ದ್ವಂದ್ವವಿಲ್ಲದ ಬದುಕ ನಡೆಸಲು ಕಲಿಸುವ ಬಸವಣ್ಣನವರ ವಚನ

ಗುಳೇದಗುಡ್ಡ

ಮನೆಯಲ್ಲಿ ಮಹಾಮನೆ ಕಾರ್ಯಕ್ರಮ ಶನಿವಾರ, ಶರಣ ಸುಭಾಷ ಜಿರ್ಲಿ ಅವರ ಮನೆಯಲ್ಲಿ ಜರುಗಿತು.

ಅನುಭಾವಕ್ಕೆ ಆಯ್ದುಕೊಂಡ ವಚನ ಧರ್ಮ ಸಂಸ್ಥಾಪಕ ಬಸವತಂದೆಯವರದು.

ಭೇರುಂಡನ ಪಕ್ಷಿಗೆ ದೇಹ ಒಂದೇ ,
ತಲೆಯೆರಡರ ನಡುವೆ ಕನ್ನಡವ ಕಟ್ಟಿ.
ಒಂದು ತಲೆಯಲ್ಲಿ ಹಾಲನೆರೆದು
ಒಂದು ತಲೆಯಲ್ಲಿ ವಿಷವನೆರೆದಡೆ,
ದೇಹವೊಂದೇ, ವಿಷ ಬಿಡುವುದೇ ಅಯ್ಯಾ .
ಲಿಂಗದಲ್ಲಿ ಪೂಜೆಯ ಮಾಡಿ
ಜಂಗಮದಲ್ಲಿ ನಿಂದೆಯ ಮಾಡಿದಡೆ
ನಾನು ಬೆಂದೆ ಕಾಣಾ, ಕೂಡಲಸಂಗಮದೇವಾ.

ಬಸವ ತಂದೆಗಳ ಈ ವಚನವ ಕುರಿತು ಪ್ರಾರಂಭದಲ್ಲಿ ಪ್ರಾಸ್ತಾವಿಕವಾಗಿ ಪ್ರೊ. ಸುರೇಶ ತಿ. ರಾಜನಾಳ ಅವರು ಮಾತನಾಡುತ್ತ; ಭೇರುಂಡ ಪಕ್ಷಿಯ ಉದಾಹರಣೆಯನ್ನು ಉಲ್ಲೇಖಿಸುತ್ತ ಬಸವತಂದೆಗಳು ಮಾರ್ಮಿಕವಾಗಿ ವ್ಯಕ್ತಿ ಜೀವನವನ್ನು ಹೇಗೆ ಸವೆಸಬೇಕು ಎಂಬುದನ್ನು ತಿಳಿಸಿದ್ದಾರೆ. ಈ ಪಕ್ಷಿಗೆ ಎರಡು ಮುಖಗಳಿರುವಂತೆ, ಪ್ರತಿ ವ್ಯಕ್ತಿಗೆ ಎರಡು ದ್ವಂದ್ವ ಮನಸ್ಸಿದೆ.

ಒಂದು ಹೌದು, ಇನ್ನೊಂದು ಅಲ್ಲ ಎನ್ನುವುದು. ಹಾಗೆಯೇ ಒಂದು ಉತ್ತಮ ಇನ್ನೊಂದು ಅಧಮ. ಈ ದ್ವಂದ್ವ ತೊಲಗಬೇಕು. ಒಂದು ಕಡೆಗೆ ಲಿಂಗವನ್ನು ಪೂಜಿಸಿ ಇನ್ನೊಂದು ಕಡೆಗೆ ಜಂಗಮವನ್ನು‌ ಜರಿಯಬಾರದು. ಇವೆರಡರಲ್ಲಿ ಬೇಧ-ಭಾವ ಮಾಡಬಾರದು. ಇರುವ ಎರಡಲ್ಲಿ ಕೆಡುಕನ್ನು ಕಳೆದು ಉತ್ತಮವಾಗಬೇಕು ಎಂದು ತಿಳಿಹೇಳಿದರು.

ಇದೇ ವಚನದ ಅನುಭಾವವನ್ನು ಮುಂದುವರೆಸಿದ ಪ್ರೊ. ಜೀವನ್ ರಾಠೋಡ ಅವರು ಅಪ್ಪ ಬಸವಣ್ಣವರು ಈ ವಚನದಲ್ಲಿ ಒಂದು ವಿಕಾರ, ಇನ್ನೊಂದು ಸಕಾರದ ರೂಪಗಳಿವೆ. ಲಿಂಗ ಜಂಗಮ ಒಂದೇ ನಾಣ್ಯದ ಎರಡು ಮುಖಗಳು. ಮನುಷ್ಯನಲ್ಲಿರುವ ದ್ವಂದ್ವ ಭಾವವನ್ನು ಯಾವ ಶೈಕ್ಷಣಿಕ ಸಂಸ್ಥೆಗಳು ಕಳೆಯುವದಿಲ್ಲ. ಅದು ಸಂಸ್ಕಾರದಿಂದ ಸಾಧ‍್ಯವಾಗುತ್ತದೆ. ಮನಸ್ಸಿನ ಕೆಡಕು ಭಾವವನ್ನು ಕಳೆಯಲು ವಚನಗಳು ಆಧಾರವಾಗುತ್ತವೆ.

ಹೀಗೆ ಇದೇ ವಚನ ಕುರಿತು ಅತ್ಯಂತ ಮಾರ್ಮಿಕವಾಗಿ ಅನುಭಾವವನ್ನು ನೀಡಿದ ಪ್ರೊ. ಮಹಾದೇವಯ್ಯ ಪಂಚಾಕ್ಷರಿಸ್ವಾಮಿ ನೀಲಕಂಠಮಠ ಅವರು, ವಚನಗಳನ್ನು ಹೇಳುವ ರೀತಿ ನಮ್ಮನ್ನು ಆಕರ್ಷಿಸುತ್ತದೆ. ಗಂಡಭೇರುಂಡ ಪಕ್ಷಿ ಎನ್ನುವದು ಕಾಲ್ಪನಿಕವಾದರೂ ಕವಿಸಮಯದ ತತ್ವವನ್ನು ಅವರು ತೆಗೆದುಕೊಂಡ ರೀತಿ ಮೆಚ್ಚುವಂತಹುದು. ಎರಡು ಮುಖಗಳು / ಬಾಯಿಗಳಿದ್ದರೂ ಹೊಟ್ಟೆ ಒಂದೇ ಇರುವದರಿಂದ ಪರಿಣಾಮ ಘೋರವಾಗುತ್ತದೆ.

ಇಲ್ಲಿ ಅಂಗವೆಂದರೆ ಪಠ್ಯ ಕಲಿಸುವ ಗುರು. ಪರೀಕ್ಷಕ ಅಥವಾ ನಿರೀಕ್ಷಕನೆಂದರೆ ಜಂಗಮ. ಗುರು=ಲಿಂಗ=ಜಂಗಮ ಮೂರು ಒಂದೇ ಆಗಿದ್ದರೂ ಕ್ರಿಯಾ ಬೇಧದಿಂದ ಮೂರಾಗುತ್ತವೆ. ಲಿಂಗ ನಮಗೆ ಏನನ್ನು ಬೇಡುವದಿಲ್ಲ, ಆದರೆ ಜಂಗಮ ಪರೀಕ್ಷಾರ್ಥವಾಗಿ ಏನನ್ನಾದರೂ ಬೇಡಬಹುದು. ಹೀಗಾಗಿ ಜಂಗಮವನ್ನು ನಾವು ಇಷ್ಟಪಡುವುದಿಲ್ಲ. ಪ್ರಸ್ತುತ ದಿನಗಳಲ್ಲಿ ಜಂಗಮ ಕಾಡುವಾತನೆಂಬ ಭಾವನೆ ಇರುವುದರಿಂದ ಜಂಗಮನನ್ನು ಅಪ್ಪಿಕೊಳ್ಳಲಾರದ ಸ್ಥಿತಿ ಇದೆ. ಲಿಂಗಕ್ಕೆ ತೋರುವ ಗೌರವಾದರಗಳನ್ನೇ ಜಂಗಮಕ್ಕೆ ತೋರಬೇಕು. ಈ ವಚನಕ್ಕೆ ಪೂರಕವಾಗಿ ಇತರ ಶರಣರ ವಚನಗಳನ್ನು ಉದಾಹರಿಸಿದರು.

ಲಿಂಗವಂತನಿಗೆ ಛಲ ಇರಬೇಕು ಪರ ಧನ, ಪರ ಸತಿ, ಪರ ದೈವ ಒಲ್ಲೇನೆಂಬ ಛಲವಿರಬೇಕು. ಲಿಂಗವನ್ನು ಪೂಜೆ ಮಾಡುವ ಉದ್ದೇಶ ಜಂಗಮ ತನ್ನೆಡೆಗೆ ಬರಬೇಕೆಂದು ಮನಮುಟ್ಟುವಂತೆ ತಮ್ಮ ಅನುಭವವನ್ನು ನೀಡಿದರು.

ಕೊನೆಯಲ್ಲಿ ಮಾತನಾಡಿದ ಅನುಭಾವಿಗಳಾದ ಪ್ರೊ. ಸಿದ್ದಲಿಂಗಪ್ಪ ಬ. ಬರಗುಂಡಿ ಅವರು ಈ ವಚನದ ಅನುಭವವನ್ನು ವಿಭಿನ್ನ ಕೋನಗಳಿಂದ ವಿಶ್ಲೇಷಿಸುತ್ತ… ಮನುಷ್ಯನ ಬದುಕು ಸ್ವಾರ್ಥದಿಂದ ಕೂಡಿರಬಾರದು. ತನ್ನಲ್ಲಿಯ ತನು, ಮನ, ಧನ ಫಲಗಳನ್ನು ಸಮಾಜಮುಖಿಯಾಗಿಸಬೇಕು. ತನ್ನ ಪರಿಶ್ರಮದಿಂದ ಯಾವುದೇ ಕ್ಷೇತ್ರದಲ್ಲಿ ಎತ್ತರಕ್ಕೆ ಏರಿದರೂ ಕೆಳಗೆ ನೋಡಬೇಕು. ಒಂದು ರೀತಿಯಲ್ಲಿ ಮನುಷ್ಯನ ಬದುಕು ಚಕ್ರದಂತೆ. ಅಂದರೆ ತಾನು ತನ್ನ ಸಾಧನೆಯಿಂದ ಪಡೆದ ಫಲಗಳಿಂದ ಅಹಂಕಾರಿಯಾಗುವದು ತಪ್ಪು. ಅದರಿಂದ ಸಾಮಾಜಿಕ ಜೀವನ ವಿಕಾರಗೊಳ್ಳುತ್ತದೆ.

ಅದಕ್ಕೆ ಶರಣರು ನಿಯಮವನ್ನು ಕೊಟ್ಟರು. ತನ್ನ ಸಾಧನೆಯ ಫಲವನ್ನು ಸಮಾಜಕ್ಕೆ ಸಲ್ಲಿಸಬೇಕು, ಸಲ್ಲಿಸಿ ಕೃತಾರ್ಥ ಭಾವದಲ್ಲಿರಬೇಕು. ಕೊಟ್ಟೆನೆಂಬ ಸುಳುಹು ಮನದಲ್ಲಿರಿಸಿಕೊಳ‍್ಳದೇ ನಿರ್ಲಿಪ್ತತೆಯಿಂದಿರಬೇಕು. ಇಲ್ಲದಿದ್ದರೆ ಅದು ಭೇರುಂಡ ಪಕ್ಷಿಗೆ ಎರಡು ತಲೆ, ಒಂದಕ್ಕೆ ಹಾಲು, ಒಂದಕ್ಕೆ ವಿಷವನೆರದಂತೆ. ಅಂದರೆ ಸಾಧನೆಯ ಫಲ ದುರಪಯೋಗ ಮಾಡಿದರೆ ಆ ವ್ಯಕ್ತಿಯ ಜೀವನ ನಿಸ್ಫಲವಾಗುತ್ತದೆ. ವಿಷವುಂಡ ದೇಹ ಸಾವನ್ನಪ್ಪುತ್ತದೆ. ಆ ಸಾಧನೆಯ ಫಲದಿಂದ ಏನೆಲ್ಲ ಮಾಡಬಹುದಿತ್ತು. ಆದರೆ ವ್ಯಕ್ತಿ ಫಲದಿಂದ ತೋರುವ ವರ್ತನೆ ಅಕ್ರಮತೆಯಿಂದ ತನ್ನ ತಾನು ನಾಶಗೊಳಿಸುತ್ತ ಸಮಾಜದ ಅಸ್ತಿತ್ವಕ್ಕೆ ಧಕ್ಕೆ ತರುತ್ತಾನೆ. ಕಾಯ-ಕಾಯಕದಿಂದ ಬಂದ ಫಲವನ್ನು ತಾನೊಬ್ಬನೇ ಅನುಭವಿಸಲಾರದೇ ಸಮಾಜಕ್ಕೆ ಅನುಭವಿಸಲು ಕೊಟ್ಟರೆ ಸಾರ್ಥಕವಾಗುತ್ತದೆ. ಇದು ಪ್ರತಿ ವ್ಯಕ್ತಿಯ ಕರ್ತವ್ಯ ಹಾಗೂ ಜವಬ್ದಾರಿಯೂ ಕೂಡ ಎಂದು ಹೇಳುತ್ತ ಅನೇಕ ವಚನಗಳನ್ನು ಉಲ್ಲೇಖಿಸುತ್ತ ತಮ್ಮ ಅನುಭಾವವನ್ನು ನೀಡಿದರು.

ಪ್ರಾರಂಭದಲ್ಲಿ ಶರಣೆಯರಾದ ದಾನಮ್ಮ ಕುಂದರಗಿ, ಜಯಶ್ರೀ ಬರಗುಂಡಿ, ಶ್ರೀದೇವಿ ಶೇಖಾ ಅವರಿಂದ ಸಾಮೂಹಿಕ ಪ್ರಾರ್ಥನೆಯಾಯಿತು. ಅನುಭಾವದ ನಂತರ ವಚನ ಮಂಗಲವಾಯಿತು. ಮಹಾಮನೆ ಜರುಗಲು ಅವಕಾಶ ಮಾಡಿಕೊಟ್ಟ ಮಹಾಮನೆಯ ಕುಟುಂಬದವರಿಗೆ ಕಾರ್ಯಕ್ರಮದ ಸಂಘಟಕರು ಶರಣು ಸಮರ್ಪಣೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಶರಣಾದ ಪ್ರೊ. ಬಸಯ್ಯ ಕಂಬಾಳಿಮಠ, ಶಿವಾನಂದ ಸಿಂದಗಿ, ಪುತ್ರಪ್ಪ ಬೀಳಗಿ, ಪಾಂಡಪ್ಪ ಕಳಸಾ, ರಾಚಣ‍್ಣ ಕೆರೂರ, ಮಹಾಲಿಂಗಪ್ಪ ಕರನಂದಿ, ಪ್ರೊ. ಜೀವನ್ ರಾಠೋಡ, ಪ್ರೊ. ಶಿವಕುಮಾರ ಶೀಪ್ರಿ, ಸಿದ್ಧಯ್ಯ ರೇವಣಸಿದ್ಧೇಶ್ವರ ಮಠ, ಪ್ರಶಾಂತ ಲೋಕೂರ, ಶರಣೆಯರಾದ ಶೇಖಮ್ಮ ಸಂಪಗಾವಿ, ಶ್ರೀಮತಿ ಗಂಗಾವತಿ ಮತ್ತಿತರು ಹಾಗೂ ಜಿರ್ಲಿ ಅವರ ಪರಿವಾರದವರು ಸೇರಿದಂತೆ ಓಣಿಯ ಭಾಂಧವರಲ್ಲದೆ ಪಟ್ಟಣದ ಹೊರವಲಯದ ಬಸವ ಕೇಂದ್ರದ ಸದಸ್ಯರು google meet ಮೂಲಕ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ_
https://chat.whatsapp.com/EeBeeIO5TisIVCASg0Dpbn

Share This Article
3 Comments
    • Your efforts are much appreciated,Sharana Dharma of Basaveshwara is flourishing.long live lingayath religion Sharanu sharanarthi

  • ವಿಶ್ವಗುರು, ದೀನರಬಂದು, ಸಮತವಾದಿ, ಮನುಕುಲದ್ದಾರಕ, ಎಂದು ಕರೆಸಿಕೊಳ್ಳುವ
    ” ಕರ್ನಾಟಕದ ಸಂಕೃತಿಕ ನಾಯಕ ” ಬಸವಣ್ಣನವರ ಅನುಭವ ಮಟಪದ ಮಾದರಿಯಾಗಿ ಕಾರ್ಯಕ್ರಮ
    ಕ್ಕೆ ಅಭಿನಂದನೆಗಳು.
    ಹಾಗೇ ನಮ್ಮಕಡೆ ಶ್ರಾವಣ ಮಾಸದಲ್ಲಿ ಮನೆಮನೆಗೆ
    ( ಶರಣ ಸಾಹಿತ್ಯ ಪರಿಷತ್ ವತಿಯಿಂದ 30 ದಿನಗಳು
    30 ಮನೆಗಳಲ್ಲಿ ಒಂದೊಂದು ಶರಣ ರ ಬಗ್ಗೆ ) ಎಂಬ
    ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದೇವೆ. ಕೆಲವುಕಡೆ jilla ಕೇಂದ್ರದಲ್ಲಿ ಆಚರರಿಸುತ್ತ ಬಂದಿದ್ದಾರೆ. ಎಲ್ಲಾ ಜಿಲ್ಲಾ, ತಾಲ್ಲೂಕ ಕೇಂದ್ರಗಳಲ್ಲೂ ಆಚರಿಸಿದರೆ ನಮ್ಮ makkaligu
    ಶರಣರ ಬಗ್ಗೆ ವಚನ ಸಾಹಿತ್ಯದ ಬಗ್ಗೆ ಅರಿವು ಮೂಡಲು ಸಹಕಾರಿ.
    ಶರಣಾರ್ಥಿಗಳೊಂದಿಗೆ.

Leave a Reply

Your email address will not be published. Required fields are marked *