ಸಾಣೇಹಳ್ಳಿ
ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮಿಗಳು ಕರ್ನಾಟಕದಲ್ಲಿ ಮೊಟ್ಟಮೊದಲ ಬಾರಿಗೆ ಸಹಪಂಕ್ತಿ ಬೋಜನದ ವ್ಯವಸ್ಥೆ ಮಾಡಿದರು. ಬಸವಣ್ಣನವರ ತತ್ವಗಳನ್ನು ತಲೆ ಮೇಲೆ ಹೊತ್ತುಕೊಂಡು ಶರಣರ ವಿಚಾರಗಳನ್ನು ಜನಮಾನಸದಲ್ಲಿ ಬಿತ್ತಿದರು.
ಶುಕ್ರವಾರ ನಡೆದ `ದಿಟ್ಟ ಹೆಜ್ಜೆಯ ಧೀರ ಪ್ರಭು’ (ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮಿಗಳು) ವಿಷಯ ಕುರಿತ ‘ದಂದಣ ದತ್ತಣ’ ಗೋಷ್ಠಿಯ ಸಾನ್ನಿಧ್ಯವಹಿಸಿದ್ದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು ಇಲ್ಲಿನ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಮಕ್ಕಳಿಗೆ ತಮ್ಮ ಗುರುಗಳ ಜೀವನ, ಸಾಧನೆಯನ್ನು ಪರಿಚಯ ಮಾಡಿಕೊಟ್ಟರು.’
ಶಿವಾಚಾರ್ಯ ಸ್ವಾಮಿಗಳು ಯಾರನ್ನೂ ಜಾತಿಯಿಂದ ಅಳೆಯದೇ ನೀತಿಯಿಂದ ಅಳೆಯಬೇಕು ಎಂದು ಹೇಳಿ ಸಮಸಮಾಜವನ್ನು ನಿರ್ಮಾಣ ಮಾಡಿದರು. ಎಲ್ಲ ವರ್ಗದ ಜನರನ್ನು ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಜವಾನನಿಂದ ದಿವಾನವರೆಗೂ ಎಲ್ಲರೂ ಸಮಾನರು ಎಂದು ಹೇಳಿ ಅದರಂತೆ ಕಾಣುತ್ತಿದ್ದರು.
ವಚನ ಸಾಹಿತ್ಯ, ಶರಣ ಸಾಹಿತ್ಯ ಎಂದರೆ ಬಹಳ ಒಲವು. ಕಲಾಸಂಘದ ಮೂಲಕ ಶರಣರ ನಾಟಕಗಳನ್ನು ಆಡಿಸುತ್ತಿದ್ದರು. ಎಲ್ಲ ಕೆಲಸಗಳನ್ನು ಪ್ರೀತಿಯಿಂದ ತಾವು ಮಾಡಿ ಇನ್ನೊಬ್ಬರಿಗೆ ಕಲಿಸಿಕೊಡುತ್ತಿದ್ದರು.
ಶಿವಾಚಾರ್ಯ ಸ್ವಾಮಿಗಳವರಲ್ಲಿ ವೈಚಾರಿಕತೆ ತುಂಬಿ ತುಳುಕುತ್ತಿತ್ತು. ಮೌಢ್ಯ ಅವರಿಂದ ಬಹುದೂರ.
ಅಮವಾಸ್ಯೆಯ ದಿನದಂದೇ ಅನೇಕ ಜನರಿಗೆ ಮದುವೆ ಮಾಡಿಸಿದ ನಿದರ್ಶನಗಳಿವೆ. ಆ ಎಲ್ಲ ಕುಟುಂಬಗಳು ಇವತ್ತಿಗೂ ಸುಖ ಸಂಸಾರಗಳಾಗಿ ಸಮಾಜದಲ್ಲಿ ತಲೆ ಎತ್ತಿ ಬಾಳುತ್ತಿದ್ದಾರೆ. ಅಶುಭ ಎನ್ನುವಂಥದ್ದು ಎಲ್ಲಿಯೂ ಇಲ್ಲ ಎಂದು ಮೌಢ್ಯಗಳನ್ನು ಹೊಡೆದು ಹಾಕಿ ವೈಚಾರಿಕತೆಯನ್ನು ಸಮಾಜವನ್ನು ನಿರ್ಮಾಣ ಮಾಡಿದರು. ಸುಣಕಲ್ಲು ಬಿದರಿನಲ್ಲಿ ಶಾಲೆಯ ಕಟ್ಟಡದ ಭೂಮಿ ಪೂಜೆಯನ್ನು ಹರಿಜನರಿಂದ ಮಾಡಿಸಿದ್ದು ಅವರ ವೈಚಾರಿಕತೆಗೆ ಹಿಡಿದ ಕನ್ನಡಿ.
ಶಿವಾಚಾರ್ಯ ಸ್ವಾಮಿಗಳು ೪೦ ವರ್ಷಗಳ ಸುದೀರ್ಘವಾಗಿ ಮಠದ ಜವಾಬ್ದಾರಿಯನ್ನು ನಿರ್ವಹಿಸಿದರು. ಅವರು ಪಟ್ಟಾಧಿಕಾರವಾದಾಗ ಹೂವಿನ ಹಾಸಿಗೆಯಾಗಿರಲಿಲ್ಲ. ಮುಳ್ಳಿನ ಹಾಸಿಗೆಯಾಗಿತ್ತು. ವಿರೋಧವಾಗಿದ್ದ ಕಾಲದಲ್ಲೇ ಯಾವುದಕ್ಕೂ ಹೆದರದೇ ದಿಟ್ಟತನದಿಂದ ಹೋರಾಡಿದರು. ಅವರು ಧೋರಣೆಗಳೇ ತುಂಬಾ ವಿಶಿಷ್ಟವಾಗಿದ್ದವು. ಯಾವುದೇ ಕಾಯಕ ಮಾಡಿದರೂ ಸತ್ಯಶುದ್ಧವಾಗಿರಬೇಕು ಅದು ಸತ್ಯ, ನಿಷ್ಠೆ, ಪ್ರಾಮಾಣಿಕತೆಯಿಂದ ಕೂಡಿರಬೇಕು ಎಂದು ಶ್ರೀಗಳವರು ಹೇಳುತ್ತಿದ್ದರು ಎಂದರು.
ಸಿರಿಗೆರೆ ಮಠವನ್ನು ದುಗ್ಗಾಣಿ ಮಠ ಎಂದು ಕರೆಯುತ್ತಿದ್ದರು. ಯಾರಾದರೂ ಮುಖಂಡರು ಮಠಕ್ಕೆ ಬಂದರೆ ಮಠದಲ್ಲಿ ಅವರಿಗೆ ಅನ್ನ ಮಾಡಲಿಕ್ಕೆ ಅಕ್ಕಿ ಇರುತ್ತಿರಲಿಲ್ಲ. ಬೇರೆಯವರ ಮನೆಯಲ್ಲಿ ಕಡವಾಗಿ ತೆಗೆದುಕೊಂಡು ಬಂದು ಊಟಕ್ಕೆ ಮಾಡಿಸುತ್ತಿದ್ದರು. ಇಂತಹ ದುಗ್ಗಾಣಿ ಮಠವನ್ನು ದುಡಿಯುವ ಮಠವನ್ನಾಗಿ ಮಾಡಿದವರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು.
ಶ್ರೀಗಳ ಮನಸ್ಸು ಮೃದು, ಮಾತು ಕಠೋರವಾಗಿದ್ದವು. ಏನಾದರೂ ಕೆಲಸ ಕಾರ್ಯ ಮಾಡಿದರೆ ಹಣ ಇಟ್ಟುಕೊಂಡು ಮಾಡಿದವರಲ್ಲ. ಜನರ ಪ್ರೀತಿ ವಿಶ್ವಾಸವನ್ನಿಟ್ಟುಕೊಂಡು ಕೆಲಸ ಮಾಡಿದರು. ೪೦ ವರ್ಷಗಳ ಅವಧಿಯಲ್ಲಿ ಮಠ ಹಾಗೂ ಸಮಾಜದ ಶಿಷ್ಯರು ಆರ್ಥಿಕವಾಗಿ ಸುಸ್ಥಿತಿಯಲ್ಲಿರುವಂತೆ ಮಾಡಿದರು. ಹೀಗೆ ಒಬ್ಬರನ್ನು ಒಂದೊಂದು ಕೆಲಸದಲ್ಲಿ ತೊಡಗಿಸುವಂಥ ಗುಣ ಅವರಲ್ಲಿ. ನಿರಂತರವಾಗಿ ಓದು ಬರಹಗಾರರಾಗಿದ್ದರು. ಒಂದು ಸಾರಿ ಬರೆದದ್ದನ್ನು ತಿದ್ದುವ, ತೀಡುವ ಪ್ರವೃತ್ತಿ ಇಟ್ಟುಕೊಂಡಿರಲಿಲ್ಲ.
ಶ್ರೀಗಳವರದು ತಾಯಿಯ ಹೃದಯ. ಒಬ್ಬ ಯಾರಾದರೂ ತಪ್ಪು ಮಾಡಿದರೆ ಅವರನ್ನು ತಿದ್ದುವ ಹೃದಯ ಶ್ರೀಮಂತಿಕೆ ಅವರಲ್ಲಿತ್ತು. ಒಬ್ಬ ವ್ಯಕ್ತಿಯನ್ನು ಬೆಳೆಸಬೇಕು ಎನ್ನುವ ಭಾವನೆ ಬೆಳೆಸಿಕೊಂಡಿದ್ದರು. ಸಾಮಾನ್ಯ ವ್ಯಕ್ತಿಯಿಂದ ಅಸಮಾನ್ಯ ಕೆಲಸವನ್ನು ಮಾಡಿಸುವ ಚೇತನ ಅವರು. ಯಾರನ್ನೂ ಮೇಲು-ಕೀಳು ಎಂದು ಭಾವಿಸಿಕೊಳ್ಳದೇ ಎಲ್ಲರನ್ನೂ ಸಮಾನವಾಗಿ ಕಂಡು ಪ್ರೀತಿಸುತ್ತಿದ್ದರು. ಇವತ್ತಿಗೂ ಅನೇಕ ಜನರು ಗುರುಗಳ ಕಾರಣದಿಂದ ನಮ್ಮ ಮನೆತನ ಬೆಳೆಯಿತು ಎಂದು ಹೃದಯದಲ್ಲಿಟ್ಟುಕೊಂಡು ಪೂಜೆ ಮಾಡುವವರಿದ್ದಾರೆ. ಯಾವುದೇ ಹಳ್ಳಿಗೆ ಹೋದರೂ ಮುಂಚಿತವಾಗಿ ಸುತ್ತಮುತ್ತಲ ಹಳ್ಳಿಯ ಹತ್ತಾರು ಜನ ಮುಖಂಡರಿಗೆ ಪತ್ರ ಬರೆಯುತ್ತಿದ್ದರು. ಅವರನ್ನು ಕೂರಿಸಿಕೊಂಡು ಕ್ಷೇಮ ಸಮಾಚಾರ ವಿಚಾರಿಸುತ್ತಿದ್ದರು. ಎಲ್ಲರನ್ನು ನಮ್ಮವರು ಎಂದು ನಂಬುತ್ತಿದ್ದರು. ಆ ನಂಬಿಕೆಯೇ ಸಮಾಜ ಇಷ್ಟು ಎತ್ತರಕ್ಕೆ ಬೆಳೆಯುಲು ಸಾಧ್ಯವಾಯಿತು.
ಶಿಷ್ಯರ ಬಗ್ಗೆ ಅಪಾರ ನಂಬಿಕೆಯನ್ನಿಟ್ಟುಕೊಂಡಿದ್ದರು. ನಂಬಿಕೆಗೆ ದ್ರೋಹ ಬಗೆದರೆ ತಕ್ಷಣ ಕ್ರಮ ತೆಗೆದುಕೊಂಡು ಜಾಗೃತರನ್ನಾಗಿ ಮಾಡುತ್ತಿದ್ದರು. ಯಾರಾದರೂ ತಪ್ಪು ಮಾಡಿದರೆ ಒದ್ದು ಮಠದಿಂದ ಹೊರಗೆ ಹಾಕಬೇಕು ಎನ್ನುವ ಮನಸ್ಥಿತಿ ಅವರಲ್ಲಿರಲಿಲ್ಲ. ಅವರನ್ನು ತಿದ್ದಿ, ತೀಡಿ ಸರಿದಾರಿಗೆ ತರುವ ಕಾರ್ಯ ಮಾಡುತ್ತಿದ್ದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಹೊಸದುರ್ಗದ ನಿವೃತ್ತ ಮುಖ್ಯೋಪಾಧ್ಯಾಯ ಬಿ ಪಿ ಓಂಕಾರಪ್ಪ ಮಾತನಾಡಿ ಶಿವಕುಮಾರ ಶ್ರೀಗಳಿಗೆ ಮಾತ್ರ ದಿಟ್ಟ ಹೆಜ್ಜೆಯ ಧೀರ ಪ್ರಭು ಎಂದು ಕರೆಯಲಿಕ್ಕೆ ಸಾಧ್ಯ. ಈಗಲೂ ಸಮಾಜದ ಭಕ್ತರ ಹೃದಯಲ್ಲಿದ್ದಾರೆ. ಹಳ್ಳಿ ಹಳ್ಳಿಗೆ ಹೋಗಿ ಸಮಾಜವನ್ನು ಕಟ್ಟಿ ಬೆಳೆಸಿದವರು. ಹಳ್ಳಿಗಳ ಪ್ರತಿಯೊಂದು ಮನೆಯ ಸದಸ್ಯರ ಬಗ್ಗೆ ಕಾಳಜಿ ಹೊಂದಿದ್ದರು.
ಇನ್ನೋರ್ವ ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಿ ಕೆ ಶಿವಮೂರ್ತಿಯವರು ಮಾತನಾಡಿ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಕಲಿಸಿಕೊಡುವ ಸಂಸ್ಥೆ ಸಾಣೇಹಳ್ಳಿ ಸಂಸ್ಥೆ. ಈ ಸಂಸ್ಕಾರವನ್ನು ಹುಟ್ಟಿಹಾಕಿದವರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು. ಇಂತಹ ಪುಣ್ಯವನ್ನು ನೀವೆಲ್ಲರೂ ಸದ್ಭಳಕೆ ಮಾಡಿಕೊಳ್ಳಬೇಕು. ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮಿಗಳವರು ಅಕ್ಕನ ಬಳಗ, ಅಣ್ಣನ ಬಳಗವನ್ನು ಸ್ಥಾಪಿಸಿ ಶರಣರ ವಿಚಾರಗಳನ್ನು ಪ್ರಚಾರ ಮಾಡಿದರು. ಸಮಾಜದಲ್ಲಿ ಯಾವ ರೀತಿಯ ಬಾಳಬೇಕೆಂದು ಮಾರ್ಗದರ್ಶನ ಮಾಡಿದ ಮಠ ತರಳಬಾಳು ಮಠ ಎಂದರು. ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಡಿ ವಿ ಗಂಗಾಧರಪ್ಪ ಉಪಸ್ಥಿತರಿದ್ದರು.
ತರಳಬಾಳು ಗುರುಪರಂಪರೆಯ ವಿಷಯ ಕುರಿತು ನಯನ ಡಿ, ಲೋಕೆಶ್, ಪ್ರಾರ್ಥನ, ಹೇಮಂತ್, ಅಮೃತ, ಅಕ್ಷಯ ಮಾತನಾಡಿದರು. ಸಂಗೀತ ಶಿಕ್ಷಕ ಹೆಚ್ ಎಸ್ ನಾಗರಾಜ್ ಹಾಗೂ ತಬಲಸಾಥಿ ಶರಣ್ ವಚನಗೀತೆಗಳನ್ನು ಹಾಡಿದರು. ದಿವ್ಯಶ್ರೀ ಸ್ವಾಗತಿಸಿದರು. ಅಭಿಷೇಕ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.
ಶಾಲಾ ಮಕ್ಕಳು ವಚನಗೀತೆಗೆ ಆಕರ್ಷಕನೃತ್ಯ ಪ್ರದರ್ಶನ ನೀಡಿದರು. ಕಾರ್ಯಕ್ರಮದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಮಕ್ಕಳು, ಶ್ರೀ ಶಿವಕುಮಾರ ರಂಗಪ್ರಯೋಗ ಶಾಲೆಯ ವಿದ್ಯಾರ್ಥಿಗಳು, ಉಭಯ ಶಾಲೆಗಳ ಮುಖ್ಯೋಪಾಧ್ಯಾಯರು, ಶಿಕ್ಷಕರು, ಗ್ರಾಮಸ್ಥರು, ಪೋಷಕರು ಭಾಗವಹಿಸಿದ್ದರು.