ಗುಳೇದಗುಡ್ಡ
ಬಸವ ಕೇಂದ್ರದ ವತಿಯಿಂದ ಜರುಗುವ ‘ಮನೆಯಲ್ಲಿ ಮಹಾಮನೆ’ ಸಾಪ್ತಾಹಿಕ ಮಹಾಮನೆ ಕಾರ್ಯಕ್ರಮ ಶನಿವಾರ ಗುಳೇದಗುಡ್ಡ, ಕುಂಬಾರ ಓಣಿಯ ಶರಣ ಅಂತೇಶ ಭದ್ರನ್ನವರ, ಅವರ ಮನೆಯಲ್ಲಿ ಜರುಗಿತು.
ಅಪ್ಪ ಬಸವ ತಂದೆಗಳ ವಚನ
ಒಲ್ಲೆನೆಂಬುದು ವೈರಾಗ್ಯ,
ಒಲಿವೆನೆಂಬುದು ಕಾಯಗುಣ.
ಆವ ಪದಾರ್ಥವಾದಡೇನು ತನ್ನಿದ್ದೆಡೆಗೆ ಬಂದುದ
ಲಿಂಗಾರ್ಪಿತವ ಮಾಡಿ ಭೋಗಿಸುವುದೆ ಆಚಾರ.
ಕೂಡಲಸಂಗಮದೇವರನೊಲಿಸ ಬಂದ
ಪ್ರಸಾದಕಾಯವ ಕೆಡಿಸಲಾಗದು.
ಎಂಬ ವಚನದ ಮೇಲೆ ಅನುಭಾವ ನಡೆಯಿತು.
ಶರಣೆ ಜಯಶ್ರೀ ಬರಗುಂಡಿ ಅವರಿಂದ ವಚನ ಪ್ರಾರ್ಥನೆಯ ನಂತರ, ಪ್ರೊ. ಶ್ರೀಕಾಂತ ಗಡೇದ ಅವರು ವಚನದ ನಿರ್ವಚನೆಗೈಯುತ್ತ ಸಂಕ್ಷಿಪ್ತವಾಗಿ ವಚನಗಳ ಮಹತ್ವವನ್ನು ತಿಳಿಸಿ ಅವು ನಮ್ಮ ಬದುಕಿಗೆ ಹೇಗೆ ಬೇಕಾಗುತ್ತವೆ ಎಂಬುದನ್ನು ವಿವರಿಸುತ್ತ ಅಪ್ಪ ಬಸವಣ್ಣನವರ ಮೇಲಿನ ವಚನದ ಅರ್ಥವನ್ನು ವಿವರಿಸಿದರು. ಸಮಾಜದಲ್ಲಿ ಆವರಿಸುವ ಮೌಢ್ಯವನ್ನು ಕಿತ್ತೆಸೆದು, ಸರ್ವರಲ್ಲಿ ಸಮಾನತೆಯನ್ನು ತರಬೇಕಾಗಿದ್ದರೆ ಮೊದಲು ಜೀವನದಲ್ಲಿ ಬಂದ ಕಷ್ಟಸುಖಗಳನ್ನು ಸಮಾನವಾಗಿ ಸ್ವೀಕರಿಸಬೇಕು. ಕಷ್ಟಗಳು ಸಹಜ, ಅವುಗಳನ್ನೆದುರಿಸಬೇಕು.
ಬೇಕು ಬೇಡಗಳ ಮಾತು ಬೇಕಾಗಿಲ್ಲ. ಮೇಲು ಕೀಳಿನ ಭಾವ ಹೋದಾಗಲೇ ಮನುಷ್ಯನಿಗೆ ವಾಸ್ತವದ ಅರಿವಾಗುತ್ತದೆ. ಮಾನ್ಯ ರಾಜಗೋಪಾಲಾಚಾರಿಯಂಥವರು ತಮ್ಮ ಮನೆಯ ಕಸವನ್ನು ತಾವೇ ಗುಡಿಸುತ್ತಿದ್ದರು ಎಂಬುದರ ಹಿಂದೆ ಶರಣರ ವಚನದ ಅರ್ಥವೇ ಅಡಗಿದೆ, ಕಾರಣ ಅಣ್ಣನವರ ಈ ವಚನದಂತೆ ನಾವು ಬದುಕಿ ಜೀವನವನ್ನು ಸಾರ್ಥಕ ಪಡಿಸಿಕೊಳ್ಳೋಣ ಎಂದರು.

ನಂತರ ಅನುಭಾವದಲ್ಲಿ ಪಾಲ್ಗೊಂಡ ಶರಣೆ ಪ್ರೊ. ಜಿ. ಎಸ್. ಕಲ್ಯಾಣಿಯವರು ಇದೇ ವಚನವನ್ನು ವಿಶ್ಲೇಷಿಸುತ್ತ ನಮ್ಮ ತನುಮನಗಳನ್ನು ಶುದ್ಧೀಕರಿಸುವ ರೀತಿಯನ್ನು ಈ ವಚನ ತಿಳಿಸಿಕೊಡುತ್ತದೆ ಎಂಬುದನ್ನು ವಿವರವಾಗಿ ತಿಳಿ ಹೇಳಿದರು. ಶರಣ ಮಾರ್ಗದಲ್ಲಿ ಅನುಭಾವ ಎಷ್ಟು ಮುಖ್ಯವೋ ಶರೀರ ಸಂಪತ್ತನ್ನು ಕಾಯ್ದುಕೊಳ್ಳುವದೂ ಅಷ್ಟೇ ಮುಖ್ಯ. ಜೀವನದಲ್ಲಿ ಬೇಕು ಬೇಡ ಎನ್ನದೇ ಬಂದುದನ್ನು ಬಂದ ಹಾಗೆ ಸ್ವೀಕರಿಸಬೇಕು. ಬೇಕು ಅನ್ನುವದು ಹೇಗೆ ತನುವಿನ ಗುಣವೋ ಹಾಗೆ ಬೇಡ ಎನ್ನುವುದು ತನುವಿನ ಗುಣವೆ. ಪಾಲಿಗೆ ಬಂದದ್ದು ಪಂಚಾಮೃತ. ಇಹ ಪರಗಳ ಸುಖಕ್ಕೆ ಕೆಲವರು ದೇಹ ದಂಡನೆಗೆ ಇಳಿಯುತ್ತಾರೆ. ಇದು ಸಲ್ಲದು. ಬಂದುದರಲ್ಲಿ ಸುಖ ದುಃಖವನ್ನರಿಸದೇ ಅದನ್ನು ಅಂಗಗುಣಕ್ಕರ್ಪಿಸಿ ಲಿಂಗ ಗುಣ ಸಂಪನ್ನರಾಗಬೇಕು. ಬೆಳಿಗ್ಗೆ ಎದ್ದೊಡನೆಯೇ ಇಷ್ಟಲಿಂಗ ದರ್ಶನದೊಂದಿಗೆ ದಿನ ಪೂರ್ತಿಯೂ ಖುಷಿಪಡುತ್ತ ಲಿಂಗಾನಂದದಲ್ಲಿರುವ ಪ್ರಯತ್ನ ಮಾಡಬೇಕೆಂದು ಅಭಿಪ್ರಾಯಪಟ್ಟರು.
ಇದೇ ವಚನದ ಅನುಭಾವದಲ್ಲಿ ನಿವೃತ್ತ ಪ್ರಾಚಾರ್ಯ ಶರಣ ಸಿದ್ಧಲಿಂಗಪ್ಪ ಬರಗುಂಡಿಯವರು ಪಾಲ್ಗೊಂಡು ವಚನದ ಆಶಯವನ್ನು ನೆರೆದ ಮಹಾಮನೆಯ ಸದಸ್ಯರಿಗೆ ವಿವರವಾಗಿ ತಿಳಿಯ ಪಡಿಸಿದರು. ಬದುಕಿನಲ್ಲಿ ರಾಗ ವಿರಾಗಗಳು ಸಂಸಾರ – ಸನ್ಯಾಸ, ಸುಖ-ದುಃಖಗಳು ಪರಸ್ಪರ ವಿರೋಧವಾದವುಗಳಲ್ಲ. ಅವು ಮನುಷ್ಯನ ಸಮಯಾನುವರ್ತಿ ಗುಣಗಳು. ನಿಜಕ್ಕೂ ಪರಶಿವನ ಸೃಷ್ಟಿಯಲ್ಲಿ ಬೇಕುಬೇಡೆಂಬುದಿಲ್ಲ. ಆದರೆ ನಾವು ತನು ಗುಣದಿಂದ ಆ ಕ್ಷಣಕ್ಕೆ ಅನಿಸುವಂತಹವು. ಇಲ್ಲಿಯ ವೈರಾಗ್ಯದ ಒಲ್ಲೆ ಎನ್ನುವ ನಿರಾಕರಣೆಯಾಗಲಿ, ಕಾಯಗುಣದ ಬೇಕು ಎಂಬ ಭಾವವಾಗಲಿ ಎರಡೂ ದೋಷವೇ. ಅಂಗದಿಚ್ಛೆಯನ್ನೇ ಹೊಂದಿರುವಂತಹವು. ಬೇಕು ಎಂಬ ಭಾವವೇ ಅರಿಷಡರ್ಗಕ್ಕೆ ಕಾರಣವಾಗುತ್ತದೆ. ಬಯಸಿದ ವಸ್ತು ದೊರೆಯದುದಾಗ ಕ್ರೋಧವುಂಟಾಗುತ್ತದೆ. ದುಃಖವಾಗುತ್ತದೆ.

ಅದರಲ್ಲಿಯೇ ಮನಸ್ಸು ನಿಂತು ಬಿಡುತ್ತದೆ. ಹೀಗಾಗಿ ಮೂಲಸ್ವರೂಪದತ್ತ ಮನಹೊರಳದೆ ಕೇವಲ ಭೌತಿಕ ಸ್ಥಿತಿಯಲ್ಲಿ ನಿಂತು ಬಿಡುತ್ತದೆ. ಈ ಸುಖ ದುಃಖಗಳಿಂದ ಹೊರಬರಬೇಕಾದಲ್ಲಿ, ಭೌತಿಕ ವಸ್ತುಗಳನ್ನು ಬೋಗಿಸುವಲ್ಲಿ ಅವುಗಳ ಹಿಂದೆ ಬೆನ್ನು ಬೀಳದೆ ಅವುಗಳನ್ನು ಲಿಂಗಕ್ಕರ್ಪಿಸಿ, ಪದಾರ್ಥ ಗುಣಗಳನ್ನು ಕಳೆದು ಪ್ರಸಾದವನ್ನಾಗಿಸಿ ಸ್ವೀಕರಿಸದರೆ, ಅದು ಅಂಗಕ್ಕನರ್ಪಿತವಾಗದೇ ಲಿಂಗಕ್ಕರ್ಪಿತವಾಗುತ್ತದೆ. ಇದನ್ನೇ ನಿಜವಾದ ಆಚಾರವೆಂದು ಶರಣರು ಭೋಗಿಸುತ್ತಾರೆ. ಈ ಪ್ರಸಾದ ಸ್ವೀಕಾರ ಕೇವಲ ಆಹಾರಕ್ಕೆ ಮಾತ್ರ ಸೀಮಿತವಲ್ಲ. ಪಂಚೇಂದ್ರಿಯಗಳ ಮೂಲಕ ಸೇವಿಸುವ ವಿಷಯಗಳಿಗೂ ಸಂಬಂಧಿಸುತ್ತದೆ. ಅಷ್ಟ ತನುವಿನಿಂದಾದ ಈ ಜೀವ ಹೊಂದಿರುವ ದೇಹ ಸುಖಾಸುಮ್ಮನೇ ಬಂದಿರುವುದಲ್ಲ. ಅದು ಕೂಡಲಸಂಗಮನನ್ನು ಒಲಿಸಕ್ಕೆ ಬಂದ ಪ್ರಸಾದ ಕಾಯ. ವೈದಿಕ ಇತ್ಯಾದಿ ಪಂಗಡಗಳಲ್ಲಿ ನಿಕೃಷ್ಠವಾದ ಶರೀರವನ್ನು ಅಪ್ಪ ಬಸವಣ್ಣನವರು ಕೆಡಿಸಲು ಬಾರದ ಪ್ರಸಾದ ಕಾಯವನ್ನಾಗಿಸಿದ್ದಾರೆ. ಈ ಕಾಯವನ್ನು ಕಾಯ್ದುಕೊಂಡು ಕಾಯಕದಿಂದ ದಾಸೋಹದಿಂದ ದೇಹವನ್ನೇ ಕೈಲಾಸವಾಗಿಸಬೇಕು. ವೃತ, ನೇಮ, ಅರ್ಚನೆ ಪೂಜೆಗಳ ನೆವದಲ್ಲಿ ದೇಹವನ್ನು ದಂಡಿಸಕೂಡದೆಂದು ಶರಣರು ಸ್ಪಷ್ಟವಾಗಿ ಸಾರಿದ್ದಾರೆ.
ಅಪೇಯ ದಾನ, ಅಭಕ್ಯ ಭೋಜನವನ್ನು ಹೊರತು ಪಡಿಸಿ ತಾನುಣ್ಣುವ ಪಡಿಪದಾರ್ಥಗಳನ್ನು ಆಯಾ ಇಂದ್ರಿಯಗಳ ಮುಂಬಾಗಿಲಿನಲ್ಲಿ ನಾಸಿಕ ಮುಂತಾದ ಇಂದ್ರಿಯಗಳಲ್ಲಿ ಆಚಾರ ಮೊದಲಾದ ಲಿಂಗಗಳನ್ನು ಸಾಣಿಗೆಯ ರೂಪದಲ್ಲಿರಿಸಿ, ಅಲ್ಲಿಂದ ಸೋಸಿ ಬಂದ ಪದಾರ್ಥ ಪ್ರಸಾದವಾಗಿ ಸ್ವೀಕಾರವಾದಾಗ, ಅಂಗ ಲಿಂಗವೇ ಆಗುತ್ತದೆ. ಮನ ಮಾಹದೇವನಾಗುತ್ತದೆ. ಹೀಗೆಯೇ ಜೀವನದಲ್ಲಿ ಬರುವ ಎಲ್ಲ ದುಃಖ ದುಮ್ಮಾನಗಳನ್ನು ಬಂದದ್ದು ಬರಲಿ, ಬಾರದು ಬಪ್ಪದು ಎಂಬ ಭಾವದಿಂದ ಸ್ವೀಕರಿಸಿ ಸಮಸ್ತ ಮಾನವ ಕೋಟಿಯೇ ಜಂಗಮ ಸ್ವರೂಪವಾಗಬೇಕೆಂಬುದು ಈ ವಚನದಲ್ಲಿನ ಭಾವವಾಗಿದೆ ಎಂದು ತಿಳುಹಿದರು.
ವಚನಪ್ರಾರ್ಥನೆ, ಧರ್ಮಗುರು ಬಸವಸ್ಮರಣೆಯೊಂದಿಗೆ ಪ್ರಾರಂಭವಾದ ಚಿಂತನಗೋಷ್ಠಿಯು ಸಾಮೂಹಿಕ ವಚನಮಂಗಲದೊಂದಿಗೆ ಸಂಪನ್ನಗೊಂಡಿತು.
ಮಹಾಮನೆಯ ಎಲ್ಲ ಕುಟುಂಬದ ಸದಸ್ಯರು, ಅಕ್ಕಪಕ್ಕದವರು, ಬಸವ ಕೇಂದ್ರದ ಸದಸ್ಯರಾದ ರಾಜಣ್ಣ ಕೆರೂರ, ಕಂಬಾಳಿಮಠ, ಪಾಂಡಪ್ಪ ಕಳಸಾ, ವಿಶಾಲಾಕ್ಷಿ ಗಾಳಿ, ಪುತ್ರಪ್ಪ ಬೀಳಗಿ, ಶರಣೆ ದೇವಿ ಶೇಖಾ, ದಾಕ್ಷಾಯಣಿ ತೆಗ್ಗಿ, ಸುಮಿತ ಗೆದ್ದಲಮರಿ, ಭದ್ರಣ್ಣವರ ಪರಿವಾರದ ಸದಸ್ಯರು, ಕುಂಬಾರ ಓಣಿಯ ಶರಣ-ಶರಣೆಯರು ಹಾಗೂ ಪಟ್ಟಣದ ಹೊರವಲಯದ ಬಸವಕೇಂದ್ರದ ಸದಸ್ಯರು google meet ಮೂಲಕ ಭಾಗವಹಿಸಿದ್ದರು. ಪಾಲ್ಗೊಂಡಿದ್ದರು.