ಗುಳೇದಗುಡ್ಡ
ಬಸವ ಕೇಂದ್ರದ ವಾರದ ‘ಮನೆಯಲ್ಲಿ ಮಹಾಮನೆ’ ಕಾರ್ಯಕ್ರಮ ಶನಿವಾರ ಕುಂಬಾರ ಓಣಿಯ ಶರಣ ಗಂಗಾಧರ ಬಸಪ್ಪ ಉದ್ನೂರ ಅವರ ಮನೆಯಲ್ಲಿ ಜರುಗಿತು.
ವ್ಯೋಮಕಾಯ ಅಲ್ಲಮ ಪ್ರಭುಗಳ –
ಅಜ್ಞಾನವೆಂಬ ತೊಟ್ಟಿಲೂಳಗೆ,
ಜ್ಞಾನವೆಂಬ ಶಿಶುವ ಮಲಗಿಸಿ,
ಸಕಲ ವೇದಶಾಸ್ತ್ರವೆಂಬ ನೇಣ ಕಟ್ಟಿ ,
ಹಿಡಿದು ತೂಗಿ ಜೋಗುಳವಾಡುತ್ತಿದ್ದಾಳೆ,
ಭ್ರಾಂತಿಯೆಂಬ ತಾಯಿ! |
ತೊಟ್ಟಿಲು ಮುರಿದು, ನೇಣು ಹರಿದು,
ಜೋಗುಳ ನಿಂದಲ್ಲದೆ.
ಗುಹೇಶ್ವರನೆಂಬ ಲಿಂಗವ ಕಾಣಬಾರದು.
ಈ ವಚನದ ಮೇಲೆ ಅನುಭಾವ ನಡೆಯಿತು.
ಪ್ರೊ. ಶ್ರೀಕಾಂತ ಗಡೇದ ಅವರು ವಚನದ ನಿರ್ವಚನೆಗೈಯುತ್ತ ಗುಹೇಶ್ವರ ಲಿಂಗವನ್ನು ಅರಿತುಕೊಳ್ಳಬೇಕಾದರೆ ನಮ್ಮ ಪಾರಂಪರಿಕ ಮೌಢ್ಯವನ್ನು ತ್ಯಜಿಸಿ ಅರಿವಿನತ್ತ ಸಾಗಬೇಕು. ದಿನನಿತ್ಯವೂ ಸಮಾಜದಲ್ಲಿ ಕಾಣಬರುವ ಕೊಲೆ, ಸುಲಿಗೆ, ಅತ್ಯಾಚಾರ ಇವುಗಳಿಂದ ಹೊರಬರಲು ವಚನಗಳ ಅಧ್ಯಯನ ನಡೆಯಬೇಕು. ನಮ್ಮಲ್ಲಿನ ಭ್ರಾಂತಿ ಕಳೆದು ಸುಜ್ಞಾನ ಮೂಡಬೇಕು ಎಂದು ಅಭಿಪ್ರಾಯಪಟ್ಟರು.
ಶರಣೆ ಪ್ರೊ. ಗಾಯತ್ರಿ ಕಲ್ಯಾಣಿಯವರು ‘ಅವೈದಿಕ ಶರಣ ತತ್ವವು ನಮಗೆಲ್ಲ ಮಾದರಿಯಾಗಬೇಕು. ಮೂಲತಃ ತನ್ನ ಸ್ವರೂಪದಲ್ಲಿಯೇ ಇರುವ ಜ್ಞಾನವೆಂಬ ಶಿಶುವನ್ನು ಅಜ್ಞಾನವೆಂಬ ತೊಟ್ಟಿಲಲ್ಲಿ ಮಲಗಿಸಿ, ಓದಿನ ಮಾತೆನಿಸಿದ ವೇದ, ಶಾಸ್ತ್ರಗಳೆಂಬ ಅವಿಚಾರ ಮೌಢ್ಯದ ಕಟ್ಟಿನಲ್ಲಿ ಬಿಗಿದು ಭ್ರಾಂತಿಯಲ್ಲಿರಿಸಿದ್ದೇವೆ, ಈ ಭ್ರಾಂತಿಯಳಿಯದೆ ತನ್ನ ಸ್ವರೂಪ ಜ್ಞಾನವಾಗಲಾರದು. ತನ್ನನ್ನು ತಾನು ಅರಿಯದೇ, ಹೊರಗಿನ ವಸ್ತುಗಳಲ್ಲಿ ದೇವರನ್ನು ಕಾಣಲು ಆಗದು. ಹೊರಗಿನ ನೋಟವನ್ನು ಒಳಗಿನ ಆಳಕ್ಕೆ ಇಳಿಸಿದಾಗ ನಿಜದ ನಿಲುವಿನ ಅರಿವಾಗುತ್ತದೆ, ಅದೇ ಗುಹೇಶ್ವರ ಎಂದು ವಚನದ ಅರ್ಥ ವಿವರಿಸಿದರು.
ಶರಣ ಪ್ರೊ. ಸಿದ್ಧಲಿಂಗಪ್ಪ ಬರಗುಂಡಿ ಅವರು ವಚನವನ್ನು ವಿವರಿಸುತ್ತಾ, ತಾನು ದೈವೀ ಚೈತನ್ಯವೇ ಆಗಿದ್ದೇನೆ. ಆ ದೈವೀ ಚೈತನ್ಯವನ್ನೇ ಮಹಾಲಿಂಗವೆಂದು, ಗುಹೇಶ್ವರನೆಂದು, ವಿಶ್ವಚೈತನ್ಯವೆಂದು ಇತ್ಯಾದಿಗಳಿಂದ ಕರೆಯಲಾಗಿದೆ. ಇದನ್ನೇ ಜನಸಾಮಾನ್ಯರು ದೇವರೆಂದು ಕರೆದು ಅದಕ್ಕೆ ಗುಣ, ರೂಪ, ಪ್ರಪಂಚವನ್ನು ಅಂಟಿಸಿ ಸಗುಣ, ಸರೂಪ, ಸಪ್ರಪಂಚವನ್ನಾಗಿಸಿ ದೇವರು ತನ್ನಿಂದ ಭಿನ್ನವಾಗಿದ್ದಾನೆಂಬ ಭ್ರಾಂತಿಗೆ ಒಳಗಾಗಿದ್ದಾನೆ. ಆದರೆ ಹಾಗಿಲ್ಲ ಮಹಾಲಿಂಗದ ಸ್ವರೂಪವೇ ತಾನು ಎಂಬ ಜ್ಞಾನವನ್ನು, ಮಲದೋಷ, ವಿಕ್ಷೇಪದೋಷ ಹಾಗೂ ಆವರಣ ದೋಷಗಳೆಂಬ ತ್ರಿದೋಷದ ಅಜ್ಞಾನಕ್ಕೆ ಕಾರಣವಾಗಿ ಅದೇ ಅಮಲು ತರಿಸುವ ತೊಟ್ಟಿಲಲ್ಲಿ ಮಲಗಿದ್ದಾನೆ.
ಇದರಿಂದ ಹೊರಬರಲಾರದ ಹಾಗೆ ಸಂಪ್ರದಾಯ, ವೇದ, ಶಾಸ್ತ್ರಗಳೆಂಬ ಮೌಢ್ಯದ ಬಂಧನಕ್ಕೆ ಸಿಲುಕಿ ತನ್ನನ್ನು ಅಂಗವೆನಿಸಿಕೊಂಡು ತಾನು ಆ ಮಹಾಲಿಂಗಕ್ಕಿಂತ ಭಿನ್ನನಾಗಿದ್ದು, ರೂಪ, ಲಿಂಗ, ವರ್ಣ ಇತ್ಯಾದಿ ಭಾವ ಭ್ರಮಿತನಾಗಿದ್ದಾನೆ. ಅದೇ ಗುಂಗಿನಲ್ಲಿ ವ್ಯವಹರಿಸುತ್ತಿದ್ದಾನೆ. ತನ್ನ ಮೂಲ ಸ್ವರೂಪ ತಿಳಿಯದೆ ಭವ ಬಂಧನಕ್ಕೆ ಒಳಗಾಗಿ ಲಿಂಗದಿಂದ ದೂರ ಸರಿದಿದ್ದಾನೆ. ಇದರಿಂದ ಹೊರಬಂದು, ಪರಶಿವನ ಚಿದಂಶವೇ ಆಗಿದ್ದೇನೆ ಎಂಬ ಗುಹೇಶ್ವರನನ್ನು ಅರಿಯಬೇಕಾಗಿದ್ದರೆ, ಅಜ್ಞಾನವೆಂಬ ತೊಟ್ಟಿಲನ್ನು, ಮೌಢ್ಯದ ಪರಾಕಾಷ್ಠೆಯಾದ ವೇದ, ಶಾಸ್ತ್ರ ಮೊದಲಾದ ನೇಣನ್ನು ಹರಿಯುವದು. ಭ್ರಾಂತಿಯೆಂಬ ತಾಯಿಯ ವ್ಯರ್ಥಪ್ರಲಾಪವನ್ನು ತಿರಸ್ಕರಿಸಬೇಕಾಗುತ್ತದೆ ಎಂದು ಅಲ್ಲಮಪ್ರಭುದೇವರು ಹೇಳಿದ್ದಾರೆ ಎಂದು ವಚನದ ಕುರಿತು ಅನುಭಾವ ನುಡಿಗಳನ್ನಾಡಿದರು.
ಕುಮಾರಿ ದಾನಮ್ಮ ಕುಂದರಗಿ ಅವರಿಂದ ವಚನ ಪ್ರಾರ್ಥನೆ, ಧರ್ಮಗುರು ಬಸವಸ್ಮರಣೆಯೊಂದಿಗೆ ಪ್ರಾರಂಭವಾದ ಚಿಂತನಗೋಷ್ಠಿಯು ಸಾಮೂಹಿಕ ವಚನಮಂಗಲದೊಂದಿಗೆ ಸಂಪನ್ನಗೊಂಡಿತು.
ಗೋಷ್ಠಿಯಲ್ಲಿ ಮಹಾಮನೆಯ ಕುಟುಂಬದ ಸದಸ್ಯರು, ಅಕ್ಕಪಕ್ಕದವರು, ಬಸವ ಕೇಂದ್ರದ ಸದಸ್ಯರಾದ ಡಾ. ಗೀರಿಶ ನೀಲಕಂಠಮಠ, ಮಹಾಲಿಂಗಪ್ಪ ಕರನಂದಿ, ಕಂಬಾಳಿಮಠ, ವಿಶಾಲಕ್ಷಿ ಗಾಳಿ, ಪುತ್ರಪ್ಪ ಬೀಳಗಿ, ಜಯಶ್ರೀ ಬರಗುಂಡಿ, ಶ್ರೀದೇವಿ ಶೇಖಾ, ಉದ್ನೂರ ಪರಿವಾರದ ಸದಸ್ಯರು, ಕುಂಬಾರ ಓಣಿಯ ಶರಣ-ಶರಣೆಯರು ಹಾಗೂ ಪಟ್ಟಣದ ಹೊರವಲಯದ ಬಸವಕೇಂದ್ರದ ಸದಸ್ಯರು google meet ಮೂಲಕ ಭಾಗವಹಿಸಿದ್ದರು.
It’s an excellent programme ,lead by all guledgudd Basava commity leaders, it’s gives us an positive environment and its very very necessary programme to the new generation to know about our roots
Thank s to the leaders for such great initiatives.