ಆತ್ಮವನ್ನು ಪರಮಾತ್ಮನ ಜೊತೆ ವಿಲೀನಗೊಳಿಸುವುದು ಎಲ್ಲ ಧರ್ಮಗಳ ಗುರಿ. ಮೋಕ್ಷ ಪ್ರಾಪ್ತಿಗಾಗಿ ಎಲ್ಲರೂ ಕಾಡಿನಲ್ಲಿ ತಪಸ್ಸು ಮಾಡಿದರೆ ಏನು ಪ್ರಯೋಜನವೆಂದು ಶರಣರು ಪ್ರಶ್ನಿಸಿದರು.
ಇದಕ್ಕೆ ಪ್ತ್ರತಿಯಾಗಿ ಲಿಂಗಾಯತ ಧರ್ಮದ ಮೂಲ ತತ್ವವಾದ ‘ಗುರು ಲಿಂಗ ಜಂಗಮ’ಕ್ಕೆ ಬಸವಣ್ಣ ವಿಶಿಷ್ಟ ಅರ್ಥ ನೀಡಿ, ಆಧ್ಯಾತ್ಮದ ಜೊತೆಗೆ ಉತ್ತಮ ಸಮಾಜದ ಬೆಳವಣಿಗೆಗೂ ದಾರಿ ತೋರಿದರು.
ಜ್ಞಾನ ಸಂಪಾದಿಸಿದವರು ‘ಗುರು’ವಾಗುತ್ತಾರೆ. ಅದನ್ನು ಆಚರಣೆಗೆ ತಂದವರು ‘ಲಿಂಗ’ವಾಗುತ್ತಾರೆ. ಹಾಗೆಯೆ ಮುಂದುವರೆದು ಸಮಾಜದ ಉತ್ತಮ ಸದಸ್ಯರಾಗುವವರು ‘ಜಂಗಮ’ರಾಗತ್ತಾರೆ.
ಜಂಗಮರೆಂದರೆ ತಮಗೋಸ್ಕರ ಬದುಕುವ ಸ್ವಾರ್ಥಿಗಳಲ್ಲ. ಇತರರ ಒಳಿತಿಗೆ ಶ್ರಮಿಸುವ ಶರಣರು. ಲಿಂಗಾಯತ ಸಂವಿಧಾನದಲ್ಲಿ ಬಿಡಿ ವ್ಯಕ್ತಿಗಳಿಲ್ಲ, ಸಮಾಜದ ಸದಸ್ಯರು ಮಾತ್ರ ಇದ್ದಾರೆ.
ಶರಣರೆಂದರೆ ಲಿಂಗಕ್ಕೆ ಶರಣಾದವರು ಎಂತಲ್ಲ. ಲಿಂಗವನ್ನೇ ಪ್ರಾಣವನ್ನಾಗಿ ಮಾಡಿಕೊಂಡು ಸಮಾಜಕ್ಕೆ ಶರಣಾದವರು ಎಂದು ಅರ್ಥ. ಇಂಥವರ ಸಮುದಾಯವೇ ಶರಣ ಸಮಾಜ.
ಸಮಾಜದ ಉತ್ತಮ ಸದಸ್ಯರಾಗಲು ಶರಣರು ಕಾಯಕ ಕೈಗೊಂಡು ದುಡಿಯಬೇಕು. ತಮ್ಮ ಅವಶ್ಯಕತೆಗೆ ಮೀರಿ ಬರುವ ಆದಾಯವನ್ನು ದಾಸೋಹದ ರೂಪದಲ್ಲಿ ಹಂಚಬೇಕು.
ಷಟ್ಸ್ಥಲ ಸಿದ್ಧಾಂತದ ಭಕ್ತ, ಮಹೇಶ, ಪ್ರಸಾದಿ, ಪ್ರಾಣಲಿಂಗಿ ಹಂತಗಳಲ್ಲಿ ಅಂಗ ಲಿಂಗವಾಗಿ ನಂತರದ ಶರಣ, ಐಕ್ಯ ಹಂತಗಳಲ್ಲಿ ಜಂಗಮವಾಗುತ್ತದೆ.
(‘ಬಸವಣ್ಣನವರ ಲಿಂಗಾಯತವು ಪೂರ್ಣ ಧರ್ಮ’ ಲೇಖನದಿಂದ ಆಯ್ದ ಮತ್ತು ಸಂಕ್ಷಿಪ್ತಗೊಳಿಸಿರುವ ಭಾಗ – ಮಾರ್ಗ ೭)