ಗೂಗಲ್ ಮೀಟ್: ಸಮತೆಯ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ

ಸುಧಾ ಪಾಟೀಲ್
ಸುಧಾ ಪಾಟೀಲ್

ಡಾ. ಸದಾಶಿವ ಮರ್ಜಿ ಅವರು ಬಾಬಾಸಾಹೇಬ ಅಂಬೇಡ್ಕರ ಅವರ ಬಗ್ಗೆ ಹೇಳುತ್ತಾ, ಅವರೊಬ್ಬ ಪ್ರತಿಭಾನ್ವಿತ ನಾಯಕ, ಸಂವಿಧಾನ ಶಿಲ್ಪಿ, ಸಮಾಜಶಾಸ್ತ್ರಜ್ಞ, ಅರ್ಥ ಶಾಸ್ತ್ರಜ್ಞ, ಮಾನವ ಕುಲಶಾಸ್ತ್ರಜ್ಞ ಮತ್ತು ದಲಿತರ ಅಗ್ರನಾಯಕರಾಗಿ ಹೊರಹೊಮ್ಮಿದ ಧೀಮಂತ ವ್ಯಕ್ತಿ ಎಂದು ಸ್ಮರಿಸುತ್ತ , ತಮ್ಮ ಉಪನ್ಯಾಸವನ್ನು ಪ್ರಾರಂಭ ಮಾಡಿದರು.

ಬಹುಸಂಸ್ಕೃತಿಯ ಸ್ವತಂತ್ರ ಭಾರತಕ್ಕೆ, ತನ್ನದೇ ಆದ ಸಂವಿಧಾನವನ್ನು ಅಂಬೇಡ್ಕರ ಅವರು ಕೊಟ್ಟರು ಎಂದು ಹೇಳುತ್ತಾ, 1927 ರಿಂದ ಮೂರು ದಶಕಗಳ ಕಾಲ ತಮ್ಮ ಜನರ ಮೂಲಭೂತ ಹಕ್ಕು ಮತ್ತು ರಾಜಕೀಯ ಅಸ್ಮಿತೆಗಾಗಿ ಹಗಲಿರುಳು ಹೋರಾಡಿದರು ಎಂದು ಹೇಳುತ್ತಾ, ಅಂಬೇಡ್ಕರ ಅವರು ಮೊದಲ ದುಂಡು ಮೇಜಿನ ಪರಿಷತ್, ಎರಡನೆಯ ದುಂಡು ಮೇಜಿನ ಪರಿಷತ್ ನಲ್ಲಿ ಭಾಗವಸಿದ್ದು, 1956 ರ ಕರಡುರಚನೆಯನ್ನು ಮಾಡಿದ್ದನ್ನು ನಮ್ಮ ಜೊತೆಗೆ ಹಂಚಿಕೊಂಡರು.

1891ರಲ್ಲಿ ಏಪ್ರಿಲ್ 14 ರಂದು ಅಂಬೇಡ್ಕರ್ ಅವರ ಜನನ, ಐದು ವರ್ಷದವರಿದ್ದಾಗ ಅವರ ತಾಯಿಯಯವರ ನಿಧನ, ತಂದೆ ಮತ್ತು ಅತ್ತೆಯ ಆಶ್ರಯದಲ್ಲಿ ಬಾಲ್ಯವನ್ನು ಕಳೆದದ್ದು, ಪ್ರೈಮರಿ, ಹೈಸ್ಕೂಲ್ ಶಿಕ್ಷಣ, ನಂತರ ಬಿ. ಎ. ಪದವಿ ಮುಂಬೈನಲ್ಲಿ ಪಡೆದದ್ದು, ಸಯ್ಯಾಜಿರಾವ್ ಗಾಯಕವಾಡ ಮಹಾರಾಜರಿಂದ ತಿಂಗಳಿಗೆ 25 ರೂಪಾಯಿಗಳ ಸ್ಕಾಲರ್ಷಿಪ್, ಕೋಲoಬಿಯಾ ಯೂನಿವರ್ಸಿಟಿಯಲ್ಲಿ ಹೆಚ್ಚಿನ ಅಧ್ಯಯನ, ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಿದ್ದು, ನಂತರ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ನಲ್ಲಿ ಮತ್ತೆ ಅಧ್ಯಯನ, ಅಲ್ಲಿ ಇಂಡಿಯನ್ ಲೈಬ್ರರಿ ಮತ್ತು ಬ್ರಿಟಿಷ್ ಮ್ಯೂಸಿಯಂ ನಲ್ಲಿ ಅವರ 18 ಘಂಟೆಗಳ ವಸ್ತುನಿಷ್ಠ ಅಧ್ಯಯನ, ಆಕರ ಗ್ರಂಥಗಳಿಂದ ಟಿಪ್ಪಣಿ, ಅದಕ್ಕೆ ಪೂರಕವಾದ ಉಲ್ಲೇಖಗಳನ್ನು ಮಾಡಿಕೊಂಡು ಅತ್ಯಂತ ಶ್ರದ್ದೆಯಿಂದ ಓದಿದರು ಎಂದು ಅಂಬೇಡ್ಕರ್ ಅವರ ಶಿಕ್ಷಣದ ಬಗೆಗೆ ತಿಳಿಸುತ್ತಾ ಹೋದರು.

ಭಾರತಕ್ಕೆ ಮರಳಿ ಬಂದ ನಂತರ ಕೊಲ್ಲಾಪುರದಲ್ಲಿ ಶಾಹುಮಹಾರಾಜರ ಭೆಟ್ಟಿ, ಅಲ್ಲಿ ಬ್ರಾಹ್ಮಣೇತ್ತರ ಚಳುವಳಿಯಲ್ಲಿ ಭಾಗವಹಿಸಿದ್ದು, ನಾಗಪುರದಲ್ಲಿ ನಿಮ್ನವರ್ಗದವರ ಮೊದಲ ಸಮ್ಮೇಳನದಲ್ಲಿ ಭಾಗವಹಿಸಿದ್ದು, ಮುಂಬೈ ಲೆಜಿಸ್ಲೇಟಿವ ಕೌನ್ಸಿಲ್ ನಲ್ಲಿ ಮೆಂಬರ್ ಆಗಿ ನಾಮಕರಣ ಹೊಂದಿದ್ದು, ಮೊಟ್ಟ ಮೊದಲ ಮಹಾ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದು, ಮನುಸ್ಮೃತಿಯನ್ನು ಸುಟ್ಟುಹಾಕಿದ್ದು, ಹೇಳುತ್ತಾ ಕೋಲoಬಿಯಾ ಯೂನಿವರ್ಸಿಟಿಯಿಂದ phd ಪದವಿ ಪಡೆದು, ಅಂತರಾಷ್ಟ್ರೀಯ ಮಟ್ಟದ ಅರ್ಥಶಾಸ್ತ್ರಜ್ಞರಾಗಿ ಹೊರಹೊಮ್ಮಿದರು ಎಂದು ಹೆಮ್ಮೆಯಿಂದ ಹಂಚಿಕೊಂಡರು.

ನಂತರ ” ಬಹಿಷ್ಕೃತ ಭಾರತ ” ಎಂಬ ಪತ್ರಿಕೆ ಹೊರಡಿಸಿದ್ದು, ಅದೇ ಮುಂದೆ ಜನತಾ ಪತ್ರಿಕೆಯಾಗಿ ಮುಂದುವರೆದದ್ದು, ನಾಗಪುರದಲ್ಲಿ ಎರಡನೆಯ ಕೋಮುವಾರು ಪ್ರಾತಿನಿಧ್ಯದ ಸಮ್ಮೇಳನದಲ್ಲಿ ಭಾಗವಹಿಸಿದ್ದು, ನಂತರ ಅವರು ಬೌದ್ಧ ಧರ್ಮಕ್ಕೆ ಮತಾoತರ ಹೊಂದಿದ್ದನ್ನು ಹೇಳಿದರು.

ದೇವದಾಸಿಯರೂ ಸಹ ಅಂಬೇಡ್ಕರ್ ಅವರಿಗೆ ಬೆಂಬಲ ಸೂಚಿಸಿದ್ದು, 1936 ರಲ್ಲಿ ಇಂಡಿಪೆಂಡೆಂಟ್ ಲೇಬರ್ ಪಾರ್ಟಿ ಸ್ಥಾಪಿಸಿ, 17 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದ್ದು, ಪ್ರತ್ಯೇಕ ಕರ್ನಾಟಕ ರಾಜ್ಯ ಸ್ಥಾಪನೆಯಾಗಲು ಒತ್ತಾಸೆ ನೀಡಿದ್ದು, ಭಾಷಾವಾರು ಪ್ರಾಂತ್ಯ ರಚನೆಯಾದಾಗ ತಮ್ಮ ಅಭಿಪ್ರಾಯ ಮಂಡಿಸಿದ್ದು, ಮಹಾರ್ ಪಂಚಾಯತ್ ಸಂಘಟನೆ ಶುರುಮಾಡಿದ್ದು, ಡಿಫೆನ್ಸ ಅಡ್ವೈಸರಿ ಬೋರ್ಡ್ ನಲ್ಲಿ ಮೆಂಬರ್ ಆಗಿ ನೇಮಕಗೊಂಡಿದ್ದು, ಮುಂಬೈನಲ್ಲಿ ಪೀಪಲ್ ಎಜುಕೇಶನ್ ಸೊಸೈಟಿ ಅಡಿಯಲ್ಲಿ ಶಾಲಾ -ಕಾಲೇಜು ಸ್ಥಾಪನೆ, ಭರತಭೂಷಣ ಪ್ರಿಂಟಿಂಗ್ ಪ್ರೆಸ್ ಶುರುಮಾಡಿದ್ದನ್ನು ಹೇಳುತ್ತಾ, ಒಂಬತ್ತು ಡಿಗ್ರಿ ಪದವಿ ಮತ್ತು ಇಪ್ಪತ್ತೊಂದು ವಿವಿಧ ರಾಷ್ಟ್ರದ ವಿಶ್ವವಿದ್ಯಾಲಯಗಳಿಂದ ಗೌರವ ಪದವಿ, ಡಾಕ್ಟರೇಟ್ ಗಳನ್ನು ಪಡೆದದ್ದನ್ನು ಅತ್ಯಂತ ಅಭಿಮಾನದಿಂದ ಹೇಳುತ್ತಾ, ಇನ್ನೂ ವಿಷಯ ಸಾಕಷ್ಟಿವೆ, ಇನ್ನೊಮ್ಮೆ ಚರ್ಚಿಸೋಣ ಎನ್ನುತ್ತಾ ತಮ್ಮ ಮಾತುಗಳನ್ನು ಮುಗಿಸಿದರು.

ಶರಣ ಮಹಾದೇವ ಹೊರಟ್ಟಿ ಅವರು ಅಂಬೇಡ್ಕರ್ ಅವರು ದಲಿತರ ಸೇವೆಗೆ ತಮ್ಮ ಜೀವನವನ್ನೇ ಮುಡುಪಾಗಿಟ್ಟರು, ಅತ್ಯುತ್ತಮ ಧುರೀಣ, ಹಿಮಾಲಯದಂತಹ ವ್ಯಕ್ತಿ ಎಂದು ಹೇಳುತ್ತಾ..ಇನ್ನೂ ಸಾಕಷ್ಟು ವಿಷಯಗಳನ್ನು ತಮ್ಮ ಮಾರ್ಗದರ್ಶನದ ನುಡಿಗಳಲ್ಲಿ ಹಂಚಿಕೊಂಡರು.

ಡಾ. ಶಶಿಕಾಂತ ಪಟ್ಟಣ ಅವರು ಅಂಬೇಡ್ಕರ್ ಅವರು ತಮ್ಮ ಜನರಿಗೆ ಸಮಾನ ಅವಕಾಶಗಳನ್ನು ದೊರಕಿಸುವ ಸಲುವಾಗಿ 21 ವರ್ಷ ಸತತವಾಗಿ ಕಾಯ್ದರು ಎನ್ನುವುದನ್ನು ಹೇಳುತ್ತಾ, ಅವರ ಬಗೆಗೆ ಮತ್ತಷ್ಟು ವಿಷಯಗಳನ್ನು ನಮ್ಮೆಲ್ಲರ ಜೊತೆಗೆ ಹಂಚಿಕೊಂಡರು.

ಡಾ.ಸುಗುಣ ಮಲ್ಲೇಶ ಅವರ ವಚನ ಪ್ರಾರ್ಥನೆ, ಡಾ. ಶರಣಮ್ಮ ಗೊರೆಬಾಳ ಅವರ ಸ್ವಾಗತ -ಪ್ರಾಸ್ತಾವಿಕ-ಪರಿಚಯ, ಡಾ. ಶಶಿಕಾಂತ ಪಟ್ಟಣ ಸರ್ ಅವರ ಶರಣು ಸಮರ್ಪಣೆ, ಶರಣೆ ಸರಸ್ವತಿ ಬಿರಾದಾರ ಅವರ ವಚನ ಮಂಗಳದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯ್ತು. ಶರಣ ಶಂಕರ ಕುಪ್ಪಸ್ತ ಅವರು ಅತ್ಯುತ್ತಮವಾಗಿ ಕಾರ್ಯಕ್ರಮ ನಿರ್ವಹಣೆಯನ್ನು ಮಾಡಿದರು.

(ವಚನ ಅಧ್ಯಯನ ವೇದಿಕೆ, ಬಸವಾದಿ ಶರಣರ ಚಿಂತನಕೂಟ ಹಾಗೂ ಅಕ್ಕನ ಅರಿವು ಸಂಘಟನೆಗಳಿಂದ ಶರಣೆ ಸುಧಾ ಪಾಟೀಲ ಅವರ ತಂದೆಯವರಾದ ಲಿಂ. ಶರಣ ಬಿ. ಎಂ. ಪಾಟೀಲ ಮತ್ತು ತಾಯಿಯವರಾದ ಲಿಂ. ಶರಣೆ ಅಕ್ಕಮಹಾದೇವಿ ಪಾಟೀಲ ಅವರ ಸ್ಮರಣಾರ್ಥ ನಡೆದ ಶ್ರಾವಣ ಮಾಸದ ದತ್ತಿ ಉಪನ್ಯಾಸದ 25 ನೆಯ ದಿವಸದ ವರದಿ. ಆಗಸ್ಟ್ 28)

Share This Article
Leave a comment

Leave a Reply

Your email address will not be published. Required fields are marked *