ್ತಾರೆ ಶರಣರು. ಈ ಎಲ್ಲಾ ಮದಗಳನ್ನು ಇಳಿಸುವ ನಿಟ್ಟಿನಲ್ಲಿ ನಾವು ಕಾರ್ಯೋನ್ಮುಖರಾಗಬೇಕು. ಯಾಕೆ ಮನಸ್ಸು ವ್ಯಸನದ ಕಡೆಗೆ ಹೋಗುತ್ತದೆ. ಮಾನಸಿಕ-ದೈಹಿಕ ದೌರ್ಬಲ್ಯ, ಕೆಲವು ಆನುವಂಶಿಕ, ಇನ್ನು ಕೆಲವು ಆತ್ಮಗೌರವ ಇಲ್ಲದಿರುವುದು.
ವೃತ್ತಿ ಸಂತೃಪ್ತಿ ಕೊಡದಿದ್ದರೆ ಆತ್ಮಗೌರವ ಕಳೆದುಹೋಗುತ್ತದೆ. ಸ್ನೇಹ ಸಂಬಂಧದ ಕೊರತೆಯಿದ್ದರೆ, ಅಧಿಕಾರ ಸಂಬಂಧಗಳು ಇದ್ದೂ ಏನೂ ಇಲ್ಲದ ಅನಾಥ ಭಾವ ವ್ಯಸನದೆಡೆಗೆ ಕರೆದೊಯ್ಯುತ್ತದೆ. ಶ್ರಮ ವರ್ಗದವರಿಗೂ ಬೆಲೆ ಇಲ್ಲವಾದರೆ ಅವರೂ ವ್ಯಸನಿಗಳಾಗುತ್ತಾರೆ.
ಹೆಣ್ಣು ಮಕ್ಕಳು ಎಷ್ಟು ಬಾಧೆಗಳನ್ನು ಹೊತ್ತರೂ ವ್ಯಸನಿಗಳಾಗಲಾರರು, ಕಾರಣ ಭಾರತದಲ್ಲಿ ಗಂಡಸರಿಗೆ ನೀನೇ ಮೇಲು ಎಂಬ ಭಾವನೆಯನ್ನು ತುಂಬಿ ಬೆಳೆಸುವುದು, ನಂತರದಲ್ಲಿ ಅದು ಎಲ್ಲಿ ಕಡಿಮೆಯಾಗುತ್ತದೆಯೋ ಎಂಬ ಭಯಕ್ಕೆ ಬಿದ್ದು ವ್ಯಸನದತ್ತ ವಾಲುತ್ತಾರೆ. ತುಂಬಾ ವಿರಾಮ ಸಿಗುವ ಪುರುಷರು ಕೂಡ ವ್ಯಸನಿಗಳಾಗುತ್ತಾರೆ.

ಈ ಕಾರಣದಿಂದಲೇ ಗಂಡು ಹೆಣ್ಣು ಎಂಬ ಭೇದವಿಲ್ಲದೇ ಬೆಳೆಸಬೇಕು, ಅವರನ್ನು ಗಂಡುಮಕ್ಕಳಾಗಿ ಬೆಳೆಸದೆ ಮನುಷ್ಯರನ್ನಾಗಿ ಬೆಳೆಸಬೇಕು. ಆಗ ಬಸವಣ್ಣನವರಿಗೆ ನಿಜವಾಗಿಯೂ ಖುಷಿಯಾಗುತ್ತದೆ.
ಶರಣರಿಗೆ ಎಲ್ಲರೂ ಒಂದೇ ಆಗಿದ್ದರು. ಅವರು ಕುಲವನ್ನು ಅರಸುತ್ತಿರಲಿಲ್ಲ. ಅವರಿಗೆ ಎಂದಿಗೂ ಆತ್ಮಗೌರವ ಕಡಿಮೆ ಆಗೇ ಇಲ್ಲಾ, ಕಾಯಕವನ್ನು ಪೂಜಿಸಿದ ಅವರು ನಮ್ಮ ಆತ್ಮಗೌರವ ಕುಂದದಂತೆ ಕಾಪಾಡಿಕೊಂಡರು. ಕಾಯಕದ ನಂತರ ದಾಸೋಹವನ್ನು ಹೇಳಿದ ಶರಣಪಥ ಮೇಲಿನ ಖರ್ಚುಗಳನ್ನು ಕಡಿಮೆ ಮಾಡುವ ಉಪಾಯ ಒದಗಿಸುತ್ತದೆ. ಸತಿ-ಪತಿ ಒಂದೇ ಎಂಬ ಭಾವ ಶರಣರದ್ದು. ಅಲ್ಲಿ ಮೇಲು ಕೀಳು ಎಂಬ ಭಾವನೆ ಇಲ್ಲದಿದ್ದರೆ ಮಕ್ಕಳ ಭವಿಷ್ಯ ಉಜ್ವಲಗವಾಗಿರುತ್ತದೆ.
ಯೋಚಿಸಿ ಗುಂಪಾಗಿ ಕೆಲಸ ಮಾಡುವ ಸಾಮರ್ಥ್ಯ ಮನುಷ್ಯರಿಗೆ ಮಾತ್ರವೇ ಇದೆ. ಅದನ್ನು ಒಳ್ಳೆಯದಕ್ಕೇ ಬಳಸಿಕೊಳ್ಳೋಣ. ಇದಕ್ಕೆ ಅನುಭವ ಮಂಟಪವೇ ಉತ್ತಮ ಉದಾಹರಣೆ. ಇವೆಲ್ಲವನ್ನೂ ಅಳವಡಿಸಿಕೊಂಡಾಗ ವ್ಯಸನಮುಕ್ತ ಸಮಾಜ ನಿರ್ಮಾಣ ಸಾಧ್ಯ ಎನಿಸುತ್ತಿದೆ.