ಗುಳೇದಗುಡ್ಡ
ಬಸವ ಕೇಂದ್ರದ ವತಿಯಿಂದ ಸರಳ-ಸಹಜತೆಯಿಂದ ಜರುಗುವ ‘ಮನೆಯಲ್ಲಿ ಮಹಾಮನೆ’ ಸಾಪ್ತಾಹಿಕ ಕಾರ್ಯಕ್ರಮವು ದಿನಾಂಕ 07-12-2023 ರ ಸಂಜೆ 5 ಗಂಟೆಗೆ ನಡೆದ ಮಹಾಮನೆ ಕಾರ್ಯಕ್ರಮವು ಕುಂಬಾರ ಓಣಿಯ ಶರಣ ಮಹೇಶ ಬಸಪ್ಪ ಶಿವರಾತ್ರಿ ಅವರ ಮನೆಯಲ್ಲಿ ಜರುಗಿತು.
ಅಪ್ಪ ಬಸವ ತಂದೆಯ ವಚನ –
ಹಡೆದೊಡವೆ ವಸ್ತುವನು ಮೃಡಭಕ್ತರಿಗಲ್ಲದೆ ಕಡಬಡ್ಡಿಯ ಕೊಡಲಾಗದು.
ಬಂದಡೊಂದು ಲೇಸು, ಬಾರದಿದ್ದಡೆರಡು ಲೇಸು.
ಅಲ್ಲಿದ್ದಡೆಯೂ ಲಿಂಗಕ್ಕೆ ಬೋನ. ಇಲ್ಲಿದ್ದಡೆಯೂ ಲಿಂಗಕ್ಕೆ ಬೋನ.
ಲಿಂಗದೊಡವೆ ಲಿಂಗಕ್ಕೆ ಸಾರಿತ್ತಾಗಿ ಬಂದಿತ್ತೆಂಬ ಪರಿಣಾಮವಿಲ್ಲ, ಬಾರದೆಂಬ ದುಃಖವಿಲ್ಲ.
ಇದು ಕಾರಣ ಕೂಡಲಸಂಗಮದೇವಾ, ನಿಮ್ಮ ಶರಣರಿಗಲ್ಲದೆ, ಕಡಬಡ್ಡಿಯ ಕೊಡಲಾಗದು.
ಎಂಬ ವಚನದ ಮೇಲೆ ಅನುಭಾವ ನಡೆಯಿತು. ಪ್ರತಿ ಸಾಪ್ತಾಹಿಕ ಮಹಾಮನೆಯ ಕಾರ್ಯಕ್ರಮದಂತೆ ಪ್ರಾರಂಭದಲ್ಲಿ ಶರಣೆ ಜಯಶ್ರೀ ಬ. ಬರಗುಂಡಿ ಹಾಗೂ ಸಂಗಡಿಗರಿಂದ ಸಾಮೂಹಿಕ ಪ್ರಾರ್ಥನೆಯ ನಂತರ ಪ್ರೊ. ಶ್ರೀಕಾಂತ ಗಡೇದವರು ಸಂಕ್ಷಿಪ್ತವಾಗಿ ವಚನಗಳು ಮಹತ್ವವನ್ನು ತಿಳಿಸಿ ಅವು ನಮ್ಮ ಬದುಕಿಗೆ ಹೇಗೆ ಬೇಕಾಗುತ್ತವೆ ಎಂಬುದನ್ನು ವಿವರಿಸುತ್ತ, ಅಪ್ಪ ಬಸವಣ್ಣನವರ ಮೇಲಿನ ವಚನದ ಚಿಂತನೆಯನ್ನು ಮಾಡುತ್ತ, ಬಸವಣ್ಣನವರು ಮನುಷ್ಯನ ಅರಿಷಡ್ವರ್ಗಗಳಿಗೆ ಕಡಿವಾಣ ಹಾಕಲು, ತೃಪ್ತಿಕರವಾದ ಜೀವನಕ್ಕೆ ತನ್ನ ದುಡಿಮೆಯ ಫಲ ಸದ್ಭಳಕೆಯ ಪಥವನ್ನು ಈ ವಚನದಲ್ಲಿ ಉಲ್ಲೇಖಿಸಿದ್ದಾರೆ.

ರಾಷ್ಟ್ರಪ್ರಜ್ಞೆ ಮತ್ತು ಆರ್ಥಿಕ ಪ್ರಜ್ಞೆಯನ್ನು ಇಟ್ಟುಕೊಂಡು ಪ್ರಕೃತಿದತ್ತವಾಗಿ ಲಭ್ಯವಿರುವ ಮಾನವನ ಜೀವನಕ್ಕೆ ಬೇಕಾಗಿರುವ ಸಂಪನ್ನೂಲಗಳನ್ನು ಒಂದೇ ಕಡೆ ಸಂಗ್ರಹವಾದರೆ ಸಂಪನ್ನೂಲಗಳ ಸಮತೋಲನ ತಪ್ಪುತ್ತದೆ. ಅದರಿಂದ ಮನುಷ್ಯ ಅತೃಪ್ತಿಯಿಂದ ಇರುವದಕ್ಕೆ ಅವಕಾಶ ಮಾಡಿದಂತಾಗುತ್ತದೆ ಎಂಬ ದೂರದೃಷ್ಟಿಯಿಂದ ಎಲ್ಲರೂ ಸಂತೃಪ್ತಿಯಿಂದ ಬದುಕಲು ಬಸವಣ್ಣನವರು ಸಮ ಸಮಾಜದ ಚಿಂತನೆಗೆ ಈ ವಚನ ದಾರಿದೀಪವಾಗಿದೆ. ಈ ವಚನದ ಮೂಲಕ ಬಸವಣ್ಣನವರು ಶ್ರೇಷ್ಠ ಆರ್ಥಿಕ ತಜ್ಞರಾಗಿರುವರು ಎಂದು ಪ್ರಸ್ತಾವಿಕವಾಗಿ ತಮ್ಮ ಅನುಭವವನ್ನು ಹಂಚಿಕೊಂಡರು.
ವಚನದ ಚಿಂತನೆಯ ಮುಂದುವರೆದು ಪ್ರೊ. ಮಹಾದೇವಯ್ಯ ಪ. ನೀಲಕಂಠಮಠ ಅವರು ವಚನವನ್ನು ಅನುಭಾವಗೈಯುತ್ತ ನಾವುಗಳು ಸದಾಚಾರಿಗಳಾಗಿರಬೇಕು, ವ್ಯಕ್ತಿ ತನ್ನ ದುಡಿಮೆಯನ್ನು ತ್ರಿಕರಣ ಶುದ್ಧವಾಗಿ ಕಾಯಕವನ್ನು ಮಾಡಿ ಅದರ ಫಲವನ್ನು ಗುರು-ಲಿಂಗ-ಜಂಗಮಕ್ಕೆ ಸಮರ್ಪಿಸಿ ಜಂಗಮದಲ್ಲಿ ಸಮರಸವಾಗಬೇಕು. ದುಡಿಮೆಯ ಫಲವನ್ನು ಕುಲ ನೋಡಿ ಅಂದರೆ ಭಕ್ತ ಕುಲ ಮತ್ತು ಭವಿ ಕುಲವನ್ನು ಅರಿತು ಫಲವನ್ನು ಅರ್ಪಿಸಬೇಕು. ಮೃಡ ಭಕ್ತರ ನಡುವೆ ಕಡಬಡ್ಡಿಯ ವ್ಯವಹಾರ ಎಂದಿಗೂ ಸಲ್ಲದು ಮತ್ತು ಲಿಂಗವಂತನು ಯಾರಲ್ಲಿಯೂ ಬಡ್ಡಿ ವ್ಯವಹಾರ ಮಾಡಕೂಡದು. ಕಾಯಕದ ಫಲವನ್ನು ಶಿವಶರಣರಲ್ಲಿ ಅವಶ್ಯಕತೆ ಇದ್ದವರಿಗೆ ಹಂಚಿ ಉಣ್ಣುವ ದಾಸೋಹ ಸಿದ್ದಾಂತವನ್ನು ಅನುಸರಿಸಿದರೆ ನಿತ್ಯ ತೃಪ್ತಿಕೆ ಲಭ್ಯ ಎಂದು ವಚನದ ಅರ್ಥವನ್ನು ಮನಮುಟ್ಟುವಂತೆ ಪ್ರಚುರಪಡಿಸಿದರು.

ಹಾಗೆಯೇ ಸಮಾರೋಪದಂತೆ ಪ್ರೊ. ಸಿದ್ಧಲಿಂಗಪ್ಪ ಬ. ಬರಗುಂಡಿ ಅವರು ವಚನವನ್ನು ಮತ್ತೊಮ್ಮೆ ವಾಚಿಸುತ್ತ ಮನುಷ್ಯನ ಬದುಕಿನಲ್ಲಿ ಎಲ್ಲರಿಗೂ ಎಲ್ಲ ಪಡಿಪದಾರ್ಥಗಳನ್ನು ಉತ್ಪಾದಿಸುವ, ನೈಸರ್ಗಿಕವಾಗಿ ಲಭ್ಯವಾಗಿರಲಾರದ ಸಮಯದಿಂದ ದ್ರವ್ಯ-ದ್ರವ್ಯಗಳ ನಡುವೆ ವಿನಿಮಯ ಪದ್ಧತಿ ಜಾರಿಯಲ್ಲಿ ಬಂದಿತು. ನಂತರ ಎಲ್ಲರಲ್ಲಿಯೂ ದ್ರವ್ಯಗಳ ಕೊರತೆ ಉಂಟಾದಾಗ ಧನದ ಚಲಾವಣೆ ಕಾಲದಿಂದ ಬಡ್ಡಿ, ಚಕ್ರಬಡ್ಡಿ ವ್ಯವಹಾರ ಚಾಲನೆಯಲ್ಲಿ ಜಾರಿಯಾಯಿತು. ಸಮಾಜದಲ್ಲಿ ಆರ್ಥಿಕ ಅಸಮತೋಲನದ ಕಾರಣದಿಂದ, ಸಮಸ್ಯೆಗೆ ಪರಿಹಾರವನ್ನು ಶರಣರು ದ್ರವ್ಯಗಳ ಮೇಲೆ ವೈಯಕ್ತಿಕ ಹಕ್ಕು ಇಲ್ಲ. ನಮ್ಮಲ್ಲಿ ಸಂಗ್ರಹವಾಗಿರುವ ದ್ರವ್ಯಗಳು ಶಿವನ ಸೊತ್ತು ಹೊರತು ನಾವುಗಳು ಸೃಷ್ಟಿಸಿದಲ್ಲ ಎನ್ನುವ ಅರ್ಥವನ್ನು ದಾಸಿಮಯ್ಯಗಳ ಇಳೆ ನಿಮ್ಮ ದಾನ, ಬೆಳೆ ನಿಮ್ಮ ದಾನ, ಸುಳಿದು ಸೊಸುವ ಗಾಳಿ ನಿಮ್ಮ ದಾನ… ಎಂಬ ವಚನವನ್ನು ಉಲ್ಲೇಖಿಸಿದರು. ಹಡೆದ (ಪಡೆದ) ಸಂಪತ್ತು ಕಡಬಡ್ಡಿಯ ವ್ಯವಹಾರಕ್ಕೆ ಬಳಸದೇ ಮೃಡ ಭಕ್ತರ ಅವಶ್ಯಕತೆ ಮನಗಂಡು ಜಂಗಮ ಸದೃಶವಾದ ಸಮಾಜಕ್ಕೆ ಮಮಕಾರ ಪ್ರತ್ಯಯ ರಹಿತವಾಗಿ ಸಂತೃಪ್ತಿಯಿಂದ ಸಮರ್ಪಿಸಿ ನಿಶ್ಚಯವಾಗುವುದೇ ಶರಣ ಧರ್ಮ, ಲಿಂಗವಂತನ ಜವಾಬ್ದಾರಿ. ಅವಶ್ಯಕತೆ ಇದ್ದವರಿಗೆ ಕೊಟ್ಟಂತ ಫಲಗಳ ಮೇಲೆ ಹಕ್ಕನ್ನು ಕಳೆದುಕೊಳ್ಳಬೇಕು. ಕೊಟ್ಟೇ ಕೊಟ್ಟೇ ಎಂಬ ಭಾವನೆ ಇರಕೂಡದು. ನಮ್ಮಲ್ಲಿಯ ದುಡಿಮೆಯಿಂದ ಉಳಿದ ಫಲವು ಶಿವನ ಸೋಮ್ಮು. ತೆಗೆದುಕೊಂಡವರು ಕೆಲವೊಮ್ಮೆ ಮರುಳಿಸದಂತ ಸ್ಥಿತಿಯಲ್ಲಿರುವರು. ಅವರು ಮರಳಿಸದಿದ್ದರೆ ಶಿವನ ಸೋಮ್ಮು ಶಿವನಿಗೆ ಸಮರ್ಪಿಸಿದಂತಾಯಿತು ಎಂದು ತಿಳಿದು ತೃಪ್ತಿಯಿಂದ ಜೀವನ ಸಾಗಿಸಬೇಕೆಂದು ತಿಳಿಸುತ್ತಾ ದಾನಕ್ಕಿಂತ ದಾಸೋಹ ಶ್ರೇಷ್ಠ. ವಸ್ತುಗಳನ್ನು ದಾನ ಮಾಡಿದಂತೆ ಕನ್ಯೆಯನ್ನು ದಾನ ಮಾಡಲಾಗದು. ಇದು ವಿಕೃತತೆಯನ್ನು ತೋರಿಸುತ್ತದೆ. ದಾನ ತೆಗೆದುಕೊಂಡವರಲ್ಲಿ ಕೀಳರಮೆಯನ್ನು ಮತ್ತು ಕೊಟ್ಟವರಲ್ಲಿ ಅಹಂಭಾವವನ್ನು ಸೃಷ್ಟಿಸುತ್ತದೆ.
ದಾಸೋಹದಲ್ಲಿ ಲಿಂಗಾಂಗ ಸಮರಸವನ್ನು ಪ್ರತಿನಿಧಿಸುತ್ತದೆ. ದಾಸೋಹದಿಂದ ವಸುದೈವ ಕುಟುಂಬಕಂ ನ್ನು ಸೂಚಿಸುತ್ತದೆ. ದುಡಿಮೆಯ ಫಲವನ್ನು ಅವಶ್ಯಕತೆ ಇದ್ದವರನ್ನು ಹುಡುಕಿ ಹಂಚಿ ನಿತ್ಯ ತೃಪ್ತಿಯಿಂದ ಬದುಕುವುದೇ ಶರಣರ ದಾಸೋಹ ತತ್ವ ಎಂದು ಅನುಭಾವಿಸಿದರು.
ವಚನ ಪ್ರಾರ್ಥನೆ, ಧರ್ಮ ಗುರು ಬಸವ ತಂದೆಗಳ ಸ್ಮರಣೆಯೊಂದಿಗೆ ಪ್ರಾರಂಭವಾದ ಮಹಾಮನೆಯ ಚಿಂತನಾ ಗೋಷ್ಠಿಯು ಸಾಮೂಹಿಕ ವಚನಗಳನ್ನು ಹೇಳುವುದರ ಮೂಲಕ ಸಂಪನ್ನಗೊಂಡಿತು.
ಗೋಷ್ಠಿಯಲ್ಲಿ ಮಹಾಮನೆಯ ಒಡೆಯರಾಗಿರುವ ಮಹೇಶ ಶಿವರಾತ್ರಿ ಅವರ ಪರಿವಾರದರು, ನೆರೆಹೊರೆಯವರು, ಗುಳೇದಗುಡ್ಡ ಬಸವಕೇಂದ್ರ ಸದಸ್ಯ ಶರಣರಾದ ರಾಚಣ್ಣ ಕೆರೂರ, ಅಶೋಕ ಸವದಿ, ಪ್ರೊ. ಬಸಲಿಂಗಯ್ಯ ಕಂಬಾಳಿಮಠ, ಪುತ್ರಪ್ಪ ಬೀಳಗಿ, ಮಹಾಲಿಂಗಪ್ಪ ಕರನಂದಿ, ಮಂಜುನಾಥ ನಾಯಿನೇಗಲಿ, ಡಾ. ಗಿರೀಶ ನೀಲಕಂಠಮಠ, ಪಾಂಡಪ್ಪ ಕಳಸಾ ಮತ್ತು ಶರಣೆಯರಾದ ಅನ್ನಪೂರ್ಣ ಕೆರೂರ, ಶ್ರೀದೇವಿ ಮು. ಶೇಖಾ, ವಿಶಾಲಕ್ಷಿ ಗಾಳಿ, ಜಯಶ್ರೀ ಬರಗುಂಡಿ, ಗೀತಾ ತಿಪ್ಪಾ ಹಾಗೂ ಕುಂಬಾರ ಓಣಿಯ ಸದಸ್ಯರು ಹಾಗೂ ಪಟ್ಟಣದ ಹೊರವಲಯದ ಬಸವ ಕೇಂದ್ರದ ಸದಸ್ಯರು google meet ಮೂಲಕ ಭಾಗವಹಿಸಿದ್ದರು.