ಗುಳೇದಗುಡ್ಡ
ಪ್ರತಿ ಶನಿವಾರದಂದು ‘ಮನೆಯಲ್ಲಿ ಮಹಾಮನೆ’ ಸಾಪ್ತಾಹಿಕ ಕಾರ್ಯಕ್ರಮವು ಗುಳೇದಗುಡ್ಡ ಬಸವ ಕೇಂದ್ರದ ವತಿಯಿಂದ ಕಂಠಿ ಪೇಟೆಯ ಶರಣ ದಾನಪ್ಪ ಬಸಪ್ಪ ಮಾನುಟಗಿ ಅವರ ಮನೆಯಲ್ಲಿ ಜರುಗಿತು.
ಅಪ್ಪಣ್ಣ ತಂದೆಗಳ ವಚನ –
ಸಾವಾಗ ದೇವನೆಂದರೆ, ಸಾವು ಬಿಡುವುದೇ?
ಇದಾವ ಮಾತೆಂದು ನುಡಿವಿರಿ.
ಎಲೆಯಣ್ಣಗಳಿರಾ, ಬಾಳುವಲ್ಲಿ, ಬದುಕುವಲ್ಲಿ,
ಗುರು ಲಿಂಗ ಜಂಗಮವನರಿಯದೆ,
ಹಾಳುಹರಿಯ ತಿಂದ ಶುನಕನಂತೆ ಕಾಲ್ಗೆಡೆದು ಓಡಾಡಿ ಏಳಲಾರದೆ ಬಿದ್ದಾಗ,
ಶಿವ ಶಿವ ಎಂದರೆ, ಅಲ್ಲಿ ದೇವನಿಪ್ಪನೆಂದು ಇದ ನೋಡಿ ನಾಚಿ ನಗುರ್ತಿರ್ದೆ,
ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
ಎಂಬ ವಚನದ ಮೇಲೆ ಅನುಭಾವ ನಡೆಯಿತು.

ಪ್ರಾರಂಭದಲ್ಲಿ ಶರಣೆ ಜಯಕ್ಕ ಬರಗುಂಡಿ ಹಾಗೂ ಸಂಗಡಿಗರಿಂದ ಸಾಮೂಹಿಕ ಪ್ರಾರ್ಥನೆಯ ನಂತರ ಪ್ರೊ. ಶ್ರೀಕಾಂತ ಗಡೇದವರು ವಚನಕಾರರಾದ ಅಪ್ಪಣ್ಣ ತಂದೆಗಳ ಬಗ್ಗೆ ತಿಳಿಸುತ್ತಾ ಅನುಭಾವ ಪ್ರಾರಂಭಿಸಿದರು. ಹುಟ್ಟು ಆಕಸ್ಮಿಕ, ಸಾವು ಖಚಿತ ಮರಣ ಬರುವುದಕ್ಕಿಂತ ಮುಂಚೆ ಶಿವ ಪಥದಲ್ಲಿ ಬದುಕಬೇಕು. ವ್ಯಸನಗಳಿಂದ ಮುಕ್ತಿ ಪಡೆಯಲು, ಬದುಕನ್ನುಕಟ್ಟಿಕೊಳ್ಳಲು ಶರಣರ ವಚನಗಳು ಮಾರ್ಗದರ್ಶನ ಮಾಡುತ್ತವೆ. ಯಾವುದೇ ಒಳ್ಳೆಯ ಕಾರ್ಯ ಮಾಡದೇ ಸಾವು ಬಂದಾಗ ಶಿವ ಶಿವ ಎಂದರೆ ದೇವನು ನಮ್ಮತ್ತ ನೋಡುವುದಿಲ್ಲ ಎಂದು ತಮ್ಮ ಚಿಂತನೆಯಲ್ಲಿ ತಿಳಿಸಿದರು.
ಗೋಷ್ಠಿ ಮುಂದುವರೆದು ಪ್ರೊ. ಸುರೇಶ ರಾಜನಾಳ ಅವರು ಮಾತನಾಡುತ್ತಾ, ಹುಟ್ಟಿನ ಜೊತೆಗೆ ಮರಣ ನೆರಳಿನಂತೆ ನಮ್ಮ ಬೆನ್ನ ಹಿಂದೆಯೇ ಇರುತ್ತದೆ. ಹುಟ್ಟು – ಸಾವಿನ ನಡುವೆ ನಮ್ಮ ಬದುಕು ಸಾರ್ಥಕ ಮಾಡಿಕೊಳ್ಳಬೇಕಾದರೆ ಗುರು-ಲಿಂಗ-ಜಂಗಮವನ್ನು ಅರಿತು ಬದುಕಿದಾಗ ಮಾತ್ರ ನಮ್ಮ ಮೂಲ ಸ್ಥಾನಕ್ಕೆ ಮರಳುತ್ತೇವೆ. ನಮಗೆ ಶಿವ ಪಥ ಗರ್ಭದೊಳಗೆ ಇದ್ದಾಗಲೇ ಪ್ರಾರಂಭವಾಗುತ್ತದೆ. ಆದರೆ ಮಲತ್ರಯ ವಾಸನೆಯಿಂದ ನಮಗೆ ಮರೆವು ಆಗಿರುತ್ತದೆ ಎಂದು ಈ ವಚನ ನಮ್ಮನ್ನು ಎಚ್ಚರಿಸುತ್ತದೆ ಎಂದು ಮಾತನಾಡಿದರು.

ಗೋಷ್ಠಿಯ ಸಮಾರೋಪದಂತೆ ಪ್ರೊ. ಸಿದ್ಧಲಿಂಗಪ್ಪ ಬರಗುಂಡಿ ಅವರು ವಚನವನ್ನು ಮತ್ತೊಮ್ಮೆ ವಾಚಿಸುತ್ತ, ಮನುಷ್ಯನ ಬದುಕಿಗೆ ಈ ವಚನ ದೀಪವಾಗಿ ಕಾಣುತ್ತದೆ ಎಂದು ಪ್ರವಚಿಸುತ್ತ ಅಪ್ಪಣ್ಣನವರನ್ನು ನಿಜ ಸುಖಿ ಶರಣ, ಇಂದ್ರಿಯ ಗುಣಗಳನ್ನು ನಿಜ ಸುಖವೆಂದು ತಿಳಿದುಕೊಡ್ಡಿದ್ದೇವೆ. ಇವುಗಳ ಸುಖ ಖಂಡಿತ ಸುಖ ಎಂದು, ಅಖಂಡಿತ ಸುಖವನ್ನು ಅನುಭವಿಸಬೇಕಾದರೆ ಗುರು-ಲಿಂಗ-ಜಂಗಮವನ್ನು ಅರಿಯಬೇಕು.
ಆ ಅರಿವನ್ನು ಆಚಾರವನ್ನಾಗಿಸಿದಾಗ ನಮಗೆ ಅಖಂಡಿತ ಸುಖದಲ್ಲಿ ಬದುಕುತ್ತೇವೆ. ಅಖಂಡಿತ ಸುಖದ ಮಾರ್ಗವನ್ನು ಕಲ್ಯಾಣದಲ್ಲಿ ಬಸವಾದಿ ಶರಣರು ಕಂಡುಕೊಂಡಿದ್ದರು ಆ ಮಾರ್ಗವನ್ನು ಅನುಸರಿಸುವುದಕ್ಕಾಗಿ ದೂರದ ಪ್ರದೇಶಗಳಿಂದ ರಾಜ್ಯತ್ವದಂತಹ ಅನೇಕ ಅನುಕೂಲತೆಗಳನ್ನು ಬಿಟ್ಟು ಕಲ್ಯಾಣದ ಮಹಾಮನೆಗೆ ಬಂದರು. ಲಿಂಗಾಯತ ಧರ್ಮ ಸನ್ಯಾಸಿಗಳ ಧರ್ಮವಲ್ಲ. ಅಪ್ಪಟ್ಟ ಗ್ರಹಸ್ಥ ಧರ್ಮ. ಈ ಜಗತ್ತನ್ನು ಸುತ್ತಿದ ಅಲ್ಲಮರು ಬಸವ ತಂದೆಗಳನ್ನು ಒಪ್ಪಿಕೊಂಡು, ಅವರಿಗೆ ಬೆನ್ನಲುವಾಗಿ ನಿಂತರು ಎಂದು ಅಷ್ಟಾವರಣ,ಇಷ್ಟಲಿಂಗ ಮತ್ತು ಕಾಯಕದ ಬಗ್ಗೆ ಅರಿವನ್ನು ನೀಡಿದರು.

ವಚನ ಪ್ರಾರ್ಥನೆ, ಧರ್ಮ ಗುರು ಬಸವ ಸ್ಮರಣೆಯೊಂದಿಗೆ ಪ್ರಾರಂಭವಾದ ಮಹಾಮನೆಯ ಚಿಂತನಾ ಗೋಷ್ಠಿಯು ಸಾಮೂಹಿಕ ವಚನಗಳನ್ನು ಹೇಳುವುದರ ಮೂಲಕ ಸಂಪನ್ನಗೊಂಡಿತು.
ಗೋಷ್ಠಿಯಲ್ಲಿ ಮಹಾಮನೆಯ ಒಡೆಯರಾಗಿರುವ ಶರಣ ದಾನಪ್ಪ ಬಸಪ್ಪ ಮಾನುಟಗಿ ಅವರ ಪರಿವಾರದವರು, ನೆರೆಹೊರೆಯವರು, ಬಸವಕೇಂದ್ರ ಸದಸ್ಯರಾದ ಶರಣರಾದ ಅಶೋಕ ಸವದಿ, ಪ್ರೊ. ಬಸಲಿಂಗಯ್ಯ ಕಂಬಾಳಿಮಠ, ಪ್ರೊ. ಶ್ರೀಕಾಂತ ಗಡೇದ, ಪುತ್ರಪ್ಪ ಬೀಳಗಿ, ಮಹಾಲಿಂಗಪ್ಪ ಕರನಂದಿ, ಡಾ. ಗಿರೀಶ ನೀಲಕಂಠಮಠ, ಪಾಂಡಪ್ಪ ಕಳಸಾ, ಸುರೇಶ ರಾಜನಾಳ, ಕಂಠಿ ಹಿರಿಯರು, ಮಂಜುನಾಥ ನಾಯನೇಗಲಿ ಮತ್ತು ಶರಣೆಯರಾದ ದಾಕ್ಷಾಯಣಿ ತೆಗ್ಗಿ, ಶ್ರೀದೇವಿ ಮು. ಶೇಖಾ, ಜಯಶ್ರೀ ಬರಗುಂಡಿ, ವಿಶಾಲಾಕ್ಷಿ ಗಾಳಿ ಹಾಗೂ ಕಂಠಿ ಪೇಟೆಯ ಸದಸ್ಯರು ಹಾಗೂ ಪಟ್ಟಣದ ಹೊರವಲಯದ ಬಸವ ಕೇಂದ್ರದ ಸದಸ್ಯರು google meet ಮೂಲಕ ಭಾಗವಹಿಸಿದ್ದರು.