ಹಬ್ಬಗಳ ನೆಪದಲ್ಲಿ ಕುಡಿದು, ಕುಪ್ಪಳಿಸುವುದು ಖಂಡನೀಯ: ಸಾಣೇಹಳ್ಳಿ ಶ್ರೀ

ಎಚ್. ಎಸ್. ದ್ಯಾಮೇಶ
ಎಚ್. ಎಸ್. ದ್ಯಾಮೇಶ

ಸಾಣೇಹಳ್ಳಿ

ಇಲ್ಲಿನ ಶ್ರೀ ಶಿವಕುಮಾರ ಕಲಾಸಂಘ ಆಯೋಜಿಸಿರುವ ರಾಷ್ಟ್ರೀಯ ನಾಟಕೋತ್ಸವದ ನಿಮಿತ್ತ ಶ್ರೀ ಶಿವಕುಮಾರ ರಂಗಮಂದಿರದಲ್ಲಿ ಆಯೋಜಿಸಿದ್ದ ಚಿಂತನಾ ಗೋಷ್ಠಿಯ ಸಾನ್ನಿಧ್ಯವಹಿಸಿದ್ದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ವ್ಯಕ್ತಿಯ ವ್ಯಕ್ತಿತ್ವದ ವಿಕಾಸಕ್ಕೆ, ಯಾರಿಗೂ ಕೇಡನ್ನು ಬಯಸದ, ಸರ್ವಾಂಗೀಣ ಅಭಿವೃದ್ಧಿ ಹೊಂದುವ, ಸದಭಿರುಚಿಯ ಹಬ್ಬಗಳು ನಾಡಿಗೆ ಬೇಕು.

ಹಬ್ಬಗಳಲ್ಲಿ ಎರಡು ವಿಧ; ರಾಷ್ಟ್ರೀಯ ಹಬ್ಬಗಳು ಮತ್ತು ಪರಂಪರೆಯ ಹಬ್ಬಗಳು. ರಾಷ್ಟ್ರೀಯ ಹಬ್ಬಗಳಲ್ಲಿ ರಾಷ್ಟ್ರದ ಭಾವೈಕ್ಯತೆಯನ್ನು ಬೆಳೆಸುವ ಕೆಲಸ ನಡೆದರೆ, ಸಾಂಪ್ರದಾಯಿಕ ಹಬ್ಬಗಳಲ್ಲಿ ಪರಂಪರೆಯನ್ನು ಉಳಿಸಿ, ಬೆಳೆಸುವ ಕೆಲಸ ನಡೆಯುತ್ತದೆ. ಆದರೆ ಇಂದು ಕೆಲ ಹಬ್ಬಗಳು ತಮ್ಮ ಮೂಲ ಆಶಯ, ಸ್ವರೂಪವನ್ನು ಕೆಳೆದುಕೊಳ್ಳುತ್ತಿವೆ. ಹಬ್ಬಗಳ ನೆಪದಲ್ಲಿ ಜೂಜಾಟ, ದುಶ್ಚಟಗಳಿಗೆ ಬಲಿಯಾಗುವಂಥದ್ದು, ಕುಡಿದು-ಕುಪ್ಪಳಿಸುವಂಥದ್ದನ್ನು ನೋಡುತ್ತಿದ್ದೇವೆ.

ಕೆಲವೊಮ್ಮೆ ಹಬ್ಬಗಳು ಜಾತಿಯ ವೈಷಮ್ಯಕ್ಕೂ ಕಾರಣವಾಗುತ್ತಿರುವುದು ದುರದೃಷ್ಟಕರ ಸಂಗತಿ. ಹಬ್ಬಗಳ ಮೂಲ ಉದ್ದೇಶ ಶಾಂತಿಯಿಂದ ಬದುಕುವ, ಏಕತೆ, ಸಾಮರಸ್ಯಗಳನ್ನು ಮೂಡಿಸುವುದೇ ಆಗಿದೆ. ಈ ನಿಟ್ಟಿನಲ್ಲಿ ಕೆಲ ಸಾತ್ವಿಕ ಹಬ್ಬಗಳಿವೆ. ಇನ್ನು ಕೆಲವು ಕ್ರೌರ್ಯದ ಹಬ್ಬಗಳು; ಹಿಂಸೆ, ಪ್ರಾಣಿಬಲಿಕೊಡುವಂಥ ಅನಿಷ್ಠ ಪದ್ಧತಿಯ ಹಬ್ಬಗಳಿವೆ.

ನಮ್ಮ ಮಠದ ಮೂಲ ಪುರುಷ ವಿಶ್ವಬಂಧು ಮರುಳಸಿದ್ಧರು ಬಾಲಕರಾಗಿದ್ದಾಲೇ ತಮ್ಮೂರಿನಲ್ಲಿ ನಡೆದ ಮಾರಿಜಾತ್ರೆಯಲ್ಲಿ ಕೋಣನ ಬಲಿಯನ್ನು ಪ್ರತಿಭಟಿಸುವ ದಿಟ್ಟತನ ತೋರಿದ್ದರು. ಯಾವ ದೇವರೂ ರಕ್ತ, ಮಾಂಸವನ್ನು ಬಯಸುವುದಿಲ್ಲ. ಅದರಲ್ಲೂ ಅಮಾಯಕ ಪ್ರಾಣಿಗಳಾದ ಕುರಿ, ಕೋಳಿ, ಕೋಣಗಳನ್ನೇ ಏಕೆ ಕೊಡುವರು? ಎನ್ನುವ ಬಗೆಗೆ ಜನರಲ್ಲಿ ಜಾಗೃತಿ ಮೂಡಿಸಿದರು. ಈ ನಿಟ್ಟಿನಲ್ಲಿ ತರಳಬಾಳು ಪೀಠವನ್ನೇ ಸ್ಥಾಪಿಸಿದರು. ಆದರೂ ಇಂದಿಗೂ ಈ ಬಲಿ ಸಂಸ್ಕೃತಿ ಸಂಪೂರ್ಣವಾಗಿ ಹೋಗಿಲ್ಲ. ದೇವರು, ಧರ್ಮದ ಹೆಸರಿನಲ್ಲಿ ಅನಾಚಾರಗಳು ನಡೆಯುತ್ತಲೇ ಇವೆ.

ಹಬ್ಬಗಳಿಗೆ ಸಂಘಟಿಸುವ, ಮತ್ಸರವನ್ನು ಕಳೆಯುವ, ಸಾಮರಸ್ಯವನ್ನು ಬೆಳೆಸುವ ಶಕ್ತಿ ಇದೆ. ಹಬ್ಬಗಳ ಆಚರಣೆ ಅರ್ಥಪೂರ್ಣವಾಗಬೇಕು. ಬಸವಣ್ಣನವರು ಬಲಿ ಸಂಸ್ಕೃತಿಯನ್ನುದ್ದೇಶಿಸಿ `ಕೊಂದವರುಳಿದರೇ?’ ಎಂದು ಪ್ರಶ್ನಿಸುವರು. ಹಿಂಸಿಸುವುದು, ಕೊಲ್ಲುವುದು ಧರ್ಮವಲ್ಲ ಎಂದರು. ದಯೆ, ಅಹಿಂಸೆ, ಪ್ರೀತಿ, ಪ್ರಾಮಾಣಿಕತೆ, ನಿಷ್ಠೆ ಧರ್ಮದ ತಿರುಳಾಗಬೇಕು ಎಂದು ಸಾರಿದರು. ಈ ಹಿನ್ನೆಲೆಯ ಧರ್ಮದ ನೆಲೆಗಟ್ಟಿನಲ್ಲಿ, ಸದಾಚಾರದಿಂದ ಕೂಡಿದ, ಹಿಂಸೆಯಿಂದ ದೂರ ಇರುವ ಹಬ್ಬಗಳಿಗೆ ವಿಶೇಷವಾದ ಮನ್ನಣೆ ಬರುವುದು.

ನಾಟಕೋತ್ಸವವೂ ಒಂದು ಹಬ್ಬವೇ. ಈ ಹಬ್ಬದಲ್ಲಿ ಉತ್ಸಾಹ, ಸಂತೋಷ, ಸಂಘಟನೆಯಿದೆ. ಇದಕ್ಕೆ ಯಾವುದೇ ಜಾತಿ, ವಯಸ್ಸು, ಲಿಂಗಭೇದ ಇಲ್ಲ. ಒಳ್ಳೆಯ ವಿಚಾರಗಳನ್ನು ಕೇಳಲು, ನಾಟಕ ನೋಡಲು ದೂರ-ದೂರದಿಂದ ಬರುವರು. ಇದಕ್ಕೆ ನಿನ್ನೆ ರಾತ್ರಿ ಪ್ರದರ್ಶನಗೊಂಡ `ಪರಸಂಗದ ಗೆಂಡೆ ತಿಮ್ಮ’ ನಾಟಕವನ್ನು ಯಾರೂ ಎದ್ದು ಹೋಗದೆ ನೋಡಿದುದೇ ಸಾಕ್ಷಿಯಾಗಿದೆ. ಮನಸ್ಸನ್ನು ಅರಳಿಸುವ ಇಂಥ ಸಾಂಸ್ಕೃತಿಕ, ಸಾಹಿತ್ಯಕ ಹಬ್ಬಗಳು ಹೆಚ್ಚು-ಹೆಚ್ಚು ನಡೆದು ಜನರಲ್ಲಿ ಸಾಮರಸ್ಯ, ಶಾಂತಿ ನೆಲೆಸುವಂತಾಗಲಿ ಎಂದು ಅಶಿಸಿದರು.

`ಧರ್ಮ ಮತ್ತು ಹಬ್ಬಗಳ ಆಚರಣೆ’ ಕುರಿತಂತೆ ಮಾತನಾಡಿದ ಹೊಸದುರ್ಗದ ಸಿಂಧೂ ಅಶೋಕ ಮಾತನಾಡಿ ಭಾರತ ಹಲವು ಧರ್ಮಗಳ ಬೀಡು. ಜಗತ್ತಿನ ಬಹುತೇಕ ಎಲ್ಲ ಧರ್ಮಗಳೂ ಭಾರತದಲ್ಲಿವೆ.

ಬಸವಣ್ಣನವರು ಹೇಳುವಂತೆ ಎಲ್ಲ ಧರ್ಮಗಳ ಮೂಲ ದಯೆ. ದಯವಿಲ್ಲದ ಧರ್ಮ ಯಾವುದೂ ಇಲ್ಲ. ಗಾಂಧೀಜಿ ಪರಧರ್ಮ ಸಹಿಷ್ಣುತೆಯನ್ನು ಬೆಳೆಸಿಕೊಳ್ಳಬೇಕು ಎನ್ನುವ ಕರೆ ಕೊಟ್ಟಿದ್ದರು. ಹೀಗೆ ಅನೇಕ ಸಾಧು-ಸಂತರು ನೆಮ್ಮದಿಯಿಂದ ಬದುಕುವ ಧರ್ಮೋಪದೇಶ ನೀಡಿದ್ದಾರೆ.

ಧರ್ಮ `ರಿಲಿಜಿಯನ್’ ಆಗಿರುವಂತೆ ಕರ್ತವ್ಯವೂ ಆಗಿದೆ. ಧರ್ಮ ಕೇವಲ ಲಾಂಛನ, ಆಚರಣೆಗಳಷ್ಟೇ ಅಲ್ಲ; ತಾನೂ ಬದುಕಿ, ಇತರರನ್ನು ಬದುಕಗೊಡುವ ಒಳ್ಳೆಯ ರೀತಿಯ ಬದುಕು. ಪ್ರತಿ ಧರ್ಮಗಳೂ ಅವುಗಳದ್ದೇ ಆದ ಹಬ್ಬಗಳನ್ನು ಆಚರಿಸುತ್ತವೆ.

ನಮ್ಮ ರಾಷ್ಟ್ರ ಕೃಷಿ ಪ್ರಧಾನವಾದುದು. ಹಾಗಾಗಿ ನಮ್ಮ ಬಹುತೇಕ ಹಬ್ಬಗಳು ಕೃಷಿಯನ್ನೇ ಅವಲಂಬಿಸಿವೆ. ಸ್ವಚ್ಛತೆ, ಸಿಹಿ ಅಡುಗೆ, ಹೊಸ ಬಟ್ಟೆ, ಸಡಗರ, ಸಂಭ್ರಮಗಳೇ ಹಬ್ಬಗಳ ಜೀವಾಳ. ಪ್ರತಿಯೊಂದು ಹಬ್ಬಗಳಿಗೂ ಅದರದ್ದೇ ಆದ ವೈಜ್ಞಾನಿಕ ಕಾರಣಗಳಿವೆ. ಆಯಾ ಕಾಲಘಟ್ಟಕ್ಕೆ ದೇಹಕ್ಕೆ ಅಗತ್ಯವಾಗಿ ಬೇಕಾದ ಪೋಷಕಾಂಶಗಳನ್ನು ನೀಡುವ, ಪರಸ್ಪರ ವೈಷಮ್ಯಗಳನ್ನು ಮರೆತು ಸಾಮರಸ್ಯದಿಂದ ಬದುಕುವ, ಸಮುದಾಯವನ್ನು ಸಂಘಟಿಸುವ, ಯಂತ್ರಗಳನ್ನು ಸುಸ್ಥಿತಿಯಲ್ಲಿ ಇಡುವಂಥ ಅನೇಕ ಸದುದ್ದೇಶಗಳನ್ನು ಹೊಂದಿವೆ.

ಹಬ್ಬದ ಸಂದರ್ಭದಲ್ಲಿ ಪ್ರಾಣಿ-ಪಕ್ಷಿ-ಪ್ರಕೃತಿಯನ್ನು ಪೂಜಿಸುವ ಕೆಲಸವೂ ನಡೆಯುತ್ತದೆ. ಆದರೆ ಇಂದು ಹಬ್ಬಗಳು ಕೇವಲ ಯಾಂತ್ರಿಕ ಆಚರಣೆಗಳಾಗಿರುವುದು ದುರದೃಷ್ಟಕರ ಸಂಗತಿ. ಹಬ್ಬಗಳ ಹಿಂದಿನ ವೈಜ್ಞಾನಿಕ ಸತ್ಯವನ್ನು ತಿಳಿಸುವ ಕೆಲಸ ಮಾಡಬೇಕಾಗಿದೆ ಎಂದರು.

ಆರಂಭದಲ್ಲಿ ಸಂಗೀತ ಶಿಕ್ಷಕ ಹೆಚ್.ಎಸ್. ನಾಗರಾಜ್ ಧ್ಯಾನ, ಮೌನ, ವಚನ ಪ್ರಾರ್ಥನೆ, ಶಿವಮಂತ್ರಲೇಖನ ನಡೆಸಿಕೊಟ್ಟರು. ಶಾಲಾ-ಕಾಲೇಜಿನ ವಿದ್ಯಾರ್ಥಿಗಳು, ಅಧ್ಯಾಪಕರು, ಗ್ರಾಮಸ್ಥರು ಸಭೆಯಲ್ಲಿ ಭಾಗವಹಿಸಿದ್ದರು.

Share This Article
Leave a comment

Leave a Reply

Your email address will not be published. Required fields are marked *