ಗದಗಿನಲ್ಲಿ ಹಳಕಟ್ಟಿ, ಲಿಂಗಾನಂದ ಶ್ರೀಗಳ ಸ್ಮರಣೆ ಕಾರ್ಯಕ್ರಮ

ಗದಗ

ಮಹಾಮಹಿಮ ಫ.ಗು. ಹಳಕಟ್ಟಿ ಅವರ ಮೂಲಕ ಬಸವಾದಿ ಶರಣರ ವಚನ ರಚನೆಯ ತಾಡೋಲೆಗಳ ರಕ್ಷಣೆ ಅವುಗಳ ಪ್ರಕಟಣೆ ನಡೆದು ವಚನ ಸಾಹಿತ್ಯದ ರಕ್ಷಣೆಯಾಗಿ ನಮ್ಮೆಲ್ಲರಿಗೂ ಅವು ಸಿಗುವಂತಾಯಿತೆಂದು ಅನುಭಾವಿ ಶರಣ ನಿಂಗನಗೌಡ ಹಿರೇಸಕ್ಕರಗೌಡ್ರ ನುಡಿದರು.

ಅವರು ಬಸವದಳದ ೧೬೫೨ನೇ ಶರಣ ಸಂಗಮ ಕಾರ್ಯಕ್ರಮದಲ್ಲಿ “ವಚನ ಸಂಶೋಧನಾ ಪಿತಾಮಹ ಡಾ. ಫ.ಗು. ಹಳಕಟ್ಟಿಯವರ ೬೧ನೇ ಸ್ಮರಣೆ ಹಾಗೂ ಪೂಜ್ಯ ಲಿಂಗಾನಂದ ಸ್ವಾಮಿಗಳ ೩೦ನೇ ಸ್ಮರಣೆ ಕಾರ್ಯಕ್ರಮ”ದಲ್ಲಿ ‘ಫ.ಗು. ಹಳಕಟ್ಟಿಯವರ’ ಜೀವನ ಕುರಿತು ಮಾತನಾಡಿದರು.

ಫಕೀರಪ್ಪನವರ ತಂದೆ ಗುರುಬಸಪ್ಪನವರು ಶಿಕ್ಷಕರಾಗಿದ್ದರು. ಜೊತೆಗೆ ಶರಣತತ್ವ ಚಿಂತಕರಾದ ಮಾವ ತಮ್ಮಣ್ಣಪ್ಪ ಚಿಕ್ಕೋಡಿಯವರ ಒಡನಾಟದ ಪರಿಣಾಮ ಶರಣ ಸಾಹಿತ್ಯದತ್ತ ಅವರ ಆಸಕ್ತಿ ಬೆಳೆಯಿತು. ವಿದ್ಯಾರ್ಥಿದೆಸೆಯಿಂದಲೂ ಪ್ರತಿಭಾವಂತರಾಗಿದ್ದ ಅವರು ಕಾನೂನು ಪದವಿ ಪಡೆದು ವಕೀಲ ವೃತ್ತಿ ಆರಂಭಿಸಿದರು. ಅದೇ ಸಂದರ್ಭದಲ್ಲಿ ಭಾಗೀರಥಿ ಅವರ ಜೊತೆ ವಿವಾಹವಾಯಿತು. ಶಿವಲಿಂಗಪ್ಪ ಮಂಚಾಲೆ ಎಂಬುವರ ಮನೆಯಲ್ಲಿದ್ದ ‘ಪ್ರಭುದೇವರ ವಚನಗಳ’ ತಾಳೆಗರಿಯ ವಚನ ಕಟ್ಟುಗಳನ್ನು ಕಂಡು ಅವರು ಪ್ರಭಾವಿತರಾದರು.

ಮುಂದೆ ಶರಣ ಸಾಹಿತ್ಯದ ಓದು ಅವರಿಗೆ ಅನರ್ಘ್ಯರತ್ನದಂತೆ ಕಂಡಿತು. ಮನೆ, ಮಠಗಳನ್ನು ಸುತ್ತಾಡಿ, ಬೇಡಿಕೊಂಡು ವಚನಗಳ ತಾಡೋಲೆ ಪ್ರತಿಗಳನ್ನು ಸಂಗ್ರಹಿಸಿದರು. ಅವುಗಳನ್ನು ವಿಂಗಡಿಸಿ ಮುದ್ರಿಸಿ, ಬಸವಾದಿ ಶರಣರ ಸಾಹಿತ್ಯ ಜನರಿಗೆ ಗ್ರಂಥಗಳ ಮೂಲಕ ತಲುಪುವಂತೆ ಮಾಡುವ ಮೂಲಕ ಲಿಂಗಾಯತ ಧರ್ಮದ ಪುನಶ್ಚೇತನ ಕಾರ್ಯ ನಡೆಸಿದರು. ಶರಣ ಸಾಹಿತ್ಯ ಪ್ರಸಾರ, ವಚನಗಳ ಪ್ರಕಟಣೆಗಾಗಿ ತಮ್ಮ ಮನೆಯನ್ನು ಮಾರಾಟ ಮಾಡಿ ‘ಹಿತಚಿಂತಕ’ ಮುದ್ರಣಾಲಯ ಆರಂಭಿಸಿದರು.

ಈ ವಚನ ಸಾಹಿತ್ಯದ ಪ್ರಸಾರಕ್ಕೆಂದೆ ‘ಶಿವಾನುಭವ’ , ‘ನವ ಕರ್ನಾಟಕ’ ಎಂಬ ಪತ್ರಿಕೆಗಳನ್ನು ಪ್ರಕಟಿಸಲಾರಂಭಿಸಿದರು. ಜೀವನದಲ್ಲಿ ಬಂದ ಆರ್ಥಿಕ ತೊಂದರೆಗಳನ್ನು ಮೆಟ್ಟಿನಿಂತು ವಚನ ಸಾಹಿತ್ಯದ ಗ್ರಂಥಗಳನ್ನು ಪ್ರಕಟಿಸಿದರು. ಒಟ್ಟಾರೆಯಾಗಿ ಫ.ಗು. ಹಳಕಟ್ಟಿ ಹಾಗು ಲಿಂಗಾನಂದ ಮಹಾಸ್ವಾಮಿಗಳು ಲಿಂಗಾಯತ ಧರ್ಮದ ಎರಡು ನಕ್ಷತ್ರಗಳು ಎಂದು ಹಿರೇಸಕ್ಕರಗೌಡ್ರ ನುಡಿದರು.

ನಿವೃತ್ತ ಶಿಕ್ಷಕಿ ಗಂಗಮ್ಮ ಹೂಗಾರ ಇವರು ಪೂಜ್ಯ ಲಿಂಗಾನಂದ ಸ್ವಾಮೀಜಿಯವರ ಕುರಿತು ಮಾತನಾಡುತ್ತಾ, ಹಳಕಟ್ಟಿಯವರು ವಚನ ತಾಡೋಲೆಗಳನ್ನು ಸಂಗ್ರಹಿಸಿ ಗ್ರಂಥಗಳ ಮೂಲಕ ಪ್ರಕಟಿಸಿದರು. ಆ ವಚನ ಸಾಹಿತ್ಯವನ್ನು ನಾಡಿನಾದ್ಯಂತ ತಮ್ಮ ಪ್ರವಚನಗಳ ಮೂಲಕ ಪ್ರಸಾರ ಮಾಡಿದ ಕೀರ್ತಿ ಪೂಜ್ಯ ಲಿಂಗಾನಂದ ಮಹಾಸ್ವಾಮಿಗಳಿಗೆ ಸಲ್ಲುತ್ತದೆ. ಅಲ್ಲದೇ ಶರಣ ಧರ್ಮ ಅರಿವಂತಾಗಲು ನಾಡಿನಾದ್ಯಂತ ರಾಷ್ಟ್ರೀಯ ಬಸವದಳಗಳನ್ನು ಸ್ಥಾಪಿಸಿ, ಅಲ್ಲಿ ಶರಣರ ವಿಚಾರ ಚರ್ಚೆ, ಚಿಂತನೆ ನಡೆಸಲು ಅನುವು ಮಾಡಿಕೊಟ್ಟರು. ಇದು ದೊಡ್ಡ ಪರಿಣಾಮ ಬೀರಿ ಜನರಿಗೆ ನಿಜವಾದ ಲಿಂಗಾಯತ ಧರ್ಮದ ಸ್ವರೂಪದ ಪರಿಚಯವಾಯಿತು. ಅಲ್ಲದೇ ಪ್ರತಿವರ್ಷ ಕೂಡಲ ಸಂಗಮದಲ್ಲಿ ಶರಣ ಮೇಳ ನಡೆಸುವ ಮೂಲಕ ನಾಡಿನ ಎಲ್ಲ ಬಸವಧರ್ಮಿರನ್ನು ಒಂದುಗೂಡಿಸಿ ಲಿಂಗಾಯತ ಧರ್ಮಕ್ಕೆ ಪುನಶ್ಚೇತನ ನೀಡಿದರು, ಅಲ್ಲದೇ ಮಾತೇ ಮಹಾದೇವಿ, ಗಂಗಾದೇವಿ, ಪೂಜ್ಯ ನಿಜಗುಣಾನಂದರಂತಹ ಬಹುಸಂಖ್ಯೆಯ ಸಮರ್ಥ ಶಿಷ್ಯಂದಿರನ್ನು ತಯಾರು ಮಾಡುವ ಮೂಲಕ ಲಿಂಗಾಯತ ಧರ್ಮಕ್ಕೆ ಹೊಸಕಾಯಕಲ್ಪ ನೀಡಿದರೆಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ನಿವೃತ್ತ ಶಿಕ್ಷಕಿ ವನಜಾಕ್ಷಿ ಕಪ್ಪರದ ಮಾತನಾಡಿ, ಪೂಜ್ಯ ಲಿಂಗಾನಂದ ಮಹಾಸ್ವಾಮಿಗಳು ಪೂರ್ವಾಶ್ರಮದಲ್ಲಿ ಕಪ್ಪರದ ಮನೆತನದವರು. ಅವರ ಸಹೋದರರ ಧರ್ಮಪತ್ನಿ ತಾವೆಂದರು. ಲಿಂಗಾನಂದ ಸ್ವಾಮಿಗಳ ಪ್ರವಚನದ ಪ್ರಭಾವಕ್ಕೆ ನಾನು ಒಳಗಾಗಿದ್ದೇನೆ. ಅವರು ಹೇಳುತ್ತಿದ್ದ ಧರ್ಮಗುರು ಬಸವಣ್ಣ, ಧರ್ಮಗ್ರಂಥ ವಚನ ಸಾಹಿತ್ಯ, ಧರ್ಮದೇವರು ಇಷ್ಟಲಿಂಗವೆಂಬುದನ್ನು ಅವರಿಂದ ಅರಿತಿದ್ದಾಗಿ ತಿಳಿಸಿದರು.

ಅಧ್ಯಕ್ಷತೆಯನ್ನು ಬಸವದಳ ಅಧ್ಯಕ್ಷರಾದ ವಿ.ಕೆ. ಕರೇಗೌಡ್ರ ವಹಿಸಿ ಮಾತನಾಡಿ, ನಮ್ಮ ಬಸವದಳ ಕಳೆದ ಮೂರು ದಶಕಗಳಿಂದಲೂ ಶರಣ ಸಾಹಿತ್ಯ ಪ್ರಸರಣವನ್ನು ನಿರಂತರ ಮಾಡುತ್ತಿದೆ. ಮನೆ, ಮನೆಗಳಿಗೂ ವಚನ ಸಾಹಿತ್ಯ ಮುಟ್ಟಿಸಲು ಕಟಿಬದ್ಧರಾಗಿದ್ದೇವೆಂದರು.

ವಚನ ಪ್ರಾರ್ಥನೆ ರೇಣಕ್ಕ ಕರೇಗೌಡ್ರ ನಡೆಸಿದರು. ಸಹನಾ ಆಲತಗಿ ಸ್ವಾಗತಿಸಿದರು. ಕಾರ್ಯಕ್ರಮದ ನಿರೂಪಣೆ ಕಳ್ಳಿಮನಿ ರಾಮಣ್ಣ ಅವರಿಂದ, ಪ್ರಕಾಶ ಅಸುಂಡಿಯವರು ಶರಣು ಸಮರ್ಪಣೆ ಮಾಡಿದರು. ವಚನ ಮಂಗಲದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

ಬಸವ ಮೀಡಿಯಾ ವಾಟ್ಸ್ ಆಪ್ ಗುಂಪು ಸೇರಲು ಕ್ಲಿಕ್ ಮಾಡಿ
https://chat.whatsapp.com/JREWkVu0WPE5tE1y0tzNQ1

Share This Article
Leave a comment

Leave a Reply

Your email address will not be published. Required fields are marked *